ಹಸಿರು ರಾಶಿಯ ಎಲೆಯ ನಡುವೆ ಕುಳಿತ ಹನಿಗಳೆಷ್ಟೋ….ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಮರದ ಎಲೆಯ ನೆರಳಿನ
ಕೆಳಗೆ ಕುಳಿತ
ಮನಸುಗಳೆಷ್ಟೋ
ಗಾಳಿ ಎಳೆಗೆ
ತಂಪು ಸೂಸಿ
ಕೂತ ಕನಸುಗಳೆಷ್ಟೋ
ಮರದ ಬೇರಿಗೆ
ಅಂಟಿಕೊಂಡಿಹ
ಮಣ್ಣ ಕಣಗಳೆಷ್ಟೋ
ಮಣ್ಣ ಕಣದಿ
ಕಾಣದೇ ಉಳಿದಿಹ
ಜೀವರಾಶಿಗಳೆಷ್ಟೋ
ಹಸಿರು ರಾಶಿಯ
ಎಲೆಯ ನಡುವೆ
ಕುಳಿತ ಹನಿಗಳೆಷ್ಟೋ
ಹನಿಯಾಗಿ ಬಿದ್ದು
ಹೊಳೆಯಾಗಿ ಹರಿದ
ಮಳೆಯ ಹನಿಗಳೆಷ್ಟೋ
ಬಿಸಿಲಿಗೆ ಬೆಂದು
ಬೆವರಲಿ ನಿಂದು
ನೊಂದ ಜೀವಗಳೆಷ್ಟೋ
ಬಿದ್ದ ಮಳೆಯು
ಇಳೆಗೆ ಸೊಬಗು
ತುಂಬಿದ ನೋಟಗಳೆಷ್ಟೋ
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.
