ನಾ ನೋಡಿದ ಹಿಂದಿ ಸಿನಿಮಾ “ಶ್ರೀಕಾಂತ್”

ಹುಟ್ಟುಕುರುಡನಾಗಿರುತ್ತಾನೆ. ರಾಷ್ಟ್ರಪತಿ ಅಬ್ದುಲ್ ಕಲಾಂರವರ ನಡೆಸಿದ ‘ವಿದ್ಯಾರ್ಥಿಗಳ ಜೊತೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಕಾಂತ್ ನಿಗೆ ಕಲಾಂ ಅವರು ‘ನೀವು ಮುಂದೆ ಏನಾಗ ಬಯಸುತ್ತೀರಿ?’ ಎನ್ನುವ ಪ್ರಶ್ನೆಗೆ ಶ್ರೀಕಾಂತ್ ‘ನಾನು ಭಾರತದ ಮೊದಲ ವಿಶೇಷ ಚೇತನ ರಾಷ್ಟ್ರಪತಿಯಾಗುತ್ತೇನೆ’ ಎಂದು ಹೇಳುತ್ತಾನೆ. ಎನ್.ವಿ.ರಘುರಾಂ ಅವರು ನೋಡಿದ “ಶ್ರೀಕಾಂತ್” ಸಿನಿಮಾದ ಕುರಿತು ಒಂದು ವಿಶೇಷಣೆ ತಪ್ಪದೆ ಮುಂದೆ ಓದಿ…

ತನಗೆ ಹುಟ್ಟುವ ಮಗುವಿಗೆ ಶ್ರೀಕಾಂತ್ ಎನ್ನುವ ಹೆಸರಿಡಬೇಕು, ಆ ಮಗು ಭಾರತದ ಹೆಮ್ಮೆಯ ಆರಂಭಿಕ ಕ್ರಿಕೆಟ್ ಆಟಗಾರನಾದ ಕೃಷ್ಣಮಾಚಾರಿ ಶ್ರೀಕಾಂತ್ ತರಹ ಮುಂದೆ ಭಾರತದ ಕ್ರಿಕೆಟ್ ತಂಡದಲ್ಲಿ ಆಡಬೇಕು ಎಂದು ಆಸೆ ಇಟ್ಟುಕೊಂಡ ತಂದೆಯೊಬ್ಬ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮಗ ಹುಟ್ಟಿರುವ ಸುದ್ದಿ ಬರುತ್ತದೆ. ಮನೆಗೆ ಸಂತೋಷದಿಂದ ಓಡಿ ಹೋಗಿ ನೋಡಿದಾಗ ಆ ಮಗು ಕುರುಡಾಗಿ ಹುಟ್ಟಿದೆಯೆಂದು ತಿಳಿಯುತ್ತದೆ. ಆಗ ಆತನ ಮನಸ್ಥಿತಿ ಹೇಗಾಗಿರಬಹುದು? ಹಾಗೆ ನೋಡಿದರೆ ಯಾವುದೇ ಒಂದು ಕುಟುಂಬದಲ್ಲಿ ವಿಶೇಷ ಚೇತನರೊಬ್ಬರು ಹುಟ್ಟಿದಾಗ ಆ ತಂದೆ-ತಾಯಿಗಳು ಅನುಭವಿಸುವ ವೇದನೆ ಹೇಳಲು ಅಸಾಧ್ಯ. ಅದರ ಜೊತೆಗೆ ಆ ಮಗು ‘ಅನಿಷ್ಟ’, ‘ಪ್ರಾರಬ್ಧ’, ಪದಗಳಿಂದ ಹಿಡಿದು ಎಲ್ಲ ರೀತಿಯ ಮೂದಲಿಕೆ, ನಿಂದನೆಗಳನ್ನು ಹುಟ್ಟಿದ ಮೊದಲ ದಿನದಿಂದಲೇ ಕೇಳುತ್ತಾ ಬೆಳೆಯ ಬೇಕು.

ಈ ರೀತಿ ಅಂಧನಾಗಿ ಹುಟ್ಟಿದ ಮಗು ಮುಂದೆ ವಿದ್ಯಾರ್ಥಿಯಾಗಿದ್ದಾಗ ರಾಷ್ಟ್ರಪತಿ ಅಬ್ದುಲ್ ಕಲಾಂರವರ ನಡೆಸಿದ ‘ವಿದ್ಯಾರ್ಥಿಗಳ ಜೊತೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಆಗ ‘ನೀವು ಮುಂದೆ ಏನಾಗ ಬಯಸುತ್ತೀರಿ?’ ಎಂದು ಮಕ್ಕಳಿಗೆ ಕಲಾಂ ಸಾಹೇಬ್ರು ಕೇಳಿದಾಗ ‘ನಾನು ಭಾರತದ ಮೊದಲ ವಿಶೇಷ ಚೇತನ ರಾಷ್ಟ್ರಪತಿಯಾಗುತ್ತೇನೆ’ ಎಂದು ಹೇಳುತ್ತಾನೆ. ಆತನೇ ಹುಟ್ಟಕುರುಡನಾದ ಶ್ರೀಕಾಂತ್.

ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಈ ಅಂಧ ಬಾಲಕ ಕೊಟ್ಟಾಗ ಶಿಕ್ಷಕರು ಹೊಗಳುತ್ತಾರೆ. ಆಗ ಅತ ಇತರ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗ ಬೇಕಾಗುತ್ತದೆ. ಶಾಲೆಯ ಮೈದಾನದಲ್ಲಿ ಈ ಅಂಧ ಬಾಲಕನಿಗೆ ಆಟದ ಹೆಸರಿನಲ್ಲಿ ಜಗಳ ತೆಗೆದು ಹೊಡೆಯುತ್ತಾರೆ. ‘ ಯಾಕಪ್ಪ ಹೊಡೆತ ತಿನ್ನುತ್ತಿದ್ದೀಯ, ತಪ್ಪಿಸಿಕೊಂಡು ಓಡಿ ಹೋಗು’ ಎಂದು ಹೇಳಿದವರಿಗೆ ‘ಮೈ ಭಾಗ್ ನಹಿ ಸಕ್ತಾ, ಸಿರ್ಫ ಲಡ್ ಸಕ್ತ ಹೂಂ’ ಎಂದು ಆತ ಹೇಳುತ್ತಾನೆ.

‘ಮೈ ಸಿರ್ಫ ಲಡ್ ಸಕ್ತ ಹೂಂ’ ಮಾತು ಕೇವಲ ಶಾಲೆಯ ಆಟದ ಮೈದಾನಕ್ಕೆ ಮಾತ್ರ ಸೀಮಿತವಾಗದೆ, ಮುಂದೆ ಪ್ರತಿ ಹೆಜ್ಜೆಯಲ್ಲಿ ಆತ ಹೋರಾಟ ಮಾಡ ಬೇಕಾಗಿ ಬರುತ್ತದೆ. ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 98%ರಷ್ಟು ಅಂಕಗಳನ್ನು ತೆಗೆದರೂ ವಿಜ್ಞಾನದ ವಿಷಯದಲ್ಲಿ ಅಂಧನೆಂದು ಅವಕಾಶವಿಲ್ಲದೆ ಹೋದಾಗ, ವಿಮಾನದಲ್ಲಿ ಅಂಧ ಪ್ರಯಾಣಿಕನಿಗೆ ಜೊತೆಗಾರನಿಲ್ಲದೇ ಒಬ್ಬನೇ ಪ್ರಯಾಣ ಮಾಡಲು ಅಸಾಧ್ಯವೆಂದು ತಿಳಿದಾಗ, ಉತ್ತಮ ಅಂಕಗಳನ್ನು ಪಡೆದರೂ ಐ.ಐ.ಟಿ.ಯವರು ಅಂಧನೆಂದು ಸೀಟ್ ಕೊಡದೆ ಹೋದಾಗ ಆತ ಮಾಡಿದ ಹೋರಾಟದ ರೀತಿ ಅನನ್ಯ. ‘ಐ.ಐ.ಟಿ.ಯವರಿಗೆ ನಾನು ಬೇಡವಾದರೆ, ನನಗೂ ಐ.ಐ.ಟಿ. ಬೇಡ’ ಎನ್ನುವ ಶ್ರೀಕಾಂತನಿಗೆ ಅಮೆರಿಕಾದ ಎಂ.ಐ.ಟಿ.ಯಲ್ಲಿ ವಿದ್ಯಾರ್ಥಿವೇತನದ ಜೊತೆಗೆ ಓದಲು ಅವಕಾಶ ದೊರೆಯುತ್ತದೆ. ಓದು ಮುಗಿಸಿ ಹಿಂತಿರುಗಿ ಭಾರತಕ್ಕೆ ಬಂದಾಗ ತನ್ನ ಹೆಜ್ಜೆ ಮೇಲೆ ತಾನು ಮಾತ್ರ ನಿಲ್ಲದೇ ತನ್ನಂತೆ ಇರುವ ವಿಶೇಷ ಚೇತನರು ಅವರ ಕಾಲುಗಳ ಮೇಲೆ ಅವರುಗಳು ನಿಲ್ಲುವಂತ ಕೆಲಸ ಮಾಡ ಬೇಕೆಂದು ಹೊರಟಾಗ ಮತ್ತೆ ಪ್ರತಿ ಹೆಜ್ಜೆಯಲ್ಲೂ ಹೋರಾಟ ಮಾಡ ಬೇಕಾಗಿ ಬರುತ್ತದೆ. ಈ ಎಲ್ಲಾ ರೀತಿಯ ಹೋರಾಟಗಳನ್ನು ಹೇಗೆ ಮಾಡಿದ? ಅತನ ಜೊತೆಗೆ ಯಾರ್ಯಾರು ಇದ್ದರು? ಆತನ ದಾರಿಗೆ ಅಡ್ಡಿ ಬಂದವರು ಯಾರು? ತನ್ನ ಗುರಿ ಆತ ಮುಟ್ಟಿದನೇ? ಇವೆಲ್ಲವನ್ನು ಬೆಳ್ಳಿ ತೆರೆಯ ಮೇಲೆ ನೋಡಿ ಆನಂದಿಸಬೇಕು.

ನಟ ರಾಜಕುಮಾರ್ ರಾವ್ ನಾಯಕ ಶ್ರೀಕಾಂತನ ಪಾತ್ರದಲ್ಲೇ ಲೀನರಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಈ ಸಾರಿಯ ‘ಅತ್ಯುತ್ತಮ ನಾಯಕ ನಟ ಪ್ರಶಸ್ತಿ’ ಇವರನ್ನು ಅರಸಿ ಬಂದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಶ್ರೀಕಾಂತನ ಟೀಚರ್ ಮತ್ತು ಮಾರ್ಗದರ್ಶಕಿ ಪಾತ್ರದಲ್ಲಿ ಜ್ಯೋತಿಕಾರವರು, ತಂದೆ ಪಾತ್ರದಲ್ಲಿ ಶ್ರೀನಿವಾಸ ಬೀಸೆಟ್ಟಿಯವರು, ಉದ್ಯಮಿಯ ಪಾತ್ರದಲ್ಲಿ ಶರದ್ ಕೇಲ್ಕರ್, ನಾಯಕಿಯ ಪಾತ್ರದಲ್ಲಿ ಆಲಯ ಎಫ್ ಮಿಂಚಿದ್ದಾರೆ. ತುಷಾರ್ ಹಿರಾನಂದನಿಯವರ ಸಮರ್ಥ ನಿರ್ದೇಶನ ಪ್ರತಿ ಫ್ರೇಮ್ ನಲ್ಲೂ ಕಾಣಬರುತ್ತದೆ. ಪ್ರಥಮ್ ಮೆಹ್ತಾರವರ ಉತ್ತಮ ಛಾಯಾಗ್ರಹಣ ಇರುವ ಸಿನಿಮಾದಲ್ಲಿ ‘ಪಾಪ ಕೆಹತಾ ಹೈ ಬಡಾ ನಾಮ್ ಕರೇಗಾ…’ ಹಾಡನ್ನು ಹಿನ್ನೆಲೆಯಲ್ಲಿ ಬಳಸಿಕೊಂಡು ಇಶಾನ್ ಛಾಬ್ರಾ ಉತ್ತಮ ಸಂಗೀತ ಕೊಟ್ಟಿದ್ದಾರೆ.

ಹಾಗಾದರೆ, ಇದೊಂದು ಏನೂ ನ್ಯೂನತೆಗಳಿಲ್ಲದ ನಿಜ ಜೀವನದ ಹೀರೋ ಒಬ್ಬನ ಕಥೆಯೇ? ಆತನ ನಾಯಕಿ ಯಾರು? ಆಕೆ ಅಂಧ ಶ್ರೀಕಾಂತನಲ್ಲಿ ಏನು ಕಂಡಳು? ಎಲ್ಲಾ ಅನುಕೂಲ ಇರುವ ಅಮೆರಿಕಾದಲ್ಲೇ ಇರಲು ಆತನಿಗೆ ಮನಸ್ಸಾಗಲಿಲ್ಲವೇ? ಎಲ್ಲಾ ಮನುಷ್ಯರಿಗೆ ಇರುವ ‘ನಾನು’, ‘ನನ್ನದು’, ‘ನನ್ನಿಂದ’ ಎನ್ನುವ ‘ಅಹಂ’ ಆತನಿಗೆ ಇರಲಿಲ್ಲವೇ? ಎಲ್ಲವನ್ನು ಚಿತ್ರ ಮಂದಿರದಲ್ಲಿ ನೋಡಿ ಆನಂದಿಸಿದರೆ ಚೆನ್ನಾಗಿರುತ್ತದೆ.

ಸಿನಿಮಾ ನೋಡಿ ಮುಗಿದ ಮೇಲೂ ‘ಮೈ ಸಿರ್ಫ ಲಡ್ ಸಕ್ತ ಹೂಂ’ ಎಂಬ ಮಾತು ಮತ್ತೆ, ಮತ್ತೆ ಕಿವಿಯ ಹತ್ತಿರ ಹೇಳುತ್ತಿರುವಂತೆ ಭಾಸವಾಗುತ್ತದೆ. ಹೌದಲ್ಲ, ಒಮ್ಮೆ ಯೋಚಿಸಿ ನೋಡಿ. ಓಡಿ ಹೋಗಲು ಆತನಿಗೆ ದಾರಿಯೂ ಕಾಣುವುದಿಲ್ಲವಲ್ಲ ಎಂದು ಅರ್ಥವಾದಾಗ ‘ಮೈ ಸಿರ್ಫ ಲಡ್ ಸಕ್ತ ಹೂಂ’ ಎಂಬ ಪದಕ್ಕೆ ವಿಶೇಷ ಅರ್ಥ ಬರುವುದರ ಜೊತೆಗೆ ವಿಶೇಷ ಚೇತನರ ಮನಸ್ಥಿತಿಯೊಂದರ ಅನಾವರಣವಾಗುತ್ತದೆ.

ಅತಿ ಸಾಮಾನ್ಯ ಮನೆಯಲ್ಲಿ ಅಂಧನೊಬ್ಬ ಹುಟ್ಟಿದರೆ, ಸಿಗ್ನಲ್ ಲೈಟ್ ಗಳಲ್ಲಿ ಬಿಕ್ಷೆ ಬೇಡಲು ಮತ್ತೊಬ್ಬನೆಂದು ನೋಡುವ ಸಮಾಜದ ಪಾತ್ರಗಳ ಜೊತೆಗೆ ದೇವಿಕಾ ಮತ್ತು ರವಿ ತರಹದ ಧನಾತ್ಮಕ ಪಾತ್ರಗಳು ಸಮಾಜದ ಬಗ್ಗೆ ಮತ್ತೆ ಭರವಸೆ ಮೂಡಿಸುತ್ತವೆ.

ಸತ್ಯ ಕಥೆಯೊಂದನ್ನು ಆಧರಿಸಿ ಮಾಡಿರುವ ಈ ಚಲನಚಿತ್ರ ಅಂಧರು ಸಮಾಜದಲ್ಲಿ ಇತರರಿಗೆ ಸಮಾನರಾಗಿ ಬೆಳೆಯಲು ಪ್ರಯತ್ನ ಪಟ್ಟಾಗ ಎದುರಿಸುವ ಕಷ್ಟಗಳನ್ನು ತೆರೆದಿಡುತ್ತಾ, ಛಲ ಬಿಡದೆ ಹೋರಾಡುವ ನಾಯಕನ ಮೂಲಕ ಅವರಿಗೆ ಬೇಕಾಗಿರುವುದು ಕರುಣೆಯಲ್ಲ, ಬದಲಾಗಿ ಸಮಾನ ಅವಕಾಶವೆಂದು ಸಾರಿ ಹೇಳುತ್ತದೆ. ಶ್ರೀಕಾಂತ್ ಬರೀ ಶ್ರೀ’ಕಾಂತ್’ ಮಾತ್ರವಲ್ಲ ಶ್ರೀ’ಕೆನ್’ ಎನ್ನುವ ಮಾತು ಎಲ್ಲಡೆ ಪ್ರತಿಧ್ವನಿಸುತ್ತದೆ. ಈ ಸಿನಿಮಾ ನಿರ್ಮಾಣ ಮಾಡಿದ ಭೂಷಣ್ ಕಮಾರ್, ಕ್ರಿಶನ್ ಕುಮಾರ್ ಮತ್ತು ನಿಧಿ ಪರಮಾರ್ ಹಿರಾನಂದನಿವರಿಗೆ ಅಭಿನಂದನೆಗಳು.


  • ಎನ್.ವಿ.ರಘುರಾಂ.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW