ಮಲಯಾಳಂ ಭಾಷೆಯ ಸಿನಿಮಾ “ಆಭ್ಯಂತರ ಕುಟ್ಟವಾಲಿ” ಕನ್ನಡದಲ್ಲಿ ಇದರರ್ಥ ಕೌಟುಂಬಿಕ ಅಪರಾಧಿ. ರಮ್ಯಾನಂದ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ಆಭ್ಯಂತರ ಕುಟ್ಟವಾಲಿ” ಇಂದಿನ ಸಂಜದಲ್ಲಿ ನಡೆಯುತ್ತಿರುವ ಒಂದು ಸೂಕ್ಷ್ಮ ವಿಷಯವನ್ನು ಅಷ್ಟೇ ಸೂಕ್ಷ್ಮವಾಗಿ ತೋರಿಸುವ ಚಲನಚಿತ್ರ. ಮದುವೆಯಾದ ವಾರದಲ್ಲೇ ಸಹದೇವ್ ನ ಹೆಂಡತಿ ನಯನ, ಮತ್ತವಳ ಮನೆಯವರು ಅವನ ಮತ್ತು ಅವನ ಕುಟುಂಬದ ಮೇಲೆ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳದ, IPC ಸೆಕ್ಷನ್ 4,98A ಅಡಿಯಲ್ಲಿ ಸುಳ್ಳು ಮೊಕದ್ದಮೆ ದಾಖಲು ಮಾಡುವಲ್ಲಿಗೆ ನಿಜವಾದ ಕಥೆ ಆರಂಭವಾಗುತ್ತದೆ.

ಸಮಾಜದ ದೃಷ್ಟಿಯಲ್ಲಿ ನಿಕೃಷ್ಟನಾದ, ಕಾನೂನಿನ ದೃಷ್ಟಿಯಲ್ಲಿ ತನ್ನೆಡೆ ನಡೆಯುತ್ತಿದ್ದ ಪಕ್ಷಪಾತದ ವಿರುದ್ಧ, ತನ್ನನ್ನು ನಿರ್ದೋಷಿ ಎಂದು ಸಾಬೀತುಪಡಿಸಲು ಸಹದೇವನ್ ನಡೆಸುವ ಕಾನೂನು ಹೋರಾಟವೇ ಈ ಚಿತ್ರದ ಮುಖ್ಯ ಕಥಾವಸ್ತು. ಈ ಚಲನಚಿತ್ರ ಕೌಟುಂಬಿಕ ದೌರ್ಜನ್ಯ ಕಾನೂನುಗಳ ದುರ್ಬಳಕೆಯ ಬಗ್ಗೆ ಪುರುಷರ ದೃಷ್ಟಿಕೋನವನ್ನು ತೆರೆದಿಡುತ್ತದೆ. ಸಹದೇವನಾಗಿ ಆಸಿಫ್ ಅಲಿ ಅವರ ನಟನೆ ಸಹಜ ಹಾಗೂ ಪ್ರಬುದ್ಧವಾಗಿ ಮೂಡಿಬಂದಿದೆ.
ಕೆಲವೊಂದು ಕಾನೂನುಗಳು ಹೇಗೆ ಕೆಲವೊಂದು ವರ್ಗದವರಿಗೆ ಮಾತ್ರವೇ ಅನುಕೂಲ ತರುತ್ತದೆ ಎನ್ನುವುದಕ್ಕೆ ನಿದರ್ಶನ ಈ ಸಿನಿಮಾ. IPC 498A ವಿಧಿಯನ್ನು ವಿವಾಹವಾದ ಹೆಣ್ಣು ಮಕ್ಕಳನ್ನು ಗಂಡ ಮತ್ತವನ ಮನೆಯವರಿಂದ ಉಂಟಾಗುವ ಕೌಟುಂಬಿಕ ದೌರ್ಜನ್ಯದಿಂದ ರಕ್ಷಿಸಲು ರಚಿಸಲಾಗಿದೆ. ಆದರೆ ಅನೇಕ ವಿವಾಹಿತ ಹೆಣ್ಣುಮಕ್ಕಳು ದಾಖಲಿಸುವ ಸುಳ್ಳು ಕೇಸ್ ನಿಂದ ಸಾಕಷ್ಟು ಗಂಡುಮಕ್ಕಳು ಮತ್ತವರ ಮನೆಯವರು ಕಾನೂನಿನ ಅಡಿಯಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ ಎನ್ನುವುದನ್ನು ಅಷ್ಟೇ ಸತ್ಯ. ಇದರಿಂದ ಗಂಡು ಹೆಣ್ಣುಗಳ ನಡುವೆ ಮದುವೆಯ ಬಗ್ಗೆ ಇರಬೇಕಾದ ನಂಬಿಕೆಯನ್ನು ಅಸ್ಥಿರತೆಗೆ ದೂಡುತ್ತಿದೆ ಮಾತ್ರವಲ್ಲದೆ, ಮದುವೆ ಎನ್ನುವುದು ಕೊಟ್ಟಿದ್ದು ಹಾಗೂ ತೆಗೆದುಕೊಂಡಿದ್ದರ ಸಾಕ್ಷಿಗಳನ್ನು ಸಂಗ್ರಹಿಸುವ ವ್ಯವಹಾರವಾಗಿ ಬದಲಾಗುತ್ತಿದೆ ಎನ್ನುವುದನ್ನು ಪ್ರತಿಪಾದಿಸುವ ಈ ಸಿನಿಮಾವನ್ನು ಮನೆಯವರೆಲ್ಲರೂ ಒಟ್ಟಾಗಿ ಕುಳಿತು ನೋಡಬಹುದು.
ಮೂಲ ಮಲಯಾಳಂ ಭಾಷೆಯ, ಲಘು ಹಾಸ್ಯದ ಧಾಟಿಯಲ್ಲಿ ಸಾಗುವ ಈ ಚಲನಚಿತ್ರವನ್ನು ZEE5 ನಲ್ಲಿ ವೀಕ್ಷಿಸಬಹುದು.
- ರಮ್ಯಾ ನಂದ
