ಅಳಿವಿನಂಚಿನಲ್ಲಿರುವ ‘ಬನ್ನಿ ಮರ’ – ಡಾ. ಟಿ.ಎಸ್.‌ ಚನ್ನೇಶ್



ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುವ ‘ಬನ್ನಿಮರ’ವೆಂದು ಕರೆಯುತ್ತಿರುವ ಪ್ರಭೇದ ಅಕೇಸಿಯಾ ಫೆರುಜಿನಾ. ಈ ಪ್ರಭೇದವು ಅಳಿವಿನ ಅಂಚಿನಲ್ಲಿರುವ ಮರವಾಗಿದೆ. ಬನ್ನಿಮರದ ಬಗ್ಗೆ ಇನ್ನಷ್ಟು ವಿಷಯಗಳನ್ನು ಡಾ. ಟಿ.ಎಸ್.‌ ಚನ್ನೇಶ್ ಅವರು ಓದುಗರಿಗೆ ನೀಡಿದ್ದಾರೆ.

ದಸರಾ ಹಬ್ಬದ ದಿನ ಇಂತಹಾ ಸಂಗತಿಯನ್ನು ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಆದರೆ ಇದು ಅನಿವಾರ್ಯವಾಗಿದೆ.  ಕರ್ನಾಟಕದಲ್ಲಿ “#ಬನ್ನಿ ಮರ” ಎಂದು ಕರೆಯುತ್ತಿರುವ ಅಕೇಸಿಯಾ ಫೆರುಜಿನಾ (Acacia ferruginea) ಪ್ರಭೇದವನ್ನು (IUCN Red list of Threatened Species 2006)    ನಿಸರ್ಗದ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟವು – IUCN (International Union for Conservation of Nature) ಅಳಿವಿನ ಅಪಾಯದಲ್ಲಿರುವ ಮರವೆಂದು ಗುರುತಿಸುವ ಕೆಂಪುಪಟ್ಟಿಯಲ್ಲಿ ಸೇರಿಸಿದೆ. “ಕರ್ನಾಟಕದಲ್ಲಿ ಕರೆಯುತ್ತಿರುವ” ಎನ್ನುವುದಕ್ಕೆ ಕಾರಣವಿದೆ. ಭಾರತದ ಇತರೆಡೆ ಪ್ರೊಸಿಫಸ್‌ ಸಿನೆರೆರಿಯ (Prosopis cineraria) ಪ್ರಭೇದವನ್ನು ಶಮೀ ವೃಕ್ಷ ಎಂದು ಕರೆಯುತ್ತಾರೆ.

ಫೋಟೋ ಕೃಪೆ : mysuru today

ಮಹಾಭಾರತದ ಕಥನದಲ್ಲಿ ಅಜ್ಞಾತವಾಸದ ಸಂದರ್ಭದಲ್ಲಿ ಪಾಂಡವರು ತಮ್ಮ ಆಯುಧಗಳನ್ನು ಶಮೀವೃಕ್ಷ ಅಥವಾ ಬನ್ನಿಮರದಲ್ಲಿ ಅವಿತಿಟ್ಟು ನಂತರ ಹಿಂದಿರುಗಿ ಬಂದಾಗ ಆಯುಧಗಳನ್ನು ಪಡೆದುಕೊಂಡರಂತೆ. ಯಾರೂ ತೆಗೆದುಕೊಂಡು ಹೋಗದಹಾಗೆ ಕಾಪಾಡಿದ ಶಮೀ ವೃಕ್ಷಕ್ಕೆ ಪೂಜೆ ಮಾಡಿ ನಮಸ್ಕರಿಸಿ  ತೆಗೆದುಕೊಂಡು ಬಂದ ಆಯುಧಗಳಿಂದ ಮುಂದೆ ಕುರುಕ್ಷೇತ್ರದ ಯುದ್ಧದಲ್ಲಿ ವಿಜಯಿಗಳಾದ ಹಿನ್ನೆಲೆಯಿಂದ ಮತ್ತು ಆ ದಿನದ ನೆನಪಿಗಾಗಿ ವಿಜಯದಶಮಿಯಂದು ಮರದ ಎಲೆಗಳನ್ನು ತಂದು ಕೊಡುವ ಸಂಪ್ರದಾಯ ಬೆಳೆದು ಬಂದಿದೆ.  ಪ್ರೊಸಿಫಸ್‌ ಸಿನೆರೆರಿಯ ಮತ್ತು ಅಕೇಸಿಯಾ ಫೆರುಜಿನಾ ಎರಡೂ ಪ್ರಭೇದಗಳಲ್ಲಿ ಸಾಮ್ಯತೆ ಇರುವ ಕಾರಣ ಶಮೀವೃಕ್ಷ ಅಥವಾ ಬನ್ನಿಮರದ ಗೊಂದಲವು ಹುಟ್ಟಿಕೊಂಡಿದೆ. ಅವುಗಳನ್ನು ನಂತರದಲ್ಲಿ ನೋಡೋಣ. ಆದರೆ ಒಂದಂತೂ ನಿಜವಲ್ಲವೇ? ಕರ್ನಾಟಕದಲ್ಲಿ ಅದರಲ್ಲೂ ತುಂಗಭದ್ರಾ ನದಿಯನ್ನು ದಾಟಿದ ಭೌಗೋಳಿಕ ಪ್ರದೇಶದಲ್ಲಿ ಹೆಚ್ಚಿನ ಪಾಲು ಆಚರಣೆಯಲ್ಲಿ ಇರುವ “ಬನ್ನಿ ಕೊಡುವ” ಸಂಪ್ರದಾಯದಲ್ಲಿ ಬಳಸಲಾಗುತ್ತಿರುವ ಮರಗಳು #ಅಕೇಸಿಯಾ ಪೆರುಜಿನಾಗಳೇ! ಆ ಮರವೇ ಅಪಾಯದಂಚಿಗೆ ಇರುವುದೂ ಕೂಡ. ಹಾಗಾಗಿ ದಸರಾಹಬ್ಬದ ಶುಭಾಶಯಗಳ ಜೊತೆಗೆ ಅಳಿವಿನ ಅಪಾಯದಲ್ಲಿರುವ ಮರದ ಸಂರಕ್ಷಣೆಯ ನೆನಪೂ ಸಹಾ ಸಸ್ಯಯಾನದ ಜೊತೆಯಾಗಿದೆ.

ಬನ್ನಿ ಮರದ ಅಪಾಯದಂಚಿನ ಸಮಯದಲ್ಲಿ ಬಹುಶಃ ಇಂತಹ ಪ್ರಶ್ನೆಗಳು ಬರಬಹುದು. ಅತ್ಯಂತ ಜನಪ್ರಿಯವಾದ ಮೈಸೂರಿನ ಜಂಬೂ ಸವಾರಿಯು ಕೊನೆಯಾಗುವ “ಬನ್ನಿಮಂಟಪ”ದ ಮರವೂ ಅಕೇಸಿಯಾವೇ ಅಥವಾ ಪ್ರೊಸಿಫಸ್‌ ಮರವೇ? ಅಲ್ಲದೆ ಎಲ್ಲೆಲ್ಲಿ ಸ್ವಾಭಾವಿಕವಾಗಿ ಬನ್ನಿ ಮರಗಳಿವೆ? ಅಲ್ಲಿರುವ ಐತಿಹ್ಯಗಳೇನು? ಅವೆಲ್ಲವೂ ಅಕೇಸಿಯಾಗಳೇ? ಅಥವಾ ಪ್ರೊಸಿಫೆಸ್‌ಗಳೇ? ಅಕೇಸಿಯಾಕ್ಕೂ ಮತ್ತೊಂದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸಗಳೇನು? ಅಕೇಸಿಯಾ ಅಪಾಯದಂಚಿಗೆ ಹೋಗಲು ಕಾರಣವೇನು? ಇವೆಲ್ಲವೂ ಒಟ್ಟಿಗೆ ಬರುವುದು ಸಹಜ. ಎಲ್ಲವನ್ನೂ ಸೂಕ್ಷ್ಮವಾದ ತಿಳಿವಳಿಕೆಗೆ ತಂದುಕೊಂಡು, ಒಟ್ಟಾರೆ ಬನ್ನಿ-ಶಮೀಯ ಸಂಗತಿಗಳ ಜೊತೆಗೆ, ಕೆಂಪು ಪಟ್ಟಿಯಲ್ಲಿ ಸೇರಿರುವ ಅಕೇಸಿಯಾ – ಕರ್ನಾಟಕದ ಬನ್ನಿ-ಮರದ ಕುರಿತು ಕೆಲವು ಸಂಗತಿಗಳನ್ನು ತಿಳಿಯೋಣ.

ಫೋಟೋ ಕೃಪೆ : mysuru today

ಬನ್ನಿ ಮರ ಅಥವಾ ಶಮೀ ವೃಕ್ಷಕ್ಕೆ ಪೂಜ್ಯತೆಯನ್ನು ಕೊಟ್ಟ ಪುರಾಣದ ಒಂದು ಶ್ಲೋಕ ಹೀಗಿದೆ :

ಶಮೀ ಶಮೀಯತೇ ಪಾಪಂ ಶಮೀ ಶತ್ರುವಿನಾಶಿನೀ|
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ|
ತತ್ರ ನಿರ್ವಿಘ್ನಕತ್ರಿತ್ವಂ ಭವ ಶ್ರೀರಾಮಪೂಜಿತಾ||      

ಅಂದರೆ ಶಮೀ ವೃಕ್ಷವು ಪಾಪವನ್ನು ಹಾಗೂ ಶತ್ರುಗಳನ್ನು ನಿವಾರಣೆ ಮಾಡುತ್ತದೆ. ಅದು ಅರ್ಜುನನ ಬಾಣವನ್ನು ಕಾಪಾಡಿದ್ದಲ್ಲದೆ, ರಾಮನಿಗೂ ಪ್ರಿಯವಾಗಿದೆ. ಸದಾ ಕಾಲವೂ ಸುಖವನ್ನು ನೀಡುತ್ತದೆ. ರಾಮನಿಂದಲೂ ಪೂಜಿಸಲ್ಪಟ್ಟ  ಬನ್ನಿ ಮರವೇ, ನಾನು ಎಂದಿನಂತೆ ವಿಜಯಯಾತ್ರೆಗೆ ಹೊರಡುವವನಿದ್ದೇನೆ. ನನ್ನ ಈ ಯಾತ್ರೆಯು ನಿರ್ವಿಘ್ನ ಹಾಗೂ ಸುಖಕರವಾಗುವಂತೆ ಮಾಡು ಎಂದು ಕೇಳಿಕೊಳ್ಳಲಾಗುವ ಶ್ಲೋಕ.



ಮರ ಯಾವುದೇ ಆಗಲಿ ಅಕೇಸಿಯಾ ಅಥವಾ ಪ್ರೊಸಿಫಸ್‌ ಎರಡಕ್ಕೂ ಪೂಜ್ಯತೆಯನ್ನು ಅವುಗಳ ಭಿನ್ನತೆಯನ್ನಾಗಲಿ ಸಾಮ್ಯತೆಯನ್ನಾಗಲಿ ಪರಿಗಣಿಸದೆ ಕೊಟ್ಟಿದ್ದೇವೆ. ಎರಡೂ ಫೇಬೇಸಿಯೇ ಎಂಬ ಒಂದೇ ಕುಟುಂಬದವು. ಸಂಕುಲಗಳು ಬೇರೆ ಬೇರೆ!  ನೋಡುವುದಕ್ಕೆ ಎಲೆಗಳ ಗಾತ್ರ ಮತ್ತು ಹರಹಿನಲ್ಲಿ ತುಸು ವ್ಯತ್ಯಾಸಗಳನ್ನು ಹೊರತು ಪಡಿಸಿ ಇನ್ನೆಲ್ಲಾ ಒಂದೇ ರೀತಿಯವು. ಮುಂದೊಂದು ದಿನ ಅವೆರಡನ್ನೂ ಬೇರೆಯವಲ್ಲ ಎಂದೋ ಅಥವಾ ತೀರಾ ವ್ಯತ್ಯಾಸದ ಬೇರೆ-ಬೇರೆಯಾದ ಮರಗಳೆಂದೂ ಕರೆಯಬಹುದು. ಒಂದಂತೂ ಸತ್ಯ. ಅಕೇಸಿಯಾ ಎನ್ನುವುದಂತೂ ಅಳಿವಿನ ಅಪಾಯದಲ್ಲಿ ಇರುವುದನ್ನು ಅಂತರರಾಷ್ಟ್ರೀಯ ಅನುಶೋಧಗಳಿಂದ ವಿಶ್ಲೇಷಿಸಿ ಕೆಂಪು ಪಟ್ಟಿಯಲ್ಲಿ ಸೇರಿಸಿದ್ದಾರೆ. ಕರ್ನಾಟಕದಲ್ಲಂತೂ #ಬನ್ನಿ ಮರ-ಶಮೀವೃಕ್ಷ ಅಕೇಸಿಯಾವೇ ಹೌದು.

ಅದಕ್ಕೆಂದೇ ಕರ್ನಾಟಕದ ಬನ್ನಿಮರ ,ಅಕೇಸಿಯಾವನ್ನು ಕಿರುಬನ್ನಿ ಎಂದೂ ಕೆಲವು ವಿದ್ವಾಂಸರು ಕರೆದಿದ್ದಾರೆ. ಈ ಹೆಸರುಗಳೂ ಸಹಾ ಕೆಲವೊಮ್ಮೆ ಬದಲಾಗುವುದುಂಟು. ಯಾರು, ಯಾವಾಗ ಏನನ್ನು ನೋಡಿ ವಿವರಿಸಿರುತ್ತಾರೋ ಆ ಹೆಸರಿನಿಂದ ಕರೆದಿರುತ್ತಾರೆ. ಬ್ರಿಟೀಷ್‌ ಕಾಲದ ಸಸ್ಯಗಳ ಶೋಧಗಳಲ್ಲಿ ಇಟ್ಟ ಹೆಸರುಗಳಿವು. ಆಯಾ ರಾಜ್ಯ, ಪ್ರಾಂತ್ಯದ ಸಸ್ಯವಿವರಗಳನ್ನು ನೋಡಿ ಕರೆದಿರುವ ಸಾಧ್ಯತೆಗಳು ಹೆಚ್ಚು. ಮೈಸೂರಿನ ಬನ್ನಿಮಂಟಪದ ಮರವನ್ನು ದಸರಾ ಹಬ್ಬದ ವಿವರಗಳ ದಾಖಲು ಮಾಡಿದ ಬಹುಶಃ ರಾಮಕೃಷ್ಣ ಮಠದ ಸ್ಮರಣಾನಂದ ಸ್ವಾಮಿ ಮತ್ತು ಶಿವಪ್ರಿಯಾನಂದ ಸ್ವಾಮಿ ಅವರುಗಳು ಆ ಮರವನ್ನು ಪ್ರೊಸಿಫಸ್‌ ಎಂದೇ ಕರೆದಿದ್ದಾರೆ. ಇತರ ಕೆಲವು ದಾಖಲೆಗಳಲ್ಲಿ ಬನ್ನಿ ಮರವನ್ನು ಅಕೇಸಿಯಾ ಫೆರುಜಿನಾ ಎಂದೇ ಕರೆದಿದ್ದಾರೆ. ಈ ದಾಖಲೆಗಳ ರಚನಕಾರರು ತಮಗೆ ಸಾಧ್ಯವಿದ್ದ ಆಕರಗಳನ್ನು ಕಂಡಿದ್ದಾರೆಯೇ ಹೊರತು, ಅವುಗಳ ನಿಜವಾದ ಸಸ್ಯ ವೈಜ್ಞಾನಿಕ ವಿವರಗಳಿಂದ ಹಾಗೆ ಹೆಸರಿಸಿಲ್ಲ. ಕರ್ನಾಟಕದಲ್ಲಿ ಅಂತೂ ಹೆಚ್ಚು ಬನ್ನಿ ಮರಗಳೆಂದು ನಾಟಿಯಾದವು ಅಕೇಸಿಯಾ ಫೆರಜಿನಾಗಳೇ ಎಂಬುದಂತೂ ನಿಜ. ಕೆಲವೊಂದು ದಾಖಲೆಗಳು ಶಮೀ ಎಂದು ಕರೆಯುವ ಪ್ರೊಸಿಫಸ್‌ ಸಿನೆರರಿಯಾ ಎಂದು ನಂಬಿಕೊಂಡು ಅಕೇಸಿಯಾ ಫೆರುಜಿನಾ ವನ್ನು ನೆಡಲಾಗಿದೆ ಎಂದೂ ವ್ಯಾಖ್ಯಾನಿಸಿದ್ದಾರೆ. ಒಂದಂತೂ ಸ್ಪಷ್ಟ. ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುವ ಬನ್ನಿಮರವೆಂದು ಕರೆಯುತ್ತಿರುವ ಪ್ರಭೇದ ಅಕೇಸಿಯಾ ಫೆರುಜಿನಾ.

ಫೋಟೋ ಕೃಪೆ : chaha

ಫೆರಿಜಿನಾ ಆಗಲಿ ಸಿನೆರರಿಯಾ ಆಗಲಿ ಎರಡೂ ಮುಳ್ಳಿನ ಮರಗಳೇ! ಹಬ್ಬದ ಸಮಯದ ಹೊರತಾಗಿ ಬೇರೆ ಯಾವಾಗಲೂ ನೆನಪಿಗೆ ತಂದುಕೊಳ್ಳದವು. ಎರಡೂ ಔಷಧಗಳಿಗೆ ಹಾಗೂ ಮರಮುಟ್ಟುಗಳಿಗೆ ಬಳಸುತ್ತಿದ್ದರೂ ಈ ಉಪಯೋಗಗಳು ಕಡಿಮೆ. ಹಾಗಾಗಿ ಹಬ್ಬದಲ್ಲಿ ಎಲೆಗಳನ್ನು ಕಿತ್ತು ತಂದು ಹಂಚಿದರೆ, ಮತ್ತೆ ಮುಂದಿನ ವರ್ಷಕ್ಕೆ ಮಾತ್ರವೇ ಮರಗಳ ಹುಡುಕಾಟ! ಈ ಆಚರಣೆಯ ರೂಢಿಗಾಗಿ ಈ ಮರಗಳು ದೇವಾಲಯಗಳ ಆವರಣದಲ್ಲಿ ಅಲ್ಲಲ್ಲಿ ಕಾಣಬರುತ್ತವೆ.  ಅದರಲ್ಲೂ ವೀರಭದ್ರನ ದೇವಾಲಯಗಳಲ್ಲಿ ಸಾಮಾನ್ಯವಾಗಿ ಮರ ಖಾಯಮ್ಮಾಗಿ ಇರುತ್ತದೆ. ವೀರಭದ್ರನ ಹೆಂಡತಿಯು ಭದ್ರಕಾಳಿ ಅಥವಾ ಕಾಳಿಕಾದೇವಿ. ಬನ್ನಿಮರವನ್ನು ಭದ್ರಕಾಳಿಗೆ ಹೋಲಿಸುವ ಕಥೆಗಳಿವೆ. ಆದ್ದರಿಂದ ಬನ್ನಿಮಹಾಂಕಾಳಿ ಎಂದೂ ಹೇಳುತ್ತಾರೆ.

ಬನ್ನಿ (ಅಕೇಸಿಯಾ ಫೆರುಜಿನಾ) ಮರವು ಒಣ ಭೂಮಿಯಲ್ಲಿ ಉತ್ಕೃಷ್ಟವಾಗಿ ಬೆಳೆಯಬಲ್ಲದು. ಕಪ್ಪು ಮಣ್ಣಿನ ನೆಲ ಅದಕ್ಕೆ ಇಷ್ಟವಾದ ನೆಲೆ. ಹೆಚ್ಚು ಬರವನ್ನು ಸಹಿಸಿಕೊಳ್ಳುವ ಗುಣ ಉಳ್ಳದ್ದು. ೮ ರಿಂದ ೧೨ ಮೀಟರ್‌ ಎತ್ತರಕ್ಕೆ ಬೆಳೆಯುತ್ತದೆ. ಆದರೂ ಹೆಚ್ಚು ಮರಗಳು ೪ -೮ ಮೀಟರ್‌ನವು ಅಷ್ಟೇ. ಎಲೆಗಳು ಸಣ್ಣ ಎಲೆಗಳ ಸಮೂಹಗಳಾಗಿದ್ದು, ಈ ಸಮೂಹಗಳು ೩ ರಿಂದ ೬ ಜೊತೆಗಳಾಗಿ ಇರುವುದುಂಟು. ಬಹುಶಃ ಈ ಜೊತೆಗಳ ಸಂಖ್ಯೆಗಳು ಮತ್ತು ಅವುಗಳ ಹರಹುಗಳಲ್ಲಿ ಸ್ವಲ್ಪವೇ ವ್ಯತ್ಯಾಸವಾದ ಕಾರಣ ಎರಡೂ ಪ್ರಭೇದಗಳ ಗುರುತಿಸುವಿಕೆಯಲ್ಲಿ ಗೊಂದಲಕ್ಕೆ ಕಾರಣವಾಗಿವೆ. ನೋಡುವುದಕ್ಕಂತೂ ಒಂದೇ ಆಕಾರ, ಎತ್ತರ ಹಾಗೂ ನೋಟದವು. ಎಲೆಗಳೂ ಅಷ್ಟೆ! ಫೆರುಜಿನಾ ತುಸು ಬಿಳಿಚಿಕೊಂಡಂತೆ ಇರುತ್ತವೆ. ಆದರೂ ಅದು ಮೊದಲ ನೋಟದಲ್ಲಿ ಗೊತ್ತಾಗದು. ಹೂವುಗಳೂ ಎರಡೂ ಪ್ರಭೇದಗಳಲ್ಲಿ ಹಳದಿ ಬಣ್ಣದವು.

ಫೋಟೋ ಕೃಪೆ : itslife

ಬನ್ನಿ ಮರವು ಸಾಧಾರಣ ಇತರ ಮುಳ್ಳಿನ ಜಾತಿಯವಾದ “ಜಾಲಿ”ಯ ಸಂಬಂಧಿಯೇ. ಕರಿ ಜಾಲಿ, ಬಿಳಿ ಜಾಲಿ, ಬಳ್ಳಾರಿ ಜಾಲಿ, ಬಂಗಾಲ ಜಾಲಿ ಮುಂತಾದವುಗಳ ಹತ್ತಿರ ಸಂಬಂಧವುಳ್ಳದ್ದು. ಈ ಮರಗಳಲ್ಲೆಲ್ಲಾ ಅಂಟು ಸ್ರವಿಸುತ್ತದೆ. ಈ ಅಂಟನ್ನು ಔಷಧಗಳಲ್ಲಿ ಮತ್ತು ಆಹಾರ ತಯಾರಿಗಳಲ್ಲಿ ಬಳಸುತ್ತಾರೆ. ಬನ್ನಿ ಮರದಲ್ಲಿ ಅಂಟು ಹೆಚ್ಚು ಸ್ರವಿಸುವುದಿಲ್ಲ, ಜಾಲಿಗಳಿಗೆ ಹೋಲಿಸಿದರೆ ತುಸು ಕಡಿಮೆ. ಬನ್ನಿ ಮರದ ಬಗೆಗೆ ಪೂಜ್ಯ ಭಾವನೆಯಿಂದಾಗಿ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಈ ಮರಕ್ಕೆ ಸೀರೆಯುಡಿಸಿ ದೇವತೆಯಾಗಿಸಿರುವ ನೂರಾರು ಉದಾಹರಣೆಗಳು ಸಿಗುತ್ತವೆ. ತುಂಗಾಭದ್ರಾ ನದಿಯನ್ನು ದಾಟಿ ಹೋದಂತೆ ಈ ಬಗೆಯ ಸೀರೆಯುಡಿಸಿದ ಮರಗಳು ಹೆಚ್ಚುತ್ತಾ ಸಾಗುತ್ತವೆ. ಎಷ್ಟೇ ಪೂಜ್ಯತೆಯನ್ನು ಕೊಟ್ಟರೂ ಅವುಗಳ ಸಂರಕ್ಷಣೆಯಲ್ಲಿ ಯಾವುದೇ ವಿಶೇಷ ಪ್ರಯತ್ನಗಳು ನಡೆದಿಲ್ಲ. ಖಾಸಗಿ ನೆಲದಲ್ಲಿ ಬನ್ನಿ ಮರವನ್ನು ಬೆಳೆಸುವುದಂತೂ ಕಡಿಮೆಯಾಗುತ್ತಾ ಬರುತ್ತಿದೆ. ಕಪ್ಪು ಜಮೀನಿನ ಹೊಲಗಳಲ್ಲಿ ಸಾಮಾನ್ಯವಾಗಿ ಬನ್ನಿ ಮರಗಳು ಇರುತ್ತಿದ್ದು, “ಬನ್ನಿಮರದ ಹೊಲ” ಎಂದೇ ಕರೆಯಿಸಿಕೊಳ್ಳುವ ಹತ್ತಾರು ಉದಾಹರಣೆಗಳು ಶಿವಮೊಗ್ಗಾ, ದಾವಣಗೆರೆ ಜಿಲ್ಲೆಗಳಲ್ಲಿ ಕಂಡುಬರುತ್ತವೆ. ಕೆಲವು ರೈತರಲ್ಲಿ ಈ ಮರವನ್ನು ಬೆಳೆಸುವುದರಿಂದ ಆ ಜಮೀನಿನಲ್ಲಿ ಕೆಲವೊಂದು ಕಟ್ಟು-ಪಾಡುಗಳನ್ನು ಪಾಲಿಸಬೇಕಾಗುವುದೆಂಬ ಕಾರಣಕ್ಕೆ ಆರಂಭದಲ್ಲೇ ಕೀಳುವುದುಂಟು. ಬಹುಶಃ ಹಾಗಾಗಿ ಇವುಗಳ ಸಂಖ್ಯೆಯೂ ಕಡಿಮೆಯಾಗುತ್ತಿರಬಹುದು. ಆದರೇ ಕೆಲವರು ಬನ್ನಿಮರ ಇದ್ದರೆ ಒಳ್ಳೆಯದು ಎಂಬ ನಂಬಿಕೆಗಳನ್ನೂ ಹೊಂದಿದ್ದಾರೆ.



ವಿಜಯ ದಶಮಿಯಂದು ಬನ್ನಿ ಪತ್ರೆಯನ್ನು ತಂದು, ಹಿರಿಯರೆಲ್ಲರಿಗೂ ಕೊಟ್ಟು ನಮಸ್ಕರಿಸಿ “ಬನ್ನಿ ತಗೊಂಡು ಬಂಗಾರ ಕೊಡಿ” ಅಂತಲೋ ಅಥವಾ “ಬನ್ನಿ ಕೊಟ್ಟು ಬಂಗಾರದಂತಹಾ ಮಾತಾಡೋಣ” ಅಂತಲೋ ಹೇಳುವ ಪರಿಪಾಠಗಳಿವೆ. ಸುಖಕರವಾದ ಸ್ನೇಹ ಜೀವನಕ್ಕೆ ಬನ್ನಿಯು ಪೀಠಿಕೆಯನ್ನು ಒದಗಿಸುತ್ತದೆ. ದುರಾದೃಷ್ಟವೆಂದರೆ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿ ಆ ಮರವು ಅಳಿವಿನ ಅಂಚಿಗೆ ಬಂದು ಅದರ ಉಳಿವೊಂದು ಪ್ರಶ್ನೆಯಾಗಿದೆ.

ಫೋಟೋ ಕೃಪೆ : facebook

ಕರ್ನಾಟಕದ ಅನೇಕ ಕಡೆಗಳಲ್ಲಿ ಬಿಲ್ವ ಪತ್ರೆಯಂತೆಯೇ ಬನ್ನಿ ಪತ್ರೆಯನ್ನೂ ಪೂಜೆಯಲ್ಲಿ ಬಳಸುತ್ತಾರೆ. ಜನಪದೀಯ ಔಷಧಗಳಲ್ಲಿ ಎಲೆಗಳು, ಬೀಜ ಹಾಗೂ ಅಂಟನ್ನು ಬಳಸುತ್ತಾರೆ. ಅನಿರೀಕ್ಷಿತ ಗರ್ಭಪಾತವನ್ನು ತಪ್ಪಿಸಲು ಇದರ ಹೂವುಗಳನ್ನು ಸಕ್ಕರೆ ಕ್ಯಾಂಡಿಯೊಂದಿಗೆ ಮಿಶ್ರಣ ಮಾಡಿ ಕೊಡಲಾಗುತ್ತದೆ. ಈ ಮರದ ತೊಗಟೆಯನ್ನು ಸಂಧಿವಾತದ ಚಿಕಿತ್ಸೆಯಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ. ಶುಂಠಿಯೊಂದಿಗೆ ಬೆರೆಸಿ ತಯಾರಿಸಿದ ಇದರ ತೊಗಟೆಯ ಕಷಾಯವನ್ನು ಹಲ್ಲುಗಳ ಸಂಕುಚಿತತೆಯನ್ನು ಹೋಗಲಾಡಿಸಲು ಸೇವಿಸಲಾಗುತ್ತದೆ. ಬೇಧಿಯಂತಹ ಸಮಸ್ಯೆಗಳ ಚಿಕಿತ್ಸೆಗಾಗಿಯೂ ಇದರ ಬಳಕೆಯಾಗುತ್ತದೆ. ತೊಗಟೆಯನ್ನು ಹುದುಗುಗೊಳಿಸಿ ಮದ್ಯದ ತಯಾರಿಕೆಯಲ್ಲೂ ಬಳಸುತ್ತಾರೆ.

ಬನ್ನಿಮರದ ಪ್ರಭೇದ ಅಕೇಸಿಯಾ ಫೆರುಜಿನಾ ವು ಅಳಿವಿನ ಅಂಚಿನಲ್ಲಿರುವ ಮರವಾಗಿದೆ. ದಸರೆಯ ಹಬ್ಬದಲ್ಲಷ್ಟೇ ಪೂಜಿಸಿ, ಎಲೆಗಳ ಕಿತ್ತು ತಂದು ಹಂಚಿ ನಮಸ್ಕರಿಸಲು ಮಾತ್ರವಷ್ಟೇ ಬಳಸಿ ಮರುದಿನ ಮರೆತು ಮಾಮೂಲಿಯಾಗುವ ಜೀವನ ನಮ್ಮದು. ದೇವಾಲಯಗಳಲ್ಲಿ ಮಾತ್ರವೇ ಬನ್ನಿಮರಗಳನ್ನು ಬೆಳೆಸುತ್ತಾ, ಸಂರಕ್ಷಣೆಗೆ  ಪೂಜ್ಯತೆಯನ್ನಷ್ಟೇ ಕಾರಣವಾಗಿಸಬಾರದು. ಇದು ದೇವಾಲಯಗಳಲ್ಲದೆ ಬೇರೆಡೆಗಳಲ್ಲಿಯೂ ಬೆಳೆಸುವುದರಿಂದ ಸಂರಕ್ಷಣೆಗೆ ದಾರಿಯಾಗುತ್ತದೆ.  ಹೆಚ್ಚಿನ ಪಾಲು ಶ್ರೀಲಂಕಾ ಮತ್ತು ದಕ್ಷಿಣ ಭಾರತಕ್ಕೆ ಮಾತ್ರವೇ ಸೀಮಿತವಾಗಿರುವ ಫೆರುಜಿನಾಕ್ಕೆ ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಅವಶ್ಯಕತೆಯಿದೆ. ಆದ್ದರಿಂದ ದಸರಾ ಹಬ್ಬದ ದಿನವೇ ಅನಿವಾರ್ಯವಾಗಿ ಈ ಸಂಗತಿಯನ್ನು ಹೇಳಬೇಕಾಯಿತು. ಒಂದು ಪ್ರಭೇದವನ್ನು ಉಳಿಸಿಕೊಳ್ಳಲು ಅಷ್ಟನ್ನಾದರೂ ನಾವು ಮಾಡಬೇಕಲ್ಲವೇ?


  • ಡಾ. ಟಿ.ಎಸ್.‌ ಚನ್ನೇಶ್ (Director of Center for Public Understanding of Science) ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW