ಸಂಚಾರಿ ವಿಜಯ್ ರ ಇಂದಿನ ದುರದೃಷ್ಟಕರ ಪರಿಸ್ಥಿತಿ ಹದಿನೈದು ವರ್ಷಗಳ ಹಿಂದೆ ಇದೇ ಸ್ಥಿತಿಯಲ್ಲಿದ್ದ ನನ್ನ ಭಾಮೈದ ಧರ್ಮರಾಜ್ ನೆಡೆಸಿದ್ದ ಸಾವು- ಬದುಕಿನ ನಡುವಿನ ಯಾತನಾಮಯ ಹೋರಾಟವನ್ನು ನೆನಪಿಸಿ ಕಣ್ಣುಗಳು ಒದ್ದೆಯಾಗುವಂತೆ ಮಾಡಿತು…..!
ಮೊನ್ನೆ ಶನಿವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯವಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ ಎಂಬ ಕೆಟ್ಟ ಸುದ್ದಿ ಬಂದಿದೆ. ಭವಿಷ್ಯದಲ್ಲಿ ಅನೇಕ ಕನಸುಗಳನ್ನು ಹೊತ್ತು ಚಿಕ್ಕ ವಯಸ್ಸಿನಲ್ಲಿಯೇ ರಸ್ತೆ ಅಪಘಾತದ ದುರಂತಕ್ಕೀಡಾದ ಶಂಕರ್ ನಾಗ್, ಸುನಿಲ್, ಮುಂತಾದ ಪ್ರತಿಭಾವಂತರ ಸಾಲಿಗೆ ವಿಜಯ್ ಸೇರ್ಪಡೆಯಾಗಿದ್ದರ ನೋವು ನಮಗೇ ತಡೆದುಕೊಳ್ಳಲು ಕೊಳ್ಳಲು ಆಗುತ್ತಿಲ್ಲ, ಇನ್ನು ಅವರ ಕುಟುಂಬದವರಿಗೆ ಹೇಗಾಗಿರಬೇಡ..? ದೇಹದ ಎಲ್ಲಾ ಅಂಗಾಂಗಗಳೂ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದ್ದರೂ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆಯೆಂದರೆ ಇಂತಹಾ ಸ್ಥಿತಿಯಿಂದ ರೋಗಿ ಗುಣಮುಖರಾಗಿದ್ದು ಇತಿಹಾಸದಲ್ಲೆ ಇಲ್ಲವೆಂಬುದು ಮತ್ತೇ ಪ್ರೂವ್ ಆಯಿತು !

ಈ ಬೈಕ್ ಅಪಘಾತ ಸಂಭವಿಸಿದಾಗ ಸವಾರ ನವೀನ್ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ವಿಜಯ್ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲವೆಂದು ವರದಿಗಳು ಹೇಳುತ್ತವೆ. ಹಾಗೊಂದು ವೇಳೆ ಹೆಲ್ಮೆಟ್ ಇದ್ದಿದ್ದಲ್ಲಿ ಎಲ್ಲೋ ಒಂದು ಕಡೆ ಜೀವಕ್ಕೆ ಹಾನಿಯಾಗುತ್ತಿರಲಿಲ್ಲವೇನೋ ಎನಿಸುವುದು ಸಹಜ. ಅವರ ಟೈಂ ಇಷ್ಟೊಂದು ಖರಾಬ್ ಆಗಿ ವಿಧಿ ಆ ಜಾಗದಲ್ಲಿ ಸಂಚು ಹಾಕಿ ಕಾಯುತ್ತಿದ್ದಾಗ ಈ ತರಹದ ಯಾವ ಚರ್ಚೆಗಳೂ ಈಗ ಪ್ರಯೋಜನಕ್ಕೆ ಬಾರದು. ಆದರೆ ಕೊನೇಪಕ್ಷ ಇದರಿಂದ ಮಿಕ್ಕವರದಾರೂ ಜಾಗ್ರತೆ ವಹಿಸಿದಲ್ಲಿ ಒಳ್ಳೆಯದು ಎಂಬ ಕಳಕಳಿಯಿಂದ ಒಂದೆರೆಡು ಸಾಲುಗಳು.
#ಸಂಚಾರಿ_ವಿಜಯ್ ರ ಇಂದಿನ ಸ್ಥಿತಿಯನ್ನು ನೋಡಿದಾಗ ಬರೋಬ್ಬರಿ ಹದಿನಾರು ವರ್ಷಗಳ ಹಿಂದೆ ಇಂತಹದೇ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ತಿಂದು ಹದಿನೆಂಟು ದಿವಸಗಳ ಕಾಲ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಸೋಲೊಪ್ಪಿ ಇಹಲೋಕ ತ್ಯಜಿಸಿದ ನನ್ನ ಭಾಮೈದ ಧರ್ಮರಾಜ್ ನೆನಪಾಗುತ್ತಾನೆ. ಧರ್ಮನಿಗೆ ಆಗ ಮುವ್ವತ್ತೆರಡು ವರ್ಷ ಇರಬಹುದು. ಮದುವೆಯಾಗಿ ವರ್ಷ ಕೂಡಾ ಕಳೆದಿರಲಿಲ್ಲ. ಮಂಗಳೂರಿನಲ್ಲಿ ಎಮ್.ಎಫ಼್ ಎಸ್.ಸಿ ಮಾಡಿ ಆಂಧ್ರದಲ್ಲಿ ಉದ್ಯೋಗದಲ್ಲಿದ್ದು ನಂತರ ಒಳ್ಳೆಯ ಉದ್ಯೋಗದ ಭರವಸೆಯಲ್ಲಿ ಇಲ್ಲಿಯೇ ಇದ್ದು ಭವಿಷ್ಯದಲ್ಲಿ ಅನೇಕ ಕನಸುಗಳನ್ನು ಕಂಡವ. ಸಂಬಂಧದಲ್ಲಿ ನನ್ನ ಹೆಂಡತಿಯ ತಮ್ಮನಾಗಿದ್ದರೂ ನನ್ನೊಡನೆ ಸ್ನೇಹ ಸಲಿಗೆಯಿಂದ ಇದ್ದ ಹುಡುಗ. ಜೊತೆ ಜೊತೆಯಲ್ಲಿಯೇ ಕ್ರಿಕೆಟ್ ಆಡಿದ್ದೆವೂ ಸಹ. ನೋಡಲು ಸುಮಾರು ಆರಡಿ ಎತ್ತರದ ,ಸ್ಮಾರ್ಟ್ ಆಗಿದ್ದ ಆಕರ್ಷಕ ವ್ಯಕ್ತಿತ್ವದ ಹುಡುಗ #ಧರ್ಮರಾಜ್.
ಹೀಗಿದ್ದವ 2006 ಜುಲೈ ಹದಿನೇಳರಂದು ಮಧ್ಯಾಹ್ನ ಒಂದುವರೆ ಘಂಟೆಯ ಸಮಯ ಇರಬಹುದು. ಮೋಟಾರ್ ಬೈಕಿನಲ್ಲಿ ಹಿರಿಯೂರಿನ ಸೂರ್ಯ ಹೋಟೆಲ್ ಮುಂಬಾಗದ ರಸ್ತೆಯ ತಿರುವಿನಲ್ಲಿ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದನೆಂಬ ಕೆಟ್ಟ ಸುದ್ದಿ ಆ ಸಮಯದಲ್ಲಿ ಬೆಂಗಳೂರಿನಲ್ಲಿದ್ದ ನಮಗೆ ತಿಳಿದು ಬಂದಿತ್ತು. ಇವನೊಟ್ಟಿಗೆ ಹಿಂಬದಿ ಸವಾರನಾಗಿದ್ದವನಿಗೆ ಯಾವುದೇ ಹೆಚ್ಚಿನ ಗಾಯಗಳಿಲ್ಲದೇ ಬಚಾವಾಗಿದ್ದ. ಆದರೆ ಧರ್ಮನಿಗೆ ಮಾತ್ರ ತಲೆಗೆ ಪೆಟ್ಟು ಬಿದ್ದು ರಕ್ತಹೆಪ್ಪುಗಟ್ಟಿ ಮೆದುಳಿಗೆ ಹಾನಿಯಾಗಿದ್ದಿರಬಹುದು.
ಆ ತಕ್ಷಣವೇ ಅವನ ಸ್ನೇಹಿತರು ಹಾಗೂ ಸಹೋದರರು ಅವನನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮಾರನೆಯ ತಲೆಗೆ ದಿನ ಶಸ್ತ್ರ ಚಿಕಿತ್ಸೆ ಆಗಿ ದೇವರ ದಯೆಯಿಂದ ಆತ ಚೇತರಿಸಿಕೊಳಬಹುದೆಂದು ಅಂದುಕೊಂಡಿದ್ದೆವು. ಆದರೆ ಸುಮಾರು ಹದಿನೆಂಟು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೆ ಆಗಸ್ಟ್ ನಾಲ್ಕರಂದು ಎಲ್ಲರನ್ನೂ ಶಾಶ್ವತವಾಗಿ ಅಗಲಿದ ಘಟನೆ ಅಂದು ಇಂದು, ಎಂದೆಂದೂ ಮನವನ್ನು ಆರ್ದ್ರಗೊಳಿಸುತ್ತದೆ.
ಸಂಚಾರಿ ವಿಜಯ್ ಇದ್ದ ಪರಿಸ್ಥಿತಿಯಲ್ಲಿಯೇ ನಮ್ಮ ಧರ್ಮ ಕೂಡಾ ಇದ್ದದ್ದು. ವಯಸ್ಸಿನಲ್ಲಿ ವಿಜಯ್ ಗಿಂತ ಹತ್ತು ವರ್ಷ ಚಿಕ್ಕವನಾಗಿದ್ದ. ಸಂಚಾರಿ ವಿಜಯ್ ರವರಂತಲ್ಲದೇ ಶಸ್ತ್ರ ಚಿಕಿತ್ಸೆಯ ನಂತರ ಧರ್ಮನಿಗೆ ಸ್ವಲ್ಪಮಟ್ಟಿಗೆ ಪ್ರಜ್ಞೆ ಇತ್ತು, ಮೆದುಳು ಪೂರಾ ಡೆಡ್ ಆಗಿರಲಿಲ್ಲ. ನಮ್ಮನ್ನೆಲ್ಲಾ ಗುರುತಿಸುತ್ತಿದ್ದ . ಆದರೆ ಮೆದುಳಿಗೆ ಬಿದ್ದ ಪೆಟ್ಟಿನಿಂದಲೋ ಏನೋ ದೇಹದ ಒಂದು ಭಾಗ ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದಂತೆ ಕಂಡು ಬಂದಿತ್ತು. ಆ ಸಮಯದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ಅಥವಾ ಬಿಡಲು ವೈದ್ಯರಿಂದ ಯಾವುದೇ ಖಡಕ್ ಭರವಸೆ ಅಥವಾ ಸಲಹೆ ಸಿಗಲಿಲ್ಲ. ಇಷ್ಟಾದರೂ ಆತ ಬದುಕುಳಿಯಬಹುದೆಂಬ ಸಣ್ಣ ನಿರೀಕ್ಷೆ ಇತ್ತು. ಆದರೆ ವಿಧಿ ಅವನ ಬಾಳಲ್ಲಿ ಕ್ರೂರಕ್ಕಿಂತ ಕ್ರೂರವಾಗಿದ್ದು ಚಿಕ್ಕ ವಯಸ್ಸಿಗೇ ಅವನ್ನನ್ನು ನಮ್ಮಿಂದ ಶಾಶ್ವತವಾಗಿ ದೂರ ಮಾಡಿತ್ತು. ಸುಂದರ ಕನಸುಗಳನ್ನು ಹೊತ್ತ ಯುವಕನೊಬ್ಬನ ಬದುಕು ಹೀಗೆ ದಾರುಣವಾಗಿ ಅಂದು ಅಂತ್ಯಗೊಂಡು ನಮ್ಮೆಲ್ಲರಲ್ಲೂ ಅದರಲ್ಲೂ ಅವರ ತಾಯಿಯ ಹೃದಯದಲ್ಲಿ ಆರದ ಗಾಯವನ್ನೇ ಉಂಟು ಮಾಡಿ ಆಳವಾದ ನೋವಿನ ಪುಟಗಳನ್ನೇ ದಾಖಲಿಸಿತ್ತು..!

(ಧರ್ಮರಾಜ್)
ಆಗಲೂ ಹೀಗೆಯೇ ಚರ್ಚೆ,ಸಲಹೆ ಅವರವರಿಗೆ ತೋಚಿದ್ದು, ತಿಳಿದದ್ದು ಎಲ್ಲವೂ ಮುನ್ನೆಲೆಗೆ ಬಂದಿತ್ತು ! ಅವುಗಳಲ್ಲಿ ಆತನನ್ನು ಬೆಂಗಳೂರಿಗೆ ಕರೆ ತಂದಿದ್ದರೆ ಬದುಕುತ್ತಿದ್ದನೋ ಏನೋ ಎಂಬುದು ಹಾಗೂ ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕಿದ್ದಲ್ಲಿ ಧರ್ಮರಾಜ್ ಖಂಡಿತಾ ಬದುಕುಳಿಯುತ್ತಿದ್ದ ಎಂಬುದು ಬಹುಮುಖ್ಯ ಚರ್ಚೆಗಳು! ಆದರೆ ನನಗೆ ಅದರಲ್ಲಿ ಅಕ್ಷರಶಃ ಸತ್ಯವೆನ್ನಿಸಿದ್ದು ಆತ ಹೆಲ್ಮೆಟ್ ಧರಿಸಿದ್ದಲ್ಲಿ ಕೊನೇಪಕ್ಷ ಸಣ್ಣ ಪುಟ್ಟ ಡ್ಯಾಮೇಜ್‌ನಿಂದಾದರೂ ಬದುಕುಳಿಯುತ್ತಿದ್ದ ಎಂಬ ಸಂಗತಿ. ಏಕೆಂದರೆ ಸಂಚಾರಿ ವಿಜಯ್ ಹಾಗೂ ಧರ್ಮ ಇಬ್ಬರ ಕೇಸುಗಳಲ್ಲೂ ತಲೆಗೆ ಬಿದ್ದ ಪೆಟ್ಟು ಹಾಗೂ ಮೆದುಳಿನ ನಿಷ್ಕ್ರಿಯತೆಯಿಂದಾಗಿಯೇ ಅವರ ಜೀವಕ್ಕೆ ಆಪತ್ತು ಬಂದಿದ್ದು. ಇಂತಹಾ ಅಪಘಾತದ ಕೇಸುಗಳಲ್ಲಿ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ… ಸಾವಿರಕ್ಕೆ ಒಬ್ಬರು ಎಂದರೂ ಅತಿಶಯವಲ್ಲ. ಹೀಗಾಗಿ ತಲೆಗೆ ಬೀಳುವ ಪೆಟ್ಟನ್ನು ತಪ್ಪಿಸಿದ್ದಲ್ಲಿ ಮಿಕ್ಕ ಗಾಯಗಳು ಕಾಲಾಂತರದಲ್ಲಿ ಮಾಯವಾಗಿ ಹೋಗುವ ಸಾಧ್ಯತೆ ಇರುತ್ತದೆ.
ರಸ್ತೆ ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿಯವರೆಗೆ ರಸ್ತೆ ಅಪಘಾತಗಳು ತಪ್ಪಿದ್ದಲ್ಲ. ಕೆಲವರು ರಸ್ತೆಗಳ ಗುಣಮಟ್ಟದ ಮೇಲೆ ಆರೋಪ ಮಾಡಬಹುದು ಅಥವಾ ತಗ್ಗು ಗುಂಡಿಗಳನ್ನು ಮುಚ್ಚದ, ರಸ್ತೆಗಳನ್ನು ರಿಪೇರಿ ಮಾಡದ್ದಕ್ಕೆ ಸರ್ಕಾರ ಅಥವಾ ಕಾರ್ಪೊರೇಷನ್ ಬಗೆಗೆ ಟೀಕೆ ಮಾಡಬಹುದು. ಆದರೆ ರಸ್ತೆ ನಿಯಮಗಳನ್ನು ಸುರಕ್ಷತಾ ನಿಯಮಗಳನ್ನು ಪಾಲಿಸುವ ಬಗೆಗೆ ಮಾತ್ರ ನಾವು ಎಚ್ಚೆತ್ತುಕೊಳ್ಳುವುದಿಲ್ಲ. ಸಂಚಾರಿ ವಿಜಯ್ ಹಾಗೂ ನನ್ನ ಭಾಮೈದ ಧರ್ಮರಾಜ್ ರಿಗೆ ಸಂಭವಿಸಿದ ಎರಡೂ ಅಪಘಾತಗಳಲ್ಲಿ ಮೇಲ್ನೋಟಕ್ಕೆ ಶಿರಸ್ತ್ರಾಣ ಧರಿಸದೇ ಇದ್ದದ್ದೇ ಅವರ ಜೀವಕ್ಕೆ ಕುತ್ತುಬರಲು ಕಾರಣ ಎಂಬುದು ಸಾಬೀತಾಗಿದೆ. ಒಂದು ವೇಳೆ ಹೆಲ್ಮೆಟ್ ಧರಿಸಿದ್ದು ತಲೆಗೆ ಬೀಳುವ ಪೆಟ್ಟು ಅವಾಯ್ಡ್ ಮಾಡಿದ್ದಲ್ಲಿ ಅವರ ಮೆದುಳು ಕೆಲಸ ಮಾಡುವಂತಿರುತ್ತಿತ್ತು ಹಾಗೂ ವಿಜಯ್ ಶೀಘ್ರವಾಗಿ ಗುಣಮುಖರಾಗಿರುತ್ತಿದ್ದರೇನೋ.!
ಮರೆಯುವ ಮುನ್ನ:
ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ, ಬೆಳಗಿನ ವೇಳೆ, ಮನೆಯ ಸುತ್ತ ಮುತ್ತ ಗಾಡಿ ಓಡಿಸುವಾಗ, ಬೆಳಿಗ್ಗೆ ಕ್ಯಾಷುಯಲ್ ಡ್ರೆಸ್ ನಲ್ಲಿದ್ದಾಗ, ಸಣ್ಣ ಊರುಗಳಲ್ಲಿ, ಅಂಗಡಿಗಳಿಗೆ ರೇಶನ್ ಗಾಗಿ ಹೋದಾಗ, ಹಣ್ಣು ಹೂ ತರಕಾರಿ ತರಲು ಹೊರಗಡೆ ಹೋದಾಗ ಹೆಲ್ಮೆಟ್ ಅಗತ್ಯವಿಲ್ಲವೆಂಬ ಅಲಿಖಿತ ನಿಯಮವನ್ನಾಗಿ ನಾವೇ ರೂಪಿಸಿಕೊಂಡಿದ್ದೇವೆ. ಹೀಗಾಗಿಯೇ ಹೆಲ್ಮೆಟ್ ಎನ್ನುವುದು ಜೀವರಕ್ಷಕ ಸಾಧನ ಎನ್ನುವ ಅರಿವಿನ ಬದಲಿಗೆ ಪೊಲೀಸರ ಕಾಟಕ್ಕೆ ಹಾಕಿಕೊಳ್ಳಬೇಕಲ್ಲಾ ಎಂದು ಬಲವಂತಕ್ಕೆ ಧರಿಸುವಂತಹಾ ವಸ್ತುವಾಗಿದೆ. ಈ ಮೈಂಡ್ ಸೆಟ್‌ನಿಂದಾಗಿಯೇ ಅತ್ಯಮೂಲ್ಯ ಜೀವಗಳನ್ನು ಕಳೆದುಕೊಳ್ಳುವ ದುಸ್ಥಿತಿ ಬಂದೊದಗಿದ್ದು.

ಫೋಟೋ ಕೃಪೆ : India today ಸಾಂದರ್ಭಿಕ ಚಿತ್ರ
ಸಂಚಾರಿ ವಿಜಯ್ ರ ದಾರುಣ ಸ್ಥಿತಿಗೆ ಮರುಗುವುದನ್ನು ಹೊರತು ಪಡಿಸಿ ಬೇರೇನೂ ಮಾಡಲು ಆಗದಂತಹ ಸ್ಥಿತಿಯಲ್ಲಿದ್ದೇವೆ. ಇಂದು ವಿಜಯ್ ಅಂದು ನನ್ನ ಕಸೀನ್ ಧರ್ಮನಿಗಾದ ಅಪಘಾತಗಳು ನಿತ್ಯವೂ ಸಂಭವಿಸುತ್ತಲೇ ಇವೆ. ಪ್ರತಿನಿತ್ಯವೂ ದುರದೃಷ್ಟ ಕುಟುಂಬಗಳು ತಮ್ಮವರನ್ನು, ತಮಗಾಸರೆಯಾಗಿದ್ದವರನ್ನು ಅಪಘಾತದಲ್ಲಿ ಕಳೆದುಕೊಂಡು ಕಣ್ಣೀರಿಡುತ್ತಲೇ ಇವೆ….ಮೋಟಾರ್ ಬೈಕ್ ಓಡಿಸುವವರು ರಸ್ತೆನಿಯಮಗಳನ್ನು ಪಾಲಿಸುವುದರ ಜೊತೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದೂ ಅಗತ್ಯ. ಇದುವೇ ಇಂತಹಾ ಘಟನೆಗಳಿಂದ ಕಲಿಯಬೇಕಾದ ಪಾಠ.
ಸಾವಿನಂಚಿನಲ್ಲೂ ಮಾನವೀಯತೆ ಮೆರೆದು ವಿಜಯ್ ರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿರುವ ಅವರ ಕುಟುಂಬ ನಿಜಕ್ಕೂ ಗ್ರೇಟ್. ಅವರ ಈ ಮಾನವೀಯ ಕೆಲಸ ಸಮಾಜಕ್ಕೆ ಮಾದರಿ.
ಸಂಚಾರಿ ವಿಜಯ್ ರ ಇಂದಿನ ದುರದೃಷ್ಟಕರ ಪರಿಸ್ಥಿತಿ ಹದಿನೈದು ವರ್ಷಗಳ ಹಿಂದೆ ಇದೇ ಸ್ಥಿತಿಯಲ್ಲಿದ್ದ ನನ್ನ ಬಾಮೈದ ಧರ್ಮರಾಜ್ ನೆಡೆಸಿದ್ದ ಸಾವು- ಬದುಕಿನ ನಡುವಿನ ಯಾತನಾಮಯ ಹೋರಾಟವನ್ನು ನೆನಪಿಸಿ ಕಣ್ಣುಗಳು ಒದ್ದೆಯಾಗುವಂತೆ ಮಾಡಿತು…..!
- ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)
