ನಟ ರಾಮಕೃಷ್ಣ ಅವರ ಪರಿಸ್ಥಿತಿ ಗಂಭೀರವಾಗಿದೆ, ಅವರಿಗೆ ಅವಕಾಶನೇ ಇಲ್ಲ, ಬದುಕು ಚಿಂತಾಜನಕ, ಜೀವನ ಸಾಗ್ಸೋದೆ ಕಷ್ಟ ಅಂತ ಕೆಟ್ಟದಾಗಿ ಕೆಲವರು ಬರಿದು ಪೋಸ್ಟ್ ಮಾಡುತ್ತಾರೆ. ಅದ್ಯಾವುದಕ್ಕೂ ರಾಮಕೃಷ್ಣ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಇವೆಲ್ಲವೂ ವಿಕೃತಿಯ ಪರಮಾವಧಿ. ಇಂದು ಅವರ ಜನ್ಮದಿನ, ಅವರಿಗೆ ಆ ಭಗವಂತ ಆಯಸ್ಸು ಆರೋಗ್ಯ ಕರುಣಿಸಲಿ ಎಂದು ಹಾರೈಸುತ್ತಾ ನಿತಿನ್ ಅಂಕೋಲಾ ಅವರು ರಾಮಕೃಷ್ಣ ಅವರೊಂದಿಗೆ ಕಳೆದ ಕೆಲವು ಕ್ಷಣದ ಕುರಿತು ಬರೆದ ಸುದೀರ್ಘ ಲೇಖನವನ್ನು ತಪ್ಪದೆ ಮುಂದೆ ಓದಿ…
ಜುಲೈ 16ರಂದು ನನ್ನ ಹುಟ್ಟೂರಿನಲ್ಲಾದ ಘೋರ ದುರಂತ ಸಂಭವಿಸುವ ಸರಿಯಾಗಿ ಹನ್ನೆರಡು ದಿನಗಳ ಹಿಂದೆ ಅಂದ್ರೆ ಜುಲೈ 4ನೇ ತಾರೀಕು ನಡೆದ ಘಟನೆಯನ್ನು ನಾನು ಇಲ್ಲಿ ಪ್ರಸ್ತಾಪಿಸ ಬಯಸುತ್ತೇನೆ..
ವೈಯ್ಯಕ್ತಿಕ ಕೆಲಸದ ನಿಮಿತ್ತ ಬೆಂಗಳೂರಿನಿಂದ ಊರಿಗೆ ಹೋಗಿದ್ದೆ.ಅದು ಜೂನ್ ಕೊನೆಯ ವಾರ.ಆಗಷ್ಟೇ ಮಳೆ ಬೀಳಲಾರಂಭವಾಗಿತ್ತು.ಬೆಂಗಳೂರಿನಲ್ಲಿ ಇರೋಕ್ಕಿಂತ ಮೂರು ಪಟ್ಟು ತಂಪು ಊರಲ್ಲಿ.ಏಕೆಂದರೆ ಮಳೆಗಾಲ.ಆತ್ಮೀಯನಿಗೆ ಭೇಟಿಯಾಗಬೇಕೆಂದು ಬೈಕ್ ಏರಿ ಹೊರಟವನಿಗೆ ಫೋನ್ ಕರೆ ಬಂದಿದ್ದೆ ಗೊತ್ತಾಗಲಿಲ್ಲ.ಮೈ ಮೇಲೆ ಗಟ್ಟಿ ಹೊದಿಕೆ ಅಂತಿದ್ದ ರೇನ್ ಕೊಟ್ನಲ್ಲಿ ಒಂದು ಕಡೆ ಬೈಕ್ ಪಕ್ಕಕ್ಕೆ ನಿಲ್ಲಿಸಿ ಯಾರದು ಅಂತ ಕರೆ ನೋಡಿದಾಗ ಜಿ.ಸಿ.ಕಾಲೇಜಿನ ಗ್ರಂಥಪಾಲಕರಾಗಿದ್ದ ನಂಜುಂಡಯ್ಯನವರು ಸತತವಾಗಿ ಮೂರು ಸಾರಿ ಕರೆ ಮಾಡಿದ್ದಾರೆ.ಪುನಃ ಕರೆ ಮಾಡಿದಾಗ ವಿಷಯ ಬಿಚ್ಚಿಟ್ಟರು.
“ನಿತಿನ್ ಈ ವರ್ಷ ಪದವಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಇಟ್ಕೊಂಡಿದ್ದೇವೆ.ಜುಲೈ 4ನೇ ತಾರೀಕು ಅಂತ ನಿರ್ಧಾರ ಮಾಡಿದ್ದೇವೆ.ಹೇಗಾದರೂ ಮಾಡಿ ಚಿತ್ರ ನಟ ರಾಮಕೃಷ್ಣ ಅವರಿಗೆ ನಮ್ಮ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆಸಬಹುದಾ?? ಅವರು ನಿನಗೆ ಹೇಗೋ ತುಂಬಾ ಪರಿಚಯ ಇದ್ದಾರೆ.ನಾನು ಇವತ್ತು ಮೀಟಿಂಗ್ನಲ್ಲಿ ಅದೇ ವಿಷಯ ಚರ್ಚೆ ಮಾಡಿದೆ.ನನ್ನ ಮಾತು ಕೇಳಿ ಅವರೆಲ್ಲ ಕಿಸಕ್ಕನೆ ಎಂದು ನಕ್ಕು ಬಿಟ್ರು ಮಾರಾಯ.. ಅಷ್ಟು ದೊಡ್ಡ ನಟರಿಗೆ ನಾವು ಕರಿಸೋದ ಅಂತ??”
ನಾನು ಏನು ಮಾತನಾಡದೆ ಮೌನಕ್ಕೆ ಜಾರಿದೆ…
“ನಿತಿನ್ ಏನಾದ್ರೂ ಹೇಳು ಮಾರಾಯ?? ರಾಮಕೃಷ್ಣ ಅಂತವರು ನಮ್ಮ ಕಾಲೇಜಿಗೆ ಬಂದರೆ ಅದು ನಮ್ಮ ಹೆಮ್ಮೆ ನಮ್ಮ ಕಾಲೇಜಿನ ಘನತೆನೆ ಹೆಚ್ಚುತ್ತೆ.ದಿನಕರ ದೇಸಾಯಿ ಅಂತ ಮಹನೀಯರು ಕಟ್ಟಿದ ಕಾಲೇಜ್ ಇದು.ಅವರ ಒಂದು ಚೆಂದದ ಪ್ರತಿಮೆಗೆ ರಾಮಕೃಷ್ಣ ಅವರು ಪುಷ್ಪ ಸಮರ್ಪಣೆ ಮಾಡಿದರೆ ಎಷ್ಟು ಚಂದ ಇರುತ್ತೆ ಅಲ್ವಾ.. ಅವರು ಅತಿಥಿಯಾಗಿ ಕೂತ ಫೋಟೋ ಅಂದನು ಕಾಲೇಜಿನ ಶೋಕೇಸ್ ನಲ್ಲಿ ಫ್ರೇಮ್ ಮಾಡಿ ಇಟ್ಕೋಬಹುದು ಮುಂದಿನ ತಲೆಮಾರಿಗೆ ತೋರಿಸಬಹುದು ನಮ್ಮ ಕಾಲೇಜಿಗೆ ಚಲನಚಿತ್ರ ನಟ ಹಿರಿಯ ಕಲಾವಿದ ರಾಮಕೃಷ್ಣನವರು ಅತಿಥಿಯಾಗಿ ಬಂದಿದ್ದರು ಅಂತ. ”

“ಹೌದು ಸರ್. ನಮ್ಮ ಜಿಲ್ಲೆಯ ಕಣ್ಮಣಿಗೆ ಇನ್ನೊರ್ವ ಜಿಲ್ಲೆಯ ಕಣ್ಮಣಿಯಿಂದ ಗೌರವ ಸಮರ್ಪಿಸಿದ ಹಾಗೆ”
“ಅವರು ಅತಿಥಿಯಾಗಿ ಬಂದ್ರೆ ಎಲ್ಲಾ ರೀತಿಯ ಸೌಕರ್ಯ ಕಾಲೇಜು ಕೊಡತ್ತೆ.ಕಾರ್ ನಿಂದ ಹೋಗೋ ಬರೋ ವ್ಯವಸ್ಥೆ ಹಿಡಿದು ಊಟ ತಿಂಡಿವರೆಗೂ ಕಾಲೇಜು ನೋಡಿಕೊಳ್ಳತ್ತೆ.ರಾಮಕೃಷ್ಣ ಅವರಿಗೆ ಕಲ್ಪಿಸಬೇಕಾದ ಎಲ್ಲಾ ಸೌಲಭ್ಯವನ್ನು ತುಂಬಾ ಅಚ್ಚುಕಟ್ಟಾಗಿ ಕಲ್ಪಿಸೋಣ. ನಿನಗೂ ಗೊತ್ತು ಹಾಗೆಲ್ಲ ಅವರು ಎಲ್ಲರೂ ಕರೆದರೆ ಬರೋದಿಲ್ಲ.ನನಗಂತೂ ತುಂಬಾ ಆಸೆ ಇದೆ ಅವರನ್ನು ಕರೆಸಬೇಕು ಅಂತ.ಹೇಗಾದರೂ ಮಾಡಿ ಒಂದು ವ್ಯವಸ್ಥೆ ಮಾಡು”
“ಸರಿ.ಒಂದೆರಡು ದಿನ ಸಮಯ ಕೊಡಿ”
ಸಂಜೆ ರಾಮಕೃಷ್ಣ ಅವರಿಗೆ ಕರೆ ಮಾಡಿ ವಿಷಯ ಪ್ರಸ್ತಾಪಿಸಿದೆ.
“ಅಯ್ಯೋ ನಿತಿನ್ ಮೂರನೇ ತಾರೀಕು ಮತ್ತೆ ಬೆಂಗಳೂರಿಗೆ ಹೋಗಬೇಕಲ್ಲಪ್ಪ.ಅಜಯ್ ರಾವ್ ಅವರದು ಸಿನಿಮಾದಲ್ಲಿ ನಂದು ಒಂದು ಪ್ರಮುಖ ಪಾತ್ರ ನಂದು.ಡಬ್ಬಿಂಗ್ ಬೇರೆ ನಡಿತಾ ಇದೆ. ನಾಳೆ ಬೆಳಗ್ಗೆ ಕರೆ ಮಾಡು ಏನು ಆಗುತ್ತೆ ಹೇಳುತ್ತೇನೆ.”
“ರಾಮ್ ಕಿ ಸರ್, ಪಾಪ ಅವರು ತುಂಬಾ ಪ್ರೀತಿಯಿಂದ ಒತ್ತಾಯ ಮಾಡ್ತಿದ್ದಾರೆ.ನಾಲ್ಕನೇ ತಾರೀಕು ನೋಡಿ. ನಿಮಗೂ ನಾನು ಒತ್ತಾಯ ಮಾಡೋದಿಲ್ಲ. ಏಕೆಂದರೆ ನಿಮ್ಮ ಕೆಲಸ ಮುಖ್ಯ ಅಲ್ವಾ”
“ದಿನಕರ್ ದೇಸಾಯಿ ಅವರು ಕಟ್ಟಿದ ಕಾಲೇಜ್ ಅಂತಿಯಾ. ಅಂತ ದೊಡ್ಡ ಮನುಷ್ಯರು ಕಟ್ಟಿದ ಕಾಲೇಜಿಗೆ ನನಗ್ಯಾಕಪ್ಪ ಕರೀತೀಯ?? ನನಗೇನು ಯೋಗ್ಯತೆ ಇದೆ ಅಂತ”
ಏನು ಮಾತನಾಡದೆ ಅವಕ್ಕಾದೆ.ಮನಸಲ್ಲೇ ಮಾತೊಂದು ಮನೆ ಮಾಡಿದ್ದು ನಿಜ. ಅಯ್ಯೋ ದೇವರೇ ಈ ವ್ಯಕ್ತಿ ಹೇಗೆ??ಇಷ್ಟೊಂದು ಸರಳ?? ಹಮ್ಮು ಬಿಮ್ಮು ಇಲ್ವೇ ಇಲ್ಲ ಅಲಪ್ಪ ಎಷ್ಟು ಸಿಂಪಲ್ ಅಪ್ಪ ಈ ವ್ಯಕ್ತಿ ಅಂತ…
“ಅವರು ಸಾಧನೆಯಲ್ಲಿ ವ್ಯಕ್ತಿತ್ವ ಎರಡರಲ್ಲಿ ದೊಡ್ಡ ವ್ಯಕ್ತಿ ನೀವು ಕೂಡ ಸರ್ “..
“ಹಾಹಾಹಾ ಹ್ಮಹ್ಮ್..ಸರಿ ನಾಳೆ ಬೆಳಗ್ಗೆ ಕರೆ ಮಾಡಿ. ಹಿಂದಿನ ದಿನ ಅಲ್ಲ ನಾನಲ್ಲಿ ಬಂದಿರೋಕೆ ಆಗೋದಿಲ್ಲ ಮನೇಲಿ ಮಿಸಸ್ ಒಬ್ಳೆ ಆಗ್ತಾಳೆ.ಮತ್ತೆ ತೋಟದ್ ಕೆಲಸ ಬೇರೆ ಇದೆ. ನಾಯಿಗಳಿಗೆ ಆಹಾರ ಕೊಡ್ಬೇಕು ಎಲ್ಲ ಜವಾಬ್ದಾರಿ ಇದೆ. ನಾಳೆ ಕಾಲ್ ಮಾಡಿ…..ಶುಭಾಶಯಗಳು ”
ಎಂದು ಮರು ಮಾತನಾಡದೆ ಫೋನ್ ಇಟ್ಟರು.
ಅವರ ಮಾತಿನಂತೆ ಪುನಃ ಬೆಳಗ್ಗೆ ಕರೆ ಮಾಡಿದೆ.ಫೋನ್ ಸ್ವೀಕರಿಸಿ “ನಿತಿನ್ ನೋಡಿ ದೇಸಾಯಿಯವರ ಕಾಲೇಜಿನ ಸಲುವಾಗಿ ನನ್ ಕಾರ್ಯಕ್ರಮನ ನಾನು ಮುಂದೆ ಹಾಕುತ್ತಿದ್ದೇನೆ ನಾಲ್ಕನೇ ತಾರೀಕು ಪಕ್ಕನ ಎಷ್ಟು ಗಂಟೆಗೆ??”
“ಬೆಳಿಗ್ಗೆ 10 ಗಂಟೆಗೆ ಶುರು ಮಾಡ್ತಾರೆ ಒಂದು ಗಂಟೆ 1:30 ಅಷ್ಟೊತ್ತಿಗೆ ಮುಗಿಸಿ ಬಿಡ್ತಾರೆ”
“ಆ ದೊಡ್ಡ ಮನುಷ್ಯನ ಬಗ್ಗೆ ಮಾತಾಡಬೇಕಲ್ರಿ ಏನಾದ್ರೂ ನೋಟ್ಸ್ ಗಿಟ್ಸ್ ನನ್ ಹೆಂಡ್ತಿ ನಂಬರ್ ಗೆ ವಾಟ್ಸಪ್ ಮಾಡ್ರಿ. ಜಿಲ್ಲೆ ಕಟ್ಟಿದ ಮಹಾನುಭಾವ ಸ್ವಾಮಿ ಅವರು”
“ನಿಮ್ಮ ಅನುಭವನೆ ಹೇಳಿ ಸರ್ ಸಾಕು.ವಿದ್ಯಾರ್ಥಿಗಳ ಕುರಿತು ನಾಲ್ಕು ಮಾತು ಆಡಿದ್ರೆ ಇಡೀ ಕಾಲೇಜ್ ಮಂಡಳಿ ಖುಷಿಯಾಗುತ್ತೆ. ದೇಸಾಯಿಯವರ ಬಗ್ಗೆ ಇಲ್ಲಿತನಕ ನಿಮಗೇನು ಗೊತ್ತು ಅಷ್ಟು ಹೇಳಿ ಸರ್ ಸಾಕು”
“ಸರಿ.ವಿಷ್ಣು ನಾಯಕರು ಅದ್ಯಾವ್ದೋ ಪುಸ್ತಕ ಮಾಡಿದರೆ ನನಗೆ ಜ್ಞಾಪಕ ಆಗ್ತಿಲ್ಲ ಹೆಸರು.ಅವರು ಬೇರೆ ತೀರಿಕೊಂಡ್ರಲ್ಲಪ್ಪ ಪಾಪ ರೀ. ಅವರ ಬರೆದಿರುವ ಪುಸ್ತಕದಲ್ಲಿ ಸ್ವಲ್ಪ ಏನಾದರೂ ಮಾಹಿತಿ ಇದ್ದರೆ ದಯವಿಟ್ಟು ನನ್ನ ಹೆಂಡತಿಗೆ ವಾಟ್ಸಪ್ ಮಾಡಿ”
“ಹೌದು ವಿಷ್ಣು ನಾಯಕ್ರು ದಿನಕರನ ಚೌಪದಿ ಸಂಪಾದಕೀಯ ಕೆಲಸ ಮಾಡಿದ್ದಾರೆ ಅದು ದಿನಕರ್ ದೇಸಾಯಿಯವರ ಕೆನರಾ ವೆಲ್ಫೇರ್ ಟ್ರಸ್ಟ್ ಮುದ್ರಿಸಿದೆ.”
” ಸ್ವಲ್ಪ ಕಳಿಸಿಕೊಡ್ ಅಲ್ಲ ಮತ್ತೆ”
“ಹಾ ಸರ್ ಸಂಜೆ ನಿಮಗೆ ಕಳಿಸ್ತೀನಿ ಎಲ್ಲ”
” ಹಾಗೆ ನಿಮ್ಮ ದೇಸಾಯಿ ಅವರ ಕಾಲೇಜಿನಲ್ಲಿ ಈಗ ಪ್ರಿನ್ಸಿಪಾಲ್ ಯಾರಿದ್ದಾರೆ?? ”
” ಲಿಂಗರಾಜ್ ವಸ್ತ್ರದ್ ಅಂತ ಸರ್ ಮೂಲತಃ ಗದಗದವರು.ಮೂವತ್ತೊಂದು ವರ್ಷದಿಂದ ಅಲ್ಲಿ ಕೆಲಸ ಮಾಡ್ತಾ ಇದ್ದಾರೆ ”
” ಒಂದ್ಸಾರಿ ಫೋನ್ ಮಾಡಿ ಅವರಿಗೆ ನನ್ನತ್ರ ಮಾತಾಡ್ಸಿ. ನಾನು ಅವರ ಬಳಿ ಮಾತನಾಡಬೇಕು”
” ಸರಿ ಸರ್ ಖಂಡಿತವಾಗಿ ಮಾತನಾಡಿಸುತ್ತೇನೆ “…
ಅಂತೂ ರಾಮಕೃಷ್ಣ ಅವರು ಕಾರ್ಯಕ್ರಮಕ್ಕೆ ಬರೋದಂತು ಖಾತರಿಯಾಯಿತು.ಪುನಃ ಗೃಂಥಪಾಲಕ ನಂಜುಂಡಯ್ಯನವರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದಾಗ ತುಂಬಾನೇ ಖುಷಿಪಟ್ಟರು.
“ಸರ್ ಪ್ರಿನ್ಸಿಪಾಲ್ ಅವರ ಜೊತೆ ರಾಮಕೃಷ್ಣ ಮಾತಾಡ್ಬೇಕಂತೆ. ಸಂಜೆ ಹೇಗಿದ್ರು ಮೈದಾನದಲ್ಲಿ ಸಿಗೋಣ ಸರ್. ಅಲ್ಲೇ ಫೋನ್ ಕರೆ ಮಾಡಿ ಮಾತಾಡಿಸಿದ್ರಾಯ್ತು. ಹೇಗೋ ಪ್ರಿನ್ಸಿಪಾಲ್ ವಸ್ತ್ರದ್ ಸರ್ ಅಲ್ಲಿ ಬರ್ತಾರಲ್ಲ ವಾಕಿಂಗ್ ಅಂತ.ಅಲ್ಲೇ ಮಾತನಾಡೋಣ ”
“ಸರಿ”…
ಸಂಜೆ ಪ್ರಾಚಾರ್ಯರಾದ ವಸ್ತ್ರದ್ ಮತ್ತು ಗ್ರಂಥಪಾಲಕರಾದ ನಂಜುಂಡಯ್ಯ ಇಬ್ಬರಿಗೂ ಭೇಟಿಯಾಗಿ ರಾಮಕೃಷ್ಣ ಅವರಿಗೆ ಕರೆ ಮಾಡಿ ವಿಷಯವನ್ನೆಲ್ಲ ಪರಸ್ಪರ ಮಾತನಾಡಿಸಿದೆ.ಮಾರನೇ ದಿನ ಜುಲೈ 4ನೇ ತಾರೀಕು ಬೆಳಿಗ್ಗೆ ರಾಮಕೃಷ್ಣ ಅವರು ಬರೋದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣಗೊಂಡಿತು..
ಜುಲೈ 02,2024…
ನಂಜುಂಡಯ್ಯನವರು “ನಿತಿನ್, ಬೆಳಿಗ್ಗೆ ರಾಮಕೃಷ್ಣ ಅವರಿಗೆ ಕರೆದುಕೊಂಡು ಬರೋ ಜವಾಬ್ದಾರಿ ನಿಮ್ಮದು ದಯವಿಟ್ಟು ಇಲ್ಲ ಅಂತ ಹೇಳಬೇಡಿ. ನಾವು ಯಾರಾದ್ರೂ ಹೋದರೆ ಮತ್ತೆ ಅವರು ಸ್ವಲ್ಪ ಕಿರಿಕಿರಿ ಆಗಬಹುದು ಹೇಳಿಕೇಳಿ ಸಿನಿಮಾ ನಟರು ಅವರು ಚಿಕ್ಕ ಪುಟ್ಟ ಸಾಧಕರಲ್ಲ.ಯಾಕಂದ್ರೆ ನಮ್ಮೆಲ್ಲರ ಪರಿಚಯ ಅವರಿಗಿಲ್ಲ. ಯಾರ್ಯಾರೋ ಬಂದ್ ಬಿಟ್ಟಿದ್ದಾರೆ ಅಂತ ಅವರು ಅನ್ಕೋಬಾರ್ದು.. ಹೊಸಬರ ಜೊತೆ ಅಂತವರು ಬೆರೆಯೋದು ಸ್ವಲ್ಪ ಕಷ್ಟ.. ನೀನಿದ್ಯಲ್ಲ ಹೇಗಾದರೂ ಒಂದು ಸಹಾಯ ಮಾಡು….ಸ್ವಲ್ಪ ಹೆಲ್ಪ್ ಮಾಡಿ ಪಾ ಪ್ಲೀಸ್.”
“ಅಯ್ಯೋ ಸರ್, ನೀವು ತುಂಬಾ ಬಲವಂತ ಮಾಡಿದ್ರಿ ಅಂತ ಅವರಿಗೆ ಹೇಗೋ ಒಪ್ಪಿಸಿದ್ದೇನೆ ಅವರು ಚಲನಚಿತ್ರದ ಡಬ್ಬಿಂಗ್ ಕೆಲಸ ಬೇರೆ ಮುಂದೆ ಹಾಕಿ ದೇಸಾಯಿ ಅವರ ಹೆಸರಿನ ಮೇಲಿನ ಅಭಿಮಾನದಿಂದ ಕಾಲೇಜಿಗೆ ಅತಿಥಿಯಾಗಿ ಬರಲು ತಯಾರಾಗಿದ್ದಾರೆ. ನೀವು ಹೇಳಿದಂಗೆ ನನ್ನ ಕೆಲಸ ನಾನು ಮಾಡಿದ್ದೇನೆ.ಇಷ್ಟರ ಮೇಲೆ ನಿಮಗೆ ಬಿಟ್ಟಿದ್ದು. ನನಗೆ ಬೆಳಿಗ್ಗೆ ಬೇರೆ ತುಂಬಾ ಕೆಲಸ ಇರುತ್ತೆ ಸರ್ ಸಂಜೆ ತನ್ಕನು ಕೆಲಸ”
“ನಿತಿನ್ ಒಂದಿನ ಅಜೆಸ್ಟ್ ಮಾಡ್ಕೋಪ್ಪ ಹೇಗಾದರೂ ಮಾಡಿ.ನಿಮ್ಮನೆಗೆ ಬೆಳಗ್ಗೆ ಕಾಲೇಜಿನಿಂದ ಕಾರು ಕಳಿಸಿಕೊಡುತ್ತೇವೆ.ಬೆಳಿಗ್ಗೆ ಹತ್ತಕ್ಕೆ ಬೇರೆ ಪ್ರೋಗ್ರಾಮ್. ನನಗೆ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಕೆಲಸ ಇದೆ. ಎಲ್ಲಾನು ನಾನೇ ಮ್ಯಾನೇಜ್ ಮಾಡಬೇಕು. ಬೇರೆ ಯಾರು ಸ್ಟಾಫ್ ಫ್ರೀ ಇಲ್ಲ. ಬೆಳ್ ಬೆಳಿಗ್ಗೆ ಸೇರ್ಸಿ ಅಂದ್ರೆ 90 ಕಿಲೋಮೀಟರ್ ದೂರ.ಹೋಗಿ ಬರೋತನಕಾನೆ ಸಿಕ್ಕಾಪಟ್ಟೆ ಸುಸ್ತಾಗುತ್ತೆ. ದಯವಿಟ್ಟು ಪಾ ದಯವಿಟ್ಟು”.
“ಸರಿ.ಇಷ್ಟು ಕೇಳಿಕೊಳ್ಳುತ್ತಿದ್ದೀರಾ.ನಾನೇ ಹೊರಡ್ತೀನಿ ಬಿಡಿ.”
“ಒಳ್ಳೆ ಪ್ರೊಫೆಷನಲ್ ಡ್ರೈವರ್ ಗೆ ಕಳಿಸಿಕೊಡ್ತೇವೆ ಕಾಲೇಜು ವತಿಯಿಂದ.ಬೆಳಿಗ್ಗೆ ನಾಲ್ಕಕ್ಕೆ ಬಿಟ್ಟರೆ ಶಿರಸಿ ತಲುಪುವುದಕ್ಕೆ ಆರೂವರೆ ಆಗುತ್ತೆ.ಯಾಕಂದ್ರೆ ರಸ್ತೆ ಬೇರೆ ನಿರ್ಮಾಣ ಮಾಡ್ತಾ ಇದ್ದಾರೆ ಜೊತೆಗೆ ಈಗ ಜೋರು ಮಳೆ. ಘಾಟ್ ಸೆಕ್ಷನ್ ಬೇರೆ.ಮತ್ತೆ ಮಧ್ಯ ಮರದ ಹೆಟ್ಟೆಯಲ್ಲ ತುಂಡು ತುಂಡಾಗಿ ಬಿದ್ಬಿಡತ್ತೆ. ಡಾಂಬರ್ ಬೇರೆ ಕಿತ್ತು ಹೋಗಿದೆ ತುಂಬಾ ಜೋರು ಮಳೆ ಆದರೆ ನೀರ್ ಬೇರೆ ನಿಂತ್ಕೊಂಡು ರೋಡೆ ಬ್ಲಾಕ್ ಆಗ್ಬಿಡುತ್ತೆ. ಅದಕ್ಕೆ ಸ್ವಲ್ಪ ನಿಧಾನ ಆಗಬಹುದು”
“ಸರಿ ಸರಿ.. ಬೆಳಗ್ಗೆ ನಾಲ್ಕಕ್ಕೆ ಎದ್ದು ಹೊರಡಬೇಕು ಸ್ವಲ್ಪ ಕಷ್ಟನೇ ಆದ್ರೂ ನಿಮ್ ಸಲುವಾಗಿ ಬರ್ತೇನೆ”
“Thankyou so much paa”
ರಾಮಕೃಷ್ಣ ಅವರು ಇರೋದು ಶಿರಸಿಯಲ್ಲಿ.ಶಿರಸಿಯಿಂದ ಸ್ವಲ್ಪ ದೂರ ಇರುವ ಒಂದು ಕಗ್ಗಾಡಿನಿಂದ ಕೂಡಿರುವ ಹಳ್ಳಿ. ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದೆ ಹಸಿರ ಒಡಲು. ನಾಮದೇಯ ಜೊತೇನೆ ಕೂಡಿಕೊಂಡಿದೆ ಊರಿನ ಹೆಸರು. ನೀರ್ನಳ್ಳಿ.
ಯಾಕೆನೋ ಬೆಳಿಗ್ಗೆ 3:30 ನೇ ಎಚ್ಚರ ಆಗಿಬಿಡ್ತು.ಥಟಕ್ಕನೆ ಚಾಲಕರಾದ ಗುರು ಅವರಿಗೆ ಕರೆ ಮಾಡಿದೆ.ನಾನು ನಾಲ್ಕು ಗಂಟೆಯ ಹೊತ್ತಿಗೆ ಗೋಕರ್ಣದ ಮಾರ್ಗದ ಮಧ್ಯ ನಿಂತಿರುತ್ತೇನೆ ಅಲ್ಲೇ ಬಂದುಬಿಡಿ ಹೊರಡೋಣ ಅಂದೆ. ಅವರು ಸರಿ ಎಂದು ಹೇಳಿ ಫೋನ್ ಇಟ್ಟರು.ಅರೆಬರೆ ನಿದ್ದೆಯಿಂದ ತಯಾರಾಗಿ ಜೋರು ಮಳೆಗೆ ತಡೆಯೊಡ್ಡಿ ಛತ್ರಿ ಹಿಡಿದು ಆವಳಿಸುತ್ತಾ ನಿಂತಿದ್ದೆ.
ಸರಿಯಾಗಿ ನಾಲ್ಕು ಹತ್ತರ ಹೊತ್ತಿಗೆ ಕೆಂಪು ಬಣ್ಣದ ಬ್ರೀಜಾ ಕಾರ್ ಬಂತು. ನಮಸ್ಕಾರ ಗುರು ಅಣ್ಣ ಎಂದು ಹೇಳಿ ನಾನು ಕಾರ್ ಏರಿ ಕುಳಿತೆ.”ಇದೀಗ ಸರಿಸುಮಾರು ತೊಂಬತ್ತು ಕಿಲೋಮೀಟರ್ ಪ್ರಯಾಣ ಮಾಡಬೇಕು.ಶಿರಸಿ ತಲುಪುವುದಕ್ಕೆ ಆರೂವರೆ ಆಗಬಹುದು. ನನಗೆ ಬೇರೆ ನಿದ್ದೆ ಆಗಿಲ್ಲ ಸ್ವಲ್ಪ ನಾನು ನಿದ್ದೆ ಮಾಡ್ತೇನೆ”ಎಂದು ಹೇಳಿ ನಿದ್ದೆಗೆ ಜಾರಿದೆ.

ನೂರು ಕಿಲೋಮೀಟರ್ ವೇಗದಲ್ಲಿ ಕ್ರಮಿಸಿತ್ತು ಕಾರು. ಜೋರಾದ ಸಿಡಿಲು ಬರಸಿಡಿಲ ಶಬ್ದ ಕೇಳಲಾರಂಭಿಸಿತು.ಸಿಡಿಲುತಲೆ ಮೇಲೆ ಹೊಡೆದಂತೆ ಭಾಸವಾಗಿ ವಿದ್ಯುತ್ ತಂತಿ ಸ್ಪರ್ಶಿಸಿದಂತೆ ತಟಕ್ಕನೆ ಎದ್ದುಬಿಟ್ಟೆ ಮಲಗಿದ್ದವನು.ಕಾರಿನ ಕಿಟಕಿ ತೆಗೆದು ನೋಡಿದಾಗ ರಣಭೀಕರ ಮಳೆ ಗಜಗಾತ್ರದಲ್ಲಿ ಭೂಮಿಯನ್ನು ಸ್ಪರ್ಶಿಸುತ್ತಿತ್ತು.ನಿರಂತರವಾಗಿ ಎಡಬಿಡದೆ ಸುರಿಯ ಹತ್ತಿತು ಮಳೆ.ಎತ್ತ ನೋಡಿದರೂ ಮಿಂಚಿನ ಸಂಚಾರ.ನಾವು ಈ ಗಾಳಿ ಮಳೆಯನ್ನು ದಾಟಿ ಶಿರಸಿ ತಲುಪುತ್ತೇವೆ ಎನ್ನುವ ಅನುಮಾನ ದಟ್ಟವಾಗುತ್ತಾ ಹೋಯಿತು.ಮನಸ್ಸಿನಲ್ಲಿ ಏನೋ ಕಳೆದುಕೊಂಡ ವೇದನೆ ತವಕಿಸುತ್ತಿತ್ತು.
“ಸರ್ ಆರಾಮಾಗಿ ನಿದ್ದೆ ಮಾಡಿ ನನಗೆ ಇವೆಲ್ಲ ಕಾಮನ್. ನಾನು ಬೇರೆ ಬೆಳಿಗ್ಗೆ ಟ್ರಿಪ್ ಹೊಡೆದು ಧರ್ಮಸ್ಥಳದಿಂದ ಒಂದು ಗಂಟೆ ರಾತ್ರಿಗೆ ಮನೆಗೆ ಬಂದಿದ್ದೇನೆ ನಿದ್ದೆ ಮಾಡಲಿಲ್ಲ.ನಾಳೇನು ಮತ್ತೆ ಮಂತ್ರಾಲಯಕ್ಕೆ ಹೋಗಬೇಕು ಅಲ್ಲಿನೂ ಒಂದು ಫ್ಯಾಮಿಲಿ ಹೋಗ್ತಾ ಇದೆ ಹಾಗಾಗಿ”
“ಸರಿ ಅಣ್ಣ ಮಲಗ್ತೀನಿ “ಎಂದು ಹೇಳಿದ ಹತ್ತೆ ಹತ್ತು ನಿಮಿಷಕ್ಕೆ ಗಾಢ ನಿದ್ರೆಗೆ ಜಾರಿದೆ.ಕಾರ್ ಜೋರಾಗಿ ಚಲಿಸಲಾರಂಭಿಸಿತು.ಎಚ್ಚರ ಆಗಿ ಕಣ್ಣು ತೆಗೆದವನಿಗೆ ಮುಂದೆ ಕಂಡಿದ್ದೆ ಶಿರಸಿಯ ನಿಲೇಕಣಿ ಪಟ್ಟಣ.ಸರಿಯಾಗಿ ಆರು ನಲವತ್ತೈದರ ಹೊತ್ತಿಗೆ ಶಿರಸಿಯನ್ನು ತಲುಪಿತ್ತು ನಮ್ಮ ಕಾರ್. ಅಷ್ಟು ಅಚ್ಚುಕಟ್ಟಾಗಿ ಕಾರ್ ಚಲಾಯಿಸಿದ್ದರು ಚಾಲಕ ಗುರು.ಅಪ್ಪ ಅಂತು ಯಾವುದೇ ವಿಘ್ನಗಳಿಲ್ಲದೆ ಬಂದು ತಲುಪಿದ್ವಿ ಎಂಬ ಸಮಾಧಾನದ ನಿಟ್ಟುಸಿರು ಬಿಟ್ಟೆ.
ಹುಲಿಕಲ್ ಮಾರ್ಗದಿಂದ ರಾಮಕೃಷ್ಣ ಅವರು ವಾಸವಿರುವ ಹಳ್ಳಿಗೆ ಸರಿಯಾಗಿ ಏಳು ಗಂಟೆಗೆ ತಲುಪಿತ್ತು ನಮ್ಮ ಕಾರು.ಮತ್ತದೇ ಜೋರು ಮಳೆ ಬರಲಾರಂಭಿಸಿತು. ಛತ್ರಿ ಏರಿಸಿ ರಾಮಕೃಷ್ಣ ಅವರ ತೋಟದಿಂದ ನೇರವಾಗಿ ತೋಟದ ಮನೆಯತ್ತ ಹೆಜ್ಜೆ ಇಟ್ಟೆ.ಅವರೇ ಪ್ರೀತಿಯಿಂದ ಸಾಕಿದ ಏಳೆಂಟು ನಾಯಿಗಳು ಬವ್ ಬವ್ ಎಂದು ಭವ್ಯ ಸ್ವಾಗತ ಕೋರಿದವು.ನಾಯಿಗಳ ಕಿರುಚಾಟ ಕೇಳಿ ಒಳಗಿನಿಂದ ರಾಮಕೃಷ್ಣ ಅವರ ಮಡದಿ ಮಂಗಲಮ್ಮನವರು ಯಾರು ಬಂದಿದ್ದಾರೆ ಅಂತ ನೋಡಲು ಹೊರಗೆ ಬಂದರು.ನಾಯಿಗಳ ಕರ್ಕಶ ಶಬ್ದ ಇನ್ನೂ ಜೋರಾಯ್ತು.
” ಓ ನಿತಿನ್ ಬಂದೆ ಏನಪ್ಪಾ ನೀನೇ ಬಂದುಬಿಟ್ಟಿಯ ಕಾಲೇಜ್ ನವರು ಯಾರು ಬಂದಿಲ್ವಾ?? ”
” ಇಲ್ಲ ಮಂಗಲ ಅಮ್ಮ. ಕಾಲೇಜ್ ನವರು ಕಾರು ಕಳುಹಿಸಿ ಕೊಟ್ಟಿದ್ದರು ನನಗೆ ಕರ್ಕೊಂಡು ಬರಬೇಕು ಅಂತ ತುಂಬಾ ಒತ್ತಾಯ ಮಾಡಿದ್ರು.ಕಾರ್ ಗೇಟ್ನಿಂದ ಆಚೆ ನಿಂತಿದೆ. ನನಗೂ ಸ್ವಲ್ಪ ನಿದ್ದೆ ಆಗಿದೆ ಸರ್ ಏನ್ ಮಾಡ್ತಿದ್ದಾರೆ?? ”
“ಅವರು ಸ್ನಾನಕ್ಕೆ ಹೋಗಿದ್ದಾರೆ ಇನ್ನೊಂದು ಹತ್ತು ನಿಮಿಷ ಬರ್ತಾರೆ.ಒಳಗೆ ಬಾ ಪಾ.ಡ್ರೈವರ್ ಅವರನ್ನು ಕರಿಯೊಳಗೆ. ಪಾಪ ಮಳೆಲಿ ಏನ್ ಮಾಡ್ತಾರೆ ಅವರು”
ಸರಿ ಎಂದು ಒಳಗೆ ಹೊರಟು ಫೋನ್ ಕರೆ ಮಾಡಿ ಡ್ರೈವರ್ ಅವರನ್ನು ಮನೆ ಹತ್ತಿರ ಬರ ಹೇಳಿದೆ.ಒಳಗಿನ ಕೊಠಡಿಯಿಂದ ತಲೆ ಬಾಚಿಕೊಳ್ಳುತ್ತಾ ಬಿಳಿ ಜುಬ್ಬ ಧರಿಸಿದ ರಾಮಕೃಷ್ಣ ಅವರು ” ಹ ಹ ಬಂದ್ಬಿಟ್ರಾ very good”ಅಂದ್ರು
“ಹೌದು ಸರ್” ಎಂದು ಕಿರುನಗೆ ಬೀರಿದೆ.ಮಂಗಲಮ್ಮ ನವರು ಬಿಸಿ ಬಿಸಿ ಚಹಾದ ಜೊತೆಗೆ ಉದ್ದಿನ ದೋಸೆ ಮಾಡಿಕೊಟ್ಟರು.ಪ್ರಯಾಣದಲ್ಲಿ ದಣಿದಿದ್ದ ನನಗೆ ಸ್ವಲ್ಪ ಮನಸ್ಸು ನಿರಾಳವಾಯಿತು.ಸರಿ ಹೊರಡೋಣ ಅಂತ ಹೇಳಿ ಸರಿಯಾಗಿ ಏಳು 15 ರ ಹೊತ್ತಿಗೆ ರಾಮಕೃಷ್ಣನವರ ಮನೆಯಿಂದ ಅಂಕೋಲಾಗೆ ಪ್ರಯಾಣ ಪ್ರಾರಂಭವಾಯಿತು…
ಕಾರ್ ನಲ್ಲಿ ಪುಟ್ಟಣ್ಣನವರೊಟ್ಟಿಗೆ,ರಾಜಕುಮಾರ್ ರವರೊಟ್ಟಿಗೆ,ಬಿ ಸರೋಜಾ ದೇವಿಯೊರೊಟ್ಟಿಗೆ, ರಜನಿಕಾಂತ್,ವಿಷ್ಣುವರ್ಧನ್ ರವರೊಟ್ಟಿಗೆ ಶಂಕರ್ ನಾಗ್ ಸಾವ್ಕಾರ್ ಜಾನಕಿ ಪಂಡರಿಬಾಯಿ ಕೆರೆಮನೆ ಶಂಭು ಹೆಗಡೆ ಹೊಸ್ತೋಟ ಮಂಜುನಾಥ ಭಾಗವತ ಗುಬ್ಬಿ ವೀರಣ್ಣ ಮೊದಲಾದ ಘಟಾನುಘಟಿಗಳ ಜೊತೆ ಕಳೆದ ನೆನಪುಗಳನ್ನೆಲ್ಲ ಮೆಲುಕು ಹಾಕುತ್ತಾ ಯೌವ್ವನದ ದಿನಗಳನ್ನೆಲ್ಲ ನೆನಪಿಸಿಕೊಂಡರು..
ರಾಜಕುಮಾರ ರೊಟ್ಟಿಗೆ ತಮ್ಮನ ಪಾತ್ರದಲ್ಲಿ ಲವಕುಶ ಚಿತ್ರದಲ್ಲಿ ಅಭಿನಯಿಸಬೇಕಿತ್ತು ಅವರು ಅಣ್ಣ ಶ್ರೀರಾಮಚಂದ್ರ ನಾನು ಲಕ್ಷ್ಮಣ… ಎಂದು ದುರದೃಷ್ಟ ಸ್ವಾಮಿ ಆ ಚಿತ್ರದಲ್ಲಿ ನಿಂತುಹೋಗ್ಬಿಡ್ಬೇಕಾ??
ಇದೆ ಕೆ ಬಾಲಚಂದರ್ ನಿರ್ದೇಶನದಲ್ಲಿ ತಮಿಳಿನ ಚಿತ್ರವೊಂದು ಸೆಟ್ ಏರಿತ್ತು. ರಜನಿಕಾಂತ್ ನನ್ನ ಅಣ್ಣನ ಪಾತ್ರ ನಾನು ತಮ್ಮ ಸರ್ಕಸ್ ಕಂಪನಿಯೊಂದರಲ್ಲಿ ತಾಯಿ ಕೆಲಸ ಮಾಡುತ್ತಿರುತ್ತಾಳೆ ಆಗ ಅಣ್ಣ ತಮ್ಮ ಬೇರೆಯಾಗ್ ಬಿಡ್ತೀವಿ ಕ್ಲೈಮ್ಯಾಕ್ಸ್ ನಲ್ಲಿ ಸಂದಿಸ್ತೀವಿ ಅನ್ನೋ ಕಥೆ.. ಇಲ್ಲೂ ಕೂಡ ಚಿತ್ರೀಕರಣ ಪ್ರಾರಂಭದ ಮುಂಚೆನೇ ಚಿತ್ರ ರದ್ದಾಗಿ ಬಿಡ್ತು.. ಈ ತರ ಸುಮಾರು ಕಥೆಗಳಿವೆ.. ಎಂದು ಹೇಳಿ ತಮ್ಮ ಮಾತು ಮುಂದುವರಿಸುವಷ್ಟರಲ್ಲಿ ಕಾರು ಕತಗಾಲದ ಸಮೀಪ ಬಂದು ತಲುಪಿತ್ತು.
ಯಾರೋ ಬಸ್ನಲ್ಲಿದ್ದ ಪ್ರಯಾಣಿಗ ನಮ್ಮ ಹತ್ತಿರ ಕೈ ಸನ್ನೆ ಮಾಡಿ ತುಂಬಾ ನೀರು ನಿಂತುಬಿಟ್ಟಿದೆ ಮುಂದೆ ಕಾರು ಹೋಗೋದಿಲ್ಲ ಎಂದುಬಿಟ್ಟರು.ಸಮಯ ಸರಿಯಾಗಿ ಬೆಳಗ್ಗೆ 8:50.ಹತ್ತು ಗಂಟೆಗೆ ನಾವಲ್ಲಿ ಇರಬೇಕಿತ್ತು. ನನಗೆ ಸ್ವಲ್ಪ ಒತ್ತಡ ಶುರುವಾಯಿತು.ಈಗ ಏನು ಮಾಡೋಕಾಗೋದಿಲ್ಲ.
ಶಿರಸಿ ಮಂಜುಗುಣಿ ಮಾರ್ಗದಿಂದ ಎಡಕ್ಕೆ 30 ಕಿಲೋಮೀಟರ್ ಯಾಣ ಮಾರ್ಗವಾಗಿ ಕ್ರಮಿಸಿದರೆ ಅಲ್ಲಿ ಹಿಲ್ಲೂರು ತಿರುವು ಸಿಗುತ್ತದೆ. ಅಲ್ಲಿಂದ ನೇರವಾಗಿ ಬೇಡ್ತಿ ಹೊಳೆ ದಾಟಿ 2 km ಪ್ರಯಾಣಿಸಿದರೆ ಅಂಕೋಲಾ ಹುಬ್ಬಳ್ಳಿ ರಾಷ್ಟ್ರೀಯ ದಾರಿ ಸಿಗುತ್ತದೆ ಆ ಮಾರ್ಗದಿಂದ ತೆರಳಿದರಾಯ್ತು ಎಂದು ನಾನು ಮತ್ತೆ ಡ್ರೈವರ್ ನಿರ್ಧರಿಸಿದೆವು.ಕೊನೆಗೂ ಯಾವುದೇ ತೊಂದರೆ ತಕರಾರುಗಳಿಲ್ಲದೆ ಮಂಜುಗುಣಿಯತ್ತ ತಲುಪಿತ್ತು ನಮ್ಮ ಪ್ರಯಾಣ.ಮಂಜುಗುಣಿಯ ವೆಂಕಟೇಶನಿಗೆ ಕೈಮುಗಿದು ಕೂತಲ್ಲಿಯೇ ಕೈಮುಗಿದು ಸರಿಯಾಗಿ 9:30 ಹೊತ್ತಿಗೆ ಅಂಕೋಲಾ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ತಲುಪಿದೆವು.

“ರಾಮ್ ಕಿ ಸರ್,ಅಯ್ಯೋ ಈ ತಿರುವಿನಲ್ಲಿ ನನಗೆ ವಾಕರಿಕೆ ಬಂದಂಗೆ ಆಯ್ತು ಹೊರಗೆ ನೋಡಿದರೆ ಜೋರು ಮಳೆ ನಿರ್ಜನ ಪ್ರದೇಶ ಅರಣ್ಯದ ಗಿಡಮರಗಳೆ ಸಪ್ತಸ್ವರ ಹಾಡ್ತಾ ಇದ್ದಾವೆ..”
ನಗುತ್ತಾ “ಏನ್ರಿ ನಿತಿನ್ ಅಪ್ಪ ಅಮ್ಮ ಹುಡುಗಿ ನೋಡಿಲ್ವಾ ನಿಮಗೆ ”
ಸರ್ “ನಮ್ಮಮ್ಮ ತೀರಿಕೊಂಡು ಆಗಲೇ 25 ವರ್ಷಗಳಾಯ್ತು..ಈಗಾಗಲೇ ಮೂರು ವರ್ಷ ಆಯ್ತು ಉದ್ಯೋಗ ಜೀವನ ಆರಂಭ ಮಾಡಿ ಸ್ವಲ್ಪ ವರ್ಷ ಹೋಗ್ಲಿ ನಂತರ ನೋಡೋಣ ಅವೆಲ್ಲ ಇರೋದೇ ”
ತಕ್ಷಣ ದಿಗ್ಮೂಢರಾಗಿ ನನ್ನ ಮುಖವನ್ನು ದಿಟ್ಟಿಸುತ್ತಾ ಏನು ಮಾತನಾಡದೆ ಅವಕ್ಕಾಗಿ ಸುಮ್ಮನೆ ಕುಳಿತರು..
ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ಹಾಡಿದೆಯಲ್ಲ ಎಸ್ಪಿಬಿ ಸರ್ ಸಾಹಿತ್ಯಕ್ಕೆ ಸಂಗೀತಕ್ಕೆ ಯಾವ ರೀತಿಯಾಗಿ ಜೀವ ತುಂಬಿದ್ದಾರೋ ನೀವು ಅಭಿನಯದಲ್ಲಿ ಅದನ್ನು ಸಾಕ್ಷಾತ್ಕಾರಗೊಳಿಸಿ ಇನ್ನು ಇಮ್ಮಡಿಗೊಳಿಸಿದ್ರಿ ಸರ್…
ಅಯ್ಯೋ ಆ ಮಹಾತ್ಮ ನನಗೆ ಹಾಡಿದ್ದಾರೆ ಆ ರೀತಿಯಾಗಿ ಭಾರತ ಸಂಗೀತ ಲೋಕದಲ್ಲಿ ಯಾರ ಹತ್ರನು ಹಾಡೋಕ್ ಸಾಧ್ಯ ಇಲ್ಲ ಬಿಡಿ,ನಾನು ಎಸ್ ಪಿ ಭೇಟಿಯಾದಲೆಲ್ಲ ಇದೇ ವಿಷಯವನ್ನು ಮಾತಾಡ್ತಿದ್ವಿ..
” ತಮಿಳ್ ನಲ್ಲಿ ಕಮಲ್ ಹಾಸನ್ ಕನ್ನಡದಲ್ಲಿ ನೀವು ಪರಕಾಯ ಪ್ರವೇಶವನ್ನು ಮಾಡಿಬಿಟ್ಟಿದಿರಿ…”
“ಮಾಡಿಲ್ಲ ನಮ್ ಕೈಯಲ್ಲಿ ಬಾಲಚಂದರ್ ಮಾಡ್ಸಿದ್ದಾರೆ ಅವರೊಬ್ಬರು ಶಿಲ್ಪಿ ರಿ..”
ಎಂದು ತಮ್ಮ ಅನುಭವದನ್ನು ಮೆಲುಕು ಹಾಕುತ್ತ ಮಾತು ಮುಂದುವರೆಸುವಷ್ಟರಲ್ಲಿ ಅಂಕೋಲಾಗೆ ಬಂದು ತಲುಪಿತ್ತು ನಮ್ಮ ಕಾರ್..
“ಹಲವಾರು ಮೇಳಗಳಲ್ಲಿ ಯಕ್ಷಗಾನ ಕಾರ್ಯಕ್ರಮ ಅಂತ ಅಂಕೋಲೆಗೆ ಪಾತ್ರಧಾರಿಯಾಗಿ ಬರುತ್ತಿದ್ದೆ ಸುಮಾರು ಐದಾರು ವರ್ಷಗಳಾಗಿತ್ತು ಬರದೇನೇ ಮತ್ತೆ. ಇವತ್ತಿಗೆ ಅತಿಥಿಯಾಗಿ ಬಂದಿದ್ದೇನೆ.ಅಂತೂ ಅಂಕೋಲ ನೋಡಿದಾಗೆ ಆಯ್ತು ಬನ್ನಿ ಎಲ್ಲಾದ್ರೂ ತಿಂಡಿ ತಿನ್ನೋಣ”
ಎಂದು ಹೋಟೆಲ್ ಒಂದರಲ್ಲಿ ತಿಂಡಿ ತಿಂದು ಚಾ ಕುಡಿದು ಮುಗಿಸಿದೆವು ನಾನು,ಡ್ರೈವರ್ ಗುರು ಮತ್ತೆ ರಾಮಕೃಷ್ಣನವರು.. ಸರಿಯಾಗಿ 10:00ಗೆ ಕಾಲೇಜಿನ ಮುಂದೆ ವಿದ್ಯಾರ್ಥಿ ವಿದ್ಯಾರ್ಥಿನಿಯವರೆಲ್ಲ ಕಾಲೇಜಿನ ಸಿಬ್ಬಂದಿಗಳೆಲ್ಲ ಹೂ ಬೊಕ್ಕೆ ಹಿಡಿದು ಅತಿಥಿಗಳಿಗೆ ಸ್ವಾಗತ ಕೋರಲೆಂದು ನಿಂತಿದ್ದರು. ರಾಮಕೃಷ್ಣನವರು ಕಾರ್ ನಿಂದ ದು ಇಳಿದಿದ್ದೆ ತಡ ಎಲ್ಲರೂ ಜೋರಾಗಿ ಚಪ್ಪಾಳೆ ಬಾರಿಸಿದರು..
ಪ್ರಾಚಾರ್ಯರದ ವಸ್ತ್ರದ್ರವರು “ಬನ್ನಿ ಬನ್ನಿ ಸರ್ ವೆಲ್ಕಮ್ ಟು ಅವರ್ ಕಾಲೇಜ್ ” ಎಂದು ಹಸ್ತಲಾಘವ ಮಾಡಿ ಬರಮಾಡಿಕೊಂಡರು.ಅತಿಥಿ ರಾಮಕೃಷ್ಣನವರು ದಿನಕರ ದೇಸಾಯಿಯವರ ಪ್ರತಿಮೆಗೆ ಪುಷ್ಪ ಸಮರ್ಪಣೆ ಮಾಡಿದರು.ಅತಿಥಿ ಭಾಷಣದಲ್ಲಿ ತಮ್ಮ ಅನುಭವದ ಬುತ್ತಿಯನ್ನು ವಿಸ್ತಾರವಾಗಿ ಹತ್ತು ನಿಮಿಷದಲ್ಲಿ ಬಿಚ್ಚಿಟ್ಟರು. ಚಿಕ್ಕ ಮತ್ತು ಚೊಕ್ಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಕಾಲೇಜಿನ ಸಿಬ್ಬಂದಿಗಳೆಲ್ಲ ರಾಮಕೃಷ್ಣ ನವರಿಗೆ ಸನ್ಮಾನಿಸಿ ಬೀಳ್ಕೊಟ್ಟರು.ನೆರೆದಿದ್ದವರೆಲ್ಲರೂ ಸೆಲ್ಫಿಗೆ ಮುಗಿಬಿದ್ದರು.ಸರಿಯಾಗಿ ಒಂದು ಗಂಟೆ ಹೊತ್ತಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.
ಅಂಕೋಲೆಯ ಪ್ರತಿಷ್ಠಿತ ಅಂಕೋಲಾ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ಮಧ್ಯಾಹ್ನದ ಊಟ ಮುಗಿಸಿ ನಾನು ಮತ್ತೆ ಗ್ರಂಥಪಾಲಕ ನಂಜುಂಡಯ್ಯನವರು ಡ್ರೈವರ್ ಗುರು ಸೇರಿ ಪುನಃ ಶಿರಸಿಗೆ ಪ್ರಯಾಣಿಸಿ ರಾಮಕೃಷ್ಣನವರ ತೋಟ ಮನೆಯಲ್ಲಿ ಬಿಟ್ಟು ಬಂದೆವು. ಒಂದ್ ಅರ್ಧ ಗಂಟೆ ಚಿತ್ರರಂಗದ ನೆನಪುಗಳನ್ನೆಲ್ಲ ನೆನೆಸಿಕೊಂಡರು. ಮನ ನೋಯೋ ಘಟನೆಗಳನ್ನು ಪುನಃ ನೆನೆದು ಭಾವುಕರಾದರು. ಕೊನೆಗೆ ರಾಮಕೃಷ್ಣ ನವರಿಗೆ ಬೀಳ್ಕೊಟ್ಟು ಕಿರುನಗೆ ಬೀರುತ್ತಾ “ಬಾಯ್ ಬಾಯ್ ಮತ್ತೆ ಸಿಗೋಣ ಸರ್ ಬೆಂಗಳೂರಿನಲ್ಲಿ “ಅಂತ ಹೇಳಿ ಎಲ್ಲಾ ಕೆಲಸ ಮುಗಿಸಿ ಮನೆ ಸೇರಿಕೊಂಡಾಗ ರಾತ್ರಿ ಎಂಟು ಹತ್ತು ಆಗಿತ್ತು…
ಇದು ಒಂದು ದಿನ ಸಂಪೂರ್ಣವಾಗಿ ರಾಮಕೃಷ್ಣ ರವರೊಟ್ಟಿಗೆ ಕಳೆಯುವ ಸದಾವಕಾಶ ದೇವರು ನನಗೆ ಕಲ್ಪಿಸಿದ್ದ. ಒಂದು ಕಾಲದಲ್ಲಿ ರಾಮಕೃಷ್ಣನವರು ಮೇರು ನಟ..ಅತ್ಯಂತ ಸರಳ ಸಜ್ಜನ.. ಯಾವುದೇ ಟೀಕೆ ಟಿಪ್ಪಣಿ ಬಂದರೂ ಅದನ್ನು ನಯವಾಗಿ ಸ್ವೀಕರಿಸಿ ಮನಸ್ಸಿಗೆ ಹಚ್ಚಿಕೊಳ್ಳದೆ ತಿರಸ್ಕರಿಸುತ್ತಾರೆ.. ಹಲವಾರು ವಿಷಯಗಳಲ್ಲಿ ಇವರದ್ದು ಮಾದರಿ ವ್ಯಕ್ತಿತ್ವ ಎಂದು ನನಗನಿಸಿದ್ದು ಪೂರ್ಣ ಸತ್ಯ..ಬದುಕಿನಲ್ಲಿ ಯಾವುದೇ ಆಡಂಬರ ಇಲ್ಲ…ಕೆಲವರು ಏನೇನೋ ಕೆಟ್ಟ ಕೆಟ್ಟದಾಗಿ ಬರೆದು ಅವರ ಬಗ್ಗೆ ಪೋಸ್ಟ್ ಮಾಡುತ್ತಾರೆ..ಅವರ ಪರಿಸ್ಥಿತಿ ಗಂಭೀರ ಅವರಿಗೆ ಅವಕಾಶನೇ ಇಲ್ಲ.. ಬದುಕು ಚಿಂತಾಜನಕ.. ಜೀವನ ಸಾಗ್ಸೋದೆ ಕಷ್ಟ ಆಗ್ಬಿಟ್ಟಿದೆ ಅಂತ ಕೆಟ್ಟದಾಗಿ ಎಲ್ಲ ಬರಿತಾರೆ.. ಇವೆಲ್ಲವೂ ವಿಕೃತಿಯ ಪರಮಾವಧಿ ಹೊರತುಪಡಿಸಿದರೆ ರಾಮಕೃಷ್ಣನವರು ತುಂಬಾ ಚೆನ್ನಾಗಿದ್ದಾರೆ ಇಬ್ರು ಮಕ್ಕಳು ವಿದೇಶದಲ್ಲಿ ನೆಲೆಸಿದ್ದಾರೆ,ವರ್ಷಕ್ಕೆ ಏಳೆಂಟು ಚಿತ್ರಗಳಲ್ಲಿ ಅವಕಾಶ ಬರತ್ತೆ,ಆತ್ಮಭಿಮಾನಕ್ಕೆ ಕನ್ನಡಿಯಾಗಿ ಪತ್ನಿ ಮಂಗಳಾ ಬಾಳಾ ರಥದ ಸಾರಥಿಯಾಗಿದ್ದಾರೆ,ಹುಟ್ಟೂರಿನಲ್ಲಿ ಎಕರೆ ಗಟ್ಲೆ ತೋಟದ ಜವಾಬ್ದಾರಿ ಇನ್ನೊಂದು ಕಡೆ ಪ್ರತಿನಿತ್ಯ ಅಪರಿಚಿತ ಅಭಿಮಾನಿಗಳು ಭೇಟಿ ನೀಡಲು ಬರೋದು ಸ್ವಲ್ಪ ಕಿರಿಕಿರಿ.. ಮಿಕ್ಕ ಎಲ್ಲ ರಾಮಕೃಷ್ಣನವರದ್ದು ಪರಿಪೂರ್ಣ ಜೀವನ.. ಎನಿ ವೇ ಹ್ಯಾಪಿ ಹುಟ್ದಬ್ಬ ರಾಮಕೃಷ್ಣ ಸರ್…
- ನಿತಿನ್ ಅಂಕೋಲಾ
