೯೦ರ ದಶಕದ ‘ಚಾಕ್ಲೇಟ್‌ ಹೀರೊʼ ಸುನೀಲ್ ಅವರ ನೆನಪು



ತಮ್ಮ ಅಲ್ಪಾವಧಿಯಲ್ಲೆ ನಗು ಮುಖದಿಂದ ಜನಮನಗೆದ್ದ ಚೆಂದದ ನಟ ಸುನೀಲ್ ಅವರನ್ನು ಕನ್ನಡದ ʼಚಾಕ್ಲೇಟ್‌ ಹೀರೊʼ ಎಂದೇ ಕರೆಯಲಾಗುತ್ತಿತ್ತು. ಮಾತ್ರ ಎಲ್ಲವೂ ದುರಂತ. ಬಾಳಿ ಬದುಕಬೇಕಿದ್ದ ಸುರದ್ರೂಪಿ ನಟ ಅಪಘಾತದಲ್ಲಿ ಕೊನೆಯುಸಿರೆಳೆದಾಗ ಇಡೀ ಕನ್ನಡನಾಡು ಕಣ್ಣೀರಲ್ಲಿ ಮುಳಗಿಹೋಗಿತ್ತು. ಆ ಮಹಾನ್ ಕಲಾವಿದನ ಬದುಕಿನ ಒಂದು ಹಿನ್ನೋಟವನ್ನು ಮತ್ತೆ ಮೆಲುಕು ಹಾಕಿದ್ದಾರೆ ಲೇಖಕ ಲೇಖನ್ ನಾಗರಾಜ್ ಅವರು.ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ

ಕನ್ನಡ ತಾಯಿಯ ಮಕ್ಕಳು, ನಾವೆಲ್ಲಾ ಒಂದೇ…ಎನ್ನುವ ಕನ್ನಡದ ಸುಂದರ ಸಾಹಿತ್ಯದ ಹಾಡನ್ನು ನಮ್ಮ ಕನ್ನಡಿಗರು ಕೇಳದೆ ಇರಲಾರರು. ಆ ಹಾಡಿನಲ್ಲಿ ಬರುವ ಸುಂದರ ನಟನನ್ನು ಕೂಡ ಕನ್ನಡಿಗರು ಮರೆಯೋಕೆ ಸಾಧ್ಯ ಇಲ್ಲಾ ಬಿಡಿ. ತಮ್ಮ ಅಲ್ಪಾವಧಿಯಲ್ಲೆ ನಗುಮುಖದಿಂದ ಜನಮನಗೆದ್ದ ಚೆಂದದ ನಟ ಸುನೀಲ್, ಯಾರಿಗೆ ತಾನೆ ನೆನಪಿಲ್ಲ ಹೇಳಿ. ಗುಂಡು ಮುಖ,ಮುಗ್ಧ ನಗು, ಮಗುವಿನಂತಹ ಅಭಿನಯ ಸುನೀಲ್‌ ಅವರನ್ನು ಕನ್ನಡದ ʼಚಾಕ್ಲೇಟ್‌ ಹೀರೊʼವನ್ನಾಗಿ ಮಾಡಿತು. ೯೦ರ ದಶಕದಲ್ಲಿ ವಿಷ್ಣುವರ್ಧನ್‌, ಅಂಬರೀಷ್‌, ಶಶಿಕುಮಾರ್, ಶಿವರಾಜ್‌ ಕುಮಾರಂತೆ, ಕನ್ನಡಿಗರ ಮೆಚ್ಚಿನ ನಟರಲ್ಲೊಬ್ಬರಾಗಿದ್ದರು. ಸುನೀಲ್‌ ಮೂಲತಃ ಉಡುಪಿಯವರು. ಎಪ್ರಿಲ್‌ ೧, ೧೯೬೪ರಲ್ಲಿ ಬಾರ್ಕೂರಿನಲ್ಲಿ ಜನಿಸಿದರು.ಇವರ ಮೂಲ ಹೆಸರು ರಾಮಕೃಷ್ಣ ಎಂದಾಗಿತ್ತು. ಕರಾವಳಿ ಹುಡುಗನಾಗಿದ್ದರಿಂದ ಯಕ್ಷಗಾನ ಅಭಿನಯ ಕಲೆಯೆಂಬುದನ್ನು ಬಾಲ್ಯದಿಂದಲೆ ಕರಗತ ಮಾಡಿಕೊಂಡಿದ್ದರು. ತಮ್ಮ ಬಾಲ್ಯದ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಉಡುಪಿಯಲ್ಲೆ ಕಲಿತರು. ನಂತರ ಇಂಜೀನಿಯರ್‌ ಆಗಬೇಕೆಂಬ ಕನಸು ಕಂಡಿದ್ದರಿಂದ. ಹೆಚ್ಚಿನ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದು, ಆರ್.ವಿ ಇಂಜೀನಿಯರಿಂಗ್ ಕಾಲೇಜ್‌ ಸೇರಿಕೊಂಡರು. ಇಂಜೀನಿಯರ್‌ ಓದುವಾಗಲೆ ಕಾಲೇಜ್‌ನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಆಗಲೆ ತನ್ನಲ್ಲಿರುವ ಯಕ್ಷಗಾನ ಕಲೆಯನ್ನು ಎಲ್ಲರಿಗೂ ತಿಳಿಯುವಂತೆ ಮಾಡಿದ್ದರು. ಓದುವಾಗಲೆ ಒಮ್ಮೆ ಆರೂರು ಪಟ್ಟಾಭಿ ನಿರ್ದೆಶನದ ʼನಾದಸುರಭಿʼ ಎಂಬ ಚಿತ್ರದಲ್ಲಿ ಅಭಿನಯವನ್ನು ಮಾಡಿದ್ದರು. ಆದರೆ, ಅದು ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ.

ನಂತರದಲ್ಲಿ ನೋಡಲು ಸುಂದರವಾಗಿದ್ದ ಸುನೀಲ್‌ ರವರನ್ನು ಒಮ್ಮೆ ಮ್ಯಾಗಜೀನ್‌ ರವರು ಫೋಟೊಶೂಟ್ ಮಾಡಿಸಿ. ಫೋಟೊಗಳನ್ನು ಮ್ಯಾಗಜೀನಲ್ಲಿ ಪ್ರಕಟಿಸಿದರು. ಅದೇ ಸಮಯದಲ್ಲಿ ಖ್ಯಾತ ನಿರ್ಮಾಪಕ,ನಿರ್ದೇಶಕರಾದಂತಹ ದ್ವಾರಕೀಶ್‌ರವರು ತಮ್ಮ ಒಂದು ಚಿತ್ರಕ್ಕೆ ಹೊಸಬರ ಹುಡುಕಾಟದಲ್ಲಿದ್ದರು.ಆಗ ಅವರ ಕಣ್ಣಿಗೆ ಬಿದ್ದಿದ್ದೆ ಸ್ಫುರದ್ರೂಪಿ ಸುನೀಲ್‌ರವರು. “ಶೃತಿ” ಎಂಬ ನವ ಪ್ರತಿಭೆಗಳ ಚಿತ್ರದಲ್ಲಿ, ೪ ಜನ ಮುಖ್ಯ ನಾಯಕರಲ್ಲಿ ಸುನೀಲ್‌ ಕೂಡ ಒಬ್ಬರಾದರು. ನಟಿ ಶೃತಿಯವರ ಮೊದಲ ಚಿತ್ರವು ಕೂಡ ಹೌದು. ಆ ಚಿತ್ರದಲ್ಲಿ ಸುನೀಲ್‌ ೪ ಜನರಲ್ಲಿ ಒಬ್ಬರಾದರೂ, ಚಿತ್ರವನ್ನು ನೋಡಿದ ಪ್ರೇಕ್ಷಕರು, ಸುನೀಲ್‌ರವರನ್ನೆ ಆ ಚಿತ್ರದ ನಾಯಕನಾಗಿ ಗುರುತಿಸಿದರು. ಶೃತಿ ಎಂಬ ಚಿತ್ರ ಅಂದಿನ ಕಾಲಕ್ಕೆ ಎಷ್ಟು ದೊಡ್ಡ ಹಿಟ್‌ ಆಯಿತು ಎಂದರೆ. ಇಂದಿಗೂ ಕೂಡ ನಮ್ಮ ಜನ ಆ ಚಿತ್ರವನ್ನು,ಆ ಚಿತ್ರದ ಹಾಡುಗಳನ್ನು ಮರೆತಿಲ್ಲಾ. ಕನ್ನಡದ ಸರ್ವಕಾಲಿಕ ನೆನಪಿನ ಚಿತ್ರಗಳಲ್ಲೊಂದಾಯಿತು. ನಿರ್ದೆಶಕ ದ್ವಾರಕೀಶ್‌ರವರು ರಾಮಕೃಷ್ಣ ಎಂದಿದ್ದ ಹೆಸರನ್ನು ಸುನೀಲ್‌ ಎಂದು ಬದಲಾಯಿಸಿದರು. ನಂತರ ಸುನೀಲ್‌ರವರ ಜೀವನದ ದಾರಿಯೇ ಬದಲಾಯಿತು. ಒಂದರ ಮೇಲೊಂದರಂತೆ ಅವಕಾಶಗಳು ಹುಡುಕಿ ಬಂದವು. ಶೃತಿ ಚಿತ್ರದ ಯಶಸ್ಸಿನ ನಂತರ ಅವರಿಗೆ ಸಿ.ಬಿ.ಐ ಶಿವ,ನಗು ನಗುತಾ ನಲಿ, ಕಿಲಾಡಿಗಂಡು,ತವರು ಮನೆ ಉಡುಗೊರೆ ಚಿತ್ರಗಳಲ್ಲಿ ಅವಕಾಶಗಳು ದೊರೆಯಿತು.

ತಮ್ಮ ಇಂಜೀನಿಯರಿಂಗ್‌ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರು. ಸಂಪೂರ್ಣವಾಗಿ ಕಲಾಜೀವನದಲ್ಲೆ ತೊಡಗಿದರು. ಅಂದಿನ ನಟರಾದಂತಹ ಶ್ರೀನಾಥ್‌, ಅರ್ಜುನ್‌ ಸರ್ಜಾ,ಜಗ್ಗೇಶ್‌,ಅಭಿಜಿತ್‌, ಚಿ.ಗುರುದತ್‌,ಬಾಲರಾಜ್‌ ಎಲ್ಲರೊಂದಿಗು ನಟಿಸಿ ಸೈ ಎನಿಸಿಕೊಂಡರು. ʼಹಳ್ಳಿ ಕೃಷ್ಣ ಡೆಲ್ಲಿ ರಾಧʼ ಚಿತ್ರದಲ್ಲಿ ಮಾಲಾಶ್ರೀಯೊಂದಿಗೆ ಮೊದಲ ಬಾರಿಗೆ ನಾಯಕನಾಗಿ ನಟಿಸಿದರು. ಆ ಚಿತ್ರದ ನಂತರ ಅವರಿಬ್ಬರ ಜೋಡಿ ೯೦ರ ದಶಕದ ಅಪೂರ್ವ ಜೋಡಿಯಂದೆ ಹೆಸರುವಾಸಿಯಾಗಿತ್ತು. ಎವರ್‌ಗ್ರೀನ್‌ ಚಿತ್ರ ಬೆಳ್ಳಿ ಕಾಲುಂಗುರ, ಸಾಹಸಿ, ಸ್ನೇಹದ ಕಡಲಲ್ಲಿ,ಸಿಂಧೂರ ತಿಲಕ, ಕಲಿಯುಗ ಸೀತೆ. ಒಂದರ ಮೇಲೆ ಒಂದರಂತೆ ೧೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಈ ಜೋಡಿ ಸೂಪರ್‌ ಹಿಟ್‌ ಜೋಡಿಯಾಗಿ ಕನ್ನಡಿಗರ ಮನದಲ್ಲಿ ನೆಲೆಸಿತ್ತು. ಇವತ್ತು ಅವರ ಚಿತ್ರಗಳನ್ನು ನೋಡಿದಾಗ ಸುಂದರ ಜೋಡಿಯಾಗಿಯೆ ಕಣ್ಮುಂದೆ ಕಾಣಿಸುತ್ತಾರೆ.

ನಂತರದ ದಿನದಲ್ಲಿ ತೆರೆಯ ಮೇಲಿನ ಈ ಜೋಡಿ ನಿಜ ಜೀವನದಲ್ಲೂ ಜೋಡಿಯಾಗಲು ನಿರ್ಧರಿಸಿದ್ದರು. ತೆರೆಯ ಮೇಲೆ ಅಷ್ಟೆ ಅಲ್ಲದೇ ನಿಜ ಜೀವನದಲ್ಲು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಮದುವೆ ನಿಶ್ಚಯವು ಕೂಡ ನಡೆದಿತ್ತು ಎಂದು ಹೇಳುತ್ತಾರೆ. ಅಭಿಮಾನಿಗಳು ಸಹ ಈ ಜೋಡಿಗಳಿಬ್ಬರ ಮದುವೆ ವಿಷಯವನ್ನು ಕೇಳಿ ತುಂಬಾ ಖುಷಿ ಪಟ್ಟಿದ್ದರಂತೆ, ಹಾರೈಸಿದ್ದರಂತೆ. ಆದರೆ, ಆ ಕಾಲರಾಯನ ಯೋಚನೆಯೆ ಬೇರೆಯಿತ್ತು ಅನಿಸತ್ತೆ. ಅಂದು ಜುಲೈ ೨೪,೧೯೯೪ ರಂದು ಸುನೀಲ್‌ ಹಾಗೂ ಮಾಲಾಶ್ರೀ ಬೆಳಗಾವಿಯ ಚಿಕ್ಕೋಡಿಯಲ್ಲಿ ಒಂದು ರಸಮಂಜರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹೋಗಬೇಕಿತ್ತು. ಶೂಟಿಂಗ್‌ ಮುಗಿಸಿ ಕಾರಿನಲ್ಲಿ ಸುನೀಲ್‌,ಮಾಲಾಶ್ರೀ ಹಾಗೂ ಸುನೀಲ್‌ ಸಹೋದರ ಸಂಬಂಧಿಯಾದ ಸಚ್ಚಿನ್‌ ಮತ್ತು ಕಾರ್‌ ಡ್ರೈವರ್‌ ೪ ಜನ ಹೊರಟರು. ಸಂಜೆ ಸಮಯಕ್ಕೆ ಸರಿಯಾಗಿ ರಸಮಂಜರಿ ಕಾರ್ಯಕ್ರಮಕ್ಕೆ ಹಾಜರಾದರು. ಕಾರ್ಯಕ್ರಮವನ್ನು ಮುಗಿಸಿ ಚಿಕ್ಕೋಡಿಯಲ್ಲಿಯೆ ಇದ್ದು ಮುಂಜಾನೆ ಬೆಂಗಳೂರಿಗೆ ಹೊರಡುವುದು ಸುನೀಲ್‌ ಅವರ ಯೋಚನೆಯಾಗಿತ್ತು. ಅಂದು ರಸ ಮಂಜರಿ ಕಾರ್ಯಕ್ರಮ ಪೂರ್ಣಗೊಳ್ಳಲು ರಾತ್ರಿ ೨ ಗಂಟೆಯಾಯಿತು. ತುಂಬಾ ತಡವಾಗಿದ್ದರಿಂದ ಸುನೀಲ್‌ ರವರು ಇಲ್ಲೆ ಇದ್ದು ಬೆಳಿಗ್ಗೆ ಹೊರಡೋಣ ಎಂದು ಎಲ್ಲರಿಗೂ ಹೇಳಿದರು. ಆದರೆ, ಸುನೀಲ್‌ ಕಾರಿನ ಡ್ರೈವರ್‌ ಅದಕ್ಕೆ ಒಪ್ಪಲಿಲ್ಲ. ಯಾಕೆಂದರೆ, ಅದೇ ದಿನ ಬೆಳಿಗ್ಗೆ ಕಾರ್‌ ಡ್ರೈವರ್‌ ಮಗನ ಮೊದಲನೇ ವರ್ಷದ ಹುಟ್ಟಿದ ಹಬ್ಬವಿತ್ತು. ಅದಕ್ಕಾಗಿ ಮುಂಜಾನೆ ಬೇಗ ಮನೆ ತಲುಪಿ ಎಲ್ಲಾ ಕೆಲಸಗಳನ್ನು ಮಾಡಬೇಕತ್ತು. ಡ್ರೈವರ್‌ ಮಗನ ಬರ್ತಡೇ ವಿಷಯ ತಿಳಿದ ಸುನೀಲ್‌ ಕೂಡ. ಅವರ ಮನಸ್ಸಿಗೆ ನೋವುಂಟು ಮಾಡುವುದು ಸರಿಯಲ್ಲವೆಂದು. ರಾತ್ರಿ ೩ ಗಂಟೆ ಸುಮಾರಿಗೆ ಎಲ್ಲರು ಕಾರಿನಲ್ಲಿ ಹೊರಟರು. ಮಾರನೆ ದಿನ ಡ್ರೈವರ್‌ ಮಗನ ಬರ್ತಡೇಗೆ ಸುನೀಲ್‌ , ಮಾಲಾಶ್ರೀ ಕೂಡ ಹೋಗುವ ಯೋಜನೆಯಿತ್ತು.



ಆದರೆ,ಮುಂದೆ ಆಗಿದ್ದು ಮಾತ್ರ ಎಲ್ಲವೂ ದುರಂತ. ಚಿತ್ರದುರ್ಗ ಮತ್ತು ದಾವಣಗೆರೆ ಹೈವೆ ಮಧ್ಯದಲ್ಲಿ ಮಾದನಾಯಕನ ಹಳ್ಳಿ ಸಮೀಪ ಸುನೀಲ್‌ ರವರ ಕಾರು ವೇಗವಾಗಿ ಇದ್ದ ಕಾರಣ. ಚಾಲಕನ ನಿಯಂತ್ರಣ ತಪ್ಪಿ ಮುಂದುಗಡೆ ಬರುತ್ತಿದ್ದ ಲಾರಿಗೆ ಸರಿಯಾಗಿ ಅಪ್ಪಳಿಸಿತು. ಪರಿಣಾಮ ಕಾರ್‌ ಡ್ರೈವರ್‌ ಸ್ಥಳದಲ್ಲೆ ಮೃತಪಟ್ಟರು. ಸುನೀಲ್‌,ಮಾಲಾಶ್ರೀ ಹಾಗೂ ಸಂಬಂಧಿ ಸಚ್ಚಿನ್‌ ರವರು ಗಂಭೀರವಾಗಿ ಬಿದ್ದಿದ್ದರು. ಕೂಡಲೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ೪೫ ರಿಂದ ೫೦ ನಿಮಿಷಗಳ ನಂತರ ಸುನೀಲ್‌ರವರು ಕೂಡ ಗಂಭೀರವಾಗಿ ಗಾಯಗಳಾಗಿದ್ದರಿಂದ ಅಲ್ಲಿಯೆ ಕೊನೆಯುಸಿರೆಳೆದರು. ಮಾಲಾಶ್ರಿ ಹಾಗೂ ಸಚ್ಚಿನ್‌ರವರು ಪ್ರಾಣಾಪಾಯದಿಂದ ಪಾರಾದರು. ಈ ಆಘಾತದಿಂದ ಚೇತರಿಸಿಕೊಳ್ಳಲು ಅವರಿಗೆ ತುಂಬಾ ದಿನಗಳೆ ಬೇಕಾಯಿತು. ವಿಧಿ ಎಷ್ಟೊಂದು ಕ್ರೂರ ನೋಡಿ. ಬೆಳಿಗ್ಗೆ ತನ್ನ ಮಗನ ಹುಟ್ಟಿದ ಹಬ್ಬ ಆಚರಿಸುವ ಸಲುವಾಗಿ ಬಂದ ತಂದೆ. ಮಗ ಹುಟ್ಟಿದ ದಿನವೆ ಅಕಾಲ ಮೃತ್ಯುವಿಗೆ ತುತ್ತಾಗಿದ್ದರು. ಮುಂದೆ ತನ್ನ ಪ್ರೇಯಸಿಯೊಂದಿಗೆ ಬಾಳಿ ಬದುಕಿ. ಬೆಳ್ಳಿತೆರೆಯಲ್ಲಿ ಉಜ್ವಲ ಭವಿಷ್ಯ ಕಾಣಬೇಕಿದ್ದಂತಹ ನಟ ಅಪಾರ ಅಭಿಮಾನಿಗಳನ್ನು ಬಿಟ್ಟು ಮತ್ತೆ ಬಾರದ ಲೋಕಕ್ಕೆ ಹೋದರು. ಬಹುಶಃ ಸುನೀಲ್‌ರಂತಹ ಸುಂದರ ನಟ ಬಾಳಿ ಬದುಕುವುದು ಆ ದೇವರಿಗು ಇಷ್ಟವಿಲ್ಲವಾಗಿತ್ತೊ ಏನೊ……?

ಫೋಟೋ ಕೃಪೆ : Youtube

ಇಂದು ಸುನೀಲ್‌ ಇದ್ದಿದ್ದರೆ ತಮ್ಮದೆ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿರುತ್ತಿದ್ದರು. ಮಾಲಾಶ್ರೀ,ಸುನೀಲ್‌ ಜೋಡಿ ಮತ್ತಷ್ಟು ಮೋಡಿ ಮಾಡುತ್ತಿದ್ದದಂತು ನಿಜ. ತಮ್ಮ ೩೦ ವರ್ಷಗಳಲ್ಲಿ ಕೇವಲ ೪ ವರ್ಷ ಮಾತ್ರ ಚಿತ್ರರಂಗದಲ್ಲಿ ಸುನೀಲ್‌ ಇದ್ದರು. ಅಷ್ಟರಲ್ಲೆ ತಮ್ಮ ಉದಯೋನ್ಮುಖ ನಟನೆಯ ಮೂಲಕ ಕನ್ನಡಿಗರಿಗೆಲ್ಲಾ ಚಿರಪರಿಚಿತರಾಗಿದ್ದರು. ತೆಲುಗಿನಲ್ಲೂ ಸಹ ಕೆಲವು ಚಿತ್ರಗಳನ್ನು ಮಾಡಿದ್ದರು. ಚಿಕ್ಕ ವಯಸ್ಸಿನ ಸುನೀಲ್ ರವರ ಸಾವು ಕೂಡ ನಮ್ಮ ಶಂಕರ ನಾಗ್‌ ರಂತೆ. ಇಂದಿಗೂ ಸಹ ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಎಂದೆ ಹೇಳಬಹುದು. ಸುನೀಲ್‌ ರವರ ತಾಯಿ ತಮ್ಮ ಮಗನ ಸಮಾಧಿಯಲ್ಲಿ ಒಂದು ಗಿಡವನ್ನು ನೆಟ್ಟಿದ್ದರು. ಅದು ಇಂದು ಮರವಾಗಿದೆ. ಇಂದಿಗೂ ಸಹ ಅವರು ಅದನ್ನೆ ತಮ್ಮ ಮಗ ಎಂದುಕೊಂಡು. ಅವನು ಯಾವತ್ತೂ ನಮ್ಮ ಜೊತೆಗೆ ಇದಾನೆ ಎಲ್ಲಿಗೂ ಹೋಗಿಲ್ಲ ಎಂದು ಮನಸಲ್ಲೆ ಕಣ್ಣೀರಿಡುತ್ತಾರೆ. ಸುನೀಲ್‌ ರವರು ಇಂದು ನಮ್ಮೊಂದಿಗಿದ್ದಿದ್ದರೆ ೫೭ನೇ ವರ್ಷದ ಜನ್ಮದಿನದ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದರು ಖಂಡಿತ. ಆದರೆ, ವಿಧಿಲಿಖಿತವು ಅದಕೆ ಅವಕಾಶ ಕೊಡಲಿಲ್ಲ. ಅವರ ಬೆಳ್ಳಿತೆರೆಯ ನೆನಪೊಂದೆ ಇಂದು ನಮ್ಮೊಂದಿಗೆ ಶಾಶ್ವತ.


  • ಲೇಖನ್‌ ನಾಗರಾಜ್‌,  ಹರಡಸೆ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW