‘ಅದಲು ಬದಲು’ ಸಣ್ಣಕತೆ – ಗುರುಮೂರ್ತಿ

ಗುರುಮೂರ್ತಿ ಅವರ ‘ಅದಲು ಬದಲು’ ಸಣ್ಣಕತೆಯಲ್ಲಿ ಶ್ರೀಲಕ್ಷ್ಮಿ ಹಾಗೂ ಅನುರಾಧ ಅದಲು ಬದಲಾಗುತ್ತಾರೆ…ಅವರು ಬದಲಾವಣೆಗೆ ಕಾರಣವೇನು?…ಇಂದಿನ ವಾಸ್ತವದಲ್ಲಿ ಹೀಗೆ ಆಗಲು ಸಾಧ್ಯವಾ? ಕತೆ ಪೂರ್ತಿಯಾಗಿ ಓದಿ…

ಐದು ನೂರರ ಆರು ನೋಟುಗಳನ್ನು ತೆಗೆದು ಅವಳ ಕೈಗಿಟ್ಟ ಮಾಧವನ್. ಅವನು ಕೊಟ್ಟ ಆ ಆರು ನೋಟಗಳನ್ನು ತನ್ನ ತಲೆದಿಂಬಿನ ಕೆಳಗೆ ಇಟ್ಟಳು. ಆ ರಾತ್ರಿ ಅವನಿಗೆ ತನ್ನ ದೇಹ ಸುಖವನ್ನು ಕೊಟ್ಟಳು ಅನುರಾಧ. ರಾತ್ರಿ ಎಲ್ಲಾ ಅವಳು ಕೊಟ್ಟ ಸುಖವನ್ನು ಅನುಭವಿಸಿ, ಬೆಳಿಗ್ಗೆ ಎದ್ದವನೆ ಮೈಮುರಿದು ರಾತ್ರಿ ಮತ್ತೆ ಬರುವೆ ಎಂದು ಅವಳ ಕೆನ್ನೆಗಳನ್ನು ತಟ್ಟಿ ನಕ್ಕು ಅವಳ ಮನೆಯಿಂದ ಹೊರಬಿದ್ದ ಮಾಧವನ್. ಅವನಿಗಾಗಿ ಬಾಗಿಲಲ್ಲಿ ನಿಂತು ಕಾಯುತ್ತಿದ್ದಳು ಶ್ರೀಲಕ್ಷ್ಮಿ. ಅವನ ಕಾರು ಮನೆ ಮುಂದೆ ನಿಂತಾಗ, ನಗುನಗುತ್ತಾ ಅವನನ್ನು ಮನೆ ಒಳಗೆ ಕರೆದ್ಯೊಯ್ದಳು. ಬಿಸಿ ಬಿಸಿ ಕಾಫಿಯನ್ನು ಅವನ ಕೈಗಿತ್ತು, ಹೇಗಿತ್ತು ಅವಳ ಜೊತೆ ರಾತ್ರಿ ಎಂದು ಕೇಳಿದಳು.

ಅವಳ ಮಾತಿಗೆ ಉತ್ತರವಾಗಿ ನಕ್ಕ ಮಾಧವನ್. ಮಾಧವನ್ ಒಬ್ಬ ಇಂಜಿನಿಯರ್. ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೈತುಂಬಾ ಸಂಬಳ. ಗಂಡ ಹೆಂಡತಿ ಮನೆಯಲ್ಲಿ ಇಬ್ಬರೆ.
ಶ್ರೀಲಕ್ಷ್ಮಿ, ದೈವ ಭಕ್ತಿ. ಸ್ವಾಮಿ ಚಿನ್ಮಯಾನಂದರ ಪರಮ ಭಕ್ತಳು. ಹೆಚ್ಚಾಗಿ ಅನುಯಾಯಿ ಎಂದೇ ಕರೆಯಬಹುದು. ಶ್ರೀಲಕ್ಷ್ಮಿಗೆ ಸನ್ಯಾಸವನ್ನು ಸ್ವಿಕರಿಸಿ ಸನ್ಯಾಸಿನಿಯಾಗು ಎಂದು ಪ್ರೇರಪಿಸಿದವರು ಸ್ವಾಮಿ ಚಿನ್ಮಯನಂದರು. ಸನ್ಯಾಸಿನಿಯಾಗ ಬಯಸುವ ವ್ಯಕ್ತಿಯು ಏಕಾಗ್ರತೆ ಮತ್ತು ಭಯದಿಂದ ಮುಕ್ತನಾಗಿರುವುದು ತುಂಬಾನೇ ಅವಶ್ಯಕ. ಸನ್ಯಾಸಿನಿ ಯ ಜೀವನ ಕಠಿಣವಾಗಿದ್ದು, ಆ ಕಠಿಣತೆಯನ್ನು ಕೂಡ ಮೆಟ್ಟಿ ನಿಲ್ಲುವ ಸಾಮರ್ಥ್ಯ ಅವಳಲ್ಲಿ ಇರಬೇಕು. ಸನ್ಯಾಸಿನಿಯಾದವರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬೇಕು. ತಮ್ಮ ಕೆಲಸಕ್ಕಾಗಿ ಇತರರನ್ನು ಅವಲಂಬಿಸಬಾರದು.

ಸನ್ಯಾಸಿನಿಯಾಗಲು ಬಯಸುವವರು ತನ್ನ ಕುಟುಂಬದ ಮೇಲಿನ ವ್ಯಾಮೋಹವನ್ನು ತ್ಯಜಿಸಿರಬೇಕು. ಸನ್ಯಾಸತ್ವವನ್ನು ಸ್ವೀಕರಿಸುವುದೆಂದರೆ ಅಥವಾ ಸನ್ಯಾಸಿನಿಗಳಾಗುವುದೆಂದರೆ ಅದು ಸರಳವಾದ ಮಾತಲ್ಲ. ಖಾವಿ ಬಟ್ಟೆ ತೊಟ್ಟವರೆಲ್ಲರೂ ಸನ್ಯಾಸಿಯಾಗಲು ಸಾಧ್ಯವಿಲ್ಲ. ಸನ್ಯಾಸತ್ವವನ್ನು ಸ್ವೀಕರಿಸಿದ ಮೇಲೆ ಅದರ ರೀತಿ ರಿವಾಜುಗಳನ್ನು ಪಾಲಿಸಬೇಕು.
ಆಯಾ ಧರ್ಮದ ಮಾರ್ಗದಲ್ಲಿ ನಡೆಯಬೇಕು.

ಅವರ ಈ ಭೋಧನೆಗಳು ಶ್ರೀಲಕ್ಷ್ಮಿಯನ್ನು ಸನ್ಯಾಸಿನಿಯಾಗಲು ಪ್ರಜೋದಿಸಿತು. ಸನ್ಯಾಸಿನಿ ಆಗ ಹೊರಟ ಶ್ರೀಲಕ್ಷ್ಮಿ ಮೊದಲು ತನ್ನ ಗಂಡನಿಂದ ದೂರವಿರ ಬಯಸಿದಳು.
ಆ ದೂರವಿರುವಿಕೆಯ ಯೋಚನೆಯೇ ಗಂಡನನ್ನ ಪರಸ್ತ್ರೀಯ ಸಹವಾಸದಲ್ಲಿಡುವುದು. ತಾನೆ ಗಂಡನನ್ನು ಅನುರಾಧಳ ಬಳಿ ಹೋಗುವಂತೆ ಮಾಡಿದ್ದಳು. ಅನುರಾಧಳ ಸಹವಾಸ ಹಿತವೆನಿಸಿತು ಮಾಧವನ್ ಗೆ. ಹೆಂಡತಿಯೇ ಒತ್ತಾಯ ಮಾಡಿ ಅನುರಾಧಳ ಬಳಿ ಪ್ರತಿ ರಾತ್ರಿ ಕಳುಹಿಸುತ್ತಿದ್ದರಿಂದ ವಿರೋಧಿಸದೆ ಪ್ರತಿ‌ರಾತ್ರಿ ಅನುರಾಧಳ ಮನೆಗೆ ಹಾಜರಿ ಹಾಕುತ್ತಿದ್ದ ಮಾಧವನ್.

ಆ ರಾತ್ರಿ ಮಾಧವನ್ ಬರಲಿಲ್ಲ. ಪ್ರತಿ ರಾತ್ರಿ ಸರಿಯಾದ ವೇಳೆಗೆ ಹಾಜರಿ ಹಾಕುತ್ತಿದ್ದ ಮಾಧವನ್ ಹನ್ನೊಂದು ಗಂಟೆ ಆದರು ಬಾರದೆ ಹೋದಾಗ ಚಡಪಡಿಸಿದಳು ಅನುರಾಧ.
ಒಬ್ಬಳೆ ಅಂಗಾತವಾಗಿ ಮಂಚದ ಮೇಲೆ ಮಲಗಿ ಮೇಲೆ ಸಣ್ಣಗೆ ತಿರುಗುತ್ತಿದ್ದ ಫ್ಯಾನ್ ನನ್ನೆ ಚಿತ್ತದಿಂದ ನೋಡುತ್ತಾ ಮಲಗಿದಳು. ಅನುರಾಧ ಒಬ್ಬ ಇಂಜಿನಿಯರ್.ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವಳು. ಕೈತುಂಬಾ ಸಂಬಳ. ಸ್ವತಂತ್ರ ಬದುಕು. ಯಾರ ಹಂಗಿಲ್ಲದ ಜೀವನ. ಬಾಡಿಗೆ ಮನೆಯೊಂದರಲ್ಲಿ ಒಬ್ಬಳೆ ಇದ್ದವಳು. ಆ ರಾತ್ರಿ ಹನ್ನೆರಡರ ಸಮಯ,ಕೆಲಸ ಮುಗಿಸಿಕೊಂಡು ಅಫೀಸಿನಿಂದ ಹೊರ ಬಿದ್ದಳು. ಆಟೋಕ್ಕಾಗಿ ಕಾದಳು. ಒಂದೂ ಆಟೋವು ನಿಲ್ಲಲಿಲ್ಲ. ಮನೆ ಹತ್ತಿರವೆ ಇದೆ ನಡೆದು ಹೋಗೊಣ ಎಂದು ಹೆಜ್ಜೆ ಹಾಕಿದಳು. ಸರ್ಕಲ್ ದಾಟುವಾಗ ಹಿಂದಿನಿಂದ ನಾಲ್ವರು ಅವಳ ಬೆನ್ನು ಹತ್ತಿದ್ದರು. ಅವಳ ಭುಜದ ಮೇಲೆ ಕೈಹಾಕಿದರು.ಕಿರುಚಿದಳು,ಸಹಾಯಕ್ಕಾಗಿ ಕೂಗಿ ಕರೆದಳು ಯಾರೂ ಬರಲಿಲ್ಲ. ಆ ನಾಲ್ವರು ರಣಹದ್ದುಗಳಂತೆ ಅವಳ ದೇಹದ ಮೇಲೆ ಎರುಗಿ ಹಸಿ ಮಾಂಸವನ್ನು ಹರಿದು ತಿನ್ನುವಂತೆ ತಿಂದರು.ಆ ನಾಲ್ವರ ಕೃತ್ಯದಿಂದ ಬಳಲಿದಳು. ಶೀಲವನ್ನು ಕಳೆದು ಕೊಂಡು ಭಾರವಾದ ಹೆಜ್ಜೆಯಿಟ್ಟು ಮನೆ ಸೇರಿದಳು.

ವಾರ ಕಾಲ ಮನೆ ಬಿಟ್ಟು ಹೊರ ಬರಲಿಲ್ಲ. ಪದೇ ಪದೇ ಕಾಡಿತು ಆ ಜಪಾನಿ ಚಲನ ಚಿತ್ರ. ರಸ್ತೆಯಲ್ಲಿ ಮಾನಭಂಗವಾದ ನಾಯಕಿ, ಸೂಳೆಯಾಗಿ ತನ್ನ ದೇಹವನ್ನು ಉಣಬಡಿಸುವ ಹೆಣ್ಣಾಗಿ ಜೀವನ ನಡೆಸುವ ಕತೆಯದು. ಸೂಳೆಯಾಗಿ, ಆ ಊರಿನ ಶ್ರೀಮಂತೆಯಾಗಿ ಗಂಡಸರನ್ನು ತನ್ನ ಬಿಗಿ ಮುಷ್ಠಿಯಲ್ಲಿಟ್ಟು ಕೊಳ್ಳುತ್ತಾಳೆ. ಅದೇನೊ ಆ ಕಥೆ ಅವಳಿಗೆ ಹಿಡಿಸಿತು. ಕೇವಲ ಹಿಡಿಸಿತು ಅನ್ನುವುದಕ್ಕಿಂತ ಅವಳನ್ನು ಪ್ರೇರಪಿಸಿತು.

ಅವಳ ಬದುಕಿನ ದಾರಿಯನ್ನು ಬದಲಾಯಿಸಿತು. ಕಂಪನಿಯ ಕೆಲಸಕ್ಕೆ ರಾಜಿನಾಮೆ ನೀಡಿ, ಹೊಸ ವೃತ್ತಿಯನ್ನು ಶುರುವಿಟ್ಟ ಅನುರಾಧಳಿಗೆ ಮೊದಲ ಗಿರಾಕಿಯಾಗಿ ದೊರೆತವನೆ ಮಾಧವನ್. ಅವನನ್ನು ಬಿಟ್ಟು ಬೇರೆಯವರನ್ನು ಹತ್ತಿರ ಸುಳಿಯಲು ಬಿಡಲಿಲ್ಲ. ಪ್ರತಿದಿನ ಅವನು ಕೊಡುವ ಆರು ಐದು ನೂರರ ನೋಟುಗಳಲ್ಲಿಯೇ ತೃಪ್ತಿಪಟ್ಟಳು ಅನುರಾಧ.
ಬಾಗಿಲು ತಟ್ಟಿದ ಹಾಗಾಯಿತು. ಮಲಗಿದವಳು ಎದ್ದು ಬಾಗಿಲನ್ನು ತೆರೆದಳು. ಬಂದವನು ಮಾಧವನ್.

ನಗುನಗುತ್ತಾ ಒಳಗೆ ಕರೆದ್ಯೊಯ್ದಳು. ಐದು ನೂರರ ಆರು ನೋಟ್ ಗಳನ್ನು ಮುಂದೆ ಹಿಡಿದ. ಬೇಡ ಅಂದಳು. ಏಕೆ ಎಂದು ಕೇಳಿದ. ನಾಳೆ ನನಗೆ ನಿಮ್ಮ ಹೆಂಡತಿಯ ಭೇಟಿ ಮಾಡಿಸಿ ಎಂದು ಕೇಳಿದಳು. ಆಶ್ಚರ್ಯದಿಂದ ನೋಡಿದ. ನಕ್ಕು ನಾನು ಅವಳನ್ನು ಭೇಟಿಯಾಗಬೇಕು. ಹೂಂ ಎಂದು ತಲೆಯಾಡಿಸಿದ. ಕೈಹಿಡಿದು ಮಂಚಕ್ಕೆ ಕರೆದ್ಯೊಯ್ದಳು. ಆ ರಾತ್ರಿಯೂ ಸುಂದರ ಕ್ಷಣಗಳನ್ನು ನೀಡಿದಳು ಅನುರಾಧ.

ಅದು ಹೋಟೆಲ್ ಪ್ರಿಯದರ್ಶಿನಿ. ಶ್ರೀಲಕ್ಷ್ಮಿಯೊಂದಿಗೆ ಕುಳಿತ್ತಿದ್ದ ಮಾಧವನ್. ಈ ಇಬ್ಬರ ನಡುವೆ ಬಂದು ಕುಳಿತಳು ಅನುರಾಧ.ಆಕಸ್ಮಿಕವೆಂಬಂತೆ ಬಂದು ಕುಳಿತ ಅನುರಾಧಳನ್ನು ನೋಡಿದಳು ಶ್ರೀಲಕ್ಷ್ಮಿ. ಏನು ಆರ್ಡರ್ ಮಾಡೊಣ ಎಂದು ಮಾತನ್ನು ಆರಂಭಿಸಿದಳು ಅನುರಾಧ. ಕಾಫಿ ಸಾಕು ಎಂದಳು ಶ್ರೀಲಕ್ಷ್ಮಿ. ಆಗಲಿ ಎಂದು ಮೂರು ಕಾಫಿಯನ್ನು ಆರ್ಡರ್ ಮಾಡಿದಳು ಅನುರಾಧ. ಮೂರು ಕಾಫಿ ಬಂತು,ಮೂವರು ಕಾಫಿಕಪ್ ಗಳನ್ನು ಕೈಗೆತ್ತಿಕೊಂಡರು.

ನಾನು ಯಾರು ಎಂಬುದು ನಿಮಗೆ ಗೊತ್ತೆ ಕೇಳಿದಳು ಅನುರಾಧ. ನನ್ನ ಗಂಡನನ್ನು ನಿಮ್ಮ ಸೌಂದರ್ಯದಿಂದ ಸೆರೆ ಹಿಡಿದಿಟ್ಟಿರುವ ಹೆಣ್ಣು ಎಂದಳು ಶ್ರೀಲಕ್ಷ್ಮಿ. ನಾನು ಈ ಪರಿಸ್ಥಿತಿಗೆ ಬರಲು ಕಾರಣ ಗೊತ್ತೆ ಕೇಳಿದಳು ಅನುರಾಧ‌. ನನ್ನ ಗಂಡ ನಿಮ್ಮನ್ನು ನನಗಿಂತ ಹೆಚ್ಚಾಗಿ ಮೆಚ್ಚಿದ್ದಾನೆ ಹಾಗು ಇಷ್ಟಪಡುತ್ತಿದ್ದಾನೆ. ಪರಿಸ್ಥಿತಿ ಏನೇ ಇರಲಿ ವಾಸ್ತವ ಸತ್ಯ ಇದು ಎಂದಳು ಶ್ರೀಲಕ್ಷ್ಮಿ. ತನ್ನ ಬಾಳಲ್ಲಿ ನಡೆದ ಘಟನೆಯನ್ನು ವಿವರಿಸುತ್ತಾ , ತಾನು ನೋಡಿದ ಜಪಾನಿನ ಸಿನಿಮಾ ತನ್ನ ಈ ವೃತ್ತಿಗೆ ತಲುಪಿಸಿತು ಎಂದು ತನ್ನ ಬಾಳ ಕತೆಯನ್ನು ಹೇಳಿ ಮುಗಿಸಿದಳು ಅನುರಾಧ.

ಅನುರಾಧಳ ಕತೆಯನ್ನು ಕೇಳಿ ಮಾತುಗಳು ಹೊರ ಬರದಾದವು ಶ್ರೀಲಕ್ಷ್ಮಿಗೆ. ಕಣ್ಣಲ್ಲಿ ಮೂಡಿದ ಕಣ್ಣೀರ ಹನಿಗಳನ್ನು ಒರಿಸಿಕೊಂಡು ಅವಳತ್ತ ಮುಖ ಮಾಡಿ ನನ್ನ ಗಂಡನನ್ನು ನೀವು ಬಾಳಸಂಗಾತಿಯಾಗಿ ಮಾಡಿಕೊಳ್ಳುವ ಆಸೆ ಇದ್ದರೆ ನಾನು ಬಿಟ್ಟು ಕೊಡುವೆ ಎಂದಳು ಶ್ರೀಲಕ್ಷ್ಮಿ. ನನಗೆ ನಿಮ್ಮ ಗಂಡನನ್ನು ಬಿಟ್ಟು ಕೊಡುವುದಾದರೆ ನೀವು? ಕೇಳಿದಳು ಅನುರಾಧ.
ನನ್ನ ಗುರುಗಳ ಅಭಿಲಾಷೆಯಂತೆ ಋಷಿಕೇಶಕ್ಕೆ ಹೋಗಿ ಸನ್ಯಾಸಿನಿಯಾಗುವೆ ಎಂದಳು ಶ್ರೀಲಕ್ಷ್ಮಿ. ಅವಳ ಮಾತುಗಳನ್ನು ಕೇಳಿ ಇಬ್ಬರು ಆಶ್ಚರ್ಯಚಕಿತರಾಗಿ ಅವಳನ್ನು ನೋಡಿದರು.
ಹೌದು. ನನಗೆ ಈ ಸಂಸಾರದ ಬಂಧನದ ಬದಕು ಬೇಕಾಗಿಲ್ಲ. ಪರಮಾತ್ಮನ ಧ್ಯಾನದಲ್ಲಿ ಮುಕ್ತಿಯ ಕಾಣುವ ಹಂಬಲ. ಅದಕ್ಕಾಗಿಯೇ ಗಂಡನನ್ನು ನಿಮ್ಮಲ್ಲಿಗೆ ನಾನೆ ಕಳುಹಿಸುತ್ತಿದ್ದು ಎಂದಳು ಶ್ರೀಲಕ್ಷ್ಮಿ.

ಹೆಂಡತಿಯ ಮಾತುಗಳನ್ನು ಕೇಳಿ,ಏನು ಮಾತನಾಡಬೇಕೆಂದು ತೋಚದೆ ಮೂಕನಂತೆ ಕುಳಿತ ಮಾಧವನ್. ಒಳ್ಳೆಯ ಗಂಡ, ಒಳ್ಳೆಯ ಸಂಸಾರ ಇನ್ನೂ ತುಂಬಿದ ಯೌವನ ವಿರುವ ನೀವು ಸನ್ಯಾಸಿನಿಯಾಗುವುದು ಸರಿಯಲ್ಲ. ನನ್ನಿಂದ ನಿಮಗೆ ತೊಂದರೆಯಾಗಿದ್ದರೆ ದಯವಿಟ್ಟು ಕ್ಷಮಿಸಿ. ನಿಮ್ಮ ಗಂಡನಿಂದ ಅಂತರವನ್ನು ಕಾಪಾಡಿಕೊಳ್ಳುವೆ ಎಂದಳು ಅನುರಾಧ.
ನಾನಾಗಿಯೇ ನಿಮ್ಮ ಬಳಿ ನನ್ನ ಗಂಡನ ಕಳಿಸಿ,ನನ್ನಿಂದಾಗದ ಸುಖವನ್ನು ನಿಮ್ಮಿಂದ ಪಡೆಯಲಿ ಎಂದುಕೊಂಡಿರುವ ನನಗೆ ನಿಮ್ಮಿಂದ ಉಪಕಾರವಾಗಿದೆ ಹೊರತು ತೊಂದರೆಯಾಗಿಲ್ಲ ಎಂದಳು ನಗುತ್ತಾ ಶ್ರೀಲಕ್ಷ್ಮಿ. ನಿನ್ನ ನಿರ್ಧಾರವನ್ನು ಬದಲಿಸಲಾರೆಯ ಕೇಳಿದ ಮಾಧವನ್. ಇಲ್ಲ, ನಾನು ಆಗಲೇ ನಿರ್ಧರಿಸಿರುವೆ.ಗುರುಗಳು ಆಶೀರ್ವಾದ ಮಾಡಿದ್ದಾರೆ.
ಅವರ ಆಶ್ರಮದಲ್ಲಿ ನನ್ನ ಅವಶ್ಯಕತೆ ಇದೆ .ನಾನು ಹೊರಡಬೇಕು ಎಂದಳು ಶ್ರೀಲಕ್ಷ್ಮಿ. ಎಲ್ಲವನ್ನು ಇದ್ದ ನೀವು ಎಲ್ಲವನ್ನು ತೊರೆದು ಸನ್ಯಾಸಿನಿಯಾಗುವುದು ಸರಿಯಲ್ಲ ಎಂದಳು ಅನುರಾಧ.

ನೀವು ಖಂಡಿತವಾಗಿಯು ನನ್ನ ಗಂಡನ ಬಾಳಲ್ಲಿ ಪ್ರವೇಶಮಾಡಿ,ನನ್ನ ಸ್ಥಾನವನ್ನು ಸ್ವಿಕರಿಸಬೇಕು ಇದು ನನ್ನ ಬೇಡಿಕೆ ಎಂದು ಕೈಮುಗಿದಳು ಶ್ರೀಲಕ್ಷ್ಮಿ. ಈ ನಿಮ್ಮ ನಿರ್ಧಾರಕ್ಕೆ ಧನ್ಯವಾದಗಳು. ನನ್ನ ಪ್ರತಿಕ್ರಿಯೆಗೆ ಎರಡು ದಿನಗಳ ಕಾಲವಕಾಶ ಕೊಡಿ ಎಂದಳು ಅನುರಾಧ. ಒಪ್ಪಿದಳು ಶ್ರೀಲಕ್ಷ್ಮಿ. ಮರುದಿನ ಬೆಳಿಗ್ಗೆ ಚಿನ್ಮಯ ನಂದರ ಆಶ್ರಮಕ್ಕೆ ಹೋದಳು ಅನುರಾಧ.

ಸ್ವಾಮಿಗಳ ಕಂಡು ತನ್ನ ಬಾಳಿನಲ್ಲಾದ ಘಟನೆಯನ್ನು ವಿವರಿಸಿದಳು. ಶ್ರೀಲಕ್ಷ್ಮಿತನ್ನ ಸನ್ಯಾಸತ್ವ ನಿರ್ಣಧಿಂದ ಹೊರ ಬರುವಂತೆಯೂ,ತನಗೆ ಸನ್ಯಾಸತ್ವ ನೀಡುವಂತೆ ಗುರುಗಳ ಬಳಿ ಬೇಡಿದಳು. ಸನ್ಯಾಸತ್ವ ಎಂಬುದು ಹುಡುಗಾಟದ ಮಾತಲ್ಲ ಎಂದು ಗುರುಗಳು ವಿವರಿಸಿದರು. ನೀವು ಯಾವ ಕಠಿಣ ನಿಯಮಗಳನ್ನು ಹೇಳಿದರು ನಾನು ಪಾಲಿಸುವೆ ಎಂದು ಗುರುಗಳ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾದಳು ಅನುರಾಧ. ಗುರುಗಳು ಶ್ರೀಲಕ್ಷ್ಮಿ ಯ ಕರೆದು ಸಂಸಾರ ಜೀವನ‌ನಡೆಸಲು ಭೋಧಿಸಿದರು. ಇದ್ದಕ್ಕಿದ್ದ ಹಾಗೆ ಗುರುಗಳ ಮಾತುಗಳನ್ನು ಕೇಳಿ ಆಶ್ಚರ್ಯಚಕಿತಳಾದಳು ಶ್ರೀಲಕ್ಷ್ಮಿ.

ಹೃಷಿಕೇಶ್ ಗೆ ಹೊರಟು ನಿಂತ ಅನುರಾಧಳನ್ನು ಬಿಳ್ಕೊಡಳು ಮಾಧವನ್ ಮತ್ತು ಶ್ರೀಲಕ್ಷ್ಮಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಇಬ್ಬರ ಬದಕಲ್ಲು ಬದಲಾವಣೆ,ತಾನು ಸನ್ಯಾಸಿನಿ ಯಾಗಬೇಕೆಂದು ಬಯಸಿದ್ದ ಶ್ರೀಲಕ್ಷ್ಮಿಗೆ ತನಗೆ ದೊರೆತ ಸಂಸಾರ ಸುಖವನ್ನು ತ್ಯಾಗ ಮಾಡಿದ ಅನುರಾಧಳ ಬಗ್ಗೆ ಹೆಮ್ಮೆ ಎನಿಸಿತು. ಮೈ ಮಾರಿಕೊಂಡು ಜೀವನವನ್ನು ಕಟ್ಟುಲು ಬಯಸಿದ ತನಗೆ ತನ್ನ ಗಂಡನನ್ನೆ ಧಾರೆ ಎರೆಯಲು ಮುಂದಾದ ಶ್ರೀಲಕ್ಷ್ಮಿ ಬಗ್ಗೆ ಅತಿಯಾದ ಹೆಮ್ಮೆ ಎನಿಸಿತು ಅನುರಾಧಳಿಗೆ. ಸಂಸಾರದ ಸುಖದಲ್ಲಿ ತೇಲಾಡಿದಳು ಶ್ರೀಲಕ್ಷ್ಮಿ.
ಸಂಸಾರಿಕ ಸುಖವನ್ನು ಮರೆತು ದೇವರ ಧ್ಯಾನದಲ್ಲಿ ಮುಕ್ತಿಯನ್ನು ಕಾಣುವ ದಾರಿಯಸೇರಲು ಗುರುಗಳ ಮಾರ್ಗದರ್ಶನದಲ್ಲಿ ತನ್ನ ತಾನೆ ಮರೆತಳು ಅನುರಾಧ. ಈ ಇಬ್ಬರ ಅದಲು ಬದಲು ನಿರ್ಧಾರಗಳು ಇಬ್ಬರ ಬದುಕನ್ನೆ ಬದಲಿಸಿದವು.


  • ಗುರುಮೂರ್ತಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading