ಖ್ಯಾತ ಬರಹಗಾರರಾದ ಕೇಶವ ಮಳಗಿ ಅವರು ಆಫ್ರಿಕನ್ ಖಂಡದ ಕೆಲವು ಜಾನಪದ ಪದಗಳನ್ನು ಓದುಗರ ಮುಂದಿಟ್ಟಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
ಈ ಕಪ್ಪು ವಿಶಾಲ ಭೌಗೋಳಿಕ ಪ್ರದೇಶವನ್ನು ಮಾನವನ ವಿಕಾಸದ ತೊಟ್ಟಿಲು ಎನ್ನುತ್ತಾರೆ. ಅಬ್ಜ ವರ್ಷಗಳ ಹಿಂದೆ ಈ ತಾವಿನಿಂದಲೇ ಮನುಷ್ಯ ಅಂಬೆಗಾಲಿಟ್ಟು, ತೊದಲು ನುಡಿ, ಒಂಟಿ ಹೆಜ್ಜೆಯ ನಡೆ ಕಲಿತು, ದಾಂಗುಡಿಯಿಡುತ್ತ ವಿಶ್ವದೆಲ್ಲೆಡೆ ಪಸರಿಸಿ, ವಿವಿಧ ಬಣ್ಣ, ರೂಪಗಳ ಧರಿಸಿ ಬದುಕುವುದನ್ನು ಕಲಿತನೆಂದು ಎಲ್ಲ ಬಗೆಯ ಶಾಸ್ತ್ರಗಳು ಹೇಳುತ್ತವೆ. ತೀರ ಇತ್ತೀಚಿನ ಡಿಎನ್ಎ ಅಧ್ಯಯನ ಸಂಶೋಧನಾ ಸತ್ಯಗಳೂ ಅದನ್ನೇ ಅರಹುವವು. ಹಾಗೆಂದೇ, ಮನುಷ್ಯನ ನಾಗರಿಕತೆಗೆ ಆಫ್ರಿಕ ಒಂದು ಬಹುಮೂಲ್ಯ ವಜ್ರ. ಈ ಖಂಡದ ಬದುಕು ಕಲ್ಲುಬಂಡೆ, ಮುಖವಾಡ, ಶಿಲ್ಪ, ಗುಹೆ, ಪಿರಮಿಡ್ಡು, ಹಸ್ತಪ್ರತಿ, ಉಲಿ ಹೀಗೆ ವಿವಿಧ ಪ್ರಕಾರಗಳಲ್ಲಿ, ವಿವಿಧ ಪ್ರತಿಮೆಗಳಲಿ ಒಡಮೂಡಿವೆ. ವಿಶ್ವದ ಪ್ರಾಗೈತಿಹಾಸ, ಇತಿಹಾಸ, ಆಧುನಿಕ ಚರಿತ್ರೆ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಜಾನಪದಶಾಸ್ತ್ರಗಳ ಅಧ್ಯಯನಗಳು ಈ ಖಂಡಕ್ಕೆ ಮುಖ್ಯ ಪಾಲನ್ನು ನೀಡದೆ ಮುಂದಡಿ ಇಡವು. ವಿಶ್ವದ ಅತಿ ಹೆಚ್ಚು ಕಲ್ಲುಬಂಡೆ ಬಣ್ಣದ ಚಿತ್ರಗಳು ಸಿಗುವುದು ಇಲ್ಲಿಯೇ. ಬೇಟೆ-ಬೇಟ, ಆಟ-ನೋಟ-ಊಟ, ಅರ್ಚನೆ-ಆಚರಣೆ, ಹುಟ್ಟು-ಹಸೆ ಇತ್ಯಾದಿಗಳನು ತೆರೆದಿಡುವ ಪ್ರಾಗೈತಿಹಾಸ ಚಿತ್ರಗಳೇ ಲಿಪಿಯ ಹುಟ್ಟಿಗೆ ಮೂಲ ಎಂಬುದು ಸಂಜ್ಞಾವಿಜ್ಞಾನದ ನಂಬುಗೆ. ಹಳೆಯ ಲಿಪಿಗಳಲ್ಲೊಂದೆಂದು ಗುರುತಿಸಲಾಗುವ ಗೀಸ಼್ (ಕ್ರಿ.ಪೂ. ಐದನೆಯ ಶತಮಾನ) ಮೈದಳೆದದ್ದು ಈ ಖಂಡದಲ್ಲಿಯೇ. ಗುಹೆಗಳ ರೇಖಾಚಿತ್ರಗಳಿಂದ ಸಂಜ್ಞೆ, ಶಬ್ದ, ಲಿಪಿ, ಭಾಷೆಗಳು ವಿಕಾಸ ಹೊಂದಿ, ಆಧುನಿಕ ಲೋಕವನ್ನು ಬಿಡದೆ ಕಾಡುವ ಮಾಯೆಯಾಗಿ ಕಾಣಿಸುವುದು ಈ ಖಂಡಕ್ಕೇ ಹೇಳಿ ಮಾಡಿಸಿದ್ದು.
ಪ್ರೇಮ ಹಕ್ಕಿ ರೆಕ್ಕೆಯ ಹಾಗೆ ವಿಶಾಲ
ಮೀರಿ ಎಲ್ಲ ಸರಹದ್ದು, ಸೇರುವುದು ನೀಲ
*
ಆತನೊಂದಿಗಿನ ಸರಸ ಸಂಯೋಗ
ನನ್ನದೇ ಹಸಿವನು ಹಿಂಗಿಸಲು
ಸಿಹಿತೆನೆಯ ಕಾಳು ಕೂಡಿಸಿದಂತೆ.
ಇಡೀ ಹೊಲವ ತಿರುಗಾಡಿ
ಹೆಕ್ಕಿ ಹೆಕ್ಕಿ ಸವಿದೇ ಸವಿದರೂ
ನನ್ನ ಮನಸಿಗೆ ತಣಿವೆಂಬುದಿಲ್ಲ.
*
ಓ ಮರೆಯಾಗಿ ಹೋದ ಗೆಣೆಕಾರ
ಮಕ್ಕಳು ಕಂದೀಲಿನ ದೀಪ ಹಚ್ಚುತ್ತಿದ್ದಂತೆ
ನಿನ್ನ ಗೋರಿಯ ಕಲ್ಲುಗಳಿಂದ
ಬೆಳಕು ಚಿಮ್ಮತೊಡಗುವುದು!
(ಸಹಾರಾ ಮರುಭೂಮಿಯ `ಬರ್ಬರ್’ ಜನಾಂಗದ ಜಾನಪದ ಸೊಲ್ಲು)
*
ಫಾತೀಮ ನನ್ನ ಶಾಣೆ ಪೋರಿ!
ಆಕೆ ಕೊರಳು ಕೊಂಕಿಸಿ ನೋಡದಿರುವಾಗಲೂ
ಆಕೆಯ ಕತ್ತು ಮನಮೋಹಕ
ಆಕೆ ಅಗಲಿಸಿ ಕುಳಿತಿರದಾಗಲೂ
ಸೊಂಟದ ನೋಟ ಬಲು ಸೊಗಸು.
ಅವಳ ಕೂದಲು ದಟ್ಟ
ಕಣ್ರೆಪ್ಪೆ ಕಪ್ಪು, ಕಂಗಳು ಬಿಳಿ
ದವಡೆ ಹಸಿರು, ಹೊಳೆವ ಹಲ್ಲು
ನಡು ಸಪೂರ, ಕೈಗಳು ಹಗೂರ
ಫಾತೀಮ ನನ್ನ ಶಾಣೆ ಪೋರಿ!
ನಾನಾಕೆಯನು ಕಾಣದಿರಕ
ಕಂಗಳಲಿ ವಿಷಾದ ತುಂಬುವುದು
ಆಕೆ ನನ ಕೂಡ ಮಾತನಾಡದಿರಕ
ಕಿವಿಯನು ವಿಷಗಾಳಿ ತುಂಬುವುದು
ಫಾತೀಮ ನನ #ಶಾಣೆ_ಪೋರಿ!
ಬೆಳಗಿನಲಿ ಬಿಸಿಲು ಬಾಡಿಸುವುದು
ಬೈಗಿನಲಿ ಚಳಿಯು ಕೊಲ್ಲುವುದು
ಎದೆಯ ತುಂಬ ಮಾತುಗಳೇ ಮುತ್ತಿವೆ
ಕಣ್ಣಿಂದ ಹನಿಗಳು ತೊಟ್ಟಿಕ್ಕುತಿವೆ.
ಕಣ್ಣೀರು ಕೋಡಿ ಹರಿಯಲಿ ಎಂದು
ಮರಳಿನಲಿ ಗುಂಡಿಯನು ತೋಡಿರುವೆ.
ನೀನೇ ಆವರಿಸಿರುವೆ. ಆದರೂ,
ಆರೈಕೆಯನು ನಿರಾಕರಿಸುವೆ
ನಾನು ಅಸ್ವಸ್ಥನಾಗಿರುವೆ.
ಚೇತರಿಸಿಕೊಳ್ಳಲು ಬಿಡದಿರುವೆ.
ಫಾತೀಮ ನನ ಶಾಣೆ ಪೋರಿ!
‘ಬಾ’ ಎಂದು ಒಮ್ಮೆ ಹೇಳು
ಓಡೋಡಿ ಬರುವೆನು.
‘ಬರಬೇಡ’ ಎನ್ನುವೆಯೋ
ನಾ ಹೇಗೂ ಬಂದೇ ಬರುವೆನು!
(ಸಹಾರಾ ಮರುಭೂಮಿಯ ‘ತೇಡ’ ಜನಾಂಗದ ಹಾಡು)
*
ಬಾಲೆಯರ ಗುಟ್ಟಾದ ಪ್ರೇಮದ ಹಾಡು!
ನೀನು ಸೊಂಟವ ಕುಣಿಸುವೆ
ನಾನೂ ನಡುವ ಕುಣಿಸುವೆ
ಎಲ್ಲರೂ ಸೊಂಟವನು ಕುಣಿಸೋಣ ಬನ್ನಿ
ನಾನು ಗೆಳೆಯನನು ಕೂಡಲು ಹೋಗುವೆ
ಜೋರು ಮಳೆಯೇ ಇರಲಿ ಹೋಗಿಯೇ ತೀರುವೆ
ಅವನು ಇರುವುದು ದೂರದಾ ಪಟ್ಟಣದಲಿ
ನಟ್ಟಿರುಳಾದರೂ ಸರಿ ಹೋಗಿಯೇ ತೀರುವೆ
ಎಲ್ಲರೂ ಸೊಂಟವನು ಕುಣಿಸೋಣ ಬನ್ನಿ
ಹಾದಿಯಲಿ ಅಡವಿ ಜಂತುಗಳು ಬೆನ್ನಟ್ಟಿದರೂ ಸರಿಯೇ
ಇಷ್ಟು ರಾತ್ರಿಯಲೇಕೆ ಬಂದೆ ಎಲೆ ಖೋಡಿ! ಎಂದು
ಗೆಣೆಕಾರ ತಪರಾಕಿ ಹಾಕಿದರೂ ಸರಿಯೇ
ಅವನನು ಕೂಡಲು ಹೋಗಿಯೇ ತೀರುವೆ
ಎಲ್ಲರೂ ಸೊಂಟವನು ಕುಣಿಸೋಣ ಬನ್ನಿ
ಒಡನಾಡಿಯ ಮನಸನು ಅರಿಯದವನು
ಲೋಕದ ಆಳವನು ತಿಳಿಯದ ಮೂಳನು
ಎಲ್ಲರೂ ಸೊಂಟವನು ಕುಣಿಸೋಣ ಬನ್ನಿ
(ತಾಂಜೇ಼ನಿಯದ ‘ಕಿಪಸಿಗೀ’ ಜನಾಂಗದ ಹಾಡು)
*
ಪ್ರೇಮಕೆ ಗುಟ್ಟೆಂಬುದಿಲ್ಲ
ಪ್ರೀತಿಗೆ ಗುಟ್ಟು ಎಂದರೇನೆಂಬುದೇ ಗೊತ್ತಿಲ್ಲ
ಬಚ್ಚಿಟ್ಟರೆ ಬಿಚ್ಚಿಕೊಳ್ಳುವುದು ತಾನೇ ಎಲ್ಲ
ಪ್ರೇಮದಲಿ ಆಯ್ಕೆ ಎಂಬುದೇ ಇಲ್ಲ
ಪ್ರೇಮ ಮೈಯನು ಹೊಕ್ಕಾಗ
ತಾನಿನ್ನೂ ಮಾಡೇ ಇರದ ಸಂಗತಿಗಳನು
ತಾವಾಗಿಯೇ ಪ್ರೇಮಿಗಳು ತೆರೆದಿಡುವರು ಎಲ್ಲ
ಪ್ರೀತಿಗೆ ಕರುಣೆಯೆಂಬುದೇ ಇಲ್ಲ
ಮುದುಕರನೂ ಅವಮಾನಕೆ ದೂಡುವುದಲ್ಲ!
ತಾನು ಬಯಸಿದೆಡೆ ಪ್ರೀತಿ ಎಂದೂ ಮರಳುವುದಿಲ್ಲ
ಪ್ರೇಮ ಮೈದುಂಬಿದವನು
ಮೆತ್ತಗಾಗಿ ಕರಗಿಹೋಗುವನಲ್ಲ
ಪ್ರೀತಿ ತನ್ನನೊಂದನು ಬಿಟ್ಟು
ಬೇರೆಲ್ಲ ವಿಷಯಗಳ ನಿವಾಳಿಸಿ ಒಗೆವುದಲ್ಲ.
ನೀನು ಪ್ರೀತಿಗೆ ಕಿರಿಕಿರಿಯ ಮಾಡುವೆಯೋ
ಒಂದೊಮ್ಮೆ ಆವಿಯಾಗಿ ಹೋಗುವೆಯಲ್ಲ
ಪ್ರೇಮವೊಂದು ಕಾಯಿಲೆ
ವಾಸಿಯಾಗದ ಮಾರಕ ರೋಗ!
(`ಸ್ವಾಹಿಲಿ’ ಜನಪದ ಹಾಡು)
*
ಬಾಲೆಯ ಬಾಳು!
ಓ ನನ್ನ ಮಾಂವ, ನನ್ನ ಜೀವದ ಒಡನಾಡಿ
ಅಂದೊಮ್ಮೆ, ನಿನ ಮ್ಯಾಗ ಮನಸಿಲ್ಲ ಅಂದಿದ್ದೆನಲ್ಲೋ!
ನೀನು ನೀಗಿಕೊಂಡಿರುವೆ ಎಂದು ಊರವರು ಹೇಳಿದರು
ಸತ್ತಾಗ ಹೂಳಲು ನನ್ನ ಗೋರಿಯಿರುವ ಗುಡ್ಡಕೆ ಓಡಿದೆ
ಕಲ್ಲುಗಳ ಪೇರಿಸಿದೆ, ನನ್ನ ಹೃದಯವನು ಹೂತಿಟ್ಟೆ.
ನನ್ನ ಮೊಲೆಗಳ ನಡುವೆ ಹುದುಗಿದ ನಿನ್ನ ಸುವಾಸನೆ
ಇಲ್ಲೀಗ ನನ್ನ ಮೂಳೆಗಳ ಹೊಕ್ಕು ಬೆಂಕಿಯಂತೆ ಉರಿಸುತಿಹುದು.
(ಸಹಾರಾ ಮರುಭೂಮಿಯ ‘ತೌರೆಕ್’ ಬುಡಕಟ್ಟಿನ ಪದ)
*
ಬಾಲೆಯ ಅಳಲು!
ದೂರದ ಬೆಟ್ಟಗಳು ನನ್ನಿಂದ ನಿನ್ನನು ಮರೆಮಾಚಿಹವು
ಹತ್ತಿರದಲ್ಲಿರುವವು ನನ್ನನು ಆವರಿಸಿಕೊಂಡಿಹವು.
ನನ್ನ ಭಾರದೆದೆಯಿಂದ ಸಮೀಪದ ಬೆಟ್ಟಗಳ
ಕುಟ್ಟಿ ಮಾಡಲಿ ಎಂದೇ? ಇಲ್ಲ, ದೂರದೂರಿಗೆ
ಹಾರಿ ಹೋಗಲು ಸಿದ್ಧವಾಗಿರುವ ರೆಕ್ಕೆಯಿರುವ ಹಕ್ಕಿ ನಾನೆಂದೇ?
(‘ಷೋಹಾ’ ಜನಪದ ಸೊಲ್ಲು)
(ಈ ಪದ್ಯಗಳನ್ನು ನಿನ್ನೆ ಟಿವಿ೯ ಕನ್ನಡ ಡಿಜಿಟಲ್ನಲ್ಲಿ ಶ್ರೀದೇವಿ ಕಳಸದ ಪ್ರಕಟಿಸಿದ್ದಾರೆ. ಇಲ್ಲಿರುವುದು ಪರಿಷ್ಕೃತ ರೂಪ.
ಚಿತ್ರಗಳು ಸಾಂದರ್ಭಿಕ. ಕಾಪಿರೈಟ್ಗೆ ಒಳಪಟ್ಟಿರಬಹುದು)
- ಕೇಶವ ಮಳಗಿ (ಖ್ಯಾತ ಕತೆಗಾರರು, ಲೇಖಕರು, ಕವಿಗಳು)