ಹೆಣ್ಣುಮಕ್ಕಳು ನಲವತ್ತು ವರ್ಷ ದಾಟಿದ ನಂತರ ಹೊಸಜನ್ಮ ಪಡೆಯುತ್ತಾರೆ ಎಂದು ನಾನೊಂದು ಕಡೆ ಓದಿದ್ದೆ. ಈ ವಯಸ್ಸಿನಲ್ಲಿ ದೇಹದಲ್ಲಿ ಹಾರ್ಮೋನುಗಳ ವ್ಯತ್ಯಾಸದಿಂದಾಗಿ ಕೆಲವೊಂದು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ವಾಣಿ ಸುರೇಶ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಪರಿಚಿತರೊಬ್ಬರು ನನ್ನ ವಾಟ್ಸ್ಯಾಪ್ ಸ್ಟೇಟಸ್ ಗಳನ್ನು ನೋಡಿ “ ಎಂತ ಮಾರಾಯ್ತಿ, ನಿನ್ನ ಮಕ್ಕಳಿಗಿಂತ ನೀನೇ ಜಾಸ್ತಿ ಚುರುಕು ಆಗಿದ್ದೀಯಲ್ಲಾ!” ಎಂದು ಮೆಸೇಜ್ ಹಾಕಿದ್ದರು. ಈ ಮಾತನ್ನು ಹಲವು ಬಾರಿ ಕೇಳಿರುವುದರಿಂದ ನಾನು ಸುಮ್ಮನೆ ನಕ್ಕುಬಿಟ್ಟೆ ಅಷ್ಟೇ. ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂದು ನಂಬುವವಳು ನಾನು. ಇಲ್ಲದಿದ್ದರೆ ಯಾವತ್ತೂ ಮುಟ್ಟದಿದ್ದ ಕೀ ಬೋರ್ಡನ್ನು ಕಲಿಯಲು, ಯಾವತ್ತೂ ಮಾಡದಿದ್ದ ನೃತ್ಯವನ್ನು ಮಾಡಲು ನಾನು ನಲವತ್ತು ವರ್ಷ ದಾಟಿದ ಮೇಲೆ ಉತ್ಸಾಹ ತೋರುತ್ತಿದ್ದೆನೇ? ಅಂದ ಹಾಗೆ, ಕಾಲೇಜು ಬಿಟ್ಟ ಮೇಲೆ ನಾನು ಪುನಃ ಪೆನ್ನು ಹಿಡಿದದ್ದು ನಲವತ್ತರ ತಾರುಣ್ಯ ಗಳಿಸಿದ ಮೇಲೆಯೇ!
ಹೆಣ್ಣುಮಕ್ಕಳು ನಲವತ್ತು ವರ್ಷ ದಾಟಿದ ನಂತರ ಹೊಸಜನ್ಮ ಪಡೆಯುತ್ತಾರೆ ಎಂದು ನಾನೊಂದು ಕಡೆ ಓದಿದ್ದೆ. ಈ ವಯಸ್ಸಿನಲ್ಲಿ ದೇಹದಲ್ಲಿ ಹಾರ್ಮೋನುಗಳ ವ್ಯತ್ಯಾಸದಿಂದಾಗಿ ಕೆಲವೊಂದು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಅದರ ಜೊತೆಗೆ ಮಧ್ಯ ವಯಸ್ಸಿನಲ್ಲಿ ಉಂಟಾಗುವ ತಲ್ಲಣಗಳನ್ನು ಎದುರಿಸುವ ಕಷ್ಟ ಬೇರೆ. ಆದರೆ ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಜೀವನದ ಪ್ರತಿಯೊಂದು ಗಳಿಗೆಯನ್ನು ಸವಿಯುವ, ತಮ್ಮ ಗುರಿಯನ್ನು ಸಾಧಿಸಲು ಮನಸ್ಸು ಮಾಡುವ ಮಹಿಳೆಯರ ವರ್ಗ ದೊಡ್ಡದಿದೆ.
ಮದುವೆ ಮತ್ತು ಮಾತೃತ್ವ- ಇವೆರಡು ಹೆಣ್ಣಿನ ಜೀವನದಲ್ಲಿ ತಿರುವುಗಳನ್ನು ಮೂಡಿಸುತ್ತಾ ಬದುಕನ್ನು ಬದಲಿಸುವಂಥವು. ನಾನು ನೋಡಲು ಹೋಗಿದ್ದ ಭರತನಾಟ್ಯದ ರಂಗಪ್ರವೇಶಗಳಿಗೆ ಅತಿಥಿಯಾಗಿ ಬಂದವರೆಲ್ಲಾ ಹೇಳಿದ ಮಾತು ಒಂದೇ. ತಪಸ್ಸಿನಂತೆ ವರ್ಷಗಳ ಕಾಲ ಮಾಡಿದ ನೃತ್ಯಾಭ್ಯಾಸವನ್ನು ಮದುವೆಯ ನಂತರ ನಿಲ್ಲಿಸಬೇಡಿರೆಂದು ಕೇಳಿಕೊಂಡದ್ದು! ಸಿನೆಮಾ, ನಾಟಕ, ಗಾಯನ, ಕ್ರೀಡಾಕ್ಷೇತ್ರದಲ್ಲಿರುವವರ ಕಥೆಯೂ ಇದಕ್ಕಿಂತ ಹೊರತಿಲ್ಲ. ನಾಲ್ಕು ಜನರು ಏನೆನ್ನುವರೋ ಎಂಬ ಭಯದಲ್ಲೇ ತಮ್ಮ ಪ್ರತಿಭೆಯನ್ನು ಚಿವುಟಿ ಹಾಕಿ ಮನದಲ್ಲೇ ಕೊರಗುವಂಥಾ ಸ್ಥಿತಿ ಹೆಚ್ಚಿನವರದ್ದು.

ತಾಯಿಯಾಗಿ ತನ್ನ ಮಗುವಿನ ಜವಾಬ್ದಾರಿಯನ್ನು ವಹಿಸಿಕೊಂಡ ಮೇಲೆಯಂತೂ ಹೆಣ್ಣು ತ್ಯಾಗಮಯಿಯೇ ಆಗಿ ಹೋಗುತ್ತಾಳೆ. ಉದ್ಯೋಗದಲ್ಲಿ ಟ್ರಾನ್ಸ್ಫರ್, ಪ್ರೊಮೋಶನ್ ಗಳನ್ನು ಪಡೆದುಕೊಂಡರೆ ಮಕ್ಕಳತ್ತ ಗಮನ ನೀಡಲು ಸಾಧ್ಯವಿಲ್ಲವೆಂದು ಅವನ್ನು ನಿರಾಕರಿಸುವವರೂ ಇದ್ದಾರೆ. ಮಕ್ಕಳು ಸ್ವಲ್ಪ ದೊಡ್ಡವರಾಗುವವರೆಗೆ ಮನೋರಂಜನೆಯಂತೂ ದೂರದ ಮಾತು. ಮನೆ, ಆಫೀಸು, ಮಕ್ಕಳ ಶಾಲೆ, ಕಾಯಿಲೆ-ಕಸಾಲೆಗಳನ್ನೆಲ್ಲಾ ನಿಭಾಯಿಸುತ್ತಾ ಅವಳು ಹೇಗೋ ನಲವತ್ತರ ಅಂಚನ್ನು ತಲುಪಿಬಿಡುತ್ತಾಳೆ. ಈ ಘಟ್ಟದಲ್ಲಿ ಮಕ್ಕಳು ದೊಡ್ಡವರಾಗಿ ಸ್ವತಂತ್ರರಾಗುತ್ತಿದ್ದಂತೆ ಅವಳು ನೆಮ್ಮದಿಯ ಉಸಿರನ್ನು ಬಿಡುವಂತಾಗುತ್ತದೆ.
ಬದುಕು ಕಲಿಸುವ ಪಾಠ ಬಲು ದೊಡ್ಡದು. ಈ ಕಾಲಾವಧಿಯಲ್ಲಿ ಸಾಕಷ್ಟು ಅಗ್ನಿ ಪರೀಕ್ಷೆಗಳನ್ನು ದಾಟಿಕೊಂಡು ಬಂದು ಪ್ರೌಢತೆ ಪಡೆದವಳಿಗೆ ತನ್ನ ಗುರಿ ಸ್ಪಷ್ಟವಾಗಿ ಬಿಡುತ್ತದೆ. ತಾನು ಕಳೆದುಕೊಂಡದ್ದನ್ನು ಮುಂದಿರುವ ವರ್ಷಗಳಲ್ಲಿ ಸಾಧಿಸಬೇಕೆಂದು ಅದರ ನೀಲನಕ್ಷೆಯನ್ನು ಅವಳು ತಯಾರಿಸಿ ಬಿಡುತ್ತಾಳೆ. ಸಂಬಂಧ ಮತ್ತು ಗೆಳೆತನದ ವಿಷಯದಲ್ಲಿ ಚೂಸಿಯಾಗಿ ತನ್ನನ್ನು ಪ್ರೋತ್ಸಾಹಿಸುವವರೊಂದಿಗೆ ಮಾತ್ರ ಬೆರೆಯತೊಡಗುತ್ತಾಳೆ. ಹಣಕಾಸಿನ ವಿಷಯದಲ್ಲಿ ಚುರುಕಾಗುತ್ತಾಳೆ. ನಾಲ್ಕು ಜನರು ಏನನ್ನುವವರೋ ಎಂಬ ಯೋಚನೆ ಅವಳ ತಲೆಯೊಳಗೆ ಈಗ ಬರಲಾರದು. ತನ್ನ ಬದುಕನ್ನು ತನ್ನಿಷ್ಟದಂತೆ ಬದುಕಬೇಕೆಂಬ ಹಠವನ್ನು ಕೊನೆಗೂ ಸಾಧಿಸಿ ಬೀಗುತ್ತಾಳೆ!

ನಲವತ್ತರ ನಂತರ ಸಾಧನೆಗೈದ ಮಹಿಳೆಯರ ಪಟ್ಟಿಯನ್ನು ನಾನು ಗೂಗಲ್ ನಲ್ಲಿ ನೋಡಿ ಬೆರಗಾದೆ. ಇದರಲ್ಲಿ ಹೆಚ್ಚಿನವರು ಹವ್ಯಾಸವನ್ನು ಹೊಸದಾಗಿ ಬೆಳೆಸಿಕೊಂಡು ತಾವೂ ಅದರೊಂದಿಗೆ ಬೆಳೆದವರು. ನನ್ನ ಸುತ್ತಮುತ್ತಲಿನ ಹೆಂಗಳೆಯರೂ ಇದಕ್ಕೆ ಹೊರತಲ್ಲ. ಯಾವತ್ತೂ ಕ್ರಿಯಾಶೀಲರಾಗಿದ್ದುಕೊಂಡು ಪ್ರತಿಯೊಂದು ಕ್ಷಣವನ್ನೂ ಜೀವಿಸುವ ಉತ್ಸಾಹಿಗಳೇ ನನಗೆ ಮಾದರಿಯಾಗಿದ್ದಾರೆ.
ಎಲ್ಲರ ಜೀವನವೂ ಒಂದೇ ಸಮನಾಗಿಲ್ಲ ನಿಜ. ಆದರೆ ಸಮಸ್ಯೆಗಳು ಯಾರಿಗಿಲ್ಲ? ಅವುಗಳದ್ದೇ ಗುಂಗಿನಲ್ಲಿದ್ದುಕೊಂಡು ಜೀವನವನ್ನು ವ್ಯರ್ಥ ಮಾಡುವುದೇಕೆ? ಹತ್ತಾರು ಸಮಸ್ಯೆಗಳ ನಡುವೆಯೂ ಅರಳುವ ಹೆಣ್ಣುಮಕ್ಕಳೇ ನಿಜ ಜೀವನದಲ್ಲಿ ನಾಯಕಿಯರು!
- ವಾಣಿ ಸುರೇಶ
