ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೬)

ನರ್ಮದಾ ಪರಿಕ್ರಮ ಪ್ರಾರಂಭ ಮಾಡಿ ಇಂದಿಗೆ ಎಂಟು ದಿನಗಳು ಕಳೆದವು 330 ಕಿ. ಮೀ ಗಿಂತ ಹೆಚ್ಚು ದೂರದವರೆಗೆ ನಂದಿಯನ್ನು ಓಡಿಸಿ, ಬೆಟ್ಟಗಳನ್ನು ಏರಿದೆ, ಅಜ್ಞಾತ ಸ್ಥಳಗಳ ಭೇಟಿ ಮಾಡಿದೆ. ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

ದೇಹ ದಣಿದಂತೆ ಅನಿಸಿತು.. ಇಂದು ಪ್ರಕಾಶಾ ಊರಿನ ಶ್ರೀ ಸದ್ಗುರು ಆಶ್ರಮದಲ್ಲಿ ಉಳಿದೆ. ಇಂದು ದತ್ತ ಜಯಂತಿ ಮತ್ತು ಹುಣ್ಣಿಮೆಯಾದ್ದರಿಂದ.. ತ್ರಿವೇಣಿ ಸಂಗಮ ಕ್ಷೇತ್ರ ಮತ್ತು ದಕ್ಷಿಣ ಕಾಶಿಯಾದ “ಪ್ರಕಾಶಾ” ಪ್ರಶಸ್ತವೆನಿಸಿತು.

ಪ್ರತಿ ಕಾಶಿ ಎಂಬ ಹೆಸರೆ ಮುಂದೆ “ಪ್ರಕಾಶಾ” ಆಯಿತು. ಈ ಊರಿನಲ್ಲಿ 108 ಶಿವ ಮಂದಿರಗಳಿವೆ ಎಲ್ಲವೂ ಪ್ರಾಚೀನ, ಶಕ್ತಿಶಾಲಿ ಮತ್ತು ಅಷ್ಟೇ ಮಹತ್ವದವು.

ಈ ಊರಿನಲ್ಲಿ ಶಿವನಿಗೆ ವಾಸವಿರುವಂತೆ ಬೇಡಿದಾಗ ಆತ ಇವರಿಗೆ ಒಂದು ವಾಗ್ಧಾನವಿತ್ತನಂತೆ, ಬೆಳಕು ಹರಿಯುವುದರೊಳಗೆ 108 ಶಿವಮಂದಿರಗಳನ್ನು ಸ್ಥಾಪಿಸಿ ಎಂದು. ಆಗ 107 ಶಿವಮಂದಿರವನ್ನು ಯಶಸ್ವಿಯಾಗಿ ಸ್ಥಾಪಿಸಲಾಯಿತು ಆದರೆ ಒಂದು ಶಿವಲಿಂಗದ ಗರ್ಭಗುಡಿ ಕಟ್ಟುವುದರೊಳಗೆ ಬೆರಳು ಹರಿದದ್ದರಿಂದ…

ಈ ಊರಿಗೆ “ಪ್ರತಿ ಕಾಶಿ” ಎಂದು ನಾಮಕರಣ ಮಾಡಿದನಂತೆ ಶಿವ. ಈ ಊರಿನ ಸಂಪೂರ್ಣ ದರ್ಶನ ಮಾಡಿದರೆ 100 ಬಾರಿ ಕಾಶಿಗೆ ಹೋದ ಪುಣ್ಯ ಪ್ರಾಪ್ತವಾಗುವುದಂತೆ, ಆದ್ದರಿಂದಲೇ…

“ಸೌ ಬಾರ್ ಕಾಶಿ…..ಏಕ್ ಬಾರ್ ಪ್ರಕಾಶಿ”

ಉತ್ತರ ಮೇ ಕಾಶಿ, ದಕ್ಷಿಣ ಮೇ ಪ್ರಕಾಶಿ…….

This slideshow requires JavaScript.

 

ಹೇಳಿಕೆ ಜನಮಾನಸದಲ್ಲಿ ಚಾಲ್ತಿಯಲ್ಲಿದೆ.

ಈ ಊರಿನ ಕೇದಾರೇಶ್ವರ, ಕಾಶಿ ವಿಶ್ವನಾಥ, ಸಂಗಮೇಶ್ವರ, ಶ್ರೀ ಗಣೇಶ, ಶ್ರೀ ಕಾರ್ತಿಕೇಯ ಮಂದಿರ, ಮಾನಸಿದೇವಿ ಮಂದಿರ, ರೇಲೆ ಹನುಮಾನ್ ಮಂದಿರ, ಪುಷ್ಪದಂತೇಶ್ವರ ಮಂದಿರ, ಋಣಮುಕ್ತೇಶ್ವರ ಮಂದಿರ, ವಿಶ್ವೇಶ್ವರ ಮಂದಿರಗಳ ದರ್ಶನ ಮಾಡಿ ಪ್ರಾರ್ಥಿಸಿದೆ.

ಇವೆಲ್ಲವುಗಳು ಪುರಾಣ ಪ್ರಸಿದ್ಧ ದೇವಸ್ಥಾನಗಳು..

ಈ ಊರಿಗೆ “ಪ್ರಕಾಶಾ” ಹೆಸರು ಬರಲು ಕಾರಣವಾದ ದೇವಸ್ಥಾನದಲ್ಲಿ ಕೇವಲ “ಶಿವಲಿಂಗ” ಸ್ಥಾಪಿಸಲಾಗಿದೆ, ಗರ್ಭಗುಡಿ ಇಲ್ಲ.. ಈಗಲೂ ಬಿಸಿಲಿನಲ್ಲಿ, ಅದೂ ತಾಪಿ ನದಿಯ ದಂಡೆಯ ಮೇಲೆ ಅನುಷ್ಟಾನಕ್ಕೆ ಕೂತಂತಿದೆ.

ಈ ಊರನ್ನು “ತ್ರಿವೇಣಿ ಸಂಗಮ” ಎಂದು ಕರೆಯಲು ಮುಖ್ಯ ಕಾರಣ ಇಲ್ಲಿ ತಾಪಿ ನದಿಗೆ ಗೋಮತಿ ಮತ್ತು ಇನ್ನೊಂದು ಗುಪ್ತನದಿ ಬಂದು ಸೇರುವವು. “ತಾಪಿ” ನದಿ “ನರ್ಮದಾ ನದಿಯಂತೆ” ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಯಾಗಿದೆ.

ಇದು ಭಾರತದ ಎರಡನೆಯ ಅತಿ ದೊಡ್ಡ ಪಶ್ಚಿಮಕ್ಕೆ ಹರಿಯುವ ನದಿ. ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ 724 ಕಿ.ಮೀ ಉದ್ದಕ್ಕೆ ಹರಿಯುತ್ತದೆ. ತಾಪಿ ನದಿಯನ್ನು ತಪ್ತಿ, ತಾಪತಿ, ತಾಪೀ, ಎಂದು ಕರೆಯಲಾಗುತ್ತದೆ.

ನರ್ಮದೆಯ “ಅವಳಿ ಜವಳಿ” ನದಿಯಂದು ತಾಪಿಗೆ ಹೆಸರಿದೆ. ಇದೂ ಸಹ “ಅರೇಬಿಯನ್ ಸಮುದ್ರ” ದಲ್ಲಿ ಲೀನವಾಗುವುದು. ಸಾತ್ಪುರ ಬೆಟ್ಟಗಳು ನರ್ಮದಾ ಮತ್ತು ತಾಪಿ ನದಿಯನ್ನು ಬೇರ್ಪಡಿಸುವವು. ಎರಡೂ ನದಿಗಳ ದಿಕ್ಕು ವಿರುದ್ಧವಾಗಿವೆ.

ಬೆಳಿಗ್ಗೆ 5:30 ಕ್ಕೆ ಆಶ್ರಮದಲ್ಲಿ ಚಹಾ!! ಕೊಡತೊಡಗಿದರು.. ಮಲಗಿದವ ದಡ್ಡನೆ ಎದ್ದು ಕೂತೆ..

ಚಳಿಯ ಆರ್ಭಟ ಹೆಚ್ಚೇ ಇದ್ದುದರಿಂದ ಚಹಾ!! ಕುಡಿದ ತಕ್ಷಣ, ಲವಲವಿಕೆ ತುಂಬಿಕೊಂಡು. ಮುಂದಿನ ಪಯಣಕ್ಕೆ ಅಣಿಯಾಗತೊಡಗಿದೆ. 7 ಗಂಟೆಗೆ ಇರುವ ಲಗೇಜುಗಳನ್ನು ನಂದಿಯ ಹೆಗಲಿಗೇರಿಸಿ.. ಪ್ರಯಾಣ ಶುರುಮಾಡಿದೆ.

ನಂದಿ.. ಶೂಲಪಾಣಿ ಕಾಡಿನ ದುರ್ಗಮ ದಾರಿಯೊಳಗೆ ಹೈವೇ ಕಂಡು ಹೂಂಕರಿಸಿ ಓಡತೊಡಗಿದ.. ಮುಂದೆ ನಿಂತಿದ್ದು ಅಕ್ಕಲಕುಂವಾ ಎನ್ನುವ ಊರಿನಲ್ಲಿ, ಅದೂ 40 ಕಿ.ಮೀ ದಣಿಯದ ದೂರದಲ್ಲಿ. ಅಕ್ಕಲಕುಂವಾ ಸ್ಥಳದಲ್ಲಿ ಪುರಾತನ ದೇವಾಲಯಗಳಿವೆ. ಕಾಳಿ ಮಾತಾ ಮಂದಿರ ಮತ್ತು ಸಿದ್ದೇಶ್ವರ ಮಹಾದೇವ ಮಂದಿರ.

ಕಾಳಿ ಮಾತೆಯ ಮಂದಿರ ಪುರಾತನವಾಗಿದ್ದು, ಜಾಗೃತ ಕ್ಷೇತ್ರ. ಹಲವು ಸಾಧಕರನ್ನು ಇಲ್ಲಿ ಗಮನಿಸಬಹುದು. ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು ಆದರೆ ಅದಕ್ಕೆ ಗಾಜಿನ ಕವಚದಲ್ಲಿ ಅಡಗಿಸಲಾಗಿದೆ. ದೇವಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗುವುದಿಲ್ಲ.‌.. ಕಣ್ಣಿ ಕೀಲಿಸಿ ದೃಷ್ಟಿಸಿದರೆ ಕೆಲವೇ ಕ್ಷಣಗಳಲ್ಲಿ ಮೈಯಲ್ಲಿ ನಡುಕ ಶುರುವಾದಂತೆ ಭಾಸವಾಗುತ್ತೆ. ತಣ್ಣನೆಯ ಕಂಪನ.
ಕೆಲ ಹೊತ್ತು ಮಂದಿರದಲ್ಲಿ ಕೂತು.. ಮೈ ಮೆದುಳು ತಣ್ಣಗಾದ ಮೇಲೆ.. ನಂದಿಯನ್ನು ರಸ್ತೆಗಿಳಿಸಿದೆ.

ಬೆಳ್ಳಂಬೆಳಿಗ್ಗೆ ಚಳಿ ಎಷ್ಟು ತೀವ್ರವಾಗಿರುತ್ತದೆಯೋ.. ಅಷ್ಟೇ ತೀಕ್ಷ್ಣ ಬಿಸಿಲು ಸುಡುವುದು. ಅಕ್ಕಲಕುಂವಾದ ದೇವಸ್ಥಾನದಿಂದ ಸುಮಾರು 12 ಕಿ.ಮೀ ಕ್ರಮಿಸಿ, ರಸ್ತೆಯ ಪಕ್ಕಕ್ಕಿದ್ದ

“ರಾಮದೇವ ಮಂದಿರ”ಕ್ಕೆ ನಡದೆ. ತಣ್ಣನೆಯ ಶಾಂತ ದೇವಸ್ಥಾನ ಮೈಗೊಂದಿಷ್ಟು ತಂಪನ್ನೇರೆಯಿತು.

This slideshow requires JavaScript.

 

ದೇವಸ್ಥಾನದ ಎದುರಿನ ಮನೆಯ ಹೆಣ್ಣು ಮಗಳೊಬ್ಬಳು…

” ಮಹಾರಾಜ್.. ಬನ್ನಿ ಊಟ ಮಾಡಿ!!” ಎಂದು ಕರೆದಳು. ಅವಳ ಕಂಕುಳಲ್ಲಿ ಕೂತಿದ್ದ ಮಗುವು ಕೈ ಮುಗಿಯಿತು. ನಿಷ್ಕಲ್ಮಶ ಭಕ್ತಿ, ಏನೂ ಬಯಸದ ಆತಿಥ್ಯ ಭಾವ‌… ಅವರಲ್ಲಿ.
ಆ ತಾಯಿ ನನಗೆ ಊಟ ಕೊಟ್ಟು ಅನ್ನಪೂರ್ಣೇಶ್ವರಿಯಾದಳು.. ಅವಳ ಜೊತೆಗಿದ್ದ ಮಗುವಿಗೆ ನನ್ನಲ್ಲಿದ್ದ “ಬಿಸ್ಕಿಟ್” ಕೊಟ್ಟು.. ನೀರು ತುಂಬಿಸಿಕೊಂಡು… “ನರ್ಮದೇ ಹರ್..!!” ಜೈಘೋಷದೂಂದಿಗೆ ಹೊರಟು ನಿಂತೆ.

ರಸ್ತೆಯ ಒಂದು ಬದಿಗೆ ನರ್ಮದಾ ಪರಿಕ್ರಮವಾಸಿಗಳು ದಂಡುದಂಡಾಗಿ ಸಾಗುತ್ತಿದ್ದರು. ರಸ್ತೆಯಲ್ಲಿ ಎವೆಯಿಕ್ಕದೆ ಸಾಗುವ ವಾಹನಗಳು, ಅವುಗಳು ಎಬ್ಬಿಸುವ ಧೂಳು, ಚಿತ್ರವಿಚಿತ್ರ ಹಾರ್ನ್.. ಒಂದಕ್ಕೊಂದು ಪೈಪೋಟಿಗೆ ಬಿದ್ದಂತೆ ಸಾಗುವ ಪರಿ…. ಗೋಜಲು ಬದುಕಿನ ಭಾಗವಾಗಿ ಕಂಡವು.

ನಂದಿ ರಸ್ತೆಯಲ್ಲಿ ನುಗ್ಗುತಲೆ ಇದ್ದ… ಆತನ ವೇಗ, ವಯ್ಯಾರ.. ಗತ್ತಿಗೆ ನಾನಂತೂ ಮನಸೋತಿರುವೆ. ನೋಡನೋಡುತ್ತಲೆ ಮಹಾರಾಷ್ಟ್ರದ ಸರಹದ್ದು ಪಾರುಮಾಡಿ… “ಗುಜರಾತ್” ರಾಜ್ಯದ ದಾರಿಯಲ್ಲಿ ಅಶ್ವಮೇಧ ಕುದುರೆಯಂತೆ ನುಗ್ಗಿದ. ಅಧಿಕೃತವಾಗಿ “ಗುಜರಾತ್ ರಾಜ್ಯ”ದೊಳಗೆ ನುಗ್ಗಿ ಬಂದಾಯಿತು.

ಗುಜರಾತಿನ “ಸಾಗರಬಾರಾ” ಊರನ್ನು ಪಾರು ಮಾಡಿ, ಸಣ್ಣಗೆ ಎದೆ ಉಬ್ಬಿಸಿದ್ಧ ಏರುಗಳನ್ನು ಏರಿ.. ಪ್ರಯಾಣ ಮುಂದುವರಿಸಿದೆ….. ಶೂಲಪಾಣಿಯ ಗುಡ್ಡಗಾಡಿನ ಏರಿಳಿತಗಳು ಮತ್ತೆ ಪ್ರಾರಂಭವಾದವು… ಹಲವು ಗುಡ್ಡಗಳನ್ನು ಏರಿ ಸಮುದ್ರ ಮಟ್ಟದಿಂದ ತೀರಾ ಮೇಲೆ ಬಂದಾಯಿತು. ಸುತ್ತಲು ಭಂಡ ಧೈರ್ಯದಿಂದ ಸೆಟೆದು ನಿಂತ ಗುಡ್ಡಗಳು, ಕಾಡಿಲ್ಲದೆ ಬೋಳು ಬೋಳಾಗಿವೆ.

ಓಡುವ ಮೋಡಗಳು.,. ಸೆಟೆದು ನಿಂತ ಬೆಟ್ಟಗಳ ನೆತ್ತಿಗೆ ಮುತ್ತಿಡುವಂತೆ ಕಾಣುವ ಮನಮೋಹಕ ದೃಶ್ಯ ಮನಸ್ಸಿಗೆ ಹಿತವೆನಿಸುತ್ತದೆ. ಇವಾಗ…

ಬೆಟ್ಟದ ಮೇಲಿನ “ಗಿರಿನಾರ ಆಶ್ರಮದಲ್ಲಿ” ವಾಸ್ತವ್ಯ.

ಕುಳಿರ್ಗಾಳಿ,ಇಬ್ಬನಿ ಪ್ರೋಕ್ಷಣೆ.., ಸುತ್ತಲೂ ಬೆಟ್ಟ ಗುಡ್ಡಗಳು… ಭೂ ಮಟ್ಟದಿಂದ ತೀರಾ ಎತ್ತರ ಪ್ರದೇಶ. ಚಳಿಯ ಆರ್ಭಟ… ಬಾನಿನಲ್ಲಿ ಪೂರ್ಣಚಂದ್ರ.. ಹಾಲು ಚೆಲ್ಲಿದಂತ ಬೆಳದಿಂಗಳು. ಬೆಟ್ಟಗಳಿಗೆ ಹಾಲಿನಿಂದ ಅಭಿಷೇಕ ಮಾಡಿದಂತೆ ತೋರುತ್ತಿವೆ.

ಬೆಟ್ಟದ ಮೇಲಿನ ಆಶ್ರಮದ ಅಂಗಳೊದೋಳಗೆ ಮಲಗಲು ಅದೇಷ್ಟು ಜನುಮ ಪುಣ್ಯ ಮಾಡಿರಬೇಕೋ ತಿಳಿಯದು.

ಮತ್ತೆ ನಾಳೆ ಮುಂದಿನ ಪಯಣ.
ನರ್ಮದೇ ಹರ್

ಹಿಂದಿನ ಸಂಚಿಕೆಗಳು :


  •  ಡಾ. ಪ್ರಕಾಶ ಬಾರ್ಕಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading