‘ಅಜ್ಜಿಯ ಓಲೆ’ ಸಣ್ಣಕತೆ : ಶೈಲಜಾ ಹಾಸನ

ಅಜ್ಜಿ ಕಿವಿಗೆ ಹಾಕಿದ್ದ ಓಲೆನಾ ಕದ್ದಿದ್ದಾರೆ ಎನ್ನುವ ಅಜ್ಜಿಯ ಮಾತಿಗೆ ಮನೆಯವರೆಲ್ಲ ಗಲಿಬಿಲಿಯಾದರು. ಕಿವಿಯಲ್ಲಿದ್ದ ಓಲೆಯನ್ನು ಯಾರಾದರೂ ಕದ್ದಿಯಲು ಸಾಧ್ಯನಾ? ಎನ್ನುವ ಪ್ರಶ್ನೆ ಮನೆಯವರಿಗೆ ಕೊನೆಗೆ ಓಲೆ ಸಿಕ್ಕಿತೇ? ತಪ್ಪದೆ ಮುಂದೆ ಓದಿ ಕತೆಗಾರ್ತಿ ಶೈಲಜಾ ಹಾಸನ ಅವರ ಪೂರ್ತಿ ಕತೆ…

ಬೆಳಗಾಗಿದ್ದರೂ ಏಳುವ ಯೋಚನೆ ಇಲ್ಲದೆ ರೇವತಿ ಮಲಗಿಯೇ ಇದ್ದಳು. ಧೋ ಎಂದು ಸುರಿಯುತ್ತಿರುವ ಮಳೆ ಮೈ ನಡುಗಿಸುತ್ತಿರುವ ಚಳಿ ಏಳದಂತೆ ಮಾಡಿತ್ತು. ಭಾನುವಾರವಾದ್ದರಿಂದ ಕೆಲಸಕ್ಕೆ ಹೋಗುವ ಧಾವಂತವೂ ಇಲ್ಲ. ರೇಡಿಯೋದಲ್ಲಿ ಕೇಳಿ ಬರುತ್ತಿದ್ದ ಭಾವಗೀತೆ ಆಲಿಸುತ್ತ ಬೆಚ್ಚಗೆ ಹೊದ್ದು ಮಲಗಿರುವುದು ಅದೆಷ್ಟು ಹಿತ ಎಂದು ಇನ್ನಷ್ಟು ಮುದುರಿ ಮಲಗಿದಳು. ಹಾಗೆ ಸಿಹಿ ನಿದ್ದೆಗೆ ಜಾರುತ್ತಿದ್ದವಳನ್ನು ”ನನ್ನ ಓಲೆ, ನನ್ನ ಓಲೆ” ಎಂಬ ಕೂಗಾಟ ಅಜ್ಜಿಯ ಕೋಣೆಯಿಂದ ಕೇಳಿ ಬಂದಾಗ ರೇವತಿ ದಿಗ್ಗನೆದ್ದು ಕುಳಿತಳು. ಇವತ್ಯಾವ ರಾಮಾಯಣವೋ, ಭಾನುವಾರ ಒಂದಿನನಾದ್ರು ನೆಮ್ಮದಿಯಿಂದ ಕಣ್ತುಂಬ ನಿದ್ದೆ ಮಾಡೋಣವೆಂದರೆ ಇವತ್ತು ಬೆಳಗ್ಗೆನೇ ಅಜ್ಜಿ ಗಲಾಟೆ ಶುರುವಾಗಿಬಿಟ್ಟಿದೆ. ಎದ್ದು ಹೊರಗೆ ಬಂದು ಅಜ್ಜಿ ಕೋಣೆಗೆ ನಡೆದಳು. ಹಾಸಿಗೆ ಮೇಲೆ ಕುಳಿತಿದ್ದ ಅಜ್ಜಿ ರೇವತಿನ ಕಂಡ ಕೂಡಲೆ ”ನನ್ನ ಓಲೆನಾ ಯಾರೋ ಕದ್ದು ಕೊಂಡಿದ್ದಾರೆ, ನೋಡೇ ರೇವತಿ” ಅಂತ ಜೋರಾಗಿ ಕೂಗಿ ಕೊಂಡಿತು.

”ಕಿವಿಗೆ ಹಾಕಿಕೊಂಡಿರೋ ಓಲೆನಾ ಯಾರಾದ್ರು ಕದಿಯೋಕೆ ಸಾಧ್ಯನಾ, ಅದು ನಿನಗೆ ಗೊತ್ತಾಗದ ಹಾಗೆ ಹೇಗಜ್ಜಿ ತೆಗೆಯೋಕೆ ಆಗುತ್ತೆ” ಅಂತ ಸಮತ ಅಷ್ಟರಲ್ಲಾಗಲೇ ಅಜ್ಜಿಯ ವಿಚಾರಣೆ ನಡೆಸುತ್ತಿದ್ದಳು.

”ನೀನೆ ಬಿಚ್ಚಿಕೊಂಡೆಯಲ್ಲ ಕೊಟ್ಟು ಬಿಡು ನನ್ನ ಓಲೆನಾ, ರೇವತಿ ಕೊಡ್ಸೆ ನನ್ನ ಓಲೆನಾ ”ಅಜ್ಜಿ ಮೊಮ್ಮಗಳ ಮೇಲೆ ಸೊಸೆಗೆ ದೂರು ಹೇಳಿದಾಗ ಸಮತ ”ಮಮ್ಮಿ, ನೋಡಿದ್ಯಾ ಈ ಅಜ್ಜಿ ನನ್ನೆ ಕಳ್ಳಿ ಮಾಡ್ತ ಇದೆ. ಇವತ್ತೆ ಊರಿಗೆ ಕಳಿಸಿ ಬಿಡು. ಇಲ್ಲದಿದ್ದರೆ ನನ್ನೆ ಹಾಸ್ಟಲಿಗೆ ಸೇರಿಸು. ಈ ಅಜ್ಜಿ ಗುಜ್ಜಿ ಇರೋ ಮನೇಲಿ ನಾನು ಇರೊಲ್ಲ” ಅಜ್ಜಿಗಿಂತ ಹೆಚ್ಚಾಗಿ ಸಮತ ಥಕಥಕ ಅಂತ ಕುಣಿಯೋಕೆ ಶುರು ಮಾಡಿ ಬಿಟ್ಟಳು. ಅಜ್ಜಿಯ ಪ್ರಲಾಪ, ಸಮತಳ ಕೂಗಾಟದಿಂದ ರೋಸಿ ಹೋದ ರೇವತಿ ”ಸಮ್ಮು ,ನೀನೀಗ ನಿನ್ನ ರೂಮಿಗೆ ಹೋಗು. ನಾನು ನಿಧಾನಕ್ಕೆ ಅಜ್ಜಿನ ವಿಚಾರಿಸುತ್ತೆನೆ” ಕೊಂಚ ಒರಟಾಗಿಯೇ ಹೇಳಿದಾಗ ಧುಮುಗುಡುತ್ತಲೇ ಒಳಹೋಗಿ ಬಾಗಿಲನ್ನು ಧಡಾರನೇ ಹಾಕಿಕೊಂಡಳು.

ಓಲೆಯಿಲ್ಲದ ಅಜ್ಜಿಯ ಕಿವಿ ಬೋಳು ಬೋಳಾಗಿ ಕಾಣಿಸಿದಾಗ ರೇವತಿಗೆ ಕಸಿವಿಸಿ ಎನಿಸಿ ಈ ಅಜ್ಜಿ ಓಲೆನಾ ಏನು ಮಾಡಿತಪ್ಪ, ಏನಾದರೊಂದು ಮಾಡಿಕೊಂಡು ರಗಳೆ ತೆಗೆಯದಿದ್ದರೆ ಸಮಾಧಾನವೇ ಇರಲ್ಲವೇನೋ, ಮನಸ್ಸಿನಲ್ಲೇ ಬೈಯ್ದು ಕೊಳ್ಳುತ್ತ ಅಜ್ಜಿನಾ ಏಳಿಸಿ ಹಾಸಿಗೆ ಮೇಲೆಲ್ಲ ಹುಡುಕಿ, ರಗ್ಗು, ಬೆಡ್ ಶೀಟ್ ಎಲ್ಲಾ ಕೊಡವಿ ನೋಡಿದಳು. ದಿಂಬಿನಡಿಯಲ್ಲಿ ಇಟ್ಟಿರಬಹುದಾ ಅಂತ ಹುಡುಕಿದ್ದಾಯಿತು. ಇಲ್ಲೂ ಓಲೆ ಕಾಣಿಸಲಿಲ್ಲ. ಮತ್ತೆ ಅಜ್ಜಿನಾ ಹಾಸಿಗೆ ಮೇಲೆ ಕೂರಿಸಿ ”ಅಜ್ಜಿ, ಓಲೆನಾ ನೀವೇ ಬಿಚ್ಚಿದ್ರ, ಎರಡೂ ಓಲೆ ಕಳೆದು ಹೋಗೋಕೆ ಹೇಗೆ ಸಾದ್ಯ.. ಕಿವಿಯಿಂದ ಬಿಚ್ಚಿಕೊಳ್ಳೊಕೆ ನೀವು ಬಿಡ್ತಿರಾ. ನಿಧಾನವಾಗಿ ನೆನಪಿಸಿ ಕೊಳ್ಳಿ”ನಯವಾಗಿ ಕೇಳಿದಳು.

”ಪಾಪುನೇ ರಾತ್ರಿ ಬಿಚ್ಚಿಕೊಂಡಳು. ಇನ್ನು ಕೊಟ್ಟೆ ಇಲ್ಲ ನೋಡು. ನೀನೇ ಇಸ್ಕೋಡು ನನ್ನ ಓಲೆನಾ” ಮತ್ತೇ ಅದೇ ರಾಗ ಹಾಡಿತು.

”ರಾತ್ರಿ ಎಲ್ಲಿ ಸಮ್ಮ ಇದ್ಳು, ಅವಳು ಕ್ಯಾಂಪು ಮುಗಿಸಿ ಬೆಳಗ್ಗೆ ಬಂದಿದ್ದಾಳೆ. ನೀವು ನೋಡಿದ್ರೆ ರಾತ್ರಿನೇ ಬಿಚ್ಚಿಕೊಂಡಳು ಅಂತಿರಾ, ಸರಿಯಾಗಿ ನೆನಪು ಮಾಡಿಕೊಳ್ಳಿ. ಏನೇನೋ ಹೇಳಬೇಡಿ” ಸಿಟ್ಟು ಬರ್ತಾ ಇದ್ರೂ ತೋರಿಸಿಕೊಳ್ಳದೆ ಕೇಳಿದಳು.

”ಇಲ್ಲ, ಪಾಪು ರಾತ್ರಿನೇ ಬಂದಿದ್ದಳು, ಅವಳತ್ರನೇ ಓಲೆ ಇದೆ ”ಅಜ್ಜಿ ಹೇಳ್ತನೇ ಇತ್ತು. ಈ ಅಜ್ಜಿ  ಇವತ್ತೆಲ್ಲ ಇದೇ ರಾಮಾಯಣ ಮಾಡುತ್ತೆ. ಬೆಳಗ್ಗೆ ಎದ್ದ ಕೂಡಲೇ ಮೂಡ್‍ ಕೆಡಿಸೋ ವಾತಾವರಣ, ಛೇ ಎಂದು ಕೊಳ್ಳುತ್ತ ಅಲ್ಲಿಂದ ಎದ್ದು ಬಂದಳು.

”ಕಾಫಿ ಕೋಡೇ” ಅಜ್ಜಿ ಕೂಗಿಕೊಂಡಾಗ ರೂಮಿನಿಂದ ಸರ್ರನೇ ಹೊರಬಂದ ಸಮತ ”ಮಮ್ಮಿ , ಅಜ್ಜಿಗೆ ಕಾಫಿ ಕೊಡಬೇಡ.ನಾನು ಬೆಳಗ್ಗೆ ಆರು ಗಂಟೆಗೆ ಬಂದೆನಲ್ಲ,ಆವಾಗಲೇ ಕಾಫಿ ಕೊಡು ಅಂತ ಹಟ ಮಾಡಿ ಕೊಡೋವರೆಗೂ ಬಿಡಲಿಲ್ಲ, ಕ್ಯಾಂಪಿಂದ ಸುಸ್ತಾಗಿ ಬಂದಿದ್ರೂ ಪಾಪ ಅಂತ ಬಿಸಿ ಬಿಸಿ ಕಾಫಿ ಮಾಡಿಕೊಟ್ಟೆ. ಈಗ ನೋಡು ಹೇಗೆ ನನ್ನ ಮೇಲೆ ಅಪವಾದ ಹೊರಿಸ್ತ ಇದೆ” ಅಲ್ಲಂದಲೇ ದೂರಿದಳು.

”ಹೋಗ್ಲಿ ಬಿಡು ಚಿನ್ನು, ಅಜ್ಜಿಗೆ ಏನು ಗೊತ್ತಾಗುತ್ತೆ. ಮೊದಲೇ ಅರಳೋ ಮರಳೊ, ಓಲೆನಾ ಏಲ್ಲೋ ಬಿಚ್ಚಿಟ್ಟಿದೆ,ಆಮೇಲೆ ಸರಿಯಾಗಿ ಹುಡುಕೋಣ.ಈಗ ಬಾ ಇಲ್ಲಿ ಈ ಕಾಫಿನಾ ಅಜ್ಜಿಗೆ ಕೊಡು” ಮಗಳನ್ನ ಸಮಾಧಾನ ಪಡಿಸಲೆತ್ನಿಸಿದಳು.

”ನಾನು ಕೋಡಲ್ಲ,ನೀನೇ ಬೇಕಾದ್ರೆ ಕೊಡು”ಅಜ್ಜಿಗೆಂದು ಬೆರೆಸಿದ್ದ ಕಾಫಿಯನ್ನು ತಾನೇ ಕುಡಿಯತೊಡಗಿದಳು.

”ಹೋಗ್ಲಿ ಬಿಡು ನೀನು ಬಿಟ್ರೂ ನಾನು ಬಿಡೋಕೆ ಆಗುತ್ತಾ” ಇನ್ನೊಂದು ಲೋಟ ಕಾಫಿ ಬೆರೆಸಿ ಲೋಟಕ್ಕೆ ಸುರಿದು ಕೊಂಡು ಹೊರ ನಡೆದಳು.

” ಪ್ರೀತಿ ಅತ್ತೆ ಅಲ್ವಾ, ಮಾಡು ಮಾಡು. ಅಜ್ಜಿ ಏನು ಮಾಡಿದ್ರೂ ಚೆಂದನೆ ನಿಂಗೆ, ನಾನೇಲ್ಲೂ ನೋಡಲಿಲ್ಲಪ್ಪ ಇಂತ ಸೊಸೆನಾ”ಅಣಕಿಸಿದಳು. ಅವಳು ಹಾಗಂದ್ರೂ ಅಜ್ಜಿ ಮೇಲಿಟ್ಟಿರೋ ಅವಳ ಪ್ರೀತಿ ಏನೂ ಕಡಿಮೆ ಇಲ್ಲ. ಅಜ್ಜಿ ಅಂದ್ರೆ ಪ್ರಾಣ ಅವಳಿಗೆ. ಅಜ್ಜಿಗೂ ಸಮತ ಅಂದ್ರೆ ಜೀವ. ಇವರಿಬ್ಬರ ಪೀತಿ, ಜಗಳ, ಹುಡುಗಾಟ ಇದೆಲ್ಲ ದಿನಾ ನಡೆಯೋ ಲೈವ್ ಧಾರವಾಹಿ ಇದಂತೆ. ಆದ್ರೆ ಇವತ್ತೇಕೋ ಸ್ವಲ್ಪ ವಿಕೋಪಕ್ಕೆ ಹೋಗಿತ್ತು. ಕಾಫಿ ಕುಡಿಯುವತನಕ ಸುಮ್ಮನಿದ್ದ ಅಜ್ಜಿ ಮತ್ತೆ ತನ್ನ ರಾಗ ಆರಂಭಿಸಿತ್ತು. ”ಓಲೆ ಕೊಡೆ ಪಾಪು, ನನ್ನೋಲೆ ಕೊಡೆ. ಓಲೆ ಹಾಕ್ಕೊಳ್ಳದಿದ್ರೆ ನಾನು ಚೆನ್ನಾಗಿ ಕಾಣಲ್ಲ ಕಣೆ ಪಾಪು”ಪ್ರಲಾಪಿಸಹತ್ತಿದಾಗ ರೇಗಿ ಹೋದ ಸಮತ..

”ಮಮ್ಮಿ ,ಇವತ್ತು ಅಜ್ಜಿನ ಏನು ಮಾಡ್ತಿನಿ ನೋಡ್ತ ಇರು”ಅಜ್ಜಿ ಹತ್ತಿರ ಹೋಗಿ ”ಅಜ್ಜಿ ಓಲೆ ಹಾಕದಿದ್ದರೆ ನೀನು ಚೆನ್ನಾಗಿ ಕಾಣಲ್ವ. ಈ ವಯಸ್ಸಿನಲ್ಲೂ ನೀನು ಚೆನ್ನಾಗಿ ಕಾಣಬೇಕಾ, ಇಲ್ಲದೆ ಇರೋ ಓಲೆನಾ ಎಲ್ಲಿಂದ ತಂದು ಕೊಡಲಿ, ನೀನು ಬದುಕಿದ್ದರೇ ತಾನೆ ಓಲೆ ಹಾಕೊದು,ನಿನ್ನ ಸಾಯಿಸಿ ಬಿಡ್ತಿನಿ ನೋಡ್ತ ಇರು.”

ಅಜ್ಜಿಯನ್ನು ಗಟ್ಟಿಯಾಗಿ ಹಿಡಿದುಕೊಂಡು” ಮಮ್ಮಿ, ನಿಮ್ಮತ್ತೆನಾ ಮರ್ಡರ್ ಮಾಡ್ತ ಇದ್ದಿನಿ” ಜೋರಾಗಿ ಕಿರುಚಿದಳು.

”ಥೂ, ಭಾನುವಾರನಾದ್ರು ನೆಮ್ಮದಿಯಿಂದ ಮಲಗೋಕೆ ಬಿಡಲ್ಲವಲ್ಲ ಈ ಅಜ್ಜಿ ಮೊಮ್ಮಗಳು. ಏನಾಯ್ತೆ ಸಮ್ಮ ನಿಂಗೆ, ಅಜ್ಜಿನಾ ಯಾಕೆ ಗೋಳು ಹೊಯ್ದು ಕೊಳ್ತಿಯಾ” ಸಿಡುಕುತ್ತ ಎದ್ದು ಬಂದ ಗಂಡನಿಗೆ ರೇವತಿ ನಡೆದುದ್ದನ್ನು ವರದಿ ಒಪ್ಪಿಸಿದಳು.

”ಓಹೋ ಆ ಮನೆಯಲ್ಲಿ ಸರ ಕಳ್ಕೋಂಡು ಆಯ್ತು, ಈಗ ನಮ್ಮನೆಯಲ್ಲಿ ಓಲೆ ಕಳ್ಕೊಳ್ಕೋ ಸಂಭ್ರಮನಾ” ಗಿರಿ ಹೇಳಿದಾಗ ನಾನ್ಕೈದು ವರ್ಷಗಳ ಹಿಂದೆ ಭಾವನ ಮನೆಯಲ್ಲಿ ಸರ ಕಳೆದು ಹೋಯ್ತು ಅಂತ ರಾದ್ಧಾಂತ ಮಾಡಿದ್ದು ರೇವತಿಗೆ ನೆನಪಾಯ್ತು.

ಭಾವನ ಮನೆಯಲ್ಲಿ ಸರ ಕಳ್ಕೋಂಡ ಅತ್ತೆ, ಸೊಸೆನೇ ಸರ ಕಿತ್ಕೋಂಡು ತನ್ನ ತಂಗಿಗೆ ಕೊಟ್ಟಿದ್ದಾಳೆ ಅಂತ  ಎಲ್ಲರ ಮುಂದೂ ದೂರಿ ಸೊಸೆಯ ಕೋಪಕೆ ಬಲಿಯಾಗಿ, ಅವತ್ತಿನಿಂದಲೇ ಭಾವನ ಹೆಂಡತಿ ತಾನಿನ್ನು ಅತ್ತೆನಾ ನೋಡಿಕೊಳ್ಳುವುದಿಲ್ಲ ,ನಾ ಮಾಡಿದ ಅಡುಗೆನೂ ಕೊಡುವುದಿಲ್ಲ, ನೋಡ್ಕೋ ಅಂತ ಬಲವಂತಿಸಿದರೇ ನೇಣು ಹಾಕ್ಕೋಂಡು ಸತ್ತು ಹೋಗ್ತಿನಿ ಅಂತ ಹೆದರಿಸಿದ್ದು, ಪಾಪ ಭಾವನೇ ತಾಯಿಗೆ ಅಡಿಗೆ ಮಾಡಿ ಬಡಿಸಲು ಕಷ್ಟ ಪಡ್ತ ಇದ್ದದ್ದು, ಅದನ್ನು ನೋಡಲಾರದೆ ತಾನು ಗಿರೀಶ ಅತ್ತೇನಾ ಕರೆದು ಕೊಂಡು ಬಂದದ್ದು ಎಲ್ಲಾ ನೆನಪಾಗಿ ಕೊಂಚ ಆತಂಕ ಕಾಡಿತು,

ಇವತ್ತು ಸಮ್ಮು ಮೇಲೆ ಹೇಳ್ತ ಇರೋ ಅತ್ತೆ ಆವತ್ತು ಹೀಗೆ ಸೊಸೆ ಮೇಲೆ ಹೇಳಿತ್ತೆ?. ಛೇ ಛೇ ಎಂತಹ ಅನರ್ಥ ಆಗಿಹೋಗಿತ್ತು. ಸತ್ಯ ತಿಳಿಯದೆ ಹೋಗಿದ್ದರೂ, ಅನುಮಾನದ ಎಳೆಯೊಂದು ಉಳಿದೇ ಇತ್ತು. ಮನೆಯಲ್ಲಿಯೇ ಸರ ಕಳೆದು ಹೋಗಿತ್ತು. ಅತ್ತೆ ಕೊರಳಲ್ಲಿರುವ ಸರವನ್ನು ಯಾರೋ ಕಿತ್ಕೋಳೋಕೆ ಹೇಗೆ ಸಾಧ್ಯ , ಮನೆಯವರೇ ಎತ್ತಿಟ್ಟಿರಬೇಕು ಅಂತ ಅಂದುಕೊಂಡೇ ಇದ್ದಳು. ಸತ್ಯ ಏನು ಅಂತ ಈಗ ಗೊತ್ತಾಗ್ತ ಇದೆ. ಅತ್ತೆ ಹೇಳಿದ್ದನ್ನು ನಂಬಿದ್ದೆವೆಂದು ಭಾವನಿಗೂ ಓರಗಿತ್ತಿಗೂ ತಮ್ಮ ಮೇಲೆ ಅಸಮಾಧಾನ. ಆದರೆ ಅಂತಹುದೇ ಪ್ರಸಂಗ ಇವತ್ತು ಈ ಮನೆಯಲ್ಲಿಯೇ ಎದುರಾಗಿದೆ. ಏನು ಮಾಡಿದ್ರು ಓಲೆನಾ, ಬಿಳಿ ಹರಳಿನ ಅಮೆರಿಕನ್ ಡೈಮಂಡ ಓಲೆ. ಒಳ್ಳೆ ವಜ್ರದ ಓಲೆಯಂತೆ ಥಳ ಥಳಿಸುತ್ತಿತ್ತು. ಅತ್ತೆ ಕಿವಿಗೆ ಅದೇಷ್ಟು ಚೆನ್ನಾಗಿ ಕಾಣಿಸುತ್ತಿತ್ತು. ಯಾರಿಗೆ ಬಿಚ್ಚಿಕೊಟ್ಟಿರಬಹುದು. ನೆನ್ನೆ ಯಾರು ಮನೆಗೆ ಬಂದಿದ್ರು. ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಅದೇ ವಿಷಯ ದುಂಬಿಯಂತೆ ಕೊರೆಯ ತೊಡಗಿತು.

ಅಜ್ಜಿನಾ ಸಾಯಿಸಿಯೇ ಬಿಡ್ತಿನಿ ಅಂತ ಹೋಗಿದ್ದ ಸಮತ ಅಜ್ಜಿ ತೊಡೆ ಮೇಲೆ ಮಲಗಿ ಕ್ಯಾಂಪಿನಲ್ಲಿ ನಡೆದಿದ್ದದೇನೋ ಹೇಳುತ್ತ ಜೋರಾಗಿ ನಗುತ್ತಾ ಇದ್ದುದನ್ನು ನೋಡಿ ರೇವತಿಗೆ ಈ ಅಜ್ಜಿ ಮೊಮ್ಮಗಳು ಯಾವಾಗ ಜಗಳ ಆಡ್ತರೋ, ಯಾವಾಗ ಒಂದಾಗ್ತರೋ.ಇವರಿಬ್ಬರ ಮಧ್ಯೆ ನಾವೇನಾದ್ರು ಹೋದ್ರೆ ನಾವೇ ಮುರ್ಖರಾಗಬೇಕು ಅಷ್ಟೆ, ಅಂದು ಕೊಂಡು ಇಬ್ಬರಿಗೂ ತಿಂಡಿ ಕೊಟ್ಟು ”ಬೇಗ ತಿನ್ನಿ, ”ಅಜ್ಜಿ,ನೀನೇ ತಿನ್ನಿಸಜ್ಜಿ” ಸಮ್ಮು ಮುದ್ದು ಮುದ್ದಾಗಿ ಹೇಳ್ತ ಇದ್ದರೆ ”ಬಾ ಕಂದ ತಿನ್ನಿಸುತ್ತೆನೆ”ಅಂತ ಅತ್ತೆ ಹೇಳಿದ್ದನ್ನು ಕೇಳಿ ”ಸಮ್ಮು , ಇನ್ನು ಮಗು ಥರ ಆಡ್ತಿಯಲ್ಲ,ಇಷ್ಟು ದೊಡ್ಡವಳಾದ್ರು ಅಜ್ಜಿ ಕೈಲಿ ತಿನ್ನಿಸಿ ಕೊಳ್ತಿಯಾ” ರೇಗಿದಳು.

” ಹೌದು, ನಾನು ಮಗುನೇ ಅಜ್ಜಿಗೇ , ಅಲ್ವೆನಜ್ಜಿ. ಈ ಮಮ್ಮಿಗೆ ನನ್ನ ಕಂಡ್ರೆ ಹೊಟ್ಟೆಕಿಚ್ಚು”ಅಜ್ಜಿಯನ್ನು ಅಪ್ಪಿಕೊಳ್ಳುತ್ತ ಸಮತ ಹೇಳಿದಾಗ ಇದಕ್ಕೇನು ಕಡಿಮೆ ಇಲ್ಲ ಎಂದು ಕೊಂಡು ರೇವತಿ ಅಲ್ಲಿಂದ ಹೊರ ಬಂದಳು. ಗಿರೀಶಗೆ ದೋಸೆ ಹಾಕಿಕೊಡುತ್ತ ”ಭಾವನ ಮನೆಯಲ್ಲಿ ಸರ ಕಳ್ಕೊಂಡು ನಿಮ್ಮಮ್ಮ ಎಲ್ಲರೆದೂರೂ ನಿಮ್ಮ ಅತ್ತಿಗೇನೇ ಸರ ಕಿತ್ಕೋಂಡಿದ್ದು ಅಂತ ಹೇಳಿ ರಂಪ ಮಾಡಿದ್ರು. ಈಗ ಸಮ್ಮುನೇ ಓಲೆ ಬಿಚ್ಚಿಕೊಂಡಳು ಅಂತ ಹೇಳ್ತ ಇದ್ರೆ ಸಮ್ಮುಗೆ ಹೇಗಾಗಬೇಡ. ಓಲೆ ಸಿಗೋತನಕ ನಿಮ್ಮಮ್ಮ ಸುಮ್ನೆ ಇರಲ್ಲ”ಚಿಂತೆಯಿಂದ ಹೇಳಿದಳು.

”ಬೇರೆ ಓಲೆ ತಂದ್ಕೋಡೊಣ ಬಿಡು”ಸುಲಭವಾಗಿ ಗಿರಿ ಹೇಳಿದಾಗ ”ಮತ್ತೆ ಕಳ್ಖೊಳ್ಳಲ್ಲ ಅಂತ ಏನು, ಪದೇ ಪದೇ ಹೊಸದನ್ನ ತರೋಕೆ ಆಗುತ್ತಾ”ಗಿರಿಯ ಮಾತನ್ನು ತಳ್ಳಿ ಹಾಕಿದಳು.
ಅಷ್ಟರಲ್ಲಿಯೇ ಅಜ್ಜಿಯ ಕೂಗು ಕೇಳಿತು ”ರಾತ್ರಿ ಬೇಡಾ ಬೇಡಾ ಅಂದ್ರೂ ಓಲೆನಾ ಬಿಚ್ಚಿಕೊಂಡೆಯಲ್ಲ ಪಾಪು ಕೊಡೆ ಓಲೆನಾ”

”ಮಮ್ಮಿ ಈ ಅಜ್ಜಿ ಕಾಟ ತಡೆಯೋಕೆ ಆಗ್ತ ಇಲ್ಲ, ಕಾಂಪಿನಲ್ಲಿ ಸುಸ್ತಾಗಿದೆ ರೆಸ್ಟ್ ತಗೋಬೇಕೂ ಅಂದ್ರೂ ಈ ಅಜ್ಜಿ ಬಿಡ್ತನೇ ಇಲ್ಲ ನೋಡು. ನನ್ನ ಹಿಂದೆನೇ ಬರ್ತ ಇದೆ. ಏನಪ್ಪ ಮಾಡ್ಲಿ”ಸಮತ ಬೇಸರಿಸಿ ಕೊಂಡಳು.

ಅಜ್ಜಿ ಹತ್ತಿರ ಬರುವಷ್ಟರಲ್ಲಿ ಚಂಗನೆ ಹೊರಗೆ ಜಿಗಿದ ಸಮತ ಕ್ಷಣಾರ್ದದಲ್ಲಿ ಕೈನಿಯನ್ನು ಸ್ಟಾರ್ಟ್ ಮಾಡಿಕೊಂಡು ಹೋಗೇ ಬಿಟ್ಟಾಗ ಈಗೆಲ್ಲಿಗೆ ಹೋದಳಪ್ಪ ರೇವತಿ ಮಗಳನ್ನು ಬೈಯ್ದುಕೊಂಡಳು. ಅತ್ತೆಯ ಗಮನವನ್ನು ಬೇರೆಡೆಗೆ ತಿರುಗಿಸಲು”ಸ್ನಾನ ಮಾಡಲ್ವ, ಆಗ್ಲೆ 12 ಗಂಟೆ ಆಯ್ತು”ರೇವತಿ ಕೇಳಿದಳು.

”ತಿಂಡಿ ಕೊಡ್ತಿಯಾ. ಇನ್ನೂ ತಿಂಡಿನೇ ತಿಂದಿಲ್ಲ. ಹೊಟ್ಟೆ ಹಸಿತಾ ಇದೆ ” ಕುರ್ಚಿ ಎಳೆದು ಕೊಂಡು ಟೇಬಲ್ ಮುಂದೆ ಕುಳಿತಾಗ ಅಯ್ಯೋ ಎನಿಸಿತು. ಬೆಳಗ್ಗೆ ತಿಂಡಿ ತಿಂದಿದ್ದೆ ಮರೆತು ಹೋಗಿದೆ. ಇವತ್ತು ಮನೆಯಲ್ಲಿಯೇ ಇದ್ದಿನಲ್ಲ, ಇನ್ನೆರಡು ದೋಸೆ ಮಾಡಿ ಕೊಡ್ತಿನಿ, ಪಾಪ, ತಿನ್ಲಿ ಕನಿಕರಿಸಿ ಬಿಸಿ ಬಿಸಿ ದೋಸೆ ಮಾಡಿ ತಂದಿರಿಸಿದಳು. ಎಷ್ಟು ಕೊಟ್ರು ಸಾಕು ಅನ್ನಲ್ಲ,ಏನೇ ಆದ್ರೂ ಊಟ ತಿಂಡಿ ಮಾತ್ರ ಬಿಡಲ್ಲ. ಮೊದಲೆಲ್ಲ ಅತ್ತೆ ಹೀಗಿರಲಿಲ್ಲ. ತಿಂಡಿ ತಿನ್ನಿ, ಊಟ ಮಾಡಿ ಅಂತ ನಾವೇ ಬಲವಂತಿಸಬೇಕಿತ್ತು.ಕೆಲಸ ಕೆಲಸ ಅಂತ ತಿನ್ನೋದನ್ನೇ ಮರೆತು ಬಿಡುತ್ತಿದ್ದರು. ಆದ್ರೆ ಈಗ ತಿನ್ನೋಕೆ ಹಾತೊರೆಯುತ್ತಾರೆ. ಎಷ್ಟು ಕೊಟ್ರು ಸಾಲದು,ಬರಗೆಟ್ಟವರಂತೆ, ತಿಂದು ಎಷ್ಟೋ ದಿನ ಆದವರಂತೆ ಆಡೋದನ್ನ ನೋಡ್ತ ಇದ್ರೆ ಸಿಟ್ಟು ಬಂದು ರೇಗಾಡುವಂತಾಗುತ್ತಿತ್ತು. ಪಾಪ ಅಂತ ಕನಿಕರಿಸಿ ಜಾಸ್ತಿ ಕೊಟ್ರೋ ಮಾರನೇ ಬೆಳಗ್ಗೆನೇ ಅದರ ಪರಿಣಾಮನ ನೋಡಬೇಕಿತ್ತು. ಸಮ್ಮೂ ಅಂತೂ ಅಮ್ಮಾ ವಾಸನೆ ತಡೆಯೋಕೆ ಆಗಲ್ಲ.ಅಜ್ಜಿಗೆ ಯಾಕೆ ಅಷ್ಟೋಂದು ತಿನ್ನೋಕೆ ಕೊಡ್ತಿಯಾ ಅಂತ ಕೂಗಾಡುತ್ತಲೇ ಹೇಸಿಗೆಯನ್ನೆಲ್ಲ ಕ್ಕೀನ್ ಮಾಡಲು ಜೊತೆಗೂಡಿ, ಗಲಿಜಾಗಿದ್ದ ಬಟ್ಟೆಯನ್ನೇಲ್ಲ ತೊಳೆದು ಹಾಕುತ್ತಿದ್ದಳು.
‘ ಇನ್ನೆರಡು ದೋಸೆ ಕೊಡೆ, ಆಮೇಲೆ ಇಟ್ಕೋಂಡು ತಿನ್ತಿನಿ” ಅಂತ ಕೇಳಿದ ಅತ್ತೆಗೆ ”ಸಾಕು ಎದ್ದೇಳಿ ಆಮೇಲೆ ಊಟ ಮಾಡುವಿರಂತೆ, ಈಗ ಸ್ನಾನ ಮಾಡಿ” ಎಂದು ಬಲವಂತವಾಗಿ ಬಚ್ಚಲಿಗೆ ಕಳುಹಿಸಿದಳು.

ಸಮತ ಬಂದಿದ್ದನ್ನು ಕಂಡು”ಇಲ್ಲಿಗೆ ಹೋಗಿದ್ದೆ ಸಮ್ಮು, ಹೇಳಿ ಹೋಗಬೇಕು ಅಂತ ಗೊತ್ತಾಗಲ್ವ” ಆಕ್ಷೇಪಿಸಿದಳು. ರೇವತಿಯ ಆಕ್ಷೇಪಣೆ ಲೆಕ್ಕಿಸದೆ ”ಮಮ್ಮಿ, ಇಡೀ ಸಿಟಿ ಹುಡುಕಿ ಕಷ್ಟಪಟ್ಟು ನಾಲ್ಕು ಜೊತೆ ಓಲೆ ತಂದಿದ್ದಿನಿ. ನಿನ್ನ ಓಲೆ ಸಿಕ್ತು ಅಂತ ಒಂದು ಜೊತೆ ಕೊಟ್ಟು ಮಿಕ್ಕಿದ್ದು ಜೋಪಾನವಾಗಿ ಇಟ್ಟಿರು, ಕಳ್ಕೊಂಡಾಗಲೆಲ್ಲ ಕೊಡೋಕೆ ಆಗುತ್ತೆ” ಅಂತ ಹೇಳಿ ಸಮತ ಕೊಟ್ಟ ಓಲೆಗಳನ್ನೆ ನೋಡಿದಳು.ಮಿರಿಮಿರಿ ಮಿಂಚುವ ಬಿಳಿ ಹರಳಿನ ಓಲೆ ಚಿನ್ನದ ಓಲೆಗಿಂತ ಚೆನ್ನಾಗಿ ಹೊಳೆಯುತ್ತಿತ್ತು.

ಸಮ್ಮು ಜಾಣೆ ಸುಲಭವಾಗಿ ಸಮಸ್ಯೆಯನ್ನು ಪರಿಹರಿಸಿಬಿಟ್ಟಳು ಎಂದು ಕೊಳ್ಳುತ್ತ “ಒಳ್ಳೆ ಕೆಲ್ಸ ಮಾಡ್ದೆ. ಇಲ್ದಿದ್ರೆ ಅಜ್ಜಿ ಎಲ್ಲರಿಗೊ ನೀನೆ ಓಲೆ ತಗೊಂಡಿದ್ದಿಯಾ ಅಂತ ಸಾರಿಕೊಂಡು ಬರುತ್ತಿತ್ತು.ಅಜ್ಜಿ ಸ್ನಾನ ಮಾಡ್ತ ಇದೆ. ಬಂದ ಕೂಡಲೇ ಕೊಟ್ಟು ಬಿಡು” ಎಂದಳು. ಸ್ನಾನ ಮುಗಿಸಿ ಹೊರ ಬಂದ ಅಜ್ಜಿಗೆ ”ಅಜ್ಜಿ, ತಗೋ ನಿನ್ನ ಓಲೆನಾ ಮೊದ್ಲು ಕಿವಿಗೆ ಹಾಕಿಕೊಂಡು ಬಿಡು. ಇಲ್ದಿದ್ರೆ ನೀನು ಸುಂದರಿಯಾಗಿ ಕಾಣಿಸೊಲ್ಲ”

ಕೀಟಲೆ ಮಾಡಿದಳು.

”ಅಯ್ಯೊ ನನ್ನ ಬಂಗಾರ, ಇದೇ ಕಣೆ ನನ್ನ ಓಲೆ. ಎಲ್ಲಿಟ್ಟಿದ್ದೆ ಚಿನ್ನು. ನೀನೆ ಹಾಕಿಬಿಡು, ನಂಗೆಲ್ಲಿ ಹಾಕಿಕೊಳ್ಳೋಕೆ ಆಗುತ್ತೆ” ಸಂಭ್ರಮದಿಂದ ಬೊಚ್ಚು ಬಾಯಿನ್ನು ಇಷ್ಟಗಲ ಅರಳಿಸುತ್ತ ಓಲೆಯನ್ನು ನೋಡಿತು.

ಅಜ್ಜಿಯ ಕಿವಿಗೆ ಓಲೆಯನ್ನು ಹಾಕಿ ಕನ್ನಡಿಯ ಮುಂದೆ ನಿಲ್ಲಿಸಿ ”ಅಜ್ಜಿ ಈಗ ನೀನು ರಾಜ ಕುಮಾರಿಯಂತೆ ಕಾಣ್ತಿಯಾ, ಒಬ್ಬ ರಾಜಕುಮಾರನ್ನ ಕರ್ಕೋಂಡು ಬರೋಣವೇ”ಸಮತ ರೇಗಿಸಿದಳು.

”ಬಂಗಾರಿ ಈ ಓಲೆನಾ ನಿಂಗೆ ಕೊಡ್ತಿನಿ ಕಣೆ, ನಾನು ಸತ್ತ ಮೇಲೆ ಇದನ್ನ ನೀನೇ ಇಟ್ಕೋ ಬೇಕು”ಎಂದು ಸಮ್ಮುವನ್ನು ತಬ್ಬಿ ಮುತ್ತಿಕ್ಕಿತು.

”ಸರಿಸರಿ, ಸರ ಕೊಡ್ತಿನಿ ಅಂತ ಇದ್ದೆ, ಅದನ್ನ ಕಳ್ದು ಹಾಕ್ದೆ, ಈಗ ಓಲೆ ಕೊಡ್ತಿನಿ ಅಂತಿದಿಯ, ಅದು ನಿನ್ನ ಹತ್ರ ಉಳುದ್ರೆ ತಾನೆ ನೀನು ನಂಗೆ ಕೊಡೋದು”ಅಣಕಿಸಿದಳು.
ಮೌನವಾಗಿ ಎಲ್ಲವನ್ನು ನೋಡುತ್ತಿದ್ದ ಗಿರೀಶ ”ಸಮ್ಮು ,ನಿಂಗೇನು ಕಡಿಮೆ ಆಗಿದೆ ಅಂತ ಅಜ್ಜಿ ಒಡವೆಗೆ ಆಸೆ ಪಡ್ತಿಯಾ,ನಿನ್ನ ಒಡವೆಯನ್ನೇ ನೀನು ಹಾಕಲ್ಲ. ಇನ್ನು ನಿಮ್ಮಜ್ಜಿ ಸರ ಓಲೆ ಬೇಕಾ ನಿಂಗೆ, ನಿನ್ನ ಹುಡುಗಾಟ ಅತಿ ಆಯ್ತು” ಮಗಳ ಮೇಲೆ ರೇಗಿದ.

”ಸುಮ್ನೆ ಇರು ಪಪ್ಪ, ಅಜ್ಜಿ ಸತ್ತ ಮೇಲೆ ಅವರ ನೆನಪಿಗೆ ನಂಗೇನಾದ್ರು ಬೇಡವೇ”ಎಂದಾಗ ಇವಳೇ ಎನಾದರೂ ಅಮ್ಮನ ಓಲೆನಾ ತೆಗೆದು ಇಟ್ಟಿದ್ದಾಳಾ ಅಂತ ಅನುಮಾನ ಕಾಡದೇ ಇರಲಿಲ್ಲ ಅವನಿಗೆ. ಹಾಗೆನಾದ್ರು ಹೇಳಿ ಬಿಟ್ಟರೆ ಸಂಹಿಣಿಯಂತೆ ಮೇಲೆರಗಿ ಬಿಡುತ್ತಾಳೆ ಅಂತ ಸುಮ್ಮನಾಗಿ ಬಿಟ್ಟ.

ಮತ್ತೆ ಮತ್ತೆ ಓಲೆ ಕಳೆದು ಹೋಗುತ್ತಿತ್ತು. ಆಗೆಲ್ಲ ನಕಲಿ ಓಲೆನಾ ಕೊಟ್ಟು ಅಜ್ಜಿನಾ ಸಮಾಧಾನ ಪಡಿಸುವ ನಾಟಕ ನಡೆಯುತ್ತಿತ್ತು. ಹಾಗೊಂದು ದಿನ ಓಲೆ ಕಳೆದು ಕೊಂಡು ‘ಓಲೆ ನನ್ನ ಓಲೆ’ ಅಂತನೇ ಅಜ್ಜಿ ಕೊನೆ ಉಸಿರೆಳೆದಿತ್ತು. ಮಾವ ಪ್ರೀತಿಯಿಂದ ಮಾಡಿಸಿದ ಓಲೆ ಕೊನೆವರೆಗೊ ಅತ್ತೆಯ ಕಿವಿಯಲ್ಲಿ ಉಳಿಯಲಿಲ್ಲವಲ್ಲ ಅನ್ನೊ ಕೊರಗು ,ಪದೆ ಪದೇ ಓಲೆ ಕಳೆಯೋಕೆ ಸಾಧ್ಯಾನಾ,ಕಳೆದು ಹೋದ್ರೂ ಸಿಗದೆ ಇರೋದೂ ರೇವತಿಯನ್ನು ಕಾಡುತ್ತಿತ್ತು.

ಅತ್ತೆಯ ಕಾರ್ಯವೆಲ್ಲ ಮುಗಿದ ಮೇಲೆ ಅತ್ತೆ ಮಲಗುತ್ತಿದ್ದ ಹಾಸಿಗೆಯನ್ನು ಬಿಚ್ಚಿಸಿ ಹೊಸ ಹಾಸಿಗೆ ಹೊಲೆಸಲು ಬಿಚ್ಚಿಸಿದಾಗ ದಿಂಬಿನ ಒಳಗೆ ಅಜ್ಜಿಯ ಪ್ರೀತಿಯ ಓಲೆ ಮತ್ತು ನಕಲಿ ಓಲೆಗಳು ಸಿಕ್ಕಿದವು. ಅತ್ತೆ ಯಾಕೆ ಓಲೆನಾ ಬಚ್ಚಿಟ್ಟಿದ್ದರು, ಯಾರಾದರೂ ಕದಿಯುತ್ತಿದ್ದರೆಂದೆ, ಸರ ಕಳೆದುಹೋದ ಹಾಗೆ ಓಲೆ ಕಳೆದು ಹೋಗಬಾರದೆಂದೇ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿತು. ಅಂತೂ ಸಮತಾ ಆಶಿಸಿದಂತೆ ಅಜ್ಜಿಯ ಪ್ರೀತಿ ಓಲೆ ಪ್ರೀತಿಯ ಮೊಮ್ಮಗಳಿಗೇ ಸಿಕ್ಕಿತು. ಅಜ್ಜಿಯ ಆಸೆಯೂ ಅದೇ ಆಗಿತ್ತೇ?.


  • ಶೈಲಜಾ ಹಾಸನ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW