ಕನ್ನಡದ ಮೊದಲ ಕವಯಿತ್ರಿಯಾದ ಅಕ್ಕಮಹಾದೇವಿಯ ಬಗ್ಗೆ ಕವನ ರಚಿಸಿರುವ ವಿಜಯಲಕ್ಷ್ಮಿ ಎಸ್. ಅವರ ಸುಂದರ ಕವನ ಓದುಗರ ಮುಂದಿದೆ, ತಪ್ಪದೆ ಮುಂದೆ ಓದಿ..
ಉಡು ತಡಿಯೂರಲಿ ಜನುಮವ ತಳೆದಳು
ಶಿವಭಕ್ತ ದಂಪತಿಗಳ ಮಗಳಾಗಿ
ಬೆಳಗಿದಳು ಕನ್ನಡ ಸಾಹಿತ್ಯ ಲೋಕವ
ಪ್ರಪ್ರಥಮ ಕವಯಿತ್ರಿಯಾಗಿ
ಧಾರ್ಮಿಕ ಕಾರ್ಯಗಳಲೆ ಕಳೆದಳು
ಬಾಲ್ಯವನೆಲ್ಲ ಮಹಾದೇವಿಯು
ಶರಣಸತಿ ಲಿಂಗಪತಿ ಎಂಬ ಭಾವದಿ
ಹೂವಾಗಿ ಅರಳಿ ಬೆಳೆದಳು ಕನ್ನೆಯು
ತರುಣಿಯ ಲಾವಣ್ಯಕೆ ಮೋಹಿತನಾಗಿ
ವರಿಸಿದನವಳನು ಅರಸ ಕೌಶಿಕ
ಚೆನ್ನಮಲ್ಲಿಕಾರ್ಜುನ ಮೋಹಿತೆಯಾಗಿ
ಕೇಶಾಂಬರಿಯಾಗಿ ಹೊರಬಿದ್ದಳಕ್ಕ
ಅರಮನೆಯ ಭೋಗ ಭಾಗ್ಯವ ತ್ಯಜಿಸಿ
ಶ್ರೀಶೈಲದ ಕಡೆಗೆ ನಡೆದಳು ಚೆನ್ನರಸಿ
ಸಾವಿಲ್ಲದ ರೂಹಿಲ್ಲದ ಕೇಡಿಲ್ಲದ
ಚೆಲುವ ಚೆನ್ನಮಲ್ಲಿಕಾರ್ಜುನ ನರಸಿ
ಕಿಡಿಗೇಡಿಗಳ ಕೋಟಲೆ ನಿಂದೆಗಳ
ಸಹಿಸುತ ಮುಂದಡಿಯಿಟ್ಟಳಕ್ಕ
ಹಸಿವೆ ತೃಷೆ ಗಾಳಿ ಮಳೆ ಬಿಸಿಲು
ಚಳಿಗಳನು ಭಂಗಿಸುತ ನಡೆದಳಕ್ಕ
ಕಲ್ಯಾಣದ ಅನುಭಾವಿಗಳ ಸಂಗದಲಿ
ಸುಖ ಶಾಂತಿಗಳ ಕಂಡುಕೊಂಡಳು
ಬಸವಣ್ಣ ಅಲ್ಲಮಪ್ರಭುರಂತಹವರಿಂದ
ಮಹಾಶಿವಶರಣೆ ಎನಿಸಿಕೊಂಡಳು
ಜ್ಞಾನ ವೈರಾಗ್ಯ ಸಿದ್ಧಿ ಪಡೆದು
ಅಕ್ಕ ಮಹಾದೇವಿಯಾದಳು
ವಿರಾಗಿಣಿಯಾದ ವಚನಕಾರ್ತಿ
ಲೋಕಕೆ ಜಗನ್ಮಾತೆಯಾದಳು
ಅನುಭವ ಘನೀಭೂತ ಭಾವ
ತೀವ್ರತೆಯ ವಚನಗಳ ರಚಿಸಿದಳು
ಯೋಗಾಂಗ ತ್ರಿವಿಧಿಯೆಂಬ ಅನುಭಾವ
ಸಂಪತ್ತಿನ ಗ್ರಂಥವನು ಬರೆದಳು
ಗಂಡ ಶ್ರೀಚೆನ್ನಮಲ್ಲಿಕಾರ್ಜುನನನು
ಹುಡುಕುತ್ತ ಕದಳೀವನ ಸೇರಿದಳು
ತನ್ನ ಆರಾಧ್ಯದೈವದ ಸನ್ನಿಧಿಯಲ್ಲಿ
ತನ್ನಯ ಕೊನೆಯುಸಿರೆಳೆದಳು
- ವಿಜಯಲಕ್ಷ್ಮಿ ಎಸ್.
