ದೇವದಾಸಿ ಕಂದಮ್ಮಗಳು ಮಾನಸಿಕವಾಗಿ ಪಡುವ ಯಾತನೆಯನ್ನು ಕತೆಗಾರ ಪ್ರಶಾಂತ ಹೊಸಮನಿ ಅವರು ಕತೆಯ ರೂಪ ಕೊಟ್ಟು ಸಾಮಾಜಿಕ ಕಳಕಳಿಯನ್ನು ಓದುಗರ ಮುಂದಿಟ್ಟಿದ್ದಾರೆ, ಮುಂದೆ ಓದಿ…
ಉತ್ತರ ಕರ್ನಾಟಕದ ವೈಶಿಷ್ಟ್ಯ ಪೂರ್ಣ ಆಚರಣೆಗಳಿಗೆ ಸದಾ ಮುಂದು,ಅದರಲ್ಲೂ ಮೂಢ ನಂಬಿಕೆಗಳಿಗೆ ಅಪ್ಪ ಹಾಕಿದ ಆಲದ ಮರದಂತೆ ಜೋತು ಬಿದ್ದು,ಪದ್ಧತಿಗಳ ಪಡಿಪಾಟಲಕ್ಕೆ ಕಷ್ಟಗಳ ಕಂಟಕದ ಜೀವನವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು.ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಬೇರೂರಿದ್ದ “ದೇವದಾಸಿ” ಪದ್ಧತಿಗೆ ಬಲಿಯಾಗಿ,”ದೇವರಿಗೆ ದಾಸರಾಗದೇ,ಉಳ್ಳವರಿಗೆ ದಾಸರಾಗಿ” ಸಾಮಾಜಿಕ ಪಿಡುಗಿನಿಂದ ಹೊರಬರಲಾಗದೇ ಕರುಳ ಕುಡಿಗಳೂ ಸಹ, ಸಾಕಷ್ಟು ನೋವುಗಳ ಸರಮಾಲೆಯೊಂದಿಗೆ ಜೀವನ ಸವೆಸುತ್ತಿದ್ದಾರೆ, ಎಂಬುದು ಪ್ರಸ್ತುತ ಈ ಕಥಾ ಹಂದರ ಬಿಚ್ಚಿಡುತ್ತಿದೆ.
ಆಗ ತಾನೆ ಜನಿಸಿದ ಗಂಡು ಮಗು, ಆ ಮಗುವಿನ ಹೆತ್ತ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಷ್ಟಗಳೇಲ್ಲಾ ಅಳಿದು ಹೋಗಿ ಇಷ್ಟಗಳೇಲ್ಲಾ ಇಡೇರಿದವು ಎಂಬ ಆ ಹೆಣ್ಣು ಜೀವ. ತನ್ನ ತಾಯ್ತನದ ಭಾವ ಪ್ರಾಪ್ತಿಯನ್ನು ಪಡೆದಿದ್ದರೂ, ‘ದೇವದಾಸಿ’ ಎಂಬ ಸಾಮಾಜಿಕ ನೋವಿಗೆ ತುಳಿತದ ಕೀಳರಿಮೆಗೆ ಒಳಗಾಗಿದ್ದ ಜೀವ. ಇಷ್ಟವಿಲ್ಲದ ವೃತ್ತಿಗೆ, ಇಷ್ಟವಾಗಿಸಿದ ಸಮಾಜವನ್ನು, ಪ್ರತಿದಿನ ಶಪಿಸುವ ದಿನಗಳೇ ಇರಲಿಲ್ಲ. ಇನ್ನೇನು ಈಗ ತಾನೆ ಜನಿಸಿದ ನನ್ನ ಕರುಳ ಬಳ್ಳಿ, ನನ್ನ ಮಹಾದಾಶೆ ಈಡೇರಿಸುತ್ತಾನೆ ಎಂಬ ಬಯಕೆಯೊಂದಿಗೆ ಜೀವನ ಮುಂದುಡುತ್ತಿದ್ದಾಗ, ಬೆಳೆಯುತ್ತಿದ್ದ ಮಗ ತಾಯಿ ಆಸರೆ ಸಿಕ್ಕರೂ ತಂದೆಯ ಪ್ರೀತಿ ಎಲ್ಲೂ ಕಾಣಲಿಲ್ಲ. ನನ್ನ ತಂದೆ ಯಾರೆಂಬುದರ ಬಗ್ಗೆ ವಿಚಾರಿಸಲಾರದಷ್ಟು ಮುಗ್ಧತೆಯಲ್ಲಿ ತನ್ನ ಬಾಲ್ಯಾವಸ್ಥೆಯ ಜೀವನವನ್ನು ಕಳೆದ.
ಫೋಟೋ ಕೃಪೆ : The Hindu
ಒಂದು ಬಾರಿ ಗ್ರಾಮದ ಅಂಗನವಾಡಿ ಕೇಂದ್ರದವರು ಹೆಸರುಗಳ ಸೇರ್ಪಡೆಗಾಗಿ ಮನೆಗೆ ಬಂದಾಗ, ಓಡಿ ಹೋಗಿ ಬಾಗಿಲ ಬಳಿ ನಿಂತ ತಾಯಿ, ತನ್ನ ಹೆಸರು, ನನ್ನ ಹೆಸರು ಮಾತ್ರ ಹೇಳಿದಳಲ್ಲ ಎಂಬ ಚಿಂತೆ ತಲೆಯಲ್ಲಿ ಸುಳಿದಾಡಿದರೂ, ವೈಚಾರಿಕ ಶಕ್ತಿಯ ಅರಿವಿರಲ್ಲಿಲ್ಲ,ಇವೆಲ್ಲದರ ಅರಿವಿಲ್ಲದೇ ತಾಯಿ ತನ್ನ ಮಗನನ್ನು ಸಲಹುತ್ತಿದ್ದಳು, ಕಾಲ ಮುಂದುವರೆದಂತೆ ಇನ್ನೇನು ಶಾಲಾ ಮೆಟ್ಟಿಲು ಹತ್ತುವ ಸಮಯ ಅಲ್ಲಿಯೂ, ತಂದೆಯ ಕಾಲಂ ಖಾಲಿ, ತಾಯಿಯ ಹೆಸರು ಮಾತ್ರ, ಓದಿನಲ್ಲಿ ಜಾಣನಾಗಿದ್ದ. ಈತ ಪ್ರತಿಯೊಂದು ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ತನ್ನದೇ ಛಾಪು ಮೂಡಿಸಿದ್ದ, ಕೆಲವೊಂದು ಬಾರಿ , ಸ್ನೇಹಿತರು ನಿಮ್ಮ ತಂದೆಯ ಹೆಸರೇನು.? ಎಂಬುದಾಗಿ ಕೇಳಿದ್ದಾಗ ನಿರುತ್ತರನಾಗಿದ್ದ,ಇದೇ ಪ್ರಶ್ನೆಯನ್ನು ತಾಯಿಯ ಹತ್ತಿರ ಬಂದು ಕೇಳಿದಾಗಲೂ ಕೂಡಾ ಹಾರಿಕೆಯ ಉತ್ತರ ಮಾತ್ರ ದೊರೆಯುತ್ತಿದ್ದುದ್ದು, ಆತನಿಗೆ ಕಸಿವಿಸಿ ಉಂಟು ಮಾಡುತ್ತಿತ್ತು, ಇನ್ನೇನು ೫ ರಿಂದ ೬ ನೇ ತರಗತಿಗೆ ಪಯಣದ ಮಧ್ಯಾವಧಿಯಲ್ಲಿ ಸಾಮಾಜಿಕ ಸುಧಾರಕರು ಎಂಬ ಸಮಾಜ ಪುಸ್ತಕದ ಅಧ್ಯಾಯ ಇತನ ಜೀವನದ ತಿರುವುವನ್ನೇ ಬದಲಾಯಿಸುವುದಲ್ಲದೇ,ಮನಸ್ಸಿನ ಆಳದಲ್ಲಿ ಕೊರಗೊಂದು ಜೀವಂತವಾಯಿತು.ಅಂದು ತನ್ನ ಗುರುಗಳು ,ಸಮಾಜದಲ್ಲಿ ಬೇರೂರಿದ್ದ, ಸತಿಪದ್ಧತಿ, ಬಾಲ್ಯ ವಿವಾಹ, ದೇವದಾಸಿ ಪದ್ಧತಿ ಗಳ ಅರ್ಥ ವಿಂಗಡನೆ ಮಾಡಿ ತಿಳಿ ಹೇಳುವಾಗ, ಶಿಕ್ಷಕರು ಅಚಾತುರ್ಯದಿಂದ ದೇವದಾಸಿ ಪದ್ದತಿಯ ಸಂಪೂರ್ಣ ವಿವರಣೆಯನ್ನು ನೀಡಿದಾಗ, ಹೇಳಿಕೆಯ ಹಲವು ಸತ್ಯಗಳು ನನ್ನ ಜೀವನದವೇ ಎಂದು ಅರಿತ ಆ ಬಾಲಕ, ತಾಯಿಗೂ ಯಾವ ಪ್ರಶ್ನೇ ಮಾಡದೇ ನನಗೆ ತಂದೆ- ತಾಯಿ ಒಬ್ಬಳೇ ಎಂದರಿತ ಬಾಲಕ.
ಸಮಾಜವೇ ನನ್ನ ತಾಯಿ, ನನ್ನನ್ನು ಮೆಚ್ಚುವಂತಹ ಮಹತ್ಕಾರ್ಯವನ್ನು ಮಾಡಬೇಕೆಂದು ಪಣ ತೊಟ್ಟ ಬಾಲಕ. ತನ್ನ ವ್ಯಾಸಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ, ಪಿಯು ಶಿಕ್ಷಣ ಮುಗಿಯಿತು,ಇನ್ನೇನೂ ಶಿಕ್ಷಕ ವೃತ್ತಿ ಆಯ್ದುಕೊಂಡರೆ ನಾನು ಸಮಾಜಕ್ಕೆ ಕೊಡುಗೆ ಮಾಡಬಲ್ಲೇ ಎಂಬ ಮಹಾದಾಶೆಯೊಂದಿಗೆ ಟಿಸಿಎಚ್( ಡಿ.ಇಡಿ) ಮಾಡಿದ ಅಲ್ಲೂ ಕೂಡಾ ಎಲ್ಲರೂ ಮೆಚ್ಚುವಂತಹ ಶಿಕ್ಷಣ ಪಡೆದರೂ ಕೂಡಾ,ತಂದೆಯ ಹೆಸರು ಯಾರದರೂ ಕೇಳಿದಾಗಲ್ಲೊಮ್ಮೆ ಮುಜುಗರದ ಮನೋಭಾವ ಸದಾ ಕಾಡುತ್ತಿತ್ತು,ಆಗಿನ ಮಟ್ಟಕ್ಕೆ ನೋವು ನುಂಗಿದರೂ, ಸಬೂಬು ಹೇಳಿಕೆಯಿಂದ ಕಾಲ ಕಳೆಯುತ್ತಿದ್ದ,ತನ್ನ ಡಿ.ಇಡಿ ವ್ಯಾಸಂಗವನ್ನು ಪೂರ್ಣಗೊಳಿಸಿದ, ಶಿಕ್ಷಕರ ನೇಮಕಾತಿಯೂ ನಡೆಯಿತು,ಕೇವಲ ಒಂದೇ ಅಂಕದಲ್ಲಿ ಹುದ್ದೆಯನ್ನು ಕಳೆದುಕೊಂಡ,ಇದರಿಂದ ಇನ್ನಷ್ಟು ಜಾಗೃತನಾದ ಮನಸ್ಸಿನ ಜಾಗೃತ ಬೆಂಕಿಗೆ ಉತ್ತಮ ಹುದ್ದೆ ಪಡೆಯಬೇಕೆಂಬ ದಾಹದೊಂದಿಗೆ ದೂರದ ಪಟ್ಟಣಕ್ಕೆ ತೆರಳಿ ಒಂದ ವರ್ಷ ಓದಿನಲ್ಲೇ ಕಳೆದ.

ಫೋಟೋ ಕೃಪೆ : Deccan Herld
-ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವ ಸರ್ಕಾರಿ ಹುದ್ದೆ ಸಿಕ್ಕರೆ ಸಾಕು ಎಂಬ ಮನೋಭಾವದಲ್ಲಿರುವಾಗ ಪೊಲೀಸ್ ಕಾನ್ಸೆಟೆಬಲ್ ಹುದ್ದೆಗೆ ಆಯ್ಕೆಯಾದ. ಊರಲ್ಲಿ ಬೇರೆ ರೀತಿಯಿಂದ ನೋಡುತ್ತಿದ್ದ ಜನ, ಕರೆದು ಸನ್ಮಾನಿಸಿದರು. ಇನ್ನೇನೂ ಸನ್ಮಾನಗಳ ಸಂತೋಷ ಹೆಚ್ಚು ಕಾಲವಿಲ್ಲ ಎಂಬಂತೆ ತಂದೆ ಸ್ಥಾನದಲ್ಲಿದ್ದ. ತಾಯಿಯ ಅಕಾಲಿಕ ಮರಣ ,ಬರ ಸಿಡಿಲು ಬಡಿದಂತಾಯಿತು. ಎಲ್ಲದಕ್ಕೂ ಬೆನ್ನೇಲುಬಾಗಿದ್ದ ಬಡ ಜೀವ, ಮನೆಯ ಆಧಾರ ಸ್ಥಂಭವೇ ಕಳಚಿ ಬಿದ್ದಂತಾಯಿತು.
ವರ್ಷ ತುಂಬುವುದರೊಳಗೆ ಉತ್ತಮ ಕಾರ್ಯ ಮಾಡಬೇಕೆಂದು ಮನೆಯ ಹಿರಿಯರು ನಿಶ್ಚಯಿಸಿ, ಮದುವೆ ಮಾಡೋಣವೆಂದು ತೀರ್ಮಾನಿಸಿದರು. ಇದಕ್ಕೂಕಂಟಕ. ಎಷ್ಟೋ ಕುಟುಂಬಗಳು ದೇವದಾಸಿ ಮಗನೆಂಬ ಕಾರಣಕ್ಕೆ ಹೆಣ್ಣು ಕೊಡಲು ಯಾರು ಮುಂದೆ ಬರಲಿಲ್ಲ. ಪಕ್ಕದ ಹಳ್ಳಿಯ ಕುಟುಂಬವೊಂದು ಇವರ ಜೀವನವನ್ನು ಅರಿತಿದ್ದ ಪ್ರಜ್ಞಾವಂತ ಕುಟುಂಬವೊಂದು ಹೆಣ್ಣು ಕೊಡಲು ನಿಶ್ಚಯಿಸಿ ಮದುವೆ ಕೂಡಾ ಸಂತೋಷದಿಂದ ಮಾಡಿ ಕೊಟ್ಟರು. ಕಾಲ ಕಳೆದಂತೆ ಇಲಾಖೆಯಲ್ಲಿ ಪಿಎಸ್ಐ ವರೆಗೆ ಪದೋನ್ನತಿ ಪಡೆದು ಇಡೀ ತಮ್ಮ ಗ್ರಾಮವೇ ಹೊಗಳುವಂತೆ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ಮದುವೆಯಾಗಿ ಉತ್ತಮ ಸಂಸಾರದೊಂದಿಗೆ ಐದು ವರುಷಗಳ ಅವಧಿಯಲ್ಲಿ ಮೂರು ಮಕ್ಕಳ ತಂದೆಯಾದ.
ಉತ್ತಮ ಹುದ್ದೆ, ಸರ್ಕಾರದ ಸಂಬಳ,ಸಮಾಜದಲ್ಲಿ ಉತ್ತಮ ಮರ್ಯಾದೆ ಹೊಂದಿದ್ದರೂ ಕೂಡಾ ‘ನಾನು ದೇವದಾಸಿಯ ಮಗ’ ಎಂಬ ಒಂದೇ ನೊಂದ ಅಂಶ ಆತನನ್ನು ಸದಾ ಕಾಡುತ್ತಿತ್ತು. ಕಾಲ ಕಳೆದರೂ ತಲೆಗೆ ಅಂಟಿದ ಮಾನಸಿಕ ವ್ಯಾಧಿ ದೂರವಾಗುತ್ತಿರಲಿಲ್ಲ. ಎಲ್ಲರೊಂದಿಗೆ ನಗು ಮುಖದಿಂದ ಇದ್ದರೂ ನಗುವಿನ ಹಿಂದೆ ದುಃಖ ಬೆಂಬಿಡದೇ ಬೆನ್ನಹತ್ತುತ್ತಿತ್ತು. ಯಾವುದೇ ಚಟಗಳಿಗೆ ದಾಸರಾಗದ, ಸರ್ವರ ಬಾಯಿಯಲ್ಲೂ ಒಳ್ಳೆಯತನಕ್ಕೆ ನಿಸ್ಸೀಮನಾಗಿದ್ದರೂ ವಿಧೀ ಎಂಬುದು ಈತನ ಬಾಳಲ್ಲಿ ಮಿಂಚಿನಂತೆ ಬಂದು ತನ್ನ ಸಂಚನ್ನು ತಿಳಿಸದೇ ಹೋಯಿತು. ಎಂದಿನಂತೆ ಮಕ್ಕಳೊಂದಿಗೆ ನಗುಮುಖದೊಂದಿಗೆ ಇದ್ದಾಗ ಕಛೇರಿ ಕರ್ತವ್ಯಕ್ಕೇಂದು ಹೋಗಿದ್ದ.
ವ್ಯಕ್ತಿ ಎದೆ ನೋವೇಂಬ ಒಂದೇ ಕಾರಣದೊಂದಿಗೆ ಹೃದಯಾಘಾತ ವಾಗಿ ಕೇವಲ 37 ನೇ ವಯಸ್ಸಿನಲ್ಲಿ ಬಾರದಲೋಕ್ಕೆ ತನ್ನೇಲ್ಲಾ ದು:ಖಗಳನ್ನು ತನ್ನ ಜೊತೆ ತೆಗೆದುಕೊಂಡ ಹೋದ. ತನ್ನ ಬಾಲ್ಯಾವ್ಯಸ್ಥೆಯಲ್ಲಿ ಕಂಡ ಕಷ್ಟಗಳು ತನ್ನ ಸಾವಿನವರೆಗೂ ಜೀವಂತವಾಗಿದ್ದವೂ ಎಂಬುದು ವಿಪರ್ಯಾಸ. ತನ್ನ ಆರು ತಿಂಗಳ ಗಂಡು ಮಗು ನಾಲ್ಕು ಹಾಗೂ ಆರು ವರ್ಷದ ಹೆಣ್ಣು ಮಕ್ಕಳು, ಈ ಮೂವರೊಂದಿಗೆ ಹೆಂಡತಿ, ಮಕ್ಕಳ ಭವಿಷ್ಯತ್ತಿನ ಬಗ್ಗೆ ಚಿಂತಿಸಿದರೂ ಕೂಡಾ ತನ್ನ ಚಿಂತೆ ಫಲಪ್ರದವಾಗದೇ ಬಾರದ ಲೋಕಕ್ಕೆ ಪಯಣ ಬೆಳೆಸಿದ.

ಫೋಟೋ ಕೃಪೆ : richardarunachala
ಈತನಿಗೆ ಒದಗಿದ ಸಂಕಷ್ಟಗಳು ,ನಮ್ಮ ವೈರಿಗಳಿಗೂ ಬಾರದಿರಲಿ, ದೇವದಾಸಿ ಪದ್ಧತಿ ನಮ್ಮ ರಾಜ್ಯದಲ್ಲಿ ಹೆಚ್ಚಳವಾಗಿ ಬೇರೂರಿದ್ದರೂ ಕೂಡಾ ಸಂಪೂರ್ಣ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಿತ್ತಿದ್ದರೂ ಈ ಕುಟುಂಬಗಳಿಗೆ ಇರುವ ಸಾಮಾಜಿಕ ಧೈರ್ಯ ತುಂಬುವ ಕಾರ್ಯ ಎಲ್ಲೂ ಕಾರ್ಯರೂಪಗೊಳ್ಳುತ್ತಿಲ್ಲ. ಕೇವಲ ಸಹಾಯ ಧನ ಎಂಬ ಸಹಕಾರ ನೀಡದೇ, ಜಾಗೃತಿ ಯ ಕಾರ್ಯವಾಗಬೇಕಿದೆ, ಈ ಪದ್ಧತಿ ಬೆಳಗಾವಿ, ಬಾಗಲಕೋಟ, ವಿಜಯಪುರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಇನ್ನೂ ಜೀವಂತವಿದ್ದು, ತಮ್ಮದಲ್ಲದ ತಪ್ಪಿಗೆ ಕಂದಮ್ಮಗಳು ಮಾನಸಿಕ ಯಾತನೆಯ ಪರಿತಪಿಸುವಿಕೆಯ ಹೋಗಲಾಡಿಸುವ ಕಾರ್ಯ ಜರುಗಬೇಕಾಗಿದೆ.
- ಪ್ರಶಾಂತ ಹೊಸಮನಿ (ಕತೆಗಾರರು, ಲೇಖಕರು) ನಾಗಠಾಣ ತಾ.ಜಿ.ವಿಜಯಪುರ.
