‘ನೆಲೆ ಬೆಲೆಯ ಬೆಲೆವೆಣ್ಣು’ – ಡಾ.ವಡ್ಡಗೆರೆ ನಾಗರಾಜಯ್ಯ



ಆಕೆಯಲ್ಲಿ ಪ್ರೀತಿ ಮೊಳೆತಾಗ ಅವಳನ್ನು ಸರಕಾಗಿಸಿದ ಪುರುಷ ಧೋರಣೆಗೆ ಒಂದು ಧಿಕ್ಕಾರವಿರಲಿ… ಖ್ಯಾತ ಬರಹಗಾರ, ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರ ಒಂದು ಚಿಂತನ ಕವಿತೆ, ಕಣ್ಣೀರಿನ ಕವಿತೆ…ತಪ್ಪದೆ ಓದಿ…

ಆಲೂರು ಮಾಲೂರು ಬೇಲೂರು ಕೋಲೂರು
ಸುತ್ತಿ ಸುಳಿದು ಬಂದ ಮದನ ಸುವ್ವಾರಿ
ಸುರಾಂಗನಿ ಮಾಲು ನಾನು ಬೆಲೆವೆಣ್ಣು ಹಣ್ಣು!

ಬೀದಿ ಬದಿಯಲ್ಲಿ ಭಿಕರಿಗೆ ನಿಂತೆ
ಹಾದಿ ಬದಿಯಲ್ಲಿ ನಖರಿಗೆ ನಿಂತೆ
ಕೊಳ್ಳುವರು ಕೊಳ್ಳದೆ ಕಳಿತು ಹೋದೆ
ಮುಗ್ಗಲಿಡಿದು ಹುಳಿತು ಹೋದೆ!
ಕೊಳ್ಳುವವರು ಕೊಳ್ಳಲಿಲ್ಲ
ಮುಡಿಯುವವರು ಮೂಸಲಿಲ್ಲ ಬೆಲೆವೆಣ್ಣು ಹಣ್ಣು ನಾನು
ಬೆಲೆ ಕಟ್ಟುವವರು ಸಿಕ್ಕಲಿಲ್ಲ ನೆಲೆಗೆಟ್ಟವರು ದಕ್ಕಲಿಲ್ಲ!

ಕಪ್ಪು ಚೆಲುವೆ ನಾನು ಕರಿಮಣ್ಣಿನ ತಬ್ಬಲಿ ಕೂಸು
ಕಡುಗಪ್ಪು ಮುದುಕನು ಚೆಲುನಾಡಿ ತೋಳು ಬಳಸಿದ್ದ
ಬಿಳಿಗೆಂಪು ಹುಡುಗನು ಗೂಟ್ಯಾಡಿ ಎದೆಯ ಹಿಂಡಿ ಹೀರಿದ್ದ
ಸಮಗಾರ ಭೀಮವ್ವನ ಕರುಳ ವ್ಯಸನದ ಕೂಸು ನಾನು
ಎದೆಹಾಲು ಕುಡಿಯುವ ಮಕ್ಕಳಿಲ್ಲ ನನಗೆ!
ಹಾದಿಯ ಕಂದ ಬೀದಿಯ ಕಂದ ಆಡುವ ಕಂದ ನೋಡುವ ಕಂದ
ಬಲು ಚೆಂದ ಮುದ್ದಿಸಲು ಎಲ್ಲರೂ ನನ್ನ ಕಂದಮ್ಮಗಳೇ
ಬಳಿಸಾರಿ ಬರಲು ನನ್ನೆದೆಯಲ್ಲಿ ಮಮತೆಯ ಹಾಲು ಜಿನುಗುವುದು
ಸೂಳೆ ಸಂಕವ್ವನ ಕಿರಿತಂಗೆವ್ವ ನಾನು ಅವ್ವನ ಅಕ್ಕರೆಗೆ ಸುಂಕ ಬೇಕಿಲ್ಲ!

ಹಿಂದೊಮ್ಮೆ ಪ್ರೀತಿ ಉಕ್ಕಿತ್ತು ಎದೆಯಲ್ಲಿ ಆಸೆ ಚಿಗುರಿತ್ತು
ಮಾಯ್ಕಾರ ಮಾತುಗಾರ ಬಲು ಮೋಡಿಗಾರ
ಅತುಳ ಮೋಜುಗಾರ ಅಸದಳ ಸೊಗಸುಗಾರನು ಅವನು
ಮಂದಿರದ ಅಂಗಳದಲ್ಲಿ ಮದನಿಕೆಯು ಮೈಸೋಕಿ
ನನಗರಿವಿಲ್ಲದೆ ಬಳ್ಳಿಯಾಗಿದ್ದೆ ಮರವ ತಬ್ಬಿದ್ದೆ
ಮದನಿಕೆ ವದನ, ಚಂದಿರ ಸದನ, ಮದನ ಮದರಂಗಿ ನಾನಾಗಿದ್ದೆ
ಮದವೇರಿದ್ದೆ ಮದಿಸಿದಾನೆಯ ಸೊಂಡಿಲು ನೀವಿದ್ದೆ!
ಅರಿವಿರದೆ ದೇಹಗಳಲ್ಲಿ ಹರಿವ ಕರೆಂಟು ಮಿಂಚು ಪ್ರೀತಿ ಸೆಳಕು
ಒಡಲೊಳಗೇನೆಂಥದ್ದೋ ಪುಳುಕು ಕಿಬ್ಬೊಟ್ಟೆ ಚಿಲುಮೆ ಜುಳುಕು
ಅವನು ಬರೀ ಥಳುಕು ಥಳಥಳಕು!
ಜಲಗಣ್ಣಿಗೆ ಗುರುಮೆ ಮುಚ್ಚಿದ್ದ ಲಾಳವಂಡಿ ಬೀಗಮುದ್ರೆ ಹಾಕಿದ್ದ!

ಸಂತೆ ವ್ಯಾಪಾರಿಯವನು ಮುತ್ತುಗಳನ್ನು ಅಳೆಯುವನು ಬಳ್ಳಬಳ್ಳ
ಬೆಲೆವೆಣ್ಣಾಗಿದ್ದೆ ನಾನು ಲೋಕದ ವ್ಯಾಪಾರಿಗಳ ಪಾಲಿಗೆ ಕಣ್ಣಾಸರೆಗಿದ್ದೆ
ಸೋಲೂರು ಸೀಮೆಯ ಸ್ವಾಮಾರದ ಸಂತೆ ವ್ಯಾಪಾರ ಬಲು ಜೋರು
ಅಂಗಿ ಜೂಲಂಗಿ ಮೂಲಂಗಿ ಲಾಡಿ ಲಡಿನೂಲಿನೆಳೆಗೊಂದು ಬೆಲೆಯಂತೆ
ನನಗೂ ಕಟ್ಟಿದ್ದರು ಬೆಲೆವಂತೆ, ನಾನೊಂದು ಸಂತೆಯ ಸರಕಂತೆ!
ಸಂತೆಯಲ್ಲೊಬ್ಬಳು ಗರತಿ ಜುಟ್ಟಿಡಿದು ಕೇಳುತ್ತಿದ್ದಳು :
“ಅಂಗಿ ಮ್ಯಾಲಂಗಿ ಚೆಂದೇನೋ ನನ್ನ ರಾಯ/ ರಂಬೆ ಮೇಲೊಬ್ಬಳು
ಪ್ರತಿರಂಬೆ ಇದ್ದಾರೆ ಚೆಂದೇನೋ ರಾಯ ಮನೆಯಾಗೆ?!”

ಅವಸರಕ್ಕೊಂದು ಅಂಗಿ ಅಗತ್ಯಕ್ಕೊಂದು ಕಂಬಳಿ
ಕಳ್ಳೇಪುರಿ ಬತ್ತಾಸು ಕಲ್ಯಾಣಸೇವೆ ಮಿರ್ಚಿಮಂಡಕ್ಕಿ
ಜೋಳ ಸಜ್ಜೆ ರಾಗಿ ನವಣೆ ಭತ್ತ ದಾಲ್ಚಿನ್ನಿ ನೋಡುತ್ತಾ ನಿಂತಿದ್ದೆ
ನಾನೊಬ್ಬಳು ಚೆಲುವಾಂತ ಚೆನ್ನಿ!

ನೋಡನೋಡುತ್ತಲೇ ಇಳಿ ಸಂಜೆಯಾಗಿತ್ತು
ವಿಜಯಪುರ ಸಿಂಗಾಪುರ ಕೆರೆಗೋಡಿ ರಂಗಾಪುರ
ಸೋಲೂರು ಸಂತೆ ಮುಗಿದಿತ್ತು, ನಾನು ನಡೆಯುವ ದಾರಿ ಸವೆದಿತ್ತು
ಮೆಟ್ಟಡಿಯ ಬಟ್ಟೆಯ ನೆರಳು ನನಗೆ ಗತಿಯಾಗಿತ್ತು
ನಾಯನರಕದ ಸಂತೆ ಚಮ್ಮಡದ ವ್ಯಾಪಾರ ಬಲುಜೋರು
ಬೆಲೆವೆಣ್ಣು ನಾನು, ನೆಲೆ ತಿಳಿದು ಬೆಲೆ ಹೇಳಿರಿ
ನಿಜದ ನೆಲೆ ತಿಳಿದು ಬೆಲೆ ಕಟ್ಟಿರಿ.


  • ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು)

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW