‘ಅಮ್ಮನಾಗುವುದೆಂದರೆ’ ಕವನ – ಶಿವದೇವಿ ಅವನೀಶಚಂದ್ರ

ತಾಯ್ತನವೆಂದರೆ ಮತ್ತೆ ಸತ್ತು ಮರುಹುಟ್ಟು‌ ಪಡೆಯುವುದು…ಹೊಸ ಜೀವಕಾಗಿ ಸತ್ತು ಮತ್ತೆ ಹುಟ್ಟಿದಂತೆ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ರಚನೆಯ ಕವನವನ್ನು ತಪ್ಪದೆ ಮುಂದೆ ಓದಿ…

ಅಮ್ಮನಾಗುವುದೆಂದರೆ
ಸುಮ್ಮನಲ್ಲ
ಹೊಸ ಜೀವಕಾಗಿ ಸತ್ತು
ಮತ್ತೆ ಹುಟ್ಟಿದಂತೆ

ನರನರಗಳ ತಂತಿ ಬಿಗಿದು
ರುದ್ರ ವೀಣೆಯ ಮೀಟಿದಂತೆ
ಹೆಣ್ತನವ ಅನಾವರಣಗೊಳಿಸಿ
ಬೆತ್ತಲಾಗಿಸಿ ಕಾಯವ
ದೇವನೀವ ಭಾವಕೆ ಭವಬಂಧನವ…
ತಾಯ್ತನದ ಲೋಕೋತ್ತರ
ದಿವ್ಯತೆಯ…ಆರೋಪಿಸುವುದು..

ತಾಯ್ತನವೆಂದರೆ ಮತ್ತೆ ಸತ್ತು
ಮರುಹುಟ್ಟು‌ ಪಡೆಯುವುದು
ಶಕ್ತಿಸ್ರೋತವಾಗಿ
ಕಂದನ ಆಕ್ರಂದನದಲಿ ಹೊಸ
ಭಾವ ಸಂಚಯವಾಗುವುದು

ಸೃಷ್ಟಿ ಶಕ್ತಿಯ ಬಗ್ಗೆ ಅಚ್ಚರಿ ಮೂಡುವುದು
ತಾನು ಮತ್ತೊಂದು ಜೀವಕೆ ಸರ್ವಸ್ವವೂ ಆಗಬೇಕಾದ ಅನಿವಾರ್ಯತೆಯನ್ನು ಮನಗಾಣಿಸುವುದು

ಒಂದೇ ಆಗಿರುವ ಬಾಳ ಗುರಿಗೆ
ನೂರು ಕವಲುಗಳ ಹೊಮ್ಮಿಸಿ
ತನಗೆ ‘ಅಮ್ಮಾ’ ಎಂಬ ಕರೆಯ
ಮಧುರ ಚೈತನ್ಯ ತುಂಬಿಸಿ
ಬದುಕನ್ನು ಅವಿಶ್ರಾಂತವಾಗಿಸುವುದು

ಸುಕೋಮಲ ಸ್ಪರ್ಶದಲಿ ತನುಮನವ ಪುಳಕಿತಗೊಳಿಸಿ
ನಾನೇ ಅಮ್ಮನ ಹೊಟ್ಟೆಯಲ್ಲಿ ಮರುಹುಟ್ಟು ಪಡೆದೆನೆಂಬಂತೆ
ಮತ್ತೆ ಶಿಶುವಾಗುವುದು…
*
ನಾನು ನನ್ನ ಮಗಳಿಗೆ ತಾಯಾದ ಮೊದಲ ಸಂಭ್ರಮದ ದಿನವಿದು!
*
ಧನ್ಯೆ ಆ ಭಗವಂತನ ಕರುಣೆಗೆ
ತಾಯ್ತನದ ಸೈರಣೆಗೆ
ಮಧುರಾನುಭೂತಿಗೆ….


  • ಶಿವದೇವಿ ಅವನೀಶಚಂದ್ರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading