‘ಪ್ರೀತಿಯ ಬಲೆ’ ಸಣ್ಣಕತೆ – ವಾಣಿ ಮೈಸೂರು

ಸವಿನಯ ಓದುವ ವಯಸ್ಸಿನಲ್ಲಿ ಪ್ರೀತಿಯ ಹುಚ್ಚು ಹಿಡಿಸಿಕೊಂಡು ಹೆತ್ತವರ ಮನಸ್ಸು ನೋಯಿಸಿ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದ್ದಳು. ಆದರೆ ಆಕೆಗೆ ದೇವರು ಸರಿಯಾದ ಶಿಕ್ಷೆ ಕೊಟ್ಟ. ಹಿಂದೆ – ಮುಂದೆ ನೋಡದೆ ಅವನ ಬಗ್ಗೆ ವಿಚಾರಿಸದೆ ಪ್ರೀತಿಯಲ್ಲಿ ಬಿದ್ದು ಪೆದ್ದಾದಳು.  ವಾಣಿ ಮೈಸೂರು ಅವರ  ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಮುಂಜಾನೆಯ ಕೊರೆಯುವ ಚಳಿ ಇಬ್ಬನಿ ಮೋಡದಿಂದ ಧರೆಗೆ ಇಳಿದು ಮುತ್ತಿಡುತ್ತಿದೆ. ಯಾರಿಗೂ ಹೇಳದೆ ಕೇಳದೆ ಕದ್ದು ಮನೆ ಬಿಟ್ಟವಳೇ ಅಕ್ಕ ಪಕ್ಕ ನೋಡಿದೆ ಕಳ್ಳ ಬೆಕ್ಕು ನೋಡಿದಂತೆ, ನಾನು ಓಡಿ ಹೋಗುತ್ತಿರುವುದು ಗೊತ್ತಾಗುವುದೇ ಎನ್ನುವ ಭಯ ಆವರಿಸಿದೆ ಯಾರಾದರೂ ಹಿಂದೆ ಬಂದು ಕೇಳಿಬಿಟ್ಟರೆ ಸಿಕ್ಕಿದ ಆಟೋ ಹತ್ತಿ ಬೆಂಗಳೂರಿನ ಮೆಜಸ್ಟಿಕ್ ತಲುಪಿದೆ. ಬಸ್ ಸ್ಟಾಂಡ್ ಜನಸಂದಣಿಯಲ್ಲಿ ಗಿಜುಗುಡುತಿದೆ ಸುಮಾರು ಒಂದು ಗಂಟೆ ಆಯ್ತು ಅವನು ಬರುವ ರಸ್ತೆ ಎದುರು ನೋಡ್ತಾ ಬಸ್ಸುಗಳು ಬರುತ್ತಿದ್ದವು, ಹೋಗುತಿದ್ದವು. ಎಲ್ಲರು ನನಗೆ ಗಮನಿಸುತ್ತಿದ್ದಾರೆ? ನೋಡುವವರ ರೀತಿ ಬದಲಾಗುತ್ತಿದೆ.

ಯಾವನೋ ಪೋಕರಿ ಬೇಕಂತಲೇ ನನ್ನ ಪಕ್ಕ ನಿಂತ, ನನಗೆ ಜಿಗುಪ್ಸೆ ಜೊತೆಗೆ ಹಿಂಸೆ ಅನಿಸಿತು, “ಕಣ್ಣಲ್ಲೇ ಸನ್ನೆ ಮಾಡಿದ” ಏನೆಂದು ಅರ್ಥವಾಗದು ಅವನನ್ನು ನೋಡದೆ ಇರುವಂತೆ ಮುಖ ಗಂಟಿಕ್ಕಿ ತಿರುಗಿ ಕೂತೆ. ಸಮಯ ಓಡುತ್ತಲೇ ಇದೆ ಮನಸಲ್ಲಿ ಅಸಹನೆ ಭುಗಿಲೆದ್ದಿದೆ ಇವತ್ತು ನನ್ನ ಮತ್ತು ಧ್ರುವನ ಮದುವೆ ಆಗುವುದೇ ಅನುಮಾನ ಹೆಚ್ಚಾಗಿ ಸಣ್ಣದಾಗಿ ಬೆವರಲು ಶುರುಮಾಡಿದೆ. ಆ ಪೋಕರಿ ಮತ್ತೆ ನಾನಿರುವ ಕಡೆ ಬಂದ, ಮತ್ತೆ ಕಣ್ಣಲ್ಲೇ ಸನ್ನೆ ಮಾಡಿದ “ಜೊತೆಗೆ ಬಾ” ಅನ್ನುವ ಕಣ್ಸನ್ನೆ ಆಗಿತ್ತು. ಮೊದಲೇ ಸಿಟ್ಟು ನತ್ತೆಗೇರಿತು, ಕೆಟ್ಟ ಕೋಪ ಉಕ್ಕಿ ಬಂತು. ಕೋಪದಿಂದ ಕಣ್ಣನ್ನು ದೊಡ್ಡದಾಗಿ ಅರಳಿಸಿ ಚಪ್ಪಲಿಯನ್ನು ಮುಂದೆ ಸರಿಸಿದೆ ಅವನಿಗೆ ಏನ್ ಅನಿಸಿತೋ ಸ್ವಲ್ಪ ದೂರ ನಿಂತ.

ಸಮಾಧಾನದಿಂದ ದೀರ್ಘ ಉಸಿರನ್ನು ಎಳೆದುಕೊಂಡು ಧೃವನಿಗೆ ಫೋನ್ ಮಾಡಿದೆ. ಫೋನ್ ಕಟ್ ಆಗ್ತಾ ಇದೆ. ಅರ್ಥ ನನ್ನ ನಂಬರ್ ಬ್ಲಾಕ್ ಮಾಡಿದ್ದಾನೆ. ಈಡಿಯಟ್. ಅದು ಈ ಸಮಯದಲ್ಲಿ ಕಂಬನಿ ಮಿಡಿಯುವುದೊಂದೇ ಬಾಕಿ ಅಷ್ಟು ಹೃದಯ ಭಾರವಾಗಿತ್ತು. ತಕ್ಷಣ ಟಣ್ ಎಂದು ಬಂದ ವಾಟ್ಸಾಪ್ ಮೆಸೇಜ್ ನೋಡಲು ನನ್ನ ಧೃವ

ಡಿಯರ್ ಸವಿನಯ, ನನಗೆ ಕ್ಷಮಿಸಿ… ಮೊದ್ಲೇ ಮದುವೆ ಆಗಿದೆ. ನಿನಗೂ ಮದುವೆ ಮಾಡಿಕೊಂಡು ಮೋಸ ಮಾಡಲಾರೆ. ನೀನು ತುಂಬಾ ಇಷ್ಟ ಆಗ್ಬಿಟ್ಟೆ. ಅದಕ್ಕೆ ನಿನ್ನನ್ನು ಕಳೆದುಕೊಳ್ಳಲು ಇಷ್ಟವಿಲ್ಲದೆ ಇಷ್ಟು ದಿವಸ ದಿನಗಳನ್ನು ತಳ್ಳಿದೆ ರಾತ್ರಿ ನೀನು ಮದುವೆ ಆಗೋಣ ಅಂತ ಡಿಸೈಡ್ ಮಾಡ್ದಾಗ ನಾನು ಒಪ್ಪಿಕೊಂಡೆ. ಆದ್ರೆ ರಾತ್ರಿ ಎಲ್ಲ ಯೋಚ್ನೆ ಮಾಡ್ದೆ…! ಏಕೋ ಈ ಮದುವೆ ಬೇಡ ಅನ್ನಿಸ್ತು, ನಿನ್ನ ಜೀವನವನ್ನು ನೀನು ನೋಡ್ಕೋ ಪ್ರೀತಿ ಅಂತೂ ನಿಜ ಕೊನೆಯವರೆಗೂ ಪ್ರೀತಿ ಮಾಡ್ತಾನೆ ಇರ್ತೀನಿ. ಎಲ್ಲಿದ್ದರೂ ಸುಖವಾಗಿರು… ಮತ್ತೆ ನನ್ನ ಜೀವನದಲ್ಲಿ ಬರಬೇಡ… ”

ಧೈರ್ಯ ಮಾಡಿ , “ನಾನು ಸವಿನಯ ತಿರಸ್ಕಾರ ಮಾಡಿದ ಜಾಗದಲ್ಲಿ ಒಂದು ನಿಮಿಷವು ನಿಲ್ಲುವುದಿಲ್ಲ. ಯೋಗ್ಯತೆ ಇಲ್ಲದವನು ನೀನು ನನ್ನ ಜೀವನದಿಂದ ಹೋಗಿದ್ದು, ನನ್ನ ಭಾಗ್ಯವೇ ಸರಿ” ಎಂದು ಮೆಸೇಜ್ ಮಾಡಿ ನಂಬರ್ ಡಿಲೀಟ್ ಮಾಡಿದೆ.

ನಿಂತಿದ್ದವಳು ಹಾಗೆ ಕುಳಿತೆ. ಭೂಮಿಯೆ ತೆರೆದಂತೆ ಭೂಕಂಪನವಾಗುತ್ತಿದೆ. ಮನಸ್ಸಿನೊಳಗೆ “ಹೆತ್ತವರ ಮನಸು ನೋಯಿಸಿ ಓಡಿ ಹೋಗಿ ಮದುವೆ ಮಾಡಿಕೊಳ್ಳಬೇಕು ಎಂದಿದ್ದ, ನನಗೆ ದೇವರು ಸರಿಯಾದ ಶಿಕ್ಷೆ ಕೊಟ್ಟ. ಹಿಂದೆ – ಮುಂದೆ ನೋಡದೆ ಅವನ ಬಗ್ಗೆ ವಿಚಾರಿಸದೆ ಪ್ರೀತಿಯಲ್ಲಿ ಬಿದ್ದು ಹುಚ್ಚು ಮನಸ್ಸು ಪೆದ್ದಾಯಿತು. ಆದರೂ ಅವನ ಕಡೆಗೆ ಸೆಳೆಯುತ್ತಿದೆ, ಹುಚ್ಚು ಮನಸ್ಸು. ಬ್ಯಾಗ್ ನಲ್ಲಿದ್ದ ಬಟ್ಟೆಗಳು ಸ್ವಲ್ಪ ಒಡವೆ, ಹಣ ಭಾರವೆನಿಸಿ ಮನೆಯ ಕಡೆ ಹೊರಟೆ.

ಅಮ್ಮ, ತುಳಸಿ ಪೂಜೆ ಮಾಡುತ್ತಿದ್ದಳು. ಇದೇನು ಮಗಳೇ ಬೆಳಿಗ್ಗೆನೇ ಕ್ಲಾಸ್ ಇತ್ತಾ ? ಯಾರಿಗೂ ಹೇಳದೆ ಹೋಗಿದ್ದೀಯಾ….??? ನಡೀ ನಡೀ ಬಿಸಿ ಇಡ್ಲಿ ಮಾಡಿದ್ದಿನಿ ತಿನ್ನು. ಎಷ್ಟು ಮುಗ್ದತೆ, ಹೆತ್ತವರಿಗೆ ಮೋಸ ಮಾಡ ಬೇಕೆಂದುಕೊಂಡ ನನಗೆ ನಾಚಿಕೆ ಆಯ್ತು. ತಲೆ ತಗ್ಗಿಸಿದೆ.

ಎಷ್ಟೋ ದಿನಗಳು ಮೌನವಾದೆ. ಅವನ ನೆನಪು ಪ್ರೀತಿಯಲ್ಲಿ ಕಳೆದ ಹುಚ್ಚು ಮನಸು ಆ ಹುಚ್ಚು ಪ್ರೀತಿಯ ಮರೆಯದು. ನಿರ್ಲಿಪ್ತ ಭಾವದೊಂದಿಗೆ ಮನಸ್ಸು ಮೌನವಾಗಿದೆ.


  • ವಾಣಿ ಮೈಸೂರು 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading