ಕುಸುಮಬಾಲೆ : ದೇಸಿಯತೆಯ ಕನ್ನಡ ಮಾರ್ಗ ಕೃತಿದೇವನೂರು ಮಹಾದೇವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಕುಸುಮಬಾಲೆ. ದೇ.ಮಹಾದೇವರು ಕುಸುಮಬಾಲೆ ಬರೆದದ್ದು 1984 ರಲ್ಲಿ ಕೃತಿಯ ಕುರಿತು ಲೇಖಕ ಟಿ.ಪಿ.ಉಮೇಶ್ ಅವರು ಪರಿಚಯಿಸಿದ್ದಾರೆ, ಮುಂದೆ ಓದಿ…

ಒಂದು ಕಾದಂಬರಿಯಾಗಿ ರಚನೆಯಾದ ಅದಿಂದು ಜಾನಪದೀಯ ಮಹಾಕಾವ್ಯವಾಗಿ ಕನ್ನಡ ಭಾಷೆಯ ಇತಿಹಾಸದಲ್ಲಿ ಸಾಹಿತ್ಯ ಮೇರು ಕೃತಿಯಾಗಿ ಗುರುತಿಸಲ್ಪಟ್ಟಿದೆ. ಮಹದೇವರವರ ಗದ್ಯದ ಬರಹದಲ್ಲಿ ಕಾವ್ಯದ ಲಯ ಹಾಗು ಗೇಯತೆ ಗುರುತಿಸಿದ ಎಲ್. ಬಸವರಾಜುರವರು ಲಯಕಾರ ವಿನ್ಯಾಸದ ರೂಪರೇಷೆಗೆ ಗದ್ಯ ಕಾದಂಬರಿಯನ್ನು ಬದಲಾಯಿಸಿದ್ದಾರೆ. ಕಾವ್ಯರೂಪದಿ ಓದಿಕೊಳ್ಳುವಂತೆ ಜಾನಪದ ಗೀತೆಯಂತೆ ಹಾಡಿಕೊಳುವಂತೆ ಸಿದ್ಧಗೊಳಿಸಿಕೊಟ್ಟಿದ್ದಾರೆ.

ಚಾಮರಾಜನಗರದ ಗ್ರಾಮ್ಯ ಭಾಷಾ ಸೊಗಡಿನ ಸಾಂದ್ರ ರೂಪ ಈ ಕೃತಿ. ಅನುಭವದ ಫಲದಂತೆ, ಕಲ್ಪನೆಯ ಬೆಳಕಂತೆ, ಅನುಭಾವದ ನಿಧಿಯಂತೆ, ಜನಾಂಗದ ಬದುಕಂತೆ, ದೇಶದ ಗತಿಯಂತೆ ಕೃತಿ ಬಹುಆಯಾಮದ ರೂಪಗಳ ಬೆಡಗಾಗಿದೆ. ಕುಸುಮಬಾಲೆ ಕಥೆ ಊರೆಂಬೊ ಊರಲಿ ನಡೆಯುತ್ತೆ ಅದು ಯಾವುದೆ ಊರಾಗಿರಬಹುದು. ನಾನಾ ಜಾತಿಗಳ ನಡುವಣ ಜೀವನ, ಮೇಲು ಕೀಳುಗಳ ಅರಿವಿದ್ದು ಅದನ್ನು ನಗಾಡ್ತ ಬದುಕುವ ಬದುಕಿನ, ಎಲ್ಲ ಮನುಷ್ಯರ ಮೂಲಧರ್ಮ ಬದುಕಬೇಕೆಂಬ ಅನಿವಾರ್ಯದ, ನೈತಿಕತೆ ಸಮಾಜಪ್ರೇರಿತ ಮೌಲ್ಯಗಳ ಮೀರಿಯು ಜೀವನಗಳು ನಡೆಯುವ ಗೆಲುವ ರೀತಿಗಳ ಭಾವಪ್ರಪಂಚದ ವಿವರಣೆಯುಳ್ಳ ಜನಾಂಗದ ಕಲಾತ್ಮಕ ಚಿತ್ರಣವುಳ್ಳ ಕೃತಿ ಕುಸುಮಬಾಲೆ.

ಸೋಮಿಯ ಮಂಚವು, ಮಾತಾಡುವ ಮಾರಮ್ಮ, ಜೋಗಮ್ಮರು ಮೈದುಂಬಿ ಬರುವ ಸಂಗತಿಗಳೆ ನಮ್ಮ ಬದುಕಿನ ಕಾಲ್ಪನಿಕ ನಂಬಿಕೆಗಳಲ್ಲಿನ ಮುಗ್ಧ ಸುಖದ ಅರಿವು ಮಾಡಿಸುತ್ತವೆ. ಚೆನ್ನನ ಒಂದೀಟು ಓದು, ಭಲೆ ತಲೆ ತಿರುಗುವ ಚಾಕರಿಗಳ ಮಾಡಿಸಿ ಕೊಲೆಯಾಗುವ ಮಟ್ಟಕ್ಕೆ ಹೋಗಿ ಕೊಲೆಯಾಗದೆ ದೂರದ ಬೊಂಬಾಯಿಯಲ್ಲಿ ಬದುಕಿದಾನೆ, ಐನಾತಿ ಜೀವನ ನಡೆಸ್ತಿದಾನೆ ಇಂದಿರಾಗಾಂಧಿನು ಬರುವ ಹೋಟೆಲ್ನಾಗೆ ಮ್ಯಾನೇಜರ್ ಆಗಿದಾನೆ ಅಂತ ಕಂಡು ಬಂದ ಸಾಬರ ಬಾಯಲಿ ಆಡಿಸೋ ಮಾತುಗಳು, ಅಮಾಸನಂತೆ ನಮಗು ದಿಗಿಲು ತರಿಸಿ ಅಚ್ಚರಿಯಲಿ ಒರಳಾಡಿಸುತ್ತವೆ.

ಚನ್ನ ಹಾಗು ಅವನ ಗುರುಗಳು ಮಾಧ್ವಾಚಾರ್ಯರ ನಡುವಿನ ಮಾತುಗಳು ನಾಜೂಕಾದರು ಎಲ್ಲ ಸಮಾಜದ ಬಲು ವಾಸ್ತವ ಅನಿಸುತ್ತವೆ. ಯಾಡೆಯ ಬಾಲ್ಯ ಅವನ ತರಲೆ ಬುದ್ದಿವಂತಿಕೆಗಳು ನಾಟಕೀಯ ವರ್ತನೆಗಳ ಅತಿರಂಜಿತ ವ್ಯಕ್ತಿತ್ವ ಕಣ್ಣಿಗೆ ಕಟ್ಟುತ್ತವೆ. ಅಕ್ಕಮನ ಮಗ ಯಾಡೇಯ. ಯಾಡೆ ಮಗನಾದ ಸೋಮಿ. ಸೋಮಿಯ ಮಗಳಾದ ಕುಸುಮಬಾಲೆಯ ಅಕಾರ್ಯದಿಂದ ಚೆನ್ನನ ಸಂಗದಿಂದ ಮಗು ಪಡೆದು ಗಂಡನ ತಿರಸ್ಕಾರಕ್ಕೆ ಗುರಿಯಾಗಿ ನರಳುವಿಕೆಯ ಪರಸಂಗದ ಕಥೆಯಂತೆ ಆರಂಭಗೊಂಡ ಕಾವ್ಯ ಊರ ಉಸಾಬರಿಗಳನೆಲ್ಲ, ರಾಜಕೀಯ ಧರ್ಮಸೂಕ್ಷ್ಮಗಳನೆಲ್ಲ ಬದುಕನ್ನ ಬಂದಂತೆ ಬದುಕುವ ಭಂಡತನಗಳನ್ನೆಲ್ಲ ಹಾಡುತ್ತ ಸಾಗುತ್ತದೆ.

ಫೋಟೋ ಕೃಪೆ : stringfixer

ಹಟ್ಟಿ ಸಿದ್ದ… ಸಿದ್ಮಾವನ ಒಂದು ದಂಡ ಪ್ರಸಂಗದಿಂದ ಕೆರಳಿದವನು ಒಂದಷ್ಟು ಓದಿದ ನಾಗರಾಜು. ದಲಿತ ಸಂಘವ ಕಟ್ಟುವುದು, ಕವಿ ಸಿದ್ದಲಿಂಗಯ್ಯ,  ದ್ಯಾವನೂರ ಮಹದೇವ,  ಕಿಸ್ನಪ್ಪ ಓರಾಜಣ್ಣರ ಕರೆಸಿ ಸಭೆ ನಡೆಸುವುದು, ಜಾತಿಯ ಸಮಸ್ಯೆಗೆ ಕರಿಯಯ್ಯ ಮೈದುಂಬಿಕೊಂಡು ಕೊಡುವ ಅಪ್ರಾಸಂಗಿಕವಾದರು ಸಾಂದರ್ಬಿಕವಾದ ಉತ್ತರ ನಗೆಗಡಲಲಿ ತೇಲಿಸಿದರು ನಮ್ಮನ್ನೆಲ್ಲ ಚಿಂತನೆಗೆ ಹಚ್ಚುತ್ತವೆ. ಅಕ್ಕಮಹಾದೇವಿ ಯಾಡನ ತಾಯಿ ಗಂಡ ಹೋದ ಮೇಲೆ ತವರ ಸೇರಿ ಪುನಃ ಬಂದು ಭಾವ ಬಸಪ್ಪಸೋಮಿ ಬಳಿ ಜೀವನ ನಡೆಸಲು ದಾರಿ ಕೇಳುವುದು, ಮೈದುನ ಸಿದ್ದೂರನು ಅಕ್ಕಮ್ಮನ ಬಾಳ ಹಳಿದು ಹಂಗಿಸಿ ಬಡಿದು ಊರಾಚೆ ಹಾಕುವ ಪ್ರಸಂಗ ಅವಳಲ್ಲೆ ಬೆಳೆದು ಊರು ಕಟ್ಟುವ ರೀತಿ ಕಾದಂಬರಿಕಾರರ ಚೇತೋಹಾರಿಯಾದ ವರ್ಣನೆಗಳು. ಹಟ್ಟಿಯ ಕೆಂಪಿ ಕಿಟ್ಟಯರ ಜಗಳದ ಮಾತುಗಳನ್ನು ಕೃತಿಯಲ್ಲಿ ಓದಿಯೇ ಅನುಭವಿಸಬೇಕು.ಮಠಗಳ ಕಾರಬಾರಿ ಲಿಂಗ ಕಟ್ಟುವ ಕಥೆ, ಮಲೆ ಮಾದೇಸನ ನೆನಹು, ಗಾಂಧಿತಾತನ ಸ್ಮರಣೆ, ಹುಲಿವೇಸದ ಸಂಗಹಳ್ಳಿ ಪಂಚಾಯಿತಿ ಕೇರಿ ಜೋಗಮ್ಮದೀರ ಊರ ಒಳಕತೆಯ ಹೇಳುವ ಮಾತುಗಳು, ಬಡತನದ ಕರಾಳತೆ ರೊಕ್ಕದ ಬೀಡಿ ಸಿಗರೇಟಿನ ಹೋಟೆಲ್ ಟೀ ಸೊಪ್ಪಿನ ಚಾದ ಪ್ರಸಂಗಗಳು, ಸಂತೆಯ ರೀತಿರಿವಾಜುಗಳು ಹಾಸ್ಯದಲ್ಲು ಗಂಭೀರವಾದ ಜೀವನದ ಮಗ್ಗುಲುಗಳ ಪರಿಚಯಿಸುತ್ತವೆ. ಕೃತಿಯು ಹತ್ತೊಂಬತ್ತು ಅಧ್ಯಾಯಗಳಲ್ಲಿ ನಿರೂಪಿತಗೊಂಡಿದೆ. ನಾಲ್ಕು ತಲೆಮಾರುಗಳ ಜೀವನದ ಚಿತ್ರಣವನ್ನು ನಮ್ಮ ಮುಂದಿಡುತ್ತದೆ. ಚೆನ್ನನ ಕನಸಿನಲಿ ಕುಸುಮಾ ಹಾಗು ಅವನ ಅಪ್ಪ ಅವ್ವ ಇರುವಂತೆ, ಅವ ಮರಳಿ ಬರುತಾನೆ ಎಂದೆ ದ್ಯಾಸದಲಿರುವಂತೆ ಕಾವ್ಯ ಮುಗಿಯುತ್ತದೆ. “ಬರ್ದೆ?ಸಂಬಂಜ ಅನ್ನೋದು ದೊಡ್ಡದುಕನಾ…”

ಕೃತಿಯ ಭಾಷೆ ಓದಿದಷ್ಟು ಸೊಗಸಿನ ಜೊತೆಗೆ ಅರಿವು ಅಚ್ಚರಿ ಕೊಡುತ್ತದೆ. ಅಯ್ಯೋ ಆ ನಮ್ಮ ಕುಸುಮ್ನಂತು ಈ ಏಡ್ ನೇತ್ರಗಳಿಂದ ನೋಡಕ್ಕಾಗಲ್ಲ ಕನವ್ವ. ಆ ಎಳಿ ನಗೂನುವಿ ಈ ಎಳೆ ಚೆಲೂವ್ನುವಿ ಸೇರ್ಸಿ ಬಟ್ಟಿ ಇಳ್ಸಿ ಮಾಡ್ದಂಗಿದ್ದವಳೂ… ಅಪೈ ಇಲ್ನೋಡು ಕೂಸು ಆಡ್ತ ಅದ. ಕನ್ನಡ ಭಾಷೆಗೆ ವಿಶೇಷ ದೇಸೀಯತೆಯ ಮಾರ್ಗ ಈ ಕೃತಿ. ಕೃತಿಯನ್ನು ಭಾಷೆ ವಸ್ತು ತಂತ್ರ ದೇಸೀಯತೆ ಪ್ರಸ್ತುತತೆ ಪಾತ್ರಗಳ ದೃಷ್ಟಿಯಿಂದ ಓದಿ ದಾಖಲಿಸಬಹುದು.


  • ಟಿ.ಪಿ.ಉಮೇಶ್ (ಟಿ.ಪಿ.ಉಮೇಶ್ ಸಹಶಿಕ್ಷಕರಾಗಿ ವೃತ್ತಿ ನಿರ್ವಹಿಸುತ್ತ ಕಥೆ ಕವನಗಳನ್ನು ಬರೆಯುವ ಹವ್ಯಾಸವುಳ್ಳವರು. ಫೋಟೊಕ್ಕೊಂದು ಫ್ರೇಮು, ನನ್ನಯ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್, ಅಪ್ಪನು ಕೊಡಿಸಿದ ಮೊದಲ ಪುಸ್ತಕ, ವಚನವಾಣಿ, ವಚನಾಂಜಲಿ, ದೇವರಿಗೆ ಬೀಗ ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ 2021 ನೇ ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪುರಸ್ಕಾರ ಪುರಸ್ಕೃತರು.)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW