ನಾನು ಹುಟ್ಟಿ ಬೆಳೆದ ದಂಡಕಾರಣ್ಯದಲ್ಲಿ ನಾನು ಕಳೆದ ಅಮೂಲ್ಯದ ದಿನಗಳನ್ನು ಲೇಖನದ ಸರಣಿ ಮಾಲಿಕೆಯನ್ನು ಓದುಗರ ಮುಂದೆ ಬಿಚ್ಚಿಡುತ್ತಿದ್ದೇನೆ. ಓದಿ, ನಿಮ್ಮ ಬಾಲ್ಯದ ನೆನಪುಗಳಿದ್ದರೆ ತಪ್ಪದೆ ನನ್ನೊಂದಿಗೆ ಹಂಚಿಕೊಳ್ಳಿ ……
ಬೆಂಗಳೂರಿನ ವಾತಾವರಣ, ನಾಲ್ಕು ಗೋಡೆಗಳ ಮಧ್ಯೆ ಬದುಕು ಬೇಸತ್ತಿತ್ತು. ಒಂದು ದೀರ್ಘವಾದ ಉಸಿರು, ಈ ಬದುಕಿಗೆ ಒಂದು ಅಲ್ಪವಿರಾಮ ಬೇಕೆಂದು ಅನ್ನಿಸಿದಾಗ ನಾನು ಹೊರಟದ್ದು ಅಂಬಿಕಾನಗರದತ್ತ. ಈ ಊರಿನ ಹೆಸರು ಕೇಳುತ್ತಿದಂತೆ ಮೈ ರೋಮಾಂಚನವಾಗುತ್ತದೆ ಮತ್ತು ನನಗೆ ಖುಷಿಯಾಗಿಡುವಂತ ಜಾಗ. ಅದಕ್ಕೆ ಕಾರಣವಿಷ್ಟೇ ನಾನು ಹುಟ್ಟಿ ಬೆಳೆದ, ಮೊದಲು ಕಣ್ಣು ತೆರೆದು ನೋಡಿದಂತಹ, ಭಾವನಾತ್ಮಕವಾಗಿ ಬೆಸೆದಂತಹ ಊರದು.
ಕೆಲಸವೆಂದು ಅರಸಿ ಬಂದ ಮೇಲೆ ತವರು ಮನೆ, ವೃತ್ತಿ ಬದುಕು ಬೆಂಗಳೂರೇ ಆಗಿತ್ತು. ಇಲ್ಲೇ ಮನೆ, ಇಲ್ಲೇ ಸಂಸಾರ, ಬಿಟ್ಟುಬಿಡದ ಬ್ಯುಸಿ ಜೀವನ ಶೈಲಿಯಲ್ಲಿ ನಮ್ಮನ್ನೇ ನಾವು ಮರೆತು ಹೋಗಿದ್ದೆವು. ಆದರೆ ನಾವು ಎಲ್ಲೇ ಬದುಕನ್ನು ಕಟ್ಟಿಕೊಂಡಿದ್ದರೂ ಬಾಲ್ಯದ ನೆನಪು ಎಂದಾಗ ಮೊದಲು ನೆನಪಿಗೆ ಬರುವುದು ಹುಟ್ಟಿದ ಊರು, ಬೆಳೆದ ಮನೆ, ಸ್ನೇಹಿತರು, ಸುತ್ತಮುತ್ತಲಿನವರು.
ನನ್ನ ಬಾಲ್ಯದ ಊರನ್ನೇ ನೋಡದೆ ಸುಮಾರು 25 ವರ್ಷಗಳೇ ಕಳೆದಿತ್ತು. ಆ ನೆನಪನ್ನು ಮತ್ತೆ ತಾಜಾ ಮಾಡವ ಸಮಯ ಮತ್ತೆ ಒದಗಿ ಬಂದಾಗ ಆ ಸಂಭ್ರಮ ಹೇಳತೀರದಾಗಿತ್ತು. ಹೊರಡುವ ಒಂದು ವಾರದ ಮುಂಚೆನೇ ಬ್ಯಾಗಿಗೆ ಬಟ್ಟೆ ಹಾಕುವುದು, ಅದು ಸರಿ ಇಲ್ಲ ಅಂತ ಮತ್ತೆ ತಗೆಯುವುದು. ಕಪಾಟಿನಲ್ಲಿದ್ದ ಬಟ್ಟೆಗಳೆಲ್ಲ ಮಂಚದ ತುಂಬಾ ಹರವಾಡಿ ಹೋಗಿದ್ದವು. ಬಾಲ್ಯದ ಊರನ್ನು ನೋಡುವ ತವಕ ನಾನು ಮದುವೆಯಾಗಿ ಮೊದಲ ಬಾರಿ ನನ್ನ ತವರುಮನೆಗೆ ಹೋಗುವಾಗಲೂ ಆಗಿರಲಿಲ್ಲ.
ಬೆಳಗ್ಗೆ ೫ಗಂಟೆಗೆ ಬಿಡಬೇಕು ಅಂತ ನನ್ನ ಪತಿರಾಯ ಹೇಳಿದಾಗ ನಾನು ರಾತ್ರಿಯೆಲ್ಲಾ ಮಲಗಲೇ ಇಲ್ಲ. ಬಿಡುವುದು ತಡವಾಗಬಾರದು ಎನ್ನುವ ಕಾರಣಕ್ಕೆ ರಾತ್ರಿಯೆಲ್ಲಾ ಎದ್ದೆದ್ದು ಗಡಿಯಾರವನ್ನು ನೋಡುತ್ತಿದ್ದೆ. ಹಾಸಿಗೆಯಲ್ಲಿ ಹೊರಳಾಡಿ ಹೊರಳಾಡಿ ಮಲಗಿ ಯಾವಾಗ ನಿದ್ದೆ ಹೋದೆನೋ ಗೊತ್ತಿಲ್ಲ ಬೆಳಗ್ಗೆ ಕೋಣೆಯ ಪಕ್ಕದ ಮರದಲ್ಲಿ ಕೋಗಿಲೆ ಕುಹೂ…ಕುಹೂ…ಎಂದು ಕೂಗಿದಾಗಲೇ ಎಚ್ಚರವಾಗಿದ್ದು, ಆಗ ಸಮಯ ೫.೪೫ ಆಗಿ ಹೋಗಿತ್ತು.
ನಮ್ಮ ಬೆಳ್ಳಿ, ಸುಗ್ಗಿಗೆ ನಾಯಿ ವಸತಿಗೆ ಕಳುಹಿಸಿ ಹೊರಡುವಷ್ಟರಲ್ಲಿ ೬.೦೦ ಗಂಟೆ ಸಮಯ ದಾಟಿಹೋಗಿತ್ತು. ತಡವಾಯಿತು ಎನ್ನುವ ಮುಂಗೋಪಕ್ಕೆ ನನ್ನ ಮಕ್ಕಳು ತುತ್ತಾದರು. ಹಾಗೂ ಹೀಗೂ ಮಾಡಿ ಕಾರ್ ನೈಸ್ ರಸ್ತೆಯತ್ತ ಸಾಗಿತು.
ಅಲ್ಲಿಂದ ಕನಸ್ಸಿಗೆ ರೆಕ್ಕೆ ಬಂದಂತೆ ಬಾಲ್ಯದ ನೆನಪುಗಳು ಒಂದೊಂದಾಗಿ ಗರಿ ಬಿಚ್ಚ ತೊಡಗಿದ್ದವು. ಆ ನೆನಪಿನಲ್ಲಿ ನಾನು ಮುಳುಗಿ ಹೋದೆ. ಪಕ್ಕದಲ್ಲಿ ಕೂತ ಪತಿರಾಯ ಹಾಗೂ ಹಿಂದೆ ಕೂತ ಮಕ್ಕಳ ಬಗ್ಗೆ ಪರಿವೆಯೇ ಇರಲಿಲ್ಲ.
ಯಾವಾಗ ಬೆಂಗಳೂರಿನಿಂದ ಹೈ ವೈ ಟೋಲ್ ನಲ್ಲಿ ಕಾರ್ ಬ್ರೇಕ್ ಹಾಕಿ ನಿಂತಿತೋ ಆವಾಗಲೇ ಮೈಮೇಲೆ ಎಚ್ಚರವಾಯಿತು. ಟೋಲ್ ಶುರುವಾದಂತೆ ದುಡ್ಡಿನ ಗಂಟಿನಿಂದ ಒಂದೊಂದೇ ನೋಟು ಜಾರತೊಡಗಿತು. ಇತ್ತಕಡೆ ನನ್ನ ಪತಿರಾಯ ಟೋಲ್ ನಲ್ಲಿ ಕೂತವರೆಲ್ಲ ಹಿಂದಿಯವರು ಎನ್ನುವ ಆಕ್ರೋಶ, ಭಾಷಾಭಿಮಾನ ಶುರುವಾಯಿತು. ಅವರು ಗೊಣಗುವುದನ್ನು ನೋಡಿ, ಇವರು ದಾಂಡೇಲಿ ಬಂದರೆ ಉಗ್ರ ಹೋರಾಟ ನಡೆಯಬಹುದೇನೋ ಅಂದುಕೊಂಡೆ . ಏಕೆಂದರೆ ದಾಂಡೇಲಿ ಒಂದು ರೀತಿ ಮಿನಿ ಬಾಂಬೆ ಇದ್ದಂತೆ, ಅಲ್ಲಿ ಕೆಲಸ ಮಾಡುವವರೆಲ್ಲ ಸಂಹನ ಭಾಷೆ ಹಿಂದಿಯಾಗಿರುವಾಗ ಅವರ ಮಧ್ಯೆ ನನ್ನ ಗಂಡನ ಹೋರಾಟ ನೆನೆದು ಜೋರಾಗಿ ನಗು ಬಂತು. ಆದರೆ ನನ್ನ ಕಣ್ಮುಂದೆ ನನ್ನೂರೇ ತುಂಬಿಕೊಂಡಿದ್ದರಿಂದ ಯಾವ ಗೋಜಿಗೂ ಹೋಗದೆ ಸುಮ್ನನಾದೆ.
ನ್ಯಾಷನಲ್ ಹೈವೇ ರಸ್ತೆಗಳು ವಿದೇಶ ರಸ್ತೆಗಳಿಗಿಂತ ನಾನೇನು ಕಮ್ಮಿ ಎಂದು ಬೀಗುತ್ತಿದ್ದವು. ಕಾರ್ 120km , 140km ವೇಗದಲ್ಲಿ ಸಾಗುತ್ತಿದ್ದರೂ ನನ್ನೂರು ನೋಡುವ ತವಕಕ್ಕೆ ಕಾರು ಮಂದಾಗತಿಯಲ್ಲಿ ಸಾಗುತ್ತಿದೆ ಅನ್ನಿಸುತ್ತಿತ್ತು.
ಎಫ್ ಎಂ ಕೋರ್… ಕೋರ್… ಎಂದು ಸಿಗ್ನೆಲ್ ತಪ್ಪಿದ್ದಾಗ ಪತಿರಾಯ ರೇ FM. ಹಾಡುಗಾರನಿಗೆ ಒಳ್ಳೆ ಕಂಠ ವರವೋ ಶಾಪವೋ ಗೊತ್ತಿಲ್ಲ, ಯಾರೇ ಹಾಡು ಕೇಳಿದರು ಬೇಸರವಿಲ್ಲದೆ ಯಾವ ಜಾಗದಲ್ಲಿರಲಿ, ಯಾವುದೇ ಮೂಡ್ ನಲ್ಲಿರಲಿ ಬೇರೆಯವರ ಸಂತೋಷಕ್ಕೆ ಇಷ್ಟವಿಲ್ಲದಿದ್ದರು ಹಾಡಬೇಕಾಗುತ್ತದೆ. ಕೊನೆಗೆ ಮನೆಯ ಮಂಗಳಾರತಿ ಸಮಯದಲ್ಲಿ ಪಕ್ಕಾ ಫಿಕ್ಸ್ ಗಾಯಕರಾಗಿ ಹೋಗುತ್ತಾರೆ. ಅದರಂತೆ ನನ್ನ ಪತಿರಾಯ ಎಲ್ಲ ಕಾರ್ಯಕ್ರಮದಲ್ಲೂ ಫಿಕ್ಸ್ ಗಾಯಕ.
ಹಾಡಿಗೆ ತಕ್ಕಂತೆ ಕಾರಿನ ವೇಗ ಚಲಿಸಿತು. ಚಿತ್ರದುರ್ಗ ಮಧ್ಯೆದಲ್ಲಿ ಲಘು ಉಪಹಾರಕ್ಕೆ ಒಂದು ಬ್ರೇಕ್ ತಗೆದುಕೊಂಡೆವು. ದಾವಣಗೆರೆ, ರಾಣೆಬೆನ್ನೂರು, ಹಾವೇರಿ ಸಾಗುವಾಗ ಬಸ್ ನಲ್ಲಿ ಕಂಡೆಕ್ಟರ್ ಒಂದೊಂದು ಊರು ಬಂದಾಗ ‘ಯಾರಿದ್ದೀರಿ ಇಳಿಯೋರು…?; ಕೂಗು ಹಾಕುತ್ತಿದ್ದ ರೀತಿ ನೆನಪಿಗೆ ಬಂತು. ದಾಂಡೇಲಿಯಿಂದ ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸುವ ದಿನಗಳು ನೆನಪಿಗೆ ಬಂದವು. ಕಾರ್ ನಲ್ಲಿ ಓಡಾಟ ಹೆಚ್ಚಾದ ಮೇಲೆ ಬಸ್ ಪ್ರಯಾಣವು ನಿಂತೇ ಹೋಯಿತು.
***
ಕಾರು ಧಾರವಾಡ ಪ್ರವೇಶಿಸುತ್ತಿದಂತೆ ನಮ್ಮ ಉತ್ತರಕರ್ನಾಟಕದ ಜವಾರಿ ಭಾಷೆ ‘ಆಹಾ… ‘ಕಿವಿಗೆ ಆನಂದ ನೀಡಿತು. “ಶರ ಪಂಜರ” ದ ಕಲ್ಪನಾ ತರ ‘ಇಲ್ಲೇ… ನಾನು ಕಳ್ಕೊಂಡೆ…’ ಎನ್ನುವ ಹುಡುಕಾಟ ಅಲ್ಲಿಂದಲೇ ಶುರುವಾಯಿತು.
ಫೋಟೋ ಕೃಪೆ : tribuneindia
ರಸ್ತೆಗಳ ಮಧ್ಯೆದಲ್ಲಿ ಹಂದಿಗಳು ಸ್ಪೀಡ್ ಬ್ರೇಕರ್ ನಂತೆ ಅಡ್ಡದಿಡ್ಡಿ ಬರುತ್ತಿದ್ದವು. ಅದನ್ನು ನೋಡಿ ನನ್ನ ಮಗ ಅಕ್ಕರೆ, ‘ಅಮ್ಮ….ನಾನು pig, piglet ನೋಡಿದೆ’ ಎಂದು ಚಪ್ಪಾಳೆ ಹಾಕುತ್ತಿದ್ದ. ಅವನಿಗೆ ಹಂದಿ ನೋಡಿದ ಸಂತೋಷ ಹೇಗಿತ್ತೆಂದರೆ zoo ನಲ್ಲಿ ಹುಲಿ, ಸಿಂಹ ನೋಡಿದಾಗಲೂ ಆಗಿರಲಿಲ್ಲ. ಹಂದಿ zoo ನಲ್ಲಿಯಾಗಲಿ, ನೈಜ್ಯವಾಗಿಯಾಗಲಿ ಎಲ್ಲಿಯೂ ಅವನು ನೋಡದ ಅಪರೂಪದ ಪ್ರಾಣಿಯಾಗಿತ್ತು. ಆಗಾಗಿ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಹಂದಿ, ನನ್ನ ಮತ್ತೊಂದು ಬಾಲ್ಯದ ನೆನಪನ್ನು ಮಾಡಿಸಿತು ಅದೇನೆಂದರೆ ಅಜ್ಜಿ ಮನೆಗೆ ಹೋದಾಗ ಬಹಿರ್ದೆಸೆಗೆಂದು ಹೊಲದ ಕಡೆ, ಕಂಟಿಯ ಕಡೆಗೆ ಹೋದಾಗ ಇವೆ ಹಂದಿಗಳು ತಾ ಮುಂದು… ನಾ ಮುಂದು… ಎಂದು ಹೊಡೆದಾಡುತ್ತಿದ್ದದ್ದು ನೆನೆಪಿಗೆ ಬಂದು ನಗತೊಡಗಿದೆ, ಅದನ್ನು ನೋಡಿ…ಗಂಡ, ಮಕ್ಕಳು ಪಕ್ಕಾ, ಶರ ಪಂಜರದ ಕಲ್ಪನಾ ಮೈಮೇಲೆ ಬಂದಿದ್ದಾಳೆ ಎಂದು ಹೆದರಿ ಮಾತನಾಡಿಸಲಿಲ್ಲ.
ಧಾರವಾಡ ತಲುಪಿದಾಗ ಮಧ್ಯಾಹ್ನ ಸರಿಯಾಗಿ ಒಂದು ಗಂಟೆ. ನನಗೆ ಖಾನಾವಳಿಯಲ್ಲಿಯೇ ಊಟ ಮಾಡಬೇಕೆನ್ನುವ ಹುಚ್ಚು ಬಯಕೆ. ನನ್ನ ಗಂಡ, ಮಕ್ಕಳಿಗೆ ರೊಟ್ಟಿ ಎಂದರೆ ಆಗಿಬಾರದು, ಆದರೆ ನನ್ನೂರಿಗೆ ಹೊರಟ್ಟಿದ್ದರಿಂದ ನನ್ನ ಹಠದ ಮುಂದೆ ಅವರದೇನು ನಡೆಯಲಿಲ್ಲ. ಆಗ ನಮ್ಮ ಎಂಟ್ರಿಯಾಗಿದ್ದು ‘ಬಸಪ್ಪ ಖಾನಾವಳಿ’ಯಲ್ಲಿ. ವೆಟರ್ ಬಂದು ‘ಅಕ್ಕಾರ….ನಿನಗೇನೂ ಕೊಡ್ಲಿ? ‘ಅಣ್ಣರ ಮುಖ ನೋಡಿ, ಇದು ಉತ್ತರಕರ್ನಾಟಕ ಮುಖ ಇದ್ದಂಗೆ ಇಲ್ಲ ಅಂದು ‘ಅಣ್ಣರಿಗೆ ಫಸ್ಟ್ ಕ್ಲಾಸ್ ಲಸ್ಸಿ ಐತಿ…’ ‘ಅಪ್ಪಿ, ನಿನಗೆ ಏನು ತರ್ಲಿ….’ ಅಂತ ಬಾಯಿ ತುಂಬಾ ಮಾತನಾಡಿದ. ಅವರ ಮಾತಿಗೆ ಊಟ ಇನ್ನಷ್ಟು ಮಾಡಬೇಕು ಎಂದೆನ್ನಿಸಿತು. ಹಿಟ್ಟಿನ ಪಲ್ಯ, ಕಾಳಿನ ಪಲ್ಯ, ಧಾರವಾಡದ ಸ್ಪೆಷಲ್ ಸೌತೆಕಾಯಿ, ಕ್ಯಾರೆಟ್ ಪೀಸ್, ಎರಡು ರೊಟ್ಟಿ ತಟ್ಟೆಯಲ್ಲಿ ನೋಡಿದಾಗ ಬರೆಗೆಟ್ಟ ಬಾಯಿಗೆ ಸ್ವರ್ಗ ಸುಖ ಸಿಕ್ಕಂತಾಯಿತು. ಆದರೆ ಇಷ್ಟವಿಲ್ಲದ ಹೋಟೆಲ್ ಗೆ ಬಲವಂತದಿಂದ ಗಂಡ, ಮಕ್ಕಳು ಕರೆದೊಯ್ದಿದ್ದಕ್ಕೋ ಅವರ ಕೆಂಗಣ್ಣಿನಿಂದ ಊಟ ನೆತ್ತಿಗೇರಿತು. ಪಕ್ಕಕ್ಕಿದ್ದ ಮಜ್ಜಿಗೆ ಕುಡಿದು ಸುಧಾರಿಸಿಕೊಂಡು ನನ್ನ ಊಟ ಮುಗಿಯೋವವರೆಗೂ ಯಾರ ಮುಖ ನೋಡದೆ ರೊಟ್ಟಿ ಊಟವನ್ನು ಆಸ್ವಾದಿಸಿದೆ.
ಊಟ ಮುಗಿಸಿ ಹೊರಟಾಗ ೨.೩೦ ಯಾಗಿತ್ತು. ಕಾರು ಮುಂದೆ ಸಾಗುತ್ತಾ ಕರ್ನಾಟಕ ಕಾಲೇಜ್ ಬಳಿ ಬಂದಾಗ ಅಲ್ಲಿಯೂ ನನ್ನ ಒಂದಷ್ಟು ನೆನಪುಗಳಿದ್ದವು.
ಫೋಟೋ ಕೃಪೆ : NDTV
ನಾನು ಬಿಎ ಮೊದಲ ವರ್ಷದಲ್ಲಿದ್ದಾಗ ಖ್ಯಾತ ಗಾಯಕ ರೋಷನ್ ಬಿಎ ಅಂತಿಮ ವರ್ಷದಲ್ಲಿದ್ದ. ರೋಷನ್ ಹುಟ್ಟು ಕುರುಡನಾದರೂ ಓದುವುದರಲ್ಲಿ, ಹಾಡುವುದರಲ್ಲಿ ಮುಂದೆ. ಧಾರವಾಡದಲ್ಲಿ ದೊಡ್ಡ ಸೆಲೆಬ್ರೆಟಿ ಅವನು. ಧಾರವಾಡದ ಯಾವ ಮೂಲೆಯಲ್ಲಿ ಕಾರ್ಯಕ್ರಮವಿರಲಿ ರೋಷನ್ ಹಾಡು ಇರುತ್ತಿತ್ತು. ಅವನ ಧ್ವನಿಯಲ್ಲಿ ನಾನು ಕೇಳಿದ ಮೊದಲ ಹಾಡು
‘ಪೆಹಲಾ…ಪೆಹಲಾ..ಪ್ಯಾರಾ ಹೈ…’
ಸಖತ್ ಆಗಿ ಹಾಡುತ್ತಿದ್ದ.
ಫೋಟೋ ಕೃಪೆ : youtube
ನನ್ನ ಕ್ಲಾಸ್ ಮುಗಿಯುತ್ತಿದ್ದಂತೆ ಕಾರಿಡಾರ್ ನಲ್ಲಿ ರೋಷನ್ ಗಾಗಿ ಕಾಯುತ್ತಾ ನಿಲ್ಲುತ್ತಿದ್ದೆ. ಅವನು ನನ್ನ ಮೊದಲ ಕ್ರಶ್ ಅಂತಲೇ ಹೇಳಬಹುದು. ರೋಷನ್ ಹಾಡಿಗೆ ದೊಡ್ಡ fan ನಾನಾಗಿದ್ದೆ. ರೋಷನ್ ನ ತಮ್ಮ ಋತ್ವಿಕ್ ಕೂಡಾ ಒಳ್ಳೆ ಸಂಗೀತಗಾರ, ದುರಾದೃಷ್ಟವಶಾತ್ ಅವನು ಕೂಡಾ ಹುಟ್ಟು ಕುರುಡ. ಆದರೆ ಅವರ ಮನೆಯಲ್ಲಿ ಸ್ವರಸ್ವತಿ ಕೃಪೆಗೇನು ಕೊರತೆಯಿರಲಿಲ್ಲ. ಅವರ ಮನೆಯೇ ಸಂಗೀತ ಲೋಕವಾಗಿತ್ತು. ನನಗೆ ಅವರ ಹಾಡು ಕೇಳಬೇಕು ಎಂದೆನ್ನಿಸಿದಾಗಲೆಲ್ಲ ಅವರ ಮನೆಗೆ ನುಗ್ಗುತ್ತಿದ್ದೆ. ರೋಷನ್ ಅಪ್ಪ, ಅಮ್ಮ, ತಮ್ಮನ ಜೊತೆ ಹರಟುತ್ತಿದ್ದೆ. ಋತ್ವಿಕ್ ‘ದೀದಿ…’ ಬಂದಳೆಂದು ಖುಷಿಯಿಂದ ಹಾಡುತ್ತಾ ನನ್ನ ಪಕ್ಕ ಬಂದು ಕೂರುತ್ತಿದ್ದ. ನಾನು ಯಾವುದೇ ಹಾಡು ಕೇಳಿದರು ಇಲ್ಲವೆನ್ನದೆ ಸಂತೋಷದಿಂದ ಹಾಡುತ್ತಿದ್ದ ಪ್ರೀತಿಯ ಹೃದಯಗಳವು.
ಆದರೆ ಸ್ವಲ್ಪ ವರ್ಷದ ಹಿಂದೆ ರೋಷನ್ ನಮ್ಮನ್ನೆಲ್ಲ ಬಿಟ್ಟು ಹೋದ, ಆದರೆ ನಾನು ಅವನೊಂದಿಗೆ ಕಳೆದ ಸವಿನೆನಪುಗಳು ಸದಾ ಹಸಿರಾಗಿವೆ. ಇತ್ತ ಋತ್ವಿಕ್ ಬೆಂಗಳೂರಿನಲ್ಲಿ ನೆಲೆಸಿದ್ದು, ಡಿಪಿಎಸ್ ಪಬ್ಲಿಕ್ ಶಾಲೆಯಲ್ಲಿ ಸಂಗೀತ ಗುರುವಾಗಿ ತನ್ನ ಜೀವನವನ್ನೆಲ್ಲಾ ಸಂಗೀತಕ್ಕೆ ಮುಡುಪಾಗಿಟ್ಟಿದ್ದಾನೆ.
(ಮುಂದೊರೆಯುತ್ತದೆ) …
- ಶಾಲಿನಿ ಹೂಲಿ ಪ್ರದೀಪ್