ಮನೆಯವರಿಗೆ ಅಮಾವಾಸ್ಯೆ ದಿನ ಭೂತ, ಪ್ರೇತಗಳು ಅಡ್ಡ ಬರಬಹುದು ಎಂಬ ಭಯವಾದರೆ, ನನಗೆ ಈ ಕಾಡ ದಾರಿಯಲಿ ಆನೆ, ಹುಲಿ, ಚಿರತೆ, ಕಾಡುಕೋಣಗಳಂತಹ ಪ್ರಾಣಿಗಳು ಎದುರಾದರೆ ಎಂಬ ಚಿಂತೆ – ದಿಗಂತ್ ಬಿಂಬೈಲ್ ಕೊಪ್ಪ, ಭೂತ, ಪ್ರೇತಗಳ ಬಗ್ಗೆ ಒಂದು ಚಿಂತನ, ಮುಂದೆ ಓದಿ…
ಅಮಾವಾಸ್ಯೆಯ ಕಗ್ಗತ್ತಲ ಸರಿರಾತ್ರಿ ಹೆಗ್ಗಾಡ ನಡುವಿನ ಹೆದ್ದಾರಿಯಲ್ಲಿ ಒಬ್ಬಂಟಿಯಾಗಿ ಪಯಣಿಸುವಾಗ, ಹಿಂದಿನಿಂದ ಸಣ್ಣಗೆ ಜ್ಹಿಲ್ ಜ್ಹಿಲ್ ಎನ್ನುವ ಗೆಜ್ಜೆ ಶಬ್ದ ಕೇಳಿದಂತಾಗಿ, ಬುಲೆಟ್ ತಿರುಗಿಸಿ ನಿಂತು ನೋಡಿದೆ. ಕತ್ಲೆ ಕಾನು ಎನ್ನುವ ಬೋರ್ಡು ಬುಲೆಟ್ಟಿನ ಬೆಳಕಿಗೆ ಹೊಳೆಯುತ್ತಿತ್ತು. ದೆವ್ವವೇನಾದರೂ ಇರಬಹುದೇನೋ ಎಂದು ಅತ್ತ ಇತ್ತ ನೋಟ ಹೊರಳಿಸಿದೆ!.
ಕೊರೊನ ಲಾಕ್ದೌನ್ ಪ್ರಾರಂಭದ ದಿನವದು. ರಾತ್ರಿ ಎಂಟು ಗಂಟೆಗೆ ಭಾಷಣ ಕೇಳಿ ಮಂಡೆ ಕೆಟ್ಟು ಹೋಗಿತ್ತು. ಕೆಲಸದ ಮೇಲೆ ದೂರದ ಕಗ್ಗಾಡ ನಡುವಿನ ದಾಂಡೇಲಿಯಲ್ಲಿದ್ದ ನಾನು, ಸಂಪೂರ್ಣ ಲಾಕ್ದೌನ್ ಖಚಿತವಾಗುತ್ತಿದ್ದಂತೆ ಕೆಲಸದವರನ್ನೆಲ್ಲ ಊರಿಗೆ ತೆರಳಲು ವ್ಯವಸ್ಥೆ ಮಾಡಿ, ಬೈಕ್ ಹತ್ತುವಾಗ ರಾತ್ರಿ ಹತ್ತಾಗಿತ್ತು. ಅಮಾವಾಸ್ಯೆಯ ರಾತ್ರಿ ದಟ್ಟ ಕಾಡಿನ ಘಾಟಿ ರಸ್ತೆಗಳೇ ಹೆಚ್ಚಾಗಿ ಸಿಗುವ ದಾರಿಯಲ್ಲಿ ಬರೋಬ್ಬರಿ ಇನ್ನೂರೈವತ್ತು ಮುನ್ನೂರು ಕಿಲೋಮೀಟರ್ ಕ್ರಮಿಸಬೇಕು ಅದೂ ಬೆಳಗಾಗುವುದರೊಳಗೆ! ತಡವಾದರೆ ಪೊಲೀಸರ ಲಾಟಿಗೆ ಬೆನ್ನು ಕೊಟ್ಟು ನಿಲ್ಲಬೇಕು! ಪರಿಚಯದ ಪೋಲಿಸಿನವರಿಗೆಲ್ಲ ಫೋನ್ ಮಾಡಿಕೊಂಡು, ನಾನೋ ಹೊರಟೆ ಬಿಟ್ಟಿದ್ದೆ.
ಮನೆಯವರಿಗೆ ಅಮಾವಾಸ್ಯೆ ಕೆಟ್ಟ ದಿನ ಭೂತ ಪ್ರೇತ ಏನೇನು ಅಡ್ಡ ಬರುತ್ತಾವೋ ಎಂಬ ಭಯವಾದರೆ, ನನಗೆ ಈ ಕಾಡ ದಾರಿಯಲಿ ಆನೆ, ಹುಲಿ, ಚಿರತೆ, ಕಾಡುಕೋಣಗಳಂತಹ ಪ್ರಾಣಿಗಳು ಎದುರಾದರೆ ಎಂಬ ಚಿಂತೆಯಿತ್ತಷ್ಟೆ. ನನಗೂ ಭೂತ ಪ್ರೇತಗಳ ಕುರಿತಾಗಿ ಯೋಚನೆ ಬಾರದೇ ಇರಲಿಲ್ಲ! ಗೇರುಸೊಪ್ಪ ಘಾಟಿ ಮಾರ್ಗವಾಗಿ ಜೋಗ ಬರುವ ದಾರಿಯ ತಿರುವುಗಳಲ್ಲಿ ಅಪಘಾತಗಳಾಗಿ ಕಣ್ಣೆದುರೇ ಸತ್ತದ್ದನ್ನ ನೋಡಿದ ಸನ್ನಿವೇಶ ಕಣ್ಣಿಗೆ ಕಟ್ಟಿದಂತಿದ್ದವು. ಅಮಾವಾಸ್ಯೆ ರಾತ್ರಿ, ಒಬ್ಬಂಟಿ, ಕಾಡ ನಡುವಿನ ದಾರಿ, ಸತ್ತವರ ನೆನಪು! ಹೆದರಿ ಕಂಬಳಿ ಹೊದ್ದು ಇದ್ದಲ್ಲೇ ಮಲಗಲು ಇಷ್ಟು ಸಾಕಿತ್ತು!
ದೆವ್ವ ಭೂತಗಳ ಕುರಿತಾಗಿ ಅದೇನೇ ಸತ್ಯ ಸುಳ್ಳು, ಪೂರ್ವಾಗ್ರಹಗಳಿದ್ದರೂ, ಕೆಲವೊಬ್ಬರ ಚಿಂತನೆಗಳು ನಮ್ಮ ದಾರಿಯ ಗುರುವಾಗುತ್ತವೆ. ನನಗೆ ಹೆದರಿಕೆ ಎನ್ನುವ ಪದವೇ ಒಂದು ರೀತಿಯಲ್ಲಿ ಹಿಡಿಸದ ಪದ. ಅರ್ಧ ರಾತ್ರಿ ಒಬ್ಬನೇ ಎಲ್ಲೆಲ್ಲೋ ಗುಡ್ಡಗಾಡು ಅಲೆದವನಿಗೆ, ಬಯಲಲಿ ಬಿದ್ದವನಿಗೆ ರಾತ್ರಿ ಸುತ್ತಾಟ ಹೊಸತಾಗಿರಲಿಲ್ಲ. ಆದರೆ “ಅಮಾವಾಸ್ಯೆ ಪುಟ್ಟಾ.. ಅಮಾಸೆ ನೋಡು…” ಎಂದು ಪದೇ ಪದೇ ತಲೆ ತುಂಬಿದ್ದರಿಂದ ಇನ್ನೊಂದಿಷ್ಟು ಎದೆ ಗಟ್ಟಿ ಮಾಡಿಕೊಳ್ಳಬೇಕಿತ್ತು. ಆಗಲೇ ನೆನಪಾಗಿದ್ದು ಕುವೆಂಪುರವರ ನೆನಪಿನ ದೋಣಿ…
ಕುವೆಂಪುರವರ ತಾಯಿ ತೀರಿಕೊಂಡಾಗ ಕುವೆಂಪುರವರು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಊರಿನಿಂದ ಮೈಸೂರಿಗೆ ಹಿಂದಿರುಗಿ ವಾರ ಕಳೆಯುವುದರಲ್ಲಿ ತಾಯಿ ತೀರಿಕೊಂಡಿದ್ದರಿಂದ, ಸಾವಿನ ಕಾರ್ಯಗಳಿಗೆ ಬರಲಾಗಿರಲಿಲ್ಲ. ತಾಯಿಯ ಸಾವಿನ ವಿಷಯ ಮುಟ್ಟಿದಾಗ ಜೊತೆಗಿದ್ದ ಸ್ನೇಹಿತರೊಂದಿಗೆ ದುಃಖವನ್ನು ತೋರಿಸಿಕೊಂಡಿರಲಿಲ್ಲ. “ನನ್ನ ತಾಯಿ ಸತ್ತಿಲ್ಲವೆಂದೇ ನನ್ನ ದೃಢ ನಂಬಿಕೆಯಾಗಿತ್ತು. ಅವರ ದೇಹ ಭಸ್ಮೀಭೂತವಾಗಿದ್ದರೂ ಅವರಾತ್ಮ ಅಮೃತವಾಗಿ ನನ್ನ ತಂದೆಯ ಆತ್ಮದೊಡನೆ ಇರುತ್ತ ಮಕ್ಕಳ ಕ್ಷೇಮಕ್ಕಾಗಿ ಆ ಲೋಕದಿಂದ ಮಾಡಬಹುದಾದುದನ್ನು ಮಾಡುತ್ತಿರುತ್ತದೆ” ಎಂಬುದು ಅವರ ಅಭಿಪ್ರಾಯವಾಗಿತ್ತು. ಕೂಡು ಕುಟುಂಬದಲ್ಲಿ ಸಾವಿನ ಕಾರ್ಯದ ಜವಾಬ್ದಾರಿ ಹೊರುವವರು ಇದ್ದುದರಿಂದ ಕುವೆಂಪು ಬರುವ ಅನಿವಾರ್ಯತೆ ಇಲ್ಲದಿದ್ದರೂ, ಕುವೆಂಪುರವರ ಆ ಕ್ಷಣದ ನಿರ್ಧಾರದ ಕುರಿತಾಗಿ ನನಗಷ್ಟು ಸಮಾಧಾನವಿಲ್ಲ!
ಆದರೆ, ಹನ್ನೊಂದನೆಯ ದಿನದ ಕಟ್ಟಳೆಗಾದರೂ ಹಿರಿಯ ಒಬ್ಬನೆ ಗಂಡುಮಗ ಬರಬೇಕೆಂಬ ಒತ್ತಾಯವಿದ್ದರೂ, “ನನಗೆ ತಿಥಿಗಿತಿ ಮೊದಲಾದವುಗಳಲ್ಲಿ ನಂಬಿಕೆ ಇಲ್ಲ. ಗತಿಸಿದ ಜೀವಾತ್ಮಕ್ಕೆ ನಾವು ಕೊಡುವ ತಿಲೋದಕ ತಲುಪುವುದೂ ಇಲ್ಲ. ಅದರಿಂದ ಆ ಜೀವಕ್ಕೆ ಪ್ರಯೋಜನವೂ ಇಲ್ಲ. ಅದರ ಬದಲು ಆ ಜೀವದ ಪ್ರಶಾಂತ ಪ್ರಯಾಣಕ್ಕೂ ಸದ್ಗತಿಗೂ ಭಗವಂತನನ್ನು ಭಕ್ತಿಶ್ರದ್ದೆಗಳಿಂದ ಪ್ರಾರ್ಥಿಸುವುದೊಂದೇ ಬುದ್ದಿ ಸಮ್ಮತ ಮಾರ್ಗವೆಂಬುದು ನನ್ನದು” ಎನ್ನುವ ನಿಲುವಿನ ಕುವೆಂಪುರವರನ್ನ ಅವರ ಸ್ನೇಹಿತರು ಊರಿಗೆ ತೆರಳಲು ಒಪ್ಪಿಸಿದರು.
ಕರ್ಮಕ್ರಿಯೆಗಳಲ್ಲಿ ನಂಬಿಕೆಯಿರದ ಕುವೆಂಪುರವರು ಸುಡುಗಾಡಿನಲ್ಲಿ ಹಿರಿಯರು ಹಾಲು ಹೊಯ್ಯುವುದು ಮತ್ತು ಏನೇನೋ ಮಾಡುತ್ತಿದ್ದರೆ, ಇವರು ಅದೊಂದನ್ನು ಗಮನಿಸದೆ ತುಂಬ ಅಂತರ್ಮುಖಿಯಾಗಿ ಸಂಸ್ಕ್ರುತದ ಓಂಕಾರವನ್ನು ಗರಿಕೆಯಿಲ್ಲದಿದ್ದ ಸುಟ್ಟ ನೆಲದಲಿ ಬರೆದು ಬಾಯಿಗೆ ಬರುತ್ತಿದ್ದ ಉಪನಿಷತ್ತಿನ ಮಂತ್ರಗಳನ್ನೂ, ಭಗವದ್ಗೀತೆಯ ಅಮೃತತ್ವ ಪ್ರತಿಪಾದನೆಯ ಶ್ಲೋಕಗಳನ್ನು ಹೇಳಿಕೊಂಡು ತಾಯಿಯನ್ನು ನೆನೆದು ನಮಸ್ಕರಿಸುತ್ತಿದ್ದರು.
ಫೋಟೋ ಕೃಪೆ : latestgkgs
ಅಂದಿನ ಹಲವು ಕರ್ಮ ವಿಧಾನಗಳು ಅವರಿಗೆ ತಮಾಷೆ ಎನಿಸಿದರೂ, ಆ ದಿನ ರಾತ್ರಿ ಮೃತರ ಹೆಸರಿನಲ್ಲಿ ಕೊಲೆಗಿಡುವ ಧೂಪಹಾಕುವ ಸಂದರ್ಭ ಕುವೆಂಪುರವರಿಗೆ ಒಂದಿಷ್ಟೂ ಹಿಡಿಸಲಿಲ್ಲ. ಹೆಂಡ ಮುಂತಾದವುಗಳನ್ನಿಟ್ಟ ಎಡೆಗೆ ಪೂಜೆ ಸಲ್ಲಿಸಲು ಸಾಧ್ಯವಿಲ್ಲ ಎಂದುಬಿಟ್ಟರು. “ನನ್ನ ತಾಯಿ ಪ್ರೇತವಾಗಿ ಇತರ ಪ್ರೇತಗಳೊಡನೆ ಇಲ್ಲಿಗೆ ಬಂದು ಇವುಗಳನ್ನ ಸ್ವೀಕರಿಸುತ್ತಾರೆ ಎಂಬುದಂತೂ ನನಗೆ ಅಸಹ್ಯವಾಗುತ್ತದೆ. ಉತ್ತಮ ಲೋಕಗಳಿಗೆ ಹೋಗಿರುವ ಅವರನ್ನು ಆಹ್ವಾನಿಸಿ ಭೂತಪ್ರೇತಗಳೊಡನೆ ಸೇರಿಸುವುದು ಅವರಿಗೆ ನಾವೆಸಗುವ ಅಪಚಾರವಾಗುತ್ತದೆ” ಕುವೆಂಪುರವರ ಯೋಚನೆ ಹೀಗಿದ್ದರಿಂದ, ಅಲ್ಲಿದ್ದ ಹಿರಿಯರು ಎಷ್ಟೇ ಒತ್ತಾಯಿಸಿದರೂ ಆತ್ಮಸಾಕ್ಷಿಗೆ ವ್ಯತಿರಿಕ್ತವಾಗಿ ನಡೆಯಲು ನಿರಾಕರಿಸಿ ಕಡೆಗೆ, ಎಡೆಯಲ್ಲಿದ್ದ ಹೆಂಡ ಮುಂತಾದವುಗಳನ್ನು ತೆಗೆದು ಬಿಡುವಂತೆ ಸೂಚಿಸಿ, ಒಂದು ಭಗವದ್ಗೀತೆಯ ಪ್ರತಿಯನ್ನು, ಸ್ವಾಮಿ ವಿವೇಕಾನಂದರ ಪಟ, ರಾಮಕೃಷ್ಣ ಪರಮಹಂಸರ ಪಟವನ್ನು ಮಣೆಯ ಮೇಲಿಟ್ಟು ಹೂ ಮುಡಿಸಿ, ಮಂತ್ರ ಶ್ಲೋಕ ಮನದಲ್ಲಿಯೇ ಹೇಳುತ್ತಾ ತಾಯಿಗೆ ಶಾಂತಿ ಕೋರಿ ಪ್ರಾರ್ಥಿಸಿ ಧೂಪ ಹಾಕಿದರು.
ಪೂಜಿಸುವುದಾದರೆ ದೇವರನ್ನ ಪೂಜಿಸಿ ದೆವ್ವಗಳನ್ನಲ್ಲ ಎನ್ನುವ ಕುವೆಂಪುರವರ ಮಾತು ನನ್ನ ಪಾಲಿಗೆ ಇನ್ನಷ್ಟು ಧೈರ್ಯ ತುರುಕಿತ್ತು. ಸತ್ತ ತಕ್ಷಣ ಜಕಣಿ ಕಾಟ ಭೂತ ಪ್ರೇತ ಎಂದು ದರೋಡೆ ಮಾಡಿ ಭಯೋತ್ಪಾದನೆ ಮಾಡುವವರನ್ನ ದೂರವಿಟ್ಟಿದ್ದರಿಂದ ಅಮಾವಾಸ್ಯೆ ರಾತ್ರಿ ಹೊರಟು ಬಂದಿದ್ದೆ. ಆದರೆ ಜ್ಹಿಲ್… ಜ್ಹಿಲ್… ಶಬ್ದ ಕೇಳಿ ತಿರುಗಿ ನಿಂತೆನಾದರೂ, ಬುಲೆಟ್ಟಿನ ಬದಿಯಲ್ಲಿ ಸೆಕ್ಕಿಸಿದ ಬ್ಯಾಗು ಆಗಷ್ಟೇ ಬೆನ್ನಿಗೇರಿಸಿಕೊಂಡಿದ್ದರಿಂದ ಬ್ಯಾಗಿನ ಜಿಪ್ನಲ್ಲಿದ್ದ ಕೀಬಂಚಿನ ಸದ್ದಷ್ಟೇ ಆಗಿತ್ತದು.
ಯಾವ ದೆವ್ವವೂ ಕಾಣದ ಬೇಸರವೊಂದು ಮೂಡಿದರೂ, ‘ಕತ್ತಲೆ ಕಾನು ಎನ್ನುವ ಪ್ರದೇಶ ಬಹಳ ಭವ್ಯವಾದದ್ದೆಂದೂ, ಕತ್ತಲೆ ಕಾನ ಅರಣ್ಯ ಪ್ರದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಅಲ್ಲಿ ರಾಮಪತ್ರೆ, ಕಾಡು ಜಾಯಿಕಾಯಿಯಂತಹ ವಿರಳ ಅತ್ಯಮೂಲ್ಯ ಸಸ್ಯ ಸಂಕುಲವಿರುವ, ಶರಾವತಿ ಕಣಿವೆಯ ಜೀವ ವೈವಿಧ್ಯತೆಯ ತಾಣದಲ್ಲಿ ಕ್ಷಣಕಾಲ ನಿತ್ತಿದ್ದೇ ಒಂದು ಸಮಾಧಾನವಾಗಿ, ಪೋಟೋವೊಂದನ್ನ ಕ್ಲಿಕ್ಕಿಸಿಕೊಂಡು ಹೊರಟೆ. ಬುಲೆಟ್ ಶಬ್ದ ಕಗ್ಗಾಡ ನಡುವಿನ ತಿರುವಲಿ ಮೊಳಗುತ್ತಿತ್ತು…
- ದಿಗಂತ್ ಬಿಂಬೈಲ್ (ಲೇಖಕ, ಕತೆಗಾರ), ಕೊಪ್ಪ