ದಂಡಕಾರಣ್ಯದಲ್ಲಿ ಹೆಜ್ಜೆ ಗುರುತುಗಳು (ಭಾಗ-೫)



ಬಾಲ್ಯವೆಂದಾಗ ಒಂದೊಂದು ಊರಲ್ಲೂ ಒಂದೊಂದು ನೆನಪುಗಳು ಅಡಗಿವೆ, ಬರೆಯುತ್ತಾ ಹೋದಂತೆ ಮತ್ತೆ ನನ್ನ ಬಾಲ್ಯಕ್ಕೆ ಮರಳಿದ ಅನುಭವಕೊಡುತ್ತಿದೆ. ತಪ್ಪದೆ ಓದಿ ‘ದಂಡಕಾರಣ್ಯದಲ್ಲಿ ಹೆಜ್ಜೆ ಗುರುತುಗಳು’…

ಹಳಿಯಾಳದಿಂದ ದಾಂಡೇಲಿಯತ್ತ ಪ್ರಯಾಣ…

ಹಳಿಯಾಳದಿಂದ ದಾಂಡೇಲಿ ಕೇವಲ ಅರ್ಧಗಂಟೆ ಪ್ರಯಾಣವಿತ್ತು. ರಸ್ತೆಯಲ್ಲಿ ಯಾವುದೇ ವಾಹನಗಳಗಳ ಕಿರಿ ಕಿರಿ ಇರಲಿಲ್ಲ. ಒಂಟಿ ರಸ್ತೆಯಲ್ಲಿ ಆನೆ ನಡೆದದ್ದೇ ದಾರಿಯಂತೆ ನಮ್ಮ ಕಾರ್ ನುಗ್ಗುತ್ತಿತ್ತು. ಸುತ್ತಲೂ ಸಾಗವಾನಿ ಮರಗಳು, ಬಾಂಬು ಮರಗಳು,  ಹಸಿರು ಎಲೆಗಳು, ತಂಪಾದ ಗಾಳಿಗೆ ಮಕ್ಕಳು ಒಳ್ಳೆ ನಿದ್ರೆ ಹೋದರು.  ನನಗೂ ಕೂಡಾ ನಿದ್ದೆ ಒಕ್ಕರಿಸಿ ಬರುತ್ತಿತ್ತು. ಆದರೆ ‘ಡ್ರೈವರ್ ಪಕ್ಕದಲ್ಲಿ ಮಲಗುವಂತಿಲ್ಲ’ ಎಂದು ಬೆಂಗಳೂರು ಬಿಡುವ ಮೊದಲೇ ನನ್ನ ಯಜಮಾನಪ್ಪ ಎಚ್ಚರಿಸಿದ್ದ. ಹಾಗಾಗಿ ಕಣ್ಣನ್ನು ಹೆಡ್ ಲೈಟ್ ನಂತೆ ಬಲವಂತವಾಗಿಯೇ ತೆರೆದೇ ಕೂತಿದ್ದೆ.

ಇದರ ಮಧ್ಯೆ ರೇಡಿಯೋ ಸಿಗ್ನೆಲ್ ಸಿಗದೇ ಕುಯ್ಯೋ ….ಕುಯ್ಯೋ…ಎಂದು ಒದ್ದಾಡುತ್ತಿತ್ತು, ಅದಕ್ಕೆ ಪರಿಹಾರವಂತೆ ನನ್ನ ಯಜಮಾನಪ್ಪನ ಲೈವ್ ಬ್ಯಾಂಡ್ ಶೋ ಶುರುವಾಯಿತು.

ದಾಂಡೇಲಿ ಬರೋವರೆಗೂ ಗಾನ ಬಜಾನ ಜೋರಾಗೆ ನಡೆಯಿತು, ಪಕ್ಕಕ್ಕೆ ಕೂತ ತಪ್ಪಿಗೆ ಹಾಡು ಕೇಳುವುದು ನನಗೆ ಅನಿವಾರ್ಯವಾಗಿತ್ತು. ಒಮ್ಮೊಮ್ಮೆ ಹಾಡುಗಾರರ ಪಕ್ಕ ಕೂರುವುದು ಬಲು ಹಿಂಸೆಯ ಕೆಲಸ ಅನ್ನಿಸುತ್ತದೆ. ಕೇಳುಗರ ಮೂಡ್ ಇರಲಿ ಬಿಡಲಿ, ಅವರ ಗಾಯನ non stop. ಅವರು ಸುಮ್ಮನೆ ಅವರ ಪಾಡಿಗೆ ಹಾಡುತ್ತಾ ಹೋದರೇ ಪರವಾಗಿಲ್ಲ ಹೇಗೋ ಸಹಿಸಿಕೊಳ್ಳಬಹುದು, ಆದರೆ ಹಾಡಿನ ಮಧ್ಯೆ ವಾಹ್… ವಾಹ್… ಉಸ್ತಾದ್… ಅನ್ನುವಂತೆ ನಮ್ಮexprestion  ಕೊಡಬೇಕಲ್ಲ ಅದು ಕಷ್ಟದ ಕೆಲಸ. ಹೀಗೆ ದಾರಿಯುದ್ದಕ್ಕೂ ಹಸಿರುವನಗಳ ನಡುವೆ ನಮ್ಮ ಜುಗಲ್ ಬಂದಿ ನಡೆಯುತ್ತಾ ಸಾಗಿತು.

ಕಾಡಿನಲ್ಲಿ ಹೇರಳವಾಗಿ ಬಾಂಬು ಮರಗಳು ಸಿಗುವುದರಿಂದ ಅದನ್ನು ದಾಂಡೇಲಿ ಪೇಪರ್ ಮಿಲ್ ಲ್ಲಿ ಬಳಸಿ ಪೇಪರ್ ನ್ನು ತಯಾರಿಸಲಾಗುತ್ತದೆ. ಪೇಪರ್ ಮಿಲ್ ಇದೊಂದು ದೊಡ್ಡ ಕಾರ್ಖಾನೆ. ದಾಂಡೇಲಿ ಜನರ ಜೀವನಾಡಿಯದು, ಅಲ್ಲಿಯ ಜನರಿಗೆ ಉದ್ಯೋಗ ನೀಡಿ, ಅನ್ನ ಹಾಕಿದೆ. ಈ ಪೇಪರ್ ಮಿಲ್ ನ್ನೇ ನಂಬಿಕೊಂಡು ಸಾವಿರಾರು ಜನರು ಬದುಕುತ್ತಿದ್ದಾರೆ. ಈ ಹಿಂದೆ ಪ್ಲೈ ವುಡ್ ಕಾರ್ಖಾನೆ, ಮ್ಯಾಗ್ನಿಸ್ ಕಾರ್ಖಾನೆಗಳಿದ್ದವು. ಅವು ಹೇಗೆ ಬಂದ್ ಆಯಿತೋ ಗೊತ್ತಿಲ್ಲ, ಎಷ್ಟೋ ಜನ ಕೆಲಸ ಕಳೆದುಕೊಂಡರು. ಕೆಲಸ ಕಳೆದುಕೊಂಡವರಲ್ಲಿ ನನ್ನ ಸ್ನೇಹಿತರ ಅಪ್ಪ ಅಮ್ಮನು ಇದ್ದರು. ಅವರು ಹೊಟ್ಟೆಪಾಡಿಗಾಗಿ ಕೆಲವರು ಬೇರೆ ಊರಿಗೆ ಸೇರಿಕೊಂಡರೇ, ಇನ್ನು ಕೆಲವರು ಚಿಲ್ಲರೆ ಅಂಗಡಿ ಇಟ್ಟುಕೊಂಡರು.

ಅಂದ ಹಾಗೆ ಬಿದಿರಿನ ಗಿಡ ಎಲ್ಲರ ಮನೆಯ ಬೇಲಿಗೆ  ಬಳಸಲಾಗುತ್ತಿತ್ತು, ಬಾಂಬುವಿನ ಚಿಗುರಿನಿಂದ ಕೆಲವರು ರುಚಿಕರ ಅಡುಗೆಯನ್ನು ಮಾಡಿ ತಿನ್ನುತ್ತಿದ್ದರು. ಮತ್ತು ಅಲ್ಲಿಯ ಬಹುತೇಕ ಜನರ ಮನೆಯಲ್ಲಿ ತೇಗದ ಮರದ ಮಂಚ, ಡೈನ್ನಿಂಗ್ ಟೇಬಲ್, ಟಿಪಾಯಿ, ಖುರ್ಚಿಗಳು ಹೀಗೆ ಸಾಮಾನ್ಯವಾಗಿ ನೋಡಬಹುದು. ಕಡಿಮೆ ಬೆಲೆಯಲ್ಲಿ ಸುಂದರ ವಿನ್ಯಾಸದ ಫರ್ನಿಚರ್ ಮಾಡುವವರಿದ್ದಾರೆ. ಅದೇ ತೇಗದ ಮರದ ಫರ್ನಿಚರ್ ಗಳು ಬೆಂಗಳೂರಿನ ದೊಡ್ಡ ಶೋ ರೂಮ್ ಗಳಲ್ಲಿ ಬಾಯಿಗೆ ಬಂದಂತೆ ರೇಟ್ ಹೇಳುತ್ತಾರೆ. ಅದಕ್ಕಾಗಿ ಬೆಂಗಳೂರಿಂದ ದಾಂಡೇಲಿಗೆ ಬಂದು ಫರ್ನಿಚರ್ ಆರ್ಡರ್ ಕೊಟ್ಟಿ ಮಾಡಿಸುವವರಿದ್ದಾರೆ. ಅಲ್ಲಿಯ ಫರ್ನಿಚರ್ ಅಂಗಡಿಯವರ ಬಳಿ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ಪಾಸ್ ಕೂಡಾ ಇರುವುದರಿಂದ ಫರ್ನಿಚರ್ export ಮಾಡಲು ಯಾವುದೇ ತೊಂದರೆಯಾಗುವುದಿಲ್ಲ. ಹಾಗಾಗಿ ದೂರದೂರದಿಂದ ದಾಂಡೇಲಿಗೆ ಫರ್ನಿಚರ್ ಆರ್ಡರ್ ಬರುವುದರಿಂದ ಅಲ್ಲಿಯವರಿಗೆ ದೊಡ್ಡ ಆದಾಯವು ಆಗಿದೆ.

ನನ್ನ ಅಮ್ಮನ ಮನೆಯ ಪೂರ್ತಿ ಇಂಟೀರಿಯರ್ ಕೆಲಸವೂ ದಾಂಡೇಲಿಯ ತೇಗದ ಮರದಿಂದಲೇ ಮಾಡಲಾಗಿದೆ. ಹಾಗಾಗಿ ದಾಂಡೇಲಿಯ ನೆನಪು ಅಮ್ಮನ ಮನೆಯಲ್ಲಿ ಸದಾ ಕಾಲ ಇರುತ್ತದೆ .

ಒಟ್ಟಿನಲ್ಲಿ ಅಲ್ಲಿಯ ಗಿಡ, ಮರ, ನದಿಗಳು ಎಲ್ಲವೂ ಒಂದಲ್ಲ ಒಂದು ರೀತಿ ಸುತ್ತಲಿನ ಜನರಿಗೆ ಅನ್ನ ನೀಡುತ್ತಾ ಬಂದಿದೆ. ದಾಂಡೇಲಿ ಎಂದರೆ ಶ್ರೀಮಂತರ ನಾಡು. ಅಲ್ಲಿಯ ಗಾಳಿ,ನೀರು ಎಲ್ಲವೂ ಮನಸ್ಸಿಗೆ ಖುಷಿಕೊಡುತ್ತದೆ. ಯಾರಾದರೂ ದಾಂಡೇಲಿಯತ್ತ ಪ್ರಯಾಣ ಬೆಳೆಸಿದರೆ ಬಿಸ್ಲೇರಿ ಬಾಟಲ್ ಕೊಳ್ಳಬೇಡಿ, ಅಲ್ಲಿಯ ಶುದ್ಧವಾದ ನೀರು ಕುಡಿಯಿರಿ, ಅದು ಕೂಡಾ ದಾಂಡೇಲಿಯಲ್ಲಿ ಒಂದು ಹೊಸ ಅನುಭವವನ್ನು ಕೊಡುತ್ತದೆ. ಹೇಗೆಯೆಂದರೆ ಅಲ್ಲಿಯ ಕಾಳಿ ನದಿ ನೋಡಲು ಕಪ್ಪಾದರೂ ಕುಡಿಯಲು ನೀರು ಸಕ್ಕರೆಯಂತೆ ಸಿಹಿಯಾಗಿದೆ. ಅಲ್ಲಿಯ ನೀರು ಕುಡಿದವರಿಗೆ ಬೇರೆ ಯಾವುದೇ  ನದಿಯ ನೀರು ಒಪ್ಪದು. ಪ್ರತಿಯೊಂದು ನಮ್ಮನ್ನು ಆವರಿಸಿ ಬಿಡುತ್ತವೆ. ದಾಂಡೇಲಿ ನನ್ನನ್ನು ಆವರಿಸಿ ಬಿಟ್ಟಿತ್ತು.

ಅಮ್ಮಾ…ಅಮ್ಮಾ… ಅಂತ ಅಕ್ಕರೆ ಕೂಗಿಕೊಂಡಾಗಲೇ ನಾನು ವಾಸ್ತವಕ್ಕೆ ಬಂದೆ. ‘ಅಮ್ಮ, ಎಲ್ಲೋ ಡ್ರೈನೇಜ್ ವಾಸನೆ ಬರ್ತಿದೆಯಲ್ಲ, ನಾವು ಎಲ್ಲಿದ್ದೀವಿ???. ಎಲ್ಲಿಂದ ಈ ಕೆಟ್ಟ ವಾಸನೆ ಬರತ್ತಿದೆ’…. ಎನ್ನುತ್ತಾ ನಿದ್ದೆಗಣ್ಣಲ್ಲೇ ಕಣ್ತೆರೆದು ಅಕ್ಕರೆ ಸಕ್ಕರೆ ಹೊರಕ್ಕೆ ನೋಡಿದರು. ಆಗ ನನ್ನ ಸ್ವರ್ಗದ ಬಾಗಿಲಲ್ಲಿದ್ದೆವು. ೨೦ ವರ್ಷಗಳ ನಂತರ ನಾನು ಬೆಳೆದ ಊರನ್ನು ನೋಡುತ್ತಿದ್ದೆ.ಏನೋ ಒಂದು ರೀತಿ ಆನಂದ.

ಅಕ್ಕರೆ ಕೆಟ್ಟ ವಾಸನೆ ಅಂದದ್ದು ದಾಂಡೇಲಿಯ ಪೇಪರ್ ಮಿಲ್ ಹೊರ ಸೂಸುತ್ತಿದ್ದ ವಾಸನೆಯದು. ಅವನಿಗೆ ದುರ್ವಾಸನೆ ಅನಿಸಿದ್ದು, ನನಗೆ ಪರಿಮಳವಾಗಿತ್ತು. ಬಾಲ್ಯದಲ್ಲಿ ಈ ವಾಸನೆಯ ಕುಡಿದುಕೊಂಡೆ ಆಡಿ, ಬೆಳೆದ ನೆನೆಪುಗಳಿದ್ದವು.  ಈ ವಾಸನೆಯಿಂದಲೇ ಬೆಳಗ್ಗೆ ಮತ್ತು ರಾತ್ರಿಯಾಗುತ್ತಿತ್ತು. ಒಂದು ಬೇಸರದ ಸಂಗತಿಯೆಂದರೆ ಅಷ್ಟು ವರ್ಷ ದಾಂಡೇಲಿಯಲ್ಲಿ ಕಳೆದರೂ ಪೇಪರ್ ಮಿಲ್ ಒಳಗೆ ಪೇಪರ್ ಹೇಗೆ ತಯಾರಾಗುತ್ತೆ ಎನ್ನುವುದನ್ನು ನೋಡಲು ಸಾಧ್ಯವಾಗಲಿಲ್ಲ.  ಆ ಬೇಸರ ಯಾವಾಗಲು ನನ್ನನ್ನು ಕಾಡುತ್ತಲೇ ಇರುತ್ತದೆ.

ಬೇಸರವನ್ನು ಹೊರತು ಪಡಿಸಿ, ಸಂತೋಷದಿಂದ ನನ್ನೂರಿಗೆ ಹೆಜ್ಜೆ ಇಟ್ಟೆ. ಹುಟ್ಟಿ ಬೆಳೆದ ಊರಿನಲ್ಲಿ ನನ್ನದೇ ಹೆಜ್ಜೆಯ ಗುರುತುಗಳಿಲ್ಲದ  ನೋವು ಆಗ ಕಾಡತೊಡಗಿತು. ಎಲ್ಲರಂತೆ ನಾನು ಕೂಡಾ ಆ ಊರಿಗೆ ಪ್ರವಾಸಿಗಳಾಗಿದ್ದೆ. ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು, ಆದರೆ ಎಲ್ಲಿ ಎನ್ನುವ ಪ್ರಶ್ನೆ? ಶುರುವಾಯಿತು. ನಾವು ಓದುವಾಗ  ಸ್ಟೇಟ್ ಪೋರಿಯಂ ಎನ್ನುವ ಹೆಸರಿನ ಲಾಡ್ಜ್  ಒಂದೇ ಇತ್ತು. ಆದರೆ ಈಗ ರೆಸಾರ್ಟ್, ಹೊಂ ಸ್ಟೇ ಗಳು ನಾಯಿಕೊಡೆಯಂತೆ ಅಲ್ಲಲ್ಲಿ ಕಾಡಿನ ಸುತ್ತಮುತ್ತಲು ಎದ್ದು ನಿಂತಿದ್ದವು. ಈಗ ದಾಂಡೇಲಿ ನನ್ನೂರಷ್ಟೇಯಾಗಿ ಉಳಿದಿರಲಿಲ್ಲ. ಎಲ್ಲ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿತ್ತು. ಪ್ರವಾಸಿಗರನ್ನು ಸೆಳೆಯುವುದಕ್ಕೆ ರಿವರ್ ರಾಫ್ಟಿಂಗ್, ಮೋಜಿನ ಆಟಗಳು ಒಂದಾ…? ಎರಡಾ…? . ಪ್ರವಾಸಿಗರು ಹೆಚ್ಚಾದಂತೆ ಊರು commercial ಆಗಿ ಬೆಳೆದು ನಿಂತಿತ್ತು. ನಾನಿದ್ದ ದಾಂಡೇಲಿ ಸಂಪೂರ್ಣ ಬದಲಾಗಿತ್ತು. ನನಗೆ ಈ ಊರು ಹಳೆಯದಾದರೂ, ಊರಿಗೆ ನಾನು ಹೊಸಬಳಾಗಿದ್ದೆ. ಹೊಸ ನೀರು ಬಂದು, ಹಳೆ ನೀರು ಕೊಚ್ಚಿ ಹೋದಂತೆ ಹಳೆ ತಲೆಮಾರು ಹೋಗಿ ಹೊಸ ತಲೆ ಮಾರಿನ ಯುವಕ/ಯುವತಿಯರು ಊರ ತುಂಬಾ ಕಾಣತೊಡಗಿದ್ದರು. ಆಗ ‘ಚಿನ್ನಾರಿ ಮುತ್ತಾ’ ಸಿನಿಮಾದಲ್ಲಿನ ‘ಇಷ್ಟೊಂದ್ ಜನಾ… ಇಲ್ಲಿ ಯಾರು ನಮ್ಮೋರು…ಇಷ್ಟೊಂದು ಮನೆ ಎಲ್ಲಿ ನಮ್ಮನೆ?’…ಹಾಡು ನೆನಪಿಗೆ ಬಂತು. ರೆಸಾರ್ಟ್ ನಲ್ಲಿ ಉಳಿದುಕೊಳ್ಳುವುದಾ? ಬೇಡಾ? ಪ್ರಶ್ನೆಗಳು ಶುರುವಾದವು.

ನೆಟ್ ವರ್ಕ್ ಇಲ್ಲದೆ ಕಾಡಿನ ಮಧ್ಯೆ, ನಮ್ಮದೊಂದೇ ಕುಟುಂಬ ರೆಸಾರ್ಟ್ನಲ್ಲಿ ಉಳಿದುಕೊಳ್ಳುವುದು ಯಾಕೋ safe ಅನ್ನಿಸಲಿಲ್ಲ.  ಎಷ್ಟೋ ಕಪಲ್ ಗಳು ಉಳಿಯಲು ರೆಸಾರ್ಟ್ ಗಳನ್ನು ಆಯ್ದುಕೊಳ್ಳುತ್ತಾರೆ, ಅದು ತಪ್ಪು ಅಂತ ಹೇಳುವುದಿಲ್ಲ. ಕೆಲವು ಕಡೆ ರೆಸಾರ್ಟ್ ಗಳಲ್ಲಿ ನಾನು ಕೂಡಾ ಉಳಿದುಕೊಂಡಿದ್ದೇನೆ. ಆದರೆ ನಾವು ಎಲ್ಲೇ ಹೋದರು ಉಳಿದುಕೊಳ್ಳುವ ಜಾಗ safe ಇದೇಯಾ ಅಥವಾ ಇಲ್ಲವಾ? ಅಂತ ಮೊದಲು ಪರಿಶೀಲಿಸಿಕೊಳ್ಳಬೇಕು. ಕಾಡಿನ ಮಧ್ಯೆ, ನೆಟ್ ವರ್ಕ್ ಇಲ್ಲದ ಸ್ಥಳ, ನಿರ್ಜನ ಪ್ರದೇಶದಲ್ಲಿ ಉಳಿದುಕೊಳ್ಳಲು ಯೋಗ್ಯವೇ? ಎನ್ನುವ ಪ್ರಶ್ನೆ ಮೊದಲು ನಮ್ಮ ಮನದಲ್ಲಿ ಹಾಕಿಕೊಳ್ಳಬೇಕು. ಇಲ್ಲವಾದರೆ ತೊಂದರೆಯಾಗುವುದು ಪಕ್ಕಾ. ಆಮೇಲೆ ಲಬಾ…ಲಬಾ.. ಎಂದು ಬಾಯಿ ಬಡೆದುಕೊಳ್ಳುವುದಕ್ಕಿಂತ ಮೊದಲೇ ಜಾಗೃತರಾಗಿದ್ದರೆ ಒಳ್ಳೆಯದು.

ಹಾಗಾಗಿ ನಾವು ಬಸ್ ಸ್ಟಾಂಡ್ ಎದುರಿಗೆ, ಊರಿನ ಮಧ್ಯೆ ಇದ್ದ ಸ್ಟೇಟ್ ಪೋರಿಯಂ ಲಾಡ್ಜಿಂಗ್ ನಲ್ಲಿ ಉಳಿಯಲು ಯೋಗ್ಯ ಸ್ಥಳವೆನ್ನಿಸಿ ಸೀದಾ ಅಲ್ಲಿಗೆ ಹೋಗಿ ರೂಮ್ ಬುಕ್ ಮಾಡಿದೆವು. ಲಗೇಜ್ ನೆಲ್ಲ ರೂಮ್ ನಲ್ಲಿಟ್ಟಾಗ, ಐದು ಗಂಟೆಯಾಗಿತ್ತು. ರೂಮ್ ಬಾಡಿಗೆ  ದಿನಕ್ಕೆ ೨,೦೦೦ ರೂಪಾಯಿ . ಹೇಳುವುದಕ್ಕೆ  A/C ರೂಮ್, ಆದರೆ  A/C ಆನ್ ಮಾಡಿದರೆ ಅದರಲ್ಲಿನ ಐಸ್ ಕಿತ್ತಿ ಮೈಮೇಲೆ ಹಾರಿ ಬೀಳುತ್ತಿತ್ತು. ತೆಪ್ಪಗೆ ಫ್ಯಾನ್ ಆನ್ ಮಾಡಿ ಮಂಚದ ಮೇಲೆ ಅಡ್ಡಡ್ಡ- ಉದ್ದೂದ್ದ, ಅಲ್ಲೊಬ್ಬರು-ಇಲ್ಲೊಬ್ಬರು ಬಿದ್ದುಕೊಂಡೆವು. ನಿದ್ದೆಯೇನು ಬರಲಿಲ್ಲ, ಬ್ರಹ್ಮಾಂಡಕ್ಕೆ ಸ್ವಲ್ಪ ಹೊತ್ತು ರೆಸ್ಟ್ ಬೇಕಿತ್ತು. ಆಮೇಲೆ ನನ್ನ ದಾಂಡೇಲಿ ಸುತ್ತುವ ಪ್ಲಾನ್ ಇತ್ತು.

ಅಷ್ಟೋತ್ತಿಗಾಲೇ ಅಂಬಿಕಾನಗರದ ಹಳೆಯ ತಲೆಮಾರು, ನನ್ನ ಬಾಲ್ಯದ ಗೆಳೆಯ ಅರುಣ್ ಬೋಸ್ಲೇ ಕರೆಗಳು ಶುರುವಾಯಿತು. ‘ ದಾಂಡೇಲಿ ಬಂದು ಮುಟ್ಟಿದ್ಯಾ…ಎಲ್ಲಿದ್ದಿ?…ನಾನು ಭೇಟಿ ಮಾಡೋಕೆ ಬರ್ತಿದ್ದೀನಿ’ ಅಂತ ಎಲ್ಲ ವಿವರವನ್ನು ಕೇಳಿಕೊಂಡ.ನಮ್ಮಿಬ್ಬರದು ಸುಮಾರು ೩೦ ವರ್ಷದ ಸ್ನೇಹ. ನಾವಿಬ್ಬರು ಶಾಲೆಯಲ್ಲಿ ಬುದ್ದಿವಂತರೇನು ಅಲ್ಲ, ದಡ್ಡಶಿಖಾಮಣಿಗಳು ಎನ್ನುವುದರಲ್ಲಿ ನಾಚಿಕೆಯೇನು ಇಲ್ಲ. ಆದರೆ ಶಾಲೆಯಲ್ಲಿ ಟಾಪ್ ಬರುವ ಹುಡುಗರಿಗಿಂತ ಸಮಾಜದಲ್ಲಿ ಎದ್ದು ಕಾಣುವಂತೆ ಅಲ್ಪ ಸ್ವಲ್ಪ ಒಳ್ಳೆ ಕೆಲಸವನ್ನು ಮಾಡಿ ಮುಂದೆ ಬಂದಿದ್ದೇವೆ.  ಓದು ಎನ್ನುವುದು ಜ್ಞಾನಾರ್ಜನೆ ಕೊಡುತ್ತದೆಯೇ ಹೊರತು ನಮ್ಮ ಜೀವನವನ್ನು ನಿರ್ಧರಿಸರಿಸಲಾರದು ಎನ್ನುವುದಕ್ಕೆ ನಾವೇ ಸಾಕ್ಷಿ.

ಮುಂದೇನಾ ಭಾಗದಲ್ಲಿ ಅರುಣ್ ಹಾಗೂ ದಾಂಡೇಲಿಯ ಸುತ್ತಾಟದ ಬಗ್ಗೆ ಹೇಳುವೆ….


  • ಶಾಲಿನಿ ಹೂಲಿ ಪ್ರದೀಪ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW