ಧಾರವಾಡ ದಾಟಿದ ಮೇಲೆ ನನ್ನ ಪಯಣ ಹಳಿಯಾಳ ಕಡೆಗೆ ಸಾಗಿತ್ತು, ಅಲ್ಲಿಯ ಕೆಲವು ನೆನಪುಗಳನ್ನು ‘ದಂಡಕಾರಣ್ಯದಲ್ಲಿ ಹೆಜ್ಜೆ ಗುರುತುಗಳು’ ಹಂಚಿಕೊಳ್ಳುತ್ತಿದ್ದೇನೆ. ನೀವು ದಾಂಡೇಲಿ ಸುತ್ತಮುತ್ತವರು ಆಗಿದ್ದರೆ ತಪ್ಪದೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ.
ಕಾರ್ ದಾಂಡೇಲಿಯತ್ತ ಸಾಗತೊಡಗಿತು :
ಧಾರವಾಡ ತಪೋವನದ ರೇಲ್ವೆ ಜುಂಕ್ಷನ್ ನಲ್ಲಿ ರೈಲು ದಾಟಿ ಹೋಗುವ ಸಂದರ್ಭದಲ್ಲಿ ಗೇಟ್ ಬಂದ್ ಮಾಡಲಾಗುತ್ತಿತ್ತು. ಆಗ ರಸ್ತೆಯುದ್ದಕ್ಕೂ ಒಂದರ ಹಿಂದೆ ಒಂದು ವಾಹನಗಳು ನಿಲ್ಲುತ್ತಾ ದೊಡ್ಡ ಸಾಲೇ ನಿರ್ಮಾಣವಾಗುತ್ತಿತ್ತು. ನಾವು ದಾಂಡೇಲಿ ಬಸ್ ನಲ್ಲಿ ಕೂತು ರೈಲು ಬರುವುದನ್ನೇ ಕಾಯುತ್ತಿದ್ದೆವು. ರೈಲು ಬರುತ್ತಿದ್ದಂತೆ ಕಣ್ಣರಳಿಸಿ ನೋಡುವುದೇ ಒಂದು ಮಜಾ. ರೈಲು ಇಷ್ಟೂದ್ದ ಇರುತ್ತೆ ಅನ್ನೋದು ನೈಜ್ಯವಾಗಿ ಮೊದಲು ನೋಡಿದ್ದೇ ಈ ಹಳಿಯಲ್ಲಿ. ಅಂದಿನ ದಿನಗಳಲ್ಲಿ ರೈಲಿನ ಒಳಗೆ ಕೂರುವ ಪ್ರಸಂಗ ಬಾರದಿದ್ದರೂ ಹೊರಗಿನಿಂದ ನೋಡಿ ಸಂತೋಷ ಪಟ್ಟಿದ್ದ ದಿನಗಳವು. ಅದೇ ಸಣ್ಣ ಸಂತೋಷ ರೈಲಿನ ಒಳಗೆ ಎಸಿ ಕ್ಲಾಸ್ ನಲ್ಲಿ ಕೂತಾಗಲು ಸಿಗಲಿಲ್ಲ ಎನ್ನುವುದು ಸತ್ಯದ ಮಾತು.
ಆ ರೇಲ್ವೆ ಜುಂಕ್ಷನ್ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ನಮ್ಮ ಕಣ್ಣಿಗೆ ಬಿದ್ದದ್ದು ‘ನೇಚರ್ ಫಸ್ಟ್ ಇಕೋ ವಿಲೇಜ್’ .
ಹಳಿಯಾಳ ಮುಖ್ಯರಸ್ತೆ ಆರಂಭವಾಗುತ್ತಿದ್ದಂತೆ ‘ಹಳ್ಳಿಗೇರಿ ಕ್ರಾಸ್’ ನಲ್ಲಿಈ ‘ನೇಚರ್ ಫಸ್ಟ್ ಇಕೋ ವಿಲೇಜ್’ ಸಿಗುತ್ತದೆ. ಅದಕ್ಕೆ ಒಂದು ಎಂಟ್ರಿ ಕೊಟ್ಟೆ ಬಿಡೋಣ ಅನ್ನಿಸಿ ಒಳಗೆ ಹೋಗಿಯೇ ಬಿಟ್ಟೆವು. ಅಲ್ಲಿಗೆ ಹೋದಾಗ ೩ಗಂಟೆ ಆಸುಪಾಸು. ‘ಒಳಗೆ ಏನೇನಿದೆಯಪ್ಪಾ…’ಅಂತ ನಮ್ಮ ಯಜಮಾನಪ್ಪ, ಅಲ್ಲಿನ ಉಸ್ತುವಾರಿಗೆ ಕೇಳಿದ.
‘ನಿಮಗೆ ಏನೆಲ್ಲಾ ಬೇಕು, ಅದೈತಿ…’ ಅಂದ. ಅದಕ್ಕ ನಮ್ಮ ಯಜಮಾನ ‘ರೆಸ್ಟ್ ರೂಮ್, ಇದೇನು?’ ಅಂದ. ನಾನು, ಮಕ್ಳು ಒಮ್ಮೆಲ್ಲೇ ಯಜಮಾನಪ್ಪನ್ನ ಮುಖ ನೋಡಿ ಅರ್ಥಮಾಡಿಕೊಂಡೆವು…
”ಇಷ್ಟೂದ್ದ ಜಾಗದಲ್ಲಿ ಅದನ್ನ ಮಾಡದೇ ಇರ್ತೇವಿ ಏನ್ ಸರ್ ?!… ಅತ್ತಕಡೆ ಐತಿ ನೋಡ್ರಿ…” ನಗುತ್ತಾ ‘ಬೆರಳು ಮಾಡಿ ತೋರಿಸಿದ. ಒಂದನ್ನು ಮಾತನಾಡದೆ ನಮ್ಮ ಯಜಮಾನ ಅವ ತೋರಿಸಿದತ್ತ ನಡೆದ. ಅವರು ಅತ್ತಕಡೆ ನಡೆದಂತೆ ನಾವು, ನನ್ನ ಮಕ್ಳು ಸೆಲ್ಫಿಯಲ್ಲಿ ಬ್ಯುಸಿ ಆದೆವು. ಆದರೆ ಬೆಳಗ್ಗೆಯಿಂದ ಬಿಸಲಲ್ಲಿ ಕೂತು ಹಪ್ಪಳವಾಗಿದ್ದೆವು. ಆ ಚಂದಕ್ಕೆ ಸೆಲ್ಫಿ ಸರಿಯಾಗಿ ಬರಲೇ ಇಲ್ಲ. ಮೊಬೈಲ್ ನ್ನು ಬ್ಯಾಗ್ ಗೆ ಬಿಸಾಕಿ, ಆ ಕಡೆ ಈ ಕಡೆ ನೋಡುತ್ತಾ ನಿಂತೆವು.
ಯಜಮಾನಪ್ಪ ತಮ್ಮ urgent ಕಾರ್ಯವನ್ನೆಲ್ಲ ಮುಗಿಸಿ ತಮ್ಮ ಮಾತನ್ನು ಮುಂದೊರೆಸಿ, ‘ಒಳಗೆ ಹೋಗೋಕೆ ಎಂಟ್ರಿ ಫೀಸ್ ಎಷ್ಟು?’ .
‘ಜಾಸ್ತಿ ಇಲ್ಲ, ಸರ್….ಬೆಳಗ್ಗೆ ೯ ಗಂಟೆಯಿಂದ ಸಂಜಿ ೬ ಗಂಟೆವರಿಗಾದ್ರೆ ಒಬ್ಬರಿಗೆ ೬೫೦ /ರೂಪಾಯಿ” !?….ಎಂದ.
”ಈಗ ಹೆಂಗೂ ಟೈಮ್ ಆಗತಾ ಬಂತು, ಸುಮ್ನೆಒಳಗೆ ನೋಡ್ಕೊಂಡು ಬರೋಕೆ ಎಷ್ಟು charge ಮಾಡ್ತೀರಿ” ಅಂದ್ರು.
”ತಲೆಗೆ ೨೫೦ ರೂಪಾಯಿ, ಸರ್…” ಎಂದು ಹಲ್ಲುಗಿಂಜಿದ.
ಯಾಕೋ… ಇದು ನಮಗೆ ಸರಿ ಹೋಗವಲ್ದು, ಹೇಗೂ… ಬಂದ ಕೆಲಸನೂ ಆತು… ಅಂತ ಯಜಮಾನರಿಗೆ ಅನ್ನಿಸಿತೋ ಕಾಣೆ. ಇತ್ತಕಡೆ ಅಷ್ಟು ದೂರದ ಊರಿನಿಂದ ದಾಂಡೇಲಿಯಂತಹ ಸ್ವರ್ಗಕ್ಕೆ ಹೊರಟಿರುವಾಗ ಶಿವಪೂಜೆಯಲ್ಲಿನ ಕರಡಿಯಂತೆ ಈ ಜಾಗಕ್ಕೆ ಹೋಗಿ ಸಮಯ ವ್ಯರ್ಥ ಮಾಡಿಕೊಳ್ಳೋದು ನನಗೂ ಇಷ್ಟವಿರಲಿಲ್ಲ. ‘ನಾಳೆ ಬೆಳಗ್ಗೆ ಬಂದು ನೋಡ್ತೀವಿ, ಅಂತ ಸಂಜಾಯಿಸಿ ಕೊಟ್ಟು ಅಲ್ಲಿಂದ ನಮ್ಮ ಪ್ರಯಾಣ ಮುಂದೊರೆಯಿತು.
ನೇಚರ್ ಫಸ್ಟ್ ಇಕೋ ವಿಲೇಜ್ :
ಇದೊಂದು ಪರಿಸರ ಸ್ನೇಹಿ ವಾತಾವರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಶುದ್ಧ ಗ್ರಾಮೀಣ ಸೊಗಡನ್ನ ಬಿಂಬಿಸುವ ಹಗ್ಗ-ಜಗ್ಗಾಟ, ಬಿಲ್ಲುಗಾರಿಕೆ, ಉತ್ತರ ಕರ್ನಾಟಕದ ರುಚಿಕರ ಆಹಾರ, ವಾಸಕ್ಕೆ ಬಾಂಬು ಮನೆಗಳು, ಟ್ರೀ ಹೌಸ್ ಗಳಿದ್ದು, ಒಂದು ದಿನ ಪ್ರಕೃತಿಯ ನಡುವೆ ಮೋಜು ಮಸ್ತಿ ಮಾಡಬಹುದಂತಹ ಜಾಗ.
ನಾವು ಒಳಗೆ ಹೋಗದೆ ಇದ್ದ ಕಾರಣ ಒಳಗಿನ ಅನುಭವ ಹೇಗಿತ್ತು ಎಂದು ಹೇಳುವುದು ಕಷ್ಟ. ಆದರೆ ಅಲ್ಲಿಯ ಸ್ಥಳೀಯರಿಗೆ ಈ ಜಾಗ ಹೊಸ ಅನುಭವ ನೀಡುತ್ತದೆ. ಅದರ ಹೊರಗಿನ ವಿನ್ಯಾಸ ಪ್ರವಾಸಿಗರನ್ನು ಸೆಳೆಯುತ್ತದೆ ಅದರಲ್ಲಿ ಎರಡು ಮಾತಿಲ್ಲ. ನಿಮ್ಮಲ್ಲಿ ಸಮಯದ್ದರೇ ಅಲ್ಲಿಗೆ ತಪ್ಪದೆ ಭೇಟಿ ನೀಡಿ…ಅದೊಂದು ಹೊಸ ಅನುಭವ ನೀಡಬಹುದು.
***
ಅಂಬಿಕಾನಗರದಿಂದ ಧಾರವಾಡಕ್ಕೆ ಒಂದೂವರೆ ಗಂಟೆ ಬಸ್ ಪ್ರಯಾಣ. ದಾಂಡೇಲಿ, ಹಳಿಯಾಳ ದಾಟಿದ ಮೇಲೆ ಧಾರವಾಡ ಬರುತ್ತಿತ್ತು. ಒಂದೊಂದು ಬಸ್ ನಿಲ್ದಾಣದಲ್ಲಿ ಒಂದೊಂದು ತಿನ್ನಿಸು ಸಿಗುತ್ತಿದ್ದದ್ದು ವಿಶೇಷ. ದಾಂಡೇಲಿ ಬಸ್ ತುಂಬಿ ತುಳುಕುತ್ತಿದ್ದರಿಂದ ಚಿಲ್ಲರೆ ವ್ಯಾಪಾರಿಗಳು ಬಸ್ ನ ಒಳಕ್ಕೆ ಕಾಲಿಡುತ್ತಲೇ ಇರಲಿಲ್ಲ. ಭಿಕ್ಷುಕರು ಕಿಟಕಿಯತ್ತ ಬಂದು ಕೈ ಚಾಚುತ್ತಾ ಅಮ್ಮಾ…ಅಂತ ಬರುತ್ತಿದ್ದರು, ಬೆಂಗಳೂರಿನ ಹೋಟೆಲ್ ನಲ್ಲಿ ತಿಂದಾದ ಮೇಲೆ ವೇಟರ್ ಗೆ ಟಿಪ್ಸ್, ಕಾರ್ ಪಾರ್ಕಿಂಗ್ ಸೆಕ್ಯೂರಿಟಿಗೆ ಟಿಪ್ಸ್ ಅಂತ ಹತ್ತು ರೂಪಾಯಿ ಕೊಡುವ ನಾನು, ಭಿಕ್ಷಕರು ಬಂದಾಗ ಮುಖ ಆ ಕಡೆ ಈ ಕಡೆ ತಿರುಗಿಸಿ ಅಲ್ಲಿಂದ ಕಳುಹಿಸಿ ಬಿಡುತ್ತಿದ್ದೆ. ಆಗ ನಾಲ್ಕಾಣೆ ಕೊಡೋಕು ಯೋಚ್ನೆ ಮಾಡ್ತಿದ್ದ ಕಾಲವದು.
ಇನ್ನು ಬಸ್ ಹಳಿಯಾಳ ಬಸ್ ನಿಲ್ದಾಣಕ್ಕೆ ಬಂದಾಗ ‘ಲಿಂಬೆ ಹುಳಿ….ರೀ…’ ಅಂತ ರಾಗವಾಗಿ ಕೂಗುತ್ತಾ ಬರುತ್ತಿದ್ದ ವ್ಯಾಪಾರಿ. ಆಗ ನಾನು ತಪ್ಪದೆ ಲಿಂಬೆ ಹುಳಿ ಅಮ್ಮನ ಕಡೆ ಕೊಡಿಸಿಕೊಳ್ಳುತ್ತಿದೆ. ಅಮ್ಮ ಇಲ್ಲ ಎನ್ನದೆ ಕೊಡಿಸುತ್ತಿದ್ದ ವಸ್ತು ಎಂದರೆ ಅದೊಂದೇ. ಈಗಿನ ತರ ಚಾಕಲೇಟ್ ಆಗ ಭಾಳ ದುಭಾರಿಯಾಗಿರಲಿಲ್ಲ. ಒಂದು ಪ್ಯಾಕೆಟ್ ಗೆ ನಾಲ್ಕನೆಯಷ್ಟೇ. ಧಾರವಾಡ ಬಂದಾಗ ಶೇಂಗಾ ಬೀಜ ಹೀಗೆ ನಾಲ್ಕಾಣೆ, ಐವತ್ತು ಪೈಸೆ, ಹೀಗೆ ಪೈಸೆಯಲ್ಲೇ ನಮ್ಮ ಖುಷಿಗಳಿದ್ದವು.
(ಮುಂದೊರೆಯುತ್ತದೆ…)
- ಶಾಲಿನಿ ಹೂಲಿ ಪ್ರದೀಪ್