ಮುಳ್ಳಿಲ್ಲದ ನಾಚಿಕೆ (ಮೈಮೊಸಾ ಇನ್ವಿಸಾ)ಗಿಡವನ್ನು ಹಲವು ಪತ್ರಿಕೆಗಳಲ್ಲಿ ಈ ಗಿಡವನ್ನು ಕಳೆನಾಶಕವಾಗಿ ತೋಟದಲ್ಲಿ ಬೆಳೆಯಲು ಸಲಹೆಗಳು ನೀಡಿವೆ, ಇದರ ವಿಷಕಾರಿ ಗುಣದ ಬಗ್ಗೆ ಗೊತ್ತಿರದೇ ಹಲವರು ಇದನ್ನು ಜಾನುವಾರುಗಳಿಗೆ ಮೇವಾಗಿ ಬಳಸಬಹುದೆಂದು ಸಲಹೆ ನೀಡಿದ್ದಿದೆ. ಆದರೆ ಜಾನುವಾರುಗಳು ಈ ಗಿಡದ ಸೊಪ್ಪನ್ನು ತಿಂದು ಅವು ಸಾವನ್ನಪ್ಪಿದ ಘಟನೆ ಸಾಕಷ್ಟಿದೆ ಎನ್ನುತ್ತಾರೆ ಖ್ಯಾತ ಪಶುವೈದ್ಯ ಡಾ. ಎನ್.ಬಿ.ಶ್ರೀಧರ ಅವರು, ಇನ್ನಷ್ಟು ಮಾಹಿತಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಮುಳ್ಳಿಲ್ಲದ ನಾಚಿಕೆ (ಮೈಮೊಸಾ ಇನ್ವಿಸಾ)ಗಿಡ ಇದು ಮರಗಳ ಮಧ್ಯೆ ಹಾಗೂ ಸ್ವಲ್ಪ ತೇವಾಂಶ ಇರುವ ಕಡೆ ಹುಲುಸಾಗಿ ಬೆಳೆಯುತ್ತದೆ. ಇದು ಸೊಂಪಾಗಿ ಬೆಳೆಯುವುದರಿಂದ ಇತರ ಕಳೆಗಳು ಬೆಳೆಯಲು ಬಿಡುವುದಿಲ್ಲ. ಅಲ್ಲದೇ ಈ ಗಿಡವು ಕೊಳೆತ ನಂತರ ಜೈವಿಕ ಗೊಬ್ಬರವಾಗಿ ಪರಿಣಾಮಕಾರಿಯಾಗುವುದರಿ0ದ ಜನರು ಇದರ ಬೀಜಗಳನ್ನು ವಿವಿಧ ಖಾಸಗಿ ಕಂಪನಿಗಳು ಹಾಗೂ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಇತ್ಯಾದಿಗಳಿಂದ ಪಡೆದು ತಮ್ಮ ತೋಟಗಳಲ್ಲಿ ಬೆಳೆಸುವುದು ವಾಡಿಕೆ.
ಹಲವು ಪತ್ರಿಕೆಗಳಲ್ಲೂ ಸಹ ಈ ಗಿಡವನ್ನು ಕಳೆನಾಶಕವಾಗಿ ತೋಟದಲ್ಲಿ ಬೆಳೆಯಲು ಸಲಹೆಗಳು ಬಂದಿವೆ. ಇದರ ವಿಷಕಾರಿ ಗುಣದ ಬಗ್ಗೆ ಗೊತ್ತಿರದೇ ಹಲವರು ಇದನ್ನು ಜಾನುವಾರುಗಳಿಗೆ ಮೇವಾಗಿ ಬಳಸಬಹುದೆಂದು ಸಲಹೆ ನೀಡಿದ್ದಿದೆ. ಅಕಸ್ಮಾತ್ತಾಗಿ ಜಾನುವಾರುಗಳಿಗೆ ಗಿಡದ ಸೊಪ್ಪನ್ನು ತಿನ್ನಿಸಿದಾಗ ವಿಷವಾಗಿ ಪರಿಣಿಮಿಸಿ ಅವು ಸಾವನ್ನಪ್ಪಿದ ಘಟನೆ ಸಾಕಷ್ಟಿದೆ. ಉದಾಹರಣೆಗೆ ಸಾಗರ ತಾಲೂಕಿನ ತಾಳಗುಪ್ಪದ ಸಮೀಪದ ಹಳ್ಳಿಗಳಲ್ಲಿ, ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ, ಶ್ರೀರಂಗ ಪಟ್ಟಣದ ಸಮೀಪದ ಇಸ್ಕಾನ್ ಫಾರ್ಮನಲ್ಲಿ, ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಜಿಲ್ಲೆಯ ಹನುಮಂತಾಪುರ ಮತ್ತು ಸೊರಬ ಇತ್ಯಾದಿ ಸ್ಥಳಗಳಲ್ಲಿ ಇದರ ವಿಷಬಾಧೆಯಿಂದ ಹಲವು ಜಾನುವಾರುಗಳು ಮರಣವನ್ನಪ್ಪಿದ ವರದಿಗಳಿವೆ. ಪ್ರಾಯೋಗಿಕವಾಗಿ ಕರುಗಳಿಗೆ ಈ ಸೊಪ್ಪನ್ನು ತಿನ್ನಿಸಿ ಇದರ ವಿಷಬಾಧೆ ಹಾಗೂ ಇದರ ಚಿಕಿತ್ಸೆಯ ಕುರಿತು ಸಂಶೋಧನೆ ನಡೆಸಲಾಗಿದೆ.
ಜಾನುವಾರುಗಳು ತೋಟದಲ್ಲಿ ಹುಲುಸಾಗಿ ಬೆಳೆಯುವ ಮುಳ್ಳಿಲ್ಲದ ನಾಚಿಕೆ ಗಿಡದ ಸೊಪ್ಪನ್ನು ಯಥೇಚ್ಚವಾಗಿ ತಿಂದಾಗ ಮಾತ್ರ ರೋಗ ಲಕ್ಷಣಗಳು ಕಂಡು ಬರುತ್ತವೆ. ಸೊಪುö್ಪ ತಿಂದ ಒಂದೆರಡು ದಿನ ಯಾವುದೇ ರೋಗ ಲಕ್ಷಣ ಕಾಣಿಸದು. ಜಾನುವಾರು ಅರೋಗ್ಯವಾಗಿದ್ದಂತೆ ಕಂಡು ಬರುವುದು. ಜಾನುವಾರಿನ ಮೇವು ಚೀಲದ ನಿಷ್ಕಿçಯತೆ ಪ್ರಾರಂಭವಾಗಿ ಜಾನುವಾರು ಮೇವು ತಿನ್ನುವುದನ್ನು ಬಿಡುತ್ತದೆ.ನಂತರ ಜಾನುವಾರಿನಲ್ಲಿ ಮಲಬದ್ಧತೆಯ ಲಕ್ಷಣಗಳು ಕಂಡು ಬರುತ್ತವೆ. ರೋಗದ ಪ್ರಾರಂಭಿಕ ಲಕ್ಷಣಗಳೆಂದರೆ ಒದ್ದಾಡುವುದು, ಉಸಿರಾಟದ ತೊಂದರೆ, ಜೊಲ್ಲು ಸುರಿಸುವುದು, ಕಣ್ಣಲ್ಲಿ ನೀರು ಬರುವುದು ಮತ್ತು ಶರೀರದ ತಾಪಮಾನ ಕಡಿಮೆಯಾಗುವುದು ಇತ್ಯಾದಿ. ಈ ಹಂತದಲ್ಲಿ ಜಾನುವಾರು ಅಹಾರ ಮತ್ತು ನೀರು ಸೇವನೆಯನ್ನು ನಿಲ್ಲಿಸುತ್ತದೆ. ಸೊಪ್ಪನ್ನು ತಿಂದ 5-6 ದಿನಗಳ ನಂತರ ಮಲಬದ್ಧತೆ ಜಾಸ್ತಿಯಾಗುತ್ತದೆ ಮತ್ತು ಜಾನುವಾರು ಏಳಲು ತುಂಬಾ ಕಷ್ಟ ಪಡುತ್ತದೆ. ಈ ರೋಗದ ಮುಖ್ಯ ಲಕ್ಷಣವೆಂದರೆ ಜಾನುವಾರಿನ ಹಿಂಬಾಗದಲ್ಲಿ ಅದರಲ್ಲೂ ಗುದದ್ವಾರದ ಸುತ್ತ ಮುತ್ತ ಮತ್ತು ಕೆಳ ಭಾಗದಲ್ಲಿ ಊತ ಪ್ರಾರಂಭವಾಗುವುದು. ಎಮ್ಮೆ ಹಾಗೂ ಆಕಳುಗಳಲ್ಲಿ ಯೋನಿಯ ಸುತ್ತ ಗಣನೀಯ ಪ್ರಮಾಣದಲ್ಲಿ ಊತ ಕಂಡು ಬರುತ್ತದೆ. ಗಂಡು ಜಾನುವಾರುಗಳಲ್ಲಿ ವೃಷಣದ ಸುತ್ತ ಊತ ಕಂಡು ಬರುತ್ತದೆ. ಮುಳ್ಳಿಲ್ಲದ ನಾಚಿಕೆ ಗಿಡದ ಸೊಪ್ಪನ್ನು ತಿಂದ ಜಾನುವಾರುಗಳು 7-10 ದಿನಗಳಲ್ಲಿ ಸಾವನ್ನಪ್ಪತ್ತವೆ.
ಪ್ರಾಯೋಗಿಕವಾಗಿ ಜಾನುವಾರುಗಳಿಗೆ ಈ ಸೊಪ್ಪನ್ನು ತಿನ್ನಿಸಿ ಅಭ್ಯಸಿಸಿದಾಗ ಮೇಲ್ಕಾಣಿಸಿದ ಎಲ್ಲಾ ಲಕ್ಷಣಗಳು ಕೃಮವಾಗಿ ಕಂಡು ಬಂದಿದೆ. ಇದರ ವಿಷಬಾಧೆಯಿಂದ ಸತ್ತ ಜಾನುವಾರಿನ ಮರಣೋತ್ತರ ಪರೀಕ್ಷೆಯಿಂದ ಜಾನುವಾರಿನ ಮೂತ್ರ ಪಿಂಡಗಳು ಹಾಳಾಗಿರುವುದು ಕಂಡು ಬಂದಿದೆ. ಸಾಮಾನ್ಯವಾಗಿ 200 ಕಿಲೋ ತೂಕದ ಜಾನುವಾರು 2-3 ಕೆಜಿ ಸೊಪ್ಪನ್ನು ತಿಂದಾಗ ತೀವೃ ತರದ ರೋಗ ಲಕ್ಷಣಗಳು ಕಂಡು ಬರುತ್ತವೆ. ಇದಕ್ಕಿಂತ ಕಡಿಮೆ ತಿಂದಾಗ ಅಲ್ಪ ಸ್ವಲ್ಪ ಪ್ರಮಾಣದ ರೋಗ ಲಕ್ಷಣಗಳು ಕಾಣಿಸಿಕೊಂಡಾಗ ಪಶುವೈದ್ಯರಿಂದ ಚಿಕಿತ್ಸೆ ನೀಡಿದರೆ ಜಾನುವಾರು ಚೇತರಿಸಿ ಕೊಳ್ಳುವ ಸಾಧ್ಯತೆ ಇದೆ. ವಿಷಬಾಧೆಯ ಪ್ರಾರಂಭಿಕ ಹಂತದಲ್ಲಿ ಮಾತ್ರ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ. ಇದಕ್ಕೆ ನಿಖರವಾದ ಚಿಕಿತ್ಸೆಯನ್ನು ಕಂಡು ಹಿಡಿಯಲು ಸಂಶೋಧನೆ ಮುಂದುವರೆದಿದೆ.ಈ ಗಿಡದ ವೈಜ್ಞಾನಿಕ ವಿಶ್ಲೇಷಣೆಯಿಂದ ಇದರಲ್ಲಿ ನೈಟ್ರೇಟ್, ಅಲ್ಕಲೋಯ್ಡ್, ಫ್ಲೆವೋನಾಯ್ಡ್, ಟಪೀನ್ಸ್, ಸ್ಟಿರಾಯ್ಡ್ ಇತ್ಯಾದಿ ವಿಷಕಾರಿ ರಾಸಾಯನಿಕಗಳ ಸಂಕೀರ್ಣವೇ ಇದೆ ಎಂದು ತಿಳಿದು ಬಂದಿದೆ.
ರೈತರು ಈ ಸಸ್ಯವನ್ನು ಕೇವಲ ಕಳೆನಾಶಕವಾಗಿ ಹಾಗೂ ಜೈವಿಕಗೊಬ್ಬರವಾಗಿ ಮಾತ್ರ ಬಳಸುವುದು ಒಳಿತು. ಆದಷ್ಟು ಈ ಸಸ್ಯವನ್ನು ಜಾನುವಾರು ತಿನ್ನದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಇದೇ ರೀತಿ ರೋಗವು ಮುಳ್ಳಿರುವ ನಾಚಿಕೆಗಿಡವನ್ನು ಅತಿಯಾಗಿ ಜಾನುವಾರು ತಿಂದಾಗ ಬರುವುದನ್ನೂ ಸಹ ಗಮನಿಸಲಾಗಿದೆ. ಬೇರೆ ಸಸ್ಯಗಳೂ ಸಹ ಇದೇ ರೀತಿಯ ರೋಗಲಕ್ಷಣಗಳನ್ನು ಉಂಟು ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಮುಳ್ಳಿಲ್ಲದ ನಾಚಿಕೆ ಗಿಡವನ್ನು ಬೆಳೆಸಲು ರೈತರನ್ನು ಪ್ರೋತ್ಸಾಹಿಸುವವರು ಜಾನುವಾರಿನಲ್ಲಿ ಇದರ ವಿಷಬಾಧೆಯ ಬಗ್ಗೆ ಸೂಕ್ತ ಅರಿವು ಮೂಡಿಸುವುದು ಒಳ್ಳೆಯದು.
- ಡಾ. ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ