ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯವನ್ನು ಕೋರುತ್ತಾ, ಖ್ಯಾತ ಚಿಂತನಕಾರ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಬರೆದ ‘ಮರದ ಮಾತು’ ಕವನ, ಮುಂದೆ ಓದಿ…
ಪಕ್ಷಿಯೊಂದು ಹಣ್ಣು ತಿಂದು ಹಿಕ್ಕೆ ಉದುರಿಸಿದ
ಬೀಜ ಟಿಸಿಲೊಡೆದು ನೆಲಕೆ ಬೇರಿಳಿಸಿ
ಬೆಳೆದು ಮರವಾಗಿದ್ದೇನೆ ನಾನೊಂದು
ಬೋಧಿವೃಕ್ಷ!
ಬುದ್ಧಗುರು ನನ್ನ ನೆರಳಲ್ಲಿ ಕುಂತು
ಜ್ಞಾನೋದಯ ಪಡೆದ!
ಯಾರೋ ಅಸ್ಪೃಶ್ಯನೊಬ್ಬ
ತಿರುಳು ತಿಂದು ಬಿಸಾಡಿ ಹೋದ
ಎಂಜಲ ಮಾವಿನ ವಾಟೆ ನಾನು,
ಈ ನೆಲದ ಸಾರವನೀರಿ ಬೆಳೆದಿರುವೆ
ನಾನೊಂದು ಮಾವಿನ ಮರ
ಆಮ್ರಪಾಲಿಯ ಅಭಿಮಾನದ ತೋಟದ
ಸಿರಿಸಿಂಗಾರವಾದೆ!
ಗೋಲ್ಗೊಥಾ ಗಿರಿಯ ಕಪಾಲ ಸ್ಥಾನದಲ್ಲಿ
ಏಸು ಶಿಲುಬೆಗೇರುತ್ತಾ ಜೀವರಕ್ತ
ಬಸಿಯುವಾಗ, “ಕಟುಕನನ್ನೂ ಕ್ಷಮಿಸು ಹೇ ದೇವಾ…
ಪಾಪಿಗಳ ಪಾಪ ತೊಳೆಯಲು ನನ್ನೆದೆಯ ರಕ್ತ ಇಕೋ” ಎಂದು
ಬೇಡಿಕೊಂಡ ದೃಶ್ಯಕ್ಕೆ ಸಾಕ್ಷಿಯಾಗಿ ನಿಂತಿರುವೆ
ನಾನೊಂದು ದೇವಗಣಿಗಿಲೆ ಮರ!
ಕಲಬುರ್ಗಿಯ ದರ್ಗಾದ ಎದುರು
ಕುಲಮತಗಳ ದಾಟಿ
ಶರಣ ಬಸವನಿಗೂ ಖ್ವಾಜಾ ಬಂದೇನವಾಜನಿಗೂ
ಗೆಳೆತನದ ಕರಾರು ಬರೆದು
ಆಕಾಶದಲ್ಲಿ ಬಿಳಿಹಸಿರು ಗಲೀಫ ಬಾವುಟ ಹಾರಲು
ಸಾಕ್ಷಿಯಾಗಿ ನಿಂತಿರುವೆ ನಾನೊಂದು ಬೇವಿನ ಮರ!
ಚೈತ್ರ ಪೂರ್ಣಿಮೆಯ ದಿನ ಸಂಗೊಳ್ಳಿಯ
ಹಾಲು ಹೊಳೆ ಒಡ್ಡಿನ
ಪಾರಿವಾಳ ಸಾಕ್ಷಿಯಾಗಿ ಕೊರಳೊಡ್ಡಿದ
ವೀರ ರಾಯಣ್ಣನಿಗೆ ಬಿಗಿದ ನೇಣಿನ ನೇಕೆಗೆ
ಗುರುತಾಗಿ ಬಿಳಿಲು ಬೇರಿಳಿಸಿ ನಿಂತಿರುವೆ
ನಾನೊಂದು ಆಲದ ಮರ!
ಮಹಾಭಾರತ ರಣದಲ್ಲಿ ಕಾದಿ
ಶಸ್ತ್ರಗಳಿಂದ ಕತ್ತರಿಸಿದ ದೇಹದ ಗಾಯಗಳನ್ನು
ಅಸ್ಪೃಶ್ಯ ಯುದ್ಧವೀರರು
ಗಂಗಮ್ಮನ ಗುಡಿ ಮುಂದೆ ಸೂಜಿದಾರಗಳಿಂದ ಹೊಲಿದು
“ಸಂಬಂಜ’ ಬೆಸೆದುಕೊಂಡ ನೆಲದ ಚರಿತೆಗೆ ಸಾಕ್ಷಿಯಾಗಿ
ನಿಂತಿರುವೆ ನಾನೊಂದು ನೇರಳೆ ಮರ!
ಈ ಮಣ್ಣ ಕರಿಯೊಕ್ಕಲು ಮೂಲನಿವಾಸಿ ಮಕ್ಕಳು
ದೇವನಾಂಪ್ರಿಯ ಅಶೋಕ “ಜಂಬೂದ್ವೀಪ” ಎಂದು ನನ್ನದೇ
ಹೆಸರಿನಲ್ಲಿ ನಿಶಾನಿ ಹೊಡೆಯಿಸಿದ ಮೆಕ್ಕಲು
ನಾಡೊಕ್ಕಲು ಕರೆದುಕೊಂಡ ‘ಛಪ್ಪನ್ನೈವತ್ತಾರು ದೇಶದೋಳ್’
ವಿರಾಜಿಸುವ ಜಂಬೂಮುನಿಯ ಹೆಸರೆತ್ತಲು ಉಸಿರಾಗಿರುವೆ
ನಾನೊಂದು ಜಂಬುನೇರಳೆ ಮರ!
- ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)