‘ಮಣ್ಣು ಮಣ್ಣಲ್ಲ ಮಾತೃ’ – ಚನ್ನಕೇಶವ ಜಿ ಲಾಳನಕಟ್ಟೆನಮ್ಮ ಸಂಪತ್ತೆ ಅರಣ್ಯಗಳು ಇಂತಹ ಅರಣ್ಯಗಳನ್ನು ಹಂತಹಂತವಾಗಿ ಕಡಿದು ಕೃಷಿ ಭೂಮಿ ವಿದ್ಯುತ್ ಕಂಬಗಳ ಅಳವಡಿಕೆ ರೆಸರ್ಟ್ ಕಟ್ಟಡಗಳು ಹೀಗೆ ಹಲವು ಸಾವಿರಾರು ಶೋಕಿ ಜಾಗಗಳಾಗಿ ಜಾತ್ರೆ ಮಾಡಿ ನಮ್ಮ ಅಳಿವನ್ನು ನಾವೆ ತಂದು ಕೊಂಡಿದ್ದೇವೆ. ವಿಶ್ವ ಪರಿಸರ ದಿನ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದ ಈ ಸುಂದರ ಲೇಖನ ಹಾಗು ಕವನ ಓದುಗರ ಮುಂದಿದೆ, ತಪ್ಪದೆ ಓದಿ…

ನಿಸರ್ಗದೊಡಲಲಿ ಮಾನವ ಸಗ್ಗದ ಸವಿಯನ್ನು ಅನುಭವಿಸಬೇಕು. ಪ್ರಕೃತಿಯೊಡಲು ಮಾತೆಯ ಮಡಿಲಿನಷ್ಟೆ ಶ್ರೇಷ್ಠ. ಬ್ರಹ್ಮಾಂಡದ ಯಾವುದೇ ಗ್ರಹಗಳಲ್ಲಿಲ್ಲದ ಪ್ರಕೃತಿಯ ಮಾರ್ಪಟು ವಸುಂಧರೆಯಲ್ಲಿ ಜೀವ ಸೃಷ್ಟಿಗೆ ಹೇಳಿ ಮಾಡಿಸಿದಂತೆ ರೂಪು ಗೊಂಡಿರುವುದು ಅದ್ಭುತ ವೆಂದರೆ ಅತಿಶಯವಾಗದು.

ಪಂಚ ತತ್ವಗಳು ಜಲ ಆಕಾಶ ಭೂಮಿ ಅಗ್ನಿ ವಾಯು ಇವುಗಳೆ ಪ್ರಕೃತಿಯ ಮೂಲಧಾತುಗಳಾಗಿದ್ದು ಜೀವ ಸೃಷ್ಟಿಗೆ ಮಹತ್ತರವಾದ ಪಾತ್ರ ವಹಿಸಿವೆ. ಸೂರ್ಯನ ಅತಿ ನೇರಳಾತೀತ ಕಿರಣಗಳಿಂದ ರಕ್ಷಿಸಲು ಓಜೋನ್ ಪದರ. ಋತುಗಳಿಗನುಗುಣವಾಗಿ ನೀರು ಆವಿಯಾಗಿ ಮೋಡವಾಗಿ ಮಳೆ ಹನಿಹನಿಯಾಗಿ ಭೂ ತಾಯಿಯ ಮಡಿಲು ಸೇರಿ ಬೀಜಗಳು ಮೊಳಕೆಯೊಡೆದು ಸೂರ್ಯನ ಕಿರಣ ಹಾಗು ವಾಯುವನ್ನು ಉಪಯೋಗಿಸಿಕೊಂಡು ತನ್ತಾವೆ ಆಹಾರ ತಯಾರಿಸಿಕೊಂಡು ಬೆಳೆದು ಮರಗಳಾಗಿ ಮಳೆ ಮೋಡಗಳನ್ನು ಆಕರ್ಷಿಸಿ ಮಳೆ ಬರಿಸುತ್ತವೆ. ಒಂದೊಂದು ಪ್ರದೇಶಗಳಲ್ಲಿ ಒಂದೊಂದು ವಾಯುಗುಣ ಆ ವಾತಾವರಣಕ್ಕೆ ಅನುಗುಣವಾಗಿ ಸಸ್ಯವರ್ಗ ಪ್ರಾಣಿವರ್ಗ ಒಟ್ಟಾರೆ ಭೂಮಾತೆಯ ಮಡಿಲಲ್ಲಿ ಸಕಲ ಜೀವಿಗಳು ಕೂಡ ವಾಸಿಸಲು ಪ್ರಾಶಸ್ತ್ಯವಾದ ಪ್ರದೇಶವಾಗಿದೆ.

ಮಣ್ಣು ಮಣ್ಣಲ್ಲ ಮಾತೃ

ಭೂಮಿ ಉದಯಿಸಿ ಕೊಟ್ಯಾಂತರ ವರ್ಷಗಳಾಗಿವೆ. ಜೀವಿಗಳು ಉದಯಿಸಿ ಲಕ್ಷಾಂತರ ವರ್ಷಗಳಾಗಿವೆ ಅದೇ ಮಾನವ ಹುಟ್ಟಿದ್ದು ಕೇವಲ ಸಾವಿರಾರು ವರ್ಷಗಳ ಈಚೆಗಷ್ಟೆ. ಮನುಷ್ಯನ ಬೆಳವಣಿಗೆಗೆ ಪಕೃತಿಯಲ್ಲೆ ಅಡಗಿದೆ. ಅದರಲ್ಲೂ ಪಂಚ ಭೂತಗಳಾದ ಪೃಥ್ವಿ ಆಕಾಶ ನೀರು ಬೆಂಕಿ ಗಾಳಿ ಇವುಗಳಿಂದ ಜೀವ ಸಂಕುಲ ಜನಿಸಿರುವುದು.

ಕೊಳಕು ಮಣ್ಣಿಂದ ಮೊಳಕೆ ಬರುವುದಲ್ಲವೆ ಹೀಗಿರುವಾಗ ಮಣ್ಣು ಕೊಳಕಾಗದು ಆದರೆ ರಾಸಾಯನಿಕ ಗೊಬ್ಬರಗಳನ್ನು ಹಾಕುವ ಮುಖಾಂತರ ನಾವು ಮಣ್ಣನ್ನು ಕೊಳಕು ಮಾಡುತ್ತಿದ್ದೇವೆ. ಬರಿ ಕೊಳಕು ಮಾಡುವುದಲ್ಲದೆ ಬಂಜರನ್ನು ಮಾಡುತ್ತಿದ್ದೇವೆ. ಇಂಥಹ ಭೂಮಿಯನ್ನು ಮರಳಿ ಮಾತೃವಾಗಿಸಬೇಕು ಅಂದರೆ ಅದಕ್ಕಿರುವ ಒಂದೆ ದಾರಿ ಪ್ರಾಣಿಗಳ ತ್ಯಾಜ್ಯ ಹಾಗು ನೈಸರ್ಗಿಕ ಗೊಬ್ಬರಗಳಿಂದ ಸಾಂಪ್ರದಾಯಿಕವಾಗಿ (ವೈಜ್ಞಾನಿಕತೆಯನ್ನು ಬದಿಗಿಟ್ಟು) ಇಳೆಯನ್ನು ಫಲವತ್ತು ಮಾಡಿದಾಗ ಮಾತ್ರ ಮಳೆ ಬಿದ್ದರೆ ಯೋಗ್ಯವಾಗುವುದು.

ಭೂಮಿಗೆ ಮಾತೃಸ್ಥಾನ ಕೊಟ್ಟಿದ್ದೇವೆ ಏಕೆಂದರೆ ಅವಳು ಜನನಿ ಕೊಟ್ಯಾಂತರ ಜೀವರಾಶಿಗಳು ವೃಕ್ಷವರ್ಗಗಳು ಜನಿಸಿರುವುದು ಇವಳ ಅಂತರಾಳದಿಂದಲೆ ಇವಳಿಲ್ಲದೆ ಬೇರೆಲ್ಲೂ ಜಾಗವಿಲ್ಲ. “ಇಳೆಯಲ್ಲಿ ಮಳೆ, ಮಳೆಯಿಂದ ಬೆಳೆ”

ಅದಕ್ಕೂ ಮುಖ್ಯವಾಗಿದ್ದು ಮಳೆ ಅಥವಾ ಭೂಮಿಯೊಡಲಿನ ನೀರು ಇವುಗಳನ್ನು ಉಪಯೋಗಿಸಿಕೊಂಡೆ ಧರೆಯೊಡಲಿಂದ ಬೀಜ ಮೊಳಕೆಯಾಗಿ ಬೆಳೆದು ಮನುಜನ ಹಸಿವಿನ ದಾಹ ಇಂಗಿಸಿ ಅವನ ಪೋಷಣೆಗೆ ಕಾರಣವಾಗಿರುವುದು.

ಫೋಟೋ ಕೃಪೆ : istockphoto

ಮುಖ್ಯವಾಗಿ ಮಣ್ಣಿನಲ್ಲಿ ಇಂಗಾಲ ಸಾರಜನಕ ರಂಜಕ ಇವುಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳು ನೈಸರ್ಗಿಕವಾಗಿ ಮಳೆಯಿಂದ ಭೂಮಿಯಲ್ಲಿ ಸತ್ತ ದೇಹಗಳಿಂದ ಸಸ್ಯವರ್ಗದ ಎಲೆಗಳಿಂದ ತಂತಾನೆ ರೂಪುಗೊಳ್ಳುತ್ತದೆ. ಇದೆ ಪ್ರಕೃತಿಯ ಗುಟ್ಟು. ಎರೆಹುಳುಗಳು ಕೂಡ ಮಣ್ಣನ್ನು ಸಂರಕ್ಷಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದಲೆ ಎರೆಹುಳುವನ್ನು ಮಣ್ಣಿನ ಹೃದಯ ಭಾಗ ಎನ್ನುವರು.

ಭೂತಾಯಿ ಬಹಳ ಬುದ್ದಿವಂತೆ ಮಾನವನ ಮೆದುಳಿಗಿಂತಲೂ ಅಧಿಕ ಬುದ್ದಿವಂತೆ. ಮೆದುಳಿರುವ ಮಾನವ ತಪ್ಪು ಮಾಡಿದರೂ ವಸುಂದರೆ ಯಾವತ್ತು ತಪ್ಪು ಮಾಡಿಲ್ಲ ರೈತ ಯಾವ ಬೀಜ ಬಿತ್ತುವನೋ ಅದೇ ಬೀಜ ಹುಟ್ಟುವುದು ತೊಗರಿ ಹಾಕಿ ಹುರುಳಿ ಬೆಳೆಯಲಾಗದು‌ ಇದೇ ಭೂಮಿಯ ರಹಸ್ಯ.

ಎಲ್ಲದಕ್ಕೂ ಇತಿಮಿತಿ ಇದೆ ಅಧಿಕವಾದರೆ ಅದೇ ಅವನತಿ ಭೂಮಿಯ ವಿಷಯದಲ್ಲೂ ಅದೇ ಆಗಿದೆ ಭೂಮಿಗೆ ಅಯಾ ಜಾಗಕ್ಕೆ ಅನುಗುಣವಾಗಿ ಇಂತಿಷ್ಟು ಇಳುವರಿ ಪಡೆಯಬೇಕಿದೆ. ಭೂಮಿಯ ಸತ್ವ ಹೆಚ್ಚಾಗಬೇಕಾದರೆ “ಅವಳ ಒಡಲಿಗೆ ಪ್ರಾಣಿಗಳ ಗೊಬ್ಬರ ಸಸ್ಯಗಳ ಗೊಬ್ಬರ ನೀರು ಬಡಿಸಿದರೆ ಸಾಕು ಆದರೆ ಅಧಿಕ ಇಳುವರಿಯ ಆಸೆಗೆ ಮಾನವ ರಾಸಾಯನಿಕ ಗೊಬ್ಬರವನ್ನು ಬೊಗಸೆಯಲ್ಲಿ ಬಾಚಿ ಸುರಿಯುತ್ತಿದ್ದಾನೆ”. ಪ್ರಕೃತಿಯನ್ನು ವಿಕೃತಿ ಮಾಡಲು ಹೊರಟಿರುವ ಮಾನವನ ಈ ಮೊದಲ ಹೆಜ್ಜೆಯೆ ಅಂತಿಮ ಹೆಜ್ಜೆ ಕೂಡ ಆಗಿರುವುದರಲ್ಲಿ ಯಾವುದೆ ಸುಳ್ಳಿಲ್ಲ.

ಒಂದೊಂದು ಪ್ರದೇಶಕ್ಕೆ ತನ್ನದೆ ಆದ ಪ್ರಾಣಿವರ್ಗವಿದ್ದು ಆ ‘ಪ್ರಾಣಿಯ ಗೊಬ್ಬರ ಮಣ್ಣಿನ ಪ್ರಾಣವಾಗಿರುತ್ತದೆ’. “ಯಾವಾಗ ಆ ಪ್ರಾಣಿಯೇ ಹತ್ಯೆಯಾದರೆ ಹಂತಹಂತವಾಗಿ ಆ ಮಣ್ಣು ಕೂಡ ಹತವಾಗುತ್ತದೆ” ನಮ್ಮ ನೆಲದ ಗೋವುಗಳು ಮಾನವ ವಿಕೃತ ಹಸಿವಿನ ದಾಹಕ್ಕೆ ಬಲಿಯಾಗಿ ಭೂತಾಯಿಯ ದಾಹ ಹೆಚ್ಚಾಗಿದೆ. ಮಣ್ಣಿಯಲ್ಲಿ ಸತ್ವವಿಲ್ಲ ಬೆಳೆಯಲ್ಲಿ ಪೌಷ್ಟಿಕತೆ ಇಲ್ಲ ಇದುವೆ ವಿಪರ್ಯಾಸ.

ಫೋಟೋ ಕೃಪೆ : k12digest

ಮನುಜ ಮಣ್ಣನ್ನು ಕೊಳಕು ಎನ್ನುತ್ತಾನೆ. ಮಕ್ಕಳು ಆಟವಾಡುವಾಗ ಮೈ ಹಾಗು ಕೈಗಳಿಗೆ ಮಣ್ಣಾದರೆ ಕೊಳಕು ಎನ್ನುತ್ತಾನೆ.

ಈ ಮಣ್ಣು ಕೊಳಕೆ? ಮೊಳಕೆ ಬರುವುದೆ ಈ ಕೊಳಕಿಂದಲೆ ಅಲ್ಲವೆ?

ಸಸ್ಯಗಳ ಅಹಾರದ ಮೂಲವೇ ಮಣ್ಣಾಗಿರುವಾಗ ಈ ಮಣ್ಣು ಕೊಳಕಾಗಲು ಸಾಧ್ಯವಿಲ್ಲ. ಮನುಜನಿಗೆ ಒಂದಿಷ್ಟು ಚರ್ಮ ವ್ಯಾಧಿಗಳಿಗೆ ಮಣ್ಣಿನ ಲೇಪನ ಮಾಡಿಸುತ್ತಾರೆ. ಮಣ್ಣನ್ನ ಕೊಳಕೆನ್ನುವವರು ಮನಸ್ಸೆ ಕೊಳಕಲ್ಲದೆ ಬೇರೇನು?

ಭೂಮಿಗೆ ಅನ್ನಪೂರ್ಣೇಶ್ವರಿ ಎನ್ನುವರು ಏಕೆಂದರೆ ಇವಳು ಅಕ್ಷಯ ಪಾತ್ರೆ ಈ ಪಾತ್ರೆಯ ಸದುಪಯೋಗ ಪಡೆಯದೆ ನಾವು ಅಕ್ಷಯ ಪಾತ್ರೆಯನ್ನೆ ಭಕ್ಷಿಸಲು ನಿಂತಿದ್ದೇವೆ. ಅಧಿಕ ಇಳುವರಿ ನಿಟ್ಟಿನಲ್ಲಿ ಅಕ್ಷಯ ಪಾತ್ರೆಯನ್ನೆ ಮೆಟ್ಟಿ ನಾಶಮಾಡಿದ್ದೇವೆ. ಇದೇ ರೀತಿ ಮಾನವ ರಾಸಯನಿಕ ಗೊಬ್ಬರಗಳನ್ನು ಬಳಸಲು ಮುಂದುವರೆಸಿದರೆ ಇನ್ನು ಐದು ವರ್ಷಗಳಲ್ಲಿ ೩೫% ಕೃಷಿಯೋಗ್ಯವಲ್ಲದ ಭೂಮಿಯಾಗುತ್ತದೆ ಹಾಗೆ ಮುಂದುವರೆದು ೨೦ ವರ್ಷದ ನಂತರ ೪೦% ಭೂಮಿ ನಲವತ್ತು ವರ್ಷಗಳ ನಂತರ ೬೦% ಭೂಮಿಯ ಕೃಷಿಯೋಗ್ಯವಲ್ಲದ ಭೂಮಿಯಾಗುತ್ತದೆ.
ಪರಿಹಾರ: ರಾಸಾಯನಿಕ ಗೊಬ್ಬರಗಳಿಂದ ದೂರ ಇದ್ದು ಮಣ್ಣಿನ ರಕ್ಷಣೆ ಮಾಡಲೇ ಬೇಕು. ಭೂಮಿಗೆ ಪಶುಪಕ್ಷಿಗಳ ಗೊಬ್ಬರ ಉಣಿಸಲೇಬೇಕು. ಕೃಷಿ ತಜ್ಞರ ಮನದಾಳದ ಮಾತುಗಳು “ಭೂಮಿಗೆ ಜೀವಾಮೃತ ಬೀಜಾಮೃತ ಬಡಿಸಿದರೆ ಸಾಕು ರಾಸಾಯನಿಕ ಗೊಬ್ಬರಕ್ಕಿಂತಲು ಅಧಿಕ ಇಳುವರಿ ಪಡೆಯಬಹುದು” ರೈತರಿಗೆ ಆದಷ್ಟು ತಿಳುವಳಿಕೆ ಕೊಡುವುದು ವರ್ಷದಲ್ಲಿ ಒಂದೆ ಬೆಳೆಗೆ ಜೋತು ಬೀಳದೆ ಒಮ್ಮೆ ಏಕದಳ ಮತ್ತೊಮ್ಮೆ ದ್ವಿದಳ ಬದಲಾಯಿಸುತ್ತಿರಬೇಕು. ದ್ವಿದಳ ಧಾನ್ಯಗಳ ಎಲೆಗಳು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತವೆ. ಆದಷ್ಟು ಎರೆಹುಳುಗಳ ಗೊಬ್ಬರ ಹಾಕಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು.

ರೈತರು ಪ್ರಾಚೀನ ಕಾಲದಲ್ಲಿ ಜಮೀನಿನನಲ್ಲಿ ಬೆಳೆದ ಧಾನ್ಯಗಳನ್ನು ಮಾತ್ರ ಕತ್ತರಿಸಿ ಉಳಿದ ಹುಲ್ಲಿನ ತೆಂಡೆ ಅಥವಾ ಎಲೆಸಹಿತವಾಗಿ ಸಸ್ಯಗಳನ್ನು ಹಾಗೆ ಬಿಟ್ಟು ಉಳುಮೆ ಮಾಡುತಿದ್ದರು ಇದರಿಂದ ಭೂಮಿಯ ಫಲವತ್ತತೆ ದುಪ್ಪಟವಾಗಿ ಮುಂದಿನ ಬೆಳೆಯು ಹುಲಸಾಗಿ ಬೆಳೆದು ಅಪಾರವಾದ ಇಳುವರಿ ಸಿಗುತ್ತಿತ್ತು. ಅಲ್ಲಿ ರೈತ ಉಂಡು ಭೋಗಿಯಾಗಿ ನಿರೋಗಿಯಾಗಿ ಜೀವನ ಮಾಡುತ್ತಿದ್ದ.

ಫೋಟೋ ಕೃಪೆ : foodnavigator-asia

ಒಂದು ನಾಟಿಹಸು ಮನೆಯಲ್ಲಿದ್ದರೆ ಸುಮಾರು ಐದು ಎಕ್ಕರೆಗೆ ಸಮೃದ್ಧವಾಗಿ ಗೊಬ್ಬರವನ್ನು ಒದಗಿಸುತ್ತದೆ. ಅದನ್ನು ವೈಜ್ಞಾನಿಕವಾಗಿ ಬಳಸಬೇಕು ಅಂದರೆ ಭೂಮಿಗೆ ಸಗಣಿ ಗೊಬ್ಬರವನ್ನು ನೇರವಾಗಿ ಹಾಕದೆ. ಅದನ್ನು ಪ್ರತಿದಿನ ಒಂದು ಕಡೆ ಶೇಕರಿಸಿ ಸುಮಾರು ಆರು ತಿಂಗಳವರೆಗೂ ಅದೇ ಜಾಗದಲ್ಲಿರಿಸಿ ಅದಕ್ಕೆ ಕೆರೆಯ ಎರೆಮಣ್ಣು ಅಥವಾ ಕಪ್ಪುಮಣ್ಣನ್ನು ಜೊತೆಗೆ ಬಹಳ ವರ್ಷಗಳ ಬದುವಿನ ಮಣ್ಣನ್ನು ಹಾಕಿ ಮಿಶ್ರಣ ಮಾಡಿ ಜಮೀನಿಗೆ ಉಣಬಡಿಸಬಹುದು ಇದರಿಂದಲೂ ಕೂಡ ಉಳುವ ಧರೆ ಭರ್ಜರಿಯಾಗಿ ಫಲವತ್ತತೆ ಹೊಂದುತ್ತದೆ.

ರೈತ ದೇಶದ ಬೆನ್ನೆಲುಬು ಭೂಮಿ ರೈತನ ಬೆನ್ನೆಲುಬು.

“ಉಳಿದರೆ ಫಲವತ್ತತೆ ಭೂಮಿಯಲ್ಲಿ ಉಳಿವುದು ಜೀವನ ಧರೆಯಲ್ಲಿ”

ಧರೆಗೆ ಬರೆ ವಸುಂಧರೆಯ ಒಡಲು ತಾಯಿಯ ಮಡಿಲಿಗಿಂತಲೂ ಶ್ರೇಷ್ಟವೆಂಬುದು ಸೂರ್ಯಚಂದ್ರರಷ್ಟೆ ಸತ್ಯ. ಮನುಜ ಜನಿಸಿ ಒಂದೆರಡು ವರ್ಷಗಳು ತಾಯಿಯ ಹಾಲು ಕುಡಿದರೆ ತಾನು ಮಡಿವವರೆಗೂ ಭೂ ತಾಯಿಯ ಗರ್ಭದಿಂದ ಬೆಳೆದ ದವಸ ಧಾನ್ಯಗಳನ್ನೆ ಉಣ್ಣುವುದು ಜೊತೆಗೆ ಭೂತಾಯಿಯ ಅಂತರಾಳದ ಅಂತರ್ಜಲವನ್ನೆ ಕುಡಿಯುವುದು. ಇಳೆಗೆ ಮಳೆ ಬಂದು ತಣಿದು ನೈಸರ್ಗಿಕ ಹಾಗು ಪ್ರಾಣಿಗಳ ಸಗಣಿ ಗೊಬ್ಬರದ ಜೊತೆಗೆ ಸ್ವಾಭಾವಿಕವಾಗಿ ಹದಮಾಡಿದ ಉಳುಮೆ ಭೂಮಿಗೆ ರೈತ ಬಿತ್ತನೆ ಮಾಡಿದಾಗ ಬರುವ ಇಳುವರಿ ಪ್ರಕೃತಿ ನಿಯಮ ಹಾಗು ಆರೋಗ್ಯಕರ.

ಮನುಜ ಅಧಿಕ ಇಳುವರಿಯಾಸೆಗೆ ತನ್ನ ಬಳಿ ಇರುವ ಹಣವನ್ನು ಸುರಿದು ರಾಸಾಯನಿಕ ಅಥವಾ ಕೃತಕ ಗೊಬ್ಬರ ಹಾಕಿ ಅಸಂಪ್ರದಾಯಿಕವಾಗಿ ಇಳುವರಿ ಪಡೆದು ಹಣ ಮಾಡಿಕೊಂಡು ಶೋಕಿ ತೋರಿಸುತ್ತಿರುವುದು ನಿಸರ್ಗಕ್ಕೆ ವಿರುದ್ಧವಾಗಿ ನಿಸರ್ಗವೆಂಬ ಯಾರದ್ದೊ ದುಡ್ಡಿನಲ್ಲಿ ಜಾತ್ರೆಯ ಆನಂದ ಅನುಭವಿಸುತ್ತಿದ್ದಾನೆ.

ಮಿತಿ ಮೀರಿದ ವೈಜ್ಞಾನಿಕತೆಯಿಂದ ವಾಹನಗಳು ಕಾರ್ಖಾನೆಗಳು ಇನ್ನಿತರ ವಸ್ತುಗಳಿಂದ ಜಲ ಮಾಲಿನ್ಯ ವಾಯು ಮಾಲಿನ್ಯ ಶಬ್ದ ಮಾಲಿನ್ಯಗಳು ಉಂಟಾಗಿ ಭೂಮಿಯ ಓಜೋನ್ ಪದರವು ರಂದ್ರವಾಗುವ ಮಟ್ಟಕ್ಕೆ ಭೂಮಿಯಲ್ಲಿ ಶೋಕಿ ಮೆರೆದಿದ್ದೇವೆ. ಜಾಗತಿಕ ತಾಪಮಾನ ಹೆಚ್ಚಾಗಿ ಹಿಮಾಚ್ಛಾದಿತ ಪ್ರದೇಶಗಳು ಕರಗಿ ನೀರಾಗಿ ಸಮುದ್ರ ಸೇರಿ ಒಂದಿಲ್ಲೊಂದು ಅನಾಹುತ ಕಟ್ಟಿಟ್ಟ ಬುತ್ತಿ.

ನಮ್ಮ ಸಂಪತ್ತೆ ಅರಣ್ಯಗಳು ಇಂತಹ ಅರಣ್ಯಗಳನ್ನು ಹಂತಹಂತವಾಗಿ ಕಡಿದು ಕೃಷಿ ಭೂಮಿ ವಿದ್ಯುತ್ ಕಂಬಗಳ ಅಳವಡಿಕೆ ರೆಸರ್ಟ್ ಕಟ್ಟಡಗಳು ಹೀಗೆ ಹಲವು ಸಾವಿರಾರು ಶೋಕಿ ಜಾಗಗಳಾಗಿ ಜಾತ್ರೆ ಮಾಡಿ ನಮ್ಮ ಅಳಿವನ್ನು ನಾವೆ ತಂದು ಕೊಂಡಿದ್ದೇವೆ.

ಪೂರಕವಾಗಿ ನನ್ನ ಕವನ ನಿಮಗಾಗಿ ಅರ್ಪಿಸಿಕೊಳ್ಳಿ.

ಫೋಟೋ ಕೃಪೆ : screeble

ಬರದ ಬವಣೆ

ಬಡಿದು ಅಡವಿಯನ್ನು
ಕಟ್ಟಿದೆವು ಅರಮನೆಯನ್ನು
ಕಡಿದು ಸಿಕ್ಕಸಿಕ್ಕ ಮರಗಳನ್ನು
ತುಂಡರಸಿದ ನೆನಪು ಮರೆಯಾಗದಿನ್ನು

ಹೋದ ಮಳೆಯ ನೆನಪು
ಬರಿ ಬಿಸಿಯು ಇಲ್ಲ ತಂಪು
ಬಿರಿದ ವಸುಂದರೆಯ ಒಡಲು
ಬರಿ ದಗೆಯೆ ಎಲ್ಲೆಲ್ಲೂ ನೋಡಲು

ಕಾಣದಾಯಿತು ಕರಿಮೋಡ
ಬರಿದಾಯಿತು ಆಗಸವು ನೋಡ
ಬತ್ತಿದಳು ಅಂತರ ಗಂಗೆ
ಮನುಜ ಮರಗಳ ನುಂಗೆ

ಬಂದು ಮೆಟ್ರೊ ಮೇಲ್ಸೇತುವೆಯು
ಎರಡು ಮಾರ್ಗದ ದಾರಿಯು
ಧರೆಗುರುಳಿದ ಮರಗಳ ಪರಿಯು
ಮಳೆ ಹೋಗಿ ಮರಗಳ ಪಳೆಯುಳಿಕೆಯು

ತುಂಬಿ ತುಳುಕುವ ಜಲದಿ
ಒಡಲು ಮೂಲದಲೆ ಬಿರಿದಿ
ಕುರುಹುಗಳು ಚಿತ್ರದಲೆ ಉಳಿದಿ
ಪಠ್ಯ ಪಾಠದಲಿ ಮೂಡಿದೆ

ಊರು ಕೇರಿಯು ಬೆಳೆದು
ನಗರ ಪಟ್ಟಣವಾಗಿ ನಿಂದು
ಕಾಡುಮೇಡುಗಳೆ ಮಡಿದು
ಬರಿ ಕಾಂಕ್ರೀಟ್ ಕಾಡುಗಳೆ ನೋಡಿದು

ಬರದೆ ಕರಿಮೋಡಗಳ ಮುಗಿಲು
ವಸ್ತುವೆಲ್ಲವು ದಗೆಯಲಿ ಸುಡಲು
ಬರದು ಮಳೆಹನಿಗಳ ಗೊಂಚಲು
ವಿನಾಶ ಜಗವು ಬಿಸಿಯಲಿ ಮುಳುಗಲು

ಮುಗಿದು ದವಸದ ಕಣಜ
ಬರಿದಾಗಿ ಬರದಲಿ ಮನುಜ
ಹಸಿವು ಕಂಡಾಗ ಸಹಜ
ಉಳಿಸಿಕೊಳ್ಳಬೇಕಿತ್ತು ಕಾಡುಗಳ ನಿಜ

ಅರಿವು ಮೂಡಿದ ಹೊತ್ತು
ಸಮಯವು ಮುಗಿದಿತ್ತು
ಮೊದಲೆ ಯೋಚಿಸಬಹುದಿತ್ತು
ಆಗ ಜಗವು ಕಂಗೊಳಿಸುತ್ತಿತ್ತು

ಕಾಡುಗಳು ನಮಗೆ ಸಂಪತ್ತು
ಅಳಿದರೆ ಖಂಡಿತ ಆಪತ್ತು
ಹೆಚ್ಚೆತ್ತು ನಡೆಯುವ ಹೊತ್ತು
ಬೆಳೆಸುವ ಕೈ ಜೋಡಿಸಿ ಅರಣ್ಯ ನಮ್ಮ ಸ್ವತ್ತು


  • ಚನ್ನಕೇಶವ ಜಿ ಲಾಳನಕಟ್ಟೆ

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW