ಓದು…ಓದು..ಅಂತ ಎಲ್ರು ಹೇಳಿದ್ದಕ್ಕೆ ಊರೂರು ಸುತ್ತಿ ಓದಿದ ಮಹಾನ್ ಸಾಧಕರು ನಾವು. ನಾನು ಹೆಜ್ಜೆ ಇಟ್ಟ ಕಾಲೇಜಿನ ದಂತಕತೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ, ತಪ್ಪದೆ ಓದಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ…
ಧಾರವಾಡದಲ್ಲಿ ಬಿಎ ಪ್ರಥಮ ವರ್ಷ ಕರ್ನಾಟಕ ಕಾಲೇಜಿನಲ್ಲಿ ಮಾಡಿದ್ದೂ ಕೂಡಾ ಒಂದು ಸಣ್ಣ ಕತೆಯಿದೆ. ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಮಾತನ್ನು ಶಿರಸಾವಹಿಸಿ ಪಾಲಿಸಿದವಳು ನಾನು. ಎಲ್ಲಿಯೂ ಕೂಡಾ ನಾನು ಒಂದೇ ಕಡೆ ಓದಲಿಲ್ಲ. ಮೂರು ವರ್ಷದ ಡಿಗ್ರಿಯನ್ನೇ ಬೇರೆ ಬೇರೆ ಕಡೆ ಓದಿದೆ. ಬಿಎ ಪ್ರಥಮ ವರ್ಷ ಕರ್ನಾಟಕ ಕಾಲೇಜ್ ಧಾರವಾಡದಲ್ಲಿ ಖ್ಯಾತ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಕೃಪೆಯಿಂದ ಓದಿದರೆ, ಬಿಎ ಎರಡನೇಯ ಹಾಗೂ ಮೂರನೆಯ ವರ್ಷ ಬೆಂಗಳೂರಿನ ಎನ್ಎಂ ಕೆ ಆರ್ ವಿ ಕಾಲೇಜಿನಲ್ಲಿ ಖ್ಯಾತ ನಟಿ ಲಕ್ಷ್ಮಿ ಚಂದ್ರಶೇಖರ ಅವರ ಕೃಪೆಯಿಂದ ಓದಿದ ಕೀರ್ತಿ ನಮ್ಮದು. ಆದರೆ ಪರೀಕ್ಷೆಯಲ್ಲಿ ಕಷ್ಟಪಟ್ಟುದ್ದು ಮಾತ್ರ ನಾನೆ. ಇದರಲ್ಲಿ ಮಾತ್ರ ನನಗೆ ಯಾರ ಕೃಪಾಕಟಾಕ್ಷೆ ಸಿಗಲಿಲ್ಲ ಎನ್ನುವುದೇ ಬೇಸರ. ಸಿಕ್ಕಿದ್ದರೆ ನನಗೆ exam time ಲ್ಲಿ ಜ್ವರ ಇರುತ್ತಿರಲಿಲ್ಲ.
(ನನ್ನ ನೆಚ್ಚಿನ ಗುರುಗಳಾದ ಲಕ್ಷ್ಮಿ ಚಂದ್ರಶೇಖರ್ ಮೇಡಂ ಅವರೊಂದಿಗೆ ನಾನು)
ಅಪ್ಪನಿಗೆ ಬೆಂಗಳೂರಿಗೆ ವರ್ಗವಾಗಿದ್ದರಿಂದ ಅಪ್ಪ,ಅಮ್ಮ,ಅಣ್ಣ ಎಲ್ಲ ಬೆಂಗಳೂರಿನಲ್ಲಿ ನೆಲೆಸಿದ್ದರು. ನಾನು ಸಪ್ತಪೂರ ಬಾವಿಯಲ್ಲಿ ಒಂದು ರೂಮ್ ಮಾಡಿದ್ದೆ. ದಾಂಡೇಲಿ ಸಂತೋಷ ಕೂಲ್ ಡ್ರಿಂಕ್ಸ್ ಮಾಲೀಕ ಮೋಹನ್ ರಾವ್ ಅವರ ಮಗಳು ಚಿತ್ರಾ ನನ್ನ room mate ಆಗಿದ್ದಳು. ನಾನು ಓದುವುದನ್ನಷ್ಟೇ ಧಾರವಾಡದಲ್ಲಿ ಕಲಿಯಲಿಲ್ಲ, ಬದುಕಿನ ಕಲಿಕೆಯ ಆರಂಭವೂ ಕೂಡಾ ಅಲ್ಲಿಯೇ ಆಯಿತು. ಮೊದಲು ಅನಿವಾರ್ಯವಾಗಿ ಕಲಿಯಬೇಕಾಗಿದ್ದು ಬ್ರಹ್ಮವಿದ್ಯೆ ಅಡುಗೆ ಮಾಡುವುದು. ಟೊಮೇಟೊ ಹೆಚ್ಚಿ ಹುರಿದು ಅದಕ್ಕೆ ಸಾರಿನ ಪುಡಿ, ಉಪ್ಪು, ನೀರು ಹಾಕಿ ಕುದಿಸಿದರೆ ಬ್ಯಾಚುಲರ್ ಸಾರು ರೆಡಿಯಾಗುತ್ತಿತ್ತು. ಅದಕ್ಕೆ ಒಂದು extra item ಕೂಡಾ ಹಾಕುತ್ತಿರಲಿಲ್ಲ. ಅದಕ್ಕೆ ಒಂದು ಅನ್ನ ಮಾಡಿದರೆ ಮುಗಿಯಿತು. ಅದೇ ಮೃಷ್ಟಾನ್ನ ಭೋಜನ. ಮನೆಯಲ್ಲಿದ್ದಾಗ ಅಮ್ಮ ಮಾಡಿದ್ದಕ್ಕೆಲ್ಲ ಹೆಸರಿಟ್ಟು ಕೈಯ್ಯ…ಕೈಯ್ಯ …ಎನ್ನುತ್ತಿದ್ದೆ. ಆದರೆ ಬ್ಯಾಚುಲರ್ ಅಡುಗೆಯಿಂದ ಊಟದ ಬೆಲೆ, ಅಪ್ಪ-ಅಮ್ಮನ ಪ್ರೀತಿ ಸಾಲದಕ್ಕೆ ತರಕಾರಿ ಬೆಲೆ, ತೂಕ, ಅಳತೆ ಎಲ್ಲವನ್ನು ಕಲಿತೆ. ಓದುವುದರಲ್ಲಿ ಒಮ್ಮೊಮ್ಮೆಅಡುಗೆ ಮಾಡುವುದು ಬೇಡ, ತಿನ್ನೋದು ಬೇಡ ಎಂದು ಹಾಗೆ ಉಪವಾಸ ಇರುವುದನ್ನು ಕೂಡಾ ಕಲಿತೆ.
ಇನ್ನೊಂದು ತಮಾಷೆಯ ವಿಷಯವೆಂದರೆ ತರಕಾರಿಯಪ್ಪನ ಜೊತೆ ಜಗಳಾಡೋದನ್ನು ಕೂಡಾ ಇದೇ ಧಾರವಾಡದಲ್ಲೇ ಕಲಿತೆ. ತರಕಾರಿ ಬೆಲೆ ಏನೇ ಹೇಳಲ್ಲಿ ಅವನು ಹೇಳಿದ್ದಕ್ಕಿಂತ ಎರಡು ರೂಪಾಯಿ ಕಮ್ಮಿಯೇ ಕೇಳಬೇಕು ಎನ್ನುವುದು ಮೊದಲೇ mind fix ಮಾಡಿಟ್ಟುಕೊಂಡಿರುತ್ತಿದ್ದೆ. ನನ್ನ ಬೆಲೆಗೆ ತರಕಾರಿ ಕೊಟ್ಟಾಗ ನನ್ನ ಮುಖದಲ್ಲಿ ಮೂಡುತ್ತಿದ್ದ ಮಂದಹಾಸಕ್ಕೆ ಪಾರವೇ ಇರುತ್ತಿರಲಿಲ್ಲ. ಸಣ್ಣ ಸಣ್ಣ ವಿಷಯಗಳಲ್ಲಿ ಖುಷಿಯಾಗಿರುವಂತೆ ಹೇಳಿಕೊಟ್ಟದ್ದು ಇದೇ ಧಾರವಾಡ.
ಫೋಟೋ ಕೃಪೆ : google
ಆದರೆ ನಾನು ಧಾರವಾಡದಲ್ಲಿ ಒಂದು ವರ್ಷವಷ್ಟೇ ಓದಿದೆ. ಅದಕ್ಕೆ ಕಾರಣ ಅಪ್ಪ,ಅಮ್ಮನ ನೆನಪು. ಆಗ ಈಗಿನಂತೆ ಎಲ್ಲರ ಕೈಯಲ್ಲಿ ಮೊಬೈಲ್ ಗಳಿರಲಿಲ್ಲ . ಸಪ್ತಪೂರ ಬಾವಿಯ ಮುಖ್ಯರಸ್ತೆಯಲ್ಲಿ Std ಬೂತ್ ವೊಂದು ಇತ್ತು. ದಿನ ಬೆಳಗ್ಗೆ, ಸಾಯಂಕಾಲ Std booth ನಿಂದ ಅಪ್ಪನಿಗೆ ಕರೆ ಮಾಡಿ ‘ನಾನು ಇಲ್ಲಿರಲ್ಲ, ನಿಮ್ಮ ಜೊತೆ ನೇ ಬೆಂಗಳೂರಲ್ಲಿ ಇರ್ತೀನಿ. ಅಲ್ಲೇ ಓದುತ್ತೇನೆ’ ಎಂದು ಅಳುತ್ತಿದ್ದೆ. ಹಿರಿಯ ಮಗ ಎಂಸಿಎ, ಎರಡನೆಯ ಮಗಳು ಎಂಬಿಎ,ಇನ್ನು ಈ ಮಗಳು ಬರಿ ಪಿಯುಸಿ ಎಂದರೆ ಹೇಗಪ್ಪಾ…ಎನ್ನುವ ಚಿಂತೆ ನನ್ನಪ್ಪನಿಗೆ ರಾತ್ರಿ ಮಲಗದಂತೆ ಮಾಡಿತು. ಬೆಂಗಳೂರ ಕಾಲೇಜ್ ನಲ್ಲಿ ಸೀಟು ಸಿಗೋದು ಅಂದ್ರೆ ಧಾರವಾಡ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಸಿಟ್ಟು ಹಿಡಿದಷ್ಟೇ ಕಷ್ಟ. ಅದರಲ್ಲಿ ಡಿಗ್ರಿ ಮಧ್ಯೆದಲ್ಲಿ ಎಂದರೆ ನೋ ಛಾನ್ಸ್. educated family ಗೆ ದೃಷ್ಠಿ ಬಟ್ಟುಈ ಮಗಳಾದರೆ…?ಎನ್ನುವ ಚಿಂತೆಗೆ ನಮ್ಮಪ್ಪನ ಕೂದಲು ಉದರ ತೊಡಗಿತು. ಆ ಚಿಂತೆಯಲ್ಲಿದ್ದಾಗ ಆಗ ಆಗಮನವಾಗಿದ್ದೆ ನನ್ನ ವಿದ್ಯಾದೇವತೆ ಲಕ್ಷ್ಮಿ ಚಂದ್ರಶೇಖರ್ ಮೇಡಂ. ಎನ್ ಎಂ ಕೆ ಆರ್ ವಿ ಕಾಲೇಜ್ ನಲ್ಲಿ ಸೀಟು ಕೊಡಿಸಿ, ನಾಟಕದಲ್ಲಿ ಪಾರ್ಟು ಕೊಟ್ಟು, ಅಂತೂ ಸ್ಟೇಜ್ ಹತ್ತಿರದ ನಮ್ಮನ್ನು ಸ್ಟೇಜ್ ಮೇಲು ಹತ್ತಿಸಿದ ಗುರುಗಳು. ಅಲ್ಲಿಂದ ನಮ್ಮ ಗಾಢಿ ಯಾವ ಬ್ರೇಕ್ ಇಲ್ಲದೆ ಸಲೀಸಾಗೇ ಸಾಗಿತು, ಮುಂದೆ ಬೆಂಗಳೂರಿನಲ್ಲಿಯೇ ಎಂ ಎ ಕೂಡಾ ಮುಗಿಸಿದೆ, Fully post graduate ಆದೆ. ಕಾರ್ ಸಪ್ತಪೂರ ಬಾವಿ ದಾಟ್ಟುವಾಗ ತಲೆಯಲ್ಲಿ ಇಷ್ಟೆಲ್ಲ ವಿಚಾರಗಳು ಹರಿದಾಡಿದವು.
****
ಕಾರು ಹಳಿಯಾಳ ರಸ್ತೆಯತ್ತ ನುಗ್ಗುತ್ತಿದ್ದಂತೆ ನಮ್ಮ ಎದುರಿಗೆ ಸವದತ್ತಿ ಬಸ್ ಬಂತು. ಆ ಬಸ್ ನ ಹಿಂದೆ ಮತ್ತೊಂದು ಮಧುರ ನೆನಪು ಅಡಗಿದೆ. ಅದನ್ನ ಹೇಳಿ ದಾಂಡೇಲಿಯತ್ತ ಮತ್ತೆ ಬರುತ್ತೇನೆ. ನನ್ನ ಅಜ್ಜಿಯ ಊರು ಸವದತ್ತಿಯಿಂದ ಹೂಲಿ ಗ್ರಾಮ. ಶಾಲೆಗೆ ರಜೆ ಬಂದರೆ ಸಾಕು, ಅಜ್ಜಿ ಮನೆಗೆ ಅಮ್ಮ ಎಳೆದೊಯ್ಯುತ್ತಿದ್ದಳು. ನನಗೆ ಸುತರಾಂ ಹೂಲಿಗೆ ಹೋಗುವುದೆಂದರೆ ಇಷ್ಟವಿರುತ್ತಿರಲಿಲ್ಲ. ಏಕೆಂದರೆ ಬೆಳಗ್ಗೆ ಎದ್ದು ನನಗೆ ಕೈಯಲ್ಲಿ ಚಂಬು ಹಿಡಿದು ಹೋಗುವುದೆಂದರೆ ಅಳು. ಚಂಬು ಹಿಡಿಯಲು ಅಸಿಸ್ಟೆಂಟ್ ಇರುತ್ತಿದ್ದರಾದರೂ ಬೆಳಗ್ಗೆ ಎದ್ದರೆ ಬಲು ಹಿಂಸೆ. ಅದಕ್ಕಾಗಿ ಮನೆಯಲ್ಲಿ ಅತ್ತುಕರೆದು ದೊಡ್ಡ ರಾಮಾಯಣವೇ ಮಾಡುತ್ತಿದ್ದೆ. ಕೊನೆಗೆ ನನ್ನ ಅಮ್ಮ ಮನವನ್ನೊಲಿಸಲು ಗೊಂಬೆ ಕೊಡಿಸುವುದಾಗಿ ಆಮಿಷನ್ ಒಡ್ಡುತ್ತಿದ್ದಳು. ಅದು ಒಂದು ರೀತಿಯಲ್ಲಿ ನಾನು ಹೂಲಿ ಗೆ ಹೋಗಲು ತಗೆದುಕೊಳ್ಳುತ್ತಿದ್ದಂತಹ ಲಂಚವಾಗಿತ್ತು.
(ಸಾಂದರ್ಭಿಕ ಚಿತ್ರ) ಫೋಟೋ ಕೃಪೆ : google
ಅಲ್ಲಿಗೆ ಹೋದ ಮೇಲೆ ಅದೇ ಚಂಬಿಗೆಗೆ ಅಡ್ಜಸ್ಟ್ ಆಗುತ್ತಿದ್ದೆ. ಅಲ್ಲಿಯ ಮಕ್ಕಳೊಂದಿಗೆ ಅಂಗವಾಡಿಗೂ ಹೋಗಿ ಬರುತ್ತಿದ್ದೆ. ಹೀಗೆ ಹಳ್ಳಿಗೆ ಒಗ್ಗಿಕೊಳ್ಳುತ್ತಿದ್ದಂತೆ, ಊರಿಗೆ ವಾಪಾಸ್ ಆಗುವ ದಿನ ಬಂದೆ ಬಿಡುತ್ತಿತ್ತು. ಅಲ್ಲಿಂದ ಹೊರಡುವಾಗ ನಡೆಯುತ್ತಿದ್ದ ಅಮ್ಮ, ದೊಡ್ಡಮ್ಮ ಹಾಗು ಅಜ್ಜಿಯ ಹೈ ಡ್ರಾಮಾ ಈಗಲೂ ನೆನಪಾದರೆ ನಗುಬರುತ್ತೆ…ಬೆಳಗ್ಗೆ ಆರು ಗಂಟೆಗೆ ‘ಊರಿಗೆ ಹೊಂಟೀನಿ ಅಕ್ಕಾ…ಅವ್ವ…ತಮ್ಮ…’ಅಂತ ಶುರುಮಾಡಿದರೆ, ೧೦ ಗಂಟೆಯಾದರೂ ಅಳೋ ಕಾರ್ಯಕ್ರಮ ಮುಗಿಯುತ್ತಿರಲಿಲ್ಲ…ನನಗೆ ‘ಈ ಛರೀಗಿ ಹಿಡಿಯಕ ನಮ್ಮಮ್ಮಂಗ ಈ ಊರೇ ಬೇಕಾ ?’ ಅಂತ ಸಿಟ್ಟು ಬರುತ್ತಿತ್ತು.
ಮನೆಯಿಂದ ಬ್ಯಾಗ್ ಹಿಡಿಯೋಕೆ ಒಬ್ರು, ನನ್ನ ಎತ್ತಕೋಕೆ ಒಬ್ರು, ಅಮ್ಮನ ಕಳಸೋಕೆ ಇಬ್ರು…ಬಸ್ ಸ್ಟಾಂಡ್ ಬರುವಷ್ಟರಲ್ಲಿ ನಮ್ಮ ಹಿಂದೆ ಏನಿಲ್ಲಾಂದ್ರೂ ಆರೇಳು ಜನ ಹಿಂಬಾಲಕರು ಇರುತ್ತಿದ್ದರು.
ಬಸ್ ಯಾವುದೇ ಬರಲಿ ‘ತಂಗಿ… ಮುಂದಿನ ಬಸ್ ಗೆ ಹೋಗಿಯಂತೆ…’ ಎಂತ ಹೇಳಿ ಖಾಲಿ ಇದ್ದ ಬಸ್ ನೆಲ್ಲಾ ಅವರ ಅಕ್ಕಂದಿರು ಕಳಿಸಿ ಬಿಡುತ್ತಿದ್ದರು. ಮುಂದೆ ಬರುತ್ತಿದ್ದ ಬಸ್ ಗಳೆಲ್ಲ ಒಳಗಷ್ಟೇ ಅಲ್ಲ, ಬಸ್ ಮೇಲು ತುಂಬಿ ಬರುತ್ತಿತ್ತು. ಆಗ ಅಮ್ಮನ ಕಡೆಯವರನ್ನೆಲ್ಲಾ ಕಚ್ಚಿ ಹಾಕುವಷ್ಟು ಕೋಪ ನೆತ್ತಿಗೇರುತ್ತಿತ್ತು. ಯಾವ ಬಸ್ ಇಲ್ದೆ, ಮತ್ಯೆಲ್ಲಿ ಇವತ್ತು ಹೂಲಿಯಲ್ಲಿಯೇ ಉಳಿದುಕೊಳ್ಳುವ ಪ್ರಸಂಗ ಈ ಅಕ್ಕಾ ತಂಗಿಯರು ತಂದಿಡುತ್ತಾರೋ ಎನ್ನುವ ಭಯ ಒಳಗೊಳಗೇ ಶುರುವಾಗುತ್ತಿತ್ತು.
ಅಲ್ಲಿ ಬಸ್ ಹತ್ತೋದೇ ಒಂದು ದೊಡ್ಡ ಸರ್ಕಸ್ . ಖಾಲಿ ಬಸ್ ಬಂದರೂ ಬಾಗಿಲಿನಿಂದ ಹತ್ತಲ್ಲೂ ನಮ್ಮಂತವರಿಗೆ ಸಾಧ್ಯವೇ ಆಗುತ್ತಿರಲಿಲ್ಲ, ಅಷ್ಟೊಂದು ನೂಕುನುಗ್ಗಲು ಇರುತ್ತಿತ್ತು.ಆಗ ನನಗೆ ಸ್ಪೆಷಲ್ ಎಂಟ್ರಿ ಆಗುತ್ತಿದ್ದದ್ದೇ ಬಸ್ ನ ಕಿಟಕಿಯಿಂದ. ನನ್ನ ದೊಡ್ಡಮ್ಮನ ಮಕ್ಕಳು ನನ್ನನ್ನು ಬಟ್ಟೆ ಎಸೆದಂತೆ ಕಿಟಕಿಯಲ್ಲಿ ತಳ್ಳಿ ಬಿಡುತ್ತಿದ್ದರು. ನಾನು ಅದರಲ್ಲಿ ಹೋಗಿ ಅಮ್ಮನಿಗೆ ಜಾಗ ಹಿಡಿಯಬೇಕಿತ್ತು. ಆ ಅನುಭವ ಸಿಟಿಯಲ್ಲಿ ಬೆಳೆದ ಯಾವ ಮಕ್ಕಳಿಗೂ ಸಿಗಲು ಸಾಧ್ಯವಿಲ್ಲ. ಅದೊಂದು ರೀತಿಯ ಸೂಪರ್ ವುಮೆನ್ ಎಂಟ್ರಿಯದು…
(ಮುಂದೊರೆಯುತ್ತದೆ)…
- ಶಾಲಿನಿ ಹೂಲಿ ಪ್ರದೀಪ್