‘ನೂರ್‌ ಇನಾಯತ್‌ ಖಾನ್‌’ ಪುಸ್ತಕ ಪರಿಚಯಪತ್ರಕರ್ತ ಹರಿಪ್ರಸಾದ್ ಅವರು ಚಂದ್ರಶೇಖರ್‌ ಮಂಡೆಕೋಲು ಅವರ ನೂರ್‌ ಇನಾಯತ್‌ ಖಾನ್‌ ಪುಸ್ತಕದ ಕುರಿತು ಬರೆದ ಪುಸ್ತಕ ವಿಮರ್ಶೆಯನ್ನು ಓದಿ, ಈ ಪುಸ್ತಕವನ್ನು ಎಲ್ಲರೂ ತಪ್ಪದೆ ಓದಿ…

ಇದೊಂದು ಪುಸ್ತಕ ಪ್ರಕಟಗೊಳ್ಳುವುದಿಕ್ಕೂ ಮೊದಲೇ ಕಾದು ಕುಳಿತಿದ್ದವನು ನಾನು. ಇದು ಗೆಳೆಯ ಬರೆದ ಪುಸ್ತಕ ಎನ್ನುವ ಕಾರಣಕ್ಕಲ್ಲ. ಆತ ನೂರ್‌ ಬಗ್ಗೆ ನೀಡುತ್ತಾ ಬಂದಿದ್ದ ವಿವರಣೆಯ ಕಾರಣಕ್ಕೆ. ಪುಸ್ತಕ ಪ್ರಕಟಗೊಂಡ ಕೂಡಲೇ ಖರೀದಿಸಿದರೂ ತಕ್ಷಣ ಓದಲು ಸಾಧ್ಯವಾಗದೆ ಈಗ ಓದಿ ಮುಗಿಸಿದ್ದೇನೆ. ಹಾಗಾಗಿ ಈ ಬರಹ.

ನೂರ್‌ ಇನಾಯತ್‌ ಖಾನ್‌. ಭಾರತದ ಮೂಲ, ಮಾಸ್ಕೋದಲ್ಲಿ ಜನನ, ಪ್ಯಾರಿಸ್‌ನಲ್ಲಿ ಬಾಲ್ಯ, ಲಂಡನ್‌ನಲ್ಲಿ ಯೌವ್ವನ ಹಾಗೂ ಉದ್ಯೋಗ, ಪ್ಯಾರಿಸ್‌ನಲ್ಲಿ ಶತ್ರುಗಳ ಜತೆ ಸೆಣಸಾಣ, ನಾಝಿಗಳ ದೌರ್ಜನ್ಯಕ್ಕೆ ಸಿಲುಕಿ ನರಳಾಟ, ಡಕಾವೋದಲ್ಲಿ ಅಂತ್ಯಕಾಣುವ ವೇಳೆಯೂ ಆಕೆ ಹೇಳುವ ಮಾತು ‘ಲಿಬರ್ಟಿ’. ವಿಶ್ವಮಾನವತೆಯ ತತ್ವ ಕನ್ನಡಕ್ಕೆ ಹೊಸದಲ್ಲ. ವಿಶ್ವಮಾನವತೆಯನ್ನು ಪಾಲಿಸುತ್ತಲೇ ಶತ್ರುವಿನ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಡೆಸುವ ಅನಿವಾರ್ಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಹೆಣ್ಣುಮಗಳ ಬಗ್ಗೆ ಗೆಳೆಯ ಚಂದ್ರಶೇಖರ್‌ ಮಂಡೆಕೋಲು ಬರೆದಿರುವ ‘ನಾಝಿ ಹೋರಾಟದ ಆರ್ದ್ರ ಕಾವ್ಯ – ನೂರ್‌ ಇನಾಯತ್‌ ಖಾನ್‌’ ಪುಸ್ತಕ ಕನ್ನಡಕ್ಕೊಂದು ಉತ್ತಮ ಕೊಡುಗೆ ಮತ್ತು ಕನ್ನಡದಲ್ಲಿ ಬರಲೇ ಬೇಕಿದ್ದ ಪುಸ್ತಕ.

(ನೂರ್‌ ಇನಾಯತ್‌ ಖಾನ್‌’ ಅವರ ಮುಖಪುಟ)

ಟಿಪ್ಪು ಸುಲ್ತಾನನ ವಂಶವಾಹಿ ಹೊಂದಿದ್ದ ನೂರಳನ್ನು ಗೆಸ್ಟಪೋಗಳು ಬಂಧಿಸುವ ವೇಳೆ ಆಕೆ ‘ಹೆಣ್ಣು ಹುಲಿ’ಯಂತೆ ಅಬ್ಬರಿಸಿದ್ದಳು ಎಂದು ಜರ್ಮನ್ ಅಧಿಕಾರಿಗಳು ವರ್ಣಿಸಿದ್ದು ಅಕಸ್ಮಿಕ ಇರಬಹುದು. ಈ ಹೆಣ್ಣುಹುಲಿಯ ಜೀವನಗಾಥೆಯನ್ನು ಕನ್ನಡಿಗರಿಗೆ ಅತ್ಯಂತ ಮಧುರ ಭಾಷೆಯಲ್ಲಿ ವರ್ಣಿಸಿದ್ದಾರೆ ಚಂದ್ರಶೇಖರ್‌. ಕೇವಲ ನೂರಳಿಗೆ ಮಾತ್ರ ಸೀಮಿತಗೊಳಿಸದೆ ಆಕೆಯಲ್ಲಿ ಅಂಥದ್ದೊಂದು ವ್ಯಕ್ತಿತ್ವ ಬೆಳೆಸಿದ ಅವಳಪ್ಪ ಇನಾಯತ್‌ ಖಾನರ ಬಗ್ಗೆ ಇನಾಯತ ಖಾನರಿಗೂ ಸಂಗೀತದ ಪಾಠದ ಜತೆ ಸೂಫಿ ತತ್ವದ ತಳಹದಿ ಹಾಕಿಕೊಟ್ಟ ಅವರಜ್ಜ ಅಲ್ಲಾ ಭಕ್ಷ್ ಬಗ್ಗೆ ವಿವರವನ್ನು ಒಳಗೊಂಡಿರುವ ಪುಸ್ತಕವಿದು.

ಸಂಗೀತ ಹಾಗೂ ಸೂಫಿ ತತ್ವದ ವಿಚಾರದಲ್ಲೇ ಕೃತಿಯ ಬಹುಭಾಗ ಸಾಗುವಾಗ ಓದುಗನ ಮನಸ್ಸಿಗೊಂದು ಪ್ರಶಾಂತ ಅನುಭವ ಕಟ್ಟಿಕೊಡುವ ಕೆಲಸ ಚಂದ್ರಶೇಖರ್‌ ಮಾಡಿದ್ದಾರೆ. ಯುದ್ಧರಂಗವನ್ನು ನೂರ್‌ ಪ್ರವೇಶಿಸುತ್ತಿದ್ದಂತೆ ಕೃತಿಯಲ್ಲೊಂದು ವೇಗ ಸಿಕ್ಕಿದಂತಾಗುತ್ತದೆ. ನೂರ್‌ ಓಡುವಷ್ಟೇ ವೇಗ, ಶತ್ರುಗಳಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆ ಇದೆಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದಾರೆ. ಹಾಗೆಯೇ ಶತ್ರುವಿನ ಕೈಯಲ್ಲಿ ಸಿಲುಕಿ ನರಕಯಾತನೆ ಅನುಭವಿಸಿ, ಸೂರ್ಯನನ್ನೂ ಕಾಣದ, ಚಂದ್ರನನ್ನೂ ನೋಡದ ಕತ್ತಲ ಕೋಣೆಯಲ್ಲಿ ಆ ಯುವತಿ ಅನುಭವಿಸಿರಬಹುದಾದ ನೋವನ್ನು ನೆನೆದಾಗ ಮನಸ್ಸು ಆರ್ದ್ರವಾಗುತ್ತದೆ. ಇದೇ ಕಾರಣಕ್ಕೆ ಕೃತಿಯನ್ನು ‘ನಾಝಿ ಹೋರಾಟದ ಆರ್ದ್ರ್ಯ ಕಾವ್ಯ’ ಎಂದು ಕರೆದಿರುವುದು ಸ್ಪಷ್ಟ.

ನೂರ್‌ ಇನಾಯತ್‌ ಖಾನ್‌ ಪುಸ್ತಕದ ಲೇಖಕರು ಚಂದ್ರಶೇಖರ್‌ ಮಂಡೆಕೋಲು

ಪತ್ರಕರ್ತನಾಗಿ ಅದರಲ್ಲೂ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದಲೋ ಏನೋ ಈ ಬರಹ ಹೆಚ್ಚು ದೃಶ್ಯಾತ್ಮಕವಾಗಿಯೇ ಕಾಣಿಸಿಕೊಳ್ಳುತ್ತದೆ. ಮನಸ್ಸಿನೊಳಗೆ ಪ್ರತಿ ಘಟನೆಯ ಪ್ರತಿಯೊಂದು ವಿವರ ಅಚ್ಚುಕಟ್ಟಾಗಿ ಮೂಡುತ್ತದೆ. ನಮ್ಮೆದುರು ಘಟನೆಗಳು ನಡೆಯುತ್ತಿರುವಂತೆಯೇ ಇಡೀ ಪುಸ್ತಕದ ಪಯಣ ಸಾಗುತ್ತಿರುವುದು ಚಂದ್ರುವಿನ ಬರಹದ ಹೆಚ್ಚುಗಾರಿಕೆ.

ಇಲ್ಲಿ ಕೇವಲ ನೂರ್‌ ಬಗ್ಗೆ ತಿಳಿಸುವ ಕೆಲಸಕ್ಕೆ ಮಾತ್ರ ಬರಹಗಾರ ನಿಲ್ಲುವುದಿಲ್ಲ. ನೂರಳನ್ನು ಗೌರವಿಸುವ ವಿಚಾರದ ಬಗ್ಗೆಯೂ ಕಳಕಳಿ ಕಂಡುಬರುತ್ತದೆ. ಈ ಕೃತಿ ಕನ್ನಡಕ್ಕೆ ಬಹುಮುಖ್ಯವಾಗಲು ಇನ್ನೊಂದು ಕಾರಣವಿದೆ. ಅದುವೇ ಇಂದಿನ ಜಾತಿ, ಧರ್ಮದ ಸಂಘರ್ಷದ ನಡುವೆ ನೂರ್‌ ಸಾರುವ ಸಂದೇಶ. ನೂರ್‌ ತನ್ನ ಬದುಕಿನಲ್ಲಿ ಪಾಲಿಸಿದ್ದ ಸಂದೇಶ. ಎಲ್ಲಿಯ ಮಾಸ್ಕೋ, ಎಲ್ಲಿಯ ಪ್ಯಾರಿಸ್‌, ಎಲ್ಲಿಯ ಎಸ್‌ಒಇ. ಆದರೆ ಅಲ್ಲೆಲ್ಲಾ ನೂರ್‌ ತನ್ನೊಳಗೆ ಕೊಂಡೊಯ್ದಿದ್ದು ಮಹಾಭಾರತ, ಬುದ್ಧನ ಜಾತಕ ಕಥೆಗಳು, ಸೂಫಿ ಸಿದ್ಧಾಂತ, ವಿಶ್ವಮಾನವತೆ. ಅದಲ್ಲವೇ ಇಂದು ನಮಗೂ ಬೇಕಿರುವುದು. ಇದೇ ಕಾರಣಕ್ಕೆ ನೂರ್‌ ಇನಾಯತ್‌ ಖಾನ್‌ ಪುಸ್ತಕ ಅತ್ಯಮೂಲ್ಯ.


  • ಹರಿಪ್ರಸಾದ್ (ಪತ್ರಕರ್ತರು, ಬರಹಗಾರರು)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW