ಬೆಂಗಳೂರಿನಿಂದ ಧಾರವಾಡ, ಹಳಿಯಾಳ ಹೀಗೆ ಒಂದೊಂದು ಊರು ದಾಟುತ್ತಿದ್ದಂತೆ ಆ ಊರಿನೊಂದಿಗಿನ ನನ್ನ ಒಡನಾಟ ಎಳೆ ಎಳೆಯಾಗಿ ಲೇಖನದ ರೂಪವನ್ನು ತಾಳುತ್ತಿದೆ, ತಪ್ಪದೆ ಓದಿ…
ಹಳಿಯಾಳ ದೇವಸ್ಥಾನಗಳು
ನಾನು ಹಳಿಯಾಳದಲ್ಲಿ ಅಷ್ಟಾಗಿ ಓಡಾಡದಿದ್ದರೂ ಕೆಲವು ನೆನಪುಗಳಿವೆ. ನಾನು ಎಂಟನೇಯ ತರಗತಿ ಓದುತ್ತಿದ್ದೆ, ರಜೆಯಲ್ಲಿ ಅಪ್ಪ ಹಳಿಯಾಳದಲ್ಲಿ ಒಂದು ನಾಟಕದ ಶಿಬಿರವನ್ನು ಆಯೋಜಿಸಿದ್ದರು. ಆ ಸಮಯದಲ್ಲಿ ಒಂದು ವಾರ ಹಳಿಯಾಳದಲ್ಲಿ ಕಳೆದಿದಿದ್ದರಿಂದ ಒಂದಷ್ಟು ಸವಿನೆನಪುಗಳಿವೆ. ಶಿಬಿರಾರ್ಥಿಗಳಲ್ಲಿ ಎಲ್ಲರಿಗಿಂತ ನಾನು ಸಣ್ಣವಳಾದ್ದರಿಂದ ಎಲ್ಲರಿಗೂ ಪ್ರೀತಿಗೆ ಪಾತ್ರಳಾಗಿದ್ದೆ. ಶಿಬಿರದ ಬಿಡುವಿನ ಸಮಯದಲ್ಲಿ ಶಿಬಿರಾರ್ಥಿಗಳೊಂದಿಗೆ ಹಳಿಯಾಳ ಸುತ್ತಿ ಬರುತ್ತಿದ್ದೆ. ಹಳಿಯಾಳ ತಾಲ್ಲೂಕಾದ್ದರಿಂದ ರೈತರ ದೊಡ್ಡ ಮಾರುಕಟ್ಟೆ ಇತ್ತು. ೨೨ ವರ್ಷಗಳ ಹಿಂದೆ ಹಳಿಯಾಳವನ್ನು ಒಂದು ಸುತ್ತಿ ಹಾಕಿದರೆ ಊರು ಅಲ್ಲಿಗೆ ಮುಗಿಯುತ್ತಿತ್ತು. ಅಷ್ಟು ಪುಟ್ಟದಾದ ಊರಾಗಿತ್ತು. ಆದರೆ ಅದೇ ಊರಿಗೆ ಮೊನ್ನೆ ಭೇಟಿ ನೀಡಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ, ಅಷ್ಟುದ್ದಕ್ಕೂ ಹಳಿಯಾಳ ಬೆಳೆದು ನಿಂತಿದೆ.
ಅದು ಮಾನ್ಯ ಮಾಜಿ ಸಚಿವರಾದ ಆರ್ ವಿ ದೇಶಪಾಂಡೆ ಅವರ ಕ್ಷೇತ್ರ. ಹಳಿಯಾಳ ಸಾಕಷ್ಟು ಬೆಳೆದಿದೆ ಎನ್ನುವುದಕ್ಕಿಂತ ದೇಶಪಾಂಡೆ ಅವರ ಕೃಪಾಕಟಾಕ್ಷೆಯಿಂದ ಸಾಕಷ್ಟು ಬೆಳೆಸಿದ್ದಾರೆ ಎಂದರೆ ತಪ್ಪಾಗಲಾರದು. ಇಂಜಿನಿಯರಿಂಗ್ ಕಾಲೇಜ್ ಗಳು, ಆಸ್ಪತ್ರೆಗಳು, ಅಗಲವಾದ ರಸ್ತೆಗಳು ಇತ್ಯಾದಿ ನೋಡಿದಾಗ ಹಳಿಯಾಳ ಸಾಕಷ್ಟು ಬದಲಾಗಿದ್ದನ್ನು ಕಂಡೆ.
ಹಳಿಯಾಳದಲ್ಲಿನ ವಿಶೇಷತೆ ಏನೆಂದರೆ ಅಲ್ಲಿಯ ದೇವಸ್ಥಾನಗಳು. ಜಗತ್ ವಿಖ್ಯಾತವಾಗದಿದ್ದರೂ ಸಾಕಷ್ಟು ವಿಸ್ತಾರವಾದ, ಸುಂದರ, ನೆಮ್ಮದಿ ಕೊಡುವಂತಹ ದೇವಸ್ಥಾನಗಳನ್ನ ನಾವು ಅಲ್ಲಿ ಕಾಣಬಹುದು. ಧಾರವಾಡದಿಂದ ಹಳಿಯಾಳ ಪ್ರವೇಶಿಸುತ್ತಿದ್ದಂತೆ ಬಲಕ್ಕೆ ಹನುಮಾನ ದೇವಸ್ಥಾನ ಸಿಗುತ್ತದೆ. ಹನುಪ್ಪನ ದೇವಸ್ಥಾನ ಎಲ್ಲೇ ನೋಡಿ ಊರ ಆಚೆಯೇ ಇರುತ್ತದೆ. ಹಿರಿಯರು ಹೇಳುವ ಪ್ರಕಾರ ಹನುಮಪ್ಪ ಊರ ಹೊರಗೆ ನಿಂತು ದುಷ್ಟರನ್ನು ಊರೊಳಗೆ ಬರದಂತೆ ಕಾಯುತ್ತಾನೆ ಎನ್ನುವ ನಂಬಿಕೆ. ಈ ಹನುಮಪ್ಪನ ದೇವಸ್ಥಾನ ಯಾವುದೇ ಆಡಂಬರವಿಲ್ಲದೆ ಸುಂದರ ದೇವಸ್ಥಾನವಾಗಿದೆ.
ಇನ್ನೂ ಬೆಳಗಾವಿ ರಸ್ತೆಯತ್ತ ಬಂದಾಗ ಗಣೇಶನ ದೇವಸ್ಥಾನ ಸಿಗುತ್ತದೆ. ಇಂತಹ ದೇವಸ್ಥಾನ ಬೆಂಗಳೂರಿನಲ್ಲಿದ್ದಿದ್ದರೇ ಭಕ್ತಿಗಿಂತ ವಾರದ ಕೊನೆಯಲ್ಲಿ ಪ್ರೇಕ್ಷಣೀಯ ಸ್ಥಳವಾಗಿ ಹೋಗುತ್ತಿತ್ತು. ಅಷ್ಟು ದೊಡ್ಡದಾದ ದೇವಸ್ಥಾನ. ಇಲ್ಲಿನ ಗಣಪ ಚಂದವಾಗಿ ಕಾಣುತ್ತಾನೆ. ಎಷ್ಟೇ ಹೊತ್ತು ದೇವರ ಮುಂದೆ ಕೂತರು ಯಾರು ನಮ್ಮ ಭಕ್ತಿಗೆ ತೊಂದರೆ ಮಾಡುವುದಿಲ್ಲ.
ಇದೇ ಊರಿನಲ್ಲಿ ಪಾಳುಬಿದ್ದ ಕೀಲಾ ಕೋಟೆಯಿದ್ದು, ಅದರ ಹತ್ತಿರವೇ ಮಲ್ಲಿಕಾರ್ಜುನ ದೇವಸ್ಥಾನವಿದೆ. ಹಬ್ಬ ಹರಿದಿನ ಸಂದರ್ಭದಲ್ಲಿ ಭಕ್ತಾದಿಗಳು ಇಲ್ಲಿ ವಿಶೇಷವಾದ ಪೂಜೆಯನ್ನು ಸಲ್ಲಿಸುತ್ತಾರೆ.ಇದು ಪುರಾತನ ಶೈಲಿಯಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ.
ಕೇರಳ ಶೈಲಿಯಲ್ಲಿ ಅಯ್ಯಪ್ಪ ದೇವಸ್ಥಾನವನ್ನು ಕೂಡಾ ಇಲ್ಲಿಯೇ ನೋಡಬಹುದು. ದೇವಸ್ಥಾನದಲ್ಲಿ ನೆಮ್ಮದಿ ಬೇಕೆನ್ನುವರು ಹಳಿಯಾಳಕ್ಕೆ ಬಂದರೆ ಎಲ್ಲಾ ದೇವರ ದರ್ಶನ ಪಡೆಯಬಹುದು. ಇಲ್ಲಿಯಾ ದೇವಸ್ಥಾನಗಳು ಸಾಕಷ್ಟು ವಿಶಾಲವಾಗಿದೆ ಮತ್ತು ಇಲ್ಲಿಯ ದೇವರುಗಳು ದೊಡ್ಡ ಕಾಣಿಕೆಯನೇನು ಬಯಸುವುದಿಲ್ಲ. ಮಂಗಳಾರತಿ ತಟ್ಟೆಯಲ್ಲಿ ಒಂದು ರೂಪಾಯಿ ಹಾಕಿ ಅಥವಾ ಹಾಕದೆ ಬನ್ನಿ, ದೇವರ ಹಾಗೂ ಪುರೋಹಿತರ ಆಶೀರ್ವಾದ ಸದಾ ನಮ್ಮ ಮೇಲೆ ಇದ್ದೆ ಇರುತ್ತೆ. ದೇವರನ್ನು ಕಣ್ತುಂಬಿಕೊಂಡು ಬರಬಹುದು.
ಹಳಿಯಾಳದಲ್ಲಿ ಮತ್ತೊಂದು ಆಕರ್ಷಣೀಯ ದೇಗುಲವೆಂದರೆ ತುಳುಸಾ ಭವಾನಿ ದೇವಸ್ಥಾನ. ಸಾಕಷ್ಟು ಖರ್ಚು ಮಾಡಿ ನಿರ್ಮಿಸಿದ್ದಂತಹ ದೇವಾಲಯವಿದು. ಮಾಜಿ ಸಚಿವ ಮಾನ್ಯ ಆರ್ ವಿ ದೇಶಪಾಂಡೆ ಅವರ ಕನಸ್ಸಿನಲ್ಲಿ ದೇವಿ ಬಂದು ನನಗೆ ಈ ಊರಲ್ಲಿ ನಾನು ನೆಲೆಸಬೇಕು ಎಂದಾಗ, ಮಾಜಿ ಸಚಿವರು ಸ್ವತಃ ಮುತುವರ್ಜಿವಹಿಸಿ ಈ ದೇವಸ್ಥಾನವನ್ನು ಕಟ್ಟಿಸಿದರು ಎಂದು ಅಲ್ಲಿಯ ಸ್ಥಳೀಯರು ಹೇಳುತ್ತಾರೆ. ದೇವಸ್ಥಾನದ ಒಳಗೆ false ceiling ಮರದ ಕಾರ್ವಿಂಗ್ ನಿಂದ ಮಾಡಲಾಗಿದ್ದು, ಮಾರ್ಬಲ್ ಟೈಲ್ಸ್ ಗಳು ಕಾಣಸಿಗುತ್ತವೆ. ಇದು ಒಂದು ರೀತಿಯ ಅದ್ದೂರಿ ದೇವಸ್ಥಾನ ಅಂತಲೇ ಹೇಳಬಹುದು.
(ಹಳಿಯಾಳ ತುಳುಸಾ ಭವಾನಿ ದೇವಸ್ಥಾನ)
ಎಷ್ಟೋ ಜನರಿಗೆ ತುಳುಸಾ ಭವಾನಿ ಎಂದರೆ ಮಹಾರಾಷ್ಟ್ರದಲ್ಲಿರುವ ದೇವಿ ನೆನಪಾಗುತ್ತಾಳೆ. ಆದರೆ ಶ್ರೀಮಂತಿಕೆಯಲ್ಲಿ, ಲಕ್ಷಣದಲ್ಲಿ, ಸೌಂದರ್ಯದಲ್ಲಿ, ಮಹಿಮೆಯಲ್ಲಿ ಯಾವುದರಲ್ಲೂ ಈ ದೇವಿಯೂ ಕಮ್ಮಿ ಇಲ್ಲ. ಹಳಿಯಾಳಕ್ಕೆ ಹೋದಾಗ ತಪ್ಪದೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ, ಇದು ಕೂಡಾ ಮಹಾರಾಷ್ಟ್ರದಲ್ಲಿರುವ ತುಳುಸಾ ಭವಾನಿಯಷ್ಟೇ ಸುಂದರವಾಗಿದೆ.
ಬೆಂಗಳೂರಿಗೆ ಬಂದ ಮೇಲೆ ಭಕ್ತಿ, ದೇವರ ಮೇಲೆ ಗಮನ ಹೆಚ್ಚಾಯಿತು. ಕಾರಣ ನಾನು ಚಿಕ್ಕವಳಿದ್ದಾಗ ಮನೆಯಲ್ಲಿಯೇ ಪೂಜೆ, ಪುನಸ್ಕಾರಗಳನ್ನು ಸ್ವಲ್ಪ ಮಟ್ಟಿಗೆ ಮಾಡುತ್ತಿದ್ದೆ, ಹೊರತು ದೇವಸ್ಥಾನಗಳಿಗೆ ಹೋಗುತ್ತಿದ್ದದ್ದು ಕಮ್ಮಿಯಾಗಿತ್ತು. ಹೋದರು ಕೂಡಾ ನೂಕು ನುಗ್ಗಲಿನಲ್ಲಿ ದೇವರ ದರ್ಶನ ಪಡೆದಿದ್ದೆ ನೆನಪಿಲ್ಲ. ಅದೇ ಬೆಂಗಳೂರಿಗೆ ಬಂದ ಮೇಲೆ ತಿಳಿಯಿತು, ದೇವಸ್ಥಾನಕ್ಕೆ ಹೋಗುವ ಮೊದಲೇ ದೇವರ ವಾರ, ಅಂದಿನ ದಿನದ ವಿಶೇಷತೆ ತಿಳಿದಿರಬೇಕೆಂದು. ಇಲ್ಲಿ ವಾರಕ್ಕೊಂದು ದೇವರಿದ್ದಾರೆ. ಸೋಮವಾರ ಶಿವನ ದೇವಸ್ಥಾನ, ಮಂಗಳವಾರ ದೇವಿ ದೇವಸ್ಥಾನ, ಗುರುವಾರ ರಾಯರ ದೇವಸ್ಥಾನ ಅಥವಾ ಬಾಬಾ ದೇವಸ್ಥಾನ, ಶುಕ್ರವಾರ ಲಕ್ಷ್ಮಿ ದೇವಸ್ಥಾನ, ಶನಿವಾರ ಶನಿ ಮಹಾತ್ಮಾ ದೇವಸ್ಥಾನ. ಹೀಗೆ ದೇವರ ಪಟ್ಟಿಗಳಿವೆ. ನನಗೆ ಊರಲ್ಲಿದ್ದಾಗ ಎಲ್ಲಾ ದೇವರ ದಿನಾವೂ ಒಂದೇ ದಿನವಾಗಿತ್ತು. ಬುಧವಾರ ಮತ್ತು ಭಾನುವಾರ ದೇವರಿಗೆ ವೀಕ್ ಆಫ್ ಏನೋ ಗೊತ್ತಿಲ್ಲ. ಅಂದು ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ನೆಮ್ಮದಿಯಿಂದ ಅಲ್ಲದಿದ್ದರೂ ದೇವರ ಮುಖವನಂತೂ ನೋಡಿ ಬರಬಹುದು.
(ಹಳಿಯಾಳ ತುಳುಸಾ ಭವಾನಿ ದೇವಸ್ಥಾನ false ceiling)
ಇಲ್ಲಿಯವರೆಗೂ ನಾನು ಬೆಂಗಳೂರಿನಲ್ಲಿ ದೇವಸ್ಥಾನಗಳು ಖಾಲಿ ಇದ್ದದ್ದನ್ನು ನೋಡೇ ಇಲ್ಲ.ಜನರಿಂದ ಯಾವಾಗಲು ತುಂಬಿ ತುಳುಕುವ ಇಲ್ಲಿಯ ದೇವಸ್ಥಾನದಲ್ಲಿ ಪಾಪಿಗಳ ಸಂಖ್ಯೆ ಹೆಚ್ಚಿದೆಯೋ, ಅಥವಾ ಎಲ್ಲಾ ಭಕ್ತಾದಿಗಳು ಬೆಂಗಳೂರಿನಲ್ಲಿಯೇ ನೆಲೆಸಿದ್ದರೋ ಗೊತ್ತಿಲ್ಲ. ಇಲ್ಲಿಯ ದೇವರನ್ನು ನೋಡುವುದೇ ದೊಡ್ಡ ಸಾಹಸ. ದೊಡ್ಡ ದೊಡ್ಡ ಕ್ಯೂನಲ್ಲಿ ನಿಂತು ಇನ್ನೇನ್ನು ದೇವರ ಮುಂದೆ ಭಕ್ತಿಯಿಂದ ಬೇಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಪಕ್ಕದವರು ತಳ್ಳಿ ಬದಿಗೆ ತಂದು ನಿಲ್ಲಿಸಿರುತ್ತಾರೆ. ಆ ಗಲಾಟೆಯಲ್ಲಿ ದೇವರಲ್ಲಿ ಏನು ಪ್ರಾರ್ಥಿಸಬೇಕು ಎನ್ನುವುದನ್ನೇ ಮರೆತುಬಿಟ್ಟಿರುತ್ತೇವೆ.
ಆದರೆ ದೇವರು ದಿಂಡರು ಎನ್ನುವವರಿಗೆ ಹೇಳಿ ಮಾಡಿಸಿದ ದೇವಸ್ಥಾನಗಳು ಹಳಿಯಾಳದಲ್ಲಿವೆ, ಅದು ಎಷ್ಟೋ ಜನರಿಗೆ ತಿಳಿದಿಲ್ಲ, ಸಾಧ್ಯವಾದರೆ ಅಲ್ಲಿಗೆ ಭೇಟಿ ನೀಡಿ…
- ದಂಡಕಾರಣ್ಯದಲ್ಲಿ ಹೆಜ್ಜೆ ಗುರುತುಗಳು (ಭಾಗ-೧)
- ದಂಡಕಾರಣ್ಯದಲ್ಲಿ ಹೆಜ್ಜೆ ಗುರುತುಗಳು (ಭಾಗ-೨)
- ದಂಡಕಾರಣ್ಯದಲ್ಲಿ ಹೆಜ್ಜೆ ಗುರುತುಗಳು (ಭಾಗ-೩)
(ಮುಂದೊರೆಯುತ್ತದೆ…)
- ಶಾಲಿನಿ ಹೂಲಿ ಪ್ರದೀಪ್