ಅಮೇರಿಕಾ ಸೇನೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಪುಕ್ಕಟೆ ಸಿಕ್ಕ ವಾಯುಪಡೆಯ ವಿಮಾನಗಳು ಅಘಾನಿಸ್ತಾನದಲ್ಲೇ ಇವೆ.ಪಾಕಿಸ್ತಾನ ಮತ್ತು ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ಕೊಟ್ಟು ಚೀನಾ ವಿಶ್ವದ ನಿದ್ದೆಗೆಡಿಸಿದೆ. ತಾಲಿಬಾನಿನೊಂದಿಗಿನ ಅದರ ಗಳಸ್ಯ ಕಂಠಸ್ಯತನ ಇನ್ನು ಕೆಲವರ್ಷ ಹೀಗೆಯೇ ಮುಂದುವರಿದರೆ ಕಾಬೂಲ್ ನಲ್ಲಿ ಅಣುಬಾಂಬ್ ಗಳು ಕಂಡುಬಂದರೆ ಆಶ್ಚರ್ಯಪಡಬೇಕಾಗಿಲ್ಲ ಲೇಖಕ ಮುಷ್ತಾಕ್ ಹೆನ್ನಾಬೈಲ್ ಅವರ ಸುದೀರ್ಘ ಚಿಂತನಾ ಲೇಖನ. ಮುಂದೆ ಓದಿ…
ಜಗತ್ತು ಸೋತಿದೆ. ರೋಗ ಮತ್ತು ರಾಜಕೀಯ ಒಂದೇ ಕಾಲಕ್ಕೆ ವಕ್ಕರಿಸಿಕೊಂಡು ಜಗತ್ತನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದೆ. ವಿಲಕ್ಷಣವಾದ ಜಾಗತಿಕ ವಿದ್ಯಮಾನವೊಂದರಲ್ಲಿ, ರಾತ್ರಿ ಬೆಳಗಾಗುವುದರೊಳಗೇ ಭಾರತಕ್ಕೊಂದು ಶತ್ರುರಾಷ್ಟ್ರ #ಪಾಕಿಸ್ತಾನಕ್ಕೊಂದು ಮಿತ್ರರಾಷ್ಟ್ರ ಸೃಷ್ಟಿಯಾಗಿದೆ. ಇದು ಕಾಲಕಾಲದ ಜಾಗತಿಕ ರಾಜಕಾರಣದ ಸಹಜ ಪ್ರಕ್ರಿಯೆಯೇ ಆದರೂ ಕೂಡ, ಈ ಬಾರಿಯ ಈ ಪಲ್ಲಟ ಮಾತ್ರ ಭವಿಷ್ಯದ ದಿನಗಳಲ್ಲಿ ವಿಶ್ವದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಎಲ್ಲಕ್ಕಿಂತ ಹೆಚ್ಚು ಆತಂಕಕಾರಿ ವಿದ್ಯಮಾನವೆಂದರೆ, ಈ ಬಾರಿ ದೇಶವೊಂದರ ಆಡಳಿತ ಮಾತ್ರವಲ್ಲ, ಚೀನಾದ ರೂಪದಲ್ಲಿ ವಿಶ್ವದ ಸೂಪರ್ ಪವರ್ ಕೂಡ ಬದಲಾದ ಲಕ್ಷಣವೂ ದಟ್ಟವಾಗಿ ಗೋಚರಿಸುತ್ತಿದೆ. ಸರಿಸುಮಾರು 40 ವರ್ಷಗಳ ಗತ ಅವಧಿಯ ಸುದೀರ್ಘ ಕಾದಾಟದಲ್ಲಿ, ಜಗತ್ತಿನ ಎರಡು ಸೂಪರ್ ಪವರ್ ಗಳಾದ ಸೋವಿಯತ್ ರಷ್ಯಾ ಮತ್ತು ಅಮೇರಿಕಾದ ಪಟಾಲಮ್ಮನ್ನು ತಾಲಿಬಾನ್ ಸೋಲಿಸಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ಹೆಚ್ಚುಕಡಿಮೆ ಕಳೆದ ಒಂದು ದಶಕದ ವಿವಿಧ ರಾಷ್ಟ್ರಗಳ ಆಕ್ರಮಣಕಾರಿ ವಿದೇಶಾಂಗ ನೀತಿ, ಆಂತರಿಕ ಧರ್ಮ ರಾಜಕಾರಣ ಮತ್ತು ಭವಿಷ್ಯದ ಬಗ್ಗೆ ದೂರಗಾಮಿ ಚಿಂತನೆಗಳಿಲ್ಲದ ಉಡಾಫೆಯ ವರ್ತನೆಗಳಿಗೆ ಜಗತ್ತು ಅತಿದೊಡ್ಡ ಬೆಲೆತೆತ್ತಿದೆ. ಅಲ್ ಖೈದಾ, ಐಸಿಸ್, ಸದ್ದಾಂ, ಗದ್ಧಾಫಿ, ಕ್ಯೂಬಾ, ವಿಯೆಟ್ನಾಂ, ಸಿರಿಯ, ಚೆಚೆನ್ಯಾ, ಕೊರಿಯಾ, ಬೋಕೊ ಹರಂನಂತೆ ಇದು ಮಗದೊಂದು ಗುಂಪು- ದೇಶ ಎಂದು ಭಾವಿಸಿ, ರಾಜತಾಂತ್ರಿಕ ಸಮನ್ವಯ ಸಾಧಿಸದೆ, ಸೇನೆಗಳನ್ನಿಟ್ಟೇ ಸಾಧನೆ ಮಾಡಲು ಅಮೇರಿಕಾ ಹವಣಿಸಿದ್ದು ಈ ಸೋಲಿಗೆ ಕಾರಣ.

ಫೋಟೋ ಕೃಪೆ : BBC
ತಾಲಿಬಾನಿನ ಈ ಗೆಲುವು ಭವಿಷ್ಯದ ಜಗತ್ತಿನ ಹಲವು ಸೋಲುಗಳಿಗೆ ಕಾರಣವಾಗಲಿದೆ. ಈ ಎಲ್ಲ ನಾಟಕದ ಸೂತ್ರಧಾರ ಅಮೇರಿಕಾದ ಸೋಗಿನ ಸಹೋದರ ಪಾಕಿಸ್ತಾನ. ಕ್ರಿಕೆಟ್ ನಾಯಕನಾಗಿದ್ದ ಕಾಲದಲ್ಲಿ ವಿಶ್ವದ ಅತೀ ಚಾಣಾಕ್ಷ ನಾಯಕನಾಗಿದ್ದ ಈಗಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್, ರಾಜಕೀಯ ನಾಯಕತ್ವದಲ್ಲೂ ತಂತ್ರ ಕುತಂತ್ರಗಳ ಮೂಲಕ ಇದೀಗ ಜಗತ್ತು ನಿಬ್ಬೆರಗಾಗುವಂತಹ ಆಟವಾಡಿದ್ದಾನೆ. ಕ್ರಿಕೆಟ್ ಲೋಕದಲ್ಲಿದ್ದಾಗ ಬ್ಯಾಟ್ಸ್‌ಮನ್ ಸುತ್ತ ಕ್ಷೇತ್ರ ರಕ್ಷಣೆಯನ್ನು ನಿಯೋಜಿಸುವುದರಲ್ಲಿ ಇಮ್ರಾನ್, ನ ಭೂತೋ ನ ಭವಿಷ್ಯತಿ ಎನ್ನುವಷ್ಟು ನಿಪುಣ ನಾಯಕನಾಗಿದ್ದ. ಇದೀಗ ಜಾಗತಿಕ ರಾಜಕೀಯ ಅಂಗಣದಲ್ಲಿ ಅಮೇರಿಕಾವೆಂಬ ಅಜೇಯ ಬ್ಯಾಟ್ಸ್‌ಮನ್ ಸುತ್ತ ಚೀನಾ, ಇರಾನ್, ಟರ್ಕಿ, ರಷ್ಯಾ, ಕೊರಿಯಾ, ಸಿರಿಯಾ ಬಂಡುಕೋರರು, ಇರಾಕ್ ಬಂಡುಕೋರರು, ಸೌದಿಯ ಅತೃಪ್ತರು, ಲಿಬಿಯಾ, ಈಜಿಪ್ಟ್ ಮುಂತಾದವರನ್ನು ಫೀಲ್ಡರ್ ಗಳಾಗಿ ನಿಲ್ಲಿಸಿ ಅಮೇರಿಕಾವನ್ನು ಕಟ್ಟಿಹಾಕಿದ್ದಾನೆ. ಅಂಗಣದಲ್ಲಿ ಏಕಾಕಾಲಕ್ಕೆ ಸುತ್ತುವರಿದ ಘಟಾನುಘಟಿಗಳನ್ನು ಕಂಡು ಅಮೇರಿಕಾ ಕಂಪಿಸಿದೆ. ತಾಳ್ಮೆ ಕಳೆದುಕೊಂಡು ನುಗ್ಗಿ ಬಾರಿಸಲು ಹೋದಾಗ ಹಿಂದೆ ಕಾದು ನಿಂತಿದ್ದ ಕೀಪರ್ ತಾಲಿಬಾನ್ ಸ್ಟಂಪ್ ಮಾಡಿದೆ. ಹೀಗೆ ಇಮ್ರಾನ್ ಮಾಡಿದ ಬೌಲಿಂಗಿಗೆ ಅಮೇರಿಕಾ ಔಟ್ ಆಗಿ ಪಂದ್ಯ ಕಳೆದುಕೊಂಡಿದ್ದು ಮಾತ್ರವಲ್ಲ, ಈ ಪಿಚ್ ಬಹಳ ಅಪಾಯಕಾರಿ, ನ್ಯಾಟೋದಂತಹ ಪ್ರಬಲ ಬ್ಯಾಟ್ಸ್‌ಮನ್ ಗಳಿದ್ದರೂ ನಿಂತು ಆಡಲಾಗುತ್ತಿಲ್ಲ ಎಂದು ಗೊಣಗುತ್ತಾ, ಇನ್ನೆಂದೂ ಈ ಅಂಗಣದ ಸಹವಾಸವೇ ಬೇಡ ಎಂದು ಅಂಗಣದಲ್ಲಿ ಪ್ಯಾಡ್, ಬ್ಯಾಟ್, ಹೆಲ್ಮೆಟ್ ಎಲ್ಲ ಬಿಟ್ಟೋಡಿದೆ. ಆರಂಭಿಕ ಬ್ಯಾಟ್ಸ್‌ಮನ್ ಸೋವಿಯತ್ ರಷ್ಯಾ ಇದೇ ಪಿಚ್ ನಲ್ಲಿ ತಿಣುಕಾಡಿ ಔಟಾದಾಗಲೇ ಅಮೇರಿಕಾ ಅರಿಯಬೇಕಿತ್ತು. ಆದರೂ ಏನಾದರೂ ಮಾಡುವ ಎಂದು ಒನ್ ಡೌನ್ ಆಗಿ ಆಡಲು ಬಂದು ನಿರಂತರವಾದ ಮಾರಣಾಂತಿಕ ದಾಳಿಗಳಿಗೆ ತುತ್ತಾಗಿದೆ.

ಫೋಟೋ ಕೃಪೆ : india TV news
ಅಫ್ಘಾನಿಸ್ತಾನದಲ್ಲಿ ಕಟ್ಟರ್ ಮೂಲಭೂತವಾದಿ ಸಂಘಟನೆ ತಾಲಿಬಾನನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಕ್ಕೆ ಮುಂದಿನ ಚುನಾವಣೆಯಲ್ಲಿ ಇಮ್ರಾನ್ ಖಾನನ ತೆಹ್ರೀಕ್ ಏ ಇನ್ಸಾಫ್ ಪಾರ್ಟಿ ಪಾಕಿಸ್ತಾನದ ಪ್ರಬಲ ರಾಷ್ಟೀಯ ಪಕ್ಷಗಳಾದ ಮುಸ್ಲಿಮ್ ಲೀಗ್ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮೇಲೆ ಪಾರಮ್ಯ ಸಾಧಿಸುವುದು ನಿಚ್ಚಳವಾಗಿದೆ. ತಾಲಿಬಾನನ್ನು ಅಧಿಕಾರಕ್ಕೆ ತರುವ ಮೂಲಕ ಇಮ್ರಾನ್ ಖಾನ್ ಸದ್ಯದ ಮಟ್ಟಿಗೆ ಪಾಕಿಸ್ತಾನದ ಹೀರೋ ಆಗಿದ್ದಾನೆ. ಈ ಹಿಂದೆ ಅಲ್ಲಿ ಬಹುಕಾಲ ಆಳಿದ ಪ್ರಧಾನಿಗಳಾದ ಬೇನಜಿರ್ ಭುಟ್ಟೋ, ನವಾಜ್ ಷರೀಫ್ ರಂತವರೂ ಮಾಡದ ಅಮೋಘ ಸಾಧನೆಯನ್ನು ಇಮ್ರಾನ್ ಮಾಡಿದ್ದಾನೆ ಎಂಬುದು ಪಾಕಿಸ್ತಾನದವರ ಅಭಿಪ್ರಾಯ. ತಾಲಿಬಾನ್ ಅಧಿಕಾರಕ್ಕೆ ಬರುವಲ್ಲಿ ಇಮ್ರಾನ್ ಖಾನನಿಗೆ ಸಮರ್ಥ ಸಾಥ್ ಕೊಟ್ಟಿದ್ದು ಟರ್ಕಿಯ ಅಧ್ಯಕ್ಷ ತಯ್ಯಿಬ್ ಎರ್ಡೋಗನ್. ಈತ ಕೂಡ ರಾಜಕಾರಣದಲ್ಲಿ ಧರ್ಮವನ್ನು ಗುರಾಣಿಯಾಗಿರಿಸಿಕೊಂಡ ವಾಮಮಾರ್ಗಿ. ಇದೀಗ ತಾಲಿಬಾನಿನ ಗೆಲುವನ್ನು ದೇಶದ ಮುಂದಿನ ಚುನಾವಣೆಯಲ್ಲಿ ತನ್ನ ಗೆಲುವಾಗಿ ಪರಿವರ್ತಿಸಿಕೊಳ್ಳುವ ಹವಣಿಕೆಯಲ್ಲಿದ್ದಾನೆ. ಒಂದು ಕಾಲದ ಪ್ರಪಂಚದ ಜಾತ್ಯತೀತ ಮುಸ್ಲಿಮ್ ರಾಷ್ಟ್ರ ಟರ್ಕಿ, ಇದೀಗ ತಯ್ಯಿಬ್ ಎರ್ಡೋಗನ್ ನಿಂದಾಗಿ ಕಟ್ಟರ್ ವಾದಕ್ಕೆ ಜೋತುಬಿದ್ದಿದೆ. ಕೆಲವರ್ಷಗಳಿಂದ ಟರ್ಕಿ, ಪಾಕಿಸ್ತಾನ ಸೇರಿಕೊಂಡು, ಚೀನಾಕ್ಕೆ ಸೂಪರ್ ಪವರ್ ಆಗುವ ಮಾರ್ಗ ತಾಲಿಬಾನ್ ಎಂಬುದನ್ನು ಮನವರಿಕೆ ಮಾಡಿವೆ. ಇನ್ನು ನೆರೆಯ ಇರಾನ್, ಆಮೇರಿಕಾಕ್ಕೆ ಬಿದ್ದ ಏಟುಗಳು ಮತ್ತು ಅದು ಓಡಿದ ಪರಿ ನೋಡಿ ಇನ್ನಿಲ್ಲದಂತೆ ಸಂಭ್ರಮಿಸುತ್ತಿದೆ. ಅತ್ತ ದಶಕಗಳ ಕಾಲದ ತನ್ನ ಸೇಡನ್ನು ತೀರಿಸಿಕೊಂಡ ರಷ್ಯಾ” ಹೆಂಗಿದೆ ಏಟು? 1980 -90ರ ದಶಕದಲ್ಲಿ ನಮಗೆ ಬಿದ್ದ ಏಟು ನೋಡಿ ನಕ್ಕಿದಿರಿ..ದನ ಕುರಿ ಮೇಯಿಸುವವರಿಗೆಲ್ಲ ಬಂದೂಕು-ಬಾಂಬು ಕೊಟ್ಟು ನಮ್ಮನ್ನ ಓಡಿಸಿದಿರಲ್ಲ. ಅನುಭವಿಸಿ” ಎಂದು ಅಮೇರಿಕಾವನ್ನು ಛೇಡಿಸುತ್ತಿದೆ. ಮಾಸ್ಕೋದಿಂದ ನಿರಂತರ ತಾಲಿಬಾನಿಗೆ ಬೆಂಬಲದ ಮಾತು ಕೇಳಿ ಬರುತ್ತಿದೆ. ಅನಿರೀಕ್ಷಿತ ಮತ್ತು ಆಶ್ಚರ್ಯಕರ ಬೆಳವಣಿಗೆಯಲ್ಲಿ ಅಮೇರಿಕಾದ ಅಂತರಂಗದ ಸಖ ಬ್ರಿಟಿಷ್ ಪ್ರಧಾನಿ ಬೊರಿಸ್ ಜಾನ್ಸನ್ ಕೂಡ, ಈ ಬಾರಿ ತಾಲಿಬಾನ್ ದೇಶವನ್ನು ಚೆನ್ನಾಗಿ ನಡೆಸುವ ನಿರೀಕ್ಷೆ ಇದೆ ಎಂದು ಹೇಳಿಕೆ ಕೊಟ್ಟು ಎಲ್ಲರ ಹುಬ್ಬೇರಿಸಿದ್ದಾರೆ.

ಡೋನಾಲ್ಡ್ ಟ್ರಂಪ್ ಕಾಲಾವಧಿಯಲ್ಲಿ ಟರ್ಕಿ ಮತ್ತು ಪಾಕಿಸ್ತಾನ ಸೇರಿಕೊಂಡು ತಾಲಿಬಾನಿನ ರಾಜತಾಂತ್ರಿಕ ಪ್ರಕ್ರಿಯೆಗಳಿಗೋಸ್ಕರ ಕತಾರ್ ನ ದೋಹಾದಲ್ಲಿ ತಾಲಿಬಾನಿನ ಒಂದು ತಂಡಕ್ಕೆ ಕಛೇರಿ ತೆರೆಸಿಕೊಟ್ಟು, ಅವರಿಗೆ ಅಮೇರಿಕಾದೊಂದಿಗೆ ಮಾತುಕತೆಗೆ ವೇದಿಕೆ ಸೃಷ್ಟಿಸಿವೆ. ಅಮೇರಿಕಾ ಕೂಡ ಅಫ್ಘಾನಿಸ್ತಾನದಲ್ಲಿ ಅಧಿಕಾರ ಹಂಚಿಕೊಂಡು, ರಕ್ಷಣಾ ವೆಚ್ಚ ಕಡಿತಗೊಳಿಸಿಕೊಂಡು ಆಳಿಕೊಂಡಿರುವ ಎಂಬ ನಿರ್ಧಾರಕ್ಕೆ ಬಂದಿತ್ತು. ಮಾತುಕತೆ ಅಧಿಕಾರ ಹಂಚಿಕೆಗೆ ಆಗಿತ್ತೇ ಹೊರತು ಹಸ್ತಾಂತರಕ್ಕಲ್ಲ. ಅಮೇರಿಕದ ಅಧ್ಯಕ್ಷರುಗಳಲ್ಲಿಯೇ, ತುಸು ಹೆಚ್ಚೇ ಪೆದ್ದನಾದ ಸಿನಿಮೀಯ ಶೈಲಿಯ ಟ್ರಂಪ್ ನನ್ನು ಇಮ್ರಾನ್ – ಎರ್ಡೋಗನ್ ಜೋಡಿ ಅಧಿಕಾರ ಹಂಚಿಕೆಯ ನಾಟಕವಾಡಿ ದೊಡ್ಡದಾಗಿಯೇ ದೋಹಾದಲ್ಲಿ ಯಾಮಾರಿಸಿದೆ. ಕತಾರ್ ರಾಜಧಾನಿಯಲ್ಲಿ ರಾಜತಾಂತ್ರಿಕವಾಗಿ ಇಮ್ರಾನ್ ಮತ್ತು ಎರ್ಡೋಗನ್ ಹಣೆದ ಬಲೆಗೆ ಅಮೇರಿಕಾ ಹೀಗೆ ಬಿದ್ದರೆ, ಅತ್ತ ಅಫ್ಘಾನಿಸ್ತಾನದಲ್ಲಿ ಅಮೇರಿಕಾದ ಬಹುಕಾಲದ ನಂಬಿಗಸ್ಥ ಈ ಎರಡು ರಾಷ್ಟ್ರಗಳು, ಅಮೇರಿಕಾದ ಸೇನೆಯ ಮೇಲೆ ತಾಲಿಬಾನಿನ ಸಕಲ ಪ್ರಹಾರಗಳಿಗೆ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿವೆ. ಯಾವುದೇ ಆಹಾರ ಮತ್ತು ಯುದ್ಧ ಸಾಮಗ್ರಿಗಳು ಸುಲಭದಲ್ಲಿ ಅಮೇರಿಕಾ ಸೇನೆಗೆ ದಕ್ಕದಿರುವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ವರ್ಷಗಳಿಂದ ಮಾಡಿವೆ. ತಾಲಿಬಾನಿಗಳನ್ನೇ ಅಫ್ಘಾನ್ ಸೇನೆಯೊಳಗೆ ಸೇರಿಸಿ, ಅಫ್ಘಾನ್ ಮತ್ತು ಅಮೇರಿಕಾದ ಸೇನೆಯ ಸಮಸ್ತ ಚಲನವಲನಗಳ ಮಾಹಿತಿಯನ್ನು ವ್ಯವಸ್ಥಿತವಾಗಿ ಪಡೆದು ದಾಳಿಗಳನ್ನುಗಳನ್ನು ನಡೆಸಿವೆ. ಹೀಗಾಗಿ ದಿನದಿಂದ ದಿನಕ್ಕೆ ಅಫ್ಘಾನಿಸ್ತಾನದಲ್ಲಿ ಅಮೇರಿಕಾದ ಬದುಕು ಅಕ್ಷರಶಃ ನರಕವಾಗಿಬಿಟ್ಥಿತು. ಅಧಿಕಾರವೂ ಬೇಡ, ಅದರ ಹಂಚಿಕೆಯೂ ಬೇಡ. ಎಲ್ಲರೂ ಒಟ್ಟಾಗಿ ಚೀನಾದ ನೇತೃತ್ವದಲ್ಲಿ ತಮ್ಮ ಮೇಲೆ ಮುಗಿಬಿದ್ದಿದ್ದಾರೆ ಎಂಬುದು ಅಮೇರಿಕಾಗೆ ಮನವರಿಕೆಯಾಗುತ್ತಿದ್ದಂತೆ ಕಾಬೂಲಿನಿಂದ ಅವರ ಪಡೆಗಳು ಓಡಲಾರಂಭಿಸಿವೆ.

ದೊಡ್ಡ ದೊಡ್ಡ ಕಣಿವೆ ಗುಡ್ಡಗಳ ನಡುವೆ ಇರುವ ಹೆದ್ದಾರಿಯ ಇಕ್ಕೆಲಗಳಲ್ಲಿ ತಾಲಿಬಾನಿಗಳು ಅಡಗಿ ಕೂತು ಅಮೇರಿಕಾ ಸೇನೆಯ ಮೇಲೆ ನಿರಂತರ ದಾಳಿ ನಡೆಸಿದವು. ಪಾಕ್ ಸೇನೆ, ಐಎಸ್ ಐ, ಇಮ್ರಾನ್, ಟರ್ಕಿ ಮತ್ತು ತಾಲಿಬಾನಿಗಳ ಈ ತಂತ್ರ ಅಮೇರಿಕಾ ಸೇನೆ ಮತ್ತು ಅಫ್ಘನ್ ಸೇನೆಯನ್ನು ಅಕ್ಷರಶಃ ಹೈರಾಣಾಗಿಸಿದೆ. ಸೇನೆಗಳ ಸಮಸ್ತ ಸಹಾಯಕ ವ್ಯವಸ್ಥೆಯ ಸಂಪರ್ಕ ಕಡಿತಗೊಳಿಸಿದ ನಂತರ ಇಮ್ರಾನ್ ,ಚೀನಾವನ್ನು ಸಿಕ್ಕಸಿಕ್ಕಲ್ಲೆಲ್ಲ ವಾಚಾಮಗೋಚರ ಹೊಗಳಿ ಅಟ್ಟಕ್ಕೇರಿಸಿದ. ತಾಲಿಬಾನ್ ನಿಮ್ಮ ಮಾತು ಕೇಳುವ ಹಾಗೆ ಮಾಡುವ ಕೆಲಸ ತನ್ನದು ಎಂಬ ಸಂದೇಶ ಬೀಜಿಂಗಿಗೆ ವ್ಯವಸ್ಥಿತವಾಗಿ ರವಾನಿಸಿದ್ದಾನೆ. ಇಲ್ಲಿಯವರೆಗೆ ಸಣ್ಣ ಕಣ್ಣಿನ ದೇಶದವರಿಗೆ ಮಾತ್ರ ಒಡೆಯನಂತಿದ್ದ ಚೀನಾಗೆ, ದೊಡ್ಡ ಕಣ್ಣಿನ ಅಫ್ಘಾನಿಸ್ತಾನ, ಇರಾನ್, ಟರ್ಕಿ, ಪಾಕಿಸ್ತಾನ ತನ್ನ ಸುಪರ್ದಿಗೆ ಪೂರ್ಣಪ್ರಮಾಣದಲ್ಲಿ ಬಂದಿರುವುದರಿಂದ ಅದು ಇದೀಗ ಹಿಂದೆಂದಿಗಿಂತ ಹೆಚ್ಚು ಉತ್ಸಾಹದಲ್ಲಿದೆ. ತಾಲಿಬಾನಿಗೆ ಮಾನ್ಯತೆ ನೀಡುವ ಮೊದಲ ರಾಷ್ಟ್ರಗಳಲ್ಲಿ ಅದೂ ಒಂದಾಗುವ ಸರ್ವ ಸಾಧ್ಯತೆಗಳು ಇದೀಗ ಗೋಚರಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳಿಂದ ಅಫ್ಘಾನಿಸ್ತಾನದಲ್ಲಿ ಏಕಾಂಗಿಯಾದ ಅಮೇರಿಕಾ ಸೈನಿಕರ ಜೀವನ ನರಕವಾಗಿದ್ದು ಮಾತ್ರವಲ್ಲ, ರಕ್ಷಣಾ ವೆಚ್ಚ ಅತಿಯಾಗಿ ಏರಿಕೆಯಾಗಿ ಅಮೇರಿಕಾದ ಆರ್ಥಿಕತೆಯೆ ಏರುಪೇರಾಗಿದೆ. ಕೊಲ್ಲಿ ರಾಷ್ಟ್ರಗಳ ಮರುಭೂಮಿಯಲ್ಲಿ ಯುದ್ಧ ಮಾಡಿದ ಹಾಗೆ ಕಣಿವೆಗಳ ರಾಷ್ಟ್ರ ಅಫ್ಘಾನಿಸ್ತಾನದಲ್ಲಿ ಮಾಡಲಾಗುವುದಿಲ್ಲ ಎಂಬ ಸತ್ಯದ ಜೊತೆಗೆ, 90ರ ದಶಕದಲ್ಲಿ ಸೋವಿಯತ್ ರಷ್ಯಾ ತಾಲಿಬಾನಿಗಳ ದಾಳಿಗೆ ಯಾಕೆ ಓಡಿತು ಎಂಬುದೂ ಅಮೇರಿಕಾಗೆ ಇದೀಗ ಮನವರಿಕೆಯಾಗಿದೆ. ಮೊದಲು ಬರಾಕ್ ಒಬಾಮ ಅಫ್ಘಾನಿಸ್ತಾನದಿಂದ ಸೇನೆ ಹಿಂದೆ ತೆಗೆಯುವ ಮಾತನಾಡಿದವರು. ನಂತರ ಬಂದ ಪಕ್ಕಾ ವ್ಯಾಪಾರಿ ಮನಸ್ಥಿತಿಯ ಟ್ರಂಪ್ ವಿಪರೀತ ರಕ್ಷಣಾ ವೆಚ್ಚ ಕಂಡೇ ಹೌಹಾರಿ ಸೇನೆ ಹಿಂದೆಗೆಯುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಇದೀಗ ಜೋ ಬೈಡನ್ ಪೂರ್ಣ ಸೇನೆಯನ್ನು ಹಿಂದೆ ಕರೆಸಿಕೊಂಡಿದ್ದಾರೆ. ಈ ಮೂಲಕ ಒಂದೇ ತಿಂಗಳಲ್ಲಿ ಟರ್ಕಿ, ಪಾಕಿಸ್ತಾನ, ಅಫ್ಘಾನಿಸ್ತಾನ ಈ ಮೂರು ರಾಷ್ಟ್ರಗಳು ಭವಿಷ್ಯದ ದಿನಗಳಲ್ಲಿ ಪರಮ ಕಟ್ಟರ್ ರಾಷ್ಟ್ರಗಳಾಗಲು ವೇದಿಕೆ ನಿರ್ಮಾಣವಾದಂತಾಯಿತು.
ಭಾರತದ ಮೋದಿ ಸರ್ಕಾರ ಮತ್ತು ಅಫ್ಘಾನಿಸ್ತಾನದ ಅಮೇರಿಕಾ ಬೆಂಬಲಿತ ಅಶ್ರಫ್ ಗನಿ ಸರ್ಕಾರದ ನಡುವೆ ವಿಪರೀತ ಗೆಳೆತನವಿದೆ. ಭಾರತ ಮತ್ತು ಅಮೇರಿಕಾವನ್ನು ಕೆಳಕ್ಕೆ ತಳ್ಳುವ ಯಾವ ಅವಕಾಶವನ್ನೂ ಚೀನಾ ಬಿಡಲಾರದು. ನೀವು ಬೀಜಿಂಗಿಗೆ ಹೋಗಿ ಕಮ್ಯುನಿಸ್ಟರೊಟ್ಟಿಗೆ ಮಾತನಾಡಿ ಎಂದು ಪಾಕಿಸ್ತಾನ ತಾಲಿಬಾನಿನ ಹೆಗಲ ಮೇಲೆ ಕೈಯಿಟ್ಟು ಉಸುರಿದೆ. ಹಾಗಾಗಿ ಬೀಜಿಂಗ್ ನಲ್ಲಿ ತಾಲಿಬಾನಿಗಳು ಮತ್ತು ಚೀನಿಯರು ಕುಂತು ಮಾತನಾಡಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನದ ನೆಲವನ್ನು ಚೀನಾದ ವಿರುದ್ಧ ಬಳಸಲು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ದೋಹಾದಿಂದ ತಾಲಿಬಾನ್ ಮುಖಂಡರು ಹೇಳುವ ವ್ಯವಸ್ಥೆ ಇಮ್ರಾನ್ ಖಾನ್ ಮಾಡಿದ್ದಾನೆ. ಅಲ್ಲಿಗೆ ಚೀನಾ, ಪಾಕಿಸ್ತಾನ, ಟರ್ಕಿ, ಇರಾನ್ ಮತ್ತು ಶತ್ರುವಿನ ಶತ್ರು ಮಿತ್ರ ಎಂಬ ನೆಲೆಯಲ್ಲಿ ರಷ್ಯಾ, ಉತ್ತರ ಕೊರಿಯಾಗಳ ಒಂದು ದೊಡ್ಡ ಕೂಟ ತಾಲಿಬಾನ್ ಪರ ರಚನೆಯಾಗುವಂತೆ ಇಮ್ರಾನ್ ನೋಡಿಕೊಂಡಿದ್ದಾನೆ. ಅತ್ತ ಅಮೇರಿಕಾದಲ್ಲಿ ಹೊಸತಾಗಿ ಅಧಿಕಾರಕ್ಕೆ ಬಂದ ಡೆಮಾಕ್ರೆಟರಿಗೂ ಅಫ್ಘಾನಿಸ್ತಾನದ ಆಟ ಅಪಾಯಕಾರಿ ಎಂಬ ಅರಿವು ಮೂಡಿದೆ. ಟ್ರಂಪ್ ನ ತಲೆಬುಡವಿಲ್ಲದ ವಿದೇಶಾಂಗ ನೀತಿಯಿಂದಾಗಿ ಟರ್ಕಿ ಮತ್ತು ಪಾಕಿಸ್ತಾನ, ಚೀನಾ,ರಷ್ಯಾ, ಇರಾನ್ ನೊಂದಿಗೆ ಸೇರಿಕೊಂಡಿದ್ದು, ಇದು ಮುಂದುವರಿದರೆ ಭವಿಷ್ಯದಲ್ಲಿ ಪರಿಸ್ಥಿತಿ ಭಯಾನಕವಾಗಲಿರುವ ಸುಳಿವು ಬಿಡೆನ್ ಗೆ ದೊರೆತಿದೆ. ಮೊದಲೇ ಕೊಲ್ಲಿ ರಾಷ್ಟ್ರಗಳ ಪ್ರಜೆಗಳ ಬೆಂಬಲ ಅಮೇರಿಕಾಗೆ ಇಲ್ಲ. ಇನ್ನಷ್ಟು ಎಡವಟ್ಟು ಮಾಡಿಕೊಂಡರೆ ಅಫ್ಘಾನಿಸ್ತಾನದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲೂ ಏಕಾಂಗಿಯಾಗುವ ಅಪಾಯ ನಿಚ್ಚಳವಾದಾಗ, ಸೋಲಾದರೂ ತೊಂದರೆಯಿಲ್ಲ ಅಫ್ಘಾನಿಸ್ತಾನದ ಉಸಾಬರಿ ಬೇಡ ಎಂಬ ನಿರ್ಧಾರಕ್ಕೆ ಅಮೇರಿಕಾ ಬಂದಿದೆ. ಇನ್ನು ವಿಶ್ವಸಂಸ್ಥೆ, ನಾಮಮಾತ್ರ ಲೋಕದ ಮೇಲ್ವಿಚಾರಕ ಅದು. ಒಂದೇ ಒಂದು ವೀಟೋದ ಏಟು ತಡೆಯಲಾರದಷ್ಟು ಅಶಕ್ತತೆ ಅದಕ್ಕಿದೆ. ಕಣ್ಣೆದುರೇ ನಡೆವ ದುರಂತ-ದಾಳಿಗಳ ನಂತರ, ನಡೆದ ಮನೆಗೆ ಬಂದು ಮರುಗಬೇಡಿ ಎಂದಷ್ಟೇ ಹೇಳಬಲ್ಲ ಅಸಹಾಯಕ ಅದು.

ಫೋಟೋ ಕೃಪೆ : Arab News
ಈ ಎಲ್ಲದರ ಮಧ್ಯೆ ಎಲ್ಲರೂ ಗಮನಿಸಬೇಕಾದ ಅಂಶವೇನೆಂದರೆ :
ಕಳೆದ ಹೆಚ್ಚುಕಡಿಮೆ 100 ವರ್ಷಗಳ ಇತಿಹಾಸದಲ್ಲಿ, ಜಗತ್ತು ಆರಂಭದಲ್ಲಿ ಬಹುಕಾಲ ಬ್ರಿಟಿಷರ ಪಾರಪತ್ಯದಲ್ಲಿತ್ತು. ಬ್ರಿಟಿಷರ ಸೂರ್ಯ ಮುಳುಗದ ಸಾಮ್ರಾಜ್ಯದ ಸೂರ್ಯ ಅಸ್ತಂಗತನಾದ ನಂತರ ಇಲ್ಲಿಯವರೆಗೆ ವಿಶ್ವದ ಪಾರುಪತ್ಯ ವಹಿಸಿದ್ದು ಅಮೇರಿಕಾ. ಬ್ರಿಟಿಷರು ಮತ್ತು ಅಮೇರಿಕನ್ನರ ಮೇಲೆ ಅದೇನೇ ಆರೋಪಗಳಿದ್ದರೂ ಕೂಡ, ಸೇನೆ ನಿಯೋಜಿಸಿಯೋ, ಯುದ್ಧ ಮಾಡಿಯೋ, ಕೊಳ್ಳೆಹೊಡೆದೋ, ಸುಳ್ಳು ಹೇಳಿಯೋ, ಸ್ವಂತ ಖರ್ಚಿನಲ್ಲೋ ಅವುಗಳು ಈ ಜಗತ್ತನ್ನು ಕೈಲಾದಷ್ಟರ ಮಟ್ಟಿಗೆ ಸುದೀರ್ಘ ಕಾಲ ಸಮತೋಲನದಲ್ಲಿಡುವ ವ್ಯವಸ್ಥೆ ಮಾಡಿರುವುದನ್ನು ಅಲ್ಲಗಳೆಯಲಾಗದು. ಮೊದಲು ಬ್ರಿಟಿಷರು ತೆರೆಮರೆಗೆ ಸರಿದರು. ಇದೀಗ ಅಮೇರಿಕ ವಿಶ್ವದ ಮೇಲೆ ಹಿಡಿತ ಕಳೆದುಕೊಳ್ಳುತ್ತಿದೆ. ಅಮೇರಿಕಾದ ಸ್ಥಾನಕ್ಕೆ ಇದೀಗ ಚೀನಾ ಬರುತ್ತಿದೆ. ಈಗಾಗಲೇ ಪಾಕಿಸ್ತಾನ ಮತ್ತು ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ಕೊಟ್ಟು ಚೀನಾ ವಿಶ್ವದ ನಿದ್ದೆಗೆಡಿಸಿದೆ. ತಾಲಿಬಾನಿನೊಂದಿಗಿನ ಅದರ ಗಳಸ್ಯ ಕಂಠಸ್ಯತನ ಇನ್ನು ಕೆಲವರ್ಷ ಹೀಗೆಯೇ ಮುಂದುವರಿದರೆ ಕಾಬೂಲ್ ನಲ್ಲಿ ಅಣುಬಾಂಬ್ ಗಳು ಕಂಡುಬಂದರೆ ಆಶ್ಚರ್ಯಪಡಬೇಕಾಗಿಲ್ಲ. ಈಗಾಗಲೇ ಅಮೇರಿಕಾ ಸೇನೆ ಬಿಟ್ಟೋಡಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅಲ್ಲಿವೆ. ಪುಕ್ಕಟೆ ಸಿಕ್ಕ ವಾಯುಪಡೆಯ ವಿಮಾನಗಳಿವೆ. ಜಗತ್ತಿನ ಆಕ್ರಮಣಕಾರಿ ವಿದೇಶಾಂಗ ನೀತಿ ಮತ್ತು ಧರ್ಮ ರಾಜಕಾರಣಗಳು ಹೀಗೇ ಮುಂದುವರಿದರೆ ಅತೀ ಶೀಘ್ರದಲ್ಲಿ ಜಗತ್ತು ಖಂಡಿತ ಧಾರ್ಮಿಕವಾಗಿ ಧ್ರುವೀಕೃತಗೊಳ್ಳಲಿದೆ. ಒಂದು ವೇಳೆ ಹಾಗಾದರೆ ಮಾತನಾಡುವುದು ಮನುಷ್ಯರಲ್ಲ, ಆಯುಧಗಳು. ಆಯುಧಗಳಿಗೆ ಅವುಗಳ ಯೋಗ್ಯತೆಗೆ ತಕ್ಕಂತೆ ಗೌರವ ಸಲ್ಲಿಸುವುದರಲ್ಲಿ ತಾಲಿಬಾನಿಗೆ ಸರಿಸಾಟಿಯಾಗುವವರು ಜಗತ್ತಿನಲ್ಲಿ ಯಾರೂ ಇಲ್ಲ. ಧರ್ಮ ಮತ್ತು ಆಯುಧಗಳು ಜಗತ್ತಿನಾದ್ಯಂತ ಹುಚ್ಚರ ಕೈಯಲ್ಲಿರುವುದು ದುರಂತ. ಅದೇನೇ ಆದರೂ, ನೂರು ವರ್ಷಗಳಿಂದ ವಿದೇಶಿ ದಾಳಿಕೋರರು ಮತ್ತು ಸ್ವದೇಶಿ ಧರ್ಮಾಂಧರಿಂದ ನಲುಗಿರುವ ಶಾಪಗ್ರಸ್ತ- ಹತಭಾಗ್ಯ ಅಫ್ಘಾನಿಗಳ ಬದುಕು ಹಸನಾಗಲಿ….
- ಮುಷ್ತಾಕ್ ಹೆನ್ನಾಬೈಲ್ (ಚಿಂತನಕಾರರು, ಲೇಖಕರು )ಕುಂದಾಪುರ
