ಟೆನಿಸಿ ರಾಜ್ಯದ ರಾಜಧಾನಿ ನಾಶ್ವೆಲ್ ಪ್ರಾಕೃತಿಕವಾಗಿ ಸುಂದರವಾಗಿದ್ದು ಸಮೀಪದಲ್ಲಿರುವ ಸ್ಮೋಕಿ ಪರ್ವತಗಳು ಹಾಗೂ ಮೊಮ್ಮತ್ ಗುಹೆಗಳು ಪ್ರೇಕ್ಷಣೀಯ ತಾಣಗಳಿವೆ. ವಿನೀತ್
(ದೊಡ್ಡ ಮಗ) ಮೊದಲೇ ವಾರಾಂತ್ಯಕ್ಕೆಂದು ನಿಗದಿಗೊಳಿಸಿದ್ದರಲ್ಲಿ ಮೊದಲ ಸ್ಥಳ ಸ್ಮೋಕೀ ಮೌಂಟೆನ್ಸ್. ಕಮಲಾಕ್ಷಿ ಸಿ ಆರ್ ಅವರ ಅಮೇರಿಕಾದ ಪ್ರವಾಸ ಕಥನವನ್ನು ತಪ್ಪದೆ ಮುಂದೆ ಓದಿ…
Smoky mountains (ಧೂಮ ಪರ್ವತಗಳು)
ನಾನು ಗೂಗಲಣ್ಣನಲ್ಲಿ ಕೆದಕಿ ನೋಡಿದಾಗ ನಮ್ಮ ರಾಜ್ಯದ ಅತ್ಯಂತ ಎತ್ತರದ ಶೃಂಗ ಮುಳ್ಳಯ್ಯನಗಿರಿಗಿಂತಲೂ ಹೆಚ್ಚಿನದು ಎನಿಸಲಿಲ್ಲ. ಮುಳ್ಳಯ್ಯನಗಿರಿಯ ತಪ್ಪಲಿನವಳು ನಾನೆಂಬ ಅಭಿಮಾನ ನನಗೆ. ಮುಳ್ಳಯ್ಯನ ಗಿರಿ, ಸೀತಾಳಯ್ಯನ ಗಿರಿ, ದತ್ತ ಪೀಠಗಳಲ್ಲಿ ಮೋಡಗಳ ನಡುವೆ ಓಡಾಡಿದವಳು ನಾನು. ಅದನ್ನು ಹೇಳಿ ಮಕ್ಕಳ ಉತ್ಸಾಹಕ್ಕೆ ತಣ್ಣೀರೆರಚುವುದೇಕೆ? ಮಕ್ಕಳೊಡನೆ ಆರಾಮಾವಾಗಿ ಬಂದರಾಯಿತು ಹಿಂದಿನ ದಿನವೇ ಅಣಿಯಾದೆ.

ಏಪ್ರಿಲ್ 27ನೇ ಶನಿವಾರ ಬೆಳಗ್ಗೆ ಏಳುತ್ತಲೇ ಮಳೆ ಕಾಡಿಸಿದ್ದರಿಂದ ಭಾನುವಾರಕ್ಕೆ ಮುಂದೂಡಿದೆವು. ಅಂದು ಬೆಳಗ್ಗೆ ಮಕ್ಕಳು ಮನೆಯವರು ಏಳುವಷ್ಟರಲ್ಲಿ ಬೆಳಗಿನ ತಿಂಡಿಗೆ ಅವಲಕ್ಕಿ ಒಗ್ಗರಣೆ ಮಾಡಿದೆ. ಮಧ್ಯಾಹ್ನಕ್ಕೆಂದು ಪುಳಿಯೊಗರೆ, ಮೊಸರನ್ನ ಮಾಡಿ ಡಬ್ಬಿಗಳಿಗೆ ಹಾಕಿಟ್ಟು, ಪೇಪರ್ ಪ್ಲೇಟುಗಳು, ಚಮಚ ಒಂದಷ್ಟು ಹಣ್ಣು, ಬಿಸ್ಕತ್ತು, ಕತ್ತರಿಸಿದ ಸೌತೆಕಾಯಿ, ಬ್ಯಾಗಿಗೆ ಹಾಕಿ ಸಿದ್ಧವಿರಿಸಿದೆ. ” ಏನಮ್ಮಾ.. ಹೊರಗಡೆ ಹೋದಾಗಲೂ ಮನೆ ಊಟಾನೆ ಮಾಡಬೇಕಾ? ಅಲ್ಲಿ ಬೇಕಾದಷ್ಟು ಇಂಡಿಯನ್ ರೆಸ್ಟೋರೆಂಟ್‌ಗಳು ಇವೆ. ಆರಾಮಾಗಿ ಇರೋಕಾಗಲ್ಲ ನಿನಗೆ” ಎಂದು ಗದರುತ್ತಲೇ ಬಂದ ಸಂಜೀತ್( ಚಿಕ್ಕ ಮಗ).
“ಮುಂದಿನ ವಾರ ಹೊರಗೇ ಮಾಡೋಣಂತೆ. ಈಗ ಮಾಡಿದ್ದೀನಲ್ಲ.. ಮೊದಲು ರೆಡಿಯಾಗಿ ಬನ್ರಪ್ಪ.. ” ಎಂದೆ.” ಬೇಡ ಎಂದ್ರೂ ಕೇಳಲ್ಲ. ಚಿಕ್ಕವರ ಮಾತು ಕೇಳಲ್ಲ ಕಣೋ ಇವರು” ಎಂದು ಗೊಣಗುತ್ತಲೇ ದೊಡ್ಡವನೂ ಆಕ್ಷೇಪಿಸಿದ. ಅಷ್ಟರಲ್ಲಾಗಲೇ ನಮ್ಮವರು ಸಿದ್ಧವಾಗಿದ್ರು.

ಮನೆಯಿಂದ ಹೊರಟಾಗ ಎಂಟು ಗಂಟೆಯಾಗಿತ್ತು. 336 ಕಿ.ಮೀ ( 227 ಮೈಲು) ದೂರ, ಮೂರುವರೆ ಗಂಟೆಗಳ ಪ್ರಯಾಣವದು. ಮಾತು, ಹರಟೆ, ಹಾಡುಗಳ ನಡುವೆ ಪ್ರಯಾಣ ಆಯಾಸವೆನಿಸಲಿಲ್ಲ. ಮಕ್ಕಳಿಬ್ಬರು ಮುಂದೆ ಕುಳಿತಿದ್ರು.. ” ನಮ್ಮ ಮಕ್ಕಳು ಚಿಕ್ಕವರಿದ್ದಾಗ ಅವರಿಬ್ಬರನ್ನು ಹಿಂದೆ ಬಿಟ್ಟು ನಾವಿಬ್ಬರು ಮುಂದೆ ಇರ‌್ತಿದ್ವಿ. ಮಕ್ಕಳು ಬೆಳೆದು ಬಿಟ್ರು ” ಎಂದರು. “ಈಗೇನು ನೀವು ಡ್ರೈವ್ ಮಾಡ್ತೀರಾ? ಇಲ್ಲ ಮುಂದೆ ಹೋಗ್ತೀರಾ” ಎಂದೆ. “ಇಲ್ಲಿನ ಡ್ರೈವಿಂಗ್ ರೂಲ್ಸ್ ವಾರಕ್ಕೆಲ್ಲ ಅರ್ಥವಾಗಲ್ಲ.. ಇಲ್ಲೇ ಆರಾಮಿದೆ ಬಿಡು” ಎಂದು ನಕ್ಕರು.
ಕೆಲ ನಿಮಿಷ ಮಕ್ಕಳು ಚಿಕ್ಕವರಿದ್ದಾಗ ಕಾರಿನಲ್ಲಿ ಕುಳಿತು ಆಡುತ್ತಿದ್ದ ಆಟಗಳು, ತುಂಟಾಟಗಳು ಸ್ಮೃತಿ ಪಟಲದಲ್ಲಿ ಹಾದುಹೋದವು. “ಎಲ್ಲಿ ಕಳೆದು ಹೋದಮ್ಮ ?” ಎಂದು ಚಿಕ್ಕಮಗ ಕರೆದಾಗ ವಾಸ್ತವಕ್ಕೆ ಮರಳಿದೆ. ‘ಎಲ್ಲ ಸಮಯದಾಟ’ ಅಲ್ಲವೆ? ನಾನು ರಸ್ತೆಯ ಕಡೆ ನೋಟ ನೆಟ್ಟೆ. ಅಲ್ಲಲ್ಲಿ ಬೆಟ್ಟಗಳು, ಜುಳು ಜುಳು ಹರಿಯುವ ನದಿಗಳು, ಅವುಗಳ ಮೇಲೆ ಸೇತುವೆ, ದಟ್ಟವಾದ ಹಸಿರು ನನ್ನನ್ನು ಉಲ್ಲಸಿತಳಾಗುವಂತೆ ಮಾಡಿತು. ಮ್ಯಾಕ್ ಡೊನಾಲ್ಡ್ಸ್ ಬಳಿ ಕಾರು ನಿಲ್ಲಿಸಿ, ಪೊಟಾಟೋ ಫ್ರೈ ತೆಗೆದುಕೊಂಡು ಬಂದರು. ನಾನು ಕೆಳಗಿಳಿದು ಒಂದೆರಡು ಫೋಟೊ ತೆಗೆದುಕೊಂಡೆ.

ಅಂದು RCB ಮತ್ತು Deccan Chargers ನಡುವಿನ ಪಂದ್ಯ ನಿಗದಿಯಾಗಿತ್ತು. ಅಂದು ಗೆದ್ದರೆ ಮೊದಲ ಸ್ಥಾನಕ್ಕೆರಬಹುದು ಎಂಬ ಲೆಕ್ಕಾಚಾರವಿತ್ತು. RCB ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದರಿಂದ ಮೊದಲ ಇನ್ನಿಂಗ್ಸ್ ಪೂರ್ಣ ನೋಡದೆ ಆಗಾಗ್ಗೆ ರನ್ ಎಷ್ಟಾಯಿತು ಎಂದು ಗಮನಿಸುತ್ತಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 162 ರನ್ ಬೆನ್ನು ಹತ್ತಿದ RCB ಜಾಕೋಬ್, ಪಡಿಕಲ್, ಪಡಿದಾರ್ ನಿರಾಶಾದಾಯಕವಾಗಿ ವಿರಮಿಸಿದರು. ಮಕ್ಕಳಿಬ್ಬರು RCB ಸೋಲುತ್ತೆ, ಕೊಹ್ಲಿ ಜೊತೆ ನಿಲ್ಲುವವರು ಯಾರಿಲ್ಲ.. ಎಂದು ಬೇಸರಿಸಿಕೊಂಡಿರುವಾಗಲೇ, ಕೊಹ್ಲಿ ಜೊತೆ ನಿಂತ ಕೃನಾಲ್ ಪಂಡ್ಯಾ ಅಮೋಘವಾಗಿ ಆಡಿ 73 ರನ್ ಬಾರಿಸಿ ಗೆಲುವಿನತ್ತ ಕೊಂಡೊಯ್ದ. ಕೊಹ್ಲಿ ನಂತರ ಬಂದ ಟಿಮ್ ಡೇವಿಡ್ 5 ಎಸೆತಳಿಗೆ 19 ರನ್ನು.. RCB ಗೆಲವು ಭಕ್ತರನ್ನು ಸಂತುಷ್ಟಗೊಳಿಸಿತು, ಅಂತೆಯೇ ನನ್ನ ಮಕ್ಕಳನ್ನೂ ಕೂಡ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಲಿನಂಚಿಗೆ ಹೋಗಿ, ಪಂದ್ಯ ಗೆದ್ದಾಗ ಅವರು ಸಂಭ್ರಮಿಸುತ್ತಿದ್ದ ಕ್ಷಣಗಳು ಕಣ್ಣ ಮುಂದೆ ಬಂದವು. ಈಗಲೂ ಹಾಗೆಯೇ ಇದ್ದಾರಲ್ಲ ಈ ಮಕ್ಕಳು ಎನಿಸಿತು.
ಸ್ಮೋಕಿ ಮೌಂಟೆನ್ಸ್ ಸಮೀಪದಲ್ಲಿ Knoxville ಎನ್ನುವ ದೊಡ್ಡ ನಗರ ಸಿಕ್ಕಿತು. ಅಭಿವೃದ್ಧಿ ಹೊಂದಿದ ನಗರವೆಂದು ನೋಡಿದೊಡನೆ ಊಹಿಸಬಹದಿತ್ತು. ಅಲ್ಲಿಂದ ಮುಂದಕ್ಕೆ ದಾರಿಯ ಇಕ್ಕೆಲಗಳಲ್ಲಿ ರೆಸಾರ್ಟ್‌ಗಳು ಪ್ರವಾಸ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದ್ದವು. ಅಲ್ಲಿ ಹೆಚ್ಚೇನು ನೋಡಲು ಇರಲಿಲ್ಲವಾದ್ದರಿಂದ, ಅಲ್ಲಿಂದ ಹದಿನೈದರಿಂದ ಇಪ್ಪತ್ತು ನಿಮಷ ತಿರುವುಗಳ ರಸ್ತೆ. ಪಕ್ಕದಲ್ಲಿ ನದಿ ಹರಿಯುತ್ತಿತ್ತು. ಏಕ ಮುಖ ರಸ್ತೆಯಾದ್ದರಿಂದ ಪ್ರಯಾಣ ಸುಗಮವಾಗಿತ್ತು. ನಾವು ನೇರವಾಗಿ ಸ್ಮೋಕಿ ಮೌಂಟೆನ್ಸ್ ಕೆಳಗಿನ ಗಾಟ್ಲಿನ್‌ಬರ್ಗ್‌ಗೆ ಹೋದೆವು. ಕಾರು ಪಾರ್ಕಿಂಗ್ ಜಾಗ ತಲುಪಿದಾಗ 1.15. ಅಷ್ಟೇನು ಆಳವಿರದ little pigeon river ನದಿ ಜುಳು ಜುಳು ಸದ್ದು ಮಾಡುತ್ತ ಹರಿಯುತ್ತಿತ್ತು. ಸ್ಕೈ ಲಿಫ್ಟ್‌ನಲ್ಲಿ ಬೆಟ್ಟಕ್ಕೆ ಹೋಗಬೇಕಿತ್ತು.

ಮಕ್ಕಳಿಗೆ ಹೊಟ್ಟೆ ಚುರುಗುಟ್ಟಿತೇನೋ.. “ನಿನ್ನ ಬುತ್ತಿ ತೆಗೆಯಮ್ಮ.. ಖಾಲಿ ಮಾಡೋಣಂತೆ” ಎಂದರು. ಬೆಳಗ್ಗೆ ಇವೆಲ್ಲ ಬೇಕಾ ಎಂದವರು ತಟ್ಟೆಗೆ ಹಾಕಿಕೊಡ್ಡದ್ದನ್ನು ಖಾಲಿ ಮಾಡಿ ನೀರು ಕುಡಿದು “ಚೆನ್ನಾಗಿತ್ತಮ್ಮ” ಎಂದರು. ನದಿಯ ಕಲರವ ಕೇಳುತ್ತ ತುಸು ಹೆಚ್ಚೇ ಊಟ ಮಾಡಿದೆವು. ನಂತರ ತಟ್ಟೆಗಳನ್ನು ಒಂದು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ, ಅಲ್ಲಿಯೇ ಇದ್ದ ಕಸದ ಬುಟ್ಟಿಗೆ ಹಾಕಿದೆವು.
ನಂತರ ಸಂಕಷ್ಟ ಶುರುವಾಗಿದ್ದು ನನಗೆ. Smoky mountains ನೋಡಲು ಬೆಟ್ಟದ ಮೇಲೇರಬೇಕು, ಆಗ ಮಾತ್ರ ಅದರ ಸೌಂದರ್ಯವನ್ನು ಸವಿಯಲು ಸಾಧ್ಯ. ಜಾಯಿಂಟ್ ವ್ಹೀಲ್ ಎಂದೂ ಹತ್ತಿದವಳಲ್ಲ ನಾನು, ಪ್ರೈಮರಿಯಲ್ಲಿ ಬೇರೂರಿದ್ದ ಭಯ ನನ್ನಲ್ಲಿ ಆಳವಾಗಿತ್ತು. ನೀವುಗಳು ಹೋಗಿ ಬನ್ನಿ..ನಾನು ಇಲ್ಲೇ ನದಿ ತೀರದಲ್ಲಿ, ನಗರದ ಸುತ್ತು ಹಾಕಿ ಬರುವೆ ಬಂದೆ. ” ನಿಮಗೋಸ್ಕರ ಬಂದಿರೋದು.. ಸುಮ್ಮನೇ ಬಾಮ್ಮ” ಎಂದ ಮಗ ನಮ್ಮವರತ್ತ ನೋಡದೆ ನನ್ನನ್ನು ಎಳೆದೊಯ್ದ. ಚಿಕ್ಕವ ಅವರಪ್ಪನಿಗೆ ಜೊತೆಯಾದ. ಫೋಟೋಗಳಲ್ಲಿಯೂ ಆ ಭಯ ವ್ಯಕ್ತವಾಗಿದೆ. ರಸ್ತೆಯ ಮೇಲೆ, ನದಿಯ ಮೇಲೆ ಹೀಗೆ ಒಂದೊಂದು ಆಸನ ಕೆಳಗೆ ನಿಂತಾಗಲೂ ತೊಟ್ಟಿಲಿನಂತೆ ಹೊಯ್ದಾಡುವ ಆಸನ ಕಸಿವಿಸಿ ಉಂಟು ಮಾಡುತ್ತಿತ್ತು. ಚಿಕ್ಕ ಮಗ ದೂರದಿಂದ ಫೋಟೋ ತೆಗೆಯಲು ಇತ್ತ ತಿರುಗಮ್ಮ ಎಂದದ್ದೆ ಬಂತು..ನನ್ನಿಂದ ಆಗಲಿಲ್ಲ. ಹಾಗೂ ಹೀಗೂ ಬೆಟ್ಟ ತಲುಪಿದಾಗ ಜೀವ ಬಂದಂತಾಯಿತು.

ವಾವ್.. ಸುತ್ತಲೂ ಮಡಿಕೆ ಮಾಡಿರುವಂತಿರುವ ಬೆಟ್ಟಗಳು. ಹಸಿರು, ಕೆಂಪು ಮಿಶ್ರಿತ ಎಲೆಗಳ ಸಸ್ಯರಾಶಿ, ಕೆಳಗಿನ ಗ್ಲಾಟಿನ್‌ಬರ್ಗ್ ನಗರ ಎಲ್ಲವೂ ವಿಹಂಗಮ ಎನಿಸಿತು. ‘ಬೆಟ್ಟವೇರದೆ ಕಣಿವೆಯ ಸೊಬಗು ಕಾಣದು’ ಎಂದಿರುವುದು ಇದಕ್ಕೇ ಏನೊ. ಸ್ಕೈ ಪಾರ್ಕಿನಲ್ಲಿ 680 ಅಡಿ ಅಳತೆಯ ಸೇತುವೆಯಲ್ಲಿ Smoky mountainsನ್ನು National park ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಸೊಗಸು. ಅದರ ಮಧ್ಯೆ ಎರಡು ಕಡೆ 9 ಅಡಿಗಳ ಗಾಜಿನ್ನು ಅಳವಡಿಸಲಾಗಿದೆ. ಆದರೂ ಆ ಸೇತುವೆ ತೂಗಾಡುವಾಗಲೆಲ್ಲ ನನ್ನ ಎದೆಬಡಿತ ನನಗೇ ಕೇಳಿಸುತ್ತಿತ್ತು. ಹಾಗಾಗಿ ಮಕ್ಕಳ ಕೈಗೆ ಸಿಗದೆ, ನಾನೊಬ್ಬಳೆ ಮುಂದೆ ಮುಂದೆ ಸಾಗಿಬಿಟ್ಟೆದ್ದೆ.
ಸೇತುವೆ ದಾಟಿದ ನಂತರ ಮೇಲೆ ನಿಂತಾಗಲೇ ಅಲ್ಲಿನ ಪೂರ್ಣ ಚಿತ್ರಣವನ್ನು ಕಣ್ತುಂಬಿಕೊಂಡದ್ದು. smoky mountains sky bridge, ಬೆಟ್ಟಗಳನ್ನು ನೋಡಲು ನೋಡಲು ಆಸನ ವ್ಯವಸ್ಥೆ, ಪುಟ್ಟ ಉದ್ಯಾನವಿದೆ. ತಿಳಿ ಹಾಲು ಚೆಲ್ಲಿದಂತೆ ಕಾಣುವ ಬೆಟ್ಟ,ಅದರ ಕೆಳಗಿನ ಗ್ಲಾಟಿನ್‌ಬರ್ಗ್ ಸುಂದರ ನವ ವಧುವಿನಂತೆ ಕಾಣುತಿಹುದು ಎನಿಸಿತು. ಮಕ್ಕಳು,ಮನೆಯವರು ಫೋಟೋ ಸೆಷನ್ ಮುಗಿಸಿ ಬಂದರು.
ಹಾಗೆ ಓಡಾಡುತ್ತ, ಮಗ ತಂದು ಕೊಟ್ಟ ಫ್ರೆಂಚ್ ಫ್ರೈಸ್ ಕೈಲಿ ಹಿಡಿದು ಕುಳಿತಿರುವಾಗ ವಯೋಲಿನ್ ವಾದನ ಜೊತೆಗೆ ಹಾಡುತ್ತಿದ್ದ ಇಬ್ಬರು ಯುವತಿಯರು ಗಮನ ಸೆಳೆದರು. ತಂಪಾದ ಗಾಳಿ, ಸುಂದರ ಪ್ರಕೃತಿ, ಇಂಪಾದ ಸಂಗೀತ, ಕೈಗೆ ಗರಿಗರಿ ಫ್ರಂಚ್ ಫ್ರೈಸ್ ಇನ್ನೇನು ಬೇಕು. ಈ ಕ್ಷಣ ಸುಂದರ ಎನಿಸಿತು. ಒಬ್ಬ ಯುವಕ, ಯುವತಿಯೊಡನೆ ಮುಂದಿದ್ದ ಕಮಾನಿನ ಬಳಿ ಆರಾಮವಾಗಿ ನಿಂತಿದ್ದ. ಒಂದಿಬ್ಬರು ಅತ್ತ ಯಾರನ್ನೂ ಹೋಗದಂತೆ ತಡೆದಿದ್ದಾರಾ ಎನಿಸಿತ್ತು. ಅಷ್ಟರಲ್ಲಿ ಗಾಯನ ನಿಂತಿತು, ವಯೋಲಿನನಲ್ಲಿ ಹಿತವಾದ ವಾದನ ನುಡಿಸಲಾರಂಭಿಸಿದರು. ಆ ಯುವಕ ದಿಢೀರನೆ ಯುವತಿಯ ಮುಂದೆ ಕುಳಿತ.

ಚಿಕ್ಕ ಮಗ ,” ಆ ಹುಡುಗ ಪ್ರಪೋಸ್ ಮಾಡ್ತಾನೆ ಅಂತ ಕಾಣುತ್ತೆ” ಎಂದ.
“ಪ್ರೇಮ ನಿವೇದನೆಗೆ ಇಷ್ಟು ಸಾಹಸವಾ? ಎಷ್ಟು ದೂರದಿಂದ ಬಂದು, ಸಂಗೀತ ಕಛೇರಿ ನೀಡುವವರನ್ನು ಕರೆದುಕೊಂಡು ಬರುವರಲ್ಲ” ಎಂದೆ.
“ಹಾಗಲ್ಲಮ್ಮ, ಅವರು ಮೊದಲಿನಿಂದ ಫ್ರೆಂಡ್ಸ್ ಆಗಿರ‌್ತಾರೆ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಬಳಿಕ ಮದುವೆ ಆಗಬೇಕು ಎನಿಸಿದಾಗ, ಪ್ರಪೋಸ್ ಮಾಡ್ತಾರೆ. ನೋಡಿದಾಕ್ಷಣ
ಪ್ರಪೋಸ್ ಮಾಡಲ್ಲ” ಎಂದ. ( ಮಗನಿಂದ ಪಾಠ..ಎಂದು ಮನದಲ್ಲೇ ನಕ್ಕಿದ್ದೆ)
ಅಷ್ಟರಲ್ಲಿ ಆ ಹುಡುಗ ಮಂಡಿಯೂರಿ, ಉಂಗುರ ಹಾಗೂ ಗುಲಾಬಿ ಹೂ ಮುಂದಿಡಿದು ಪ್ರಪೋಸ್ ಮಾಡಿದ. ಆ ಹುಡುಗಿಯೂ ಉಂಗುರ, ಹೂವನ್ನು ಕೈಗೆ ತೆಗೆದುಕೊಂಡಳು. ಇಬ್ಬರೂ ನರ್ತಿಸಲಾರಂಭಿಸಿದಾಗ, ಅವರೊಂದಿಗೆ ಬಂದ ಸ್ನೇಹಿತರು, ನೋಡಿದವರೆಲ್ಲ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಚಿಕ್ಕ ಮಗ ಮಾತು ಮುಂದುವರಿಸಿದ.. ” ನಮ್ಮಲ್ಲಿ ಓದುವಾಗ ಹುಡುಗ ಹುಡುಗಿ ಸ್ನೇಹದಿಂದ ಇರುವುದಿರಲಿ ಮಾತನಾಡಿದರೆ ತಪ್ಪು ಎನ್ನೋ ಹಾಗೆ ಮಾಡ್ತಾರಿ. ಆಮೇಲೆ ಪರಿಚಯವೇ ಇರಲ್ಲ, ಅವರನ್ನು ಮದುವೆ ಮಾಡಿಕೊಳ್ಳಿ ಅಂತೀರಿ..ಯಾಕಮ್ಮ ಹೀಗೆ” ಎಂದ.

” ನಮ್ಮ ಸಂಸ್ಕೃತಿ ಹಾಗೆ. ಒಬ್ಬರಿಗೊಬ್ಬರು ಎನ್ನೋ ಸಿದ್ದಾಂತ, ಆಚರಣೆ ನಮ್ಮದು. ಇತ್ತೀಚೆಗೆ ಪ್ರೇಮ ವಿವಾಹಕ್ಕೆ ಹೆತ್ತವರು ಒಪ್ತಾ ಇದ್ದಾರೆ. ಆದರೆ ಎಷ್ಟು ಜನರ ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದಾರೆ ಹೇಳು. ಮದುವೆ ಹೇಗೆ ಆದರೂ ಅರ್ಥ ಮಾಡಿಕೊಂಡು ಬಾಳುವುದು ಮುಖ್ಯ ಅಲ್ವಾ ಮಗನೆ?”
ಸರಿ.. ನಡಿ ಹೋಗೋಣ ಎಂದ. ದೊಡ್ಡ ಮಗ ಇಲ್ಲಿ ಟುಲಿಪ್ ಟೋವರ್ ಇದೆಯಂತೆ. ಎಲ್ಲೂ ಕಾಣಿಸ್ತಾ ಇಲ್ಲ. ಎಲ್ಲೋ ಒಂದೊಂದು ಗಿಡ ಇವೆ ಅಷ್ಟೇ ಎಂದ ವಿನೀತ್. ಈಗಷ್ಟೇ ಚಳಿಗಾಲ ಮುಗಿದಿದೆ.. ಇನ್ನೂ ಸ್ವಲ್ಪ ದಿನ ಬೇಕೇನೋ. ನಡಿರಿ ಹೋಗೋಣ ಎಂದು ಹೊರಟೆವು. ಕೆಳಗೆ ಹೋಗೋದಕ್ಕೂ ಮುನ್ನ, ಈ ಸ್ಕೈ ಬ್ರಿಡ್ಜ್ ದಾಟಬೇಕಲ್ಲ ಎನ್ನೋ ಭಯ ನನ್ನದು. ಜನ ಇನ್ನೊಂದು ಬದಿಯಿಂದ ಬರುತ್ತಿರುವುದು ಕಾಣಿಸಿತು. ನಾನು ಆ ಮಾರ್ಗವಾಗಿ ಬರುವೆ.. ನೀವು ಬನ್ನಿ ಎಂದೆ. ಚಿಕ್ಕವನು 1.5 ಕಿಮಿ ರಸ್ತೆ ಮಾರ್ಗವಾಗಿ ನನ್ನೊಡನೆ ಬಂದ. ಮಾರ್ಗ ಮಧ್ಯೆ ಸಣ್ಣ ಸೇತುವೆಗಳು ಸಿಕ್ಕವು, ಅದರ ಮುಂದೆ ಒಂದಷ್ಟು ಫೋಟೋ ತೆಗೆದುಕೊಂಡೆವು. ಕೆಳಗೆ ಬಂದು ಟುಲಿಪ್ ಟೋವರ್ ಬಗ್ಗೆ ನೋಡಿದಾಗ, ನಾವು ರಸ್ತೆ ಮಾರ್ಗದಲ್ಲಿ ಫೋಟೋ ತೆಗೆದುಕೊಂಡದ್ದೇ ಟುಲಿಪ್ ಟೋವರ್ ಎಂದು ತಿಳಿಯಿತು.
ಕೆಳಗೆ ಇಳಿಯುವಾಗಲೂ ಭಯ ಮಾತ್ರ ಕಡಿಮೆಯಾಗಿರಿಲಿಲ್ಲ. ನೆಲದಿಂದ ಏಳೆಂಟು ಮೀಟರ್ ಎತ್ತರದಲ್ಲೇ ಸಾಗುತ್ತಿದ್ದರೂ ನಾನೆಲ್ಲೋ ಆಕಾಶದಲ್ಲಿರುವಂತೆ ಭಾಸವಾಗುತ್ತಿತ್ತು. ಕೆಳಗಿಳಿದೆನಲ್ಲ ಎನಿಸಿ ಉಸ್ಸಪ್ಪ ಎಂದು ದೀರ್ಘವಾದ ಉಸಿರು ಬಿಟ್ಟೆ. ಕಿತ್ತೂರು ಚೆನ್ನಮ್ಮ ಎಂದುಕೊಂಡರೆ, ಟುಸು ಪಟಾಕಿ ನೀನು ಎಂದು ನಮ್ಮವರು ಅಣಕಿಸಿದರು. ಆದರೂ ಬಂದೆನಲ್ಲ ಬಿಡಿ ಎಂದು ಕೀಟಲೆಗೆ ತೆರೆ ಎಳೆದೆ.

Knoxville ನಲ್ಲಿ ಚಾಟ್ಸ್, ದೋಸೆ ತಿಂದು ನಾಶ್ವೆಲ್‌ನತ್ತ ಹೊರಟಾಗ ಸಂಜೆ 7.00 ಆಗಿತ್ತು. ಮನೆಗೆ ಬಂದಾಗ ರಾತ್ರಿ ಹತ್ತೂವರೆಯಾಗಿತ್ತು. ಆಯಾಸದ ಸುಳಿವೇ ಇರಲಿಲ್ಲ. ಸಂತಸದ ಕ್ಷಣಗಳಲ್ಲಿ ದಿನ ಚಿಕ್ಕದಾಗಿ ಕಳೆದುಹೋಗುತ್ತದೆ. ಸಂತಸದ ನೆನಪು ಬಹುಕಾಲ ಉಳಿಯುತ್ತದೆ.
(ಮುಂದುವರೆಯುವುದು)
ಹಿಂದಿನ ಸಂಚಿಕೆಗಳು :
- ಅ…ಅ…ಅಮೆರಿಕಾ ನೋಡಾ (ಭಾಗ-೧)
- ಅ…ಅ…ಅಮೆರಿಕಾ ನೋಡಾ (ಭಾಗ-೨)
- ಅ…ಅ…ಅಮೆರಿಕಾ ನೋಡಾ (ಭಾಗ-೩)
- ಅ…ಅ…ಅಮೆರಿಕಾ ನೋಡಾ (ಭಾಗ-೪)
- ಅ…ಅ…ಅಮೆರಿಕಾ ನೋಡಾ (ಭಾಗ-೫)
- ಅ…ಅ…ಅಮೆರಿಕಾ ನೋಡಾ (ಭಾಗ-೬)
- ಕಮಲಾಕ್ಷಿ ಸಿ ಆರ್
