ಅಮ್ಮನ ಬಸಿರು… ಅಪ್ಪನ ಹೆಸರು – ಹಿರಿಯೂರು ಪ್ರಕಾಶ್



ಅಮ್ಮಾ ಬಸಿರಾದರೆ ಮಕ್ಕಳ ಹೆಸಿರಿನ ಮುಂದೆ ಅಪ್ಪನ ಹೆಸರು ಸೇರುತ್ತದೆ, ಅಮ್ಮನ ಹೆಸರು ಸೇರುವುದಿಲ್ಲ. ಹೆಣ್ಣು ಮದುವೆಯಾದರೆ ಗಂಡನ ಹೆಸರು ಸೇರುತ್ತದೆ. ಅಪ್ಪನ ಹೆಸರು ಅಳಿಸಿ ಹೋಗುತ್ತದೆ…ಎಂತಹ ಅದ್ಬುತ ಚಿಂತನ ಲೇಖನ..ಮುಂದೆ ಓದಿ…

ಸಾಮಾನ್ಯವಾಗಿ ಮಕ್ಕಳಿಗೆ ಹೆಸರಿಡುವಾಗ , ಅದರಲ್ಲೂ ಹೆಣ್ಣು ಮಕ್ಕಳ ಹೆಸರಿನ ಜೊತೆಗೆ ಹೆಚ್ಚಾಗಿ ಅವರ ತಂದೆ ಹೆಸರನ್ನೇ Suffix ಆಗಿ ಎಲ್ಲಾ ದಾಖಲೆಗಳಲ್ಲೂ ಮುಂದುವರೆಸುವ ಪದ್ದತಿ ಬೆಳೆದುಕೊಂಡು‌ ಬಂದಿದೆ . ಇರಲಿ‌ ಬಿಡಿ, ಈ‌ ಬಗ್ಗೆ ಯಾರದೇನೂ ಆಕ್ಷೇಪಣೆಯಿಲ್ಲ, ತಕರಾರೂ ಇಲ್ಲ. ನನ್ನ ಇಬ್ಬರು ಹೆಣ್ಣುಮಕ್ಕಳಿನ ಹೆಸರಿನ ಮುಂದೂ ನನ್ನ ಹೆಸರೇ ಮುಂದುವರೆದಿದೆ. ಆದರೆ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆಯ ಪಳೆಯುಳಿಕೆಯ ಸಣ್ಣ ಎಳೆಯಂತೆ ಕಾಣುವ ಈ ಹೆಸರಿನ ಜೋಡಣೆ ಬಗ್ಗೆ ಸ್ವಲ್ಪ ಕೊಸರಿ ಕೊಡವಬಾರದೇಕೆ ಎನಿಸಿದಾಗ ಮನದಲ್ಲಿ ಚಕಚಕನೇ ಮೂಡಿದ ಈ ಅಸ್ತವ್ಯಸ್ತ ಚಿಂತನೆಗಳನ್ನು ಮಂಥನ ಮಾಡಲು ಬಿಟ್ಟಲ್ಲಿ ಅದು ವ್ಯವಸ್ಥಿತವಾದ ರೂಪ ತಾಳಬಹುದೇನೋ ಎಂಬ ಆಶಾವಾದದ ಚಿಕ್ಕ ಪ್ರಯತ್ನವೇ ಈ ನಾಲ್ಕು ಸಾಲುಗಳು.!
ಪಕ್ಕಾ ಶಾಲಾ ಸಿಲಬಸ್ ಗಳಂತಿರುವ ವಿಷಯವನ್ನು ಪ್ರಬಂಧದ ರೀತಿ ಅಥವಾ ಪಾಠಗಳ ರೀತಿ ನೇರವಾಗಿ ಮಂಡಿಸಿ ನಿಮ್ಮನ್ನು ಬೋರ್ ಹೊಡೆಸುವ ಬದಲು ಕೊನೇಪಕ್ಷ ಕೆಲ ಓದುಗರ ತಲೆಯೊಳಗೆ “ಹೌದಲ್ಲವೇ, ಅಪ್ಪನ ಹೆಸರೇ ಯಾಕೆ, ಅಮ್ಮನದು ಯಾಕಿಲ್ಲ … ಎಂಬ ಚಿಕ್ಕ ಹುಳುವನ್ನಾದರೂ ಬಿಟ್ಟು ಆ ಬಗ್ಗೆ ಸಣ್ಣ ಸ್ಪಾರ್ಕ್ ಆದರೂ ಹೊತ್ತಿಸಿ ತಮ್ಮಿಂದ ಬರುವ ಪ್ರತಿಕ್ರಿಯೆಯಲ್ಲಿ ವೈಚಾರಿಕ ಬೆಳಕನ್ನು ನೋಡುವ ಕಿರು ಪ್ರಯತ್ನ!.

 

ಫೋಟೋ ಕೃಪೆ : buy9586.top

ಇತ್ತೀಚೆಗಷ್ಟೇ ಎಲ್ಲರೂ ಸಾಮಾಜಿಕ ಜಾಲತಾಣ ಗಳಲ್ಲಿ ಅಪ್ಪನನ್ನು ಮನದುಂಬಿ ಆರಾಧಿಸುವ “ಫ಼ಾದರ್ಸ್ ಡೇ” ಆಚರಿಸಿ ಅಪ್ಪನನ್ನು ” ಅಪ್ಪನೆಂಬ ಆಕಾಶ, ಅಪ್ಪನೆಂಬ ಆಲದ ಮರ, ಅಪ್ಪನೆಂಬ ಕಡಲು….ಇತ್ಯಾದಿಯಾಗಿ ಅಟ್ಟದಲ್ಲಿದ್ದ ಅಪ್ಪನನ್ನು ಆಕಾಶಕ್ಕೇರಿಸಿ ಸಂಭ್ರಮಿಸಿದ್ದಾಯಿತು. ವರುಷಗಳ ಹಿಂದೆ ಮನೆಯ ಮೂಲೆಯಲ್ಲೆಲ್ಲೋ, ಅಟ್ಟದ ಮೇಲೋ , ಧೂಳಿನಲ್ಲೋ ಅಡಗಿ ಮರೆಯಾಗಿದ್ದ ಅಥವಾ ಮನೆಯಲ್ಲಿ ಯಾರಿಗೂ ಕಾಣದ ಜಾಗದಲ್ಲೆಲ್ಲೋ‌ ನೇತು ಹಾಕಿದ್ದ ‌ ಅಪ್ಪನ ಫೋಟೋಗಳೆಲ್ಲವೂ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಅಪ್ಪನ ದಿನದಂದು ವಿಜೃಂಭಿಸುತ್ತಾ ಅಪ್ಪನನ್ನು‌ ನೆನೆ ನೆನೆದು ಕಣ್ಣೆಲ್ಲಾ ಒದ್ದೆಯಾಗುವಂತೆ ಕಥೆ, ಕಾವ್ಯ, ಕವನ‌ , ತ್ರಿಪದಿ, ಚೌಪದಿ, ಷಟ್ಪದಿಗಳ ಬರಹಗಳ ಭಾವುಕತೆಯಿಂದ ತುಂಬಿಹೋಗಿ ದ್ದಲ್ಲದೇ ಅವುಗಳಿಗೆ ಲೈಕು ,ಲವ್ವು, ಕಣ್ಣೀರು ಇತ್ಯಾದಿ ಸಿಂಬಲ್ ಗಳ ಭರ್ಜರಿ ಕಾಂಪಿಟಿಷನ್ ಗಳೇ ನೆಡೆದಿತ್ತು. ಅಪ್ಪನ ಸ್ಮರಣೆಯೆನ್ನುವುದು ಅಕ್ಷರಗಳ ಅಲಂಕಾರದಿಂದ ವೈಭವಯುತವಾಗಿ ಸಾಮಾಜಿಕ ಜಾಲತಾಣದಲ್ಲೆಲ್ಲಾ ಆವರಿಸಿಕೊಂಡಿದ್ದು ನಿಜಕ್ಕೂ ಅದ್ಭುತವೆಂಬಂತೆ ಇತ್ತು..! ಈ ತರಹದ ಸ್ಮರಣೆಯೆಲ್ಲವೂ ಅವರವರ ಮನದಾಳದ ಭಾವನೆ , ಪ್ರೀತಿ, ಅಕ್ಕರೆ…. ಹಾಗೂ ಅಪ್ಪನೆಂಬ ಭರವಸೆಯ ನೆರಳಿನ ಮೇಲಿಟ್ಟಿರುವ ಅಪರಿಮಿತವಾದ ಕಕ್ಕುಲತಿಗಳ ಅಭಿವ್ಯಕ್ತಿ ಇದ್ದಂತೆ . ಅದನ್ನು ಮನದಾಳದಿಂದ ಗೌರವಿಸುತ್ತೇನೆ. ಅದಿರಲಿ.

ಬಹುಶಃ ಈ ಲೆವೆಲ್‌ನ ಪ್ರೀತಿ- ಜವಾಬ್ದಾರಿ ಅಪ್ಪನ ಹೆಗಲೇರಿದ್ದರಿಂದಲೇ ಏನೋ ಅಪ್ಪನನ್ನು ಆಕಾಶಕ್ಕೆ ಹೋಲಿಸಿ ಅವನ ಹೆಸರನ್ನು ಮಕ್ಕಳ ಹೆಸರಿಗೆ ಸಫ಼ಿಕ್ಸ್ ಆಗಿಸಿದ್ದಿರಬಹುದು ! ಮೇಲಾಗಿ ಯಾವ ಪ್ರಚಾರವನ್ನೂ ಬಯಸದೇ ತನ್ನ ಕರ್ತವ್ಯವನ್ನು ತಾನು ಮಾಡಿಕೊಂಡು ಅದಮ್ಯ ಜವಾಬ್ದಾರಿಯಿಂದ , ನಿರ್ಭಾವುಕತೆಯ ಮೊಗದಿಂದ, ಹೊರಗೆ ಜಡನಂತೆ ಕಂಡರೂ ಎದೆಯೊಳಗೆ ಬಚ್ಚಿಟ್ಟುಕೊಂಡ ಪ್ರೀತಿಯಾಳದಿಂದ ಸಂಸಾರ ಸರಿದೂಗುವ ಅಪ್ಪನ‌ ನಿರಂತರ ಕರ್ತವ್ಯ ನಿಷ್ಠೆ, ಹೊಣೆಗಾರಿಕೆ ಹಾಗೂ ಟೋಟಲ್ ಕ್ಯಾರೆಕ್ಟರ್ರೇ ಅಮ್ಮನಿಗಿಂತ ತುಂಬಾನೇ ಡಿಫ಼ರೆಂಟು, ಅವ್ಯಕ್ತ ಸೆಂಟಿಮೆಂಟು, ಹಿಡನ್ ಟ್ಯಾಲೆಂಟು ಹಾಗೂ ಪವರ್ ಫ಼ುಲ್ ಸೈಲೆಂಟು ! ಸೋ….ಅಪ್ಪನೆಂಬುವನು ನಿಜಕ್ಕೂ ಗ್ರೇಟ್.

ಆದರೆ…….. #ಅಪ್ಪನ ಇಷ್ಟೆಲ್ಲಾ ಗುಣ‌- ವಿಶೇಷಣಗಳು ಆಂಗ್ಲಭಾಷೆಯಲ್ಲಿ ಅನುರಣಿಸಿದರೂ, ಅಮ್ಮ ಎಂಬ ಮಾತೃದೇವತೆಯ ಸ್ಥಾನವನ್ನು ಅಪ್ಪ ತುಂಬಬಲ್ಲನೇ…?? ಅಮ್ಮ  ಎಂದಿಗೂ ಅಮ್ಮನೇ….!

ಫೋಟೋ ಕೃಪೆ : bestiankelly

ಭರ್ತಿ ನವಮಾಸಗಳು ಕಂದನನ್ನು ತನ್ನ ಒಡಲೊಳಗಿಟ್ಟು ‌#ಜನ್ಮ ನೀಡುವ ಕ್ಷಣದವರೆಗೆ ಜತನದಿಂದ ಕಣ್ಣುರೆಪ್ಪೆಯಂತೆ ಕಾಪಾಡಿ, ಕಂದ ಜನಿಸಿದ ನಂತರವೂ ಬಾಲ್ಯದಿಂದ ತನ್ನ ಕೊನೆಯ ಉಸಿರಿನವರೆಗಿನ ಪ್ರತೀ ಹಂತದಲ್ಲೂ ಮಾತೃ ಹೃದಯದಿಂದಲೇ ಎಲ್ಲವನ್ನೂ ಕೇರ್ ಮಾಡುವ ಅಮ್ಮನ‌ ಪ್ರೀತಿಗೆ, ಮಮತೆಗೆ, ಅನುಬಂಧಕ್ಕೆ ಸರಿಸಾಟಿಯೂ ಇಲ್ಲ, ಅವಳ‌ ಒಟ್ಟಾರೆ ತ್ಯಾಗವನ್ನು ವರ್ಣಿಸಲು ಪದಗಳಿಗೆ ತಾಕತ್ತೂ ಇಲ್ಲ . ಒಂದೇ ಮಾತಿನಲ್ಲಿ ಹೇಳುವುದಾದರೆ ಅಪ್ಪ ತಾನು ಸಾಮಾನ್ಯವಾಗಿ ನಿರ್ವಹಿಸದ ಅಥವಾ ಅಪ್ಪನಿಂದ ತಿರಸ್ಕರಿಸಲ್ಪಟ್ಟ ನಿತ್ಯ ಬದುಕಿನ ಮುಕ್ಕಾಲು ಭಾಗ ಪಾತ್ರಗಳನ್ನು ಅಮ್ಮನೇ ನಿರಂತರವಾಗಿ ಮಾಡುವುದರಿಂದ , ಜೀವನದ ಎಲ್ಲಾ ಹಂತದಲ್ಲೂ ಅಪ್ಪನಿಂಗಿಂತ ಅಮ್ಮನ ರೋಲೇ ಹೆಚ್ಚಾಗಿ ಲೈಮ್ ಲೈಟ್ ನಲ್ಲಿರೋದು, ಲೈಫ಼್ ಟೈಮಲ್ಲೂ ಮಿನುಗೋದು ಹಾಗೂ ಲೈವ್ಲೀ ಯಾಗಿರೋದು ಎಂಬ ವಿಚಾರ ಗೊತ್ತಿರೋದೇ… ! ಮನೆಯ ಒಳಗೂ ಹೊರಗೂ ಸಮಾನವಾಗಿ ದುಡಿಯುತ್ತಾ ಮಕ್ಕಳನ್ನು ಹೊತ್ತು ಹೆತ್ತು ಸಾಕಿ- ಸಲಹಿ ಅವರ ಭವಿಷ್ಯದಲ್ಲೇ ತನ್ನ ಬದುಕಿನ ಸಾರ್ಥಕ್ಯ ಕಂಡುಕೊಳ್ಳುವ ಅಮ್ಮನ ಪಾತ್ರ ಮಿಕ್ಕೆಲ್ಲರ ಪಾತ್ರಕ್ಕಿಂತಲೂ , ಅಷ್ಟೇಕೆ ಅಪ್ಪನ ಪಾತ್ರಕ್ಕಿಂತಲೂ ಎತ್ತರ…ಬಹು ಎತ್ತರದಲ್ಲಿರುವುದು. ಅಲ್ಲವೇ..?
ಅಪ್ಪನ ಬಳಿ ಹೇಳಿಕೊಳ್ಳಲಾಗದ ಎಷ್ಟೋ ವಿಷಯಗಳನ್ನು ಮಕ್ಕಳು ಮೊದಲು ಮುಕ್ತವಾಗಿ ಮಾತಾಡೋದೇ ಅಮ್ಮನ ಬಳಿ ! ಅಪ್ಪನೆಂದರೆ ಆಕಾಶ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳುವ ಕೆಲ ಮಕ್ಕಳೇ ಅಪ್ಪನ ನೆರಳಲ್ಲಿ ಸುಳಿಯಲೂ ಇಂದಿಗೂ ಕೊಂಚ ತಡವರಿಸುತ್ತಾರೆ. ಆದರೆ ಅಮ್ಮನ ಹತ್ತಿರ ಮಾತ್ರ ಅವರೆಲ್ಲರದ್ದೂ ಸಕತ್ ಫ಼್ರೀ ಮೂಮೆಂಟ್ಸ್..! ಮಕ್ಕಳ ದೃಷ್ಟಿಯಿಂದ ನೋಡುವುದಾದರೆ ಸಾಮಾನ್ಯವಾಗಿ ಅಪ್ಪ ಹಾರ್ಡ್ ವೇರ್ ಆದರೆ ಅಮ್ಮ ಸಾಫ಼್ಟ್ ವೇರ್; ಅಪ್ಪನದು ನಿರಂಕುಶ ಪ್ರಭುತ್ವವಾದರೆ ಅಮ್ಮನದು ಪ್ರಜಾಪ್ರಭುತ್ವ.! ಸಂವಿಧಾನಾತ್ಮಕ ಹಕ್ಕುಗಳನ್ನು ಅನುಭವಿಸುವುದು ಪ್ರಜಾಪ್ರಭುತ್ವದಲ್ಲೇ ಅಲ್ಲವೇ ..?

ಹೀಗೆಂದ ಮಾತ್ರಕ್ಕೇ ಅಪ್ಪನಿಂಗಿಂತ ಅಮ್ಮ ಹೆಚ್ಚು ಎನ್ನುವ ವಾದವನ್ನು‌ ನಾನು ಮಂಡಿಸುತ್ತಿಲ್ಲ. ತುಲನಾತ್ಮಕವಾಗಿ ಹೇಳುವುದಾದರೆ ಕುಟುಂಬದ ಏಳಿಗೆಯ ದೃಷ್ಟಿಯಿಂದ ಅಪ್ಪ- ಅಮ್ಮ ಇಬ್ಬರ ಪಾತ್ರಗಳೂ ಸರಿಸಮವಾಗಿ ಮುಖ್ಯವೇ. ಯಾರ ಪಾತ್ರ ದೊಡ್ಡದು ಯಾರದು ಚಿಕ್ಕದು ಎಂಬುದನ್ನು ಅಳೆದು ತೂಗಲು ಸಾಧ್ಯವಿಲ್ಲ. ಮೇಲಾಗಿ ಯಾರ ಮಹತ್ವ ಅಥವಾ ಪ್ರಾಮುಖ್ಯತೆ ಹೆಚ್ಚು ಎನ್ನುವ ಸ್ಥಾನಮಾನಗಳು ಕುಟುಂಬದಿಂದ ಕುಟುಂಬಕ್ಕೆ ಬದಲಾಗುತ್ತಾ ಹೋಗುತ್ತವೆ. ಅದನ್ನು ಯಾರೂ ಅಲ್ಲಗಳೆಯಲಾರರು.

ಫೋಟೋ ಕೃಪೆ : youtube

ಆದರೆ ಯಾವುದೇ ಕೋನದಿಂದ ಅಳೆದು ತೂಗಿದರೂ ಅಮ್ಮನಿಗೆ, ಅವಳ ತ್ಯಾಗದೆತ್ತರಕ್ಕೆ, ಕುಟುಂಬದ ಮೇಲಿರುವ ಅವಳ ಬದ್ಧತೆಗೆ, ಮಕ್ಕಳ ಮೇಲಿನ ಅದಮ್ಯ ಪ್ರೀತಿಗೆ ಅಪ್ಪನೂ ಒಮ್ಮೊಮ್ಮೆ ಸರಿದೂಗಲಾರ. ಈ ಸ್ಟೇಟ್ ಮೆಂಟ್ ಅವರವರ ಕೌಟುಂಬಿಕ ಪರಿಸರದ ಹಿನ್ನೆಲೆಯಲ್ಲಿ ಅಲ್ಪ ಸ್ವಲ್ಪ ಬದಲಾದರೂ ಒಳಗಿನ ಒಟ್ಟಾರೆ ಹೂರಣ ಮಾತ್ರ ಬದಲಾಗಲು ಛಾನ್ಸೇ ಇಲ್ಲ ! ಹೊರಗಡೆ ಮಾತ್ರ “ನಾವೇನ್ ಹಂಗಿಲ್ಲಾರೀ ” ಅಥವಾ “ನಮ್ಮಪ್ಪನೂ ಗ್ರೇಟೇ ಕಣ್ರೀ…. ಎಂದು‌ ಗುರಾಯಿಸಿದರೂ ಮಾತೃದೇವತೆಯ ಸ್ಥಾನದ ಪಾವಿತ್ರ್ಯವೇ ಅನಂತ, ದಿಗಂತ ಹಾಗೂ ಪ್ರಶ್ನಾತೀತ . ಈ ಮಾತೃ ವಾತ್ಸಲ್ಯದ ಭಾವನೆಗಳ ಅನುಬಂಧದ ಸಾಮ್ಯತೆ ಕೊಳಗೇರಿಯೊಂದರಲ್ಲಿ ವಾಸಿಸುವ ತಾಯಿಯಿಂದ ಹಿಡಿದು ಅರಮನೆಯಲ್ಲಿನ ಅಮ್ಮನಿಗೂ ಸಮಾನವಾಗಿ ಅನ್ವಯ. ಮಾನವರಲ್ಲೇಕೆ….., ಪಶು ,ಪಕ್ಷಿ ,ಪ್ರಾಣಿ, ಕ್ರಿಮಿ- ಕೀಟಗಳಲ್ಲೂ ತಾಯಿಹೃದಯದ ವಾತ್ಸಲ್ಯ ತುಸು ಹೆಚ್ಚೇ..!

ಈ ಪೀಠಿಕೆಗಳ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಅಮ್ಮನಿಗೆ ಇಷ್ಟೆಲ್ಲಾ ಸ್ಕೋಪ್ ಇದ್ದರೂ ಮಕ್ಕಳ ಹೆಸರಿನ ಮುಂದೆ ಸಾಮಾನ್ಯವಾಗಿ ಅಪ್ಪನೇ ರಾರಾಜಿಸುವುದಕ್ಕೆ ವಿಶೇಷ ಕಾರಣವಾದರೂ ಏನು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ. ಜೊತೆಗೆ ಅಪ್ಪನಿಗೆ ಯುಗಯುಗಗಳಿಂದಲೂ ಅನಾಯಾಸವಾಗಿ ಸಿಕ್ಕಿರುವ ಈ ಯಜಮಾನಿಕೆಯ ಬಗೆಗೂ ಅಚ್ಚರಿ ಮೂಡಿಸುತ್ತದೆ. ಇದೇನು ಪುರುಷ ಪ್ರಧಾನ‌ ವ್ಯವಸ್ಥೆಯ ಕುರುಹೋ..ಅಥವಾ ಕುರುಡಾಗಿ ಪಾಲಿಸಿಕೊಂಡು ಬಂದಂತಹ ಪಾಲಿಸಿಯೋ..ಇಲ್ಲವೇ ಎಲ್ಲರೂ ಹೀಗೆ ಮಾಡುತ್ತಿದ್ದಾರೆ ನಾವೂ ಅದನ್ನೇ ಮಾಡುತ್ತಾ ಮುಂದುವರೆಯುತ್ತಿದ್ದೇವೆಂಬ ಸಮಾಧಾನವೋ…..ನಾ ಅರಿಯೆ.

ಫೋಟೋ ಕೃಪೆ : theculturetrip

ಆಲ್ ರೈಟ್….!! ಅಪ್ಪನಾಗಲೀ ಅಮ್ಮನಾಗಲೀ ಮಕ್ಕಳ ಏಳಿಗೆಗಾಗಿ ಬದುಕಿನ ತಮ್ಮೆಲ್ಲಾ ಸುಖ- ಸಂತೋಷ ತ್ಯಾಗ ಮಾಡಿ ಅವರ ಭವಿಷ್ಯ ರೂಪಿಸುತ್ತಾರೆ. ಹೀಗಾಗಿ ಅವರಲ್ಲಿ ಒಬ್ಬರ ಹೆಸರು ಚಿರಾಸ್ಥಾಯಿಯಾಗಿರಲೆಂದು ಮಕ್ಕಳ ಹೆಸರಿನ ಮುಂದೆ ಅವರ ಹೆಸರನ್ನು ಸೇರಿಸಿಕೊಳ್ಳು ತ್ತಾರೆಂದಿಟ್ಟುಕೊಳ್ಳೋಣ ! ಆದರೆ ಬಹುತೇಕ ಹೆಣ್ಣುಮಕ್ಕಳು ಮದುವೆಯಾದ ತಕ್ಷಣವೇ ಅವರ ಹೆಸರಿನ ಮುಂದೆ ಇದ್ದ ಅಪ್ಪನೆಂಬ ಆಲದಮರದ ಹೆಸರನ್ನು ತೆಗೆದು, ಆ ಜಾಗದಲ್ಲಿ ಅಲ್ಲಿಯವರೆಗೂ ಗುರುತೇ ಇಲ್ಲದಿದ್ದ ಗಂಡನೆಂಬ ಹೊಸ ಮರದ ಹೆಸರನ್ನು ಪ್ರತಿಷ್ಠಾಪಿಸಿಕೊಂಡು ಬಿಡುತ್ತಾರೆ …! ಅಲ್ಲಿಗೆ ಅಪ್ಪನಿಗಾಗಿಯೇ ಇದ್ದ ಆಲದಮರ, ಆಕಾಶ , ಕಡಲು ಇತ್ಯಾದಿ ವಿಶೇಷಣಗಳು ಸೈಲೆಂಟಾಗಿ ಸೈಡಿಗೆ ಹೋಗಿ ಮರೆಯಾಗಿ ಬಿಡುತ್ತವೆ. ಮದುವೆಯಾದ ಕೂಡಲೇ ಗಂಡನೆಂಬುವನಿಗೆ ಸಿಗುವ ಈ ಪಾರಮ್ಯದ ಹಿಂದೆ ಅವಳಿಗಾಗಿ ಆತನ ಯಾವ ತ್ಯಾಗ ಅಥವಾ ಕೊಡುಗೆಗಳು ಕೆಲಸ ಮಾಡಿವೆಯೋ ದೇವರಿಗೇ ಗೊತ್ತು. ! ಯಾಕೆ ಹೀಗೆ…???

ನನಗೇ ನೆನಪಿರುವಂತೆ ಬಹಳ ವರ್ಷದ ಹಿಂದೆ ನನ್ನ ಬಂಧುಗಳಲ್ಲಿ ಒಬ್ಬ ಹೆಣ್ಣುಮಗಳ ಹೆಸರಲ್ಲಿ ಅವಳ ಮದುವೆಗೆ ಮುಂಚೆ ಒಂದು ಇನ್ಶ್ಯೂರೆನ್ಸ್ ಪಾಲಿಸಿ ಇತ್ತು. Ofcourse , ಅವಳ ಬಾಲ್ಯದಿಂದಲೂ ಅದರ ಪ್ರೀಮಿಯಮ್ಮನ್ನು ಅವರ ಅಮ್ಮನೇ ತುಂಬುತ್ತಿದ್ದರು, ಸಹಜವಾಗಿ ನಾಮಿನಿಯಾಗಿ ಅವಳ ಅಮ್ಮನೇ ಇದ್ದರು. ಅಪ್ಪ-ಅಮ್ಮನೆಂದರೆ ಆಕೆಗೆ ಅತೀವ ಪ್ರೀತಿಯಿದ್ದುದನ್ನು ಹತ್ತಿರದಿಂದಲೇ ನೋಡಿದ್ದೆ. ನಂತರ ಅವಳ ಮದುವೆಯಾದ ಕೆಲವೇ ದಿನಗಳಲ್ಲಿ ಆ ಪಾಲಿಸಿಯ ನಾಮಿನಿಯನ್ನು ಅಮ್ಮನ ಹೆಸರಿಂದ ತನ್ನ ಗಂಡನ‌ ಹೆಸರಿಗೆ ಯಾವುದೇ ಕಾರಣ ಕೊಡದೇ ವರ್ಗಾಯಿಸಿಕೊಂಡಳು. ಅಲ್ಲಿಗೆ ಅಪ್ಪನೆಂಬ ಆಲದ ಮರ, ಅಮ್ಮನೆಂಬ‌ ಹುಣಸೆಮರ…… ಎಲ್ಲವೂ ಜಸ್ಟ್ ಸ್ಟೇಟಸ್ ಹಾಕಲಿಕ್ಕೆ ಎಂಬುದು ಮನವರಿಕೆಯಾಗಿತ್ತು. ಇದು ಕೇವಲ ಒಬ್ಬರ ಉದಾಹರಣೆಯಷ್ಟೇ ! ಈ ತರಹದ ಅಥವಾ ಇದಕ್ಕೆ ವಿರುದ್ಧವಾದ ಸಂಗತಿಗಳೂ ಇರಬಹುದು. ಅಂದ್ರೆ… ಅಮ್ಮನ ಬಸಿರು, ಉಸಿರು, ಹೆಸರು ಎಲ್ಲವೂ ಒಂದು ಹಂತದವರೆಗೆ ಮಾತ್ರವೇನಾ…..???
ಒಂದು ಹಂತ ದಾಟಿದ ಮೇಲೆ ಅಥವಾ ‌ಮಕ್ಕಳ ಮದುವೆ ಮಾಡಿಕೊಟ್ಟಮೇಲೆ ಅವರ ಮುಂದಿನ ಜೀವನದ ಕ್ರೆಡಿಟ್ಟು- ಡೆಬಿಟ್ಟು ಹಾಗೂ ಜವಾಬ್ದಾರಿಯೆಲ್ಲವೂ ಗಂಡನ ಕಸ್ಟಡಿಗೆ ಅನಾಮತ್ತಾಗಿ ಹಸ್ತಾಂತರವಾಗಿ ( ಕೆಲವರ ಬದುಕಲ್ಲಿ ಇದು ಉಲ್ಟಾ ಹೊಡೆದಿರುತ್ತೆ..!) ಅವರು ತಮ್ಮ ಬದುಕಿನ ಎರಡನೇ‌ ಇನ್ನಿಂಗ್ಸ್ ಆರಂಭಿಸುತ್ತಾರೆ. ಆ ಹೊಸ ಜೀವನಕ್ಕೆ ಅಪ್ಪ ಎಂಬ ಆಲದ ಮರದ ಅಗತ್ಯ ಅಥವಾ ಹಂಗು ಬೇಕಿಲ್ಲವೋ, ಇಲ್ಲವೇ ಅದು ಒಗ್ಗೋಲ್ಲವೋ ಗೊತ್ತಿಲ್ಲ . ಆಗೇನಿದ್ದರೂ ತಾನು‌ ಇಂಥವರ ಹೆಂಡತಿ ಎಂದು ಗಂಡನ ಹೆಸರಿನ ಹಿಂದೆಯೇ ಐಡೆಂಟಿಫ಼ೈ ಮಾಡಿಕೊಳ್ಳಬೇಕಿರುವ ಅನಿವಾರ್ಯತೆ ಹೆಣ್ಣಿಗಿರು ತ್ತದೆಯೋ ಅಥವಾ ಈ ಅನಿವಾರ್ಯತೆಯನ್ನು ಸಮಾಜವೇ ಸೃಷ್ಟಿಸಿದೆಯೋ ‌ಎಂಬುದು ಸಹ ಕುತೂಹಲಕಾರಿಯಾಗಿದೆ. ಅಪ್ಪನ ಹೆಸರೇ ಮಗಳ ಹೆಸರಿನ ಜೊತೆಗೆ ಅವಳ ಮದುವೆಯ ನಂತರವೂ ಮುಂದುವರೆಸುವಲ್ಲಿ ನಮ್ಮ ಪ್ರೀತಿಯ ಆಲದ ಮರದ ಕುಡಿಗಳಿಗೆ ಇದ್ದಿರಬಹುದಾದ ತೊಂದರೆ ಯಾದರೂ ಏನು ಎಂಬುದು ಮೇಲ್ನೋಟಕ್ಕೆ ಅರ್ಥವಾಗದು. ಹೆಸರು ಬಿಟ್ಟುಹಾಕಿ! ಮದುವೆಯ ನಂತರ ತಂದೆ ತಾಯಿಗಳಿಗೆ ಬಾಲ್ಯದಿಂದಲೂ ತೋರುತ್ತಿದ್ದ ಅದೇ ಪ್ರೀತಿ- ಗೌರವವನ್ನು ಗಂಡನ ಪ್ರೇಮ ಮಂಕಾಗಿಸುವ ಅಥವಾ ಹೆಂಡತಿಯ ಮೋಹ ಮರೆಯಾಗಿಸುವ ಅನೇಕ ದೃಷ್ಟಾಂತಗಳೂ ಕಣ್ಮುಂದೆ ಇವೆ.



ಇವೆಲ್ಲವೂ….ಪುರುಷ ಪ್ರಧಾನ ಸಮಾಜದ ವ್ಯವಸ್ಥಿತ ದಬ್ಬಾಳಿಕೆಯ ಮುಂದುವರೆಯುತ್ತಿರುವ ಭಾಗ ಎಂದಲ್ಲಿ ಚರ್ಚೆ ಎಲ್ಲಿಂದ ಎಲ್ಲಿಗೋ ಹೋಗಿ ತಲುಪಬಹುದು.! ಹೀಗಾಗಿ ……ಸಧ್ಯಕ್ಕೆ ಅದು ಬೇಡ. ನೆನಪಿರಲಿ, ಕೆಲವು ಹೆಣ್ಣುಮಕ್ಕಳು ಮದುವೆಯಾದ ನಂತರವೂ ತಮ್ಮ ತಂದೆಯ ಹೆಸರಿನಿಂದಲೇ ಗುರುತಿಸಿಕೊಳ್ಳುವವರೂ ಇದ್ದಾರೆ. ಆ ಮಾತು ಬೇರೆ.!

ಒಟ್ಟಿನಲ್ಲಿ ಯಾವುದೇ ರೀತಿಯಿಂದ ಪರಾಮರ್ಶಿಸಿದರೂ ನ್ಯಾಯಯುತವಾಗಿ ಅಮ್ಮನಿಗೆ‌ ಸಿಗಬೇಕಾದ ಹೆಸರಿನ ಕ್ರೆಡಿಟ್ಟು ಅನಾಯಾಸವಾಗಿ ಅಪ್ಪನ ಖಾತೆಗೆ ಅವನು ಬಯಸದೆಯೂ ಜಮಾ ಆಗುತ್ತದೆ. ಆದರೆ ಯಾವುದೇ ಆಗಲೀ ಅನಾಯಾಸವಾಗಿ ದಕ್ಕಿದ್ದು ಬಹಳ ದಿನಗಳವರೆಗೆ ಇರಬಾರದಲ್ಲವೇ..? ಹೀಗಾಗಿ ಹೆಣ್ಣುಮಕ್ಕಳ ವಿಷಯದಲ್ಲಿ ಈ ಕ್ರೆಡಿಟ್ ಸಹಾ ಮದುವೆ ನಂತರ ಅಪ್ಪನಿಂದ ಗಂಡನಿಗೆ ಸಲೀಸಾಗಿ ವರ್ಗಾವಣೆಯಾಗಿ ಬಿಡುತ್ತದೆ. ಅಪ್ಪನೋ… ಗಂಡನೋ… ಹೆಣ್ಣುಮಕ್ಕಳಾದವರು ತಮ್ಮ ಹೆಸರಿನ ಜೊತೆಗೆ ಒಂದು ಗಂಡಿನ ಹೆಸರನ್ನು ಕೊನೆಯವರೆಗೂ ತಗಲಾಕಿಕೊಂಡೇ ಇರಬೇಕಾಗಿರುವುದರ ಹಿಂದಿನ ಕಾರಣ , ಮತ್ತೊಂದೆಡೆ ಹೆತ್ತ ತಾಯಿಯ ಹೆಸರನ್ನು ಮಕ್ಕಳು ತಮ್ಮ ಹೆಸರೊಂದಿಗೆ ಟ್ಯಾಗ್ ಮಾಡಿಕೊಳ್ಳದೇ ಇರುವ ಅಸಲೀಯತ್ತಾದರೂ ಏನೆಂಬ ಅಂಶಗಳು ಒಮ್ಮೊಮ್ಮೆ ನನ್ನಲ್ಲಿ ಕುತೂಹಲ ಮೂಡಿಸಿದ್ದಂತೂ ‌ನಿಜ.

ಮರೆಯುವ ಮುನ್ನ

ಇಡೀ ಬರಹದಲ್ಲಿ ವಿಷಯ ಇರೋದು ಯಾವುದು ಸರಿ ಯಾವುದು ತಪ್ಪು ಅಥವಾ ಯಾರು ಹೆಚ್ಚು, ಯಾರು ಕಡಿಮೆ ಎನ್ನುವುದರಲ್ಲಿ ಅಲ್ಲ. ಬದಲಿಗೆ ಬಾಲ್ಯದಿಂದಲೂ ತಂದೆ ತಾಯಿಗಳ ಮನೆಯಲ್ಲಿ ಅವರ ಆಶ್ರಯ- ಆರೈಕೆಗಳಲ್ಲಿ ಸಿಕ್ಕ ಅದಮ್ಯ ಅನುಭೂತಿ – ಐಡೆಂಟಿಟಿ ಒಂದು ಹಂತದ ನಂತರ ಅದು ತನ್ನತನದ ಮೂಲವನ್ನು ಕಳೆದುಕೊಂಡು ಮತ್ತೆಲ್ಲೋ ಬೇರೆಯಾಗಿಯೇ ಅನಾಮತ್ತಾಗಿ ಗುರುತಿಸಿಕೊಳ್ಳುವ ಪ್ರಕ್ರಿಯೆ ಮೂಡಿಸುವ ವಿಸ್ಮಯದಲ್ಲಿ……! ಇದು ಎಲ್ಲರ ವಿಚಾರದಲ್ಲಿಯೂ ಹೀಗೆ ಆಗಿಲ್ಲದಿರಬಹುದು. ಆದರೆ ಹಲವರ ವಿಚಾರದಲ್ಲಿಯಾದರೂ ಇದು ಸಹಜ ಬೆಳವಣಿಗೆ.
“ಬಳ್ಳಿ ಹುಟ್ಟುವುದು ಮಣ್ಣಿನ ಹೊಟ್ಟೆಯಿಂದ ಆದರೂ ಅದು ಬೆಳೆದ ಮೇಲೆ ಮರದ ಆಶ್ರಯ ಬೇಕೇ ಬೇಕು” ಎಂಬ ಮಾತು ಅಕ್ಷರಶಃ ಸತ್ಯ . ಈ ಲಾಜಿಕ್ ಇಟ್ಟುಕೊಂಡು ಚಿಕ್ಕಂದಿನಿಂದ ಮದುವೆಯ ವಯಸ್ಸಿನವರೆಗೆ ತಂದೆತಾಯಿಯ ಆರೈಕೆಯಲ್ಲಿ ಬೆಳೆದ ಮಕ್ಕಳು ಮದುವೆಯ ನಂತರ ಗಂಡನ ಆಶ್ರಯಕ್ಕೆ ಶಿಫ಼್ಟ್ ಆಗುವುದು, ಅಲ್ಲಿ ತಮ್ಮ ಮುಂದಿನ ಬಾಳ್ವೆ ಕಂಡುಕೊಳ್ಳುವುದು ಬದುಕಿನ ಪ್ರಕೃತಿ ಸಹಜ ನಿಯಮ ಎನ್ನುವುದು ಸಹಾ ನಿಜವೇ ಇರಬಹುದು. ಆದರೆ ….. ಬಳ್ಳಿಯಾಗಲೀ ಮರವಾಗಲೀ ಅವುಗಳು ಜನಿಸಿದ್ದು ಮಣ್ಣಿಂದಲೇ ಅಲ್ಲವೇ…? ಮಣ್ಣಿಲ್ಲದೇ ಬಳ್ಳಿಗಾಗಲೀ ಮರಕ್ಕಾಗಲೀ ಅಸ್ತಿತ್ವವೇ ಇಲ್ಲವೆಂಬ ಸರಳಸತ್ಯವೂ ಸಹ ಜಾಣ ಕುರುಡಾಗಿ, ಜಾಣ ಕಿವುಡಾಗಿ ನಿರಂತರವಾಗಿ ಗೋಚರಿಸುತ್ತಲೇ , ಧ್ವನಿಸುತ್ತಲೇ ಇರುವುದು ಸಹಾ ಪ್ರಕೃತಿ ನಿಯಮಾನಾ????


  • ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)

5 1 vote
Article Rating

Leave a Reply

2 Comments
Inline Feedbacks
View all comments

[…] ಎದುರಿಸುವ ಹಾಗೂ ಸ್ವೀಕರಿಸುವವರ #ಮನಸ್ಥಿತಿ , ಭಿನ್ನ ರೀತಿಯಿಂದಾಗಿ ಅವರವರ ಸಂತಸ -ದುಃಖ […]

[…] ಕಾಲೇಜು‌ ವಿಧ್ಯಾರ್ಥಿಗಳ #ಹಿಜಾಬ್– #ಕೇಸರಿ_ಶಾಲುಗಳ ಸುತ್ತ ಸುತ್ತುವರಿದ ವಿವಾದ, ಕುಮ್ಮಕ್ಕು, […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

2
0
Would love your thoughts, please comment.x
()
x
Aakruti Kannada

FREE
VIEW