ಮಮತೆಯ ಮಡಿಲಲ್ಲಿ – ಎನ್.ವಿ.ರಘುರಾಂ



ಭಾಷೆಯಾವುದಾದರೆ ಏನು? ಪ್ರೀತಿಸುವ ಹೃದಯಕ್ಕೆ  ಕೇಳಿಸುವುದು ಕರುಳಿನ ಭಾಷೆ ಮಾತ್ರ. ತಾಯಿ ಕರುಳಿನ ಮಹತ್ವವನ್ನು ಈ ಲೇಖನದ ಮೂಲಕ ಲೇಖಕರಾದ ಎನ್.ವಿ.ರಘುರಾಂ ಅವರು ಓದುಗರಿಗೆ ತಿಳಿಸಿದ್ದಾರೆ.ಮುಂದೆ ಓದಿ…

“ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ”

ಶ್ರೀ ವಿಜಯನಾರಸಿಂಹರವರ ರಚನೆಯ ಈ ಚಿತ್ರಗೀತೆ  ಅತ್ಯಂತ ಸುಮಧುರವಾಗಿ  ಆಕಾಶವಾಣಿಯಲ್ಲಿ  ತೇಲಿ ಬರುವಾಗ ತಲೆದೂಗದೆ ಇರುವವರು  ಅರವತ್ತರ ದಶಕದಲ್ಲಿ ಯಾರು ಇರಲಿಲ್ಲ!    ಎಲ್ಲರ ಮನಸ್ಸಿನಲ್ಲಿ  ಸಮಾಧಾನ ಮೂಡಿಸುತ್ತಿದ್ದ ಹಾಡದು!  ಚಲನ ಚಿತ್ರದಲ್ಲಿ  ತೋರಿಸಿರುವಂತೆ  ಒಂದು ದೊಡ್ಡ ಕೋಳಿಯ  ಸುತ್ತಾ ಎಂಟು ಹತ್ತು  ಸಣ್ಣ ಸಣ್ಣ ಕೋಳಿಗಳು  ಕೊಕ್, ಕೋಕ್, ಕೋ ಎಂದು ಹೋಗುವ ದೃಶ್ಯ  ಗುಡಿಸಲು ಇರುವ ಕಡೆ ನೋಡಲು ಸಿಗುವುದು ಸಾಮಾನ್ಯ ಕೂಡ.   ನಮ್ಮ ಪಕ್ಕದ ಮನೆ ಶೇಷ  ಸಾಕಿದ  ಕೋಳಿಗಳು ಯಾವಾಗಲೂ  ಮನೆಯ ಹತ್ತಿರ  ಸುತ್ತುತ್ತಿದ್ದವು.  ಆ ಪುಟ್ಟ,  ಪುಟ್ಟ ಮರಿಗಳು ನೋಡಲು ಎಷ್ಟೋಂದು ಚೆಂದ!

#ಅಮ್ಮನ_ಮಡಿಲು

ನಮ್ಮ ಮನೆಯಲ್ಲಿ ಕೂಡ ಎಂಟು,  ಹತ್ತು ಜನ ಇದ್ದೇವಲ್ಲ!  ಆವಾಗ ಎಲ್ಲರ ಮನೆಯಲ್ಲಿ ಕೂಡ ಅದು ಸಾಮಾನ್ಯವೇ ಬಿಡಿ.  ಅದರಲ್ಲಿ ಏನೊ ವಿಶೇಷವಿರಲಿಲ್ಲ.  ಅಮ್ಮನಿಗೆ  ಯಾರೂ ಆಗ “ಹೋಂ ಮೇಕರ್ ” ಎಂದು ಹೆಸರಿಟ್ಟಿರಲಿಲ್ಲ!   ಅವರಾಯಿತು,  ಅವರ ಅಡಿಗೆ ಮನೆಯಾಯಿತು. ಮನೆಯ  ಕಾರು ಬಾರು ಎಲ್ಲಾ  ಅಪ್ಪನದು.    ಮನೆಯವರಿಗೆ  ಎಲ್ಲರಿಗೂ ಒಟ್ಟಿಗೆ ಊಟ.   ಅಮ್ಮನ ಅಡಿಗೆ ನಳಪಾಕವೇ ಸರಿ.  ತಿಂದವರೆಲ್ಲ ಅದನ್ನು ಅಮೃತ ಎಂದು ಹೇಳಿದರೆ ಅದರಲ್ಲಿ ಗೋಡಂಬಿ,  ದ್ರಾಕ್ಷಿ,  ಬಾದಾಮಿ, ಕೇಸರಿ ಹಾಕಿ ಅಡಿಗೆ ಮಾಡಿದ್ದಾರೆ ಎಂದು ಅರ್ಥವಲ್ಲ!  ಅಮ್ಮ ಪ್ರತಿಯೊಬ್ಬರ  ಇಷ್ಟ ಕಷ್ಟಗಳ ನೋಡಿಕೊಂಡು ಮಾಡುವ  ಅಡಿಗೆ,  ಧಾರಾಳವಾಗಿ ಬಡಿಸುವ ಪರಿ, ಇದಲ್ಲರ ಜೊತೆಗೆ  ನಮಗೆ ಅಮ್ಮನ ಮೇಲೆ ಇರುವ  ಪ್ರೀತಿ ಆ ಅಡಿಗೆಯನ್ನು  ಅಮೃತಸಮನಾಗಿರಿಸಿತ್ತು!  ಊಟ, ತಿಂಡಿ ಮಾತ್ರವಲ್ಲ  ಶಾಲೆಯ ಚೀಲ,  ಬಳಪದ  ತುಂಡು, ಸ್ಲೇಟ್ ಓರೆಸುವ ಬಟ್ಟೆ, ಎಲ್ಲದಕ್ಕೂ   ಅಮ್ಮನ ಸೆರಗು ಹಿಡಿದುಕೊಂಡು  ಸುತ್ತುತ್ತಿದ್ದೆವು.   ಅಮ್ಮನನ್ನು ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ!

”ತಾಯಿ ತೊರೆದು ಘಳಿಗೆ ಕೂಡ ಅಗಲಾಲಾರದು  ತನ್ನ ಸೋದರರ ಮರೆತು ಬಿಟ್ಟು ಮೆರೆಯಲಾರದು”

ಆದರೆ  ಶೇಷನ  ಮನೆಯ  ಕೋಳಿಗಳು ಎರಡು ತಿಂಗಳು ಆಗುವ ಹೊತ್ತಿಗೆ  ಎಲ್ಲೋ ಕಣ್ಮರೆ   ಆಗುತ್ತಿತ್ತು!

ನಾವು   ದೊಡ್ಡವರಾಗುತ್ತಾ  ಬಂದಂತೆ  ಅಮ್ಮನ ಸೆರಗನ್ನು  ಬಿಟ್ಟು  ಮನೆಯಿಂದ  ಹೊರಗೆ  ಹೊರೆಟೆವೆಲ್ಲಾ.    ಅಮ್ಮ  ಹೇಳುತ್ತಿದ್ದುದು  ಒಂದೇ ಮಾತು, ಓದಿ ಇಲ್ಲವೇ ದನಕಾಯಲು ಹೋಗಿ!     ಅಮ್ಮನ ಮೊದಲ ಪಾಠ ಮತ್ತು ಕೊನೆಯ ಪಾಠ  ಅದೇ  “ನಿಮ್ಮ ಕಾಲ ಮೇಲೆ  ನೀವು ನಿಂತುಕೊಳ್ಳಿ”.

ಹೊರಗಡೆ ಆಹಾರ ಸಿಗುವುದು ಸುಲಭವೇ?   ಮೈ ಬಗ್ಗಿ ದುಡಿದರೆ ಮಾತ್ರ  ಕಾಸು ಬರುವುದು!  ಓದಿಲ್ಲದವರಿಗೆ  ಯಾರು ಬೆಲೆ ಕೊಡುತ್ತಾರೆ ಹೇಳಿ?    ಅಮ್ಮನ ಪ್ರೀತಿಯ ಜೊತೆಗೆ ಹಾರೈಕೆ ಸದಾ ಇದ್ದಿದ್ದರಿಂದ  ಓದಿದ್ದು  ಪದವಿಗಳಾಗಿ ಮಾರ್ಪಾಡಾಯಿತು.  ವಿದ್ಯೆ  ಊಟದ ದಾರಿ ತೋರಿಸಿತು.



ಪ್ರೇಮವಿರುವ ಮನೆಯದುವೆ ನಿತ್ಯ ಸುಂದರ
ಆ ಪ್ರೇಮಭರಿತ ಹೃದಯವದು ದೇವ ಮಂದಿರ

ಶೇಷನ  ಮನೆಯಲ್ಲಿ  ಹಳೆಯ ಕೋಳಿಗಳು ಹೋಗುತ್ತಿದ್ದವು.  ಸ್ವಲ್ಪ  ದಿನದಲ್ಲೇ ಮತ್ತೆ ಹೊಸ ಕೋಳಿ ಮರಿಗಳು ಬರುತ್ತಿದ್ದವು.   ಮತ್ತೆ ಬುಟ್ಟಿಯಲ್ಲಿ ಜೋಪಾನ ಮಾಡುತ್ತಿದ್ದ.

ಈಗ ಬೇಸಿಗೆ  ರಜೆ ಬಂದಿದೆ.  ಮತ್ತೆ ನಮ್ಮ ಮನೆ ತುಂಬಿದೆ.  ಮಕ್ಕಳೆಲ್ಲ  ಒದಿ  ಕೆಲಸಕ್ಕೆ ಸೇರಿ  ರೊಟ್ಟಿಯ  ಜೊತೆಗೆ  ಬೆಣ್ಣೆ  ಹಾಕಿಕೊಳ್ಳವ  ಶಕ್ತಿ  ಕೂಡ ಪಡೆದಿದ್ದಾರೆ!   ಅಮ್ಮನಿಗೆ  ಇನ್ನೇನು ಬೇಕು ಹೇಳಿ?   ಅಪ್ಪನ   ಕಾರುಬಾರು ನಡೆಯದೆ ಇದ್ದರೂ  ಈಗಲೂ ನಡೆಸುತ್ತಿರುವ ರೀತಿಯಲ್ಲಿ  ನಡೆದುಕೊಳ್ಳುವುದನ್ನು  ಬಿಟ್ಟಿಲ್ಲ!    ಅಮ್ಮ    ಆವಾಗಲೂ ಅಡಿಗೆ ಮನೆ.  ಈವಾಗಲೂ  ಅಡಿಗೆ ಮನೆ.   ಮೊದಲೂ  ರಜದಲ್ಲಿ ಮಾಡುತ್ತಿದ್ದುದು ಚಕ್ಕುಲಿ,  ಕೋಡುಬಳೆ,  ನಿಪ್ಪಟ್ಟು ಗಳು.   ಈಗಲೂ ಅದೇ.   ಆದರೆ   ಆಗ ಮಕ್ಕಳಿಗೆ   ಎಂದು  ಮಾಡುತ್ತಿದ್ದರು, ಈಗ ಮೊಮ್ಮಕ್ಕಳಿಗೆ.  ಏಳು ಜನ ಮಕ್ಕಳನ್ನು  ಸುಧಾರಿಸಿದವರಿಗೆ   ಹದಿಮೂರು ಜನ ಮೊಮ್ಮಕ್ಕಳನ್ನು  ಸುಧಾರಿಸುವುದು  ಒಂದು ಕಷ್ಟವೇ?     ಅಪ್ಪ, ಅಮ್ಮನ ಪ್ರೀತಿ ಮಕ್ಕಳಮೇಲಿಗಿಂತ  ಮೊಮ್ಮಕ್ಕಳ ಮೇಲೇ ಜಾಸ್ತಿ  ಎಂದು ನನ್ನ ಅನಿಸಿಕೆ.

ಫೋಟೋ ಕೃಪೆ : wikimedia

ದೇವನವನೆ ಪ್ರೇಮರೂಪ ದಯಾಸಾಗರ
ಆ ದೈವರಕ್ಷೆ ಕಾವುದೆಲ್ಲ ಪ್ರೇಮಜೀವರ.

ಆದರೆ ಶೇಷನ ಕೋಳಿ ಗೂಡಿನಲ್ಲಿ ಈಗ ಬಣ್ಣ ಬಣ್ಣದ ನಾಟಿ ಕೋಳಿಗಳು ಹೋಗಿ  ಬಿಳಿ ಬಣ್ಣದ ಬ್ರಾಲ್ಲರ್  ಕೋಳಿಗಳು ಬಂದಿವೆ!

ಮನೆಯಲ್ಲಿ ಕೂಡ ಬದಲಾವಣೆ ಆಗದೆ ಇರಲಾಗುತ್ತದೆಯೇ?  ಬಿಳಿ ಸುಣ್ಣದ ಬಣ್ಣ  ಹೋಗಿ  ರಂಗುರಂಗಿನ ಬಣ್ಣ ಗೋಡೆ ಮೇಲೆ ಬಂದಿದೆ.  ಬೇಸಿಗೆ ರಜದಲ್ಲಿ ಮೊಮ್ಮಕ್ಕಳ  ಕಲರವದಲ್ಲಿ  ಅಮ್ಮ ಕಳೆದು ಹೋಗಿದ್ದಾರೆ!   ಮೂರು ವರ್ಷದ    ಮೊಮ್ಮಗ    ಕೂಡ  ಇಂಗ್ಲಿಷಿನಲ್ಲಿ ಮಾತನಾಡುವ  ಪರಿ ನೋಡಿ ಅಮ್ಮ  ಬೆರಗಾಗಿದ್ದಾಳೆ!   ಮೊಮ್ಮಕ್ಕಳ  ಮಾತು  ಏನೂ ಅರ್ಥ ಆಗದೆ ಇದ್ದರೂ  ‘ಎಷ್ಟು ಚೆಂದ ಮಾತನಾಡುತ್ತಾವೆ ಗೊತ್ತಾ’ ಎಂದು ಊರೆಲ್ಲಾ ಹೇಳಿ ಕೊಂಡು ಬರುತ್ತಾಳೆ!  ಭಾಷೆಯಾವುದಾದರೆ ಏನು? ಪ್ರೀತಿಸುವ ಹೃದಯಕ್ಕೆ  ಕೇಳಿಸುವುದು ಕರುಳಿನ ಭಾಷೆ ಮಾತ್ರ!

ಬಣ್ಣದ ಕೋಳಿಯಾದರೇನು?  ಬಿಳಿ ಕೋಳಿಯಾದರೇನು?  ಕೂಗುವುದು ಕೋಕ್..ಕೊಕ್.. ..ಕೋ….. ಎಂದೇ!


  • ಎನ್.ವಿ.ರಘುರಾಂ (ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading