ಇಸ್ರೇಲಿನ ಕಥೆ ಮತ್ತು ವ್ಯಥೆ – ವಿಂಗ್ ಕಮಾಂಡರ್ ಸುದರ್ಶನ



ಗಾಜಾ ಎಷ್ಟಿದೆ?, ಬೆಂಗಳೂರಿನ ಅರ್ಧದಷ್ಟು ಮಾತ್ರ. ಜೆರುಸಲೇಮಿನ ಪವಿತ್ರ ನೆಲದಲ್ಲಿ ಇದೊಂದು ಅಪವಿತ್ರ ಹೋರಾಟ. ಇಸ್ರೇಲಿನ ಕಥೆ ಮತ್ತು ವ್ಯಥೆಯ ಬಗ್ಗೆ ವಿಂಗ್ ಕಮಾಂಡರ್ ಸುದರ್ಶನ ಅವರು ಮಾಹಿತಿಯೊಂದನ್ನು ಓದುಗರಿಗೆ ನೀಡಿದ್ದಾರೆ . ಸ್ವಾರಸ್ಯಕರ ಕತೆಯೊಂದನ್ನು ಓದಿ…

೧೪ ಮೇ…

ಇವತ್ತು ಇಸ್ರೇಲ್ ದೇಶ ಸ್ವಾತಂತ್ರ್ಯ ಪಡೆದ ದಿನ. ಇಸ್ರೇಲ್, ಯಹೂದಿಗಳಿಗೆಂದೇ ಅರಬ್ ಜಗತ್ತಿನ ನಡುವೆ ಸೃಷ್ಟಿಸಿಕೊಟ್ಟ ಪುಟ್ಟದೊಂದು ದೇಶ. ಜೆರುಸಲೇಮಿನ ಮತ್ತು ಆಸುಪಾಸಿನ ಗುಡ್ಡಗಾಡುಗಳಲ್ಲಿ ನೆಲಸಿದ್ದ ಈ ಯಹೂದಿ ಜನಾಂಗಕ್ಕೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದೆ. ದುರದೃಷ್ಟಕರ ಸಂಗತಿ ಏನೆಂದರೆ ಹಲವಾರು ವರ್ಷಗಳ ನಂತರ ಹುಟ್ಟಿಕೊಂಡ ರೋಮನ್ ಕ್ರಿಶ್ಚಿಯನ್ನರ ಪಂಗಡ ‘ಕ್ರೂಸೇಡ್’ ಎನ್ನುವ ಹೆಸರಿನಲ್ಲಿ ಇವರನ್ನು ಜೆರುಸಲೇಮಿನಿಂದ ಸ್ಥಾನ ಪಲ್ಲಟಗೊಳಿಸಿಬಿಟ್ಟಿದ್ದರು. ಅಲ್ಲಿಂದ ಪ್ರಾರಂಭ ವಾಯಿತು ಇವರ ಅಲೆದಾಟ. ಸ್ಪೇನ್, ಇಂಗ್ಲೆಂಡ್, ಅಮೆರಿಕ, ಆಫ್ರಿಕಾ.. ಇವರು ತಿರುಗಾಡಿದ ದೇಶವಿಲ್ಲ. ಭಾರತಕ್ಕೂ ಇವರು ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಬಂದಿದ್ದರು. ಯಾವ ರೀತಿಯ ಧರ್ಮನಿಂದನೆ ಮತ್ತು ಅವಮಾನಕ್ಕೆ ಒಳಪಡಿಸದೆ, ಗೌರವದಿಂದ ಇವರನ್ನು ಆದರಿಸಿದ್ದ ಒಂದು ದೇಶ, ಧರ್ಮವಿತ್ತೆಂದರೆ ಅದು ಭಾರತ ಮತ್ತು ಇಲ್ಲಿನ ಸನಾತನ ಧರ್ಮ. ಬೇರೆ ದೇಶಗಳಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಇವರು ಜನಾಂಗೀಯ ದ್ವೇಷಕ್ಕೆ ತುತ್ತಾದರು. ಇವರ ಯಶಸ್ಸು, ಸಂಪತ್ತು ಇವರ ಅಸ್ತಿತ್ವಕ್ಕೇ ಮುಳುವಾಗತೊಡಗಿತು. ಲಕ್ಷಾಂತರ ಯಹೂದಿ ಗಳನ್ನು ವಿನಾಕಾರಣ ಕೊಲ್ಲಲಾಯಿತು. ‘ಹೀಬ್ರು ಬೈಬಲ್’ ನಲ್ಲಿ ಬರೆದಿರುವಂತೆ ಇಸ್ರೇಲ್ ಯಹೂದಿಗಳಿಗೆಂದೇ ದೇವರು ವರದಾನ ಕೊಟ್ಟಿರುವ ನೆಲ..The Promised Land..ಎಲ್ಲಾ ಯಹೂದಿಗಳು ಇಲ್ಲೇ ಬಂದು ನೆಲಸಬೇಕು ಎಂಬ ದೇವವಾಕ್ಯನ್ನು ನನಸಾಗಿಸುವ ಪಣ ತೊಟ್ಟು ಪ್ರತಿಯೊಬ್ಬ ಯಹೂದಿ ತಮ್ಮ ಮೂಲನೆಲಕ್ಕೆ ಮರಳುವ ಕನಸು ಕಾಣತೊಡಗಿದರು. ೧೯೧೭ ರಲ್ಲಿ ಬ್ರಿಟಿಷರ ನೇತೃತ್ವದ Balfour Agreement ಪ್ರಕಾರ ಯಹೂದಿಗಳಿಗೆ ಪ್ರತ್ಯೇಕ ರಾಜ್ಯ ಒಂದನ್ನು ಸೃಷ್ಟಿಸುವ ಸ್ಥೂಲವಾದ ನಿರ್ಣಯ ಒಂದನ್ನು ತೆಗೆದುಕೊಳ್ಳಲಾಯಿತು. ಒಂದನೇ ವಿಶ್ವಯುದ್ಧದ ಸಮಯದಲ್ಲಿ ಒಟ್ಟೊಮನ್ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿದ್ದ ಅರಬ್ ಪ್ರಾಂತ್ಯದ ಕೆಲವು ಪ್ರದೇಶಗಳನ್ನು ಬ್ರಿಟಿಷ್ ಸಾಮ್ರಾಜ್ಯ ಗೆದ್ದುಕೊಂಡುಬಿಟ್ಟಿತ್ತು. ಮೈಸೂರಿನ ಅಶ್ವಾರೂಢರೂ ಸೇರಿದಂತೆ ಹಲವಾರು ಭಾರತೀಯ ಸೈನಿಕರ ಹೋರಾಟವನ್ನು ಇಲ್ಲಿ ಸ್ಮರಿಸಲೇ ಬೇಕು.

ಫೋಟೋ ಕೃಪೆ :WWAY

ಎರಡನೇ ವಿಶ್ವಯುದ್ಧದ ಸಮಯಕ್ಕೆ ಜಾಗತಿಕ ಮಟ್ಟದಲ್ಲಿ ಕೆಲವಾರು ಮಹತ್ತರ ಬದಲಾವಣೆಗಳು ನಡೆದವು. ಒಂದು ಕಾಲದಲ್ಲಿ ಸುಮಾರು ಅರ್ಧಕ್ಕೂ ಹೆಚ್ಚು ಪ್ರಪಂಚವನ್ನು ಆಳಿದ ಬ್ರಿಟನ್, ಯುದ್ಧಾನಂತರ ಬಸವಳಿದು ಹೋಗಿತ್ತು. ಬರ್ಮಾ, ಶ್ರೀಲಂಕಾ, ಭಾರತ ಹೀಗೆ ಒಂದೊಂದು ದೇಶಗಳಿಂದ ನಿರ್ಗಮಿಸಲು ಪ್ರಾರಂಭಿಸಿತ್ತು. ಮಧ್ಯ ಏಷ್ಯಾದಲ್ಲಿ ಈಜಿಪ್ಟ್, ಜೋರ್ಡಾನ್ ಮತ್ತು ಪ್ಯಾಲೆಸ್ಟೀನ್ ದೇಶಗಳನ್ನೂ ಕೈಬಿಟ್ಟು ಹೊರಡುವ ಸಿದ್ಧತೆ ನಡೆಸಲು ಪ್ರಾರಂಭಿಸಿದರು. ಜರ್ಮನಿಯಲ್ಲಿ ಯಹೂದಿಗಳ ಮೇಲೆ ನಡೆಯುತ್ತಿದ್ದ ನರಹತ್ಯೆಯಿಂದ ತಪ್ಪಿಸಿಕೊಂಡು ಬಂದ ಸುಮಾರು ೪೫,೦೦೦ ಜನ ಯಹೂದಿಗಳು ಜೆರುಸಲೇಮಿನ ಆಸುಪಾಸಿನಲ್ಲಿ ಬಂದು ನೆಲೆಸಿದ್ದರು. ನೀವು ಹೋಗುವ ಮುನ್ನ ನಮಗೊಂದು ನೆಲೆಮಾಡಿಟ್ಟು ಹೋಗಿ ಎಂದು ದುಂಬಾಲು ಬಿದ್ದರು ಈ ಯಹೂದಿಗಳು. ಅಮೆರಿಕ ಅಧ್ಯಕ್ಷ ಟ್ರೂಮನ್ ಕೂಡ ಇದನ್ನು ಬಲವಾಗಿ ಅನುಮೋದಿಸಿದ್ದರು. ಬ್ರಿಟಿಷ್ ಆಡಳಿತದ ಅಡಿಯಲ್ಲಿದ್ದ ಪ್ಯಾಲಸ್ಟೇನನ್ನು ವಿಭಜಿಸಿ ಕೆಲವು ಭಾಗ ಯಹೂದಿಗಳಿಗೆ ಮತ್ತು ಕೆಲವು ಭಾಗ ಪ್ಯಾಲೆಸ್ಟೀನ್ ಅರಬರಿಗೆ ಮತ್ತು ಯಹೂದಿ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಈ ಮೂರು ಧರ್ಮಕ್ಕೆ ಪವಿತ್ರವಾದ ಕ್ಷೇತ್ರ ಜೆರುಸಲೇಮನ್ನು ವಿಶ್ವಸಂಸ್ಥೆಯ ಆಡಳಿತಕ್ಕೆ ಒಳಪಡಿಸುವ ಒಡಂಬಡಿಕೆಯನ್ನು ಜಾರಿಗೆ ತರಲಾಯಿತು. ಶತಮಾನಗಳಿಂದ ಯಹೂದಿಗಳಿಗೇ ಅಂತಾ ಒಂದು ರಾಜ್ಯ ಸಿಕ್ಕಿತಲ್ಲಾ ಎಂದು ಯಹೂದಿಗಳು ಸಂಭ್ರಮಿಸಿದರೆ, ಅರಬರು ಸಿಟ್ಟಿಗೆದ್ದರು.

೧೪  ಮೇ ೧೯೪೮ ರಂದು ಇಸ್ರೇಲಿನ ಉಗಮವಾಯಿತು ಮತ್ತು ೧೫ ಮೇ ೧೯೪೮ ರಂದು ಅರಬ್ ಮತ್ತು ಯಹೂದಿಗಳ ನಡುವೆ ಯುದ್ಧ ಪ್ರಾರಂಭವಾಯಿತು. ಉತ್ತರದಲ್ಲಿ ಲೆಬನಾನ್, ಸಿರಿಯಾ, ಪೂರ್ವದಲ್ಲಿ ಟ್ರಾನ್ಸ್ ಜೋರ್ಡಾನ್, ಇರಾಕ್, ದಕ್ಷಿಣದ ಸೌದಿ ಮತ್ತು ಈಜಿಪ್ಟ್ ಈ ಎಲ್ಲಾ ದೇಶಗಳು ಇನ್ನೂ ಅದೇ ತಾನೇ ಹುಟ್ಟಿಕೊಂಡ ಇಸ್ರೇಲ್ ಮೇಲೆ ಮುಗಿಬಿದ್ದವು.

ಫೋಟೋ ಕೃಪೆ : middleeasteye

ಅಂದು ಇಸ್ರೇಲಿನಲ್ಲಿ ಇದ್ದದ್ದು ಕೇವಲ ೨೫೦೦೦ ಸೈನಿಕರು. ಇಸ್ರೇಲನ್ನು ಉಳಿಸಿಕೊಳ್ಳಲೇ ಬೇಕು ಎಂದು ಅವಡುಗಚ್ಚಿಕೊಂಡು ಯಾವ ಪರಿ ಅರಬರನ್ನು ಸದೆಬಡಿದರು ಎಂದರೆ..ಜಗತ್ತೇ ದಂಗಾಗಿ ಹೋಯಿತು. ಆಫ್ರಿಕಾ, ಅಮೆರಿಕ, ಯೂರೋಪ್ ದೇಶಗಳಲ್ಲಿದ್ದ ಯಹೂದಿಗಳು ಇಸ್ರೇಲ್ ಬಂದು ಸೇರಿಕೊಂಡರು. ಬಂದವರಿಗೆ ಮೊಟ್ಟಮೊದಲ ಕೆಲಸ ಸೈನ್ಯದ ತರಬೇತಿ ಪಡೆದು ಕೊಳ್ಳುವುದು ಮತ್ತು ಗಡಿಗಳಲ್ಲಿ ಮುನ್ನುಗ್ಗಿ ಅರಬರ ಸದೆಬಡಿಯುವುದು. ಹೀಗೆ ಆರು ತಿಂಗಳಲ್ಲಿ ಇಸ್ರೇಲಿನ ಸೈನ್ಯ ಒಂದು ಲಕ್ಷಕ್ಕೂ ಹೆಚ್ಚಾಗಿ ಹೋಯಿತು.

ಇಂತಹದೊಂದು ದೇಶ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ. ಸುತ್ತಲೂ ಏಳು ವೈರಿಗಳ ದೇಶ. ದೇಶದೊಳಗೆ ಎಂತಹ ಪರಿಸ್ಥಿತಿ ಅಂತೀರಾ.. ಒಂದು ಹಳ್ಳಿ ಯಹೂದಿಯವರದಾದರೆ ಪಕ್ಕದ ಹಳ್ಳಿಯಲ್ಲಿ ಇರುವವರು ಪ್ಯಾಲೆಸ್ಟೀನ್ ಅರಬರು! ಹಾಗಾಗಿ ಸಣ್ಣಪುಟ್ಟ ಕಲಹಗಳು ದಿನನಿತ್ಯದ ಮಾತು ಮತ್ತು ನಡುನಡುವೆ ದೊಡ್ಡ ಪ್ರಮಾಣದ ಯುದ್ಧಗಳು. ೧೯೬೭ ರಲ್ಲಿ ನಡೆದ ಯುದ್ಧವನ್ನು ‘ಆರು ದಿನಗಳ ಯುದ್ಧ’ ಎಂದುಕರೆಯುತ್ತಾರೆ. ಈ ಯುದ್ಧದ ಬಗ್ಗೆ ಮೂರು ಪೋಸ್ಟುಗಳಲ್ಲಿ ಹಂಚಿಕೊಂಡಿದ್ದೇನೆ ಓದಿ..ಮತ್ತು ೧೯೪೮ ರ ಮತ್ತು ೧೯೬೭ ರ ಇಸ್ರೇಲಿನ ಭೂಪಟವನ್ನು ಹೋಲಿಸಿ ನೋಡಿ…ಇಸ್ರೇಲಿಗರ ಸಾಹಸ ಅರ್ಥವಾಗುತ್ತದೆ.



ಗಾಜಾ಼ ಪಟ್ಟಿ

೧೫ ಮೇ ೧೯೪೮

ಪ್ರಪಂಚದ ಮೊಟ್ಟ ಮೊದಲ, ಏಕೈಕ, ಯಹೂದಿ ಗಳಿಗೆಂದೇ ನಿರ್ಮಿಸಿದ ದೇಶ ಇಸ್ರೇಲ್ ಜನ್ಮ ತಳೆದು ಇನ್ನೂ ಒಂದು ದಿನ ಕೂಡ ಆಗಿರಲಿಲ್ಲ…ಹಸಿದ ತೋಳಗಳಂತೆ ಅರಬ್ ದೇಶಗಳು ಅದರ ಮೇಲೆ ಮುಗಿಬಿದ್ದವು. ಸ್ಥಾನಪಲ್ಲಟಗೊಂಡ ಪ್ಯಾಲೆಸ್ಟೀನಿಯನ್ನರ ಮೇಲಿನ ಪ್ರೇಮಕ್ಕಿಂತಲೂ, ನಮ್ಮ ನಡುವೆ..ಅರಬರ ಮಧ್ಯೆ ಒಂದು ಯಹೂದಿ ದೇಶವಿರಬಾರದು ಎನ್ನುವ ದ್ವೇಷದಿಂದ ಮುನ್ನುಗ್ಗಿದ್ದರು. ಈ ಕದನದಲ್ಲಿ ಸಿಕ್ಕಷ್ಟು ಬಾಚಿಕೊಂಡು ಹೋಗುವ ಸ್ವಾರ್ಥ ಕೂಡ ಇತ್ತು. ಜೋರ್ಡಾನ್ ದೇಶ ಜೋರ್ಡಾನ್ ನದಿಯ ಪಶ್ಚಿಮ ದಡದಲ್ಲಿನ ಪ್ರದೇಶವನ್ನು (West Bank) ವಶಪಡಿಸಿಕೊಂಡು ಜೊತೆಗೆ ಜೆರುಸಲೇಮನ್ನು ಭಧ್ರಪಡಿಸಿಕೊಂಡರೆ, ದಕ್ಷಿಣದಲ್ಲಿ ಈಜಿಪ್ಟ್ ಗಾಜಾ಼ಪಟ್ಟಿಯನ್ನು ವಶಪಡಿಸಿಕೊಂಡಿತು. ಪ್ಯಾಲೆಸ್ಟೀನಿನ ನಿರಾಶ್ರಿತರ ತಂಡೋಪತಂಡ ಈ ಪ್ರದೇಶಗಳಿಗೆ ಹರಿದು ಬಂತು. ಸುಮಾರು ಎರಡು ಲಕ್ಷ ಜನ ಗಾಜಾ಼ ಪಟ್ಟಿಗೆ ಬಂದು ಸೇರಿಕೊಂಡರು. ಈಜಿಪ್ಟ್ ಒಬ್ಬ ಹಿರಿಯ ಸೈನ್ಯಾಧಿಕಾರಿಯನ್ನು ರಾಜ್ಯಪಾಲರಾಗಿ ನಿಯಮಿಸಿ ಇಲ್ಲಿನ ಆಡಳಿತ ನಡೆಸುವ ವ್ಯವಸ್ಥೆ ಮಾಡಿಕೊಂಡಿತು.
೧೯೬೭  ರಲ್ಲಿ ನಡೆದ “ಆರು ದಿನಗಳ ಯುದ್ಧ” ಇದೆಲ್ಲವನ್ನೂ ಒಂದೇ ಏಟಿಗೆ ಬದಲಾಯಿಸಿ ಬಿಟ್ಟಿತು. ಇಸ್ರೇಲ್ ಗಾಜಾ಼ ಪಟ್ಟಿ, ಪಶ್ಚಿಮ ದಡ, ಜೆರುಸಲೇಮ್ ಎಲ್ಲವನ್ನೂ ತನ್ನ ವಶಕ್ಕೆ ತೆಗೆದುಕೊಂಡಿತು. ಅಷ್ಟೇ ಅಲ್ಲ ಈಜಿಪ್ಟಿನ ಸಿನಾಯ್ ಮರುಪ್ರದೇಶ, ಸಿರಿಯಾದ ಗೋಲನ್ ಗುಡ್ಡವನ್ನೂ ಗೆದ್ದುಕೊಂಡು ಬಿಟ್ಟಿತ್ತು. ಅರಬ್ಬೀದೇಶಗಳು ಅವಮಾನದಿಂದ ಕುದ್ದು ಹೋದವು. ಅನಿರೀಕ್ಷಿತವಾಗಿ ದೊರೆತ ಜಯವನ್ನು ಇಸ್ರೇಲ್ ಬಹಳ ಚಾಣಾಕ್ಷತನದಿಂದ ಉಪಯೋಗಿಸಿಕೊಂಡಿತು. ಗಾಜಾ಼ ಪಟ್ಟಿಯಲ್ಲಿದ್ದ ಪ್ಯಾಲಸ್ಟೇನಿಯರನ್ನು ಬಳಸಿಕೊಂಡು ಅಲ್ಲಿನ ಮತ್ತು ಸಿನಾಯ್ ಮರುಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಮಾಡಿ ವ್ಯವಸಾಯ ಪ್ರಾರಂಭಿಸಿತು. ಮರುಭೂಮಿ ಹಸಿರು ಹೊಲಗಳಾಗಿ ಕಂಗೊಳಿಸತೊಡಗಿದವು. ಕಡಿಮೆ ಕೂಲಿಗೆ ಸಿಗುತ್ತಿದ್ದ ಪ್ಯಾಲಸ್ಟೇನಿಯರನ್ನು ಬಳಸಿಕೊಂಡು ಸೈನ್ಯಕ್ಕೆ ಬೇಕಾದ ಆಯುಧ, ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಪ್ರಾರಂಭಿಸಿತು.

ಫೋಟೋ ಕೃಪೆ : amarujala

ನೋಡುನೋಡುತ್ತಲೇ ಜಗತ್ತಿನ ಮೂರನೆಯ ಅತಿದೊಡ್ಡ ಶಸ್ತ್ರಾಸ್ತ್ರಗಳನ್ನು ತಯಾರಿಸುವ ದೇಶವಾಗಿ ಬಿಟ್ಟಿತು. ಎಲ್ಲರ ಕಣ್ಣುಕುಕ್ಕುವಂತೆ ಅಭಿವೃದ್ಧಿ ಹೊಂದುತ್ತಿದ್ದ ದೇಶ ಇಸ್ರೇಲಿಗೆ ಪ್ಯಾಲಸ್ಟೇನಿಯರ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದ ಒತ್ತಡ ಬರಲು ಪ್ರಾರಂಭವಾಯಿತು. ಹಲವಾರು ವಿವಿಧ ಸಂಘಟನೆಗಳ ಒಕ್ಕೂಟವಾದ Palestinian Liberation Organization (PLO) ಅಮೆರಿಕ ಮತ್ತು ನಾರ್ವೆಯ ನೆರವಿನಿಂದ Oslo Agreement ೧೯೯೩ , ೧೯೯೫ ಅಂತರ್ಗತ ಗಾಜಾ಼ ಪಟ್ಟಿ ಮತ್ತು ಪಶ್ಚಿಮ ದಂಡೆಯನ್ನು ಮರು ಪಡೆದವು. Hamas ಗಾಜಾ಼ ಪಟ್ಟಿ ಪಡೆದುಕೊಂಡರೆ, Fatah ಪಶ್ಚಿಮ ದಡದ ಅಧಿಕಾರ ದಕ್ಕಿಸಿಕೊಂಡಿತು.

ಈಗಲೂ ಗಾಜಾ಼ ಪಟ್ಟಿಯಲ್ಲಿ ಇಸ್ರೇಲಿನ ಹಿಡಿತವಿದೆ. ನೀರಿನ ಸರಬರಾಜು, ವಿದ್ಯುತ್ ಸಂಪರ್ಕ, ಗಡಿ ಸಂರಕ್ಷಣೆಯ ನಿರ್ವಹಣೆಯನ್ನು ಬಿಟ್ಟುಕೊಟ್ಟಿಲ್ಲ.

೨೦೧೪ ರಲ್ಲಿ ಮೂವರು ಯಹೂದಿ ಯುವಕರನ್ನು Hamas ನವರು ಅಪಹರಿಸಿ, ಕೊಂದುಹಾಕಿದರು. ಇಸ್ರೇಲಿನ ಸೈನ್ಯ ಗಾಜಾ಼ ಪ್ರವೇಶಿಸಿ Hamas ನವರನ್ನು ಹಿಗ್ಗಾಮುಗ್ಗಾ ಥಳಿಸಿದರು. ಆಗಲೂ Hamas ರಾಕೆಟ್ಟುಗಳ ದಾಳಿ ನಡೆಸಿತು. ಹಮಸ್ಸಿನವರು ಗಾಜಾ಼ ದಿಂದ ಇಸ್ರೇಲ್ ಗಡಿಪ್ರದೇಶದವರೆಗೆ ಸುಮಾರು ೩೨ ಸುಸಜ್ಜಿತ ಸುರಂಗಗಳನ್ನು ಪತ್ತೆ ಮಾಡಿದ ಇಸ್ರೇಲಿನ ಸೈನಿಕರು ಅವುಗಳನ್ನು ಸಿಡಿಮದ್ದಿನಿಂದ ಉಢಾಯಿಸಿ ಬಿಟ್ಟರು. ಸುಮಾರು ೨೨೦೦ ಹಮಸ್ಸಿಗರನ್ನು ಕೊಲ್ಲಲಾಯಿತು.

ಈಗ ನಡೆಯುತ್ತಿರುವ ದಾಳಿ ಯಾವಮಟ್ಟಕ್ಕೆ ತಲುಪಬಹುದು ಎಂಬುದು ಯಾರ ಊಹೆಗೂ ನಿಲುಕದ್ದು.



ಹಮಾಸ್ ಮತ್ತು ಫತಾಹ್

ಹರ್ಕತ್-ಅಲ್-ಮುಕ್ವಾಮಾಹ್-ಇಸ್ಲಾಮಿಯಾ; ಇದರ ಸಂಕ್ಷಿಪ್ತಪದ ‘ಹಮಸ್’. ಪ್ಯಾಲಸ್ತೇನಿನ ಸ್ವಾತಂತ್ರಕ್ಕೆಂದು ಹುಟ್ಟಿಕೊಂಡ ಹಲವಾರು ಸಂಘಟೆನೆಗಳಲ್ಲಿ ಇದೂ ಒಂದು. ಈಗ ಉಳಿದುಕೊಂಡಿರುವ ಇನ್ನೊಂದು ಸಂಘಟನೆ ‘ಫತಾಹ್’ ; ಹರ್ಕತ್-ಅಲ್- ತಹರೀರ್-ಅಲ್- ಫಿಲಿಸ್ತೀನಿಯಾ ಇದರ ಸಂಕ್ಷಿಪ್ತಪದ ಫತಾಹ್. ೨೦೦೪ ರಲ್ಲಿ Palestinian Liberation Organisation (PLO) ಚೇರ್ಮನ್ ಯಾಸ್ಸರ್ ಅರಾಫತ್ತರ ನಿಧನದ ನಂತರ ಅವರು ಹುಟ್ಟುಹಾಕಿದ್ದ ಹಲವಾರು ಸಂಘಟನೆಗಳು ಚದುರಿಹೋದವು. ಆ ಕಾಲದಲ್ಲಿ PLO ಒಂದು ಬಹಳ ಶ್ರೀಮಂತ ಸಂಘಟನೆಯಾಗಿತ್ತು. ಅದಕ್ಕಾಗಿಯೇ ಅರಾಫತ್ ಅವರ ಕೊಲೆ ಮಾಡಲಾಗಿತ್ತು ಎನ್ನುವ ಗುಮಾನಿಯೂ ಇದೆ.

ಫೋಟೋ ಕೃಪೆ : aljazeera

೨೦೦೭ ರಲ್ಲಿ ಹಮಸ್ ಮತ್ತು ಫತಾಹ್ ನಡುವೆ ನಡೆದ ಚುನಾವಣೆಯಲ್ಲಿ ಹಮಸ್ ಗೆದ್ದಿತ್ತು ಆದರೆ ಫತಾಹ್ ಈ ಗೆಲುವನ್ನು ಒಪ್ಪಿಕೊಳ್ಳಲಿಲ್ಲ. ಇಬ್ಬರ ನಡುವೆ ಜೋರಾಗಿ ಜಗಳ ನಡೆಯಿತು. ಫತಾಹ್ ಸಂಘಟನೆಯ ಹಲವಾರು ಮುಖಂಡರನ್ನು ಹಮಸ್ ನವರು ಹೊಡೆದು ಸಾಯಿಸಿದರು, ಕೆಲವರನ್ನು ಬಹು ಮಹಡಿಗಳ ಕಟ್ಟಡಗಳಿಂದ ಕೆಳಕ್ಕೆ ಎಸೆದರು. ಫತಾಹ್ ವನ್ನು ಗಾಜಾದಿಂದ ಸಂಪೂರ್ಣವಾಗಿ ಹೊಡೆದು ಓಡಿಸಿದರು. ಇದನ್ನು ‘ ಗಾಜಾ ಕದನ’ ಎಂದು ಕರೆಯಲಾಗುತ್ತದೆ. ಆಗ ಗಾಜಾವನ್ನು ಹಮಸ್ ವಶಪಡಿಸಿಕೊಂಡರೆ ಪಶ್ಚಿಮ ದಂಡೆಯನ್ನು ಫತಾಹ್ ವಹಿಸಿಕೊಂಡಿತು. ಈಗಲೂ ಇದೇ ಪರಿಸ್ಥಿತಿ ಮುಂದುವರೆದಿದೆ. ಪಶ್ಚಿಮ ದಂಡೆಯ Palestinian Authority (PA) ಪ್ಯಾಲೆಸ್ಟೇನಿಯನ್ನರ ಹೋರಾಟದ ರಾಜಕೀಯ ಮುಖ. ಇದರ ಅಧ್ಯಕ್ಷ ಮಹಮ್ಮದ್ ಅಬ್ಬಾಸ್.

ಹಮಸಿನಲ್ಲಿ ಎರಡು ಅಂಗಗಳಿವೆ. ಒಂದು ಸಾಮಾಜಿಕ ಅಂಗ ಇನ್ನೊಂದು ಇಸ್ಲಾಮಿ ಜಿಹಾದಿನ ಹೋರಾಟದ ಅಂಗ. ಗೆರಿಲ್ಲಾ ಶೈಲಿಯ ಹೋರಾಟ, ಮಕ್ಕಳಿಂದ ಆತ್ಮಾಹುತಿಯ ಬಾಂಬ್ ದಾಳಿ ಮತ್ತು ರಾಕೆಟ್ಟುಗಳ ದಾಳಿ ಇವರಲ್ಲಿ ಇರುವ ಅಸ್ತ್ರ ಮತ್ತು ತಂತ್ರಗಳು. ಇರಾನ್, ಕತ್ತಾರ್ ಮತ್ತು ಇತರೆ ಅರಬ್ ದೇಶಗಳಿಂದ ಇವರಿಗೆ ಸಹಾಯ ದೊರಕುತ್ತದೆ. ವಿಶ್ವಸಂಸ್ಥೆಯವತಿಯಿಂದ ಗಾಜಾದಲ್ಲಿ ೨೪ ಶಾಲೆಗಳನ್ನು ಕಟ್ಟಿಸಿಕೊಟ್ಟರೆ ಅದರಲ್ಲಿ ೨೩ ಶಾಲೆಗಳನ್ನು ಹಮಸ್ ವಶಪಡಿಸಿಕೊಂಡು ಅಲ್ಲಿ ರಾಕೆಟ್ಟುಗಳು ಬಂದೂಕುಗಳನ್ನು ಶೇಖರಿಸಿ ಇಡಲಾಗಿದೆ.

ಶಾಲೆಗಳಿಂದ, ಆಸ್ಪತ್ರೆಯ ಆವರಣಗಳಿಂದ ಮತ್ತು ಜನಜಂಗುಳಿಯ ಮಾರುಕಟ್ಟೆಯ ನಡುವಿನಿಂದ ಇವರು ಇಸ್ರೇಲಿನ ನಾಗರೀಕರ ಮೇಲೆ ರಾಕೆಟ್ಟುಗಳನ್ನು ಹಾರಿಸುತ್ತಾರೆ. ಹಮಸ್ ಮತ್ತು ಫತಾಹ್ ಗಳ ನಡುವೆ ಜಗಳವಾದರೂ, ಹಮಸ್ ಇಸ್ರೇಲ್ ನಡುವೆ ಸಣ್ಣಪುಟ್ಟ ಜಗಳಗಳಾದರೂ ಇವರದು ಇದೇ ಕುಯುಕ್ತಿಯ ತಂತ್ರ.

ಫೋಟೋ ಕೃಪೆ : aljazeera

ಅಷ್ಟಕ್ಕೂ ಗಾಜಾ ಎಷ್ಟಿದೆ..? ಬೆಂಗಳೂರಿನ ಅರ್ಧದಷ್ಟು! ಆದರೆ ಹಮಸ್ ನವರ ಬೇಡಿಕೆ ಏನು? ನದಿಯಿಂದ ಸಮುದ್ರದವರೆಗೆ ನಮಗೆ ಪ್ಯಾಲಸ್ಟೈನ್ ಬೇಕು ಅಂತಾರೆ, ಅಂದರೆ ಜೋರ್ಡಾನ್ ನದಿಯಿಂದ ಮೆಡಿಟರೇನಿಯನ್ನಿನವರೆಗೆ ನಮ್ಮದಾಗಬೇಕು ಎನ್ನುವ ವ್ಯರ್ಥದ ಹಟ. ಇದು ಸಾಧ್ಯವೇ, ಸಾಧುವೇ? ಜೆರುಸಲೇಮಿನ ಪವಿತ್ರನೆಲದಲ್ಲಿ ಇದೊಂದು ಅಪವಿತ್ರ ಹೋರಾಟ.


  • ವಿಂಗ್ ಕಮಾಂಡರ್ ಸುದರ್ಶನ 

(ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW