ಮಕ್ಕಳನ್ನು ಬೆಳೆಸುವುದೂ ಒಂದು ಕಲೆ. ಇದಂತೂ ನೂರಕ್ಕೆ ನೂರು ಸತ್ಯ. ನೀರನ್ನು ಯಾವ ಆಕಾರದ ಪಾತ್ರೆಗೆ ಹಾಕಿದರೆ ಅದು ಆ ರೂಪ ಪಡೆಯುತ್ತದೆಯೋ ಹಾಗೆ ಮಕ್ಕಳನ್ನು ಯಾವ ರೀತಿ ಬೆಳೆಸುತ್ತೇವೋ ಅದೇ ಮುಂದೆ ಅವರ ವ್ಯಕ್ತಿತ್ವಕ್ಕೆ ಕಾರಣವಾಗುತ್ತದೆ. ಲೇಖಕಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಹಿಂದೆಲ್ಲಾ ಮಕ್ಕಳನ್ನು ಬೆಳೆಸುವುದು ತಂದೆ-ತಾಯಿಗೆ ಅಷ್ಟೊಂದು ಕಷ್ಟವೆನಿಸುತ್ತಿರಲಿಲ್ಲ. ಏಕೆಂದರೆ, ಕೂಡುಕುಟುಂಬ ಮಕ್ಕಳ ಬೆಳವಣಿಗೆಗೆ ವರದಾನವಾಗಿತ್ತು. ಹಿರಿಯರ ಹಿತನುಡಿ, ಪೂಜೆ-ಪುನಸ್ಕಾರ, ಅವರಿವರ ಮಕ್ಕಳೆಂಬ ಭೇದವಿಲ್ಲದೇ ಎಲ್ಲರೂ ಎಲ್ಲಾ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಪರಿ ನಿಜಕ್ಕೂ ಮಕ್ಕಳ ಬೆಳವಣಿಗೆಗೆ ಪೂರಕವಾಗಿತ್ತು. ಮಕ್ಕಳು ತಪ್ಪು ಮಾಡಿದಾಗ ತಂದೆ-ತಾಯಿ ಬೈದು, ಹೊಡೆದು ಮಾಡಿದರೂ,
ಅಜ್ಜಿ-ತಾತ ಯಾರಾದರೂ ಅದಿನ್ನೂ ಮಗು, ಅದುಕ್ಯಾಕೆ ಹಂಗ್ ಜೋರ್ಮಾಡ್ತ್ಯಾ ,ನಿಧಾನಕ್ಕೆ ಹೇಳಕಾಗಲ್ವಾ ಎಂದು ಅವರನ್ನೇ ಗದರಿದಾಗ ಮಕ್ಕಳಿಗೂ ಎಲ್ಲೋ ಒಂದು ಕಡೆ ಖುಷಿಯಾಗುತ್ತಿತ್ತು. ನಂತರ ಮಕ್ಕಳನ್ನು ಕರೆದು ಮುದ್ದು ಮಾಡಿ ಸಿಹಿ ಕೊಟ್ಟು ಹಾಗಲ್ಲ ಮರಿ, ನೀನು ಮಾಡಿದ್ದು ತಪ್ಪಲ್ವಾ, ಹಾಗ್ಮಾಡ್ಬಾರ್ದಿತ್ತಲ್ವಾ ಎಂದು ತಿದ್ದಿದಾಗ ಆ ಮಕ್ಕಳಿಗೂ ಅದು ಸರಿ ಎನಿಸುತ್ತಿತ್ತು. ನಂತರ ಅವರು ಮತ್ತೆ ಆ ತಪ್ಪನ್ನು ಎಂದೂ ಮಾಡುತ್ತಿರಲಿಲ್ಲ. ಊಟ-ತಿಂಡಿ ಎಲ್ಲರೂ ಒಟ್ಟಿಗೆ ಕುಳಿತು ತಿನ್ನುತ್ತಿದ್ದುದರಿಂದ ಆಡಿ, ದಣಿದ ಮಕ್ಕಳು ಹೊಟ್ಟೆತುಂಬಾ ಊಟ ಮಾಡುತ್ತಿದ್ದರು. ಚಿಕ್ಕಮಕ್ಕಳಿಗೂ ಅಷ್ಟೇ, ಆ ಮಗುವಿನ ತಾಯಿ ಬೇರೆ ಕೆಲಸದಲ್ಲಿ ನಿರತವಾಗಿದ್ದರೆ, ಆರೋಗ್ಯ ಸರಿಯಿಲ್ಲದಿದ್ದರೆ ಅಥವಾ ಅನಿವಾರ್ಯ ಕಾರಣದಿಂದ ಹೊರಗೆಲ್ಲಾದರೂ ಮಗುವನ್ನು ಬಿಟ್ಟು ಹೋಗಿದ್ದರೆ ಮನೆಯಲ್ಲಿರುವ ಯಾರಾದರೂ ಸರಿ ಆ ಮಗುವಿಗೆ ಪ್ರೀತಿಯಿಂದ ತಿನ್ನಿಸುತ್ತಿದ್ದರು. ಆ ಮಗುವೂ ಸಹ ಅವರಿಗೆ ಹೊಂದಿಕೊಂಡು ಖುಷಿಯಿಂದ ಇರುತ್ತಿತ್ತು. ಹೀಗಾಗಿ ಮಕ್ಕಳನ್ನು ಬೆಳೆಸುವುದು ಕಷ್ಟವೆನಿಸುತ್ತಿರಲಿಲ್ಲ.

ಓದು – ಬರಹ ಎಲ್ಲವೂ ಸಹ ಸಹಜವೆಂಬಂತೆ ನಡೆದುಕೊಂಡು ಹೋಗುತ್ತಿತ್ತು. ಬಟ್ಟೆ-ಬರೆ ಎಲ್ಲವೂ ಅಗತ್ಯಕ್ಕೆ ತಕ್ಕಂತೆ. ಹಬ್ಬ-ಹರಿದಿನ, ಆಚಾರ-ವಿಚಾರ, ಭಯ-ಭಕ್ತಿ ಮಾಡುವ ಕೆಲಸದಲ್ಲಿ ಶ್ರದ್ಧೆ ಎಲ್ಲವೂ ಪರಂಪರಾಗತವಾಗಿ ತನ್ನಿಂದ ತಾನೇ ಬರುತ್ತಿತ್ತು. ಏಕೆಂದರೆ ಮಕ್ಕಳು, ಹೇಳಿದ್ದು ಕೇಳುವುದಕ್ಕಿಂತ ತಾವಿರುವ ವಾತಾವರಣದಲ್ಲಿ ನಡೆಯುವ ಕ್ರಿಯೆಗಳ ಅನುಕರಣೆ ಮಾಡುವುದು ಜಾಸ್ತಿ. ಹಾಗಾಗಿ ಹಿರಿಯರ ದಾರಿಯಂತೆ ಅವರ ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರಕ್ಕೆ ತಕ್ಕಂತೆ ಆಯಾ ಕುಟುಂಬಗಳಿಗೂ ಒಳ್ಳೆಯ ಹೆಸರು ಇರುತ್ತಿತ್ತು. ಎಷ್ಟರಮಟ್ಟಿಗೆಂದರೆ, ಅವರ ಮನೆ ಮಕ್ಕಳಾ ಹೇಳುವುದೇ ಬೇಡ , ಆರಾಮಾಗಿ ಹೆಣ್ಣು ಕೊಡಬಹುದು ಅಥವಾ ಅವರ ಮನೆಯಿಂದ ಹೆಣ್ಣು ತರಬಹುದು ಎನ್ನುವಷ್ಟರ ಮಟ್ಟಿಗೆ.
ಕಾಲ ಬದಲಾದಂತೆ ಕೂಡುಕುಟುಂಬ ಎಲ್ಲೋ ಬೆರಳೆಣಿಕೆಯಷ್ಟು ಎನ್ನುವಂತಾಯಿತು. ಒಬ್ಬರು, ಇಬ್ಬರು ಮಕ್ಕಳು ಇರುವ ತಂದೆ-ತಾಯಿಯರಿಗೆ ಮಕ್ಕಳನ್ನು ಬೆಳೆಸುವುದೇ ದೊಡ್ಡ ಕೆಲಸ ಎಂಬಂತಾಯಿತು. ಇಬ್ಬರೂ ದುಡಿಯುವ ಅನಿವಾರ್ಯತೆ, ಮಕ್ಕಳಿಗೆ ಸಮಯ ಕೊಡಲಾಗದ ಸಂಕಟ, ಈಗಿನ ಕಾಲಕ್ಕೆ ತಕ್ಕಂತೆ ಅವರ ಅವಶ್ಯಕತೆಗಳನ್ನು ಪೂರೈಸಲಾಗದೇ ಕೆಲವರಂತೂ ಹೈರಾಣಾಗಿ ಹೋಗಿದ್ದಾರೆ. ಆಧುನಿಕ ಜಗತ್ತಿನ ಆಕರ್ಷಣೆಗೆ ಒಳಗಾದ ಮಕ್ಕಳಿಗೆ ಬೇಕಾದದ್ದು ಸಿಗದಿದ್ದಾಗ ಅವರು ನಡೆದುಕೊಳ್ಳುವ ರೀತಿ, ಕೆಲವೊಮ್ಮೆ ಸ್ನೇಹಿತರ ಸಹವಾಸದಿಂದ ಓದು-ಬರಹ ಎಲ್ಲಾ ಬಿಟ್ಟು ಮೊಬೈಲ್ ಗೇಮ್ಸ್, ಚಾಟ್, ಸುತ್ತಾಟ, ಇವೆಲ್ಲಾ ಬೇಡವೆಂದು ಬುದ್ಧಿ ಹೇಳಿದಾಗ ತಿರುತಿರುಗಿ ಮಾತನಾಡುವ ಮಕ್ಕಳು, ಮಕ್ಕಳ ಓದಿಗಾಗಿ ಮಾಡಿರುವ ಸಾಲ, ಅಬ್ಬಾ! ಒಂದೇ, ಎರಡೇ? ಈಗಂತೂ ಮಕ್ಕಳನ್ನು ಬೆಳೆಸುವುದೇ ಒಂದು ದೊಡ್ಡ ಜವಾಬ್ದಾರಿ. ಅದರಲ್ಲೂ ಹೊಡೆಯುವುದು ಹೋಗಲಿ, ಬೈಯ್ಯುವುದೂ ಸಹ ಈಗಿನ ಕಾಲದ ಸೂಕ್ಷ್ಮ ಮನಸ್ಸಿನ ಮಕ್ಕಳ ಮೇಲೆ ಇನ್ನಿಲ್ಲದ ಪರಿಣಾಮ ಬೀರುತ್ತದೆ. ಯಾವಾಗಲೂ ಮಕ್ಕಳು ಕೇಳುವ ಮುಂಚೆಯೇ ಮಕ್ಕಳಿಗಾಗಿ ಅದು ಬೇಕು ಇದು ಬೇಕು ಎಂದು ಆಸೆಯಿಂದ ತಂದುಕೊಡುವ ಹೆತ್ತವರು, ಅವರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹೆತ್ತವರು, ಶಿಕ್ಷೆ ನೀಡುವಾಗ ಮಾತ್ರ ಕೆಲವೊಮ್ಮೆ ವಿಪರೀತವಾಗಿ ಕಠಿಣವಾಗಿ ಬಿಡುತ್ತಾರೆ. ಕಷ್ಟಪಟ್ಟು ಸಾಕಿದ ಮಕ್ಕಳು ಕೆಟ್ಟ ಹಾದಿ ಹಿಡಿದಾಗ ಸರಿಮಾಡುವುದು ತಮ್ಮ ಕರ್ತವ್ಯ, ಅದು ಒಳ್ಳೇ ಮಾತಿನಲ್ಲಿ ಕೇಳದಿದ್ದಾಗ ಶಿಕ್ಷೆಯಿಂದಲಾದರೂ ಸರಿ ಎಂಬ ಧೋರಣೆ ಅವರದ್ದಾಗಿರುತ್ತದೆ. ಆಗ ಈ ಶಿಕ್ಷೆ ಎಂಬುದು ತುಂಬಾ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಯೂ ಇರುತ್ತದೆ. ಮನೆಯಲ್ಲಿ ಹೆತ್ತವರು ಶಿಕ್ಷೆ ನೀಡಿದಾಗ ಆ ಮಗುವಿಗೆ ಮನೆ ಜೈಲಿನಂತೆನಿಸಲು ಶುರುವಾಗುತ್ತದೆ. ಅಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ತಂದೆ-ತಾಯಿ ಏಕಾಏಕಿ ಮಗುವಿನ ದೃಷ್ಟಿಯಲ್ಲಿ ಶತ್ರುವಂತೆ ಗೋಚರಿಸಲು ಶುರುವಾಗುತ್ತಾರೆ. ಶಿಕ್ಷೆ ನೀಡಿದವರು ಸ್ವಲ್ಪ ಸಮಯದ ನಂತರವೂ ಸಮಾಧಾನಪಡಿಸಿದೇ, ಬುದ್ಧಿ ಕಲಿಯಲಿ ಎಂದು ಗೊಣಗುತ್ತಲೇ ಇದ್ದಾಗ ಆ ಮಗುವಿಗೆ ಸಾಂತ್ವನ ಹೇಳುವವರಿಲ್ಲದೇ ಒಂಟಿ ಎನಿಸಲು ಶುರುವಾಗುತ್ತದೆ. ಆಗ ಮನೆಯ ಹೊರಗಿನ ವಾತಾವರಣದಲ್ಲಿ ಒಂದು ಹಿಡಿ ಪ್ರೀತಿ ಸಿಕ್ಕರೂ ಆ ಮಗುವಿಗೆ ಅದೇ ಹೆಚ್ಚು ಆಪ್ತವೆನಿಸುತ್ತದೆ. ತನ್ನನ್ನು ಇಷ್ಟಪಡುವವರು, ಹೊಗಳುವವರು ಇದ್ದಾರೆ ಎಂಬ ಖುಷಿಗೆ ಆ ಮಗು ಮೋಸಮಾಡುವವರ ಬಲೆಯಲ್ಲಿ ಸಿಕ್ಕಿಬಿದ್ದು ತೊಂದರೆಗೆ ಒಳಗಾಗಲೂಬಹುದು. ಮಕ್ಕಳಿಗೆ ಒಂದು ವಯಸ್ಸಿನ ನಂತರ ಅವರಿಗೆ ಹೊರಹೋಗುವಾಗ ಅವಶ್ಯಕತೆ ಇರುವಷ್ಟು ಹಣವನ್ನೂ ನೀಡಬೇಕು. ಏಕೆಂದರೆ, ಜೊತೆಯಲ್ಲಿರುವವರಂತೆ ಅವರಿಗೂ ಏನಾದರೂ ತೆಗೆದುಕೊಳ್ಳುವ, ತಿನ್ನುವ ಚಿಕ್ಕಪುಟ್ಟ ಆಸೆ ಸಹಜವಾಗಿರುತ್ತದೆ. ಎಲ್ಲವುದಕ್ಕೂ ಬೇಡವೆಂದರೆ, ಮಗುವಿಗೆ ಬೇಕಾದ್ದನ್ನೆಲ್ಲಾ ಕೊಡಿಸಿ ಇದರ ಲಾಭ ಪಡೆಯುವ ಹೊರಗಿನ ಮಂದಿ ಬೇಕಾದಷ್ಟಿರುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ
ಮಕ್ಕಳಿಗೆ ಶಿಕ್ಷಿಸುವ ಅಗತ್ಯ ಬರುವುದು ಅವರು ಓದದಿದ್ದಾಗ, ಹೇಳಿದ್ದು ಕೇಳದಿದ್ದಾಗ, ತರಲೆ – ತುಂಟಾಟ ಅತಿಯಾದಾಗ, ಕೆಟ್ಟ ವರ್ತನೆ ತೋರಿದಾಗ ಹೀಗೆ ಹತ್ತು ಹಲವು ಕಾರಣಗಳು. ಎಲ್ಲವುದಕ್ಕೂ ಶಿಕ್ಷೆಯೇ ಪರಿಹಾರವಲ್ಲ. ಹಾಗಂತ ನಮ್ಮ ಮಕ್ಕಳು ಮಾಡಿದ್ದೆಲ್ಲಾ ಸರಿ ಎಂಬ ಧೋರಣೆಯೂ ಬೇಡ. ಮೊದಲು ಮನೆಯಲ್ಲಿ ಮಕ್ಕಳಿಗೆ ಹೆತ್ತವರು ಅವರ ಎಲ್ಲಾ ವೈಯಕ್ತಿಕ ವಿಷಯಗಳನ್ನು ತಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ ವಾತಾವರಣ ನೀಡಬೇಕು. ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು ಹಾಗೂ ಅವರ ಇಷ್ಟಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ, ಮಕ್ಕಳಿಗೆ ಏನಾದರೂ ಸಮಸ್ಯೆಯಾದಾಗ ಮನೆಯಲ್ಲಿ ಹೇಳಿದರೆ ಎಲ್ಲಿ ಬೈಯ್ಯುವರೋ ಎಂಬ ಭಯದಲ್ಲಿ ಹೇಳದೇ ಅದು ಮುಂದೆ ಇನ್ನೂ ಹೆಚ್ಚಿನ ಅನಾಹುತಕ್ಕೆ ಕಾರಣವಾಗಬಹುದು. ಹಾಗಾಗಿ ಆಗಾಗ ಮಕ್ಕಳ ಜೊತೆ ಕುಳಿತು ಅವರ ಕಷ್ಟ, ಸುಖ, ಅವರಿಷ್ಟಗಳನ್ನೆಲ್ಲಾ ತಿಳಿದುಕೊಳ್ಳಬೇಕು.
ಮೊದಲು ಶಿಸ್ತುಬದ್ಧ ಜೀವನ ನಮ್ಮದಾಗಿದ್ದರೆ ಮಕ್ಕಳಿಗೂ ಅದನ್ನು ಚಿಕ್ಕವಯಸ್ಸಿನಿಂದಲೇ ರೂಢಿ ಮಾಡಿಸಿದರೆ ಶಿಕ್ಷಿಸುವ ಅಗತ್ಯ ಬರುವುದಿಲ್ಲ. ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂಬ ತಿಳುವಳಿಕೆ ನೀಡಿ ಅವರಿಗೆ ಎಷ್ಟು ಸ್ವಾತಂತ್ರ್ಯ ಕೊಟ್ಟರೂ ಅದು ದುರುಪಯೋಗವಾಗುವುದಿಲ್ಲ. ಏಕೆಂದರೆ, ಒಳ್ಳೆಯದು-ಕೆಟ್ಟದ್ದರ ಅರಿವು ಮಗುವಿಗಿರುತ್ತದೆ. ಓದು, ಓದು ಎಂದು ಮೂರು ಹೊತ್ತೂ ಹೇಳುತ್ತಿರುವುದರ ಬದಲು ಓದಿನ ಅವಶ್ಯಕತೆ, ಮಹತ್ವವನ್ನು ಮಕ್ಕಳ ಮನಸ್ಸಿಗೆ ಮುಟ್ಟುವಂತೆ ತಿಳಿಸಿದರೆ ಅವರು ತಾವಾಗೇ ಓದುತ್ತಾರೆ. ಕಷ್ಟದ ವಿಷಯದಲ್ಲಿ ಅವರಿಗೆ ಬೇಕಾದಂತಹ ಸಹಾಯ ಮಾಡಿದರೆ ಆಗ ಅವರಿಗೆ ಅದರಲ್ಲೂ ಆಸಕ್ತಿ ಮೂಡುತ್ತದೆ.
ಇನ್ನೂ ಹೇಳಬೇಕೆಂದರೆ, ಒಂದು ವೇಳೆ ಶಿಕ್ಷಿಸುವಂತಹ ಪರಿಸ್ಥಿತಿ ಬಂದರೂ ಸಹ ಅದು ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನಾವೇ ಅವರನ್ನು ಸಂಭಾಳಿಸಬೇಕಾಗುತ್ತದೆ. ಮನುಷ್ಯನೆಂದ ಮೇಲೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪು ಎಲ್ಲರಿಂದಲೂ ಆಗುತ್ತದೆ. ಅದರಲ್ಲೂ ಮಕ್ಕಳ ವಿಷಯದಲ್ಲಿ ಗೊತ್ತಿಲ್ಲದೇ ಆಗುವುದೇ ಹೆಚ್ಚು. ಎಷ್ಟಾದರೂ ನಮ್ಮ ಮಕ್ಕಳಲ್ಲವೇ? ನಾವಿಲ್ಲದಿದ್ದರೆ ಅವರಿಗಿನ್ಯಾರು ಆಗುತ್ತಾರೆ. ಒಂದು ವೇಳೆ ತಪ್ಪು ದಾರಿ ಹಿಡಿದರೂ ಕೋಪದ ಕೈಗೆ ಬುದ್ಧಿ ಕೊಡದೇ ಬಹಳ ತಾಳ್ಮೆಯಿಂದ ಅವರನ್ನು ತಿದ್ದಿತೀಡಿ ಸರಿದಾರಿಗೆ ತರುವುದು ಹೆತ್ತವರ ಆದ್ಯ ಕರ್ತವ್ಯ. ಇದಕ್ಕೆ ಮೊದಲೇ ಹೇಳಿದ್ದು, ಮಕ್ಕಳನ್ನು ಬೆಳೆಸುವುದೂ ಒಂದು ಕಲೆ ಎಂದು.
- ಮಂಗಳ ಎಂ ನಾಡಿಗ್ – ಕವಿಯತ್ರಿ, ಲೇಖಕರು, ಬೆಂಗಳೂರು
