ಲೇಖಕಿ ಗಾಯತ್ರಿ ಮೂರ್ತಿ ಅವರು ‘ಅಂಜದಿರು ಮನವೇ’ ಕೃತಿಯಲ್ಲಿ ಅವರು ಕ್ಯಾನ್ಸರ್ ಎದುರಿಸಿದ ಬಗೆಯನ್ನು ತೆರೆದಿಟ್ಟಿದ್ದಾರೆ. ಈ ಕೃತಿಯ ಕುರಿತು ಲೇಖಕರಾದ ಎನ್.ವಿ.ರಘುರಾಂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅಂಜದಿರು ಮನವೇ
ಕ್ಯಾನ್ಸರ್ ನೊಂದಿಗೆ ದಿಟ್ಟ ಹೋರಾಟ.
ಲೇಖಕಿ: ಗಾಯತ್ರಿ ಮೂರ್ತಿ.
ಪ್ರಕಟನೆ: ನವಕರ್ನಾಟಕ ಪ್ರಕಾಶನ.
ಪ್ರಥಮ ಮುದ್ರಣ: 2023
ಬೆಲೆ: ರೂಂ.140/-
ಪುಸ್ತಕ ಪರಿಚಯ.
“ಆರೋಗ್ಯ ಇದ್ದಾಗ ಗೋಚರಿಸದೆ ಇಲ್ಲದಾಗ ಗೋಚರಿಸುವ ಸ್ಥಿತಿ” ಎಂದು ಪುಸ್ತಕದ ಮುನ್ನುಡಿಯಲ್ಲಿ ಡಾ.ಸಿ.ಎಸ್.ಶಂಕರ್ ಹೇಳಿದ್ದಾರೆ. ಹಾಗೆ ನೋಡಿದರೆ, ಇದು ಜೀವನದ ಎಲ್ಲಾ ಸ್ಥಿತಿಗಳಿಗೂ ಅನ್ವಯಿಸುತ್ತದೆ. ಆದರೆ ಆರೋಗ್ಯದ ಸ್ಥಿತಿ ಏರುಪೇರಾದರೆ, ಅದು ಆ ವ್ಯಕ್ತಿಯ ಮೇಲಲ್ಲದೆ ಇಡೀ ಕುಟುಂಬದ ಮೇಲೆ ಪ್ರಭಾವ ಬೀರುತ್ತದೆ. ಅದು ಕ್ಯಾನ್ಸರ್ ಆಗಿದೆ ಎಂದು ತಿಳಿದರೆ ಸುಸೂತ್ರವಾಗಿ ನಡೆಯುತ್ತಿರುವ ಜೀವನ ಏರುಪೇರಾಗುತ್ತದೆ. ಇಂತಹ ಸ್ಥಿತಿಯನ್ನು ಸ್ವತಃ ತಾವೇ ಎದುರಿಸ ಬೇಕಾಗಿ ಬಂದಾಗ ಲೇಖಕಿ ಅದನ್ನು ಎದುರಿಸಿದ ಬಗೆಯನ್ನು ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ.
ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಕಳೆದ ಕೆಲವು ದಶಕಗಳಿಂದ ಅಗಾಧವಾದ ಬೆಳವಣಿಗೆ ಆಗಿದೆ. ಒಂದು ಕಾಲದಲ್ಲಿ ಕ್ಯಾನ್ಸರ್ ಪರೀಕ್ಷೆಗೆ ‘ಸ್ಯಾಂಪಲ್’ಗಳನ್ನು ಮುಂಬೈಗೆ ಕಳುಹಿಸಿ, ಅಲ್ಲಿಂದ ಪರೀಕ್ಷೆಯ ಫಲಿತಾಂಶ ಬರಲು ಕಾಯುವಂತ ಸ್ಥಿತಿ ಇತ್ತು. ಈಗ ಅದು ಪ್ರತಿ ರಾಜ್ಯದಲ್ಲೂ ಲಭ್ಯವಿದೆ. ಚಿಕಿತ್ಸೆಯು ಕೂಡ ಈಗ ಎಲ್ಲಾ ಕಡೆ ಲಭ್ಯವಿದೆ. ಆದರೆ ಕ್ಯಾನ್ಸರ್ ರೋಗದ ಬಗ್ಗೆ ಇರುವ ಹೆದರಿಕೆ ಮಾತ್ರ ಕಡಿಮೆ ಆಗಿಲ್ಲವೆಂದೇ ಹೇಳಬಹುದು. ಯಾವುದೇ ಸ್ಥಿತಿಯನ್ನು ಎದುರಿಸಲು “ಧೈರ್ಯ” ಬಹಳ ಮುಖ್ಯವಾದ ಅವಶ್ಯಕತೆ. ಅದು ಕ್ಯಾನ್ಸರ್ ಎದುರಿಸಲು ಸಹ ಬೇಕು.

ಲೇಖಕಿ ಮಂಡಿ ನೋವಿನಿಂದ ಮುಕ್ತಿ ಪಡೆಯಲು, ಮಂಡಿಕೀಲಿನ ಬದಲಾವಣೆಗೆ ಸಿದ್ದವಾಗಿರುವಾಗ ದೊಡ್ಡ ಕರುಳಿನ ಭಾಗವಾದ ಸಿಗ್ಮಾಕಾರ ಕರುಳಿನಲ್ಲಿ ಕ್ಯಾನ್ಸರ್ ಗೆಡ್ಡೆಯ ಬೆಳವಣಿಗೆ ಆಗಿರುವುದು ಕಂಡು ಬರುತ್ತದೆ. ಅಲ್ಲಿಂದ ಮುಂದೆ ಏನಾಯಿತು ಎಂದು ಪುಸ್ತಕ ಓದಿ ತಿಳಿದರೆ ಚೆನ್ನ.
ಇದೊಂದು ಅನುಭವ ಕಥನ. ಇಲ್ಲಿ ಕ್ಯಾನ್ಸರ್ ಧೃಡಪಟ್ಟಾಗಿನಿಂದ ಸಂಪೂರ್ಣವಾಗಿ ಗುಣವಾಗುವ ತನಕ ಅನುಭವಿಸಿದ ಕ್ಷಣಗಳನ್ನು ಸಮರ್ಥವಾಗಿ ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ. ಕ್ಯಾನ್ಸರ್ ಖಂಡಿತ ಗುಣವಾಗುತ್ತದೆಂಬ ನಂಬಿಕೆ ಮತ್ತು ಭರವಸೆ ಮೂಡಿಸುವ ಕೃತಿ ಇದು.
ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆಯುವುದು ಈ ಅನಾರೋಗ್ಯಕ್ಕೆ ಬಹಳ ಮುಖ್ಯವಾಗಿರುತ್ತದೆ. ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ವಿಕಿರಣ ಚಿಕಿತ್ಸೆ, ಪೂರ್ವ ಬಾವಿಯಾಗಿ ಮತ್ತು ನಂತರ ನಡೆಸುವ ಅನೇಕ ಪರೀಕ್ಷೆಗಳು ರೋಗಿಯನ್ನು ನೋವಿನಲ್ಲಿ ದೂಡುತ್ತದೆ. ಆ ಸಮಯದಲ್ಲಿ ಲೇಖಕಿ ಹೇಗೆ ಧನಾತ್ಮಕ ಚಿಂತನೆಗಳಿಂದ ಬಂದ ಪರಿಸ್ಥಿತಿಯನ್ನು ಎದುರಿಸಿದರು ಎಂಬುವುದು ಈ ಕಥನದ ಜೀವಾಳವೇ ಸರಿ. ಇದರ ಜೊತೆಗೆ ಅವರ ಕುಟುಂಬದವರು ತೋರಿಸಿದ ಪ್ರೀತಿ-ವಾತ್ಸಲ್ಯ ಅವರ ಮನೋಧೈರ್ಯವನ್ನು ಹೆಚ್ಚಿಸಲು ಸಹಾಯಕಾರಿ ಆಗಿದ್ದನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಬಹಳ ಮುಖ್ಯವಾಗಿ, ಈ ಅನಾರೋಗ್ಯ ಪರಿಸ್ಥಿತಿಯನ್ನು ರೋಗಿಯಿಂದ ಮುಚ್ಚಿಟ್ಟು ವೈದ್ಯಕೀಯ ಉಪಚಾರಗಳನ್ನು ಮಾಡುವುದು ಸರ್ವೇಸಾಮಾನ್ಯ. ಆದರೆ ಬಲವಾದ ಕಾರಣಗಳಿಲ್ಲದಿದ್ದರೆ, ಆ ಕ್ರಮ ಸರಿಯಲ್ಲ. ವೈದ್ಯರು ರೋಗಿಗೆ ತೊಂದರೆಯನ್ನು ವಿವರಿಸಿ, ಗುಣಪಡಿಸುವ ಸಾಧ್ಯತೆಯ ಬಗ್ಗೆ ಭರವಸೆ ಮೂಡಿಸುವುದು ಸರಿಯಾದ ಮಾರ್ಗ. ಲೇಖಕಿಗೆ “ನಿಮಗೆ ಕೋಲನ್ ಕ್ಯಾನ್ಸರ್ ಆಗಿದೆ” ಎಂದು ಡಾಕ್ಟರ್ ಹೇಳಿದಾಗ ಇವರಿಗೂ ಆಕಾಶವೇ ತಲೆ ಮೇಲೆ ಬಿದ್ದಂತೆ ಅನಿಸಿದ್ದು ಸುಳ್ಳಲ್ಲ. ಆನಂತರ ಆಗಿರುವುದನ್ನು ಆತ್ಮವಿಶ್ವಾಸದಿಂದ ಎದುರಿಸಿ, ಮನೆಯವರೆಲ್ಲರ ನೆಮ್ಮದಿ ಕೆಡದಂತೆ ಇರುವ “horizontal thinking” ಮಾರ್ಗ ಅನುಸರಿಸಿದೆ ಎಂದು ಲೇಖಕಿ ಹೇಳುವಾಗ ಅದು ಸರಿಯಾದ ಮಾರ್ಗವೆಂದು ಓದಿದವರಿಗೂ ಅನಿಸುತ್ತದೆ. ಏನಿದು ಈ horizontal thinking ಎಂದು ತಿಳಿಯಲು ಪುಸ್ತಕ ಓದಬೇಕು. ಹಾಗೆ ನೋಡಿದರೆ ಯಾವುದೇ ಸಮಸ್ಯೆಯನ್ನು ಎದುರಿಸಲು ಇದೇ ಸರಿಯಾದ ಮಾರ್ಗ ಎಂದು ಅನಿಸುತ್ತದೆ.
ಯಾವುದೇ ಕಷ್ಟ ಬಂದಾಗ ಇನ್ನೊಂದು ಬಹಳವಾಗಿ ಮುಖ್ಯವಾಗಿ ಕಾಡುವ ಪ್ರಶ್ನೆ “why me” ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಅವರು ಖ್ಯಾತ ಟೆನಿಸ್ ಆಟಗಾರ ಆರ್ಥರ್ ಆ್ಯಶ್ ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. ಅದೇನೆಂದು ಪುಸ್ತಕದಲ್ಲಿ ಓದಿ ತಿಳಿದುಕೊಂಡರೇ ಚೆನ್ನ. ಇದರ ಜೊತೆಗೆ ಸ್ವಾಮಿ ವಿವೇಕಾನಂದರು ಸಾರನಾಥಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಕಪಿಗಳನ್ನು ಎದುರಿಸುವ ಸಂದರ್ಭವೊಂದು ಬರುತ್ತದೆ. ಆಗ ಅವರು ನಡೆದುಕೊಂಡ ರೀತಿ ಓದುಗರ ಮನವನ್ನು ಕೂಡ ಸೂಕ್ತವಾದ ರೀತಿಯಲ್ಲಿ ಧನಾತ್ಮಕ ಚಿಂತನೆ ಕಡೆಗೆ ಎಳೆದೊಯ್ಯುತ್ತದೆ. ಅದೇನು ಕಥೆ ಎಂದು ಪುಸ್ತಕ ಓದಿ ತಿಳಿದರೆ ಚೆನ್ನ.
ಕ್ಯಾನ್ಸರ್ ಬಗ್ಗೆ ಪುಸ್ತಕವೆಂದರೆ, ಇದೊಂದು ಗಂಭೀರ ಸಮಸ್ಯೆಯ ಬಗ್ಗೆ ಬರೆದ ಗಂಭೀರ ಪುಸ್ತಕವೆಂದು ಯೋಚಿಸುವುದು ಸಾಮಾನ್ಯ. “ಓ… ಗಣಪತಿ ಭಕ್ತರಾ ನೀವು? ಸೊಂಡಿಲು ಹಾಕಿಸಿಕೊಂಡಿದೀರಾ?” ಎಂದು ಶಸ್ತ್ರಚಿಕಿತ್ಸೆ ನಂತರ ಲೇಖಕಿಯ ಮೂಗಿಗೆ ಹಾಕಿದ್ದ ಟ್ಯೂಬ್ ನೋಡಿದಾಗ ಡಾಕ್ಟರ್ ಹೇಳಿದಂತ ಪ್ರಸಂಗಗಳು ಅಲ್ಲಲ್ಲಿ ಬಂದಿದ್ದು ಓದುಗರನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಯಶಸ್ವಿಯಾಗುತ್ತದೆ.

ಈ ಕಥಾನಕದಲ್ಲಿ ಲೇಖಕಿ ಕ್ಯಾನ್ಸರ್ ಗುಣ ಲಕ್ಷಣಗಳು, ವಿವಿಧ ಪರೀಕ್ಷೆಗಳು ಮತ್ತು ಪರೀಕ್ಷಾ ವಿಧಾನಗಳು, ಪ್ರತಿ ಪರೀಕ್ಷೆಗೆ ಬೇಕಾಗುವ ಪೂರ್ವ ತಯಾರಿ, ಆ ಸಮಯದಲ್ಲಿ ಕೊಡುವ ಔಷಧಿ ಮತ್ತು ಮಾತ್ರೆಗಳು, ಆ ಔಷಧಿಗಳು ತೋರುವ ಅಡ್ಡ ಪರಿಣಾಮಗಳು ಹೀಗೆ ಪ್ರತಿಯೊಂದು ವಿಷಯದ ಬಗ್ಗೆಯೂ ಸರಳ ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಬರೆದಿದ್ದಾರೆ.
ಈ ಕಥಾನಕದ ಉದ್ದಕ್ಕೂ ಅವರಿಗೆ ಚಿಕಿತ್ಸೆ ಕೊಟ್ಟ ವೈದ್ಯರನ್ನು, ಇತರ ಸಿಬ್ಬಂದಿ ವರ್ಗದವರನ್ನು ಕೃತಜ್ಞತೆಯಿಂದ ನೆನಪಿಸಿ ಕೊಳ್ಳುತ್ತಾ ಅವರ ಕರ್ತವ್ಯ ನಿಷ್ಠೆ, ಸ್ನೇಹ ಪರತೆ, ನಿಸ್ವಾರ್ಥ ಸೇವೆಯ ಬಗ್ಗೆ ತೆರೆದಿಡುತ್ತಾರೆ.
ಯಾವುದೇ ಸಮಸ್ಯೆಯನ್ನು ಎದುರಿಸುವಲ್ಲಿ ವ್ಯಕ್ತಿ ತೋರುವ ಆತ್ಮವಿಶ್ವಾಸ, ಸಮಸ್ಯೆಯಿಂದ ಹೊರಬರಬೇಕೆಂಬ ದೃಢ ನಿರ್ಧಾರ ಬಹಳವಾಗಿ ಕೆಲಸ ಮಾಡುತ್ತದೆ. ಅಷ್ಟೇ ಮುಖ್ಯವಾಗಿ ಕುಟುಂಬ ಸದಸ್ಯರ ಬೆಂಬಲ, ಪ್ರೀತಿ-ವಿಶ್ವಾಸ ರೋಗಿಯ ಪಾಲಿಗೆ ಅತ್ಯುತ್ತಮ ಟಾನಿಕ್ ಇದ್ದಂತೆ ಎಂದು ಲೇಖಕಿ ಹೇಳುವ ಮಾತುಗಳು ಎಲ್ಲರೂ ತಿಳಿಯಬೇಕು. ಈ ಸಂದರ್ಭದಲ್ಲಿ ಅವರ ತಾಯಿ, ಲೇಖಕಿಯನ್ನು ಭೇಟಿ ಮಾಡಲು ಬರುವ ಸಂದರ್ಭ ವಿಶೇಷವಾಗಿ ಮನಸ್ಸಿನಲ್ಲಿ ಉಳಿಯುತ್ತದೆ.
ಶ್ರೀಮತಿ ಗಾಯತ್ರಿ ಮೂರ್ತಿಯವರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ೧೯೭೦ರಲ್ಲಿ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಅಧ್ಯಾಪಕಿಯಾಗಿ ಮೂವತ್ತೈದು ವರ್ಷಗಳ ಸೇವೆ ಸಲ್ಲಿಸಿದ ಮೇಲೆ ನಿವೃತ್ತರಾಗಿದ್ದಾರೆ.
ಸಾಹಿತ್ಯ ರಚನೆ ಇವರ ಪ್ರೀತಿಯ ಹವ್ಯಾಸ. ಮೂರು ಕಾದಂಬರಿಗಳು, ಎರಡು ಕಿರು ಕಾದಂಬರಿಗಳು, ಸಣ್ಣ ಕತೆಗಳು, ವಿಜ್ಞಾನ, ಹಾಸ್ಯ, ಮಕ್ಕಳ ಕತೆ, ಕಾದಂಬರಿಗಳು, ಅನುವಾದ, ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ಐವತ್ತು ಕೃತಿಗಳು ಪ್ರಕಟವಾಗಿವೆ. ಅನೇಕ ಪ್ರಶಸ್ತಿಗಳೂ ಇವರನ್ನರಸಿ ಬಂದಿವೆ. ೧೯೯೫ ರಲ್ಲಿ ಪ್ರಕಟವಾಗಿ ಈವರೆಗೆ ೧೭ ಮುದ್ರಣಗಳನ್ನು ಕಂಡಿರುವ ‘ಬೆಳಕು’ ಮಕ್ಕಳ ಪುಸ್ತಕಕ್ಕೆ ‘ಆರ್ಯಭಟ’ ಪ್ರಶಸ್ತಿ, ಮತ್ತು ೧೩ ಮುದ್ರಣ ಕಂಡಿರುವ ‘ಶಬ್ದಲೋಕ’ ಕ್ಕೆ NCETR ರಾಷ್ಟ್ರೀಯ ಪ್ರಶಸ್ತಿಯ ಜೊತೆಗೆ ಇನ್ನೂ ಹಲವು ಪ್ರಶಸ್ತಿಗಳೂ ಇವರನ್ನರಸಿ ಬಂದಿವೆ.
ಕ್ಯಾನ್ಸರ್ ಬಂದರೆ ಎದುರಿಸಿ ಹೋರಾಡ ಬೇಕೇ ವಿನಾ ಹೆದರಿ ಹಿಮ್ಮೆಟ್ಟಬಾರದೆಂಬ ಸಂದೇಶ ತಲುಪಿಸಲು ಈ ಪುಸ್ತಕ ಯಶಸ್ವಿಯಾಗಿದೆ. ಉತ್ತಮ ಪುಸ್ತಕ ಕೊಟ್ಟ ಶ್ರೀಮತಿ ಗಾಯತ್ರಿ ಮೂರ್ತಿಯವರಿಗೆ ಧನ್ಯವಾದಗಳು.
ಸಮನ್ವಯ ಸಮಿತಿ ಕನ್ನಡವೇ ಸತ್ಯ ವೇದಿಕೆಯ ಮೂಲಕ ಪರಿಚಿತರಾದ ಇವರ ಜೊತೆ ನಾನು ಕೂಡ ಸಹ ಲೇಖಕನಾಗಿ ಖೋ ಕಾದಂಬರಿ “ಅದೃಶ್ಯ ಬೇರುಗಳು” ಬರೆಯಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ.
- ಎನ್.ವಿ.ರಘುರಾಂ – ಲೇಖಕರು, ಕೆಪಿಸಿಎಲ್ ನಿವೃತ್ತ ಅಧಿಕಾರಿಗಳು, ಬೆಂಗಳೂರು
