ಜೀವ ನಿರೋಧಕಗಳೆಂದರೇನು (ಎಂಟಿಬಯೋಟಿಕ್)? ಏಕೆ ಅವು ಅವಶ್ಯಕ ಎಂಬ ಬಗ್ಗೆ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಎನ್.ಬಿ.ಶ್ರೀಧರ ಅವರು ಓದುಗರಿಗೆ ತಿಳಿಸಿಕೊಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…
ನೋಡ್ರಿ.. ಸುಮ್ ಸುಮ್ನೆ ಎಂಟಿಬಯೋಟಿಕ್ಕುಗಳನ್ನ ಕೊಟ್ಟಿದ್ದಾನೆ ಆ ಡಾಕ್ಟ್ರು. ಎಂಥಾ ಹೀಟು ಅಂತಿರಿ. ಬಿಟ್ಟೇ ಬಿಟ್ಟೆ” ಅಂತಿದ್ದರು ಮೇಡಮ್ ಒಬ್ಬರು ತಮ್ಮ ಜೊತೆಗಾತಿಯೊಂದಿಗೆ, ನಿಜ. ಜೀವ ನಿರೋಧಕಗಳ ಬಗ್ಗೆ ಎಂಥಹ ಕೋಪ, ಸಿಟ್ಟು ಇದೆ ಎಂದರೆ ಸಿಕ್ಕರೆ ಚಚ್ಚಿ ಬಿಡಬೇಕೆನ್ನುವಷ್ಟು. ಹಾಗಿದ್ದರೆ ಜೀವ ನಿರೋಧಕಗಳೆಂದರೇನು? ಏಕೆ ಅವು ಅವಶ್ಯಕ ಎಂಬ ಬಗ್ಗೆ ತಿಳಿದುಕೊಳ್ಳೋಣ.

ಫೋಟೋ ಕೃಪೆ : google
ಚಿಕ್ಕ ಮಕ್ಕಳಿಗೂ ಗೊತ್ತಿರುವುದು ಅಲೆಕ್ಸೆಂಡಾರ್ ಫ್ಲೆಮಿಂಗ್ ಮೊದಲ ಜೀವ ನಿರೋಧಕ ಪೆನಿಸಿಲ್ಲಿನ್ ಜೀವ ನಿರೋಧಕವನ್ನು ೧೯೨೮ ರಲ್ಲಿ ಕಂಡು ಹಿಡಿದ ಎಂಬುದು. ಈತ ಲಂಡನ್ನಿನ ಸೆಂಟ್ ಮೇರಿಸ್ ಆಸ್ಪತ್ರೆಯ ಸೂಕ್ಷ್ಮಾಣುಜೀವಿ ತಜ್ಞ. ಈವತ್ತಿಗೂ ಅನೇಕ ಕಾಯಿಲೆಗಳಿಗೆ ಪೆನಿಸಿಲಿನ್ ರಾಮಬಾಣ. ಇದೂ ಸಹ ಆಕಸ್ಮಿಕ ಪತ್ತೆ. ಫ್ಲೆಮಿಂಗ್ ಸ್ಟಫೈಲೋಕಾಕಸ್ ಆರಿಯಸ್ ಎಂಬ ಬ್ಯಾಕ್ಟಿರಿಯಾವನ್ನು ಪ್ರತ್ಯೇಕಿಸಿ ಬೆಳೆಸಿ ಅದನ್ನು ಗಾಜಿನ ತಟ್ಟೆಯಲ್ಲಿಟ್ಟಿದ್ದ. ಆದರೆ ಕೆಲಸಗಾರನ ನಿರ್ಲಕ್ಷ್ಯದಿಂದ ಅದರ ಮೇಲೆ ಒಂದಿಷ್ಟು ಶಿಲೀಂದ್ರಗಳು ಬೆಳೆದುಬಿಟ್ಟವು. ಆದರೆ ಶಿಲೀಂದ್ರಗಳು ಬೆಳೆದ ತಟ್ಟೆಗಳಲ್ಲಿ ಬ್ಯಾಕ್ಟಿರಿಯಾಗಳ ಕಾಲನಿ ಸಹ ನಾಶವಾಗಿತ್ತು. ಆಶ್ಚರ್ಯಗೊಂಡ ಫ್ಲೆಮಿಂಗ್ ಪೆನಿಸಿಲಿಯಮ್ ನೊಟೇಟಮ್ ಗುಂಪಿಗೆ ಸೇರಿದ ಶಿಲೀಂದ್ರದಿಂದ ಬಿಡುಗಡೆಯಾದ ವಸ್ತುವು ಈ ಬ್ಯಾಕ್ಟಿರಿಯಾಗಳನ್ನು ನಾಶಮಾಡಿದೆ ಎಂದು ಪತ್ತೆ ಮಾಡಿದೆ ಎಂದು ಪತ್ತೆ ಮಾಡಿ ಅದಕ್ಕೆ “ಪೆನಿಸಿಲ್ಲಿನ್” ಎಂದು ಹೆಸರಿಟ್ಟ. ಆದರೆ ಅದನ್ನು ಪ್ರತ್ಯೇಕಿಸಲು ಮತ್ತು ಶುದ್ಧೀಕರಿಸಲು ಅವನ ಬಳಿ ಸೌಲಭ್ಯವಿಲ್ಲದಿರುವುದರಿಂದ ಆಕ್ಸ್‍ಪರ್ಡ್ ವಿಶ್ವವಿದ್ಯಾಲಯದ ಹಾರ್ವರ್ಡ್ ಫ್ಲೋರಿಯ ಮೂಲಕ. ಅದು ಸಾಧ್ಯವಾಗಿದ್ದು ೧೯೪೨ ರಲ್ಲಿ. ಇದು ವೈದ್ಯಕೀಯ ಸಂಶೋಧನೆಯಲ್ಲಿ ದೊಡ್ಡ ಬಾಗಿಲನ್ನೇ ತೆರೆಯಿತು. ಇದಾದ ಮೇಲೆ ಅದಕ್ಕೆ ಇರುವ ಜೀವಘಾತಕ ಅಲರ್ಜಿ, ಬೇಗ ಮೂತ್ರದ ಮೂಲಕ ವಿಸರ್ಜನೆಯಾಗುವುದು ಎಲ್ಲವೂ ಪತ್ತೆಯಾದವು. ಮೊದಲ ಮಹಾಯುದ್ಧದಲ್ಲಿ ಗಾಯವಾದರೆ ಅದಕ್ಕೆ ಕೀವಾಗಿ, ಧನುರ್ವಾಯು ಪೀಡೆಯಾಗಿ ಸತ್ತು ಹೋಗುತ್ತಿದ್ದ ಸೈನಿಕರು ಪೆನಿಸಿಲ್ಲಿನ್ ಬಂದ ನಂತರ ಅದರ ಚಿಕಿತ್ಸೆಯಿಂದ ಬದುಕಿಕೊಂಡರು. ಪೆನಿಸಿಲ್ಲಿನ್ ಕೊರತೆಯಾದಾಗ ಚಿಕಿತ್ಸೆ ಪಡೆದವರ ಮೂತ್ರವನ್ನೇ ಮರುಚಿಕಿತ್ಸೆಗೆ ಬಳಸಲಾಯಿತು.
ದೇಹದಲ್ಲಿ ಒಂದು ಸಣ್ಣ ಗಾಯವಾದರೂ ಸಹ ಅದರಲ್ಲಿ ಬದುಕಲು ಕೊಟ್ಯಾಂತರ ಮಾರಕ ಸೂಕ್ಷ್ಮಾಣು ಜೀವಿಗಳು ಹಾತೊರೆಯುತ್ತಿರುತ್ತವೆ. ನಮ್ಮ ದೇಹದ ರೋಗನಿರೋಧಕ ಕಣಗಳು ಇವುಗಳ ಜೊತೆ ನಿರಂತರವಾಗಿ ಹೊಡೆದಾಡುತ್ತಿರುತ್ತವೆ. ಇದರಿಂದ ಜ್ವರ ಬರುತ್ತದೆ. ಗಾಯದಲ್ಲಿ ಕೀವು ತುಂಬಿಕೊಳ್ಳಬಹುದು. ಸೂಕ್ಷ್ಮಾಣು ಜಯಗಳಿಸಿದರೆ ಮನುಷ್ಯ ಅಸುನೀಗುತ್ತಾನೆ. ಜೀವನಿರೋಧಕವೆಂಬ ಆಯುಧ ದೊರೆತರೆ ಇವುಗಳನ್ನು ನಾಶಮಾಡಿದೆ. ಬರಿಗೈಯಲ್ಲಿ ಯುದ್ಧ ಮಾಡಿದರೆ ಗೆಲ್ಲುವುದು ಕಷ್ಟ. ಆದರೆ ಆಯುಧವಿದ್ದರೆ? ವೈರಿಗಳನ್ನು ಅರಿದು ಹಾಕಬಹುದು. ಜೀವನಿರೋಧಕ ಎರಡೂ ಕಡೆ ಕೊಯ್ಯುವ ಕರದಂತ ಆಯುಧ. ಸರಿಯಾಗಿ ಬಳಸದಿದ್ದರೆ ಬಳಸುವವರ ಕೈಯನ್ನೇ ತರಿದು ಹಾಕುತ್ತದೆ. ಒಂದಾನೊಂದು ಕಾಲದಲ್ಲಿ ಇದ್ದ ಸಿಫಿಲಿಸ್ ನಂತಹ ಗುಹ್ಯರೋಗಗಳು ಹೇಳ ಹೆಸರಿಲ್ಲದಂತೆ ನಾಶವಾಗಿದ್ದು ಜೀವನಿರೋಧಕದ ಬಳಕೆಯಿಂದ.

ಫೋಟೋ ಕೃಪೆ : google
ಇಂದು ಪೆನಿಸಿಲಿನ್ನ್, ಸೆಫಾಲೋಸ್ಪೋರಿನ್, ಸಲ್ಫಾ, ಫ್ಲೂರೋಕ್ವಿನೊಲೊನ್, ಮ್ಯಾಕ್ರೊಲೈಡ್, ಅಮೈನೊಗ್ಲೈಕೋಸೈಡ್ ಇತ್ಯಾದಿ ವರ್ಗಕ್ಕೆ ಸೇರಿದ ಗ್ರಾಮ್ ಧನಾತ್ಮಕ ಮತ್ತು ಋಣಾತ್ಮಕ ಸೂಕ್ಷ್ಮಾಣುಜೀವಿಗಳನ್ನು ಸಾಯಿಸುವ ೧೦೦ ಕ್ಕೂ ಹೆಚ್ಚಿನ ಜೀವನಿರೋಧಕಗಳಿವೆ. ಬ್ಯಾಕ್ಟಿರಿಯಾಗಳು ಎಂಥಾ ಪಾಕಡಾ ಎಂದರೆ ಜೀವನಿರೋಧಕಗಳನ್ನೇ ನುಂಗಿ ನೀರು ಕುಡಿಯುತ್ತವೆ. ಅವುಗಳ ದೇಹದೊಳಗೆ ನುಗ್ಗದಂತೇ ಪಂಪುಗಳ ಮೂಲಕ ಹೊರ ಚೆಲ್ಲುತ್ತವೆ, ಮೇಲ್ಮೈ ಬದಲಿಸಿಕೊಳ್ಳುತ್ತವೆ, ರೂಪಾಂತರ ಹೊಂದುತ್ತವೆ, ಹೊಸ ಕಿಣ್ವಗಳನ್ನು ಹೊರಸೂಸಿ ಜೀವನಿರೋಧಕವನ್ನೇ ನಾಶಪಡಿಸುತ್ತವೆ.
ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಅನೇಕ ಬ್ಯಾಕ್ಟಿರಿಯಾ ಮೂಲದ ರೋಗಗಳಿಗೆ ಜೀವನಿರೋಧಕಗಳನ್ನು ಕಂಡು ಹಿಡಿಯಲಾಗಿದ್ದು ಪ್ರತಿಯೊಂದು ಔಷಧಿಗೂ ಒಂದು ನಿರ್ದಿಷ್ಟ ಪರಿಣಾಮ ಮತ್ತು ಅಡ್ಡಪರಿಣಾಮವಿದ್ದೇ ಇರುತ್ತವೆ. ಸರಿಯಾದ ವೈದ್ಯರು, ಸರಿಯಾದ ಪರೀಕ್ಷೆಯ ಮೂಲಕ, ಸರಿಯಾಗಿ ಕಾಯಿಲೆಯ ಕಾರಣ ಪತ್ತೆ ಮಾಡಿ, ಸರಿಯಾದ ಜೀವ ನಿರೋಧಕದ ಆಯ್ಕೆ ಮಾಡಿ ಅದನ್ನು ನಿರ್ಧಿಷ್ಟ ದಿನಗಳವರೆಗೆ ಪಡೆದರೆ ಸಮಸ್ಯೆಯೇನೂ ಇಲ್ಲ. ಇಲ್ಲದಿದ್ದರೆ ಸೂಕ್ಷ್ಮಾಣುಜೀವಿಗಳ ನಿರೋಧಕತೆಯಾಗಿ ಹೊಸ ಹೊಸ ಜೀವನಿರೋಧಕಗಳನ್ನು ಕಂಡುಹಿಡಿಯುತ್ತಲೇ ಇರಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಿದಾಗ ಆಗುವ ಗಾಯಗಳಿಗೆ ಜೀವನಿರೋಧಕ ಬಳಸದಿದ್ದರೆ ಗಾಯಕ್ಕೆ ಕೀವಾಗಿ ಬದುಕುವುದೇ ಕಷ್ಟ. ಯಾರಿಗೋ ಯಾರಿಂದಲೋ ಆದ ಕಹಿ ಘಟನೆಗೆ ಇಡೀ ಜೀವನಿರೋಧಕಗಳನ್ನೇ ಟೀಕಿಸುವುದು ತರವಲ್ಲ.
ಆಧುನಿಕ ವಿಜ್ಞಾನದ ಎಲ್ಲಾ ಆವಿಷ್ಕಾರಗಳು ಮನುಷ್ಯನ ಜೀವನವನ್ನು ಸುಗಮ ಮಾಡಿಕೊಳ್ಳಲು ಮನುಷ್ಯನೇ ಕಂಡುಹಿಡಿದುಕೊಂಡ ಸಾಧನಗಳು. ಜೀವನಿರೋಧಕಗಳು ಮನುಷ್ಯನು ಸೂಕ್ಷ್ಮಾಣುಗಳ ವಿರುದ್ಧ ಹೋರಾಡಿ ಬದುಕಲು ಇರುವ ಅಮೂಲ್ಯ ಆವಿಷ್ಕಾರಗಳು. ಇವುಗಳನ್ನು ಸದ್ಬಳಕೆ ಮಾಡಿಕೊಂಡರೆ ಮಾತ್ರ ಬಾಳು ಸರಳ. ಇಲ್ಲದಿದ್ದರೆ ಅದಕ್ಕೆ ತಕ್ಕ ಬೆಲೆ ತೆರಲೇಬೇಕು. ಇದಕ್ಕೆ ಎಲ್ಲರೂ ಪಾಲುದಾರರು.
- ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
