ಮಾಲ್ಗುಡಿಯ ನೆನಪು

ಮಾಲ್ಗುಡಿ ಪಟ್ಟಣ ಮತ್ತು ಮಾಲ್ಗುಡಿ ನಿಲ್ದಾಣವು ದಕ್ಷಿಣ ಭಾರತದ ಕಾಲ್ಪನಿಕ ಸ್ಥಳಗಳಾಗಿದೆ. ಮಾಲ್ಗುಡಿ ಮ್ಯೂಸಿಯಂನಲ್ಲಿ ಮಾಲ್ಗುಡಿ ದಿನಗಳನ್ನು ನೋಡಬಹುದು. ನಾಗೇಂದ್ರ ಸಾಗರ್ ಅವರ ಅನುಭವ ಲೇಖನವನ್ನು ತಪ್ಪದೆ ಮುಂದೆ ಓದಿ…

ಶಿವಮೊಗ್ಗದಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಇನ್ನೇನು ರಿಪ್ಪನಪೇಟೆ ಬಂತು ಎನ್ನುವಾಗ ಅರಸಾಳು ಎಂಬ ಹಳ್ಳಿ ಸಿಗುತ್ತದೆ. ವಾಸ್ತವವಾಗಿ ಈ ಅರಸಾಳು ಅಪ್ಪೆಮಿಡಿಗೆ ಬಲು ಫೇಮಸ್ಸು. ಇದೂ ಅಲ್ಲದೇ ಈ ಊರಿನ ಆಸುಪಾಸಲ್ಲಿ ಹೊಳೆಸಾಲಿನಲ್ಲಿ ಸಿಗುವ ಜೀರಿಗೆ ಮತ್ತು ಅಪ್ಪೆಮಿಡಿಗಳಿಗೆ ಅದರದೇ ಆದ ವೈಶಿಷ್ಟ್ಯತೆ ಇದೆ ಮತ್ತು ಉತ್ತಮ ಪರಿಮಳವೂ ಇದೆ. ಏನೂ ಪ್ರಿಸರ್ವೇಟಿವ್ ಬಳಸದೆಯೂ ಬಹುಕಾಲ ಬಾಳಿಕೆ ಬರುತ್ತದೆ.

ಈ ಅರಸಾಳಿನಲ್ಲಿ ಪುಟ್ಟ ರೈಲ್ವೇ ಸ್ಟೇಷನ್ ಇದೆ.. ಮೀಟರ್ ಗೇಜ್ ರೈಲು ಓಡಾಡುತ್ತಿದ್ದ ಕಾಲಕ್ಕೆ ಸಾಕಷ್ಟು ಚಟುವಟಿಕೆಯಿಂದ ಇದ್ದ ಊರು.. ರೈಲು ಹಳಿಗಳು ಪರಿವರ್ತನೆಯಾಗಿ ಎಕ್ಸ್ ಪ್ರೆಸ್ ರೈಲುಗಳದ್ದೇ ಹವಾ ಆದ ಕಾಲಕ್ಕೆ ಅರಸಾಳುವಿನಂತಹ ಪುಟ್ಟ ಪುಟ್ಟ ನಿಲ್ದಾಣಗಳು ನೇಪಥ್ಯಕ್ಕೆ ಸರಿದವು.. ಆದರೆ ಅರಸಾಳು ಹಾಗಾಗಲಿಲ್ಲ.

ಖ್ಯಾತ ಬರಹಗಾರ ಆರ್.ಕೆ. ನಾರಾಯಣ್ ಬರೆದ Malgudi day’s ಆಧರಿಸಿ 1986ರಲ್ಲಿ ಶಂಕರನಾಗ್ ಕಿರುತೆರೆಗಾಗಿ ಮಾಲ್ಗುಡಿಯ ದಿನಗಳು ಸೀರಿಯಲ್ಲುಗಳನ್ನು ನಿರ್ಮಾಣ ಮಾಡಿದ್ದರು.. ಆಗುಂಬೆ ಮತ್ತು ಅರಸಾಳುವಿನಂತಹ ಮಲೆನಾಡಿನ ಹಳ್ಳಿಗಳು ಕಾಲ್ಪನಿಕ ಮಾಲ್ಗುಡಿ ಊರಿಗೆ ಜೀವ ತುಂಬಿದ್ದವು.. ತುಂಬಾ ಸರಳ ಹಾಗೂ ಅಷ್ಟೇ ಮನೋಜ್ಞ ಕಥಾ ಹಂದರದ ಮಾಲ್ಗುಡಿ ದಿನಗಳು ವೀಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಹಿಂದಿನ ಕಾಲದ ನೆನಪುಗಳನ್ನು ಮೆಲುಕು ಹಾಕುವ.. ನನ್ನ ಬಾಲ್ಯಕಾಲವೂ ಸೇರಿದಂತೆ ಹಿಂದಿನ ದಿನಗಳ ಸಾಮರಸ್ಯದ ಬದುಕಿನ ಹಿನ್ನೋಟ ಸಾರುವ ಹಳೆಯ ಸೊಗಡಿನ ಊರುಗಳೆಂದರೆ ನನಗೂ ಬಲು ಇಷ್ಟ. ಇಂತಹದ್ದೊಂದು ಹಿನ್ನೋಟವನ್ನು ಈಗ ಅರಸಾಳಿನಲ್ಲಿ ಕಾಣಬಹುದು.. ಅಲ್ಲಿ ಹೊಸದಾದ ಆದರೆ ಚಾಲ್ತಿಯಲ್ಲಿ ಇಲ್ಲದ ಅರಸಾಳು ರೈಲು ನಿಲ್ದಾಣ ಇದ್ದರೂ ಕೂಡ ಹಳೆಯ ರೈಲು ನಿಲ್ದಾಣ ಉಳಿಸಿಕೊಂಡು ಮಾಲ್ಗುಡಿಯ ರಿಕ್ರಿಯೇಷನ್ ಮಾಡಲಾಗಿದೆ.. ಕಥೆಗಾರನ ಕಾಲ್ಪನಿಕ ಜಗತ್ತು ಮತ್ತು ಮಾಲ್ಗುಡಿಯ ದಿನಗಳನ್ನು ನಿರ್ಮಿಸಿದ ಶಂಕರನಾಗರ ಕನಸುಗಳನ್ನು ಕೂಡಿಸಿ ಸುಂದರ ಚಿತ್ರಿಕೆಯನ್ನು ಮೂಡಿಸಿದ್ದಾರೆ.

ಅಪ್ಪಟ ಮಲೆನಾಡಿನ ಹಳ್ಳಿಯಾದ ಕಾರಣಕ್ಕೆ ಇಡೀ ಭೂಮಿಕೆಗೆ ಸುಂದರವಾದ ಹಸುರು ತೋರಣವಿದೆ… ಶಿವಮೊಗ್ಗ ಸುತ್ತಮುತ್ತಲಿನ ಸುತ್ತಾಟ ಬಯಸುವವರಿಗೆ ಇದೊಂದು ಒಳ್ಳೆಯ ಪಿಕ್ನಿಕ್ ಸ್ಪಾಟ್ ಎನ್ನಬಹುದು.


  • ನಾಗೇಂದ್ರ ಸಾಗರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading