ಎಣ್ಣೆ ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು

ಜವರಾಯ ಬಂದಾಗ ಬರಿಗೈಲಿ ಬರುವುದಿಲ್ಲ. ಏನನ್ನಾದರೂ ಹೊತ್ತು ಹೋಗಲೆಂದೇ ಬರುತ್ತಾನೆ. ಈ ಸಲ ಅವನು ಒಯ್ದಿದ್ದು ಅಪರ್ಣಾ ಎಂಬ ಎಲ್ಲರ ಸಜ್ಜನ-ಸ್ನೇಹಿಯನ್ನು. ಅವರಿಗೊಂದು ಕಂಬನಿಯ ಕುಯಿಲು. ಅಪರ್ಣಾ ಅವರಿಗೆ ಕೆ.ರಾಜಕುಮಾರ್ ಅವರಿಂದ ಅಕ್ಷರ ನಮನ, ತಪ್ಪದೆ ಮುಂದೆ ಓದಿ….

ಅಪರ್ಣಾ ಸ್ವಚ್ಛ ಕನ್ನಡದ ರಾಯಭಾರಿಯಾಗಿದ್ದವರು. ಗತ್ತಿನ, ಗಂಡುದನಿಯ ಕನ್ನಡಕ್ಕೆ ಮಾಧುರ್ಯವನ್ನೂ, ಆರ್ದ್ರತೆಯನ್ನೂ, ಲೇಪಿಸಿದವರು. ಕನ್ನಡ ನುಡಿ ಥೇಟ್ ಕೋಗಿಲೆಯ ಕೂಜನ, ಅದು ಪಂಚಮದಿಂಚರವೇ ಹೊರತು ಬೇರೇನೂ ಅಲ್ಲ ಎಂದು ಮನಗಾಣಿಸಿದವರು. ಅವರನ್ನು ಜವರಾಯ ಸಕಾಲವಲ್ಲದಿದ್ದರೂ ತನ್ನ ಪಾಶ ಬೀಸಿ ಬಲವಂತವಾಗಿ ಎಳೆದೊಯ್ದಿದ್ದಾನೆ; ಕದ್ದೊಯ್ದಿದ್ದಾನೆ. ನಟ್ಟನಡುವೆಯೇ ಅಂಕದ ಪರದೆ ಜಾರಿದೆ. ಜೀವನ ನಾಟಕ ಮುಗಿದಿದೆ. ‘ಕನ್ನಡತಿ ನಮ್ಮೊಡತಿ’ ಎಂಬಂತಿದ್ದ ಅಪರ್ಣಾ ಅವರ ಜೊತೆಗಿನ ಕೆಲವು ನೆನಪುಗಳು ಸ್ಮೃತಿಪಟಲದಲ್ಲಿ ಪಟಪಟಿಸುತ್ತಿವೆ :

ಅದು ಅಕ್ಟೋಬರ್ 1993. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 10 ದಿನಗಳ ಬೃಹತ್ ಪುಸ್ತಕ ಮೇಳವನ್ನು ಹೊಸದಾಗಿ ಆರಂಭವಾಗಿದ್ದ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿತ್ತು. ಅದರ ಅಧ್ಯಕ್ಷ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರು; ಅಪರ್ಣಾ ಮತ್ತು ನೀವು ಒಂದು ದಿನ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಡಿ ಎಂದರು. ಅಪರ್ಣಾ ಅವರಿಗೆ ಸ್ವಲ್ಪ ಮಾರ್ಗದರ್ಶನ ನೀಡಿ ಎಂದು ಸೂಚಿಸಿದರು. ಆಗ ನಿರೂಪಣೆ, ಪುಸ್ತಕ ಸಂಸ್ಕೃತಿ ಮುಂತಾದ ವಿಷಯಗಳ ಬಗೆಗೆ ಬೋಧಿಸಿದೆ. ಆಕೆ ಕಲಿಕೆಯಲ್ಲಿ ತೋರಿದ ಶ್ರದ್ಧೆ, ವಿನಮ್ರತೆ ಮರೆಯಲಾರೆ. ಸರ್, ನೀವು ಡಾ. ರಾಜ್ ಮತ್ತು ವಿ.ಕೃ. ಗೋಕಾಕ್ ಅವರಿಗೂ ಬೋಧಿಸಿದ್ದೀರಿ ಎಂದು ಎಲ್.ಎಸ್.ಎಸ್. ಹೇಳಿದರು. ನಿಮ್ಮ ಸೂಚನೆಗಳನ್ನು ಪಾಲಿಸುವೆ ಎಂದು ವಿನೀತರಾದರು.

ಫೋಟೋ ಕೃಪೆ : google

ಮತ್ತೆ ನಮ್ಮ ಭೇಟಿ 2011ರ ಮಾರ್ಚಿನಲ್ಲಿ. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ. ಅವರು ನಿರೂಪಣೆಗೆ. ಆಗ ನಾನು ಸರ್ಕಾರ ಹೊರತಂದ 101 ಪುಸ್ತಕಗಳ ಪರಿಶೀಲಕನಾಗಿ, ಉಸ್ತುವಾರಿಯಾಗಿ ನೇಮಕಗೊಂಡಿದ್ದೆ. ಬೆಳಗಾವಿಗೆ ಸರ್ಕಾರ ವ್ಯವಸ್ಥೆ ಮಾಡಿದ್ದ ಬಸ್ಸಿನಲ್ಲಿ ಒಟ್ಟಿಗೆ ಪಯಣ. ಒಂದೇ ವಸತಿಗೃಹದಲ್ಲಿ ಎಲ್ಲರೂ ಉಳಿದುಕೊಂಡಿದ್ದೆವು. ಅಪರ್ಣಾ ಉದ್ದಕ್ಕೂ ಗಾಂಭೀರ್ಯ ಮತ್ತು ಘನತೆಯನ್ನು ಕಾಪಾಡಿಕೊಂಡಿದ್ದರು. ಕೋತಿಚೇಷ್ಟೆ ಮಾಡಲಿಲ್ಲ. ಸಂಭ್ರಮಕ್ಕೂ ಒಂದು ಚೌಕಟ್ಟು ಹಾಕಿಕೊಂಡಿದ್ದನ್ನು ಖುದ್ದಾಗಿ ಕಂಡೆ. ಎಲ್ಲರಂತಲ್ಲ ಅವರು.

ಅನಂತರ ಸೆಪ್ಟೆಂಬರ್ 1, 2012 ರಂದು ನಾನು ಬೆಂಗಳೂರು ಆಕಾಶವಾಣಿಯ ಕಾಮನಬಿಲ್ಲು ಚಾನೆಲಿನ ವಿಶೇಷ ಅತಿಥಿ. ಸಂದರ್ಶಿಸಿದ್ದು ಅಪರ್ಣಾ. ಚರ್ವಿತಚರ್ವಣವಲ್ಲದ ಹೊಸ ಹೊಸ ಸಂಗತಿಗಳನ್ನು ಪ್ರಸ್ತಾಪಿಸಿದೆ. ಅಪರ್ಣಾ ಖುಶಿ, ಖುಶಿಯಾದರು. ಸಂದರ್ಶನ ನಡೆಯುವಾಗಲೇ ಕೇಳುಗರ ಪ್ರಶಂಸೆಯ ಮಹಾಪೂರ ಮಿಂಚಂಚೆ ಮೂಲಕ ಹರಿದು ಬರುತ್ತಿತ್ತು. ಅದನ್ನು ಅವರು ನನಗೆ ತೋರಿಸಿದರು. ಎಂದಿನಂತೆ ಅವರ ಕಣ್ಣಿನಲ್ಲಿ ಮಿಂಚು-ಮತಾಪು. ಅವರು ನಮ್ಮ ಈ ಕಾರ್ಯಕ್ರಮದ ಹೆಸರು LUNCH BOX. ಇಂದು ರಾಜ್ಯೋತ್ಸವ. ಕನ್ನಡದಲ್ಲಿ ಇದಕ್ಕೊಂದು ಪದ ಕೊಡಿ ಎಂದರು. ಬುತ್ತಿ ಎಂದು ಹೆಸರಿಟ್ಟೆ. ಆ ಸಣ್ಣ ಉತ್ತರಕ್ಕೂ ಆಕೆ ಮಗುವಿನಂತೆ ಸಡಗರಿಸಿದ ಪರಿ ಮರೆಯಲಾರೆ.

ಮತ್ತೆ 2021ರಲ್ಲಿ ನಾನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದಾಗ ಒಂದು ಮಹತ್ತ್ವದ ಕಾರ್ಯಕ್ರಮಕ್ಕೆ ನಿರೂಪಕರನ್ನಾಗಿ ಅವರನ್ನು ಕರೆಸಲಾಗಿತ್ತು. ಆಗ ಅವರು ತಾರಾ ನಿರೂಪಕರು. ನಿಗರ್ವಿ, ಅಹಂ ಇರಲಿಲ್ಲ. ಬೊಗಸೆ ಕಂಗಳ, ದುಂಡುಮೊಗದ, ಚೆಲುವಿನ ಸಿರಿಯಲ್ಲಿ ಅಹಂ ಹೆಡೆ ಎತ್ತಿರಲಿಲ್ಲ. ಎಂದಿನಂತೆ ನಯ-ನಾಜೂಕು. #ಆಗ ಅವರಿಗೆ ಛಪ್ಪನ್ನೈವತ್ತಾರು. 56 ವರ್ಷವಾದರೂ ಹರೆಯದ ಕಳೆ ಮಾಸಿರಲಿಲ್ಲ. ಕಾಲನು ಕಳೆದ 30 ವರ್ಷಗಳಿಂದ ಅವರ ಮೊಗದ ಮೇಲೆ ತನ್ನ ಛಾಪನ್ನು ಒತ್ತಿಯೇ ಇರಲಿಲ್ಲ. ಲಾವಣ್ಯವತಿ ಯಾಗಿಯೇ ಇದ್ದರು. ಸಾಂಪ್ರದಾಯಿಕ ಚೆಲುವು ಅವರದು.

ಕಾಲದ ಹಕ್ಕಿ ಹಾರಿಹೋಗಿದೆ. ಜವರಾಯ ಬಂದಾಗ ಬರಿಗೈಲಿ ಬರುವುದಿಲ್ಲ. ಏನನ್ನಾದರೂ ಹೊತ್ತು ಹೋಗಲೆಂದೇ ಬರುತ್ತಾನೆ. ಫಲ ಬಿಡುವ ಮರಗಳೇ ಬೇಕು ಅವನಿಗೆ. ಈ ಸಲ ಅವನು ಒಯ್ದಿದ್ದು ಅಪರ್ಣಾ ಎಂಬ ಎಲ್ಲರ ಸಜ್ಜನ-ಸ್ನೇಹಿಯನ್ನು. ಅವರಿಗೊಂದು ಕಂಬನಿಯ ಕುಯಿಲು.ಇನ್ನೇನು ಹೇಳಲಿ? ಎಣ್ಣೆ ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು.


  • ಕೆ. ರಾಜಕುಮಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW