ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೩)

ಬದುಕೇ ಒಂದು ತೆರೆದ ಪಾಠಶಾಲೆ. ಪ್ರಕೃತಿ‌ ಶಿಕ್ಷಣವೇ ನಿಜವಾದ ಶಿಕ್ಷಣ..ಮನಸ್ಸಿನಲ್ಲಿ ಸಂದೇಹಗಳು ಹುಟ್ಟುವುದೇ‌‌ ಕಲಿಕೆಯ ತೃಷೆ. ಜನ ಸಂಪರ್ಕದಲ್ಲಿ ಬೆಳೆದಾಗ ಬದುಕಿನ ಎಲ್ಲ ಮಗ್ಗುಲುಗಳ ಪರಿಚಯವಾಗುತ್ತದೆ. ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ಏನು ಉದ್ದೇಶ ಬಾಳಿಗೆ” ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ… 

ತಿರುಕ ತಿರುಪೆಯ ಬೇಡಿ ನೆರೆಸುಖದಿ ತಾನಿಪ್ಪ|
ಸಿರಿವಂತ ಸತತ ಚಿಂತಿಪನು | ನಿಜಸುಖವು
ಸಿರಿಯ ಸೆರೆಯಾಳೇ ಮರುಳಾರ್ಯ
*
ಮರುಳಾರ್ಯ ಎಂಬಾತನಿಂದ ರಚಿತವಾದ ಈ ವಚನವು ನಿಜವಾದ ಸುಖದ ನೆಲೆ ಎಲ್ಲಿದೆ ಎಂಬುದಕ್ಕೆ ನಿದರ್ಶನವಾಗಿದೆ.

‘ನಿಜ ಸುಖವು ಸಿರಿಯ ಸೆರೆಯಾಳೆ’ ಎಂದು ಅವನು ಎತ್ತಿರುವ ಪ್ರಶ್ನೆ,‌ಸುಖವೆಂಬುದು ಸಿರಿವಂತನ ಸೊತ್ತೇ …? ಆದರೆ ಹೇಗೋ ಸಿರಿಯನ್ನು ಕೈವಶ ಮಾಡಿಕೊಂಡವನು ಮಾತ್ರ ಸುಖಿಯೇ..ಸಿರಿಹೀನನಾದವನಿಗೆ ಸುಖ ಪಡುವ ಹಕ್ಕಿಲ್ಲವೇ….

ನನ್ನ ಬಾಲ್ಯದಲ್ಲಿ ಯಾವಾಗಲಾದರೊಮ್ಮೆ ಭಿಕ್ಷೆಬೇಡಲು ಬರುತ್ತಿದ್ದ ಒಬ್ಬ‌‌ ಭಿಕ್ಷುಕ‌ ದಂಪತಿಯನ್ನು ನೋಡುತ್ತಿದ್ದೆ. ಅವನು ಕುಂಟ. ಅವಳು ಕುರುಡಿ. ಒಂದು‌ ಕೈಯನ್ನು ಅವಳ ಹೆಗಲ‌ ಮೇಲೆ ಹಾಕಿ ಇನ್ನೊಂದು ಕೈಯಲ್ಲಿ‌ ಕೋಲೂರುತ್ತಾ ಮಾರ್ಗದರ್ಶನ‌ ಮಾಡುತ್ತಿದ್ದ ಆ ಭಿಕ್ಷುಕನಿಗೆ‌‌ ಚಿಂತೆಯ ನೆರಳೇ ಸುಳಿದಿರಲಿಲ್ಲ. ಬೀದಿಯಲ್ಲಿ ಭಿಕ್ಷೆ ಬೇಡುತ್ತಾ ತನ್ನ ಸುಶ್ರಾವ್ಯ ಕಂಠದಲ್ಲಿ ಹಾಡುತ್ತಾ…ನಡುನಡುವೆ ಯಾವುದೋ ಹಾಸ್ಯಚಟಾಕಿಯನ್ನು ಹಾರಿಸುತ್ತಿದ್ದರೆ‌ ಅವನ ಜೀವನ ಶ್ರದ್ಧೆಯನ್ನು ನೋಡಿ ಭಗವಂತನೇ ಬೆರಗಾಗುತ್ತಿದ್ದಾನೇನೋ ಎನಿಸುತ್ತಿತ್ತು ನನಗೆ. ಕೊರತೆಗಳೆಲ್ಲವನ್ನೂ ಗಂಟುಮೂಟೆ ಕಟ್ಟಿ ,’ನೀನು ಅಲ್ಲೇ ಬಿದ್ದಿರು’ ಎಂದು ಆದೇಶಿಸಿ ನೆಲೆಯಿಲ್ಲದ ಅವನ ಕಾಲ ಬಳಿ ಮುದುಡಿ ಎಸೆದಿದ್ದ.ಚಿಂತೆಯನ್ನು ಬಳಿಗೇ ಸುಳಿಯದಿರು ಎಂದು ಆದೇಶಿಸಿದ್ದ.

*
ಒಂದು ಸಣ್ಣ ಕೊರತೆಯನ್ನೇ ಮುಂದಿಟ್ಟುಕೊಂಡು, ಇರುವ ಭಾಗ್ಯವನ್ನೂ ಬರಮಾಡಿಕೊಳ್ಳಲಾರದ ನಮ್ಮಂತಹ ಬುದ್ಧಿಹೀನರಿಗೆ ಬದುಕು ಎಂದಿಗೂ ಸುಖವನ್ನು ನೀಡುವುದಿಲ್ಲ. ಹೋಲಿಕೆಯ ತೊಳಲಾಟದಲ್ಲಿಯೇ ಬದುಕಿನ ಸುವರ್ಣಕಾಲ ಕಳೆದು ಹೋಗಿರುತ್ತದೆ.

‘ಇಷ್ಟಿದ್ದರೆ ಅಷ್ಟು ಬೇಕೆಂಬಾಸೆ
ಕಷ್ಟ ಬೇಡೆಂಬಾಸೆ
ಕಡುಸುಖವ ಕಾಂಬಾಸೆ
ನಷ್ಟ ಜೀವನದಾಸೆ’ ಎಂಬಂತೆ ಇಂತಹ ಅತಿಯಾಸೆ ಪಡುವವರ ಆತ್ಮಗಳು ಬದುಕಿನುದ್ದಕ್ಕೂ ನಷ್ಟ ಜೀವನದ ಅತೃಪ್ತಿಯನ್ನೇ ಅನುಭವಿಸುತ್ತವೆ.ಇವು ಇರುವುದರಲ್ಲೇ ತೃಪ್ತಿ ಪಡಲಾಗದ ಅತೃಪ್ತ ಆತ್ಮಗಳು…! ಜೀವನದ ಉದ್ದೇಶವನ್ನೇ ಅರಿಯಲಾಗದ‌ ವ್ಯರ್ಥ ಜೀವರು.

*
ಇಂದೊಂದು ಕರೆ ಬಂದಿತ್ತು ದೂರದಿಂದ… ಅನುಮಾನದಿಂದಲೇ ಕರೆ ಸ್ವೀಕರಿಸಿದೆ. ಏಕೆಂದರೆ ಅದರಲ್ಲಿ ಕರೆ ಮಾಡಿದವರ ಹೆಸರನ್ನು ನಾನು ದಾಖಲಿಸಿರಲಿಲ್ಲ. ಮಾತು ಮುಂದುವರಿಯುತ್ತಿದ್ದಂತೆ ಅವನೊಬ್ಬ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಕನಸುಗಾರ. ತನ್ನ ದುಡಿಮೆ ನಿಜವಾದ ಶ್ರಮಿಕರ ಬದುಕಿಗೂ ಆಸರೆಯಾಗಿರಬೇಕು ಎಂಬ ವಿಚಾರವಂತಿಕೆಯುಳ್ಳವನು.

ಅದಕ್ಕಾಗಿ ಸ್ವಂತ ಗಳಿಕೆಯ ದಾರಿಯಲ್ಲೇ ಸಾಗಿದ್ದರೂ‌ ಆತನ ಹಣ ಹಂತಹಂತವಾಗಿ ಸೋರಿಹೋಗಿ ತನ್ನ ಹಾಗೂ ಆ ಪ್ರಾಜೆಕ್ಟ್ ನಲ್ಲಿ ಮೈಮುರಿದು ದುಡಿದ ಕೆಲಸಗಾರರ ಪಾಲಿಗೂ ನ್ಯಾಯವಾಗಿ ಅದರ ಪ್ರತಿಫಲ ದಕ್ಕದ ಸ್ಥಿತಿಯ ಬಗ್ಗೆ ಮಮ್ಮಲ ಮರುಗಿದ. ರಾಜಕೀಯ ವಲಯದಲ್ಲಿ ಗುರುತಿಸಿಕೊಂಡರೆ ಸಾಕಷ್ಟು ಇಂತಹ ಸೇವೆ ಮಾಡುವ ಅವಕಾಶ ದೊರೆಯಬಹುದು ಎಂದು ಭಾವಿಸಿ ಆಳುವವರ ಬಾಲ ಹಿಡಿದವನು.ಅಪ್ಪನ ಛೇರ್ಮನ್ಗಿರಿಯ ಹುದ್ದೆಯ ಲಾಭ ಪಡೆಯಬಹುದಾಗಿದ್ದರೂ,ಮನಸ್ಸೊಪ್ಪದೆ,ಸ್ವಂತ ದುಡಿಮೆಯ ಅವಕಾಶಕ್ಕಾಗಿ ಕಾಯುತ್ತಾ ಕುಳಿತವನು.’ನಾನೊಬ್ಬ ಬದುಕ ಬಲ್ಲೆ. ಆದರೆ ಅದು ನನ್ನ ಜೀವನದ ಉದ್ದೇಶವಲ್ಲ. ನಾನು ಇಲ್ಲಿ ಹುಟ್ಟಿದ ಕಾರಣಕ್ಕೆ ನಾಲ್ಕಾರು ಮಂದಿಗೆ ಹೊಟ್ಟೆ ತುಂಬಿಸಲು ದುಡಿಮೆಯ ಅವಕಾಶವನ್ನು ಒದಗಿಸಿಕೊಡಬೇಕು ಎಂಬ ರಾಷ್ಟ್ರ ಸೇವೆಯ ಕನಸು ಅವನದ್ದು. ಮುಂದೆ ಸುಮಾರು ಮುಕ್ಕಾಲು ಘಂಟೆ ಅವನು ನನ್ನ ಮಾತಿನ ಸಂಪರ್ಕ ಕಡಿದುಕೊಳ್ಳಲೇ ಇಲ್ಲ. ಜೀವನದಲ್ಲಿ ಪ್ರಯೋಗಶೀಲ ಯುವಕ..!

*
ನೀನು ಏನೇ ಮಾಡು.. ಯಾವ ಕಾರಣಕ್ಕೂ ನಿನ್ನ ಸ್ವಂತಿಕೆಯನ್ನು ಬಿಡಬೇಡ. ಸ್ವಂತ ಗಳಿಕೆ ಮಾಡುತ್ತಾ ಯಾವುದೇ ಸಾಮಾಜಿಕ ನಿರ್ಮಾಣಕಾರ್ಯದಲ್ಲಿ ತೊಡಗು.. ಬಾಲಬಡುಕತನ ಯಾವುದೇ ಸ್ವಂತಿಕೆಗೆ ಕಳಂಕ..ಎಂದೆ. ನೆರಳನ್ನು ಹಿಂಬಿಲಿಸುವ ಮೂರ್ಖತನಕ್ಕಿಂತ ನೀನೇ ನಿನ್ನ ಒಳಗಣ್ಣಿನಿಂದ ನೋಡಿ, ಬದುಕಿನ ಬಗೆಗೆ ಆಳವಾದ ಅಧ್ಯಯನ ಮಾಡು, ಸ್ವಂತ ವಿಚಾರವಂತನಾಗು ‘ಎಂದೆ. ಒಪ್ಪಿಕೊಂಡ..’ಬೇಕಾದಾಗ ನಿಮ್ಮ ಸಲಹೆ ಕೇಳುತ್ತೇನೆ’ ಎಂದ.

*
ಈಗ ತಾನೇ ಕಾಸರಗೋಡಿನ ಬದಿಯಡ್ಕದ ಅರುಣಾ ಜಿ.ಭಟ್ ಅವರ ಮುಖಪುಟ ಖಾತೆಯಲ್ಲಿ ಅವರ ಬಾವಿಯ ಬಗೆಗಿನ ಅನುಭವದ ಒಂದು ಲೇಖನ‌ ನೋಡಿದೆ.ತುಂಬಾ ಖುಷಿಯೆನಿಸಿತು. ನನಗೆ ಬಾಲ್ಯದಿಂದಲೂ ಬಾವಿಯೊಡನಾಟ ಬಹಳ ಆಪ್ತ!

ಮನೆಯೊಳಗೇ ಜಂತಿಗೆ‌ ಹಗ್ಗ ಕಟ್ಟಿ  ಅದಕ್ಕೆ ಒಂದು ಚೊಂಬು ಕಟ್ಟಿ ಬೆಳೆಗೆ ಅಗಲ ಬಾಯಿನ ಪಾತ್ರೆ ಇಟ್ಟು ನೀರೆಳೆಯುವಾಟ. ಯಾರೇ ಬಾವಿಯ ಬಳಿ ನೀರು ಸೇದಲು ಹೋಗಲಿ‍,ನಾನೂ ಓಡಿಹೋಗಿ ನೀರು‌ಸೇದುವ ‘ಆಟವಾಡಲು’ ಸೇರಿಕೊಳ್ಳುತ್ತಿದ್ದೆ. ಬಿಂದಿಗೆ ಬಿದ್ದಾಗ ತಳದಲ್ಲಿ ವರ್ತುಲಗಳನ್ನು ನಿರ್ಮಿಸುತ್ತಾ ನೀರು ನರ್ತಿಸುವುದನ್ನು ಮುಗ್ಧವಾಗಿ ಅವಲೋಕಿಸುತ್ತಾ.. ಹಿಗ್ಗುವ, ಗೋಡೆಯಿಂದ ಮುಂದೆ ಚಲಿಸಲಾಗದ ಅದರ ಅಸಹಾಯಕತೆಯನ್ನು ಕಂಡು ಮರುಗುತ್ತಿದ್ದೆ.ನಡುಮಧ್ಯಾಹ್ನದ ವೇಳೆಗೆ ಸೂರ್ಯನ ಕಿರಣ ನೇರವಾಗಿ ಬಿದ್ದಾಗ ತೆರೆದುಕೊಳ್ಳುತ್ತಿದ್ದ ಅದರ ಅಂತರಂಗ ಎಷ್ಟು ರೋಚಕ..!

ಫೋಟೋ ಕೃಪೆ : google

ಆ ಸ್ಫಟಿಕ ಶುದ್ಧ ಜಲದಲ್ಲಿ‌ ವಿಹರಿಸುವ‌ ಮೀನುಗಳು ಬಾವಿಯ ಆ ತುದಿಯಿಂದ ಈ ತುದಿಗೆ ನೆಗೆಯುವ ಕಪ್ಪೆಗಳು,ಅವು‌ ತೆಗೆದರೂ ಕಲುಷಿತಗೊಳ್ಳದ ನೀರು…ಏಕಾಗ್ರತೆಗೆ ಇಂತಹ ಒಂದೊಂದು ಸಣ್ಣ ಸಣ್ಣ ಸಂಗತಿಗಳೇ ಸಾಕಿತ್ತು.

ಚಂದ್ರನಿರುವ ರಾತ್ರಿಯಂತೂ ಬಾವಿಯ ಪುಟ್ಟ ಲೋಕದಲ್ಲೇ ಬ್ರಹ್ಮಾಂಡ‌ ತೆರೆದುಕೊಳ್ಳುತ್ತಿತ್ತು. ತಾರಾಖಚಿತ‌ ನಭೋಮಂಡಲ‌ದ ವಿಸ್ತಾರದಲ್ಲಿ ವಿಹರಿಸುವ ಮೋಡಗಳು ಎಂತಹ ವಿಸ್ಮಯಗಳ ಭಂಡಾರವಾಗಿದ್ದುವು‌ ನಮಗೆ ಆಗ….

*

ಈಗ ಕಿರ್ಕಿರ್ ಎಂದು ಕಿವಿಗಡಚಿಕ್ಕುವ ಶಬ್ದ ಹೊರಡಿಸುತ್ತಾ‌ ನೀರು ಮೇಲೆತ್ತುವ ಕೊಳವೆ ಬಾವಿಗಳು ಹೊರಡಿಸುವ ಆ ಕ್ರಿಯೆಯಲ್ಲಿ ಎಂತಹ ಮೋಜೂ ಇಲ್ಲ.ಬದಲಾಗಿ ತುಕ್ಕು ಹಿಡಿದ ಪೈಪ್ ನಲ್ಲಿ ಬರುವ ವಾಸನೆಯ ನೀರು..ತರುವ ವಾಕರಿಕೆ..ನೀರು ತನ್ನ ಲಾಲಿತ್ಯ ನನ್ನು ಬಹಿರಂಗ ಪಡಿಸುವ ಯಾವ ಸನ್ನಿವೇಶಗಳೂ ಇಲ್ಲ, ಈಗಿನ ನಗರಪಾಲಾದ ಮಕ್ಕಳಿಗೆ..

*

ನಾನು ಹೇಳ ಹೊರಟಿದ್ದು ಇಚ್ಛೆ ಪಟ್ಟು ನಾವು ಮಾಡುತ್ತಿದ್ದ ಕೆಲಸಗಳ ಬಗ್ಗೆಯೇ.. ಹಿಂದಿನ ಹೆಂಗಳೆಯರಲ್ಲಾಗಲೀ ಗಂಡಸರಲ್ಲಾಗಲೀ ವ್ಯರ್ಥ ಬೊಜ್ಜು ಸಂಗ್ರಹವಾಗುವ ಪ್ರಮೇಯವೇ ಇರುತ್ತಿರಲಿಲ್ಲ.ಕುಟ್ಟುವ,ಬೀಸುವ, ಬಟ್ಟೆ ಒಗೆಯುವ, ನಾಟಿ ನೆಡುವ, ಬೆತ್ತಲಾಗಿ ಬಡಿಯುವ ಎಲ್ಲ ಕೆಲಸಗಳಿಂದಲೂ ಶರೀರಕ್ಕೆ ವ್ಯಾಯಾಮ ಕೊಡುತ್ತಿತ್ತು ಸಹಜೀವನ ಮನಸ್ಸಿನ ದುಗುಡವನ್ನು ಮರೆಯಿಸುತ್ತಿತ್ತು.

ಬಳುಕುವ ಸೊಂಟ, ದಣಿವರಿಯದ ನಗುಮುಖದ, ಲೀಲಾಜಾಲವಾಗಿ ಒಳಹೊರಗಿನ ಕೆಲಸಗಳನ್ನು ನಿಭಾಯಿಸಿಕೊಂಡು,ಮಕ್ಕಳೆಷ್ಟಿದ್ದರೂ ಒಡನಾಡಿಕೊಂಡು ಬೆಳೆಸುವ ತಾಳ್ಮೆ. ಇದೆಲ್ಲವೂ ಶ್ರಮಜೀವನದ ಪ್ರಸಾದವೇ..ತನ್ನ ಕಷ್ಟಕ್ಕೆ ಯಾರನ್ನೂ ಹೊಣೆಮಾಡದೆ ಶಿವ ಕೊಟ್ಟಿದ್ದನ್ನು ಪ್ರಸಾದ ಎಂದು ಸ್ವೀಕರಿಸುವ ನಿರ್ಲಿಪ್ತಿ ..ಗತಿಗೆಡಿಸುವ ಅತಿಯಾಸೆ ಇಲ್ಲ.
ಬೇಂದ್ರೆಯವರು ಈ ಜೀವನ ಶ್ರದ್ಧೆಯನ್ನೇ ತಮಾಮ ತ್ರಿಪದಿಯೊಂದರಲ್ಲಿ ಕಟ್ಟಿಕೊಟ್ಟಿದ್ದಾರೆ ನೋಡಿ…

‘ಹೂಗಳ ತೂಗಾಟ ಹಕ್ಕಿಗಳ ಕೂಗಾಟ
ಹಸುಮಕ್ಕಳಾಟ ಕೂಸಾಟಗಳ ನೋಟ
ತೆರೆದಂತೆ ಅಮರಾವತಿ ತೋಟ!’

*
ಪ್ರಕೃತಿಯ ಸಂತೋಷಕರ ವಿದ್ಯಮಾನಗಳನ್ನು ಸವಿಯುತ್ತಾ ಅದನ್ನೇ ತಮ್ಮ ಮಕ್ಕಳಿಗೂ ಉಣಿಸುವ ಹೆತ್ತವರ ಜೀವನ ಶ್ರದ್ಧೆಯನ್ನು ಈಗಿನ ಬದಲಾದ ಯಾಂತ್ರಿಕತೆಯ ಶಿಕ್ಷಣಪದ್ಧತಿ ನೀಡೀತೇ..

ಫೋಟೋ ಕೃಪೆ : google

ಬದುಕೇ ಒಂದು ತೆರೆದ ಪಾಠಶಾಲೆ. ಪ್ರಕೃತಿ‌ ಶಿಕ್ಷಣವೇ ನಿಜವಾದ ಶಿಕ್ಷಣ.. ಮಗು ವಿಸ್ಮಯದಿಂದ ಅವಲೋಕಿಸುವುದೇ ಜ್ಞಾನದ ಆರಂಭ. ಮನಸ್ಸಿನಲ್ಲಿ ಸಂದೇಹಗಳು ಹುಟ್ಟುವುದೇ‌‌ ಕಲಿಕೆ
ಯ ತೃಷೆ. ತಾನಾಗಿಯೇ ಇದು ತನ್ನಲ್ಲಿ ಮೂಡಿದಾಗ. ಗ್ರಹಣಶಕ್ತಿ ಚುರುಕಾಗುತ್ತದೆ. ಜನ ಸಂಪರ್ಕದಲ್ಲಿ ಬೆಳೆದಾಗ ಬದುಕಿನ ಎಲ್ಲ ಮಗ್ಗುಲುಗಳ ಪರಿಚಯವಾಗುತ್ತದೆ. ಇಂತಹ ಮಕ್ಕಳು ಪ್ರಕೃತಿಯ ಒಂದು ಭಾಗವಾಗಿ ಬೆಳೆದು ಅದರ ಅಮೂಲ್ಯ ತೆಯನ್ನು ಅರಿಯುತ್ತಾರೆ.

ಸಂಬಂಧಗಳನ್ನು ಗೌರವಿಸುತ್ತಾರೆ. ಜೀವನವನ್ನು ಬಂದಂತೆ ಸ್ವೀಕರಿಸುತ್ತಾರೆ.ಪರಿಸರದ ಎಲ್ಲ ಜೀವಿಗಳನ್ನೂ ಪ್ರೀತಿಸಲು ಕಲಿಯುತ್ತಾರೆ. ನಾವೂ ಹೀಗೆಯೇ ಪ್ರಕೃತಿಯನ್ನು ಅರಿಯುವ, ಆರಾಧಿಸುವ, ಪ್ರೀತಿಸುವ, ಆನಂದಿಸುವ, ತಾದಾತ್ಮ್ಯವನ್ನು ನೀಡುವ, ಅದರ ಸಂಗತಿಗಳಿಗೆ ಯಾರೂ ಹೋಗುವ ಅರ್ಥಪೂರ್ಣ ಜೀವನ ಶಿಕ್ಷಣ ನೀಡುವ ಮೂಲಕ ದೇಶಕ್ಕೆ, ವಿಶ್ವಕ್ಕೆ ಒಬ್ಬ ಮೌಲ್ಯವಂತ ಪ್ರಜೆಯನ್ನು ಕಾಣಿಕೆಯಾಗಿ ನೀಡೋಣ.ಸಂಸ್ಕೃತಿ,ಪರಂಪರೆಯನ್ನು ಗೌರವಿಸುವ ಪೀಳಿಗೆಯನ್ನು ನಿರ್ಮಿಸೋಣ. ನಮ್ಮ ಮಕಾಖಳ ಜೀವನ, ಸಿರಿಯೆಂಬ ಮಾಯೆಯ ಬಲೆಯಲ್ಲಿ ಸಿಲುಕದೆ ಜಿಹ್ವಾಚಾಪಲ್ಯವನ್ನು ಮೀರಿ…ಬದುಕಿನ ನಿಜವಾದ ಸುಖವನ್ನು ಆಸ್ವಾದಿಸಲು ಅನುವು ಮಾಡಿಕೊಡೋಣ.ಅವರ ಆಲೋಚನೆಗಳೇ ಸಂಪತ್ತಾಗುವಂತೆ
ಮಾರ್ಗದರ್ಶನ ಮಾಡಿ ಅವರ ಬದುಕನ್ನು ಹಸನಾಗಿಸೋಣವೇ..

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ‌ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :


  • ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಲೇಖಕರು, ಕವಿಯತ್ರಿ, ಕೊಡಗು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading