ಕ್ಯಾನ್ಸರ್ ಬರುವುದಕ್ಕೆ ನೀವು ಮಾಂಸಹಾರೀಯೇ ಆಗಬೇಕಿಲ್ಲ. ಆಲ್ಕೋಹಾಲ್ ಸೇವಿಸಲೇ ಬೇಕಿಲ್ಲ, ಧೂಮಪಾನ ಮಾಡಲೇ ಬೇಕಿಲ್ಲ. ಕ್ಯಾನ್ಸರ್ ಬರಲು ನೂರಾರು ಕಾರಣಗಳಿವೆ. ಇದರಲ್ಲಿ ಮುಖ್ಯವಾದ ಕಾರಣಗಳಲ್ಲಿ ಕೆಲವನ್ನು ಇಲ್ಲಿ ಕೊಡುತ್ತಿದ್ದೇನೆ. ವಿಜ್ಞಾನಿ, ಲೇಖಕರಾದ ಪ್ರಸನ್ನ ಸಂತೇಕಡೂರು ಅವರು ಕ್ಯಾನ್ಸರ್ ಕುರಿತು ತಮ್ಮ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ, ಕ್ಯಾನ್ಸರ್ ಕುರಿತಾದ ಒಂದು ಲೇಖನ, ತಪ್ಪದೆ ಮುಂದೆ ಓದಿ…
ಅತಿಯಾದರೆ ಅಮೃತವೂ ವಿಷವಾಗುತ್ತದೆ, ಹಾಗೆ ಹಣ್ಣಸಕ್ಕರೆಯೂ ಕೂಡ!!!
ಇತ್ತೀಚೆಗೆ ಜಗದ್ವಿಖ್ಯಾತ ವಿಜ್ಞಾನ ಪತ್ರಿಕೆಯಾದ Science magazine ನಲ್ಲಿ ಒಂದು ಪ್ರಬಂಧ ಪ್ರಕಟಣೆಯಾಗಿತ್ತು. ಅದರ ಪ್ರಕಾರ ನಮಗೆ ನಮ್ಮ ವಂಶವಾಹಿನಿಯೊಂದರಲ್ಲಿ ಚಿಕ್ಕ ಬದಲಾವಣೆಗಳಾಗಿ ದೊಡ್ಡ ಕರುಳಿನ ಕ್ಯಾನ್ಸರ್ ಬರುವ ಲಕ್ಷಣಗಳಿದ್ದಾಗ (ಕೋಲನ್ ಕ್ಯಾನ್ಸರ್) ಅದರ ಜೊತೆಗೆ ನಾವು ಅತೀಯಾದ ಹಣ್ಣಸಕ್ಕರೆಯಿರುವ ಪದಾರ್ಥಗಳನ್ನು(high fructose corn syrup) ಅತೀಯಾಗಿ ಸೇವಿಸಿದರೆ ನಮಗೆ ಆ ಕ್ಯಾನ್ಸರ್ ಬೇಗ ಬಂದು ತನ್ನ ಮಾಯಾ ಕೈಗಳಿಂದ ನಮ್ಮ ಮೇಲೆ ಆಕ್ರಮಣ ಮಾಡಬಹುದು. ನಮ್ಮನ್ನ ಯಮಪುರಿಯ ಬಾಗಿಲಲ್ಲಿ ತಂದು ನಿಲ್ಲಿಸಬಹುದು.
ಆ ಪ್ರಬಂಧಕ್ಕೆ ನನ್ನ ಅಭಿಪ್ರಾಯವನ್ನು Genes and Diseases ಎಂಬ ವಿಜ್ಞಾನ ಪತ್ರಿಕೆಯಲ್ಲಿ ದಾಖಲಿಸಿದ್ದೇನೆ. ಅದರ ಕೊಂಡಿಯನ್ನ ಕೆಳಗೆ ಕೊಟ್ಟಿದ್ದೇನೆ. ಹಾಗಾದರೆ, ಆ ಕ್ಯಾನ್ಸರ್ ಗೆಡ್ಡೆ ಬೆಳೆಯುವುದನ್ನು ಮತ್ತು ಎಲ್ಲಾ ಕಡೆ ಹರಡುವುದನ್ನು ಹೇಗೆ ತಡೆಗಟ್ಟಬಹುದು?. ನಿಮ್ಮಲ್ಲಿ ಕೆಲವರು ನಾವು ಮಾಂಸಹಾರಿಗಳಲ್ಲ ನಾವು ಸಸ್ಯಹಾರಿಗಳು, ನಾವು ಸಾರಾಯಿ ಕುಡಿಯುವುದಿಲ್ಲ, ಬೀಡಿ ಸಿಗರೇಟ್ ಸೇದುವುದಿಲ್ಲ ಆದರೂ ನಮಗೇಕೆ ಕ್ಯಾನ್ಸರ್ ಬಂತು? ಎಂದು ಕೇಳಬಹುದು.

ಕ್ಯಾನ್ಸರ್ ಬರುವುದಕ್ಕೆ ನೀವು ಮಾಂಸಹಾರೀಯೇ ಆಗಬೇಕಿಲ್ಲ. ಆಲ್ಕೋಹಾಲ್ ಸೇವಿಸಲೇ ಬೇಕಿಲ್ಲ, ಧೂಮಪಾನ ಮಾಡಲೇ ಬೇಕಿಲ್ಲ. ಕ್ಯಾನ್ಸರ್ ಬರಲು ನೂರಾರು ಕಾರಣಗಳಿವೆ. ಇದರಲ್ಲಿ ಮುಖ್ಯವಾದ ಕಾರಣಗಳಲ್ಲಿ ಕೆಲವನ್ನು ಇಲ್ಲಿ ಕೊಡುತ್ತಿದ್ದೇನೆ.
೧) ವಿಪರೀತ ವಾಯು ಮಾಲಿನ್ಯ : ( ದೆಹಲಿ, ಶಾಂಘಾಯ್, ಟೋಕಿಯೋ, ಲಾಸ್ ಏಂಜಲೀಸ್, ನ್ಯೂಯಾರ್ಕ್, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆಯಂತಹ ನಗರಗಳು). ಶ್ವಾಶಕೋಶದ ಕ್ಯಾನ್ಸರಿಗೆ ಮುಖ್ಯ ಕಾರಣ (ಅರುಣ್ ಜೇಟ್ಲಿ, ಅನಂತ್ ಕುಮಾರ್). ನಮ್ಮ ವಂಶವಾಹಿನಿಗಳು ಕ್ಯಾನ್ಸರ್ ಕಾರಕ ವಂಶವಾಹಿನಿಗಳಾಗಿದ್ದಾಗ ವಾಯು ಮಾಲಿನ್ಯ, ಅಥವಾ ನಮ್ಮ ಮನೆಯಲ್ಲಿರುವ ಧೂಮಪಾನಿಗಳಿಂದ ಬರುವ ಹೊಗೆ ಕೂಡ ನಮ್ಮ ಮೇಲೆ ಪರಿಣಾಮ ಬೀರಬಹುದು. ಇಲ್ಲಿ ಹಿಂದೆ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದವರ ಸ್ಥಿತಿ ಕಲ್ಪಿಸಿಕೊಳ್ಳಬಹುದು.
೨) ವಿಷಯುಕ್ತ ವಸ್ತುಗಳು (carcinogens) : ಈ ವಸ್ತುಗಳು ನಮ್ಮ ದೇಹವನ್ನು ಆಹಾರಗಳ ಮೂಲಕ ಸೇರಬಹುದು. ಮುಖ್ಯವಾದ ಉದಾಹರಣೆ Aflatoxins.ತಂಬಾಕು ಸೇವನೆ. ಈ ವಸ್ತುಗಳು ಕೊಳೆತ ಕಡ್ಲೇಕಾಯಿ, ಜೋಳ, ಮೆಣಸಿನ ಕಾಯಿಗಳಿಂದಲೂ ನಮ್ಮ ದೇಹ ಸೇರಬಹುದು. ಇದರಿಂದ ಲಿವರ್ ಕ್ಯಾನ್ಸರ್ ಬರಬಹುದು. ಮಹಾರಾಷ್ಟದ ಮಾಜಿ ಮುಖ್ಯ ಮಂತ್ರಿ ವಿಲಾಸ್ ರಾವ್ ದೇಶಮುಖ್ ಲಿವರ್ ಕ್ಯಾನ್ಸರಿನಿಂದ ಬಳಲುತ್ತಿದ್ದರು. ಅತೀಯಾದ ಆಲ್ಕೋಹಾಲ್ ಸೇವನೆಯಿಂದ ಕೂಡ ಲಿವರ್ ಕ್ಯಾನ್ಸರ್ ಬರಬಹುದು. ತಂಬಾಕು ಸೇವನೆಯಿಂದ ಬಾಯಿ ಅಥವಾ ಗಂಟಲು ಕ್ಯಾನ್ಸರ್ ಬರಬಹುದು. ಇದಕ್ಕೆ ಜೀವಂತ ಉದಾಹರಣೆ ಮಹಾರಾಷ್ಟ್ರದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿಯಾಗಿರುವ ಶರದ್ ಪವಾರ್.
ಹೆಸರಾಂತ ಚಿತ್ರನಟ ಅಮಿತಾ ಬಚ್ಚನ್ ಅವರ ಲಿವರ್ನ ಶೇಕಾದ ೨೫% ಕ್ಕಿಂತ ಕಡಿಮೆ ಭಾಗ ಮಾತ್ರ ಕೆಲಸ ಮಾಡುತ್ತಿರುವುದು. ಅದಕ್ಕೆ ಕಾರಣ ಹಿಂದೆ ೧೯೮೨ ರಲ್ಲಿ ಸಿನಿಮಾದಲ್ಲಿ ನಟಿಸುವಾಗ ಸಂಭವಿಸಿದ ಅಪಘಾತ ಒಂದರ ತೀವ್ರ ರಕ್ತ ಸ್ರಾವವಾಗಿ ಅವರ ದೇಹಕ್ಕೆ ರಕ್ತ ಬೇಕಾದಾಗ ದಾನಿಯೊಬ್ಬರಿಂದ ಪಡೆದ ರಕ್ತದಲ್ಲಿ Hepatitis B virus ಎಂಬ ಸೂಕ್ಷಾಣು ಅಮಿತಾ ಬಚ್ಚನ್ ಅವರ ದೇಹ ಸೇರಿಕೊಂಡಿತು. ಇದು ಲಿವರ್ ಕ್ಯಾನ್ಸರ್ ಕಾರಕ ವೈರಸ್. ಆ ಕಾರಣದಿಂದ ಅಮಿತಾ ಬಚ್ಚನ್ ಅವರು liver cirrhosis ನಿಂದ ಬಳಲುವಂತಾಯಿತು. ಈಗ ಅವರ ದೇಹದ ಮುಕ್ಕಾಲು ಭಾಗ ಲಿವರ್ ಅನ್ನು ಕತ್ತರಿಸಿ ತೆಗೆದಿದ್ದಾರೆ. ಈಗ ಅದರ ಕಾಲು ಭಾಗ ಮಾತ್ರ ಕೆಲಸ ಮಾಡುತ್ತಿರುವುದು. ಹಾಗೆ ಬಿಟ್ಟಿದ್ದರೆ ಅವರಿಗೆ ಲಿವರ್ ಕ್ಯಾನ್ಸರ್ ಬರುತಿತ್ತು.
೩) ಮಧುಮೇಹ: ಮಧುಮೇಹ, ಬೊಜ್ಜು ಮತ್ತು ಸ್ಥೂಲಕಾಯತೆ, ದೈಹಿಕ ಶ್ರಮವಿಲ್ಲದ ಬೆಳಿಗ್ಗೆಯಿಂದ ಸಂಜೆ ತನಕ ಕುಳಿತೆ ಮಾಡುವ ಕೆಲಸಗಳು( ಪಾರ್ಲಿಮೆಂಟಿನಲ್ಲಿ ಕೂರುವ ಕೆಲಸ ಕೂಡ ಆಗಬಹುದು) ಕೂಡ ಕ್ಯಾನ್ಸರ್ ಬರಲು ಕಾರಣವಾಗಬಹುದು. ಮಧುಮೇಹವಾದಾಗ ದೇಹದ ಕಾರ್ಯಗಳು ವ್ಯತಿರಿಕ್ತವಾಗುತ್ತವೆ. ಇನ್ಸುಲಿನ್ ಎಂಬ ಹಾರ್ಮೋನ್ ದೇಹದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಅದು ತನ್ನ ಕಾರ್ಯವನ್ನು ಸರಿಯಾಗಿ ಮಾಡದಿದ್ದಾಗ, ಅಥವಾ ಅದನ್ನು ತಯಾರಿಸುವ ಪ್ಯಾಂಕ್ರಿಯಾಸ್ ತನ್ನ ಕಾರ್ಯವನ್ನು ಸರಿಯಾಗಿ ಮಾಡದಿದ್ದಾಗ, ಅಥವಾ ಪ್ಯಾಂಕ್ರಿಯಾಸಿನ ವಂಶವಾಹಿನಿಗಳಲ್ಲಿ ಬದಲಾವಣೆಗಳಾದಾಗ, ಅಥವಾ ಕೊಬ್ಬಿನ ಅಂಶ ಹೆಚ್ಚಾದಾಗ ಪ್ಯಾಂಕ್ರಿಯಾಸ್ಸಿನ ಕ್ಯಾನ್ಸರ್ ಬರಬಹುದು. ಈ ಮಹನೀಯರು (ಮನೋಹರ್ ಪಾರೀಕರ್, ಸ್ಟೀವ್ ಜಾಬ್ಸ್, ರೌನ್ಡಿ ಪಾಶ್) ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಬಂದವರು. ಮಧುಮೇಹದಿಂದ ಕಿಡ್ನಿಯ ಬಾಹು ಅಥವಾ, diabetic nepropathy, ಕ್ಯಾನ್ಸರ್ ಕೂಡ ಬರಬಹುದು (ಸುಷ್ಮಾ ಸ್ವರಾಜ್).
೪) ವೈರಸ್ಸುಗಳು: ಕೆಲವು ವೈರಸ್ಸುಗಳು ಕೂಡ ಕ್ಯಾನ್ಸರ್ ಬರಲು ಕಾರಣಗಳಾಗಬಹುದು. ಗರ್ಭಕಂಠದ ಕ್ಯಾನ್ಸರ್ Human papillomavirus (HPV) ಈ ವೈರಸ್ಸಿನಿಂದ ಬರುತ್ತದೆ. ಸೋನಿಯ ಗಾಂಧಿಯವರಿಗೆ ಈ ಕ್ಯಾನ್ಸರ್ ಇತ್ತು ಎಂದು ಮಾಧ್ಯಮಗಳು ಪ್ರಕಟಿಸಿದ್ದವು. ಇದರಿಂದ ಅವರು ಚೇತರಿಕೆ ಹೊಂದಿರುವ ಹಾಗೆ ಕಾಣುತ್ತಿದ್ದಾರೆ. Hepatitis B Virus (HBV) and Hepatitis C Virus (HCV) ವೈರುಸ್ಸುಗಳಿದ ಲಿವರ್ ಕ್ಯಾನ್ಸರ್ ಬರುತ್ತದೆ.

ಹಾಗೆ ಹಣ್ಣಿನ ರಸದಲ್ಲಿರುವ ಹಣ್ಣಸಕ್ಕರೆ (fructose) ಶರ್ಕರಗಳಲ್ಲಿ( ಕಾರ್ಬೊಹೈಡ್ರೇಟ್ಸ್) ಒಂದಾದ ಇದನ್ನು ಸಂಸ್ಕರಿಸಿ (high fructose corn syrup) ಮಾಡಿ ಅದನ್ನು ಪೆಪ್ಸಿ, ಕೋಕಾಕೋಲಾ, ಜೆಲ್ಲಿ, ಜಾಮ್, ಕೆಚಪ್, ಜ್ಯೂಸು ಮತ್ತು ಹಲವಾರು ಆಹಾರಗಳಲ್ಲಿ ಸೇರಿಸುತ್ತಿದ್ದಾರೆ. ಆ ಕಾರಣದಿಂದ ಅತೀಯಾಗಿ ಸಂಸ್ಕರಿಸಿದ, ಹೊರಗಿನ ಮತ್ತು ಅತೀ ಹೆಚ್ಚು ಸಕ್ಕರೆ ಪದಾರ್ಥಗಳನ್ನು ಸೇವಿಸುವುದನ್ನ, ಹೊಟ್ಟೆ ಬಿರಿಯುವಂತೆ ತಿನ್ನುವುದನ್ನು ವರ್ಜಿಸಿದರೆ ತುಂಬಾ ಒಳ್ಳೆಯದು ಅಥವಾ ಸೇವಿಸಿದರೂ ಅತೀ ಹೆಚ್ಚು ವ್ಯಾಯಾಮ, ವಾಯು ವಿಹಾರ, ದೈಹಿಕ ಶ್ರಮದ ಕೆಲಸಗಳು ಮಾಡಿದರೆ ಅವುಗಳಿಂದ ಆಗುವ ಕೆಟ್ಟ ಹಾನಿಕಾರಕ ಪರಿಣಾಮಗಳನ್ನು ತಡೆಗಟ್ಟಬಹುದು. ಇದಕ್ಕೆ ಇನ್ನೊಂದು ಉದಾಹರಣೆ ಪ್ರತಿದಿನ ನೀವು ಊಟದ ಜೊತೆ ಎಳನೀರು ಕುಡಿದು ವ್ಯಾಯಾಮ ಮಾಡದೆ, ದೈಹಿಕ ಶ್ರಮಪಡದಿದ್ದರೆ ಕುಳಿತೆ ಕೆಲಸಮಾಡಿ್ದರೆ ಕೂಡ ದೇಹದ ತೂಕ ಹೆಚ್ಚಾಗಿ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ರಕ್ತದ ಒತ್ತಡ, ಲಿವರಿನಲ್ಲಿ ಕೊಬ್ಬು ಹೆಚ್ಚಾಗಬಹುದು. ಎಳನೀರು ನಿಶಕ್ತಿಯಾದ ತುಂಬಾ ಉತ್ತಮ ಪೌಷ್ಟಿಕ ಆಹಾರ. ನಿಶಕ್ತಿಯಾಗಿರುವ ರೋಗಿಗಳಿಗೆ ಅಮೃತದ ಸಮಾನ. ಆದರೆ, ಆರೋಗ್ಯವಂತ ವ್ಯಕ್ತಿ ಚೆನ್ನಾಗಿ ತಿನ್ನುತ್ತ ಪ್ರತಿದಿನ ಎಳನೀರು ಕುಡಿಯುತ್ತ ದೇಹಕ್ಕೆ ಶ್ರಮಕೊಡದಿದ್ದರೆ ಅದು ಹಾನಿಕಾರಕವಾಗುವ ಸಂಭವವೂ ಇದೆ.
ಅದರ ಜೊತೆಗೆ ನಿಯಮಿತ ನಿದ್ರೆ, ಧ್ಯಾನ (ತಮ್ಮ ತಮ್ಮ ನಂಬಿಕೆಗೆ ತಕ್ಕಂತೆ) ಮಾಡಿದರೆ ತುಂಬಾ ಒಳ್ಳೆಯದು. ಮಹಿಳೆಯರಲ್ಲಿ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವುದರಿಂದ ಸ್ತನದ ಕ್ಯಾನ್ಸರ್ ಬರುವ ಸಂಭವ ಹೆಚ್ಚು ಇರುತ್ತದೆ, ಜೊತೆಗೆ ನಿದ್ರೆಗೆಡುವುದರಿಂದ ಕೂಡ. ನಿದ್ರೆಗೆಟ್ಟಾಗ ದೇಹದಲ್ಲಿನ ಮೆಲಟೋನಿನ್ ಎಂಬ ಅತೀ ಉಪಯುಕ್ತ ಹಾರ್ಮೋನ್ ಸ್ರವಿಸುವುದಿಲ್ಲ. ಇದರಿಂದ ಬಹಳಷ್ಟು ತೊಂದರೆಗಳಾಗುತ್ತವೆ. ಸರಿಯಾದ ಪ್ರಮಾಣದ ನಿದ್ರೆ, ಧ್ಯಾನ ಮಾಡುವುದರಿಂದ, ಯೋಗ, ಶಿವಯೋಗ ಮಾಡುವುದರಿಂದ ಕೂಡ ಈ ಹಾರ್ಮೋನ್ ದೇಹದಲ್ಲಿ ಹೆಚ್ಚಾಗುತ್ತದೆ. ಇದನ್ನ ಡಾ. ಅನುಪಮ ನಿರಂಜನ (ಪ್ರಖ್ಯಾತ ಲೇಖಕಿ, ವೈದ್ಯೆ) ಅವರು ರಾಜಶೇಖರ ಭೂಸನೂರಮಠ (ವಿಜ್ಞಾನಿ,ಲೇಖಕ) ಅವರು ಒಪ್ಪಿದ್ದಾರೆ. ವಿಜ್ಞಾನ ಕೂಡ ಇದನ್ನು ಒಪ್ಪುತ್ತದೆ. ಈ ಹಾರ್ಮೋನ್ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಉತ್ಪತ್ತಿಯಾಗುವುದನ್ನೇ ತಡೆಗಟ್ಟುತ್ತದೆ. ಆ ಕಾರಣದಿಂದ ಒತ್ತಡವಿಲ್ಲದ ಬದುಕು, ಹಿತವಾದ ಮತ್ತು ಮಿತವಾದ ಆಹಾರ, ವ್ಯಾಯಾಮ, ವಾಯುವಿಹಾರ, ಧ್ಯಾನ, ಯೋಗ, ನಿದ್ರೆ ನಮ್ಮ ಆರೋಗ್ಯವಂತ ಬದುಕಿಗೆ ನಾಂದಿಯಾಗಬಹುದು.
ಆಗಾಗಿ ಡಿವಿಜಿಯವರ ಈ ಮಾತು ನೆನಪಿರಲಿ. ಆ ಸಾಲುಗಳ ಜೊತೆಗೆ ಆಹಾರದಲ್ಲಿ, ಟಿವಿ, ಮೊಬೈಲ್ ನೋಡುವುದರಲ್ಲಿ, ನಿದ್ರೆಗೆಡುವುದರಲಿ ಸೇರಿಸಿಕೊಳ್ಳಿ.
ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ ।
ಹಿತವಿರಲಿ ವಚನದಲಿ ಋತವ ಬಿಡದಿರಲಿ ।।
ಮಿತವಿರಲಿ ಮನಸಿನುದ್ವೇಗದಲಿ ಭೋಗದಲಿ ।
ಅತಿ ಬೇಡವೆಲ್ಲಿಯುಂ ಮಂಕುತಿಮ್ಮ ।।
- ಪ್ರಸನ್ನ ಸಂತೇಕಡೂರು – ವಿಜ್ಞಾನಿ, ಸಂಶೋಧಕರು, ಲೇಖಕರು,ಉಪನ್ಯಾಸಕರು, ಮೈಸೂರು
