ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ‘ಅಪೂರ್ಣ ಸತ್ಯ’ ಲೇಖಕರ ಚೊಚ್ಚಲ ಕೃತಿಯಾಗಿದೆ.ಇದರಲ್ಲಿ ಒಟ್ಟು ಹನ್ನೆರಡು ಕಥೆಗಳಿದ್ದು, ಕೊನೆಯ ಮೂರು ನೀಳ್ಗತೆಗಳಾಗಿವೆ.ಈ ಕೃತಿಯ ಕುರಿತು ರಶ್ಮಿ ಉಳಿಯಾರು ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅಪೂರ್ಣ ಸತ್ಯ
ಲೇಖಕರು : ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಪ್ರಕಾಶನ : ಯುಗಪುರುಷ ಪ್ರಕಟನಾಲಯ, ಕಿನ್ನಿಗೋಳಿ(ಮುದ್ರಣಗಳು:೨೦೧೬, ೨೦೧೯)
ಬೆಲೆ :₹೧೩೦/-
ಪುಟಗಳು : ೧೮೪
ಇದು ಲೇಖಕರ ಚೊಚ್ಚಲ ಪ್ರಕಟಿತ ಕೃತಿ. ಇದರಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಕೊನೆಯ ಮೂರು ನೀಳ್ಗತೆಗಳು. ಇವುಗಳಲ್ಲಿ ೨ ಕಥೆಗಳು ಸ್ಪರ್ಧೆಗಳಲ್ಲಿ ಬಹುಮಾನಿತವೂ ಆಗಿದ್ದು ಮತ್ತುಳಿದವುಗಳಲ್ಲಿ ಏಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪುಸ್ತಕಕ್ಕೆ ೨೦೧೭ರಲ್ಲಿ ‘ಬುದ್ಧ , ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್’ ಇವರಿಂದ ಬಹುಮಾನ ಲಭಿಸಿದೆ. ಪುಸ್ತಕವು ಟೋಟಲ್ ಕನ್ನಡ ಮಳಿಗೆಯಿಂದ ವಿತರಣೆಯಾಗುತ್ತಿದೆ. ಈ ಕೃತಿಯು ನನಗೆ ಈಚನೂರು ಜಯಲಕ್ಷ್ಮಿ ಮತ್ತು ಶಾಂತಾ ಅವರ ಅಭಿಯಾನದಲ್ಲಿ ಲೇಖಕರಿಂದ ಬಹುಮಾನವಾಗಿ ದೊರೆತಿದೆ. ಅವರಿಗೆ ಮತ್ತೊಂದು ಬಾರಿ ವಂದನೆಗಳು.
ಹೆಚ್ಚಿನ ಕಥೆಗಳಲ್ಲಿ ಓದುಗರು ಊಹಿಸದ ರೀತಿಯಲ್ಲಿ ತಿರುವುಗಳನ್ನು ಇಟ್ಟಿರುವುದು ಓದಿನ ಮಜಾವನ್ನು ಹೆಚ್ಚಿಸುತ್ತದೆ. ಭಿನ್ನ ವಿಭಿನ್ನ ಪ್ರಕಾರದ ಕಥೆಗಳನ್ನು ಇಲ್ಲಿನ ವಿಶೇಷ. ಶೀರ್ಷಿಕೆ ಚಿತ್ರವು ಮೊದಲ ಕಥೆ ಅಪೂರ್ಣ ಸತ್ಯವನ್ನು ಭಾಗಶಃ ಬಿಂಬಿಸುತ್ತದೆ. ಆ ಕಥೆಯಲ್ಲಂತೂ ಒಂದಕ್ಕಿಂತ ಹೆಚ್ಚು ತಿರುವುಗಳಿದ್ದು ಭರ್ಜರಿ ಆರಂಭ ಎನ್ನಿಸಿತು. ಪರೀಕ್ಷೆಯಲ್ಲಿ ಕಾಪಿ ಮಾಡಿದ ಸ್ನೇಹಿತರಿಬ್ಬರಲ್ಲಿ ಮೊದಲನೇ ವ್ಯಕ್ತಿ ದೊಡ್ಡ ಕಂಪೆನಿಯ ಮಾಲೀಕನಾದರೆ ಮತ್ತೊಬ್ಬ ಸತ್ತನೆಂದು ಎಲ್ಲರೂ ಭಾವಿಸುತ್ತಾರೆ. ಆದರೆ ಅವನು ನಿಜವಾಗಿಯೂ ಏನಾದ… ಅವನಿಗೆ ಮತ್ತು ಈ ವ್ಯಕ್ತಿಗೆ ಮಾತ್ತ ತಿಳಿದ ಸತ್ಯವೇನು…?? ಆ ಎರಡು ಅರ್ಧ ಸತ್ಯಗಳನ್ನು ಸೇರಿಸಿದರೂ ಅದು ಪೂರ್ಣ ಸತ್ಯವಾಗದು ಎಂಬ ಮಾತು ಇಲ್ಲಿ ಗಮನೀಯ. ಅಪೂರ್ಣ ಸತ್ಯದಾಚೆ ಉಳಿದ ಮತ್ತೊಂದು ಸತ್ಯವೇನು? ಕುತೂಹಲಕಾರಿ ಕಥೆ ನೀವೇ ಓದಿ ನೋಡಿ.

ಎರಡನೇ ಕಥೆ ದೇವರ ಗಿಡ ಸಹ ಒಂದು ಭಿನ್ನ ಜಾಡಿನ ಕಥೆ. ನಾಸ್ತಿಕನಾದ ವ್ಯಕ್ತಿ ಬರಡಾದ ಬೆಟ್ಟ, ಕಡುಕಷ್ಟದ ಅರ್ಚಕರ ಸಂಸಾರ, ದೇವಾಲಯ ಶೋಚನೀಯ ಪರಿಸ್ಥಿತಿ ಕಂಡು ಮಾಡಿದ ಒಂದು ಉಪಾಯ ಆ ಬೆಟ್ಟವನ್ನು ಹಸಿರಾಗಿಸಿತು. ಆ ಉಪಾಯ ಏನು… ಹೀಗೂ ಒಂದು ಹರಕೆ ಇರುತ್ತಿದ್ದರೆ ಅದೆಷ್ಟು ಚೆನ್ನ ಎನ್ನಿಸಿತು.
ಉಳಿದ ಹಾಗೆ ಕೊನೆಯ ಮೂರೂ ನೀಳ್ಗತೆಗಳು ಮನ ಸೆಳೆದವು. ಕರಾವಳಿಯ ಮೂಲದ ಲೇಖಕರು ಎಂದರೆ ನಾನು ಮೊದಲು ಹುಡುಕುವುದು ಊರಿನ ಭಾಷೆ, ಪರಿಸರದ ಚಿತ್ರಣ ಇರುವ ಕಥೆಗಳು ಇವೆಯಾ ಎನ್ನುವುದು…. ಊರಿಂದ ದೂರ ಇರುವ ನನಗೆ ಅದೊಂದು ಮನ ತಣಿಸುವ ವಿಷಯ. ಪೂರಕವಾಗಿ ಇಲ್ಲಿ ಕೆಮ್ಮೈರ ಎನ್ನುವ ಕೋಳಿಯಂಕದ ಕಥೆ ಇದೆ. ಓದುತ್ತಾ ನನಗೆ ನಮ್ಮ ಪ್ರಾಥಮಿಕ ಶಾಲೆಯ ಪಕ್ಕದ ಜಾಗದಲ್ಲಿ ನಡೆಯುತ್ತಿದ್ದ ಕೋಳಿಯಂಕ, ಅಲ್ಲಿ ಸೇರಿದ್ದ ಜನರು, ಒಮ್ಮೆ ನಮಗಿಂತ ಎರಡು ವರ್ಷ ಸಣ್ಣವನಾದ ತಂದೆ ಇಲ್ಲದ ಹುಡುಗನಿಗೆ ಕೋಳಿಗೆ ಕಟ್ಟಿದ್ದ ಬಾಳ್ ಹೊಟ್ಟೆಗೆ ತಾಗಿ ರಕ್ತ ಧಾರಾಕಾರವಾಗಿ ಹರಿದದ್ದು, ಆ ಹೊತ್ತಿಗೆ ಅವನ ನೆರೆಯ ಒಬ್ಬರು ಒದ್ದಾಡುತ್ತಿದ್ದ ಹುಡುಗನನ್ನು ಕಾಲ ಮೇಲೆ ಹಾಕಿಕೊಂಡು, ಬೈರಾಸನ್ನು ಹಿಡಿದು ಎಲ್ಲರ ಹತ್ತಿರ ಬೇಡಿ ಹಣ ಒಟ್ಟು ಮಾಡಿ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಘಟನೆ ನೆನಪಾಯಿತು. ಕಥೆಯಲ್ಲಿ ಕೆಮ್ಮೈರ ಎಂಬ ಕೋಳಿಯಂಕದ ಜಗಮಲ್ಲ ಕೋಳಿ ಹಾಗೂ ಅದರ ಹೆಮ್ಮೆಯ ಮಾಲೀಕ ಸೇಸಪ್ಪ ನಡುವೆ ನಡೆಯುವ ಕಥೆಯಿದು. ನಮ್ಮೂರಿನ ದೈವ ದೇವರ ನಂಬುಗೆಗಳ ಜೊತೆಗೆ ಯಥಾವತ್ತಾಗಿ ಚಿತ್ರಣ ಮೂಡಿ ಬಂದಿದೆ. ಪಾತ್ರಧಾರಿಗಳು ಮಾತನಾಡುವ ಶೈಲಿ ಕೂಡ ಹಿಡಿಸಿತು. ತುಂಬಾ ಒಳ್ಳೆಯ ಕಥೆಯಿದು.

ಬಿಗುಮಾನ ಎಂಬ ಕಥೆಯಲ್ಲಿ ಸುರ ಸುಂದರಾಂಗ, ಊರಿನ ಯುವಕ ಬೆಂಗಳೂರು ಟು ದೆಹಲಿ ವಿಮಾನ ಪ್ರಯಾಣದಲ್ಲಿ ಜೊತೆಯಾದರೂ ಏನೂ ಮಾತನಾಡದೇ ಬಿಂಕ ತೋರಿದ್ದಾದರೂ ಯಾಕೆ ಎಂಬ ನಾಯಕಿಯ ಪ್ರಶ್ನೆ ನಮ್ಮದೂ ಆಗುತ್ತದೆ. ಉತ್ತರ ಕಥೆಯ ಕೊನೆಯಲ್ಲಿ ಲಭ್ಯವಾದಾಗ ಅವಳು ಅವನಿಗೆ ಮತ್ತೆ ಕಾಣ ಸಿಗಲಿ ಎಂಬ ಹಾರೈಕೆ ಓದುಗರದೂ ಸಹ. ಕಾರ್ಪೊರೇಟ್ ಜಗತ್ತಿನ ಶಿಕಾರಿ ಮಾಡುವ, ತುಳಿತದ ಕಥೆ ನಿಯತ್ತು. ಬಣ್ಣ ಬದಲಾಯಿಸುತ್ತಾ ಗೋಸುಂಬೆತನ ತೋರುವವರಿಗಿಂತ ನ್ಯಾಯವಾಗಿ ಇರುವವರಿಗೆ ಬೆಲೆ ಕಡಿಮೆ. ದಂಡನೆಯೂ ಹೆಚ್ಚು ಎನ್ನುವುದು ವೇದ್ಯವಾಗಿಸುವ ಕಥೆ. ಆದರೆ ಕೊನೆಯಲ್ಲಿ ನಾಯಕನ ಧೈರ್ಯ ಮೆಚ್ಚುತ್ತದೆ.
ನಕ್ಸಲ್ ಛಾಯೆಯ ಮತ್ತು ಪೋಲಿಸ್ ದುರಾಚಾರದ ಅಳಿಯದ ಹೆಜ್ಜೆಗಳು ಕಥೆ ಸಹ ಒಂದು ವಿಭಿನ್ನ ತಿರುವು ಹೊಂದಿದ್ದರೂ ಕಾನೂನಿನಿಂದ ಏನನ್ನೂ ಮುಚ್ಚಿಡಲಾಗದು ಎನ್ನುವುದನ್ನು ಸಾರಿದೆ. ಒಟ್ಟಿನಲ್ಲಿ ಪದ ದೋಷಗಳಿಲ್ಲದ ಉತ್ತಮವಾದ ಬೇರೆ ಬೇರೆ ತರಹದ ಕಥಾ ರಸದೂಟವಿದೆ ಈ ಕೃತಿಯಲ್ಲಿ. ನೀವು ಕಥಾ ಸಂಕಲನ ಪ್ರಿಯರಾಗಿದ್ದರೆ ಮತ್ತಷ್ಟು ರುಚಿಸುವುದರಲ್ಲಿ ಸಂಶಯವಿಲ್ಲ. ಓದಿ ನೋಡಿ.
- ರಶ್ಮಿ ಉಳಿಯಾರು
