ನಮಗೆ ಯಾವುದೇ ಭಾಷೆಯ ಬಗ್ಗೆ ಅರಿವು ಇಲ್ಲ, ಅಥವಾ ಆ ಭಾಷೆ ಬಗ್ಗೆ ಒಲವಿಲ್ಲ, ಅಥವಾ ಬರುವುದೇ ಇಲ್ಲ ಎಂದು ಸರಿಸುವುದಲ್ಲ. ನಮ್ಮ ಹಿಂದುತ್ವಕ್ಕೆ ಕಾರಣವಾದ ಸಾಂಸ್ಕೃತಿಕ ನೆಲಗಟ್ಟಿನ ಸೊಗಡನ್ನು ಹೊಂದಿದ ಭಾಷೆಯನ್ನು ಗೌರವಿಸಿ, ಉಳಿಸುವುದು ನಮ್ಮ ಕರ್ತವ್ಯ ಅಲ್ಲವೇ. – ಸಿ. ಎನ್. ಭಾಗ್ಯಲಕ್ಷ್ಮಿ ನಾರಾಯಣ, ತಪ್ಪದೆ ಮುಂದೆ ಓದಿ…
ಹಿಂದಿ ಮತ್ತು ಸಂಸ್ಕೃತ ಎರಡನ್ನು ವಿಶ್ಲೇಷಣೆ ಮಾಡಿ ನೋಡುವುದಾದರೆ ಯಾವುದೇ ನಮ್ಮ ಭಾರತೀಯ ಭಾಷೆಗಳಿಗೆ ಮೂಲ ಅಂತ ಇದ್ರೆ ಅದು ಹಿಂದಿ ಅಲ್ಲ ಸಂಸ್ಕೃತ ಮಾತ್ರ ಸಂಸ್ಕೃತದಿಂದನೇ ಸಾಕಷ್ಟು ಪದಗಳು ಭಾಷಾಂತರ ಗೊಂಡಿವೆಯೇ ಹೊರತು ಹಿಂದಿಯಿಂದ ಯಾವುದೇ ಪದಗಳು ಟ್ರಾನ್ಸ್ಲೇಟ್ ಆಗಿ ಸಂಸ್ಕೃತಕ್ಕೆ ಬಂದಿಲ್ಲ. ಹಿಂದಿಯು ವಿವಿಧ ಸಂಸ್ಕೃತಿಗಳ ಅಥವಾ ಪ್ರಾದೇಶಿಕ ಭಾಷೆಗಳ ಶಬ್ದಗಳನ್ನು ಹೀರಿಕೊಳ್ಳುವಂತ ಶಕ್ತಿ ಹೊಂದಿದೆ. ಅದು ಸ್ವತಹ ರಚನೆಯಿಂದ ಹುಟ್ಟಿಲ್ಲ. ಸಂಸ್ಕೃತ ಪಾರ್ಷಿಯನ್ನು ಮತ್ತು ಅರೇಬಿಕ್ ಈ ಎಲ್ಲವುಗಳನ್ನು ಒಳಗೊಂಡಂತೆ ಹಿಂದಿ ಉಂಟಾಗಿದೆ.
ಸೂರ್ಯನಿಂದ ಸೂರಜ್, ಘರ್, ಹಾತ್, ಮುಹ್, ಪರ್, ನೀಂಡ್, ಕಲ್,ರಾತ್, ಬಾತ್,ಕೇಲ್, ಅಖೇಲ್ ಇಂತಹ ಮುಂತಾದ ಪದಗಳು ಸಂಸ್ಕೃತ / ಪ್ರಾಕೃತ್ ಗಳಿಗೆ ಸುಲಭವಾಗಿ ಗುರುತಿಸಬಹುದು. ಲಿಕ್ನಾ, ಬೇತ್ನಾ,ಸೊಹ್ನಾ,ಚಲ್ನಾ, ಈತರಹದ ಮುಂತಾದ ಕ್ರಿಯಾ ಪದಗಳು ಸಂಸ್ಕೃತ /ಪ್ರಾಕೃತದಿಂದ ಬಂದವು ನಮ್ಮ ಭಾಷೆ ಎನಿಸಿಕೊಳ್ಳುವಂತಹ ಹಿಂದಿ ಹೆಚ್ಚು ಭಾಷೆಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿದೆ. 19ನೇ ಶತಮಾನಕ್ಕೂ ಹಿಂದೆ ಹಿಂದಿಯನ್ನು ದೇವ ನಾಗರಿಯಲ್ಲಿ ಬರೆದಿಲ್ಲ, ಅದನ್ನು ನಾಸ್ಟಾಲಿಕ್ ನಲ್ಲಿ ಬರೆಯಲಾಗಿದೆ. ಹಾಗೆ ನೋಡಿದರೆ ಹಿಂದಿಯು ನಿಜವಾಗಿಯೂ ಶ್ರೀಮಂತ ಭಾಷೆ ಹೌದು. ಏಕೆಂದರೆ ಅದು ನಾನಾ ಭಾಷೆಗಳನ್ನುಒಳಗೊಂಡಿದೆ, ಪ್ರಬಾವಗೊಂಡಿದೆ. ಪರ್ಷಿಯನ್, ಅರೆಬಿಕ್ ಮತ್ತುಇತರ ಭಾಷೆಗಳನ್ನು ಒಳಗೊಂಡಂತೆ ವಿವಿಧ ಭಾಷಾ ಸಂಪ್ರದಾಯಗಳಿಂದ ಪದಗಳನ್ನು ಸಂಯೋಜಿಸುತ್ತದೆಯೇ ಹೊರತು ಮೂಲತಹ ತಾನೇ ಪದಗಳನ್ನು ಸೃಷ್ಟಿಸಿಲ್ಲ. ಹಿಂದಿಯು ಪೋರ್ಚಗೀಸ್, ಇಂಗ್ಲೀಷ್ ಹಾಗೂ ಮತ್ತಿತರ ಭಾಷೆಗಳ ಸೊಗಡನ್ನು ಹೀರಿಕೊಂಡು ಬೆಳೆದಿದೆ. ಹಾಗಾಗಿ ಹಿಂದಿಯು ಪ್ರದೇಶದ ಐತಿಹಾಸಿಕ ಮತ್ತುಸಾಂಸ್ಕ್ರೃತಿಕ ವಿನಿಮಯವನ್ನು ಪ್ರದರ್ಶಿಸುತ್ತದೆ. ಎಲ್ಲರ ದೃಷ್ಟಿಯಲ್ಲಿ ಉತ್ಕೃಷ್ಟ ಭಾಷೆ ಎನಿಸಿಕೊಂಡು ಕೆಲವರಿಂದ ಅಂಗೀಕಾರವಾಗಿದೆ. ಹಿಂದಿಗೆ ಕೊಟ್ಟ ಮಾನ್ಯತೆ ನಮ್ಮ ಸಂಸ್ಕೃತಕ್ಕೆ ಸಿಕ್ಕಿದ್ದರೆ ಇದಕ್ಕಿಂತ ಹೆಚ್ಚು ಬೆಳೆಯುತಿತ್ತು.
ನಮ್ಮ ಕನ್ನಡವೂ ಕೂಡಾ ಶಾಸ್ತ್ರೀಯ ಭಾಷೆಯಾಗಿದೆ. ಆದರೆ ಇದೂ ಕೂಡಾ ಸಂಸ್ಕೃತದ ಪ್ರಭಾವವೇ ಕೂಡಾ. ನಾವು ಬಳಸುವ ತತ್ಸಮ ಪದಗಳು ಮೂಲತಃ ಸಂಸ್ಕೃತದ್ದೇ ಆಗಿದೆ. ನಮಸ್ಕಾರ, ಪಾಠ, ಪ್ರವಚನ, ಪುಣ್ಯ, ನೇತ್ರ, ಇಂತಹ ಶೇಕಡ ಅರವತ್ತರಷ್ಟು ಪದಗಳು ಸಂಸ್ಕೃತದ ಪದಗಳಾಗಿವೆ. ಹಾಗಾಗಿ ನಮಗೆ ಸಂಸ್ಕೃತ ವೇದ್ಯ ಎನಿಸುವಷ್ಟು ಹಿಂದಿ ವೇದ್ಯವಾಗುವುದಿಲ್ಲ. ಸಂಸ್ಕೃತಕ್ಕೆ ಮೂಲ ಇದೆ. ಭಾರತೀಯ ಶಾಸ್ತ್ರೀಯ ಭಾಷೆಗಳು ಎಂದೆನಿಸಿಕೊಂಡ ಕನ್ನಡ, ತೆಲುಗು, ತಮಿಳು ಇತ್ಯಾದಿ ಭಾಷೆಗಳೆಲ್ಲಾ ಸಂಸ್ಕೃತದಿಂದಲೇ ಪ್ರಭಾವಿತವಾಗಿವೆ. ಸಂಸ್ಕೃತ ಒಂದು ವರ್ಗಕ್ಕೆ ಸೇರಿದ ಭಾಷೆಯಲ್ಲ. ಅನೇಕ ವರ್ಗಗಳೇ ಸಂಸ್ಕೃತದಿಂದ ಪ್ರಭಾವಗೊಂಡಿವೆ. ಆದರೆ ಅದರ ಬಗ್ಗೆ ಕೆಲವರಿಗೆ ಅರಿವು ಮೂಡಿಲ್ಲ ಅಷ್ಟೇ. ಏಕೆಂದರೆ ನಿತ್ಯ ಬಳಸುವ ಪದಗಳು ಸಂಸ್ಕೃತದ್ದವೇ ಆಗಿದೆ. ಆದರೂ ಅದು ಅರ್ಥವಾಗದ ಕಬ್ಬಿಣದ ಕಡಲೆಯಾಗಿಯೋ ಅಥವಾ ಒಂದು ವರ್ಗಕ್ಕೆ ಸೀಮಿತವಾಗಿಯೋ ಉಳಿದು ಹೋಗಿದೆ. ಯಾವುದೇ ಭಾಷೆಗಳು ಬಳಸಿದಷ್ಟು ಸುಲಲಿತವಾಗುತ್ತದೆ. ಬಳಸದೇ ಇದ್ದಾಗ ಮರಗಟ್ಟುತ್ತದೆ.
ಕನ್ನಡವೂ ಸಂಸ್ಕೃತದ ಸಾಲಿಗೆ ಸೇರುವುದರಲ್ಲಿ ದೂರವಿಲ್ಲ. ಇಂಗ್ಲೀಷ್ ವ್ಯಾಮೋಹ ಹೆಚ್ಚಾಗಿ ಕನ್ನಡವೂ ದೂರಸರಿಯುತಿದೆ. ಎಲ್ಲಾ ಕಡೆ ಪೋಷಕರೂ ಕೂಡಾ ಇಂಗ್ಲಿಷ್ ಮಾಧ್ಯಮವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಿಂದಿ ಭಾಷೆ ಎಷ್ಟೇ ಎತ್ತರಕ್ಕೆ ಬೆಳೆದಿರಬಹುದು, ಸಾಹಿತ್ಯವೂ ಶ್ರೀಮಂತವಾಗಿರಬಹುದು, ಮನೋರಂಜನೆಯೂ ಸಿಕ್ಕಿರಬಹುದು ಅದಕ್ಕೆ ಕಾರಣ ನಾನಾ ಭಾಷೆಗಳ ಪ್ರಭಾವವೇ ಹೊರತು ಮೂಲವಿರದ ಭಾಷೆಯದು. ಇಂತಹ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ವಿರೋಧಿಸುವುದರಲ್ಲಿ ತಪ್ಪೇನು ಇಲ್ಲ.
ಭಾಷೆಗಳು ಸಂಬಂಧಗಳನ್ನು ಬೆಳೆಸುತ್ತವೆ, ವ್ಯವಹಾರ ಕಲಿಸುತ್ತವೆ, ಕಲಿಯುವುದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ ಅದಕ್ಕೆ ಮಹತ್ವದ ಸ್ಥಾನ ನೀಡಿ, ಗದ್ದುಗೇರಿಸಲು ಅರ್ಹತೆ ಪಡೆದುಕೊಂಡಿಲ್ಲ ಎಂಬುದೇ ನನ್ನ ಅನಿಸಿಕೆ. ನಾವು ಕೆಲವೊಂದು ಭಾಷೆಗಳಲ್ಲಿ ಪರಿಣತಿ ಹೊಂದಿದ್ದೇವೆ ಎಂದ ಮಾತ್ರಕ್ಕೆ ಅದನ್ನು ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ ಅಲ್ಲವೇ. ಯಾವುದನ್ನೇ ಸಮರ್ಥಿಸಿಕೊಳ್ಳುವ ಮುನ್ನ ಅದರ ಪೂರ್ವಾಪರಗಳನ್ನು ವಿವೇಚಿಸುವುದು ಬಹಳ ಮುಖ್ಯ.
- ಸಿ. ಎನ್. ಭಾಗ್ಯಲಕ್ಷ್ಮಿ ನಾರಾಯಣ
