ಎಚ್.ಎಸ್. ಹರಿಶಂಕರ್ ಮತ್ತು ಡಾ.ಕೆ.ಎಸ್. ಶಿವರಾಮ್ ಅವರ ರಚನೆಯ ಚೆಕಾಫನ ಕಥೆಗಳು ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಕೃತಿ :ಚೆಕಾಫನ ಕಥೆಗಳು
ಲೇಖಕರು : ಎಚ್.ಎಸ್. ಹರಿಶಂಕರ್ ಮತ್ತು ಡಾ.ಕೆ.ಎಸ್. ಶಿವರಾಮ್
ಚೆಕಾಫನ ಚೆರ್ರಿ ಆರ್ಚರ್ಡ್ ನಾಟಕವನ್ನು ಪಠ್ಯವಾಗಿ ಓದಿ ರಷ್ಯಾದ ಊಳಿಗಮಾನ್ಯ ಪದ್ಧತಿಯ ಪಲ್ಲಟಗಳ ಬಗ್ಗೆ ಚಕಿತನಾಗಿದ್ದ ನನಗೆ , ಅವನ ಇಲ್ಲಿ ಇರುವ ಒಂದು ಕತೆಯನ್ನು ಓದಿದ್ದರೂ, ಅವನ ಉಳಿದ ಕತೆಗಳನ್ನು ಓದುವ ಅವಕಾಶವನ್ನು ಕಲ್ಪಿಸಿದ ಲೇಖಕರಿಗೆ ಮೊದಲು ವಂದನೆ ಮತ್ತು ಈ ಸಶಕ್ತ ಅನುವಾದಕ್ಕೆ ಅಭಿನಂದನೆ.
ಅವರು ಅನುವಾದ ಮಾಡಿದ ಟಾಲ್ ಸ್ಟಾಯ್ ಕತೆಗಳು ರಷ್ಯಾದ ಅವರ ಆದರ್ಶಗಳನ್ನು ಅನಾವರಣ ಮಾಡಿದರೆ, ಚೆಕಾಫನ ಕಥೆಗಳು ರಷ್ಯಾದ ವಾಸ್ತವವನ್ನು ವಸ್ತುನಿಷ್ಠವಾಗಿ ಸೆರೆಹಿಡಿದಿವೆ. ಲೇಖಕರು ತಮ್ಮ ಮಾತುಗಳಲ್ಲಿ ಉಲ್ಲೇಖ ಮಾಡಿದಂತೆ ಟಾಲ್ ಸ್ಟಾಯ್ ಅವರೇ ಒಪ್ಪಿಕೊಂಡಂತೆ , ಇವು ಅಪ್ಪಟ ರಷ್ಯಾದ ಕತೆಗಳು.

ರಷ್ಯಾದ ವಾಸ್ತವವನ್ನು ಸೆರೆಹಿಡಿಯಲು ಚೆಕಾಫ ಮೂರು ಪ್ರಮುಖ ವಸ್ತುಗಳನ್ನು ಬಳಸಿ ದ್ದಾರೆ. ಅವು:
೧: ಅಲ್ಲಿನ ಪ್ರಾಣಿಗಳ ಲೋಕ.೨: ಅಲ್ಲಿನ ಮಕ್ಕಳ ಲೋಕ ೩: ಅಧಿಕಾರ ಮತ್ತು ಅಧಿಕಾರ ರಹಿತರ ಲೋಕ.
೧: ಅಲ್ಲಿನ ಪ್ರಾಣಿಗಳ ಲೋಕ: ಅವು ನಾಯಿಗಳು, ಬೆಕ್ಕುಗಳು, ಇಲಿಗಳು, ಮೀನುಗಳು. ಈ ರೂಪಕಗಳ ಮೂಲಕ ಮನುಷ್ಯ ಮತ್ತು ಇವುಗಳ ನಡುವೆ ಇರುವ ಸಂಕೀರ್ಣ ಸಂಬಂಧಗಳನ್ನು ಅನಾವರಣ ಮಾಡಿದ್ದಾರೆ. ಮೊದಲ ಕತೆಯಲ್ಲಿ ಬರುವ ಕಷ್ತಾಂಕ ಎಂಬ ನಾಯಿ ಮತ್ತು ಅದರ ಒಡೆಯರ ಸಂಬಂಧ ಇದಕ್ಕೆ ನಿದರ್ಶನ. ಮೊದಲು ಬಡಗಿಯ ಜೊತೆಗೆ ಇದ್ದ ಇದು ಅವನು ಬೈದರೂ ಅವನ ಜೊತೆಗೆ ಬಿಡದ ನಂಟು. ಒಮ್ಮೆ ಅವನಿಂದ ತಪ್ಪಿಸಿಕೊಂಡು ಇನ್ನೊಬ್ಬನ ಕೈಗೆ ಸಿಕ್ಕಿ ಅವನು ಇದನ್ನು ಬೈಯದೆ ಒಳ್ಳೆಯ ಊಟ ಕೊಟ್ಟು ಇದು ಸಪುಷ್ಟವಾಗಿ ಇದರ ಕೈಯಲ್ಲಿ ನಾನಾ ಬಗೆಯ ಆಟವನ್ನು ಆಡಿಸಿ, ಕಡೆಗೆ ಅದನ್ನು ಪ್ರದರ್ಶಿಸಲು ಬಳಸಿಕೊಂಡಾಗ, ಅದನ್ನು ನೋಡಲು ಸೇರಿದ ಜನರ ಗುಂಪಿನಲ್ಲಿ ಇದ್ದ ಅದರ ಹಳೆಯ ಒಡೆಯ ಬಡಗಿ ಅದನ್ನು ಗುರುತಿಸಿ ಕೂಗಿದಾಗ, ಇದು ಹಾಕಿದ್ದ ಎಲ್ಲಾ ಬೇಲಿಗಳನ್ನು ದಾಟಿ ,ಅವನ ಬಳಿಗೆ ಓಡಿ ಹೋಗಿ ತನ್ನ ಮೊದಲ ಒಡೆಯನನ್ನು ಸೇರುತ್ತದೆ. ಬೇಂದ್ರೆಯವರ ಕರಡಿ ಕುಣಿತ ಮತ್ತು ಕಣವಿಯವರ ಲಾಗ ಹಾಕೆಲೋ ಮಂಗ ಕವನಗಳನ್ನು ತಟ್ಟನೆ ನೆನಪಿಗೆ ತರುತ್ತವೆ. ಮನುಷ್ಯ ನಿರಂತರವಾಗಿ ತನ್ನ ಸ್ವಾರ್ಥಕ್ಕೆ, ಇಂತಹ ಸಾಕು ಪ್ರಾಣಿಗಳ ಬಳಸುತ್ತಾ ಬಂದಿರುವುದನ್ನು, ಚೆಕಾಫನ ಈ ಕತೆ ಬಯಲುಗೊಳಿಸುತ್ತದೆ. ಇದರಲ್ಲಿ ಅದರ ಮನೋಲೋಕದ ಅನಾವರಣ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.
ಮಕ್ಕಳ ಲೋಕ: ಇವರ ಕುರಿತು ಮೂರು ಬಗೆಯ ಕತೆಗಳು ಇವೆ. ಅವು: ಉಳ್ಳವರ ಮಕ್ಕಳು, ಮಧ್ಯಮ ವರ್ಗದ ಮಕ್ಕಳು ಮತ್ತು ಕೆಳವರ್ಗದ ಮಕ್ಕಳು. ಉಳ್ಳವರ ಮಕ್ಕಳ ಕತೆಯಲ್ಲಿ ಶಾಲೆಯಲ್ಲಿ ರಜೆ ದೊರೆತ ಮಗ ತನ್ನ ಗೆಳೆಯನ ಜೊತೆಯಲ್ಲಿ ಊರಿಗೆ ಮರಳಿದರೂ ಅವರಿಬ್ಬರೂ ಅಟ್ಲಾಸ್ ಹಿಡಿದು ಕೊಂಡು ಕೂತು ಮನೆಯವರಿಗೆ ತಿಳಿಯದಂತೆ ಅಮೆರಿಕಾಗೆ ಓಡಿ ಹೋಗಿ ಅಲ್ಲಿ ಶ್ರೀಮಂತರಾಗುವ ಹೊಂಚು ಹಾಕುತ್ತಾರೆ. ಇದ್ದಕ್ಕಿದ್ದಂತೆ ಅವರು ಮರುದಿನ ಕಾಣೆಯಾಗುತ್ತಾರೆ. ಕೊನೆಗೆ ಪೊಲೀಸ್ ರ ಕೈಯಲ್ಲಿ ಸಿಕ್ಕಿ ಬಿದ್ದು ಮನೆಗೆ ಮರಳಬೇಕಾಗುತ್ತದೆ. ಅವರು ಕಲಿತ ಶಿಕ್ಷಣ ಅವರನ್ನು ಹೇಗೆ ಪರಕೀಯರನ್ನಾಗಿಸುತ್ತದೆ ಎಂದರೆ , ಮನೆಯಲ್ಲಿ ನಡೆಯುವ ಕ್ರಿಸ್ಮಸ್ ಹಬ್ಬದ ಸಿದ್ದತೆಯಲ್ಲಿ ಅವರು ಯಾವುದೇ ರೀತಿಯಲ್ಲಿ ಆಸಕ್ತಿ ವಹಿಸುವುದಿಲ್ಲ. ! ಇದು ಏಕಕಾಲಕ್ಕೆ ವಿದ್ಯಾಭ್ಯಾಸ ಎನ್ನುವುದು ಹೇಗೆ ಯುವ ಜನಾಂಗವನ್ನು ದಾರಿ ತಪ್ಪಿಸುತ್ತದೆ ಎನ್ನುವುದಕ್ಕೆ ನಿದರ್ಶನ.
ಮಧ್ಯಮ ವರ್ಗದ ಮಕ್ಕಳು ತಮ್ಮ ಮನರಂಜನೆಗಾಗಿ ದುಡ್ಡಿಟ್ಟು ಜೂಜಾಟದ ಮೋಜು ಮಾಡುತ್ತಾರೆ. ಅದರಲ್ಲಿ ಕಿತ್ತಾಡಿ ಮತ್ತೆ ಒಂದಾಗುವ ಬಗೆಯನ್ನು ಈ ಕತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಕೆಳವರ್ಗದ ಮಕ್ಕಳು ಜೀತದಾಳುಗಳಾಗಿ ಪಡುವ ಪಾಡನ್ನು ಅಲ್ಲಿಯ ಒಬ್ಬ ಬಾಲಕ, ತನ್ನ ತಾತನಿಗೆ ಪತ್ರ ಬರೆದು ತನ್ನನ್ನು , ಅಲ್ಲಿಂದ ಬಿಡಿಸಿ ಕರೆದುಕೊಂಡು ಹೋಗಲು ಇಡುವ ಮೊರೆಯಲ್ಲಿ ಕಾಣಬಹುದು. ಇದಲ್ಲದೆ ವಿಷಮ ದಾಂಪತ್ಯದ ಬಲಿಪಶುಗಳಾದ ಮಕ್ಕಳ ತೊಳಲಾಟವನ್ನು ಇನ್ನೊಂದು ಕತೆ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಹೀಗೆ ಮಕ್ಕಳ ಮನೋಲೋಕವನ್ನು ಒಳಹೊಕ್ಕು ಬಯಲು ಮಾಡುವ ಲೇಖಕರ ಅಸದೃಶ ಶಕ್ತಿ ವ್ಯಕ್ತವಾಗುತ್ತದೆ.

ಮೂರು: ಅಧಿಕಾರ ಉಳ್ಳವರು ಮತ್ತು ಇಲ್ಲದವರ ಕತೆಗಳು : ಇವುಗಳಲ್ಲಿ ಅಧಿಕಾರ ಇದ್ದವರು ಹೇಗೆ ಸರ್ವಾಧಿಕಾರಿಗಳಂತೆ ವರ್ತಿಸುವ ಬಗೆಯನ್ನು ಒಬ್ಬ ನಿವೃತ್ತಿ ಹೊಂದಿದ ಅಧಿಕಾರಿ, ಜನರ ಮೇಲೆ ಚಲಾಯಿಸುವ ಹಕ್ಕನ್ನು ಹಾಸ್ಯಮಯವಾಗಿ ಚಿತ್ರಿಸಲಾಗಿದೆ. ಇಲ್ಲದ ಅಧಿಕಾರವನ್ನು ಚಲಾಯಿಸುವ ಅವನಿಗೆ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸುತ್ತದೆ.
ಅಧಿಕಾರ ಇಲ್ಲದವರು ಅಧಿಕಾರ ಇರುವವರನ್ನು ಓಲೈಸುವ ಬಗೆಗಿನ ಇಲ್ಲಿನ ಒಂದು ಕತೆ ಯಲ್ಲಿ , ಸಾರ್ವಜನಿಕ ಕಾರ್ಯ ಕ್ರಮದಲ್ಲಿ ಹಿಂದೆ ಕುಳಿತಿದ್ದ ಒಬ್ಬ ವ್ಯಕ್ತಿ ಬಂದ ಸೀನನ್ನು ತಡೆಯಲು ಆಗದೆ, ಸೀನಿ, ಅದರ ಎಂಜಲು ಮುಂದೆ ಕುಳಿತಿದ್ದ ಅಧಿಕಾರಿಯ ಮೇಲೆ ಎಲ್ಲಿ ಸಿಡಿಯಿತೋ ಎಂದು ಹೆದರಿ, ಅವನನ್ನು ಮತ್ತೆ ಮತ್ತೆ ಕ್ಷಮೆ ಕೋರಿ, ಅವನು ತನ್ನನ್ನು ಕ್ಷಮಿಸಿದನೋ ಇಲ್ಲವೋ ಎಂಬ ಆತಂಕದಲ್ಲಿ , ಸಾಯುವ ದುರಂತದ ಕತೆ ಇಲ್ಲಿ ಇದೆ. ಇಂದಿಗೂ ಅಧಿಕಾರಿಗಳನ್ನು ಓಲೈಸುವ ಕೀಳರಿಮೆ ವ್ಯಾಪಕವಾಗಿ ಬೇರು ಬಿಟ್ಟಿರುವ ನಮ್ಮ ದೇಶದಲ್ಲಿ ಇದು ಸಮಕಾಲೀನವಾಗಿದೆ. ಕಣವಿಯವರ ಲಾಗ ಹಾಕೆಲೊ ಮಂಗ, ಮತ್ತು ನಿಸಾರ್ ಅಹಮದ್ ರ ಕುರಿಗಳು ಸಾರ್ ಕುರಿಗಳು ಕವನಗಳು
ಇದಕ್ಕೆ ಒಳ್ಳೆಯ ನಿದರ್ಶನ.
ಈ ಕತೆಗಳನ್ನು ಕನ್ನಡಕ್ಕೆ ಮೂಲ ರಷ್ಯನ್ ಭಾಷೆಯಿಂದ ಅನುವಾದ ಮಾಡುವ ಮೂಲಕ ಲೇಖಕರು, ರಷ್ಯಾದ ಮಹತ್ವದ ಕತೆಗಾರನನ್ನು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಇದನ್ನು ನನಗೆ ಕಳಿಸುವ ಮೂಲಕ ಇಂತಹ ಒಳ್ಳೆಯ ಕತೆಗಳನ್ನು ಓದಲು ಅವಕಾಶವನ್ನು ನೀಡಿದ ಲೇಖಕರಿಗೆ ವಂದನೆ ಮತ್ತು ಅಭಿನಂದನೆ.
- ರಘುನಾಥ್ ಕೃಷ್ಣಮಾಚಾರ್
