‘ವಾತಾಪಿ’ ಕೃತಿ ಪರಿಚಯ – ಡಾ ಅರ್ಚನಾ ಆರ್

ಸಂತೋಷಕುಮಾರ ಮೆಹೆಂದಳೆ ಅವರ ‘ವಾತಾಪಿ’ ಕಾದಂಬರಿಯ ಕುರಿತು ಡಾ ಅರ್ಚನಾ ಆರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕನ್ನಡ ಸಾಹಿತ್ಯದ ಇಂದಿನ ಹೊಸ ಪೀಳಿಗೆಯ ಓದುಗರಿಗೆ ಹುಚ್ಚು ಹಿಡಿಸುವ ಮೆಹೆಂದಳೆ ಅವರ ಕಾದಂಬರಿಗಳು, ಲೇಖನಗಳು ಯಾವಾಗಲೂ ಓದುಗರ ನಿರೀಕ್ಷೆಯನ್ನು ಸುಳ್ಳಾಗಿಸಿಲ್ಲ. ಇತ್ತೀಚೆಗೆ ಅವರ ಫೇಸ್ಬುಕ್ ವಾಲ್ ನಲ್ಲಿ ವಾತಾಪಿಯ ಕುರಿತು ನೋಡಿದ ಕೆಲವೇ ದಿನಗಳಲ್ಲಿ ಅವರಿಂದ ಒಂದು ವಾಟ್ಸಪ್ ಮೆಸೇಜ್ ಅಕ್ಕರೆಯಿಂದ ಬಂದಿತ್ತು. ವಾತಾಪಿಯನ್ನ ಬಿಡುಗಡೆಗೂ ಮುನ್ನವು ಓದಲು ಸಾಧ್ಯವೇ ಎಂಬ ಅವರ ವಿಶ್ವಾಸದ ಅಪೇಕ್ಷೆಯನ್ನ ಯಾವ ಓದುಗ ತಾನೇ ನಿರಾಕರಿಸಲು ಸಾಧ್ಯ. ನಾನು ಸಮ್ಮತಿಸಿದ ಮರುಕ್ಷಣವೇ ನನ್ನ ಇನ್ ಬಾಕ್ಸ್ ನಲ್ಲಿ ವಾತಾಪಿ ಪ್ರತ್ಯಕ್ಷವಾಗಿತ್ತು. ಆ ಕ್ಷಣದಿಂದ ವಾತಾಪಿ ಕಾದಂಬರಿ ನನ್ನ ಮೈ ಮನವನ್ನು ಆವರಿಸಿಕೊಂಡದ್ದಂತು ನಿಜ ಕಾಲೇಜಿನ ಕೆಲಸದ ನಡುವೆ ಓದಲು ತಡೆಯಾದರೂ ಮನಸ್ಸು ಮಾತ್ರ ವಾತಾಪಿಯ ಪುಟಗಳಲ್ಲಿ ಲೀನವಾಗಿತ್ತು. ಮರೆತು ಹೋದ ಕದಂಬರ ಸಾಮ್ರಾಜ್ಯವನ್ನು ಕನ್ನಡಿಗರ ಮನೆ ಮಾತಾಗಿಸಿದ ಮೆಹಂದಳೆ ಅವರು ಅದರ ಗುಂಗಿನಿಂದ ಹೊರಬರುವ ಮೊದಲೇ ಹೀಗೊಂದು ಹೊಸ ಪ್ರಯತ್ನದ ಮೂಲಕ ನಮ್ಮ ಮುಂದಿಟ್ಟ ಕಾದಂಬರಿ.

ವಾತಾಪಿ ಚಾಲುಕ್ಯರ ಕುರಿತ ಸಮಗ್ರ ಸಂಶೋಧನಾತ್ಮಕ ಐತಿಹಾಸಿಕ ಕಾದಂಬರಿ ಎಂದರೆ ತಪ್ಪಾಗಲಾರದು. ಇಲ್ಲಿ ಸಂಶೋಧನಾತ್ಮಕ ಎಂಬ ನನ್ನ ಪದ ಬಳಕೆಗೆ ಕಾರಣ ಚಾರಿತ್ರಿಕ ಕಾದಂಬರಿಗಳನ್ನು ಬರೆಯುವುದು ಸುಲಭದ ಮಾತಲ್ಲ ಏಕಕಾಲಕ್ಕೆ ಇತಿಹಾಸಕ್ಕೂ ನಿಷ್ಠರಾಗಿದ್ದುಕೊಂಡು ರೋಚಕತೆಗೂ ಮೋಸವಾಗದಂತೆ ಬರೆಯಲು ಅಗಾಧವಾದ ಪರಿಶ್ರಮ, ಪ್ರತಿಭೆ, ಅಧ್ಯಯನಶೀಲ ಗುಣವಿರಬೇಕು. ನಮ್ಮ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಐತಿಹಾಸಿಕ ಘಟನೆಗಳು ಸೃಜನಶೀಲ ಬರವಣಿಗೆಗೆ ಅದರಲ್ಲೂ ಕಾದಂಬರಿಗೆ ವಸ್ತುವಾಗುವುದು ಹೊಸತೇನಲ್ಲ ಚಿಕ್ಕವೀರರಾಜೇಂದ್ರ ದುರ್ಗಾಸ್ತಮಾನ ಮುಂತಾಗಿ ಹಲವು ಕಾದಂಬರಿಗಳು ಇತಿಹಾಸದ ಅಸ್ತಿಪಂಜರಕ್ಕೆ ಸೃಜನಶೀಲತೆಯ ರಕ್ತ ಮಾಂಸಗಳನ್ನು ಸೇರಿಸಿದ ಕಾದಂಬರಿಗಳ ಪರಂಪರೆಯ ಮುಂದುವರಿಕೆಗೆ ಕಾರಣವಾದದ್ದು ಮರೆಯಲಾಗದು. ಅಂತೆಯೇ ಕರ್ನಾಟಕ ರಾಜ್ಯವನ್ನಾಳಿದ ಕೆಲವೇ ಕೆಲವು ಅಪ್ಪಟ ಕನ್ನಡ ಮನಸ್ಥಿತಿಯ ರಾಜವಂಶದಲ್ಲಿ ಚಾಲುಕ್ಯರ ದೊರೆಗಳ ಕೊಡುಗೆ ಅಪಾರ ಎಂಬುದನ್ನು ವಾತಾಪಿ ಕಾದಂಬರಿ ಎಲ್ಲಾ ಆಯಾಮಗಳಲ್ಲೂ ನಮ್ಮ ಮುಂದಿಟ್ಟಿದೆ. ಅದಕ್ಕೆ ಸಾಕ್ಷಿ ಎಂಬಂತೆ ಪ್ರತಿ ಪುಟದ ಕೊನೆಯಲ್ಲಿ ಮೆಹಂದಳೆಯವರು ನೀಡಿರುವ ಶಾಸನಗಳ ಉಲ್ಲೇಖ ಇಡೀ ಕಾದಂಬರಿಗೆ ಹೆಚ್ಚು ಪುಷ್ಟಿ ನೀಡಿದೆ.

ಚಾಲುಕ್ಯರ ದೊರೆಗಳ ಹೋರಾಟದ ಕಥೆಗಳು ಆಡಳಿತದ, ಯುದ್ಧದ ವಿಶ್ಲೇಷಣೆಗಳು, ಬಕ್ಕಣ್ಣ, ದಾಶಭಟರ ರಾಜ್ಯನಿಷ್ಠೆ, ರಣತಂತ್ರಗಳನ್ನ ಹೆಣದಿರುವ ರೋಚಕ ಕಥಾನಕ, ಎರಯನಾಗಿದ್ದವನು ಇಮ್ಮಡಿ ಪುಲಕೇಶಿ ಆಗುವವರೆಗಿನ… ರಾಜವಂಶದ ಏಳುಬೀಳುಗಳ ಆಕರ್ಷಕ ಕಥಾನಕವನ್ನು ನಾನು ಮಾತ್ರ ಆಸ್ವಾದಿಸಿ ಕೆಲವೇ ಪದಗಳಲ್ಲಿ ಹಿಡಿದಿಟ್ಟರೇ ಅದು ತಪ್ಪಲ್ಲವೇ ಇನ್ನು ಬೇಕಾದಷ್ಟು ಹೇಳುವುದಿದೆ ಬಿಡುಗಡೆಯ ನಂತರ… ಈಗ ಈ ಕಾದಂಬರಿಯ ಮೊದಲ ಓದುಗಳಾಗಿ ಇದರ ಓದು ನನಗೆ ಅತೀವ ಸಂತಸವನ್ನು , ರೋಮಾಂಚನವನ್ನ ಉಂಟುಮಾಡಿದೆ. ಕಾದಂಬರಿಯುವುದಕ್ಕೂ ಕಾಣುವ ಸನ್ನಿವೇಶಗಳು ಪಾತ್ರ ಚಿತ್ರಣ ಇತಿಹಾಸ ಮತ್ತು ಕಲ್ಪನೆಗಳು ಹದ ತಪ್ಪದಂತೆ ಬೆರೆತು ರಾಜಕೀಯ ಹಿತಾಸಕ್ತಿಗಳು ಮತ್ತು ಪ್ರಭುತ್ವದ ಕಾಣದ ಕೈಗಳು ಜನಸಾಮಾನ್ಯರ ಬದುಕನ್ನ ಹೇಗೆ ನಿರ್ಣಯಿಸಬಲ್ಲವೂ ಎಂಬುದನ್ನು ಓದಿ ಮೂಕ ವಿಸ್ಮಿತಳಾಗಿದ್ದೇನೆ. ಇವರ ಇತರ ಕೃತಿಗಳಂತೆ ಇದು ಕೂಡ ಭಾರತದ ಎಲ್ಲಾ ಭಾಷೆಗಳಿಗೂ ಸಲ್ಲಬೇಕಾದ ಕಾದಂಬರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಂತಹ ಅಪರೂಪದ ಪ್ರಯತ್ನಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಅಷ್ಟೇ ಮಾತಿಲ್ಲ ಸರ್


  • ಡಾ ಅರ್ಚನಾ ಆರ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW