ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವೇಳೆ ಯಾವ್ಯಾವುದೋ ಫೋಟೋಗಳನ್ನ ಹಾಕಿ, ಮೆಸೇಜ್ ಗಳನ್ನು ರವಾನಿಸಿ ಎಡವಟ್ಟು ಮಾಡಿಕೊಳ್ಳುವುದಿದೆ. ಈ ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಮನೆಯೊಳಗಿನ ಹೃದಯಗಳು ದೂರ ದೂರವಾಗಿವೆ. ಪ್ರಾಧ್ಯಾಪಕರರಾದ ಡಾ. ಅರ್ಚನಾ ಆರ್ ಅವರು ಈ ಸಾಮಾಜಿಕ ಜಾಲತಾಣದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಸಮಾಜಿಕ ಜಾಲತಾಣಗಳ ಸುರಕ್ಷತೆ ಎನ್ನುವುದು ಡಿಜಿಟಲ್ ಯುಗದಲ್ಲಿ ನಾವೆಲ್ಲ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಇಂದು ಸಾಮಾಜಿಕ ಜಾಲತಾಣ ನಮ್ಮ ಮನೆ, ಅಂಗಳ, ಕುಟುಂಬದ ಸದಸ್ಯರಿಗಿಂತ ಆಪ್ತವಾಗಿದೆ. ಜಾತಿ, ಧರ್ಮ, ಮತ,ಬಡವ,ಶ್ರೀಮಂತ, ಹಿರಿಯರು, ಕಿರಿಯರು ಎಂಬ ಯಾವ ತಾರತಮ್ಯಗಳಿಲ್ಲದೆ ಪ್ರತಿಯೊಬ್ಬರಿಗೂ ಆಪ್ತವಾಗಿರುವ ಸಾಮಾಜಿಕ ಜಾಲತಾಣಗಳಿಂದಾಗಿ ಪ್ರಪಂಚವೇ ಚಿಕ್ಕದಾಗಿದ್ದು ವಿಶ್ವದ ಯಾವ ಮೂಲೆಯಲ್ಲಿರುವವರೊಂದಿಗಾದರೂ ನಿಮಿಷಗಳಲ್ಲಿ ಸಂವಹನ ಸಾಧ್ಯ. ಆದರೆ ವಿಪರ್ಯಾಸವೆಂದರೆ ಯಾವ ಮಾಧ್ಯಮಗಳು ಪ್ರಪಂಚವನ್ನು ಕಿರಿದಾಗಿಸಿದೆಯೋ, ಅದೇ ಮಾಧ್ಯಮಗಳು ಮನೆಯ ಒಂದೊಂದು ಕೊಠಡಿಯನ್ನು ದೂರ ಮಾಡಿಬಿಟ್ಟಿವೆ. ಮನೆಯೊಳಗಿನ ಹೃದಯಗಳು ಸಂಬಂಧದ ಬೆಸುಗೆ ಕಳೆದುಕೊಂಡಿವೆ. ಅದಕ್ಕೆ ಕಾರಣ ಹೊಸ ಸ್ನೇಹಿತರನ್ನು ಪಡೆಯುವ, ದೂರದ ಗೆಳೆಯರು ಏನೇನು ಮಾಡುತ್ತಿದ್ದಾರೆ? ಎಂಬ ಸ್ಟೇಟಸ್ ಅಪ್ಡೇಟ್ಗಳನ್ನ ಅರಿಯುವ ಕೆಟ್ಟ ಕುತೂಹಲ ಅದೆಷ್ಟು ಬಲವಾಗಿರುತ್ತದೆ ಎಂದರೆ ಅದರ ಹೊರತಾಗಿ ತಮ್ಮ ಸ್ವಂತ ಬದುಕನ್ನೇ ನಿರ್ಲಕ್ಷಿಸುವವರೇ ಹೆಚ್ಚಾಗಿದ್ದಾರೆ. ಪ್ರಬುದ್ಧರೇ ಅದೆಷ್ಟೋ ವೇಳೆ ಯಾವ್ಯಾವುದೋ ಫೋಟೋಗಳನ್ನ ಹಾಕಿ, ಮೆಸೇಜ್ ಗಳನ್ನು ರವಾನಿಸಿ ಎಡವಟ್ಟು ಮಾಡಿಕೊಳ್ಳುವುದಿದೆ. ಅಂದಮೇಲೆ ಈಗಿನ್ನು ಕಣ್ಣು ಬಿಟ್ಟು ಜಗತ್ತನ್ನ ಕುತೂಹಲದಿಂದ ನೋಡುತ್ತಿರುವ ಮಕ್ಕಳ ಸ್ಥಿತಿ ಹೇಗಿರಬಹುದು ಅದನ್ನು ಊಹಿಸಲಾಗದು. ಒಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಒಟ್ಟು 60 ಕೋಟಿ ಇಂಟರ್ನೆಟ್ ಬಳಕೆದಾರರು, 45.9 ಕೋಟಿ ವಾಟ್ಸಪ್ ಬಳಕೆದಾರರು, 32.5 ಕೋಟಿ ಫೇಸ್ಬುಕ್ ಬಳಕೆದಾರರು, 42.5 ಕೋಟಿ ಯುಟ್ಯೂಬ್ ಬಳಕೆದಾರರು, 55.4 ಕೋಟಿ ಇನ್ಸ್ಟಾಗ್ರಾಮ್ ಬಳಕೆದಾರರಿದ್ದಾರೆ. ದಿನವೊಂದಕ್ಕೆ ಒಬ್ಬ ವ್ಯಕ್ತಿ 2.5 ಗಂಟೆಗಳಷ್ಟು ಕಾಲ ಸಾಮಾಜಿಕ ಮಾಧ್ಯಮಗಳಲ್ಲಿ ಸಮಯ ಕಳೆಯುತ್ತಿದ್ದಾನೆ. ಈ ಅಂಕಿ ಅಂಶಗಳನ್ನು ಗಮನಿಸಿದಾಗ ಒಂದಂತೂ ವಿಚಾರ ಸ್ಪಷ್ಟವಾಗುತ್ತದೆ. ನಾವೀಗ ಎರಡು ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಒಂದು ನಾವಿರುವ ಭೌತಿಕ ಪ್ರಪಂಚ, ಇನ್ನೊಂದು ನಾವು ಅತಿ ಹೆಚ್ಚು ಅವಲಂಬಿತವಾಗಿರುವ ಅಂತರ್ಜಾಲ ಎಂಬ ವರ್ಚುವಲ್ ಪ್ರಪಂಚ ಹಾಗಿದ್ದಾಗ ನಮ್ಮ ನಡುವಳಿಕೆಗಳ ಬಗೆಗೆ ಈ ಎರಡು ಪ್ರಪಂಚಗಳಲ್ಲೂ ನಮ್ಮ ನಿಗಾ ಅಗತ್ಯವಲ್ಲವೇ? ಯಾಕೆಂದರೆ ಅದೆಲ್ಲಿಂದಲೂ ನಮ್ಮ ನಡುವಳಿಕೆ ನಮ್ಮ ಯೋಚನೆಗಳನ್ನು ಅಸಂಖ್ಯಾತ ಜನ ಗಮನಿಸುತ್ತಿರುತ್ತಾರೆ.
ಅಧ್ಯಾಪಕಿಯಾದ ನನಗೆ ಬರೆಯಲು, ಮಾತನಾಡಲು ವಿಷಯ, ಸಂಗತಿಗಳನ್ನು ನೀಡುವವರು ನನ್ನ ವಿದ್ಯಾರ್ಥಿಗಳೇ, ಅವರನ್ನ ಸೂಕ್ಷ್ಮವಾಗಿ ಗಮನಿಸಿದಾಗೆಲ್ಲ ಅವರೊಂದಿಗೆ ಚರ್ಚಿಸಿದಾಗೆಲ್ಲ ನನ್ನ ಸೃಜನಶೀಲತೆಗೆ ಆಕರಗಳು ದೊರೆತಿವೆ. ಈಗಲೂ ಈ ಲೇಖನದ ಹಿಂದೆಯೂ ಅಂತಹದ್ದೇ ಪ್ರೇರಣೆ ಇದೆ.

ತರಗತಿಯಲ್ಲಿ ಒಂದು ದಿನ ವಿದ್ಯಾರ್ಥಿಗಳಿಗೆ ಅವರವರ ಹವ್ಯಾಸಗಳ ಬಗ್ಗೆ ಹೇಳುವಂತೆ ವಿದ್ಯಾರ್ಥಿಗಳನ್ನು ಕೇಳಿದ್ದೆ, ಬಹುಷಃ ಹವ್ಯಾಸಗಳೇ ಇಲ್ಲದ ಮನುಷ್ಯರಿರುವುದು ಅಸಂಭವ ಮೊಬೈಲ್ ಗೇಮ್ ಆಡುವುದರಿಂದ ಹಿಡಿದು ಸಂಗೀತ, ನೃತ್ಯ, ಕ್ರೀಡೆವರೆಗೂ ವಿವಿಧ ಹವ್ಯಾಸಗಳ ಪಟ್ಟಿಯಲ್ಲಿ ತೆರೆದುಕೊಂಡಿತು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು ಹೊಸ ಸ್ನೇಹಿತರನ್ನು ಪಡೆಯುವುದು ತನ್ನ ಹವ್ಯಾಸ ಎಂದು ವಿದ್ಯಾರ್ಥಿಯೊಬ್ಬ ಹೇಳಿದಾಗ ಇಡೀ ತರಗತಿಯೇ ಬೆರಗಾಗಿ ಅವನನ್ನ ನೋಡಿತು. ಹೊಸ ಸ್ನೇಹಿತರನ್ನು ಪಡೆಯಲು, ಹೆಚ್ಚು ಲೈಕ್ಸ್, ಶೇರ್ ಗಳನ್ನು ಪಡೆಯಲು, ಜಾಲತಾಣಗಳಲ್ಲಿ ಜನಪ್ರಿಯರಾಗಲು ಇಂದಿನ ಯುವ ಪೀಳಿಗೆ ಸೃಷ್ಟಿಸುತ್ತಿರುವ ಕಂಟೆಂಟ್ ಗಳು ಒಮ್ಮೆಲೇ ನನ್ನ ಮನಪಟಲದಲ್ಲಿ ಹಾದು ಹೋಯಿತು.
ಆ ವಿದ್ಯಾರ್ಥಿಯ ಮಾತಿನ ಧಾಟಿ, ಜಾಲತಾಣಗಳ ಕುರಿತ ಅವನ ವಿಶ್ವಾಸವನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣಗಳಿಂದ ಹದಿಹರೆಯದ ಮಕ್ಕಳು ಯಾವೆಲ್ಲ ಬಗೆಯ ತೊಂದರೆಗಳನ್ನ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಹೇಳಬೇಕಾಗಿಲ್ಲ ಅನಿಸಿತು, ಆದರೂ ತರಗತಿಯ ಇತರ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಗ್ಗೆ ಜಾಗೃತವಾಗಿರಬೇಕಾದ ಅನಿವಾರ್ಯತೆ, ಸೈಬರ್ ಕ್ರೈಂ ಗಳ ಬಗ್ಗೆ ಇರಬೇಕಾದ ಎಚ್ಚರಿಕೆಯನ್ನು ವಿವರಿಸಿದೆ. ಅಂದಿನ ತರಗತಿ ಮುಗಿದ ನಂತರವೂ ಆ ವಿದ್ಯಾರ್ಥಿಯ ಮಾತು ನನ್ನನ್ನು ಚಿಂತಿಸುವಂತೆ ಮಾಡಿತು. ಇದಾದ ಕೆಲವೇ ದಿನಗಳಲ್ಲಿ ವಿದ್ಯಾರ್ಥಿಯೂಬ್ಬಳ ಫೇಕ್ ಅಕೌಂಟ್ ಒಂದನ್ನು ಸೃಷ್ಟಿಸಿ ಅದರಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿ ಮಾನಸಿಕವಾಗಿ ಹಿಂಸಿಸಿದ ಘಟನೆ ಬೆಳಕಿಗೆ ಬಂದಿತು. ದಿನೇ ದಿನೇ ಇಂತಹ ಘಟನೆಗಳು, ಅಪರಾಧಗಳು ಸಾಮಾನ್ಯವೇ ಎಂಬಂತೆ ದಾಖಲಾಗುತ್ತಿರುವಾಗ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿಯೂ ಶಿಷ್ಟಾಚಾರದ ಅಗತ್ಯವಿದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಅದರಲ್ಲಿಯೂ ಯುವ ಪೀಳಿಗೆ ಇಂತಹ ಅಪರಾಧಗಳಲ್ಲಿ ಅತಿ ಹೆಚ್ಚು ಬಾಗಿಯಾಗುತ್ತಿರುವುದು ಆತಂಕಕಾರಿಯಾಗಿದೆ.ಇತ್ತೀಚೆಗೆ ‘ಬ್ರಿಟನ್ ರಾಯಲ್ ಸೊಸೈಟಿ ಫಾರ್ ಪಬ್ಲಿಕ್ ಹೆಲ್ತ್’ ನಡೆಸಿರುವ ಸಮೀಕ್ಷೆಯಲ್ಲಿ 14 ರಿಂದ 24 ವಯಸ್ಸಿನ ಯುವಜನತೆ ಪಾಲ್ಗೊಂಡಾಗ ಯೂಟೂಬ್, ಇನ್ಸ್ಟಾಗ್ರಾಮ್, ಸ್ನ್ಯಾಪ್ ಚಾಟ್ ಹಾಗೂ ಟ್ವಿಟ್ಟರ್ ನಂತಹ ಮಾಧ್ಯಮಗಳು ಯುವ ಪೀಳಿಗೆಯ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವೆ ಎಂದು ಸಂಶೋಧನಾ ವರದಿ ಎಚ್ಚರಿಸಿದೆ.
ಕೈಯಲ್ಲಿ ಮೊಬೈಲ್ ಅದಕ್ಕೆ ಇಂಟರ್ನೆಟ್ ಬೇಕಾದಂತೆ ರಿಚಾರ್ಜ್ ಮಾಡಿಕೊಳ್ಳಲು ಹಣ ನೀಡುವ ಮೊದಲು ಪಾಲಕರು ಯೋಚಿಸಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಮಕ್ಕಳು ಹಂಚಿಕೊಳ್ಳುವ ಮಾಹಿತಿ, ಚಿತ್ರಗಳು, ದೃಶ್ಯಾವಳಿಗಳ ಕುರಿತು ಒಂದಷ್ಟು ಗಮನ, ಫಾರ್ವರ್ಡ್ ಮಾಹಿತಿಗಳನ್ನ ಹಂಚಿಕೊಳ್ಳಬೇಕಾದಾಗ ಇರಬೇಕಾದ ಎಚ್ಚರಿಕೆ, ಇನ್ನೊಬ್ಬರ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸುವಾಗ ಇರಬೇಕಾದ ಜಾಗರೂಕತೆ, ಮಾಹಿತಿಯನ್ನು ಪಡೆಯುವಾಗ ಹಾಗೂ ಅದನ್ನ ಇತರರೊಂದಿಗೆ ಹಂಚಿಕೊಳ್ಳುವಾಗ ಅದು ಸತ್ಯವೇ?ಮಿತ್ಯವೇ? ಎಂದು ತಿಳಿದುಕೊಳ್ಳುವ ವ್ಯವಧಾನವಿರಲಿ,ವ್ಯೂವ್ , ರೀಚ್, ಶೇರ್ ಗಳ ಕಡೆ ಮಾತ್ರ ಗಮನವಿಡದೆ, ಸಾಮಾಜಿಕ ಜಾಲತಾಣದ ಸುರಕ್ಷತೆಗೂ ಆದ್ಯತೆ ನೀಡಿ ಶಿಷ್ಟಾಚಾರದ ಎಲ್ಲೊಂದನ್ನ ನಮ್ಮ ಮಕ್ಕಳು ಮೀರದಿರಲಿ, ಅದಕ್ಕಾಗಿ ಸಾಮಾಜಿಕ ಜಾಲತಾಣಗಳ ಆಗುಹೋಗುಗಳ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವುದು, ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪೋಸ್ಟ್ ಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು, ಅಪರಿಚಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸದಂತೆ ನೋಡಿಕೊಳ್ಳುವುದು, ಮತ್ತು ಅವರ ಪಾಸ್ವರ್ಡ್, ಲಾಗಿನ್ ಐಡಿ ಪಡೆದು ಪೋಷಕರು ಆಗಾಗ ಪರಿಶೀಲಿಸುವ ಅಗತ್ಯವಿದೆ. ಏಕೆಂದರೆ ಹದಿಹರೆಯದ ಮಕ್ಕಳನ್ನು ಸಾಮಾಜಿಕ ಜಾಲತಾಣ ಬಳಸದಂತೆ ನಿಯಂತ್ರಣ ಹೇರಿದರೆ ಅವರು ರಹಸ್ಯ ಮಾರ್ಗಗಳಿಂದ ಅವುಗಳನ್ನು ಬಳಸುವ ಅಪಾಯವಿರುವುದರಿಂದ ಕೆಲವೊಂದು ನಿಯಮ ಹಾಗೂ ಷರತ್ತುಗಳನ್ನು ವಿಧಿಸುವ ಮೂಲಕ ಅವರನ್ನು ಸೂಕ್ಷ್ಮವಾಗಿ ನಿಯಂತ್ರಿಸಬೇಕಿದೆ. ಮಕ್ಕಳ ಸಾಮಾಜಿಕ ಜಾಲತಾಣದ ಫ್ರೆಂಡ್ ಲಿಸ್ಟ್ ಹಾಗೂ ಅವರ ಚಟುವಟಿಕೆಗಳ ಮೇಲೆ ಪೋಷಕರು ಸದಾ ಗಮನಹರಿಸುವುದು ಮುಖ್ಯವಾಗುತ್ತದೆ. ಅಲ್ಲದೆ ಶಾಲಾ- ಕಾಲೇಜುಗಳಲ್ಲೂ ಸಾಮಾಜಿಕ ಜಾಲತಾಣದಿಂದಾಗುವ ಅಪಾಯಗಳ ಬಗ್ಗೆಯೂ ಜಾಗೃತಿ ಮೂಡಿಸಬೇಕಾದ ತುರ್ತಿದೆ.
- ಡಾ. ಅರ್ಚನಾ ಆರ್ – ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ವಿಜಯ ಪದವಿ ಪೂರ್ವ ಕಾಲೇಜು
