ಪಠ್ಯವನ್ನು ಪ್ರಭಾವಶಾಲಿಯಾಗಿ ಮಕ್ಕಳಿಗೆ ತಲುಪಿಸಲು ರಂಗಭೂಮಿ ಉತ್ತಮ ವೇದಿಕೆ, ಇಂತಹ ವಿನೂತನ ಪ್ರಯತ್ನವನ್ನು ಸರಕಾರ ‘ವಿಜ್ಞಾನ ನಾಟಕ ಸ್ಪರ್ಧೆ’ ಹೆಸರಿನ ಮೂಲಕ ಹಮ್ಮಿಕೊಂಡಿದ್ದು, ಇತ್ತೀಚಿಗೆ ಪ್ರದರ್ಶನ ಕಂಡ ಈ ‘ವಿಜ್ಞಾನ ನಾಟಕ ಸ್ಪರ್ಧೆ’ ಕುರಿತು ರಂಗಭೂಮಿ ನಿರ್ದೇಶಕರಾದ ಕಿರಣ ಭಟ್ ಅವರು ಓದುಗರ ಮುಂದೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಶಿಕ್ಷಣ ಮತ್ತು ರಂಗಭೂಮಿಯ ಸಮಾಸದ ಕುರಿತಂತೆ ಕಳೆದ ಕೆಲವು ವರ್ಷಗಳಿಂದ ನಿರಂತರವಾದ ಪ್ರಯತ್ನಗಳು ನಡೆದಿವೆ. ಪಠ್ಯವನ್ನು ಪ್ರಭಾವಶಾಲಿಯಾಗಿ ಮಕ್ಕಳಿಗೆ ತಲುಪಿಸುವಲ್ಲಿ ರಂಗಭೂಮಿಯ ಪಾತ್ರವೂ ಮುನ್ನೆಲೆಗೆ ಬರುತ್ತಿದೆ. ರಂಗಶಿಕ್ಷಣವೂ ಶಿಕ್ಷಣ ತರಬೇತಿಯಲ್ಲಿ ಸ್ಥಾನ ಪಡೆದಿದೆ. ಜೊತೆ ಜೊತೆಯಲ್ಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ರಂಗಭೂಮಿಯನ್ನು ಉಪಯೋಗಿಸಿಕೊಳ್ಳುವ ಪ್ರಯತ್ನಗಳೂ ನಡೆಯುತ್ತಿವೆ. ‘ವಿಜ್ಞಾನ ನಾಟಕ ಸ್ಪರ್ಧೆ’ ಅಂಥದೊಂದು ಪ್ರಯತ್ನದ ಭಾಗ. ದೇಶದ ಎಲ್ಲ ರಾಜ್ಯ ಸರಕಾರಗಳೂ ಇಂಥದೊಂದು ಸ್ಪರ್ಧೆಯನ್ನು ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷ ನಡೆಸುತ್ತಿವೆ. ತಾಲೂಕು, ಜಿಲ್ಲೆ, ವಿಭಾಗ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಈ ಸ್ಪರ್ಧೆಗಳು ನಡೆಯುತ್ತವೆ. ಇವೆಲ್ಲ ಅರ್ಧ ಗಂಟೆಯ ಈ ನಾಟಕಗಳು ಮನುಕುಲದ ಪ್ರಯೋಜನಕ್ಕಾಗಿ ವಿಜ್ಞಾನ, ತಂತ್ರಜ್ಞಾನದ ಬಳಕೆ, ಪರಿಸರ ಇಂಥ ಕೆಲವು ಆಯ್ದ ವಿಷಯಗಳನ್ನಿಟ್ಟುಕೊಂಡು ನಾಟಕಗಳು ನಡೆಯುತ್ತವೆ.ಇಂಥದೊಂದು ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಶಿರಸಿಯಲ್ಲಿ ಇತ್ತೀಚೆಗೆ ನಡೆಯಿತು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಿರಸಿ ಈ ಸ್ಪರ್ಧೆಯನ್ನು ಸಂಘಟಿಸಿತ್ತು.

ಸ್ಪರ್ಧೆಗಾಗಿ ರಾಜ್ಯದ ಬೇರೆ ಬೇರೆ ವಿಭಾಗಗಳಿಂದ ಐದು ನಾಟಕಗಳಿದ್ದವು. ಇವುಗಳಲ್ಲಿ ಮೂರು ನಾಟಕಗಳು ಮುಖ್ಯವಾಗಿ ಎತ್ತಿಕೊಂಡಿದ್ದು ನೀರಿನ ಸಮಸ್ಯೆಯನ್ನು.’ಜಾಗತಿಕ ನೀರಿನ ಬಿಕ್ಕಟ್ಟು’ ನಾಟಕ ಜಗತ್ತನ್ನೇ ವ್ಯಾಪಿಸಿರುವ ನೀರಿನ ಬಿಕ್ಕಟ್ಟಿನ ಕುರಿತು ಚರ್ಚಿಸುತ್ತದೆ. ಕಲೆಗಾರಿಕೆ ಮತ್ತು ಮಾಹಿತಿಗಳನ್ನ ಸಮ ಪಾಕವಾಗಿಸಿದ ನಾಟಕವಿದು. ವಿಚಿತ್ರ ವೇಷದ ಕ್ರಿಮಿಗಳು ನೀರನ್ನ ಕೆಡಿಸಿ ರೋಗಗಳನ್ನ ಹರಡುವ ಕುಪ್ರಯತ್ನವೊಂದನ್ನು ವಿಜ್ಞಾನದ ಶಕ್ತಿಯೊಂದಿಗೆ ಸೋಲಿಸುವ ಸಣ್ಣ ಕತೆಯೊಂದರ ಎಳೆಯ ಸುತ್ತ ಕಟ್ಟಿದ ಈ ನಾಟಕ ಅಲ್ಲಲ್ಲಿ ಜಾನಪದದ ಸೊಗಡನ್ನೂ ಉಣಬಡಿಸುತ್ತ ಹನಿ ನೀರಾವರಿಯ ಉಪಯುಕ್ತತೆ, ಕುಲುಷಿತ ನೀರನ್ನು ತಿಳಿಯಾಗಿಸುವ ಇಸ್ರೇಲ್ ನ ಪ್ರಯತ್ನ ಇಂಥದನ್ನೆಲ್ಲ ಹೇಳುತ್ತ ಹೋಗುತ್ತದೆ. ಒಂದು ಸಣ್ಣ ವಿಷಾದ ಪ್ರೀತಿಯ ಎಳೆಯೂ ನಾಟಕದಲ್ಲಿದೆ. ‘ ನೀರಿನ ಮೇಲೆ ಚಿತ್ರ ಕೆತ್ತಲಿಕ್ಕಾಗೋದಿಲ್ಲ’, ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ…’ ಇಂಥ ಹಾಡುಗಳ ಹಿತವಾದ ಬಳಕೆಯಿದೆ.

‘ಜೀವಧಾರಾ’ ಕೂಡ ಇಷ್ಟೇ ಪ್ರಭಾವಶಾಲಿಯಾಗಿ ನೀರಿನ ಸಮಸ್ಯೆಯ ಕುರಿತು ಮಾತನಾಡಿದ ಇನ್ನೊಂದು ನಾಟಕ. ಇದು ಕರಾಳ ಭವಿಷ್ಯದ ದರ್ಶನ ಮಾಡಿಸುತ್ತದೆ. ‘ ಮುಗಿಲೇ…ಮುಗಿಲೇ’ ಎನ್ನುವ ಮಳೆಯ ಕೋರಿಕೆಯ ಹಾಡಿನೊಂದಿಗೆ ಗ್ರಾಮೀಣ ಪರಿಸವೊಂದರಲ್ಲಿ ಶುರುವಾಗುವ ನಾಟಕ ಇದು. ಇಲ್ಲಿಯೂ ಇರುವ ಸಣ್ಣ ಕತೆಯ ಎಳೆಯೊಂದು ಮೇಲು ಜಾತಿ, ಕೆಳ ಜಾತಿಯವರ ನಡುವಿನ ಜಲ ಸಂಘರ್ಷದ ಕತೆ ಹೇಳುತ್ತದೆ. ಕುಡಿಯುವ ನೀರಿನ ಮಾರಾಟ,ಅವುಗಳ ವಿವಿಧ ಬ್ರಾಂಡ್ ಗಳು ಬಾಯಾರಿಕೆ ತಣಿಸುವ ನೆಪದಲ್ಲಿ ನಡೆಸುವ ಶೋಷಣೆ. ಹೀಗೆ. ಪರಿಮಿತವಾದ ಸೆಟ್ ನ್ನು ಜಾಣತನದಿಂದ ಉಪಯೋಗಿಸಿಕೊಂಡಿದ್ದು ನಾಟಕದ ಹೆಚ್ಚುಗಾರಿಕೆ.

ಒಂದು ರೀತಿ ಇದರ ಮುಂದುವರಿಕೆಯ ಭಾಗವಾಗಿ ಕಂಡಿದ್ದು ‘ ನೀರ್ ಬಾರ್’ ನಾಟಕ. ಇದು ಸಕ್ಕರೆ ಲೇಪಿತ ಸಿಹಿ ಗುಳಿಗೆ. ನಾಟಕದ ನಿರೂಪಕಿಗೆ ಬಾಯಾರಿಕೆ. ಎಲ್ಲೂ ಕುಡಿಯಲು ನೀರಿಲ್ಲ. ನೀರಿಗಾಗಿ ಗೋಗರೆಯುತ್ತ ಆಕೆ ನೇರ ನಿರ್ಣಾಯಕರ ಟೇಬಲ್ಲೆದುರು ಬಂದಿದ್ದಾಳೆ. ನೀರು ಕೇಳುತ್ತಿದ್ದಾಳೆ. ಇಲ್ಲ.ಆಕೆ ಕಾಯಲಾರಳು. ಥಟ್ಟನೆ ಮೇಜಿನ ಮೇಲಿದ್ದ ಬಾಟಲಿಯಿಂದ ನೀರನ್ನೆತ್ತಿ ಗಟ ಗಟ ಕುಡಿದುಬಿಡುತ್ತಾಳೆ. ಇಂಥ ತೀಕ್ಷ್ಣವಾದ ಪ್ರವೇಶದೊಂದಿಗೆ ಶುರುವಾಗುತ್ತದೆ ನಾಟಕ. ಭವಿಷ್ಯದ ಪರಿವಾರವೊಂದರ ಸುತ್ತ ಸುತ್ತುವ ಈ ಕತೆ ದೊಡ್ಡವರ ಜೊತೆ ಮಕ್ಕಳನ್ನೂ ‘ನೀರ್ ಬಾರ್’ ಗೆ ಕರೆದೊಯ್ಯುತ್ತದೆ. ಅಲ್ಲಿಯೂ ಬೇರೆ ಬೇರೆ ಕಂಪನಿಯ ದುಬಾರಿ ನೀರಿನ ಬಾಟಲಿಗಳಿವೆ. ‘ಕುಂತು ಕುಡಿದರೆ ಒಂದು ರೇಟು, ನಿಂತು ಕುಡಿದರೆ ಒಂದು ರೇಟು. ‘ ವಾಟರ್ ಕ್ಯಾಪ್ಸೂಲ್’ ಗಳೂ ಇಲ್ಲಿವೆ. ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ತುಂಬಿಕೊಂಡ ಈ ನಾಟಕದಲ್ಲಿ ಅದ್ಭುತ ಕಸುವಿನ ಸೊಗಸಾದ ಅಭಿನಯ ನೀಡಬಲ್ಲ ಮಕ್ಕಳಿದ್ದಾರೆ. ಮೇಲಿನ ಮೂರೂ ನಾಟಕಗಳು ‘ ಮೂರನೆಯ ಮಹಾಯುದ್ಧ ನಡೆದರೆ ಅದು ನೀರಿಗಾಗಿಯೇ’ ಎಂದು ಮತ್ತೆ ಮತ್ತೆ ಹೇಳುತ್ತವೆ.

ಇನ್ನು ಪರಿಸರ ರಕ್ಷಣೆಯ ವಸ್ತು ಹೊಂದಿದ ಒಂದು ನಾಟಕ ‘ಧರೆಯನುಳಿಸುವ ಬನ್ನಿ’ ನಾವು ಪರಿಸರಕ್ಕೆ ಮಾಡುತ್ತಿರುವ ಹಾನಿಯ ಕುರಿತು ಹೇಳುತ್ತಲೇ, ಗ್ಲೋಬಲ್ ವಾರ್ಮಿಂಗ್ ಕುರಿತು ಎಚ್ಚರಿಸುತ್ತದೆ ಈ ನಾಟಕ. ಪರ್ಯಾಯ ಇಂಧನಗಳಿಂದ ನಾವು ಪರಿಸರವನ್ನೂ ತನ್ಮೂಲಕ ಧರೆಯನ್ನೂ ಉಳಿಸಬಹುದು ಎಂದು ಸೂಚಿಸುತ್ತದೆ. ವೇಷವೈವಿಧ್ಯಗಳ ಮೂಲಕ ಗಮನ ಸೆಳೆದ ನಾಟಕವಿದು.

ಇನ್ನು ಇವುಗಳಿಗಿಂತ ಭಿನ್ನವಾಗಿ ರೋಬೋಟ್ ನಂಥ ತಂತ್ರಜ್ಞಾನ ದೈನಂದಿನ ಬದುಕನ್ನು ಹೇಗೆ ಪ್ರಬಾವಿಸಬಲ್ಲದು ಎಂಬುದನ್ನು ‘ ಮನುಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’ ನಾಟಕ ತೋರಿಸಿತು.
ಸ್ಪರ್ಧೆಯಲ್ಲಿ, ಪ್ರಥಮ ಸ್ಥಾನವನ್ನು ಸರಕಾರಿ ಪ್ರೌಢಶಾಲೆ ಹಕ್ಲಾಡಿ ಉಡುಪಿ ಜಿಲ್ಲೆ ಮತ್ತು ದ್ವಿತೀಯ ಸ್ಥಾನವನ್ನು ಸರಕಾರಿ ಪ್ರೌಢಶಾಲೆ ಮಾವಿನಕಟ್ಟೆ.ತಾಲೂಕ ಚನ್ನಗಿರಿ ಪಡೆದುಕೊಂಡವು. ಐದೂ ನಾಟಕಗಳಲ್ಲಿ ಮಕ್ಕಳ ತೊಡಗುವಿಕೆ ಶ್ರೇಷ್ಠಮಟ್ಟದ್ದಾಗಿತ್ತು. ಮಕ್ಕಳು ತುಂಬ ಹುರುಪಿನಿಂದ ನಾಟಕಗಳನ್ನು ಅಭಿನಯಿಸಿದರು. ಇತ್ತೀಚೆಗೆ ಹೈಸ್ಕೂಲುಗಳಲ್ಲಿ ಗ್ಯಾದರಿಂಗುಗಳೂ ನಿಂತು ಹೋಗಿವೆ. ‘ಪ್ರತಿಭಾ ಕಾರಂಜಿ’ ಯಲ್ಲೂ ಈಗ ನಾಟಕಗಳಿಲ್ಲ. ಹೀಗೆ ರಂಗಾವಕಾಶದಿಂದ ವಂಚಿತರಾದ ಮಕ್ಕಳಿಗೆ ನಿಜಕ್ಕೂ ಈ ವಿಜ್ಞಾನ ನಾಟಕ ಸ್ಪರ್ಧೆ ಒಳ್ಳೆಯ ವೇದಿಕೆ ಒದಗಿಸಿದೆ.
- ಕಿರಣ ಭಟ್, ಹೊನ್ನಾವರ.
