“ಕಷ್ಟ ಬಂದಾಗ ಆಮಾಡ ಪೆಟ್ಟಿಗೆ ತೆರೆ”ಎಂದು ಅವನ ತಾಯಿ ಹೇಳಿದಾಗ… ಅವನು ಅದನ್ನು ತೆರೆದ, ಅದರೊಳಗೆ ಏನಿತ್ತು ಮುಂದೆ ಓದಿ ….
ನನ್ನ ತಂದೆ ಹೇಳಿದ ಒಂದು ಸಣ್ಣ ಕಥೆ ನೆನಪಾಯಿತು.
ಒಬ್ಬ ಕರಕುಶಲಿಗ ತನ್ನ ದೈನಂದಿನ ದಿನಚರಿ ಬೆಳಗ್ಗೆ ಮನೆಯಲ್ಲಿ ಆಹಾರ ಸೇವಿಸಿದ ನಂತರ ಪಟ್ಟಣದ ಪುಟ್ಟ ನದಿ ತೀರದಲ್ಲಿನ ಮರದ ಕೆಳಗೆ ತನ್ನ ಕಸುಬು ಮುಂದುವರಿಸುತ್ತಿದ್ದ.
ಓದಲು ಬರೆಯಲು ಕಲಿತ ಒಬ್ಬನೇ ಮಗ ಚಿನ್ನು , ತನ್ನ ಕೆಲಸದಲ್ಲಿ ಕೈ ಜೋಡಿಸತೊಡಗಿದ. ಮಗ ತುಂಬಾ ಪರಿಶ್ರಮಿ ಎಂದು ಚಮಗಾರನಿಗೆ ತಿಳಿಯಿತು. ಮಗ ಚಿನ್ನುವಿನ ಮದುವೆಯಾಯಿತು.
ಚಿನ್ನುವಿಗೆ ದೊಡ್ಡವಳು ಮಗಳು ಶೀಲು ಎರಡನೇಯವನು ಬೀಂಗು.
ಚಮಗಾರ ತನ್ನ ಹೆಂಡತಿಯ ಮರಣಾನಂತರ, ಒಂದು ದಿನ ಚಿನ್ನುವನ್ನು ಕರೆದು ಒಂದು ಚೌಕದ ಪೆಟ್ಟಿಗೆ ಕೊಟ್ಟು ಹೇಳಿದ
“ಚಿನ್ನು… ಇದು ನವ ರತ್ನಗಳ ಪೆಟ್ಟಿಗೆ. ನಮ್ಮ ಪೂರ್ವಜರು ಇದನ್ನು ಹಸ್ತಾಂತರಿಸುತ್ತಾ ಬಂದಿದ್ದಾರೆ. ಇದನ್ನು “‘ಆಮಾಡ'” ಪೆಟ್ಟಿಗೆ ಅನ್ನುತ್ತಾರೆ. ಅತ್ಯಂತ ಹೆಚ್ಚು ಕಷ್ಟ ಬಂದಾಗ ಇದನ್ನು ತೆರೆದು ಉಪಯೋಗಿಸು. ಆದರೆ ಎಷ್ಟು ಉಪಯೋಗಿಸಿದರೂ ಇದರೊಳಗಿನ ಮೂಲ್ಯ ಕುಂದುವುದಿಲ್ಲ. ಆದರೆ ಕಷ್ಟ ಬಂದಾಗ ಮಾತ್ರ ತೆರೆ”
ಚಮಗಾರ ಮರಣ ಹೊಂದಿ ಕಾಲಗಳು ಗತಿಸಿದವು.
ಚಿನ್ನುವಿನ ಮಗಳು ಶೀಲು, ಮದುವೆ ಪ್ರಾಯಕ್ಕೆ ಬಂದಳು. ಮದುವೆಗೆ ಒಳ್ಳೆಯ ನೆಂಟಸ್ತಿಕೆ ಬಂತು. ಮದುವೆ ಖರ್ಚಿಗೆ ಆಮಾಡ ಪೆಟ್ಟಿಗೆ ತೆರೆಯಬೇಕೆಂದು ಚಿನ್ನು ಕೋಣೆಯೊಳಗೆ ಹೋಗಿ ಪೆಟ್ಟಿಗೆ ತೆರೆದು, ನಂತರ ಮರಳಿ ಬಂದು ನೆಂಟರಿಷ್ಟರಲ್ಲಿ ಒಂದು ವರುಷದ ಕಾಲಾವಧಿ ಕೇಳಿದನು….
ಐದಾರು ತಿಂಗಳಲ್ಲಿ ಚಿನ್ನು , ತನ್ನ ಕೆಲಸದ ಸ್ಥಳ ತಂದೆ ಕೆಲಸ ಮಾಡುತ್ತಿದ್ದ ಮರದ ನೆರಳಿನಿಂದ ಪಟ್ಟಣದ ಬೀದಿಯಲ್ಲಿ ಅಂಗಡಿ ತೆರೆಯುವ ಸ್ತರಕ್ಕೆ ಬಂದ- ಅಂಗಡಿ ತೆರೆದ . ಲಾಭವು ಜಾಸ್ತಿಯಾಗಿ ಮಗಳ ಮದುವೆ ಅಚ್ಚುಕಟ್ಟಾಗಿ ನಡೆಸಿದನು.
ಚಿನ್ನುವಿನ ಮಗ ಬೀಂಗು ಓದಲು ಬರೆಯಲು ಕಲಿತ ಮೇಲೆ ಚಿನ್ನುವಿಗೆ ಅಂಗಡಿಯಲ್ಲಿ ಸಹಾಯಕ್ಕೆ ಬಂದನು. ಜೀವನ ಮುಂದುವರಿದಂತೆ ಬೀಂಗುವಿಗೆ ಮದುವೆಯಾಯಿತು.ಅಂದೇ ಚಿನ್ನು , ಬೀಂಗುವಿಗೆ ಆಮಾಡ ಪೆಟ್ಟಿಗೆ ಹಸ್ತಾಂತರಿಸಿ ಅದರ ಬಗ್ಗೆ ಮಾಹಿತಿ ಕೊಟ್ಟನು.
ಬೀಂಗುವಿಗೆ ಮಕ್ಕಳೇ ಹುಟ್ಟಿಲ್ಲ, ಈ ಮಧ್ಯೆ ಮೊಮ್ಮಕ್ಕಳನ್ನು ನೋಡದೆ ಚಿನ್ನು ಹಾಗೂ ಮಡದಿ ಕಾಲಾಂತರವಾದರು.
ಕೆಲ ವರುಷದಲ್ಲಿ ಬೀಂಗುವಿಗೆ ಸೋಮು ಎಂಬ ಮಗ ಹುಟ್ಟಿದ.
ಸೋಮು ಚೆನ್ನಾಗಿ ಕಲಿಯುತ್ತಿದ್ದ. ಅವನಿಗೆ ಉನ್ನತ ವಿದ್ಯಾಭ್ಯಾಸಕ್ಕೆ ದೂರದ ರಾಜಧಾನಿಯಲ್ಲಿ ತಂಗಲು ಕಲಿಯಲು ದುಡ್ಡಿನ ಅವಶ್ಯಕತೆಗೆ, ಬೀಂಗು ಆಮಾಡ ಪೆಟ್ಟಿಗೆ ತೆರೆದನು.
ನಂತರ ಮಗನಿಗೆ ಒಂದು ವರುಷ ನೀನು ಕಲಿಯಲು ರಾಜಧಾನಿಗೆ ಹೋಗಿ ಬಾ. ನಂತರ ನೋಡುವ ಎಂದು ಆ ಒಂದು ವರುಷದಲ್ಲಿ ಬೀಂಗು ತನ್ನ ಅಂಗಡಿಯನ್ನು ಪುಟ್ಟ ಕಾರ್ಖಾನೆಯಾಗಿ ಪರಿವರ್ತಿಸಿ, ರಾಜಧಾನಿಯಲ್ಲಿ ಸೋಮುವಿಗೆ ತಂಗಲು ವ್ಯವಸ್ಥೆ ಮಾಡಿದ.
ಕಾಲಾಂತರದಲ್ಲಿ ಆಮಾಡ ಪೆಟ್ಟಿಗೆ ಸೋಮುವಿನಿಂದ ಅವನ ಮಗ, ಮೊಮ್ಮಗ…..ಹೀಗೆ ಅದು ಇಂದಿನ ಪೀಳಿಗೆಯಾದ ಅಂಬುಜಾಕ್ಷನ ಕೈಗೆ ತಲುಪಿತು.
ಅವನಿಗೂ ಕಷ್ಟಕಾಲ ಬಂತು
“ಕಷ್ಟ ಬಂದಾಗ ಆಮಾಡ ಪೆಟ್ಟಿಗೆ ತೆರೆ”ಎಂದು ಅವನ ತಾಯಿ ಹೇಳಿದಾಗ…..
ಅವನು ಅದನ್ನು ತೆರೆದ, ಅದರೊಳಗೆ…..
“ನಮ್ಮ ಆಸ್ತಿಯೇ ಸಾಧನೆ.
ಅದಕ್ಕೆ ಪ್ರೇರಣೆಯೇ ಕಷ್ಟಕಾಲ.
ಶ್ರಮವೇ ಆಭರಣ
ಸಮಯವೇ ಅದನ್ನು ಮಾರುವ ಅಂಗಡಿ.
ನಿನ್ನ ಶೃಮವನ್ನು ಸಮಯದೊಂದಿಗೆ ಮಾರು
ಎಲ್ಲವನ್ನೂ ಸಾಧಿಸುವೆ”
ಎಂದು ಗಟ್ಟಿ ಚರ್ಮದ ಮೇಲೆ ಬರೆದ ಅಮೂಲ್ಯ ಬರಹದ ಲೇಖನವಿತ್ತು.
ನಾವೂ ನಮ್ಮ ಆಮಾಡ ಪೆಟ್ಟಿಗೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವವರಾಗೋಣ.
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)
