ಪರಿಸರ ಪ್ರೀತಿಯವರಿಗೆ, ರೋಚಕ ಕಥೆ ಇಷ್ಟ ಪಡುವವರಿಗೆ ಗಿರಿಮನೆ ಶ್ಯಾಮರಾವ್ ಅವರ ‘ಅರಮನೆ ಗುಡ್ಡದ ಕರಾಳ ರಾತ್ರಿಗಳು’ ಪುಸ್ತಕ ಖಂಡಿತವಾಗಿಯೂ ಇಷ್ಟವಾಗುತ್ತದೆ.
ಆತ್ಮೀಯರೇ,
ನಾನು ವೃತ್ತಿಯಲ್ಲಿ ಶಿಕ್ಷಕಿ. ಬಿಡುವಿನ ಸಮಯವನ್ನು ಓದುವ ಹವ್ಯಾಸವಾಗಿ ಇಟ್ಟುಕೊಂಡಿರುವ ಸಾಮಾನ್ಯ ಓದುಗಳು. ಪ್ರತಿ ಸಲ ಅಂಕಿತ ಕ್ಕೇ ಹೋದಾಗಲೂ ಕುತೂಹಲ ಭರಿತ, ಬೇಗ ಓದಿ ಮುಗಿಸಬಲ್ಲ ಕಥೆಗಳ ಹೊತ್ತಿಗೆಗಳನ್ನು ಆರಿಸುತ್ತೇನೆ.
ಅದರಲ್ಲಿ ನನಗೆ ಮನ ಸೆಳೆದಿದ್ದು “ಅರಮನೆ ಗುಡ್ಡದ ಕರಾಳ ರಾತ್ರಿಗಳು”. ಇದು (ಮಲೆನಾಡಿನ ರೋಚಕ ಕಥೆಗಳು 2) ಕರ್ಮವೀರದಲ್ಲಿ ಬಂದ ಧಾರಾವಾಹಿ ಕಾದಂಬರಿಯಂತೆ ಇದೆ. ಈ ಪುಸ್ತಕ ಮೊದಲು ನನ್ನನ್ನು ಆಕರ್ಷಿಸಿದ್ದು “ಮಲೆನಾಡು” ಎಂಬ ಪದದಿಂದ. ಏಕೆಂದರೆ ನಾನು ಹುಟ್ಟಿ ಬೆಳೆದದ್ದು ಮಲೆನಾಡಿನ ಸುಂದರ ಕಾಡು ಬೆಟ್ಟಗಳ ನಡುವೆ. ಹಾಗಾಗಿ ಹುಟ್ಟಿ ಬೆಳೆದ ಊರಿನ ಒಂದು ಸುಳಿವು ಪುಸ್ತಕದಲ್ಲಿ ಸಿಕ್ಕರೂ ಸಾಕು ಕೈಗೆತ್ತಿ ಜಾಲಾಡಿಸುವ ಸ್ವಭಾವ ನನ್ನದು. ಅಲ್ಲಿಯ ಪ್ರಕೃತಿ ಯಾವುದೂ ನನಗೆ ಹೊಸತಲ್ಲ. ಆದರೂ ನಮ್ಮೂರು ಎನ್ನುವ ಆತ್ಮೀಯತೆ, ಪ್ರೀತಿಯೂ ಪುಸ್ತಕ ಕೊಳ್ಳುವಂತೆ ಮಾಡಿತು.
ಇದರ ಲೇಖಕರು ಗಿರಿಮನೆ ಶ್ಯಾಮರಾವ್ ಅವರು. ನನ್ನಂತಹ ಓದುಗರಿಗೆ ಕಥಾವಸ್ತು ಲೇಖಕರಲ್ಲ. ಅದರಲ್ಲಿ ಬರುವ ಕಥಾವಸ್ತುವಿನ ವಿವರಣಾ ಶೈಲಿ, ಭಾಷೆಗಳು. ಆದರೆ ಇಲ್ಲಿ ಲೇಖಕ ಗಿರೀಮನೆ ಅವರ ಕಥಾ ನಿರೂಪಣೆ ನೈಜ್ಯವಾಗಿ ಕೇಳುತ್ತಿದ್ದಾರೆ ಅನ್ನಿಸುವಷ್ಟು ಆಪ್ತರಾಗುತ್ತಾರೆ. ಮತ್ತು ಪುಸ್ತಕ ಮನಸ್ಸಿಗೆ ಸಂತೋಷಕೊಡುತ್ತದೆ.
ನವ ವಿವಾಹಿತ ಎರೆಡು ಜೋಡಿಗಳು ಹತ್ತಿಕ್ಕಲಾರದ ಚಾರಣದ ಆಸೆ ಹೊತ್ತು ಅಪ್ಪ ಅಮ್ಮಂದಿರ ಅರ್ಧಂಬರ್ಧ ಅನುಮತಿಯೊಂದಿಗೆ ಮಳೆಗಾಲದ ಚುಮು ಚುಮು ಮಳೆಯೊಂದಿಗೆ ನಮ್ಮ ಮಲೆನಾಡಿನತ್ತ ಹೊರಡುತ್ತಾರೆ.
ಸಕಲೇಶಪುರದ ಮುಂಜೀರಬಾಧ್ ಕೋಟೆಯಿಂದ ಮೊದಲ್ಗೊಂಡು ಶುರುವಿಕ್ಕುವ ಜೋಡಿಗಳು, ಪಶ್ಚಿಮ ಘಟ್ಟದ ಮಧ್ಯೆ ಇರುವ ಅರಮನೆ ಗುಡ್ಡದತ್ತ ಹೆಜ್ಜೆ ಹಾಕುತ್ತಾರೆ. ಅರಮನೆ ಗುಡ್ಡದ ಆಳ, ದುರ್ಗಮ ಕಾಡಿನ ಹಾದಿ, ಕ್ರೂರ ಪ್ರಾಣಿಗಳು, ಮಲೆನಾಡಿನ ಮಳೆಯ ಆರ್ಭಟ ಯಾವುದರ ಪರಿಚಯವೂ ಇಲ್ಲದ ಈ ಜೋಡಿಗೆ ತಮ್ಮ ಅದಮ್ಯ ಉತ್ಸಾಹದಲ್ಲಿರುವಾಗ ಮುಂದೆ ಸಿಲುಕಿಕೊಳ್ಳುವ ತೊಂದರೆಗಳನ್ನು, ಸಾವನ್ನೇ ಮುಟ್ಟಿ ಬಿಡುವ ಸನ್ನಿವೇಶಗಳನ್ನು, ಕಾಡಿನ ಅಗಾಧತೆ, ನಿಗೂಢತೆ, ನಿಶ್ಯಬ್ಧ ಸೌಂದರ್ಯ, ರೌದ್ರ ರಮಣೀಯತೆ ಎಲ್ಲವನ್ನೂ ಲೇಖಕರು ಕಟ್ಟಿಕೊಟ್ಟಿರುವ ರೀತಿ ನಮ್ಮನ್ನು ಕಾಡಿನ ಮಧ್ಯೆ ನಿಲ್ಲಿಸಿ ಮೈಯಲ್ಲಿ ಚಳುಕು ಹುತ್ತಿಸಿ ಬಿಡುತ್ತದೆ.
ಚಾರಣಕ್ಕೆ ಹೊರಟವರ ಪಾಡು ಕಂಡು ಓದುಗನ ಹಣೆಯಲ್ಲಿ ಕೌತುಕದ ಬೆವರು ಹಣಿಗೂಡುತ್ತದೆ. ಮಲೆನಾಡನ್ನು, ಪ್ರಕೃತಿಯ ರೋಚಕತೆಯನ್ನು ಪ್ರೀತಿಸುವವರಿಗೆ ಈ ಪುಸ್ತಕ ರಸದೌತಣವಂತೂ ಹೌದು.
ಒಟ್ಟಿನಲ್ಲಿ ನನ್ನಂತಹ ಪರಿಸರ ಪ್ರೀತಿಯವರಿಗೆ, ರೋಚಕ ಕಥೆ ಇಷ್ಟ ಪಡುವವರಿಗೆ ಇಂಥಹ ಪುಸ್ತಕ ಮತ್ತೆ ಮತ್ತೆ ಓದುಬೇಕೆನ್ನಿಸುತ್ತದೆ.
- ಚಿತ್ರಾ ಚಂದ್ರು