ಸರ್ವೋಪಯೋಗಿ ಕಾಳುಮೆಣಸು

‘ಕಾಳುಮೆಣಸಿನ ಆಕಾರ, ಗಾತ್ರ ಚಿಕ್ಕದಾದರೂ, ಆಹಾರ, ಆರೋಗ್ಯದಲ್ಲಿ ಇದರ ಪಾತ್ರ ದೊಡ್ಡದು’. ಆಹಾರ ಪದಾರ್ಥಗಳಲ್ಲಿ ರಾಜನೆಂದು, ವ್ಯಾಪಾರ ವ್ಯವಹಾರದಲ್ಲಿ ಕಪ್ಪುಬಣ್ಣದ ಬಂಗಾರವೆಂದು, ವೈದ್ಯ ಶಾಸ್ತ್ರದಲ್ಲಿ ‘ದಿವ್ಯವೌಷಧ’ ವೆಂದೂ ಕರೆಯುತ್ತಾರೆ.

‘ಅದರಕ್ಕೆ ಕಹಿಯಾದದ್ದು, ಉದರಕ್ಕೆ ಸಿಹಿ’ ಎಂಬ ಹಿರಿಯರ ಮಾತೊಂದಿದೆ. ಅದರಂತೆ ‘ಅದರಕ್ಕೆ ಕಾರ, ಉದರಕ್ಕೆ ಆಧಾರ’ ಎಂಬ ಮಾತು ಕೂಡ ಇದೆ. ಅದು ನಮ್ಮ‘ಸಾಂಬಾರ ಪದಾರ್ಥಗಳ ರಾಜ’ ಎಂದು ಕರೆಯಲ್ಪಡುವ ಕಾಳು ಮೆಣಸು ಅಥವಾ ಕರಿಮೆಣಸಿನ ಬಗೆಗಿನ ವರ್ಣನೆ. ಇದು ಬಹು ವಾರ್ಷಿಕ ಬೆಳೆಗಳಲ್ಲೊಂದಾಗಿದ್ದು, ನಮ್ಮ ಭಾರತದ ಮೂಲದ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾಗಿದೆ. ಮುಖ್ಯವಾಗಿ ಸಾಂಬಾರ ಬೆಳೆಯಾಗಿದ್ದು. ವೈದ್ಯಶಾಸ್ತ್ರದಲ್ಲೂ ಕೂಡ ಇದರ ಉಪಯೋಗ ಅಪಾರ. ಇವು ಮರಗಳನ್ನೆ ಆಧಾರವಾಗಿಸಿಕೊಂಡು ಬಳ್ಳಿಗಳಾಗಿ ಎತ್ತರಕ್ಕೆ ಹಬ್ಬುತ್ತಾ ಹೋಗುತ್ತದೆ. ಬಳ್ಳಿಗಳು ಅಲ್ಲಲ್ಲಿ ಗಂಟು ಗಂಟಾಗಿರುತ್ತವೆ. ಮರದ ಅಪ್ಪುಗೆಯಿಂದ ಬೆಳೆಯುವುದರಿಂದ ಇದನ್ನು ‘ಅಪ್ಪು ಸಸ್ಯ’ ಎಂತಲೂ ಕರೆಯುತ್ತಾರೆ. ಇದರ ಬಳ್ಳಿ, ಎಲೆಗಳು ನೋಡೊಕೆ ವಿಳ್ಯದೆಲೆಯ ಆಕಾರವನ್ನೆ ಹೊಂದಿರುತ್ತದೆ. ಕಾಳುಮೆಣಸು ಹಾಗೂ ವೀಳ್ಯದ ಎಲೆ ಇವೆರಡು ಸಂಬಂಧಿಗಳು ಎಂದು ಅಜ್ಜಿ ಹೇಳುವ ಸುಂದರವಾದ ಕಥೆ ಕೂಡ ಇದೆ ಹಳ್ಳಿಗಳಲ್ಲಿ. ಮರ-ಗಿಡ, ಬಳ್ಳಿ ಬಾಂಧವ್ಯವನ್ನು ಹೆಚ್ಚಾಗಿ ಮನುಷ್ಯನ ಕಣ್ಣಿಗೆ ಅರ್ಥೈಸುವಂತಹ ಬಳ್ಳಿಗಳಿವು. ಗಂಟು ಗಂಟಾಗಿರುವ ಕಾಳುಮೆಣಸಿನ ಬಳ್ಳಿಯಿಂದ ಚಿಕ್ಕ-ಚಿಕ್ಕ ಕಾಯಿಗಳನ್ನು, ಹಣ್ಣುಗಳನ್ನು ಕಿತ್ತು ಒಣಗಿಸಿ ಕರಿಮೆಣಸಿನ ಕಾಳುಗಳನ್ನಾಗಿ ಮಾಡುವರು. ‘ಕಾಳುಮೆಣಸಿನ ಆಕಾರ, ಗಾತ್ರ ಚಿಕ್ಕದಾದರೂ, ಆಹಾರ, ಆರೋಗ್ಯದಲ್ಲಿ ಇದರ ಪಾತ್ರ ದೊಡ್ಡದು’.

3

ಫೋಟೋ ಕೃಪೆ : Flickr

ಮಲೆನಾಡಿನ ಪ್ರದೇಶಗಳಲ್ಲಿ ರೈತರು ಇದನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯುತ್ತಾರೆ. ಕೃಷಿ ಮಾಡುವಾಗ ಬಳ್ಳಿಯನ್ನು ಒಂದು ಮೀಟರ್ ನಷ್ಟು ಉದ್ದಕ್ಕೆ ಕತ್ತರಿಸಿ ಅಡಿಕೆ ಮರವನ್ನು ಆಧಾರವಾಗಿ ಕೊಟ್ಟು ಬುಡದಲ್ಲಿ ನಾಟಿ ಮಾಡುತ್ತಾರೆ. ಗಟ್ಟಿ ಕಾಂಡದ ಮರಗಳ ಮೇಲೆ ಇವು ಬೇಗ ಬೆಳೆಯುತ್ತದೆ. ಆಶ್ರಯ ಮರದ ಕಾಂಡದಿಂದ ಪೋಷಾಕಾಂಶಗಳನ್ನು ಪಡೆದುಕೊಳ್ಳುತ್ತವೆ. ಬಳ್ಳಿಯ ಗಂಟುಗಳಲ್ಲಿ ಬೇರುಗಳು ಬರುತ್ತವೆ. ಇದರ ಎಳೆತಾದ ಎಲೆಗಳ ಸಂಧಿಯಲ್ಲಿ ಗೆರೆಗಳನ್ನು(ಚಿಕ್ಕದಾಗಿ ದಂಟಿನ ರೂಪದಲ್ಲಿರುತ್ತದೆ) ಕಾಣಬಹುದು. ಆ ಗೆರೆಗಳ ಮೇಲೆ ಸೂಕ್ಷ್ಮವಾದ ಹೂವುಗಳು ಮೂಡುತ್ತದೆ. ಅದರಿಂದ ಕಾಯಿಗಳು ಆರಂಭವಾಗುತ್ತದೆ. ಬಳ್ಳಿಯು ಫಲವತ್ತಾದ ಪಸೆ ಇರುವ ಮಣ್ಣಿನಲ್ಲಿ ಬೆಳೆಯುತ್ತದೆ. ಒಳ್ಳೇಯ ಗಾಳಿ, ಬೆಳಕು ಹಾಗೂ ಸ್ವಲ್ಪ ನೆರಳು ಬಳ್ಳಿಗೆ ಅವಶ್ಯಕ. ಪ್ರಾಕೃತಿಕವಾಗಿ ಹಣ್ಣಿನಿಂದ ಹಾಗೂ ಕಾಂಡದಿಂದ ಬರುವ ಬಳ್ಳಿಯಿಂದ ಸಂತಾನಭಿವೃದ್ಧಿಯಾಗುತ್ತದೆ. ಕಾಳುಗಳು ಹಣ್ಣಾದಾಗ ಕೆಂಪು ಬಣ್ಣಕ್ಕೆ ಬರುತ್ತದೆ.

3

ಫೋಟೋ ಕೃಪೆ : Flickr

ಗೆರೆಗಳಲ್ಲಿ ಒಂದೆರಡು ಕಾಳುಗಳು ಹಣ್ಣಾದಾಗ ಕೊಯ್ಲು ಪ್ರಾರಂಭಿಸುತ್ತಾರೆ. ಗೆರೆಗಳ ಸಹಿತ ಕೊಯ್ದು ಮನೆಗೆ ತಂದು ಕಾಳುಗಳನ್ನು ಬೇರ್ಪಡಿಸಿ ನಂತರ, ಬಿಸಿಲಿಗೆ ಒಣಗಿಸಲು ಹಾಕುತ್ತಾರೆ. ನಾಲ್ಕೈದು ಬಿಸಿಲು ಚೆನ್ನಾಗಿ ಬಿತ್ತೆಂದರೆ ಸಾಕು ಕಾಳುಗಳು ಕಪ್ಪು ಬಣ್ಣಕ್ಕೆ ಬರಲು ಪ್ರಾರಂಭಿಸುತ್ತವೆ. ನಂತರ ಉಪಯೋಗಿಸಲು ಶುರುಮಾಡುತ್ತಾರೆ.

ಕಾಳುಮೆಣಸಿಗೆ ಬೆಲೆ ಚೆನ್ನಾಗಿರುವುದರಿಂದ ಮಾರಾಟ ಮಾಡುವವರೆ ಜಾಸ್ತಿ. ಆದರೂ ಕೆಲವರು ಕಾಳುಮೆಣಸನ್ನು ಚೆನ್ನಾಗಿ ಒಣಗಿಸಿ ಮನೆಯಲ್ಲಿಯೆ ‘ಅಟ್ಟಣಿಗೆ’ ಮೇಲೆ ಇಟ್ಟಿರುತ್ತಾರೆ. ಯಾಕಂದರೆ ಕರಿಮೆಣಸು ಬರಿ ಭಾಗ್ಯಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಸಹಕಾರಿ. ಉತ್ತಮವಾದ ಮನೆ ಮದ್ದು ಕೂಡ ಹೌದು. ಇವಾಗಿನ ಕರೋನ ಸಮಯದಲ್ಲಿ ನಮ್ಮ ಕಡೇ ಕಷಾಯ ಜೊತೆಗೆ ಕರಿಮೆಣಸು ಇರಲೆಬೇಕು.

ಉಳಿಸಿಟ್ಟುಕೊಂಡವರೆ ಜಾಣರು. ಬರಿ ಉತ್ಪನ್ನಕ್ಕಾಗಿ ಮಾತ್ರ ಕಾಡಿಗೆ ಹೋಗಿ ಕರಿಮೆಣಸನ್ನು ಕೊಯ್ದು ಮಾರಾಟ ಮಾಡುವವರಿಗೆ ಅದರ ಮಹತ್ವ ಇವಾಗ ತಿಳಿದಿರುತ್ತದೆ. ಕಾಳುಮೆಣಸಿನಿಂದ ‘ಅದರದಿಂದ ಉದರದವರೆಗೂ ಹಲವಾರು ಉಪಯೋಗಗಳಿವೆ. ಅದಕ್ಕೆಕಾಳು ಮೆಣಸನ್ನು “ಆಹಾರ ಪದಾರ್ಥಗಳಲ್ಲಿ ರಾಜನೆಂದು, ವ್ಯಾಪಾರ ವ್ಯವಹಾರದಲ್ಲಿ ಕಪ್ಪುಬಣ್ಣದ ಬಂಗಾರವೆಂದು, ವೈದ್ಯ ಶಾಸ್ತ್ರದಲ್ಲಿ ‘ದಿವ್ಯವೌಷಧ’ ವೆಂದೂ ಕರೆಯುತ್ತಾರೆ”. ಅಕ್ಟೋಬರ್ ದಸರಾ ರಜೆ ಬಂತೆಂದರೆ ಸಾಕು ನಾನು ನನ್ನ ಸ್ನೇಹಿತರೆಲ್ಲಾ ಸೇರಿ, ಕಾಡಿಗೆ ಹೋಗಿ ಕಾಳುಮೆಣಸನ್ನು ಕೊಯ್ಯುವುದೇ ಅಂದು ನಮಗೆಲ್ಲಾ ತುಂಬಾ ಖುಷಿ ಕೊಡುತ್ತಿತ್ತು.ಆದರೆ,ಇಂದು ಹಣಕೊಟ್ಟು ಅಂಗಡಿಯಲ್ಲಿ ‘ಕಾಳುಮೆಣಸಿನ ಪೌಡರ್’ ತೆಗೆದುಕೊಳ್ಳುವಾಗ ಆ ಖುಷಿ ಇರಲಿಲ್ಲ.

amma
ಫೋಟೋ ಕೃಪೆ : Pinterest

ಕಾಳುಮೆಣಸು ಮತ್ತು ಮೆಣಸಿನ ಕಾಯಿ ಇವೆರಡರಲ್ಲೂ ಕೆಲವರಿಗೆ ಗೊಂದಲವುಂಟಾಗುವುದು ಸಹಜ. ಮೆಣಸಿನ ಕಾಯಿಗೂ, ಕಾಳುಮೆಣಸಿಗು ತುಂಬಾ ವ್ಯತ್ಯಾಸವಿದೆ. ಅಷ್ಟೆ ಅಲ್ಲದೆ ಕಾಳುಮೆಣಸು ನಮ್ಮ ಭಾರತದ ಪ್ರಮುಖ ಬೆಳೆಯಾಗಿದೆ. ಆದರೆ ಮೆಣಸಿನ ಕಾಯಿ ವಿದೇಶಿ ಬೆಳೆ, ಬೇರೆ ದೇಶದ ಆಮದು ಸಾಂಬಾರ ಪದಾರ್ಥಗಳಲ್ಲೊಂದು. ಕಾಳುಮೆಣಸು ನಮ್ಮ ದೇಶದಿಂದ ವಿದೇಶಕ್ಕೆ ರಫ್ತಾಗುವ ಪದಾರ್ಥಗಳಲ್ಲೊಂದು.

ಇತಿಹಾಸದಲ್ಲೂ ಪ್ರಸಿದ್ದಿಯಾಗಿದೆ ಕಾಳು ಮೆಣಸು : 
ಕಾಳುಮೆಣಸು ಅಂದಿನಿಂದ ಇಂದಿನವರೆಗೂ ಕೂಡ ಹೆಸರುವಾಸಿ ಬೆಳೆಯಾಗಿದೆ. ಇತಿಹಾಸವನ್ನೊಮ್ಮೆ ನೋಡಿದಾಗ ೧೫೫೨ ರಿಂದ ೧೬೦೬ ರವರೆಗೆ ಸಾಳ್ವ ಮನೆತನದ ರಾಣಿ”ಚೆನ್ನಾ ಭೈರಾದೇವಿ” ಮಲೆನಾಡಿನಲ್ಲಿ ಗೇರಸೊಪ್ಪ ಎಂಬ ಪ್ರದೇಶವನ್ನು ಆಳುತ್ತಿದ್ದಳು. ಚೆನ್ನಾ ಭೈರಾ ದೇವಿಯು “ಕಾಳು ಮೆಣಸಿನ ರಾಣಿ“ (ಪೇಪ್ಪರ್ ಕ್ವೀನ್) ಎಂದೆ ದೇಶ, ವಿದೇಶಕ್ಕೆ ಪ್ರಖ್ಯಾತಿ ಪಡೆದಿದ್ದಳು. ರಾಣಿಯ ಆಳ್ವಿಕೆಯಲ್ಲಿ ಗೇರಸೊಪ್ಪದ ಖ್ಯಾತಿಯು ಕೂಡ ದೇಶ, ವಿದೇಶಗಳಿಗೂ ತಿಳಿದಿತ್ತು. ಮಲೆನಾಡಿನಲ್ಲಿ ಬೆಳೆಯುತ್ತಿದ್ದ ಕಾಳುಮೆಣಸನ್ನು ರಫ್ತು ಮಾಡುವ ಬಗ್ಗೆ ಪೋರ್ಚುಗೀಸರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಳು.

ಭಟ್ಕಳ, ಕುಮಟಾ, ಮಿರ್ಜಾನ ಕೋಟೆ, ಹೊನ್ನಾವರ, ಮೆಣಸಿನ ಬಾವಿ, ಶಿವಮೊಗ್ಗ ಕಾನೂರು ಕೋಟೆ ಎಂಬ ಊರುಗಳಲ್ಲಿ ತನ್ನ ವಸಾಹತುಗಳನ್ನು ಸ್ಥಾಪಿಸಿ, ಮೆಣಸಿನ ಕಾಳುಗಳನ್ನು ಸಂಗ್ರಹಿಸಿ, ಲಂಡನ್, ಇಂಗ್ಲೆಂಡ್,ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದಳು ಹಾಗೂ ರಾಣಿಯು, ಕಾಳು ಮೆಣಸಿನಿಂದ ಭಾರತದ ವಾಣಿಜ್ಯ, ವ್ಯವಹಾರವನ್ನು ಸುಧಾರಿಸಿದ್ದಳು ಎನ್ನಲಾಗಿದೆ.

‘ಮೆಣಸಿನಬಾವಿ’ ಇದು ಹೊನ್ನಾವರದಿಂದ ಸುಮಾರು ೨೫ ಕಿ.ಮೀ ದೂರದಲ್ಲಿರುವ ಅರಣ್ಯ ಪ್ರದೇಶವಾಗಿದೆ. ಜನಕಡಲ್(ಲು) ಮುಖ್ಯ ಗ್ರಾಮದ ಹತ್ತಿರ ಕಾಳುಮೆಣಸನ್ನು ಸಂಗ್ರಹಿಸಲು ರಾಣಿಯು ಮಾಡಿದಂತಹ ಸುರಂಗಬಾವಿ ಇಲ್ಲಿದೆ. ಕಾಳುಮೆಣಸುಗಳನ್ನು ಕೊಯ್ದು ಬಾವಿಯಲ್ಲಿ ಸಂಗ್ರಹಿಸಿ, ನಂತರ ಬಾವಿಯಲ್ಲಿರುವ ಸುರಂಗ ಮಾರ್ಗದ ಮೂಲಕ ಹತ್ತಿರದಲ್ಲಿದ್ದ ‘ಮುಕ್ತಿಹೊಳೆ’ ದಂಡೆಗೆ ಸಾಗಿಸುತ್ತಿದ್ದರು. ಅಲ್ಲಿ ದೋಣಿಗಳ ಮೂಲಕ ಹೊನ್ನಾವರ, ಭಟ್ಕಳ ಬಂದರಿಗೆ ಸಾಗಿಸಿ, ಅಲ್ಲಿಂದ ಹಡಗುಗಳ ಮೂಲಕ ಪೋರ್ಚುಗಿಸರು ಕೊಂಡೊಯ್ಯುತ್ತಿದ್ದರು ಎಂಬ ಇತಿಹಾಸವಿದೆ.

ಇಂದಿಗೂ ಸಹ ಅಲ್ಲಿ ‘ಚೆನ್ನಾ ಭೈರಾದೇವಿ’ ನಿರ್ಮಿಸಿದ ಬಾವಿಯನ್ನು ನೋಡಬಹುದು. ಕಾಳುಮೆಣಸನ್ನು ಅತಿಯಾಗಿ ಸಂಗ್ರಹಿಸುವ ಬಾವಿಯಾಗಿದ್ದರಿಂದ ಆ ಊರಿಗೆ ‘ಮೆಣಸಿನ ಬಾವಿ’ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ. ಆದರೆ ಇಂದು ಆ ಬಾವಿ, ಅಲ್ಲಿನ ಇತಿಹಾಸ ಎರಡು ಬರಿದಾಗಿದೆ. ದಿನಗಳು ಕಳೆದಂತೆ ಜನಗಳು ತಮ್ಮ-ತಮ್ಮ ಕೆಲಸಗಳ ನಡುವೆ ಬಾವಿಯನ್ನು ಮರೆತರು. ಇತಿಹಾಸವನ್ನು ಮರೆತರು.ಇಂತಹ “ಎಷ್ಟೊ ಐತಿಹಾಸಿಕ ವಿಷಯಗಳು, ವಸ್ತುಗಳು, ಸ್ಥಳಗಳನ್ನು ನಮ್ಮ ಹಿರಿಯರು ವಿದ್ಯೆಯಿಲ್ಲದೆ ನಮಗೆ ಪರಿಚಯಿಸಿದರು. ಆದರೆ ಕಿರಿಯರು ಅದನ್ನೆಲ್ಲಾ ಬುದ್ಧಿಯಿಲ್ಲದೆ ಮರೆತರು ಅಷ್ಟೆ”. ಹೆದ್ದಾರಿಗೆ ಸಮೀಪವಿರುವುದರಿಂದ ಕುಮಟಾದಲ್ಲಿನ ಮಿರ್ಜಾನ್ ಕೋಟೆ ಹಾಗೂ ಅಲ್ಲಿನ ಬಾವಿ ಇಂದಿಗೂ ಹೆಸರುವಾಸಿ ಹಾಗೂ ಪ್ರವಾಸಿ ತಾಣವಾಗಿದೆ. ಅದನ್ನು ನೋಡುತ್ತಿರುವುದೆ ನಮ್ಮ ಪುಣ್ಯ.

3a
ಫೋಟೋ ಕೃಪೆ : fresh.co.nz

ದಿನಗಳು ಕಳೆದಂತೆ ಕೆಳದಿಯ ಇಕ್ಕೇರಿ ಹಿರಿಯ ‘ವೆಂಕಟಪ್ಪ ನಾಯಕ’ ಗೇರಸೊಪ್ಪದ ಮೇಲೆ ಕಣ್ಣಿಟ್ಟನು. ಆ ರಾಜ್ಯದ ಮೇಲೆ ದಂಡೆತ್ತಿ ಹೋಗಿ ‘ರಾಣಿ ಚೆನ್ನಾಭೈರಾದೇವಿ’ಯನ್ನು ಯುದ್ಧದಲ್ಲಿ ಸೋಲಿಸಿ ಅದನ್ನು ಸಂಪೂರ್ಣವಾಗಿ ವಶಪಡಿಸಿಕೊಂಡನು.ಸುಮಾರು ೫೪ ವರ್ಷಗಳ ಕಾಲ “ಕಾಳುಮೆಣಸಿನ ರಾಣಿ” ಎಂದು ಖ್ಯಾತಿ ಪಡೆದಿದ್ದ ‘ರಾಣಿ ಚೆನ್ನಾಭೈರಾದೇವಿ’ ಆಳ್ವಿಕೆ ಅಲ್ಲಿಗೆ ಕೊನೆಯಾಯಿತು ಎಂದು ಇತಿಹಾಸದ ಪುಟದಲ್ಲಿದೆ. ನಂತರದ ದಿನಗಳಲ್ಲಿ ಹೊನ್ನಾವರ, ಭಟ್ಕಳ ಬಂದರುಗಳೆಲ್ಲಾ ಕೆಳದಿ ಸಂಸ್ಥಾನಕ್ಕೆ ಸೇರಿದವು.

’ರಾಣಿ ಚೆನ್ನಾಭೈರಾದೇವಿ’ಮಾಡುತ್ತಿದ್ದ ಕಾಳುಮೆಣಸಿನ ವ್ಯಾಪರವೆಲ್ಲಾ ವೆಂಕಟಪ್ಪನ ಅಧೀನವಾಯಿತು. ಗೇರಸೊಪ್ಪ ಸಂಪೂರ್ಣವಾಗಿ ಕೆಳದಿ ರಾಜ್ಯದಲ್ಲಿ ಐಕ್ಯವಾಯಿತು ಎನ್ನಲಾಗಿದೆ.

ನಮ್ಮ ಮಲೆನಾಡಿನ ಕಾಳು ಮೆಣಸನ್ನು ’ರಾಣಿ ಚೆನ್ನಾಭೈರಾದೇವಿ’ ದೇಶ, ವಿದೇಶಗಳಿಗೂ ತಿಳಿಯುವಂತೆ ಮಾಡಿದ್ದಳು.ಇಂದಿಗೂ ಸಹ ಕರಿಮೆಣಸಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆಯಿರುವುದು. ಕರಿಮೆಣಸಿನ ದರ ದಿನದಿಂದ ದಿನಕ್ಕೆ ಏರುತ್ತಿರುವುದು, ನಮಗೆಲ್ಲಾ ಗೊತ್ತೆ ಇದೆ. ಹೀಗೆ ಕಾಳುಮೆಣಸು ‘ಅಂದಿನ ನಮ್ಮ ಪೂರ್ವಜರ ಕಾಲದಿಂದ ಇಂದಿನ ತಂತ್ರಜ್ಞರ ಕಾಲದವರೆಗೂ ಆಹಾರ, ಆರೋಗ್ಯ, ಭಾಗ್ಯವನ್ನು ಕೊಟ್ಟಿದೆ. ಮುಂದೇನು ಕೊಡುತ್ತದೆ. ಪ್ರಕೃತಿಯ ಸರ್ವಕಾಲಿಕ ಸಸ್ಯ ಸೃಷ್ಠಿಯಲ್ಲಿ ಕಾಳುಮೆಣಸು ಕೂಡ ಒಂದು.

ದಿನನಿತ್ಯದಲ್ಲಿ ಆಹಾರ ಆರೋಗ್ಯದಲ್ಲಿ ಕಾಳುಮೆಣಸಿನ ಉಪಯೋಗಗಳನ್ನು ನೋಡೊಣ.

೧. ಜೇನುತುಪ್ಪದ ಜೊತೆಗೆ ಕರಿಮೆಣಸಿನ ಪುಡಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.

೨. ತುಳಸಿ ಜೊತೆಗೆ ಇದರ ಪುಡಿ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ನೆಗಡಿ, ಜ್ವರ ಗುಣಮುಖವಾಗುತ್ತದೆ.

೩. ಬಿಕ್ಕಳಿಕೆ, ತಲೆನೋವು ಬಂದರೆ ಕಾಳುಮೆಣಸಿನ ಸೇವನೆಯಿಂದ ಕಡಿಮೆಯಾಗುತ್ತದೆ.

೪. ಕಾಳುಮೆಣಸನ್ನು ಸ್ವಲ್ಪ ನೀರಿನ ಜೊತೆಗೆ ಕಲ್ಲಿನ ಮೇಲೆ ಉಜ್ಜಿ ಮೈಮೇಲೆ ಹಚ್ಚಿದರೆ ಕಜ್ಜಿ, ಗುಳ್ಳೆಗಳಂತ ರೋಗಗಳು ಹೋಗುತ್ತವೆ.

೫. ಸಾಂಕ್ರಮಿಕ ರೋಗಗಳ ನಿಯಂತ್ರಣಕ್ಕೂ, ಸಂಧಿವಾತಕ್ಕೂ ಕಾಳುಮೆಣಸು ಒಳ್ಳೇಯ ಔಷಧವೆಂದು ಆಯುರ್ವೇದ ತಜ್ಞರು ಹೇಳುತ್ತಾರೆ.

೬. ಅಡುಗೆ ಪದಾರ್ಥಗಳಲ್ಲಿ ರುಚಿ, ವಾಸನೆಗಾಗಿ ಬಳಸುತ್ತಾರೆ.

೭. ಆಹಾರದಲ್ಲಿ ಕಾಳುಮೆಣಸನ್ನು ಮಿತವಾಗಿ ಉಪಯೋಗಿಸುವುದರಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಮತ್ತು ಉದರ ರೋಗಗಳನ್ನು ನಿರ್ಮೂಲನ ಮಾಡುತ್ತದೆ.

೮. ಬೇಕರಿ ಪದಾರ್ಥಗಳ ತಯಾರಿಕೆಯಲ್ಲಿ, ತಂಪುಪಾನೀಯಗಳಲ್ಲೂ ಉಪಯೋಗಿಸುತ್ತಾರೆ. ಕೆಲವು ಬೇಕರಿ ಪದಾರ್ಥಗಳನ್ನು, ತಂಪುಪಾನೀಯಗಳನ್ನು ಸೇವನೆ ಮಾಡುವಾಗ ನಮಗೆ ಅನುಭವವಾಗುತ್ತದೆ.

೯. ಖಾರ ಮತ್ತು ಕಹಿ ಗುಣವನ್ನು ಹೊಂದಿರುವ ಇದು ಕಫ, ವಾತ ದೋಷಗಳನ್ನು ಕಡಿಮೆ ಮಾಡುತ್ತದೆ.

೧೦. ಅಗ್ನಿಮಾಂದ್ಯ, ಶ್ವಾಸಕೋಶದ, ಉಸಿರಾಟದ ತೊಂದರೆಗಳಿಗೆ ಇದರ ಕಷಾಯ ಉತ್ತಮ ಪರಿಹಾರಕ.

೧೧.  ತ್ರಿಕಟು ಅಂದರೆ ಕಾಳುಮೆಣಸು,ಶುಂಠಿ ಹಾಗೂ ಹಿಪ್ಪಲಿ(ಉದ್ದಮೆಣಸು) ಈ ಮೂರನ್ನು ಒಟ್ಟಿಗೆ ಸೇರಿಸಿ ಚೂರ್ಣವನ್ನಾಗಿ ಮಾಡಿ ಅನೇಕ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ.

೧೨. ನಿಶಾಂಧತೆ(ಇರುಳು ಕುರುಡು) ಇರುವಂತಹವರು ಮೆಣಸಿನ ಕಾಳನ್ನು ಮೊಸರಿನ ತಿಳಿಯಲ್ಲಿ ಅಥವಾ ಎದೆಯ ಹಾಲಿನಲ್ಲಿ ತೇದು ಅಂಜನದಲ್ಲಿ ಕಣ್ಣಿಗೆ ಮಿತವಾಗಿ ಹಚ್ಚಿದರೆ ನಿಶಾಂಧತೆ ದೂರವಾಗುತ್ತದೆ.

೧೩. ಹಸುವಿನ ಹಾಲಿನಿಂದ ಮಾಡುವ ಗಿಣ್ಣಿನಲ್ಲಿ ಉತ್ತಮ ರುಚಿಗೆ ಕರಿಮೆಣಸನ್ನೆ ಮುಖ್ಯವಾಗಿ ಉಪಯೋಗಿಸುತ್ತಾರೆ.

೧೪. ಜೀರಿಗೆ, ಶುಂಠಿಯೊಂದಿಗೆ ಕಾಳುಮೆಣಸನ್ನು ಸಮಪ್ರಮಾಣದಲ್ಲಿ ಸೇರಿಸಿ ಕಷಾಯ ಮಾಡಿ ಸೇವಿಸಿದರೆ, ಗಂಟಲುಕೆರೆತ, ಗಂಟಲು ನೋವು, ಕೆಮ್ಮು ನಿಲ್ಲುತ್ತದೆ.

೧೫. ಹಲ್ಲುನೋವಿದ್ದರೆ ಇದರ ಪುಡಿಯೊಂದಿಗೆ, ಸ್ವಲ್ಪ ಉಪ್ಪನ್ನು ಸೇರಿಸಿ ನೋವಿನ ಜಾಗದಲ್ಲಿಟ್ಟರೆ ಕಡಿಮೆಯಾಗುತ್ತದೆ.

೧೬. ಆಯುರ್ವೇದದಲ್ಲಿ ಚೂರ್ಣ, ಕಷಾಯ, ಘೃತ(ತುಪ್ಪ), ತೈಲ ಮುಂತಾದ ಔಷಧಗಳ ತಯಾರಿಕೆಯಲ್ಲಿ ಇದರ ಉಪಯೋಗ ಬಹಳವಿದೆಯೆಂದು ಆಯುರ್ವೇದ ತಜ್ಞರು ಹೇಳುತ್ತಾರೆ.

೧೭. ನಿದ್ರಾಹೀನತೆಗೂ ಇದರ ಕಷಾಯ ಒಳ್ಳೇಯದೆನ್ನುತ್ತಾರೆ.

೧೮. ಕಾಳುಮೆಣಸಿನಲ್ಲಿ ‘ಪೈಪರ್ ಲೈನ್’ ಅಂಶವಿರುವುದರಿಂದ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ ಎಂದು ವೈದ್ಯರು ಹೇಳುತ್ತಾರೆ.

೧೯. ಮೊಡವೆಗಳ ಸಮಸ್ಯೆಯಿದ್ದರೆ ಇದರ ಚೂರ್ಣವನ್ನು ವೀಳ್ಯದೆಲೆ ರಸದೊಂದಿಗೆ ಬೇರಿಸಿ ಹಚ್ಚಿದರೆ ಕಡಿಮೆಯಾಗುತ್ತಾ ಹೋಗುತ್ತದೆ.

೨೦. ಜೀರ್ಣಶಕ್ತಿ ಹಾಗೂ ಹಸಿವು ಹೆಚ್ಚಿಸಲು ಇದರ ಚೂರ್ಣವನ್ನು ಮಜ್ಜಿಗೆಯೊಂದಿಗೆ ಸೇವಿಸಬೇಕು.

೨೧. ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಂಬಂಧಿಸಿದ ಖಾಯಿಲೆಗಳಿಗೂ ಇದು ಪರಿಹಾರಕ.

3a
ಫೋಟೋ ಕೃಪೆ : Exporters India

ಹೀಗೆ ಕಾಳುಮೆಣಸು ನಮ್ಮ ದಿನನಿತ್ಯದಲ್ಲಿ ಆಹಾರದಲ್ಲಿ ಮನೆಮದ್ದಾಗಿ, ಆಯುರ್ವೇದದಲ್ಲಿ ಧನ್ವಂತರಿಯಾಗಿ, ವೈದ್ಯಶಾಸ್ತ್ರದಲ್ಲಿ ದಿವ್ಯಔಷಧಿಯಾಗಿ, ಸರ್ವೋಪಯೋಗಿಯಾಗಿ ಹಲವು ಖಾಯಿಲೆಗಳಿಗೆ ರಾಮಬಾಣವಾಗಿದೆ. ಹಾಗೆಯೇ ಮುಖ್ಯವಾಗಿ ಗಮನಿಸಬೇಕಾಗಿರುವುದು. ಕರಿಮೆಣಸು ತುಂಬಾ ಸೂಕ್ಷ್ಮವಾಗಿದ್ದು, ಖಾರ ಹಾಗೂ ಉರಿಯ ಗುಣವನ್ನು ಹೊಂದಿದ್ದು, ಇದನ್ನು ಉಪಯೋಗಿಸುವಾಗ ತುಂಬಾ ಎಚ್ಚರಿಕೆ ಅಗತ್ಯ. ಕಣ್ಣಿಗೆ ಹಾಕುವಾಗೆಲ್ಲಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾವುದಕ್ಕೂ ಇದರ ಔಷಧಿಗಳನ್ನು ಬಳಸುವ ಮುನ್ನ ಒಮ್ಮೆ ಆಯುರ್ವೇದ ತಜ್ಞರ,ವೈದ್ಯರ ಸಲಹೆ ಪಡೆದು ಉಪಯೋಗಿಸದರೆ ಒಳ್ಳೇಯದು.


  • ನಾಗರಾಜ್ ಲೇಖನ್ (ಹರಡಸೆ, ಹೊನ್ನಾವರ)

amma

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW