ಸಾಮಾನ್ಯ ಓದುವ ಹವ್ಯಾಸ ಇರುವವಳು. ಹೀಗೆ ಒಮ್ಮೆ ಆಕೃತಿ ಕನ್ನಡ ಡಾಟ್ ಕಾಮ್ (aakrutikannada.com) ನಲ್ಲಿ ಬರುತ್ತಿರುವ ಲೇಖಕ, ಸಂಭಾಷಣಾಕಾರರಾದ ಶ್ರೀಯುತ ಹೂಲಿ ಶೇಖರ್ ಅವರ ಅನುಭವ ಕಥಮಾಲಿಕೆ “ಕಾಳಿ ಕಣಿವೆ ಕಥೆಗಳು” ಸರಣಿ ಕಣ್ಣಿಗೆ ಬಿತ್ತು.
ಕಾಳಿಯ ಹೆಸರು ನೋಡಿ ಓಹೋ… ಇದು ಉತ್ತರ ಕರ್ನಾಟಕ ಭಾಗದ್ದೇ ಇರುತ್ತೆ ಮತ್ತು ಅದರಲ್ಲೂ ನೈಜ್ಯ ಅನುಭವಗಳ ಸರಣಿ, ಓದಬೇಕು ಅನ್ನಿಸಿ ಶುರು ಮಾಡಿಕೊಂಡೆ. ಸುಮಾರು ೭೦ ರ ದಶಕದಲ್ಲಿ ಸೂಪಾ ಅಣೆಕಟ್ಟು ನಿರ್ಮಿಸುವ ಮೊದಲಿನ ಹಂತವಾಗಿ ನಿವೃತ್ತಿಗೊಂಡ ಸರ್ವೇ ತಂಡದ ಕೆಲಸಗಾರರಾಗಿ ಕಾಳಿಯ ಕಣಿವೆ ಪ್ರವೇಶ ಮಾಡುವ ಲೇಖಕರು ಕೇವಲ ಸರಕಾರಿ ಕೆಲಸಗಾರನಾಗಿ ಅಲ್ಲದೆ ಕಾಳಿಯ ಆರ್ಭಟವನ್ನು ಆಸ್ವಾದಿಸಿ, ಘನ ಗಾಢ ಕಾಡಿನ ಮಧ್ಯೆ ಸುಮಾರು ೩೦ ವರುಷಗಳ ಕಾಲ ಕೆಲಸ ಮಾಡುತ್ತಾರೆ. ಆಗ ಅವರ ಅನುಭವಗಳನ್ನು ತುಂಬಾ ಸಹಜವಾಗಿ ಈ ಮಾಲಿಕೆಯಲ್ಲಿ ಹೇಳಿದ್ದಾರೆ.
ಸರಕಾರಿ ಕೆಲಸವೆಂದರೆ ಸಾಕು ಸಿಗುವ ಸೌಲಭ್ಯಗಳ ಲೆಕ್ಕಾಚಾರದಲ್ಲೇ ಮುಳುಗುವ ಇವತ್ತಿನ ಪೀಳಿಗೆಗೂ ಕನಿಷ್ಟ ಸೌಲಭ್ಯವೂ ಇಲ್ಲದೆ ಕೇವಲ ಸಿಗುವ ಅತ್ಯಲ್ಪ ಮೊತ್ತದ ಸಂಬಳಕ್ಕಾಗಿ, ಸರಕಾರಿ ಕೆಲಸ ದೇವರ ಕೆಲಸ ಎಂಬ ಭಾವನೆಯೊಂದಿಗೆ ಯೋಜನೆಗಾಗಿ, ಜನರಿಗಾಗಿ ಶ್ರಮಿಸುತ್ತಿದ್ದವರಿಂದಲೇ ನಾವುಗಳು ಇಂದು ಫಲಾನುಭವಿಗಳಾಗಿದ್ದೇವೆ. ಸ್ವಲ್ಪ ಕಾಡಿನ ಪರಿಚಯ ಇರುವ ನನಗೇ ಅಬ್ಭಾ… ಎಂಥ Range ಗಿದೆಯಪ್ಪಾ ಅನ್ನಿಸುವಷ್ಟು ಉಂಬಳ ಹುಳುಗಳ ಕಾಟ, ವಿಷ ಜಂತುಗಳು, ಕಾಡುಪ್ರಾಣಿಗಳು ಅಬ್ಭಾ! ನಿತ್ಯಕರ್ಮಗಳಿಗೂ ಅವರು ಪಡುತ್ತಿದ್ದ ಪಾಡು ನಗು ಉಕ್ಕಿಸಿದರೂ, ನಿಜ ಸ್ಥಿತಿ ಕಠಿಣ, ಬಂಡೆ ಗಾತ್ರದ ಕಾಡಾನೆಗಳು, ಕರಡಿಗಳು ಅವುಗಳು ಮನುಷ್ಯರನ್ನು ಆಕ್ರಮಿಸುವ ರೀತಿ, ಸ್ವಭಾವ ವೈಶಿಷ್ಟ್ಯತೆ ಎಲ್ಲವನ್ನೂ ಚಿತ್ರಿಸಿರುವ ರೀತಿ ನಿಜಕ್ಕೂ ಅದ್ಬುತ ಮಾಹಿತಿಯೇ ಸರಿ.
ಎಲ್ಲೋ ಇತಿಹಾಸದ ಪುಸ್ತಕದಲ್ಲಿ ಓದಿದ ಪೋರ್ಚುಗೀಸರ ನೆನಪು. ಈ ಲೇಖನದ ಜುಗಲ್ ಪೇಟೆ, ದಾಂಡೇಲಿ, ಚ್ಯಾಸರಾಕ್ ಕಣಿವೆಯ ಒಂಟಿ ಮನೆಗಳು, ರಾತ್ರಿ ಆದಂತೆಯೇ ತೆರೆದುಕೊಳ್ಳುವ ಬೆಳದಿಂಗಳ ಪಾರ್ಟಿ, ಮೋಜು ಮಸ್ತಿ ಅಚ್ಚರಿ ಮೂಡಿಸುತ್ತದೆ.
ಸೂಪಾ ಜನರಿಗಿದ್ದ ಗೋವಾ ನಂಟು, ಅಲ್ಲಿಯ ಸಂಸ್ಕಾರ, ಬ್ರಿಟಿಷ್ ಬಂಗಲೆಗಳು ಭಾರತದಲ್ಲಿ ಪಾಶ್ಚಾತ್ತ್ಯರ ಪ್ರಭಾವವನ್ನು ಗುರುತಿಸುತ್ತದೆ. ಸೂಪಾ , ಜೋಯಿಡಾ ಮುಂತಾದ ಊರುಗಳು, ಚಾಂದೇವಾಡಿಯ ಮರಳು ದಿಬ್ಬ, ಅವುಗಳ ಕಾವಲುಗಾರರಂತೆ ಬಿದ್ದಿರುತ್ತಿದ್ದ ಮೊಸಳೆಗಳು, ನವಲು ಗೌಳಿ ದೊಡ್ಡಿಯ ಜನರ ವಾಸದ ವಿವರ, ವೇಷಭೂಷಣಗಳ ವಿವರಣೆ, ಅಲ್ಲಿನ ಜನರ ಜೀವನ ಶೈಲಿ, ಆಹಾರ ಪದ್ಧತಿ, ಗೌಳಿಗ ಜನಾಂಗದ ನಾಗರೀಕತೆಯ ಪರಿಚಯವೇ ಇಲ್ಲದ ಜೀವನವನ್ನು ಲೇಖಕರು ಚನ್ನಾಗಿ ಅರ್ಥಯಿಸಿದ್ದಾರೆ. ಮತ್ತು ಜನರ ಮತ್ತು ಕಾಡಿನ ಮಧ್ಯೆ ಇರುವ ನಿಷ್ಕಲ್ಮಶ, ಮುಗ್ಧ ಬಾಂಧವ್ಯವನ್ನು ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
ಕಥಾ ಮಾಲಿಕೆಯಲ್ಲಿ ಬರುವ ಕುಣಿಲ ಬಾಯಿಯ ಸೌಂದರ್ಯ ಕಣ್ಮುಂದೆ ಸುಳಿದ್ದಂತು ನಿಜ. ಅಂತೆಯೇ ಲಕ್ಕಿ ಹೋಟೆಲ್ಲಿನ ಗವಟಿ ಟೇಬಲ್ ನಲ್ಲಿ ಪರೋಟ, ಗೆಣಸು ಪಲ್ಯ ತಿನ್ನುವ ಆಸೆಯಾಗಿದ್ದು ಹೌದು. ಹೀಗೆ ಬರಿಯ ಕಾಳಿ ಸರ್ವೇಗಷ್ಟಕ್ಕೆ ಸೀಮಿತವಾಗದ ಲೇಖಕರ ‘ಕಾಳಿ ಕಣಿವೆ ಕತೆಗಳು’ ಭಾಗ ಭಾಗವಾಗಿ ರಸವತ್ತಾಗಿ ನಮ್ಮ ಮುಂದೆ ಬರುತ್ತಿದೆ.
ಹನ್ನೊಂದು ಭಾಗಗಳನ್ನು ಓದಿ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ.
- ಚಿತ್ರಾ ಚಂದ್ರು